samachara
www.samachara.com
‘ಅತಂತ್ರ ವಿಧಾನಸಭೆ; ಅನಿಶ್ಚಿತ ವಾತಾವರಣ’: ಬಿಜೆಪಿಯ ಅಧಿಕಾರ ದಾಹಕ್ಕೆ ಗೌಡರ ಹೋಮ!
COVER STORY

‘ಅತಂತ್ರ ವಿಧಾನಸಭೆ; ಅನಿಶ್ಚಿತ ವಾತಾವರಣ’: ಬಿಜೆಪಿಯ ಅಧಿಕಾರ ದಾಹಕ್ಕೆ ಗೌಡರ ಹೋಮ!

ಈವರೆಗಿನ ಬೆಳವಣಿಗೆಗಳು ಮೇಲ್ನೋಟಕ್ಕೆ ಶಾಂಗ್ರಿಲಾ ಹೋಟೆಲ್, ಬಿಜೆಪಿ ಕಚೇರಿ, ಕಾಂಗ್ರೆಸ್ ಕಾರ್ಯಾಲಯ, ರಾಜಭವನದ ಸುತ್ತ ಅಂತ ಅನ್ನಿಸಿದರೂ, ಆಳದಲ್ಲಿ ‘ಅಧಿಕಾರ’ದ ಸುತ್ತ ಗಿರಕಿ ಹೊಡೆಯುತ್ತಿವೆ.

ರಾಜ್ಯದಲ್ಲಿ ನಿರ್ಮಾಣವಾಗಿರುವುದು ಅತಂತ್ರ ವಿಧಾನಸಭೆ ಮಾತ್ರವಲ್ಲ, ರಾಜಕೀಯ ಅನಿಶ್ಚಿತತೆ ಕೂಡ. ಮಂಗಳವಾರ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ನಡೆದ ಈವರೆಗಿನ ಬೆಳವಣಿಗೆಗಳು, ಮೇಲ್ನೋಟಕ್ಕೆ ಶಾಂಗ್ರಿಲಾ ಹೋಟೆಲ್, ಬಿಜೆಪಿ ಕಚೇರಿ, ಕಾಂಗ್ರೆಸ್ ಕಾರ್ಯಾಲಯ, ರಾಜಭವನದ ಸುತ್ತ ಅಂತ ಅನ್ನಿಸಿದರೂ, ಆಳದಲ್ಲಿ ‘ಅಧಿಕಾರ’ದ ಸುತ್ತ ಗಿರಕಿ ಹೊಡೆಯುತ್ತಿವೆ.

ಬುಧವಾರ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್‌ ಹಾಗೂ ಬಿಜೆಪಿಗಳಲ್ಲಿ ನಡೆದ ಬೆಳವಣಿಗೆಗಳು ರಾಜ್ಯದಲ್ಲಿ ಹೊಸ ಸರಕಾರ ಅಷ್ಟು ಸುಲಭವಾಗಿ ಅಸ್ಥಿತ್ವಕ್ಕೆ ಬರುವುದಿಲ್ಲ ಎಂಬುದನ್ನು ಸೂಚಿಸುತ್ತಿವೆ. ಹೇಗೇ ನೋಡಿದರು ಇದು ಒಂದು ದಿನಕ್ಕೆ, ವಾರಕ್ಕೆ ಮುಗಿಯುವ ರಾಜಕೀಯ ಪ್ರಕ್ರಿಯೆ ಎನ್ನಿಸುತ್ತಿಲ್ಲ. ಮುಂದಿನ ಲೋಕಸಭಾ ಚುನಾವಣೆವರೆಗೂ ಈ ಅತಂತ್ರ ಜನಾದೇಶದ ಪರಿಣಾಮಗಳು ನಾನಾ ರೂಪದಲ್ಲಿ ಕಾಣಿಸಿಕೊಳ್ಳುತ್ತಲೇ ಇರಲಿವೆ.

ಇಂದು ರಾಜಧಾನಿಯಲ್ಲಿ ನಡೆದ ಬೆಳವಣಿಗೆಗಳನ್ನೇ ಗಮನಿಸಿ ನೋಡಿ. ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕರಾಗಿ ಕುಮಾರಸ್ವಾಮಿ ಆಯ್ಕೆಯಾಗಿದ್ದಾರೆ. ಬಿಜೆಪಿಯಲ್ಲಿ ಬಿ. ಎಸ್. ಯಡಿಯೂರಪ್ಪರನ್ನು ಶಾಸಕಾಂಗ ಪಕ್ಷದ ನಾಯಕ ಎಂದು ಅವಿರೋಧವಾಗಿ ಒಪ್ಪಿಕೊಂಡಿದ್ದಾರೆ. ಇಬ್ಬರೂ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಹಾಗೂ ಸರಕಾರ ರಚಿಸಲು ತಮಗೇ ಮೊದಲು ಅವಕಾಶ ನೀಡುವಂತೆ ರಾಜ್ಯಪಾಲ ವಾಜುಬಾಯಿ ವಾಲಾ ಮುಂದೆ ಕೋರಿಕೆ ಸಲ್ಲಿಸಿದ್ದಾರೆ.

ಈ ಬೆಳವಣಿಗೆಯನ್ನು ಕ್ಲೀಶೆ ರೂಪದಲ್ಲಿ ಹೇಳುವುದಾದರೆ, ‘ಚಂಡು ರಾಜಭವನದ ಅಂಗಳಕ್ಕೆ’ ಬಂದು ಬಿದ್ದಂತಾಗಿದೆ. ಹೀಗಾಗಿ ಸಮ್ಮಿಶ್ರ ಸರಕಾರ ರಚನೆ ಬಗ್ಗೆ ಇರುವ ಸುಪ್ರಿಂ ಕೋರ್ಟ್ ಆದೇಶ, ಹಿಂದೆ ಗೋವಾದಲ್ಲಿ ಅಧಿಕಾರ ರಚಿಸುವ ಸಮಯದಲ್ಲಿ ರಾಜನಾಥ್ ಸಿಂಗ್ ನೀಡಿದ ಹೇಳಿಕೆಗಳು ಮುನ್ನೆಲೆ ಬಂದಿವೆ.

ರಾಜ್ಯಪಾಲ ವಾಜೂಬಾಯಿ ವಾಲ ಗುಜರಾತ್‌ ಬಿಜೆಪಿ ನಾಯಕರು ಹಾಗೂ ಮಾಜಿ ಸಚಿವರು. ಹಿಂದೆ ಸ್ವಜನ ಪಕ್ಷಪಾತದ ಆರೋಪಕ್ಕೆ ಗುರಿಯಾದವರು. ಹೆಚ್ಚಿನ ಮಾಹಿತಿ ‘ಸಮಾಚಾರ’ದ ಕೆಳಗಿ ಸ್ಟೋರಿಯಲ್ಲಿದೆ.

Also read: 'ರಾಜಭವನ ಕರ್ಮಕಾಂಡ': ಗುಜರಾತಿ 'ಭ್ರಷ್ಟ ಅಧಿಕಾರಿ'ಗೆ ಮಣೆ ಹಾಕಿದ ವಾಜೂಬಾಯಿ ವಾಲಾ

ಹೀಗಾಗಿ ರಾಜ್ಯಪಾಲರ ನಿರ್ಣಯ ಬಿಜೆಪಿ ಪರವಾಗಿ ಬರುವ ಸಾಧ್ಯತೆ ಸಹಜವಾಗಿಯೇ ಹೆಚ್ಚಾಗಿದೆ. ಆದರೆ ತೆಗೆದುಕೊಳ್ಳುವ ತೀರ್ಮಾನ ಅಂತಿಮವಾಗುವವರೆಗೂ ಈ ಬಗ್ಗೆ ನಿರ್ಣಯಕ್ಕೆ ಬರುವ ಅಗತ್ಯವಿಲ್ಲ. ಒಂದು ವೇಳೆ ಹೆಚ್ಚಿನ ಸ್ಥಾನಗಳ ಆಧಾರದ ಮೇಲೆ ಬಿಜೆಪಿಗೆ ಅವಕಾಶ ನೀಡಿದರೆ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಮುಂದಿನದ್ದು ರಾಜಕೀಯ ಅಸ್ಥಿರ ಸನ್ನಿವೇಶ.

ಇನ್ನೊಂದೆಡೆ ಕಾಂಗ್ರೆಸ್ ಹಾಗೂ ಜೆಡಿಎಸ್‌ ಸಂಖ್ಯಾಮತದ ಮೂಲದ ಬಹುಮತ ಸಾಭೀತು ಪಡಿಸುವ ವಿಶ್ವಾಸದಲ್ಲಿವೆ.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಷರತ್ತುರಹಿತ ಬೆಂಬಲ ನೀಡಿದೆ. ಈಗಾಗಲೇ ರಾಜ್ಯಪಾಲರನ್ನು ಭೇಟಿ ಮಾಡಿ ಅನುಮತಿ ಕೋರಿದೆ. ಒಂದು ವೇಳೆ ಕುಮಾರಸ್ವಾಮಿ ಅವರಿಗೆ ರಾಜ್ಯಪಾಲರು ಅವಕಾಶ ನೀಡಿದರೂ, ಸಮ್ಮಿಶ್ರ ರಾಜಕಾರಣದ ನ್ಯೂನತೆಗಳು ಅಷ್ಟು ಸುಲಭವಾಗಿ ರಾಜಕೀಯ ನಡೆಯಲು ಬಿಡುವುದಿಲ್ಲ. ಹೀಗಾಗಿಯೇ ಈಗ ಸೃಷ್ಟಿಯಾಗಿರುವ ರಾಜಕೀಯ ಅಸ್ಥಿರ ಸನ್ನಿವೇಶ ಅಷ್ಟು ಸುಲಭಕ್ಕೆ ಕೊನೆಯಾಗುವ ಸಾಧ್ಯತೆಗಳು ಯಾವ ಆಯಾಮದಿಂದಲೂ ಕಾಣಿಸುತ್ತಿಲ್ಲ.

ಹೊಸದಿಲ್ಲಿಯ ಪಾರ್ಲಿಮೆಂಟ್ ಭವನ. 
ಹೊಸದಿಲ್ಲಿಯ ಪಾರ್ಲಿಮೆಂಟ್ ಭವನ. 

ಲೋಕಸಭೆಯನ್ನು ಗಮನದಲ್ಲಿಟ್ಟುಕೊಂಡು:

ಏನೇ ರಾಜ್ಯಗಳ ರಾಜಕೀಯ ಎಂದರೂ ಅಂತಿಮವಾಗಿ ಕೊನೆಯಾಗುವುದು ಲೋಕಸಭೆಯಲ್ಲಿ. ದೇಶದ ಆಡಳಿತ ಹಿಡಿಯುವುದು, ಉಳಿಸಿಕೊಳ್ಳುವುದೇ ದೇಶದ ರಾಜಕಾರಣದ ಅಂತಿಮ ಗುರಿ.

ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಪ್ರಧಾನಿ ಮೋದಿ ರಾಜ್ಯದಲ್ಲಿ ಒಟ್ಟು 22 ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದರು. ಅವುಗಳಲ್ಲಿ ಬಹುತೇಕ ಸಭೆಗಳ ಭಾಷಣವನ್ನು ಅವರು ಮೀಸಲಿಟ್ಟಿದ್ದು ಮುಂದಿನ ಲೋಕಸಭೆ ಚುನಾವಣೆಗಾಗಿಯೇ ಎಂಬುದು ವಿಶೇಷ. ಸರ್ಜಿಕಲ್ ಸ್ಟ್ರೈಕ್, ಮುದೋಳ್ ನಾಯಿಗಳು ಮೋದಿ ಭಾಷಣದಲ್ಲಿ ಪ್ರಸ್ತಾಪವಾದವು.

ಕರ್ನಾಟಕದಲ್ಲೀಗ ನಿರ್ಮಾಣವಾಗಿರುವ ಅತಂತ್ರ ಸನ್ನಿವೇಶವನ್ನೂ ಬಿಜೆಪಿ ಲೋಕಸಭೆಯನ್ನು ಗಮನದಲ್ಲಿ ಇಟ್ಟುಕೊಂಡೇ ನಿಭಾಯಿಸಲಿದೆ. “ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಬೇಕು ಎಂಬುದು ನಮ್ಮ ಗಟ್ಟಿ ನಿರ್ಧಾರ,’’ ಎನ್ನುತ್ತಾರೆ ಸಂಘಪರಿವಾರದ ಹಿರಿಯ ನಾಯಕರೊಬ್ಬರು.

‘ಸಮಾಚಾರ’ದ ಜತೆ ಮಾತನಾಡಿದ ಅವರು, “ಕರ್ನಾಟಕದಲ್ಲಿ ಜನ ನೀಡಿದ ತೀರ್ಪು ಇದು ಎಂದು ನಾವು ಮನದಟ್ಟು ಮಾಡಿಸುತ್ತೇವೆ. ಅದು ಬಿಟ್ಟು ಅಧಿಕಾರ ಬಿಟ್ಟುಕೊಟ್ಟರೆ ಲೋಕಸಭೆ ಚುನಾವಣೆಗೆ ಸಮಸ್ಯೆಯಾಗುತ್ತದೆ,’’ ಎಂದು ವಿವರಿಸಿದರು. ಚುನಾವಣೆಯ ಪ್ರಚಾರದಲ್ಲಿ ಬಿಜೆಪಿಗಾಗಿ 10 ಸಾವಿರಕ್ಕೂ ಅಧಿಕಾರ ಕಾರ್ಯಕರ್ತರನ್ನು ನೀಡಿದ್ದು ಸಂಘಪರಿವಾರ. ಈಗ ಅದರ ಅಭಿಪ್ರಾಯವನ್ನು ಪಕ್ಕಕ್ಕಿಟ್ಟು ಬಿಜೆಪಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಕೂಡ. ಹೀಗಾಗಿಯೇ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿಯೂ ‘ದುರಂತ ನಾಯಕ’ ಎಂದು ಬಿಂಬಿಸುವ ಪ್ರಯತ್ನ ಢಾಳಾಗಿಯೇ ನಡೆಯಲಿದೆ.

ಅತ್ತ ಆರ್‌ಎಸ್‌ಎಸ್‌ ನಾಯಕರು ಲೋಸಭೆಯ ಚುನಾವಣೆಯ ಮಹತ್ವವನ್ನು ವಿವರಿಸುತ್ತಿದ್ದ ಹೊತ್ತಿಗೇ, ಶಾಂಗ್ರಿಲಾ ಹೋಟೆಲ್‌ನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಕುಮಾರಸ್ವಾಮಿ, “ಚುನಾವಣೆಗೂ ಮುನ್ನವೇ ನಾವು ಮೈತ್ರಿ ಮಾಡಿಕೊಂಡಿದ್ದರೆ ಬಿಜೆಪಿ 80 ಸ್ಥಾನಗಳಿಗೆ ಇಳಿಯುತ್ತಿತ್ತು. ಲೋಕಸಭೆ ಚುನಾವಣೆಗೆ ಇದೇ ಮೈತ್ರಿ ಸರಕಾರ ಮುಂದವರಿಸಿದರೆ ಬಿಜೆಪಿ 4 ಸ್ಥಾನಗಳನ್ನೂ ಗೆಲ್ಲುವುದಿಲ್ಲ,’’ ಎಂದರು. ಲೋಕಸಭೆಗಾಗಿ ಬಡಿದಾಟವೊಂದು ರಾಜ್ಯಮಟ್ಟದಲ್ಲಿ ಆರಂಭವಾಗಿರುವ ಸೂಚನೆ ಇದು.

ಆತುರಕ್ಕೆ ಬೀಳ್ತಿದೆಯಾ ಬಿಜೆಪಿ?:

ಮಂಗಳವಾರ ಫಲಿತಾಂಶ ಪ್ರಕಟವಾಗುತ್ತಿದ್ದಂತೆ, ದಿಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಹೇಳಿದ್ದಾರೆ. ಈ ಮೂಲಕ ಕರ್ನಾಟಕದ ಅಧಿಕಾರವನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ ಎಂಬ ಸಂದೇಶ ಸ್ಪಷ್ಟವಾಗಿದೆ.

ರಾಜ್ಯದ 224 ಕ್ಷೇತ್ರಗಳ ಪೈಕಿ ಚುನಾವಣೆ ನಡೆದಿದ್ದು 222 ಕ್ಷೇತ್ರಗಳಿಗೆ. ಅದರಲ್ಲಿ ಬಂದಿರುವ ಫಲಿತಾಂಶ 104 ಸ್ಥಾನಗಳನ್ನು ಬಿಜೆಪಿಗೆ ತುಂದುಕೊಟ್ಟಿದೆ. ಹೇಗೇ ನೋಡಿದರೂ ಇದು ಮ್ಯಾಜಿಕ್ ನಂಬರ್ ಅಲ್ಲ. ಹಾಗೂ ಜೆಡಿಎಸ್‌ ಜತೆಗಿಲ್ಲದೆ ಅಧಿಕಾರದ ಸನಿಹ ಬರಲು ಬಿಜೆಪಿಗೆ ಸಾಧ್ಯವೇ ಇಲ್ಲ. ಉಳಿದಿರುವ ಏಕೈಕ ದಾರಿ ಇತರೆ ಪಕ್ಷಗಳ ಶಾಸಕರನ್ನು ಸೆಳೆಯುವುದು ಮತ್ತು ಆ ಮೂಲಕ ಮ್ಯಾಜಿಕ್ ನಂಬರ್ ತೋರಿಸುವ ಕಸರತ್ತು ಮಾಡುವುದು.

ಹಾಗೇನಾದರೂ ಆದರೆ ಒಂದಷ್ಟು ಕ್ಷೇತ್ರಗಳಲ್ಲಿ ಮರು ಚುನಾವಣೆ ನಡೆಯಬೇಕಿದೆ. ಅದಕ್ಕಾಗಿ ಒಂದು ಕಾಲದಲ್ಲಿ ಚಾಲ್ತಿಯಲ್ಲಿದ್ದ 'ಆಪರೇಶನ್ ಕಮಲ' ಮತ್ತೆ ನಡೆಸಬೇಕಿದೆ. ಆದರೆ ಅದು ಈ ಬಾರಿ ಬಿಜೆಪಿಗೇ ದುಬಾರಿಯಾಗುವ ಸಾಧ್ಯತೆ ಇದೆ.

"ಆಪರೇಶನ್ ಕಮಲನೋ ಏನೋ. ಶಾಸಕರನ್ನು ಖರೀದಿ ಮಾಡಿ ಅಧಿಕಾರಕ್ಕೆ ಬಂದರೆ ಜನ ನೋಡಲ್ವಾ?,'' ಎಂದು ಕಾಂಗ್ರೆಸ್ ಕಚೇರಿ ಸಮೀಪದಲ್ಲಿಯೇ ಮಧ್ಯಾನದ ಬಿಸಿಲಿನಲ್ಲಿ ನಿಂತಿದ್ದ ಆಟೋ ಚಾಲಕ ಚಂದ್ರಶೇಖರ್ ಪ್ರಶ್ನೆ ಎಸೆಯುತ್ತಾರೆ.

ಅವರಿಗೆ ಮಾತ್ರವಲ್ಲ ಜನರಿಗೂ ಈ ಉಪಚುನಾವಣೆಗಳು ಬೇಕಾಗಿಲ್ಲ. ಅದಕ್ಕೆ ಕಳೆದ ಬಾರಿಯೇ ಉತ್ತರವನ್ನೂ ನೀಡಿದ್ದಾರೆ. ಹೀಗಿರುವಾಗ ಬಿಜೆಪಿ ಮತ್ತೆ ಇಂತಹ ಕೆಲಸಕ್ಕೆ ಕೈ ಹಾಕಿ ಸುಟ್ಟುಕೊಳ್ಳಲು ಹೋಗುವ ಸಾಧ್ಯತೆ ಕಡಿಮೆ.

ವಾಸ್ತವ ಹೀಗಿದ್ದರೂ, ಬಿಎಸ್‌ವೈ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವುದು. ಅದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್‌ ಪ್ರತಿಭಟನೆ ನಡೆಸಿದರೆ ಪ್ರತಿ ಪ್ರತಿಭಟನೆಗಳನ್ನು ನಡೆಸುವುದು. ಒಂದು ವೇಳೆ ಕಾನೂನಿನ ಸಮಸ್ಯೆಯಾದರೆ ರಾಜ್ಯಪಾಲರ ಆಳ್ವಿಕೆಯನ್ನು ಹೇರುವ ಮೂಲಕ ಸುದೀರ್ಘ ಕಾಲಾವಧಿಗೆ ಜನ ಸರಕಾರವನ್ನು ವಿಧಾನಸೌಧದಿಂದ ದೂರ ಇಡುವ ತಂತ್ರವೂ ಬಿಜೆಪಿ ಪ್ರಯೋಗಿಸಬಹುದು ಎಂಬ ಲೆಕ್ಕಾಚಾರಗಳಿವೆ.

ಏನಕ್ಕೂ ರಾಜ್ಯಪಾಲರ ತೀರ್ಮಾನದ ಮೇಲೆ ಈ ಸಾಧ್ಯತೆಗಳು ನಿಂತಿವೆ.

ಕಾಂಗ್ರೆಸ್ ನಡವಳಿಕೆ:

ಬಿಜೆಪಿಯ ಅಧಿಕಾರದ ಹಪಾಹಪಿ ಹಾಗೂ ಜೆಡಿಎಸ್‌ನ ಮುಗ್ಧ ಅವಕಾಶಗಳನ್ನು ಪಕ್ಕಕ್ಕಿಟ್ಟು ಕಾಂಗ್ರೆಸ್ ಪಕ್ಷದ ಕಡೆ ನೋಡಿದರೆ ಎರಡೂ ಪಕ್ಷಗಳಲ್ಲಿ ಇಲ್ಲದ ಸಂದಿಗ್ಧ ಸನ್ನಿವೇಶ ಕಾಣಿಸುತ್ತದೆ. ಫಲಿತಾಂಶದ ನಂತರ ಕಾಂಗ್ರೆಸ್ ಪಕ್ಷದ ನಡವಳಿಕೆಯೇ ಬದಲಾಗಿದೆ. ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಅವರನ್ನು ಮುಂದಿಟ್ಟುಕೊಂಡು ಅಖಾಡದಲ್ಲಿ ತಿಂಗಳುಗಳ ಕಾಲ ಬಡಿದಾಡಿದ ಪಕ್ಷ ಈಗ ಸೋಲಿನಿಂದ ಕಂಗೆಟ್ಟ ಹಾಗೆ ಕಾಣಿಸುತ್ತಿದೆ. ತೋಳ ಹಳ್ಳಕ್ಕೆ ಬಿದ್ದಾಗ ಕಲ್ಲು ಸ್ವಪಕ್ಷೀಯರಿಂದಲೇ ತೂರಾಟ ಆರಂಭವಾಗಿದೆ.

ಪರಿಣಾಮ, ಹಂಗಾಮಿ ಸಿಎಂ ಸಿದ್ದರಾಮಯ್ಯ ಶಾಸಕಾಂಗ ಸಭೆಯಲ್ಲಿ ಕಣ್ಣೀರು ಹಾಕಿದರು, ಅವರ ವಿರುದ್ಧ ಏಕವಚನ ಪ್ರಯೋಗ ನಡೆಯಿತು ಎಂಬ ಸುದ್ದಿಗಳು ಹೊರಬೀಳುತ್ತಿವೆ.

ಆದರೆ ಸಭೆಯಿಂದ ಹೊರಬಂದ ಸಿದ್ದರಾಮಯ್ಯ ತಮ್ಮ ಎಂದಿನ ಶೈಲಿಯಲ್ಲಿಯೇ ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ‘’ಕುದುರೆ ವ್ಯಾಪಾರಕ್ಕೆ ಪ್ರಧಾನಿ ಮೋದಿ ಬೆಂಬಲವಾಗಿ ನಿಂತಿದ್ದಾರೆ,’’ ಎಂಬ ಗಂಭೀರ ಆರೋಪ ಅವರಿಂದ ಹೊರಬಿದ್ದಿದೆ.

“ಏನೇ ಹೇಳಿ ಐದು ವರ್ಷ ಒಳ್ಳೆಯ ಆಡಳಿತ ಕೊಟ್ಟ ಮನುಷ್ಯ. ಸ್ವಲ್ಪ ನೋಡಿಕೊಂಡು ರಾಜಕೀಯ ಮಾಡಿದ್ದರೆ ಆಗುತ್ತಿತ್ತು. ಇವತ್ತು ಬೈಯುವುದರಿಂದ ಪ್ರಯೋಜನ ಇಲ್ಲ. ಸಿದ್ದರಾಮಯ್ಯ ಮಾಡಿದ ತಪ್ಪುಗಳನ್ನು ವಿಮರ್ಶೆ ಮಾಡಿ. ಆದರೆ ಐದು ವರ್ಷಗಳ ಆಡಳಿತ ಒಳ್ಳೆಯತನಗಳನ್ನು ನೆನಪು ಮಾಡಿಕೊಳ್ಳಿ,’’ ಎನ್ನುತ್ತಾರೆ ಹಿರಿಯ ಪತ್ರಕರ್ತರೊಬ್ಬರು.

ಕಾರ್ಯಕರ್ತರಿಲ್ಲದ ನಾಯಕರ ಪಾರ್ಟಿಯಾಗಿರುವ ಕಾಂಗ್ರೆಸ್‌ಗೆ ಇಂತಹದೊಂದು ಸೋಲೂ ಪಾಠವಾಗುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ಸಂಘಟನೆ ವಿಚಾರ ಬಂದಾಗ, 'ಐವರಿ ಟವರ್‌'ನಲ್ಲಿ ಕುಳಿತ ಕೆಲವೇ ವ್ಯಕ್ತಿಗಳು ಎಲ್ಲವನ್ನೂ ಮಾಡಬಲ್ಲರು ಎಂಬ ಧೋರಣೆಯನ್ನು ತಿದ್ದಿಕೊಳ್ಳಲು ಕಳೆದುಕೊಂಡ 44 ಸ್ಥಾನಗಳು ಪ್ರೇರಣೆ ನೀಡುತ್ತಿಲ್ಲ. ಲೋಕಸಭೆಯ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುವ ಈ ಹೊತ್ತಿನ ನಿರ್ಧಾರಗಳು ಭವಿಷ್ಯದಲ್ಲಿ ಪಕ್ಷದ ಸ್ಥಿತಿಯನ್ನು ರಾಜ್ಯದಲ್ಲಿ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿ ತೀರ್ಮಾನಿಸಲಿದೆ.

ದೇವೇಗೌಡರ ಮೌನ:

ಬುಧವಾರ ತಮ್ಮ ನಿವಾಸದಲ್ಲಿ ನಡೆದ ಹೋಮದಲ್ಲಿ ಎಚ್‌. ಡಿ. ದೇವೇಗೌಡ. 
ಬುಧವಾರ ತಮ್ಮ ನಿವಾಸದಲ್ಲಿ ನಡೆದ ಹೋಮದಲ್ಲಿ ಎಚ್‌. ಡಿ. ದೇವೇಗೌಡ. 

ಎರಡು ರಾಷ್ಟ್ರೀಯ ಪಕ್ಷಗಳಲ್ಲಿನ ಬೆಳವಣಿಗೆಗಳು ಹೀಗಿದ್ದರೆ, ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಎಚ್. ಡಿ. ದೇವೇಗೌಡರ ಮೌನವೇ ಬುಧವಾರದ ಹೈಲೈಟ್ಸ್‌. ಕಳೆದ 24 ಗಂಟೆಗಳಲ್ಲಿ ದೇವೇಗೌಡರ ಸುತ್ತ ರಾಜ್ಯದ ರಾಜಕಾರಣ ಸುತ್ತತೊಡಗಿದೆ. ಆದರೆ ಗೌಡರು ಬೆಳಗ್ಗೆ ಒಂದು ದೇವಸ್ಥಾನ, ಮಧ್ಯಾಹ್ನ ಮನೆಯಲ್ಲಿ ಹೋಮ ಮಾಡಿಸಿದ್ದಾರೆ. ತಮ್ಮಿಂದ ಮಾಧ್ಯಮಗಳು ದೂರವೇ ಇರುವಂತೆ ಸೂಚಿಸಿದ್ದಾರೆ. ಕರ್ನಾಟಕದ ಮುಂದಿನ ರಾಜಕೀಯ ಬೆಳವಣಿಗೆಗಳೇನೇ ಇರಲಿ, ಅಂತಿಮವಾಗಿ ದೇವೇಗೌಡ ನಿರ್ಧಾರದ ಪರಿಣಾಮಗಳನ್ನು ಎದುರಿಸಲೇಬೇಕಿದೆ.

ದಿನದ ಅಂತ್ಯಕ್ಕೆ ಜನಾದೇಶದ ಪರಿಣಾಮ ರೆಸಾರ್ಟ್‌ ರಾಜಕಾರಣ ಮುನ್ನೆಲೆಗೆ ಬಂದಿದೆ. ಮುಂದಿನ ಅನಿಶ್ಚಿತ ದಿನಗಳ ಕಾಲ ಇದೇ ಡೋಲಾಯಮಾನ ರಾಜಕೀಯ ಸನ್ನಿವೇಶ ಮುಂದುವರಿಲಿವೆ. ಫಲಿತಾಂಶ ಬಂದ ನಂತರ ರಾಜಕೀಯ ಆಸಕ್ತಿ ಕೈ ಬಿಡಲು ತೀರ್ಮಾನ ಮಾಡಿವರು ಇನ್ನೊಂದಿಷ್ಟು ದಿನ ಕುತೂಹಲ ಉಳಿಸಿಕೊಳ್ಳಲೇಬೇಕಿದೆ.