samachara
www.samachara.com
ಬಿಜೆಪಿಯ ‘ದುರಂತ ನಾಯಕ’, ರೈಸ್‌ ಮಿಲ್ ರೈಟರ್ ಬಿ. ಎಸ್. ಯಡಿಯೂರಪ್ಪ ಆತ್ಮಕತೆ!
COVER STORY

ಬಿಜೆಪಿಯ ‘ದುರಂತ ನಾಯಕ’, ರೈಸ್‌ ಮಿಲ್ ರೈಟರ್ ಬಿ. ಎಸ್. ಯಡಿಯೂರಪ್ಪ ಆತ್ಮಕತೆ!

ಬಿ. ಎಸ್‌. ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಒಂದು ಅಸ್ಥಿರ ರಾಜಕೀಯ ವಾತಾವರಣದಲ್ಲಿ ಹೊಣೆಗಾರಿಕೆ ಹೊರಲು ಮುಂದೆ ಬಂದಿದ್ದಾರೆ. ಯಾರಿವರು? ರಾಜಕೀಯ ಹೆಜ್ಜೆ ಗುರುತುಗಳೇನು? ಇಲ್ಲಿದೆ ವಿವರ. 

ರಾಜ್ಯದ ಹಿರಿಯ ರಾಜಕಾರಣಿಗಳ ಪಟ್ಟಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪನವರ ಹೆಸರೂ ಒಂದು. ಹೋರಾಟದ ಬದುಕಿನಿಂದಲೇ ಏಳಿಗೆಗೆ ಬಂದ ಯಡಿಯೂರಪ್ಪ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದವರು. ಆದರೆ ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡ ಯಡಿಯೂರಪ್ಪ ಕೆಲವೇ ದಿನಗಳಲ್ಲಿ ಅಧಿಕಾರದಿಂದ ಕೆಳಗಿಳಿದಿದ್ದರು. 

ಯಡಿಯೂರಪ್ಪ ಈಗ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. 45 ವರ್ಷಗಳ ಸುದೀರ್ಘ ರಾಜಕೀಯ ಜೀವನದ ಹಿನ್ನೆಲೆ ಇರುವ, ಸದ್ಯ ಮುಖ್ಯಮಂತ್ರಿ ಯಡಿಯೂರಪ್ಪ ಬದುಕು ಸಾಗಿ ಬಂದ ಚಿತ್ರಣ ಇಲ್ಲಿದೆ.

ಬಾಲ್ಯ:

ಬಿ. ಎಸ್‌. ಯಡಿಯೂರಪ್ಪ ಹುಟ್ಟಿದ್ದು 1943ರ ಫೆಬ್ರವರಿ 27ರಂದು. ಮಂಡ್ಯ ಜಿಲ್ಲೆಯ ಕೆ. ಆರ್‌. ಪೇಟೆ ತಾಲೂಕಿನ ಬೂಕನಕೆರೆ ಯಡಿಯೂರಪ್ಪ ಹುಟ್ಟೂರು. ತಂದೆ ಸಿದ್ಧಲಿಂಗಪ್ಪ, ತಾಯಿ ಪುಟ್ಟತಾಯಮ್ಮ. ಮೂಲಗಳ ಪ್ರಕಾರ, ಯಡಿಯೂರಪ್ಪನವರ ಪೋಷಕರು ಮಂಡ್ಯ ಜಿಲ್ಲೆಯಲ್ಲಿ ನಿಂಬೆಹಣ್ಣನ್ನು ಮಾರಿ ಬದುಕು ಸಾಗಿಸುತ್ತಿದ್ದರು.

ಯಡಿಯೂರಪ್ಪ ನಾಲ್ಕು ವರ್ಷವಿದ್ದಾಗ ತಾಯಿಯನ್ನು ಕಳೆದುಕೊಂಡವರು. ಮಗುವನ್ನು ಸಾಕುವ ಜವಾಬ್ದಾರಿ ತಂದೆಯ ಮೇಲೆ ಬಿದ್ದಿತ್ತು. ಸ್ಥಳೀಯ ಸರಕಾರಿ ಶಾಲೆಗಳಲ್ಲಿ ಓದಿದ ಯಡಿಯೂರಪ್ಪ, ಮಂಡ್ಯದ ಪಿಇಎಸ್‌ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪೂರೈಸಿದರು. ಯಡಿಯೂರಪ್ಪನವರಿಗೆ ಕಲೆ, ಸಾಹಿತ್ಯ, ಸಂಗೀತ ಯಾವುದರ ಬಗ್ಗೆಯೂ ಅಸಕ್ತಿ ಇರಲಿಲ್ಲ ಎಂಬುದು ಅವರ ಬಾಲ್ಯವನ್ನು ಕಂಡವರು ಹೇಳುತ್ತಾರೆ.

ಯಡಿಯೂರಪ್ಪರ ವೃತ್ತಿ ಬದುಕು 22 ವರ್ಷವಿರುವಾಗಲೇ ಆರಂಭಗೊಳ್ಳುತ್ತದೆ. ಮಂಡ್ಯದಲ್ಲಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ಯಡಿಯೂರಪ್ಪ ಪ್ರಥಮ ದರ್ಜೆಯ ಗುಮಾಸ್ತರಾಗಿ ವೃತ್ತಿ ಆರಂಭಿಸುತ್ತಾರೆ. ನಂತರದ ದಿನಗಳಲ್ಲಿ ಯಡಿಯೂರಪ್ಪನ ಆಪ್ತರೊಬ್ಬರು ಅವರನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರಕ್ಕೆ ಕರೆದೊಯ್ಯುತ್ತಾರೆ. ಸಮಾಜ ಕಲ್ಯಾಣ ಇಲಾಖೆಯಲ್ಲಿನ ಕೆಲಸಕ್ಕೆ ರಾಜಿನಾಮೆ ನೀಡಿ, ಶಿಕಾರಿಪುರವನ್ನು ಸೇರಿದ ಯಡಿಯೂರಪ್ಪರ ಬದುಕು ಸಂಪೂರ್ಣವಾಗಿ ಬದಲಾಗುತ್ತದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಬಯಲುನಾಡಿಗೆ ಹೊಂದಿಕೊಂಡ ತಾಲೂಕು ಶಿಕಾರಿಪುರ. ಇದರ ಕೊನೆಯ ಹಳ್ಳಿಯ ಹೆಸರು ಕಡೇನಂದಿಹಳ್ಳಿ. ಈ ಊರಿನ ಜನರ ಜಮೀನುಗಳು ಇರುವುದು ಬಯಲುಸೇಮೆಯ ಹಾವೇರಿ ಜಿಲ್ಲೆಯಲ್ಲಿ.

ಇಂತಹ ಹಳ್ಳಿಗರ ತಾಲೂಕು ಕೇಂದ್ರವಾದ ಶಿಕಾರಿಪುರಕ್ಕೆ 1965ರ ಸುಮಾರಿಗೆ ಬಂದ ಯಡಿಯೂರಪ್ಪ, ಅಲ್ಲಿದ್ದ ಶಂಕರ ರೈಸ್‌ ಮಿಲ್‌ನಲ್ಲಿ ರೈಟರ್‌ ಆಗಿ ವೃತ್ತಿಯನ್ನು ಆರಂಭಿಸುತ್ತಾರೆ. ಕಾಲೇಜು ದಿನಗಳಲ್ಲೇ ಯಡಿಯೂರಪ್ಪ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಷ್ಠಾವಂತ ಸದಸ್ಯರಾಗಿದ್ದವರು. ಶಿಕಾರಿಪುರದಲ್ಲಿ ಸಂಘವನ್ನು ಗಟ್ಟಿಯಾಗಿ ಕಟ್ಟುವ ಕಾರಣಕ್ಕಾಗಿ ಯಡಿಯೂರಪ್ಪನವರನ್ನು ಇಲ್ಲಿಗೆ ಕರೆತರಲಾಗಿತ್ತು. ಸಂಘಟನೆ ಹಾಗೂ ರೈಸ್‌ ಮಿಲ್‌ ಕೆಲಸಗಳನ್ನು ಯಡಿಯೂರಪ್ಪ ಜತೆಯಾಗಿ ನಿರ್ವಹಿಸಿಕೊಂಡು ಸಾಗಿದ್ದರು. ಈ ರೈಸ್‌ ಮಿಲ್‌ನ ಮಾಲೀಕರು ವೀರಭದ್ರ ಶಾಸ್ತ್ರಿಗಳು.

ರಾಜಕೀಯ ಪ್ರವೇಶ:

ಅದು 1970ರ ಕಾಲಘಟ್ಟ. ಯಡಿಯೂರಪ್ಪನವರಿಗೆ 27 ವರ್ಷಗಳ ಪ್ರಾಯ. ಶಿಕಾರಿಪುರಕ್ಕೆ ಬಂದು ಐದು ವರ್ಷಗಳು ಕಳೆದಿದ್ದವಷ್ಟೆ. ಶಿಕಾರಿಪುರ ಆರ್‌ಎಸ್‌ಎಸ್‌ ಘಟಕದ ಕಾರ್ಯವಾಹರಾಗಿ ಕೆಲಸ ನಿರ್ವಹಿಸುವ ಅವಕಾಶ ಒದಗಿ ಬರುತ್ತದೆ. ಜನಸಂಘದ ಶಿಕಾರಿಪುರ ತಾಲೂಕು ಅಧ್ಯಕ್ಷ ಸ್ಥಾನವೂ ಯಡಿಯೂರಪ್ಪರಿಗೆ ನೀಡಲಾಗುತ್ತದೆ. ಸಂಘದ ಸದಸ್ಯರಾಗಿದ್ದ ಯಡಿಯೂರಪ್ಪ ಮುನ್ನಲೆ ನಾಯಕರಾಗಿ ಕಾಣಿಸಿಕೊಳ್ಳುತ್ತಾರೆ. ಈ ಮೂಲಕ ಯಡಿಯೂರಪ್ಪರ ಜೀವನ ಸಾರ್ವಜನಿಕ ಬದುಕಿಗೆ ತೆರೆದುಕೊಳ್ಳುತ್ತದೆ.

ಯಡಿಯೂರಪ್ಪರ ವೈಯಕ್ತಿಕ ಜೀವನದಲ್ಲೂ ಹಲವಾರು ಏರುಪೇರುಗಳಾಗಿವೆ. ತಾವು ಕೆಲಸ ನಿರ್ವಹಿಸುತ್ತಿದ್ದ ರೈಸ್‌ ಮಿಲ್‌ನ ಮಾಲೀಕ ವೀರಭದ್ರ ಶಾಸ್ತ್ರಿಗಳ ಮಗಳನ್ನೆ ಇಷ್ಟಪಟ್ಟ ಯಡಿಯೂರಪ್ಪ ಮದುವೆಯಾದರು. ನಂತರ ಮಾವನ ಸಹಾಯದಿಂದ ಜಿಲ್ಲಾ ಕೇಂದ್ರ ಶಿವಮೊಗ್ಗಕ್ಕೆ ಬಂದು ಹಾರ್ಡ್‌ವೇರ್‌ ಮಳಿಗೆಯನ್ನೂ ತೆರೆದರು. ಮೂಲಗಳ ಪ್ರಕಾರ, ಯಡಿಯೂರಪ್ಪ ತನ್ನ ಮಾವನ ಆಸ್ತಿಗೆ ಹಕ್ಕುದಾರರಾದರು. ನಿಧಾನವಾಗಿ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೂ ಕಾಲಿಟ್ಟರು. ಈ ಮೂಲಕ ರಾಜಕೀಯವಾಗಿಯೂ, ಆರ್ಥಿಕವಾಗಿಯೂ ಬೆಳೆದರು ಯಡಿಯೂರಪ್ಪ. ಅದಕ್ಕೆ ಶಿವಮೊಗ್ಗದ ನೆಲ ಅನುವು ಮಾಡಿಕೊಟ್ಟಿತು.

ಈ ಮಧ್ಯೆಯೇ ಇಂದಿರಾ ಗಾಂಧಿ 1975-76ರಲ್ಲಿ ದೇಶಾದ್ಯಂತ ತುರ್ತು ಪರಿಸ್ಥಿತಿಯನ್ನು ಹೇರಿದಾಗ ಯಡಿಯೂರಪ್ಪ ಸಹಜವಾಗಿಯೇ ವಿರೋಧಿಸಿದರು. ಆ ಸಮಯದಲ್ಲಿ ಬಂಧನಕ್ಕೆ ಒಳಪಟ್ಟು ಬಳ್ಳಾರಿ ಮತ್ತು ಶಿವಮೊಗ್ಗ ಜೈಲಿಗಳಲ್ಲಿ ದಿನಗಳನ್ನು ಕಳೆದರು.

ಶಿಕಾರಿಪುರದ ಶಾಸಕನಾಗಿ:

ತುರ್ತು ಪರಿಸ್ಥಿತಿ ಜನಸಂಘದ (ಇವತ್ತಿನ ಬಿಜೆಪಿ)ಯ ರಾಜಕೀಯ ಸಾಧ್ಯತೆಯನ್ನೇ ಬದಲಿಸಿತು. ಇಂದಿರಾಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಅವತ್ತು ದೇಶದಲ್ಲಿದ್ದ ಎಲ್ಲರೂ ವಿರೋಧಿಸಿದ್ದರು. ಕಮ್ಯುನಿಸ್ಟರಿಂದ ಮೊದಲ್ಗೊಂಡು ಸಮಾಜವಾದಿಗಳವರೆಗೆ ಜೈಲು ಕಂಡರು. ಆದರೆ ಮುಂದಿನ ದಿನಗಳಲ್ಲಿ ಅದರ ರಾಜಕೀಯ ಲಾಭವನ್ನು ಪಡೆದುಕೊಂಡಿದ್ದು ಜನಸಂಘ.

ಆ ವೇಳೆಗೆ ಹೆಚ್ಚು ಕಡಿಮೆ ಇದೇ ಮಾನದಂಡ ಶಿಕಾರಿಪುರದಲ್ಲೂ ಅನ್ವಯವಾಗಿತ್ತು. 1977ರಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜನಸಂಘದಿಂದ ಚುನಾವಣೆಗೆ ನಿಂತ ಯಡಿಯೂರಪ್ಪ ಶಿಕಾರಿಪುರದ ಪುರಸಭೆಗೆ ಸದಸ್ಯರಾಗಿ ಆಯ್ಕೆಯಾದರು. ಕೇವಲ ಮೂರೇ ವರ್ಷಗಳಲ್ಲಿ ಪುರಸಭೆಯ ಅಧ್ಯಕ್ಷ ಸ್ಥಾನವೂ ಸಿಕ್ಕಿತು. ದಿನಗಳು ಕಳೆಯುವುದರೊಳಗೆ ಯಡಿಯೂರಪ್ಪ ಬಿಜೆಪಿ ಶಿಕಾರಿಪುರ ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾದರು. ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನವೂ ಅವರದ್ದಾಗಲು ಹೆಚ್ಚು ಕಾಲ ಬೇಕಾಗಲಿಲ್ಲ.

ಅದೇ ವರ್ಷ, ಅಂದರೆ 1983ರಲ್ಲಿ ಶಿಕಾರಿಪುರದ ಶಾಸಕರಾಗಿ ವಿಧಾನಸೌಧಕ್ಕೆ ಮೊದಲು ಜನಪ್ರತಿನಿಧಿಯಾಗಿ ಪ್ರವೇಶಿಸಿದರು ಯಡಿಯೂರಪ್ಪ. ಮುಂದೆ ಅವರ ರಾಜಕೀಯ ಜೀವನದ ಏರುಗತಿಯಲ್ಲಿ ಸಾಗಿತು.

ಬಿಜೆಪಿಯ ‘ದುರಂತ ನಾಯಕ’, ರೈಸ್‌ ಮಿಲ್ ರೈಟರ್ ಬಿ. ಎಸ್. ಯಡಿಯೂರಪ್ಪ ಆತ್ಮಕತೆ!

‘ಶಿಕಾರಿಪುರದಲ್ಲಿ ಯಡಿಯೂರಪ್ಪ ವಿರುದ್ಧ ಗೆಲ್ಲುಲು ಶಕ್ತಿ ಇರುವ ಯಾರೂ ಇಲ್ಲ’ ಎನ್ನುವಷ್ಟರ ಮಟ್ಟಿಗೆ ಯಡಿಯೂರಪ್ಪ ಹಿಡಿತ ಸಾಧಿಸಿದರು. 1988ರಲ್ಲಿ ಕರ್ನಾಟಕ ರಾಜ್ಯ ಬಿಜೆಪಿ ಸಾರಥ್ಯ ಯಡಿಯೂರಪ್ಪ ಪಾಲಿಗೆ ಸಿಕ್ಕಿತು. ರಾಜ್ಯಾಧ್ಯಕ್ಷರಾದ ಯಡಿಯೂರಪ್ಪ ಬಿಜೆಪಿಯನ್ನು ಕರ್ನಾಟಕದಲ್ಲಿ ಮುನ್ನೆಡೆಸುವ ಹೊಣೆ ಹೊತ್ತರು.

ಯಡಿಯೂರಪ್ಪನವರ ಮೇಲೆ ಅಗಾಧವಾದ ನಂಬಿಕೆ ಹೊಂದಿದ್ದ ಶಿಕಾರಿಪುರದ ಜನ 1994ರಲ್ಲಿ ಮೂರನೇ ಬಾರಿಗೆ ಯಡಿಯೂರಪ್ಪನವರನ್ನು ಶಾಸಕರನ್ನಾಗಿಸಿದರು. ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾದರು.

1999ರಲ್ಲಿ ಸೋಲನ್ನು ಅನುಭವಿಸಿ, ವಿಧಾನ ಪರಿಷತ್‌ ಸದಸ್ಯರಾದರು. ಆದರೆ 2004ರ ಚುನಾವಣೆಯಲ್ಲಿ ಶಿಕಾರಿಪುರ ಮತದಾರರು ಮತ್ತೆ ಯಡಿಯೂರಪ್ಪನವರ ಕೈ ಹಿಡಿದರು. ಅ ಮೂಲಕ ಮತ್ತೆ ವಿರೋಧ ಪಕ್ಷದ ನಾಯಕನ ಸ್ಥಾನ ಸಿಕ್ಕಿತು.

ಹೀಗಿರುವಾಗಲೇ 2004 ಕಾಲಿಟ್ಟಿತ್ತು. ಯಡಿಯೂರಪ್ಪ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟು 26 ವರ್ಷಗಳ ನಂತರ ಮೊದಲ ಬಾರಿಗೆ ಅವರು ಕುಟುಂಬದ ಕೆಟ್ಟ ಸುದ್ದಿಯೊಂದು ಹೊರಬಿತ್ತು. ಅದು ಯಡಿಯೂರಪ್ಪ ಪ್ರೀತಿಸಿ ವಿವಾಹವಾದ ಮೈತ್ರಾ ದೇವಿ ಶಿವಮೊಗ್ಗದ ವಿನೋಭನಗರದ ಮನೆಯಲ್ಲಿ ಸಾವನ್ನಪ್ಪಿದ್ದರು. ಅದರ ಹೆಣ ಮನೆಯ ಟೆರಾಸಿನ ಮೇಲಿನ ನೀರಿನ ಸಂಪ್‌ನಲ್ಲಿ ಉಲ್ಟಾ ಬಿದ್ದಿತ್ತು. ಆರಂಭದಲ್ಲಿ ಇದೊಂದು ಶಂಕಾಸ್ಪದ ಸಾವು ಎಂದು ಸುದ್ದಿ ಹರಡಿತ್ತು. ಆ ದಿನಗಳನ್ನು ಇವತ್ತಿಗೂ ಶಿವಮೊಗ್ಗದ ಹಿರಿಯ ಬಿಜೆಪಿ ಕಾರ್ಯಕರ್ತರು ನೆನಪಿಸಿಕೊಳ್ಳುತ್ತಾರೆ.

ಅದೇ ವರ್ಷದಲ್ಲಿ ನಡೆದ ಚುನಾವಣೆಯ ಫಲಿತಾಂಶ ಯಡಿಯೂರಪ್ಪರಿಗೆ ಹಾಗೂ ಜನರಿಗೆ ಮೈತ್ರಾ ದೇವಿಯವರ ಸಾವಿನ ಸುದ್ದಿಯನ್ನು ಸಾರ್ವಜನಿಕವಾಗಿ ಮರೆಸಿತು.

2004ರ ಚುನಾವಣೆಯಲ್ಲಿ 79 ಸ್ಥಾನಗಳನ್ನು ತನ್ನದಾಗಿಸಿಕೊಂಡಿದ್ದ ಬಿಜೆಪಿ ದೊಡ್ಡ ಪಕ್ಷವಾಗಿ ಹೊಮ್ಮಿತ್ತು. ಆದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರಕಾರ ರಚಿಸಿದವು. ಸರಕಾರ ರಚಿಸಿ 2 ವರ್ಷ ಕಳೆಯುವ ಮೊದಲೇ ಜೆಡಿಎಸ್‌ ‘ರಾತ್ರಿ ಕಾರ್ಯಾಚರಣೆ’ಯಲ್ಲಿ ಬಿಜೆಪಿ ಜತೆ ಕೂಡಿಕೆ ಮಾಡಿಕೊಂಡಿತು.

ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ, ಬಿ. ಎಸ್. ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಷ್ಟು ವರ್ಷಗಳ ಕಾಲ ವಿರೋಧ ಪಕ್ಷದಲ್ಲಿದ್ದೇ ಹೋರಾಡಿಕೊಂಡ ಬಂದ ಯಡಿಯೂರಪ್ಪ ಮೊದಲ ಬಾರಿ ಅಧಿಕಾರ ಗದ್ದುಗೆ ಏರಿದ್ದರು, ಅದೂ ಉಪಮುಖ್ಯಮಂತ್ರಿಯಾಗಿ. ಅದೇ ಮೊದಲ ಬಾರಿಗೆ ಶಾಸಕರಾಗಿ ಅಯ್ಕೆಯಾಗಿದ್ದ ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು.

ಆದರೆ ಅದೂ ಅನಿಶ್ಚಿತತೆಗಳ ನಡುವೆ 20 ತಿಂಗಳು ಕಳೆಯಿತು. ಸಿಎಂ ಕುಮಾರಸ್ವಾಮಿ ಉಳಿದ ಅವಧಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಬಿಟ್ಟುಕೊಡಲು ಒಪ್ಪಲಿಲ್ಲ. ಹಗ್ಗ-ಜಗ್ಗಾಟ ನಡೆದು ಕೊನೆಗೂ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದರು. ಆದರೆ ಮುಖ್ಯಮಂತ್ರಿಯಾಗಿದ್ದು ಕೇವಲ 7 ದಿನಗಳು.

ಅಧಿಕಾರದ ಹಂಚಿಕೆಯಲ್ಲಿ ಜಗಳಗಳಾಗಿ ಯಡಿಯೂರಪ್ಪ ಇಡೀ ಸಂಪುಟವನ್ನು ವಿಸರ್ಜಿಸಿದರು. ಕಣ್ಣೀರು ಸುರಿಸಿದರು. ಈ ಕಣ್ಣೀರೇ ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪರಿಗೆ ಶ್ರೀರಕ್ಷೆಯಾಯಿತು.

2008ರಲ್ಲಿ ಕರ್ನಾಟಕದ ಮತದಾರರು ಯಡಿಯೂರಪ್ಪನವರ ಕೈಹಿಡಿದಿದ್ದರು. 224 ವಿಧಾನಸಭಾ ಸ್ಥಾನಗಳ ಪೈಕಿ 110 ಸ್ಥಾನಗಳು ಬಿಜೆಪಿ ಗೆದ್ದಿತು. ಆದಾಗ್ಯೂ ಸರಕಾರ ರಚಿಸಲು ಇನ್ನೂ 6 ಶಾಸಕರ ಬೆಂಬಲ ಅಗತ್ಯವಿತ್ತು. ಯಡಿಯೂರಪ್ಪ ‘ಆಪರೇಷನ್‌ ಕಮಲ’ಕ್ಕೆ ಚಾಲನೆ ನೀಡಿದ್ದರು. ರೆಸಾರ್ಟ್‌ ರಾಜಕಾರಣಕ್ಕೆ ಮುಂದಾಗಿದ್ದರು. ಹಲವಾರು ಕಸರತ್ತುಗಳನ್ನು ನಡೆಸಿ ಮುಖ್ಯಮಂತ್ರಿ ಸ್ಥಾನ ಗಟ್ಟಿಮಾಡಿಕೊಂಡರು. ಆದರೂ ಕೇವಲ 2 ವರ್ಷಕ್ಕೆ ಅಧಿಕಾರದಿಂದ ಕೆಳಗಿಳಿಯಬೇಕಾಯಿತು.

ಬಳ್ಳಾರಿಯ ಅಕ್ರಮ ಗಣಿಗಾರಿಕೆ ದೇಶದ ಚರ್ಚಾ ಕೇಂದ್ರಕ್ಕೆ ಬಂತು. ಇತರೆ ಪಕ್ಷಗಳಷ್ಟೇ ಅಲ್ಲದೇ ಬಿಜೆಪಿ ಹೈಕಮಾಂಡ್‌ ಕೂಡ ಯಡಿಯೂರಪ್ಪ ರಾಜೀನಾಮೆ ನೀಡಬೇಕೆಂದು ಒತ್ತಾಯ ಮಾಡಿತು. 2011ರಲ್ಲಿ ಯಡಿಯೂರಪ್ಪರ ವಿರುದ್ಧ 5 ಅಕ್ರಮ ಭೂ ಡಿ ನೋಟಿಫಿಕೇಶನ್‌ ಮೊಕದ್ದಮೆಗಳು ದಾಖಲಾಗಿದ್ದವು.

ಯುಡಿಯೂರಪ್ಪ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಅವರ ಮೇಲಿತ್ತು. ಅವರ ಮತ್ತು ಅವರ ಸಂಬಂಧಿಕರ ಮನೆಯ ಮೇಲೂ ಸಿಬಿಐ ದಾಳಿಗಳಾದವು. ಕೊನೆಗೆ ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೂ ಹೋಗಿ ಬಂದರು. ‘ಮಕ್ಕಳೇ ತಂದೆಯನ್ನು ಹಾಳು ಮಾಡಿದರು’ ಎಂದು ಕೆಲವರು ಸಂತಾಪ ಸೂಚಿಸಿದರು.

ಹಾಸ್ಯಾಸ್ಪದ ಎಂದರೆ ಇದೇ ಯಡಿಯೂರಪ್ಪ ಭಾರತದ ಪ್ರಧಾನ ಮಂತ್ರಿಗಳಿಗೆ ಪತ್ರವೊಂದನ್ನು ಬರೆದಿದ್ದರು. ಕರ್ನಾಟಕದಲ್ಲಿ ಕಾನೂನು ಬಾಹಿರವಾಗಿ ಉಕ್ಕಿನ ಉತ್ಪಾದನೆಯಾಗುತ್ತಿದ್ದು, ಅಕ್ರಮ ರಫ್ತು ಅವ್ಯಾಹತವಾಗಿ ಸಾಗುತ್ತಿದೆ. ಈ ರಫ್ತು ವ್ಯವಹಾರವನ್ನು ನಿಲ್ಲಿಸಬೇಕು ಎಂದಿದ್ದರು. ಅವರೇ ಅಕ್ರಮ ಗಣಿಗಾರಿಕೆಗೆ ಶ್ರೀರಕ್ಷೆಯಾಗಿ ನಿಂತ ಆರೋಪಕ್ಕೆ ಗುರಿಯಾದರು.

ಮತ್ತೆ ಚುನಾವಣೆ ಎದುರಾಗುವ ಹೊತ್ತಿಗೆ ಬಿಜೆಪಿಯಿಂದಲೂ ಹೊರಬಂದ ಯಡಿಯೂರಪ್ಪ ‘ಕರ್ನಾಟಕ ಜನತಾ ಪಕ್ಷ’ವನ್ನು ಸ್ಥಾಪಿಸಿದರು. ಚುನಾವಣೆಗೆ ಇಳಿದು ಬಿಜೆಪಿಯನ್ನೂ ಸೋಲಿಸಿ, ಪಕ್ಷದ ಹೈಕಮಾಂಡ್‌ಗೆ ತಮ್ಮ ಶಕ್ತಿಯನ್ನು ಮನವರಿಕೆ ಮಾಡಿಕೊಟ್ಟರು. ಕೊನೆಗೆ, ವಿರೋಧಗಳ ನಡುವೆಯೂ ಬಿಜೆಪಿಗೆ ವಾಪಾಸಾಗಿ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟವನ್ನು ಮತ್ತೆ ವಹಿಸಿಕೊಂಡರು. ಈ ನಡುವೆ ಅವರ ಮೇಲಿದ್ದ ಪ್ರಕರಣಗಳಲ್ಲಿ ಖುಲಾಸೆ ಸಿಕ್ಕಿತು. ಬಿಜೆಪಿ ಹೈಕಮಾಂಡ್‌ ಎಲ್ಲಾ ಗೊಂದಲಗಳ ನಡುವೆಯೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಮೊದಲಿನಿಂದಲೂ ಹೇಳಿಕೊಂಡೇ ಬಂತು.

ಈ ಮಾತು ಉಳಿಸಿಕೊಂಡಂತೆ, ರಾಜಭವನದಿಂದ ಯಡಿಯೂರಪ್ಪ ಅವರಿಗೆ ಪ್ರಮಾಣವಚನ ಸ್ವೀಕರಿಸಲು ಅಹ್ವಾನ ಬಂದಿದೆ. ಸುದೀರ್ಘ ರಾಜಕೀಯ ಜೀವನವನ್ನು ಕಂಡವರು ಯಡಿಯೂರಪ್ಪ. ಹಿಂದೊಮ್ಮೆ ಶಿಕಾರಿಪುರದ ಚಿಕ್ಕ ರೈಸ್‌ ಮಿಲ್‌ನಲ್ಲಿ ಗುಮಾಸ್ತರಾಗಿ ಕೆಲಸ ನಿರ್ವಹಿಸುತ್ತಿದ್ದವರು 7 ಬಾರಿ ವಿಧಾನಸಭಾ ಚುನಾವಣೆಯನ್ನು ಎದುರಿಸಿದವರು. ಅದರಲ್ಲಿ 6 ಬಾರಿ ಗೆದ್ದವರು. 45 ವರ್ಷಗಳಿಗೂ ಹೆಚ್ಚಿನ ಅಧಿಕಾರ ರಾಜಕೀಯದ ಅನುಭವವನ್ನು ಹೊಂದಿದವರು. ಹತ್ತಾರು ವರ್ಷಗಳ ಕಾಲ ವಿರೋಧ ಪಕ್ಷದ ನಾಯಕರಾಗಿ ನಿಂತವರು. ರೈತರ ಸಮಸ್ಯೆಗಳಿಗೆ ದನಿಯಾದವರು. ಮುಖ್ಯಮಂತ್ರಿಯಾಗಿಯೂ ಅವಕಾಶ ವಂಚಿತರಾದವರು. ಈಗಲೂ ಅನಿಶ್ಚಿತತೆಯ ನಡುವೆಯೇ ಅಧಿಕಾರ ಸ್ವೀಕರಿಸಬೇಕಿದೆ.

ಮುಂದಿನ ದಿನಗಳಲ್ಲಿ ಅವರು ಸುಸ್ಥಿತ ಸರಕಾರ ನೀಡುವ ಮೂಲಕ, ಅಧಿಕಾರದ ಸುತ್ತುತ್ತಿರುವ ಚರ್ಚೆಯನ್ನು ಅಭಿವೃದ್ಧಿಗೆ ತಿರುಗಿಸಬೇಕಿದೆ. ಅವೆಲ್ಲಕ್ಕಿಂತ ಮೊದಲು ವಿಶ್ವಾಸಮತವನ್ನು ಅವರು ತೋರಿಸಬೇಕಿದೆ. ಒಂದು ವೇಳೆ ‘ಗುಜರಾತಿ ವ್ಯಾಪಾರ’ ದುಬಾರಿಯಾದರೆ, ಕೊನೆಯ ರಾಜಕೀಯ ಆಟದಲ್ಲಿಯೂ ಯಡಿಯೂರಪ್ಪ ‘ದುರಂತ ನಾಯಕ’ ಎನ್ನಿಸಿಕೊಳ್ಳುವ ಸಾಧ್ಯತೆಯೂ ಇದೆ.