samachara
www.samachara.com
ಅತಂತ್ರತೆಯ ಕೂಸು ‘ಸಮ್ಮಿಶ್ರ ಸರಕಾರಗಳು’: ಇತಿಹಾಸ ನೀಡಿದ ಪಾಠಗಳೇನು? 
COVER STORY

ಅತಂತ್ರತೆಯ ಕೂಸು ‘ಸಮ್ಮಿಶ್ರ ಸರಕಾರಗಳು’: ಇತಿಹಾಸ ನೀಡಿದ ಪಾಠಗಳೇನು? 

ರಾಜ್ಯಪಾಲರ ನಿರ್ಧಾರ ಮೇಲೀಗ ಕರ್ನಾಟಕದ ರಾಜಕೀಯಾಧಿಕಾರದ ನಿಂತಿದೆ. ಆದರೆ ದೇಶದ ಇತಿಹಾಸವನ್ನು ತಿರುಗಿ ನೋಡಿದರೆ, ಸಮ್ಮಿಶ್ರ ಸರಕಾರಗಳ ಪ್ರಯೋಗ ಕೈಕೊಟ್ಟಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.

ಸಮ್ಮಿಶ್ರ ಸರಕಾರ ಸಾಮಾನ್ಯವಾಗಿ ಅಸ್ತಿತ್ವಕ್ಕೆ ಬರುವುದು ಯಾವುದೇ ಪಕ್ಷಗಳಿಗೆ ಚುನಾವಣೆಗಳಲ್ಲಿ ಸರಕಾರ ರಚನೆ ಮಾಡುವಷ್ಟು ಬಹುಮತ ಬರದೇ ಅತಂತ್ರ ಸ್ಥಿತಿ ಏರ್ಪಟ್ಟಾಗ ಮಾತ್ರ. ಆಗ ಉಂಟಾಗುವ ರಾಜಕೀಯ ಅಧಿಕಾರದ ನಿರ್ವಾತವನ್ನು ತುಂಬಲು ಮಾಡಿಕೊಳ್ಳುವ ಒಂ‍ದು ತಾತ್ಕಾಲಿಕ ಎನ್ನಬಹುದಾದ ವ್ಯವಸ್ಥೆ ಇದು. ಭಾರತದಲ್ಲಿ ಮಾತ್ರವಲ್ಲದೇ ಜಾಗತಿಕವಾಗಿ ಹಲವಾರು ದೇಶಗಳಲ್ಲಿ ಹಿಂದೆಯೇ ಅಸ್ತಿತ್ವಕ್ಕೆ ಬಂದು ಈಗಲೂ ಹಲವು ದೇಶಗಳಲ್ಲಿ ಚಾಲ್ತಿಯಲ್ಲಿದೆ ಈ ಸಮ್ಮಿಶ್ರ ಸರಕಾರದ ರಾಜಕೀಯ ಪ್ರಯೋಗಗಳು.

ಭಾರತದಲ್ಲಿ ಮೊದಲಿನಿಂದಲೂ ಅಧಿಕಾರದಲ್ಲಿ ಏಕಮಾದ್ವಿತೀಯವಾಗಿ ಮೆರೆದಿದ್ದು ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ. ಇದು 1947ರಿಂದಲೂ ದೇಶದ ಆಡಳಿತವನ್ನು ತನ್ನ ಕೈಯಲ್ಲಿ ಹಿಡಿದಿಟ್ಟುಕೊಂಡಿತ್ತು. ಇದು 1975ರವರೆಗೂ ಇತ್ತು. ಆಗ ಕಾಂಗ್ರೆಸ್ಸಿನ ಅಧಿನಾಯಕಿಯಾಗಿದ್ದಿದ್ದು ಮೊದಲ ಪ್ರಧಾನಿ ಜವಾಹರಲಾಲ್ ನೆಹರೂರ ಪುತ್ರಿ ಇಂದಿರಾಗಾಂಧಿ. ಅವರು ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಚುನಾವಣಾ ಅಭ್ಯರ್ಥಿಯಾಗಿದ್ದರು. ಇಂದಿರಾ ಗಾಂಧಿ ತಮ್ಮದೇ ಇಂದಿರಾ ಕಾಂಗ್ರೆಸ್ ಎಂದು ಪ್ರತ್ಯೇಕ ಪಕ್ಷವನ್ನು ಕಟ್ಟಿಕೊಂಡಿದ್ದರೂ ನಂತರ ಅದು ಮೂಲ ಕಾಂಗ್ರೆಸ್ಸಿನಲ್ಲಿ ವಿಲೀನವಾಯಿತು.

ಚುನಾವಣಾ ಅಕ್ರಮಗಳಲ್ಲಿ ಅವರ ಪಾತ್ರ ನ್ಯಾಯಾಲಯದಲ್ಲಿ ಯಾವಾಗ ಸಾಬೀತಾಯಿತೋ ಆಲ್ಲಿಂದ ಭಾರತದ ರಾಜಕೀಯ ಆಡಳಿತ ವ್ಯವಸ್ಥೆಯ ಚಿತ್ರಣಕ್ಕೇ ಒಂದು ದೊಡ್ಡ ತಿರುವು ಕಾಣಿಸಿತು. 1971ರಲ್ಲಿ ರಾಯ್ ಬರೇಲಿಯಲ್ಲಿ ಇಂದಿರಾಗಾಂಧಿ ಎದುರು ರಾಜ್ ನಾರಾಯಣ್ ಸ್ಪರ್ಧಿಸಿದ್ದರು. ಇಂದಿರಾ ಗಾಂಧಿ ಚುನಾವಣಾ ಅಕ್ರಮ ನಡೆಸಿ ಗೆದ್ದಿದ್ದಾರೆ ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ವಿಚಾರಣೆ ನಡೆಸಿದ ಉತ್ತರ ಪ್ರದೇಶ ಉಚ್ಚ ನ್ಯಾಯಾಲಯ 1975ರಲ್ಲಿ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿ ಇಂದಿರಾ ಗಾಂಧಿಯನ್ನು ಚುನಾವಣೆ ಮತ್ತು ರಾಜಕೀಯ ಅಧಿಕಾರದಿಂದ ಆರು ವರ್ಷಗಳ ಕಾಲ ದೂರವಿಟ್ಟಿತ್ತು.

ಆಗ ದೇಶದಲ್ಲೇ ಮೊದಲ ಸಾರಿ ಭಾರಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಕಾರಣ ಆಗ ವಿರೋಧ ಪಕ್ಷಗಳು ಬಲವಾಗಿರಲಿಲ್ಲ. ಕಾಂಗ್ರೆಸ್ಸಿಗೆ ಪರ್ಯಾಯ ಇಂದಿರಾ ಗಾಂಧಿಯನ್ನು ಸರಿಗಟ್ಟುವ ನಾಯಕತ್ವ ಕೂಡ ಇರಲಿಲ್ಲ. ರಾಜಕೀಯ ಅನಿಶ್ಚಿತತೆ ಆಳುವ ಆಸ್ತಿವಂತ ಮತ್ತು ಕಾರ್ಪೊರೆಟ್ ಶಕ್ತಿಗಳಿಗೆ ಬೇಕಿರಲಿಲ್ಲ. ಆಗ ಬಳಸಿದ್ದೇ ತುರ್ತು ಸಂಧರ್ಭಗಳಲ್ಲಿ, ಅದೂ ಕೂಡ, ದೇಶ ಅಪಾಯಕಾರಿ ಸನ್ನಿವೇಶಕ್ಕೆ ಸಿಲುಕಿರುವಾಗ ಮಾತ್ರ ಉಪಯೋಗಿಸಬಹುದಾದ ತುರ್ತು ಪರಿಸ್ಥಿತಿ ಎಂಬ ಅಸ್ತ್ರ.

ತುರ್ತು ಪರಿಸ್ಥಿತಿ ಘೋಷಿಸಿದ ಅಂದಿನ ಪ್ರಧಾನಿ ಇಂದಿರಾಗಾಂಧಿ. 
ತುರ್ತು ಪರಿಸ್ಥಿತಿ ಘೋಷಿಸಿದ ಅಂದಿನ ಪ್ರಧಾನಿ ಇಂದಿರಾಗಾಂಧಿ. 

ತುರ್ತು ಪರಿಸ್ಥಿತಿಯನ್ನು ವಿರೋಧಿಸಿದವರನ್ನು ಜೈಲಿಗೆ ತಳ್ಳಲಾಯಿತು. ಜನತಾ ಪಕ್ಷದ ಮೊರಾರ್ಜಿ ದೇಸಾಯಿ, ಆಗಿನ ಜನಸಂಘದ ನಾಯಕರಾಗಿದ್ದ ವಾಜಪೇಯಿ, ಅಡ್ವಾನಿ, ಸಮಾಜವಾದಿ ಪಕ್ಷದ ಜಾರ್ಜ್ ಫರ್ನಾಂಡಿಸ್ ಸೇರಿದಂತೆ ಹಲವರನ್ನು ಜೈಲು ಸೇರಬೇಕಾಯಿತು.

ತುರ್ತು ಪರಿಸ್ಥಿತಿ ಮುಗಿದ ನಂತರ 1977ರಲ್ಲಿ ಲೋಕ ಸಭಾ ಚುನಾವಣೆ ನಡೆದು ಅದರಲ್ಲಿ ಇಂದಿರಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಹೀನಾಯ ಸೋಲನ್ನು ಅನುಭವಿಸಿತು. ಆದರೆ ಬೇರೆ ಯಾವುದೇ ಪಕ್ಷಕ್ಕೂ ಸರ್ಕಾರ ರಚನೆ ಮಾಡುವಷ್ಟು ಸ್ಥಾನಗಳಿರಲಿಲ್ಲ. ಆಗ ಮೊದಲ ಬಾರಿ ಸಮ್ಮಿಶ್ರ ಸರಕಾರ ರಾಷ್ಟ್ರ ಮಟ್ಟದಲ್ಲಿ ರಚನೆ ಮಾಡಲೇ ಬೇಕಾದ ಸ್ಥಿತಿ ನಿರ್ಮಾಣವಾಗಿ ಬಿಟ್ಟಿತು.

ಆಗ ರಚನೆಯಾಗಿದ್ದೇ ಜನತಾ ಪಕ್ಷದ ನೇತೃತ್ವದಲ್ಲಿ ಮೊರಾರ್ಜಿ ದೇಸಾಯಿ ಸರಕಾರ. ಈಗಿನ ಬಿಜೆಪಿ ಆಗ ಜನಸಂಘದ ಹೆಸರಿನಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರದ ಪಾಲುದಾರ ಪಕ್ಷವಾಗಿತ್ತು. ಈ ಸರ್ಕಾರ 24 ಮಾರ್ಚ್ 1977ರಿಂದ 15 ಜುಲೈ 1979ರ ವರೆಗೆ ಅಸ್ತಿತ್ವದಲ್ಲಿತ್ತು. ತನ್ನ ಸಂಪೂರ್ಣ ಅವಧಿಯನ್ನು ಪೂರೈಸಲು ಆಗದಿದ್ದರೂ ಇದು ಭಾರತದ ಮೊದಲ ಸಮ್ಮಿಶ್ರ ಸರಕಾರವೆಂದು ಚರಿತ್ರೆಯ ಪುಟಕ್ಕೆ ಸೇರಿ ಬಿಟ್ಟಿತು.

ಇದರ ಭಾಗವಾಗಿ ಅಲ್ಪ ಅವಧಿಯಲ್ಲಿ ಮೊರಾರ್ಜಿ ದೇಸಾಯಿ ಮತ್ತು ಚರಣ್ ಸಿಂಗ್ ಇಬ್ಬರು ಭಾರತದ ನಾಲ್ಕು ಮತ್ತು ಐದನೇ ಪ್ರಧಾನಿಗಳಾಗಿ ಪಟ್ಟಕ್ಕೆ ಏರಿದ್ದರು. ಈ ಸಮ್ಮಿಶ್ರ ಸರಕಾರಗಳಲ್ಲಿ ರಾಜಕೀಯ ಅತಂತ್ರತೆ, ಅನಿಶ್ಚತತೆಗಳು ಎಷ್ಟರ ಮಟ್ಟಿಗೆ ಇರುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಇದೊಂದೇ ಉದಾಹರಣೆ ಸಾಕು.

1980ರಲ್ಲಿ ಲೋಕ ಸಭಾ ಚುನಾವಣೆ ನಡೆದು ಮತ್ತೆ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಮತ್ತೆ ಬಹುಮತ ಪಡೆದು ಅಧಿಕಾರಕ್ಕೆ ಬಂದಿತು. ಕಾರಣ ಸ್ಪಷ್ಟ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ನಡೆದ ಸಮ್ಮಿಶ್ರ ಸರಕಾರದ ಪ್ರಯೋಗ ಅಲ್ಪ ಯಶಸ್ವಿಯಾಗಿದ್ದು ಬಿಟ್ಟರೆ ಪೂರ್ಣ ಯಶಸ್ವಿಯಾಗಿರಲಿಲ್ಲ. ಕಾರಣ ಸ್ಪಷ್ಟ, ಒಳಜಗಳ, ಅಧಿಕಾರಕ್ಕಾಗಿನ ಕಿತ್ತಾಟ ಮತ್ತು ಎಲ್ಲಾ ಪಕ್ಷಗಳ ಮುಖಂಡರುಗಳನ್ನು ಹಿಡಿದಿಡುವಲ್ಲಿ ಸೋತಿದ್ದರ ಪರಿಣಾಮ. ವಿರೋಧ ಪಕ್ಷಗಳಲ್ಲಿ ಆ ಮಟ್ಟದ ಪರ್ಯಾಯ ನಾಯಕತ್ವ ಬೆಳೆಯದೇ ಇದ್ದಿದ್ದು ಪ್ರಧಾನ ಕಾರಣವೆನ್ನಬಹುದು.

ಇಂದಿರಾ ಗಾಂಧಿ 1984ರಲ್ಲಿ ಹತ್ಯೆಗೀಡಾಗಿ ಅವರ ಮಗ ರಾಜೀವ್ ಗಾಂಧಿ ಅಧಿಕಾರಕ್ಕೇರಿದರು. ನಂತರ ನಡೆದ ಚುನಾವಣೆಯಲ್ಲಿ ಇಂದಿರಾ ಗಾಂಧಿಯ ಹತ್ಯೆಯಿಂದಾಗಿ ಅನುಕಂಪದ ಅಲೆ ಮತ್ತು ಬಲಹೀನ ವಿರೋಧ ಪಕ್ಷಗಳ ಕಾರಣಗಳಿಂದ ಮತ್ತೆ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೇರುವುದೂ ನಡೆದುಹೋಯಿತು.

ದೇಶದ ಸಮ್ಮಿಶ್ರ ಸರಕಾರಗಳ ಪ್ರಯೋಗಗಳಲ್ಲಿ ಪಾಲ್ಗೊಂಡ ಪ್ರಮುಖ ಪಕ್ಷಗಳು ಚಿನ್ಹೆಗಳು. 
ದೇಶದ ಸಮ್ಮಿಶ್ರ ಸರಕಾರಗಳ ಪ್ರಯೋಗಗಳಲ್ಲಿ ಪಾಲ್ಗೊಂಡ ಪ್ರಮುಖ ಪಕ್ಷಗಳು ಚಿನ್ಹೆಗಳು. 

ಅಂದರೆ 1940ರಿಂದ 1989ರವರೆಗೂ ಕಾಂಗ್ರೆಸ್ ಬಹುಮತದ ಸರಕಾರವಾಗಿ ಅಧಿಕಾರದಲ್ಲಿತ್ತು. ಸ್ವಜನಪಕ್ಷಪಾತ, ಬೋಫೋರ್ಸ್ ನಂತಹ ಹಗರಣಗಳು ಮತ್ತು ವ್ಯಾಪಕ ಭ್ರಷ್ಟಾಚಾರಗಳಿಂದಾಗಿ ದೇಶಾದ್ಯಂತ ಹುಟ್ಟಿದ್ದ ಕಾಂಗ್ರೆಸ್ ವಿರೋಧಿ ಅಲೆ ಮತ್ತು ಸಾಪೇಕ್ಷವಾಗಿ ಬಲಿಷ್ಟಗೊಂಡಿದ್ದ ವಿರೋಧ ಪಕ್ಷಗಳ ಕಾರಣಗಳಿಂದ ಮತ್ತೆ 1989ರ ಲೋಕಸಭಾ ಚುನಾವಣೆಯಲ್ಲಿ ಪುನಃ ರಾಷ್ಟ್ರೀಯ ರಂಗ ಎಂಬ ಸಮ್ಮಿಶ್ರ ಸರಕಾರ ರಚನೆಯಾಗುತ್ತದೆ. ಇದು 1991ರ ವರೆಗೆ ಅಸ್ತಿತ್ವದಲ್ಲಿ ಇದ್ದರೂ ಇಬ್ಬರು ಪ್ರಧಾನಿಗಳು ಇದರ ಹೆಸರಿನಲ್ಲಿ ಅಧಿಕಾರ ನಡೆಸುವ ಸ್ಥಿತಿ ಎದುರಾಗುತ್ತದೆ.

1991ರಲ್ಲಿ ಮತ್ತೆ ಸಾರ್ವತ್ರಿಕ ಲೋಕಸಭಾ ಚುನಾವಣೆ ನಡೆದು ಕಾಂಗ್ರೆಸ್ ನರಸಿಂಹ ರಾವ್ ನಾಯಕತ್ವದಲ್ಲಿ ಸಮ್ಮಿಶ್ರ ಸರಕಾರ ರಚನೆಯಾಗಿ ತನ್ನ ಅಧಿಕಾರಾವಧಿಯ ಐದು ವರ್ಷಗಳನ್ನು ಪೂರೈಸುತ್ತದೆ. ನಂತರದ ಚುನಾವಣೆಯಲ್ಲಿ ಬಿಜೆಪಿಯ ವಾಜಪೇಯಿ ನೇತೃತ್ವದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ ಎಂಬ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದು ತನ್ನ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರೈಸುತ್ತದೆ. ಇದಕ್ಕೂ ಮೊದಲು ವಾಜಪೇಯಿ ನೇತೃತ್ವದಲ್ಲಿ ಹನ್ನೊಂದು ದಿನಗಳಷ್ಟು ಆಯಸ್ಸಿದ್ದ ಸಮ್ಮಿಶ್ರ ಸರಕಾರ ರಚನೆಯಾಗಿ ನಂತರ ತಮಿಳುನಾಡಿನ ಏಐಡಿಎಂಕೆ ತನ್ನ ಬೆಂಬಲ ಹಿಂತೆಗೆದುಕೊಂಡಿದ್ದರಿಂದ ಒಂದು ಸ್ಥಾನದ ಕೊರತೆಯಿಂದ ಬಿದ್ದೂ ಹೋಗಿರುತ್ತದೆ.

2004ರ ಚುನಾವಣೆಯಲ್ಲಿ ವಾಜಪೇಯಿ ನೇತೃತ್ವದ ಸರಕಾರ ಹೋಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಎಂಬ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದು ಎರಡು ಅವಧಿಗೆ ಅಧಿಕಾರಕ್ಕೆ ಬರುತ್ತದೆ. ಮನಮೋಹನ್ ಸಿಂಗ್ ಇದರಲ್ಲಿ ಎರಡೂ ಅವಧಿಗೆ ಪ್ರಧಾನಿಯಾಗಿ ಅಧಿಕಾರದಲ್ಲಿರುತ್ತಾರೆ. ನಂತರದ 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿಯ ಬಿಜೆಪಿ ನೇತೃತ್ವದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದೆ. ಇದು ಸಮ್ಮಿಶ್ರ ಸರಕಾರದ ರೂಪವಿದ್ದರೂ ಇಲ್ಲಿ ಬಿಜೆಪಿಗೆ ಭಾರಿ ಬಹುಮತವಿದೆ. 1984ರ ನಂತರ ಮೊದಲ ಬಾರಿ ಒಂದು ರಾಜಕೀಯ ಪಕ್ಷಕ್ಕೆ ಈ ಮಟ್ಟದ ಭಾರಿ ಬಹುಮತ ದೊರೆತಿದೆ.

ಈಗ ಕರ್ನಾಟಕದ ಸರದಿ. ಕರ್ನಾಟಕವೂ ಹಿಂದೆ ಸಮ್ಮಿಶ್ರ ಸರಕಾರಗಳ ಪ್ರಯೋಗಕ್ಕೆ ಹಲವು ಬಾರಿ ಒಡ್ಡಿಕೊಂಡಿದೆ. ಅದರ ಮುಂದುವರಿದ ಭಾಗ 2018ರ ಜನಾದೇಶದ ನಂತರ ಕಾಣಸಿಕ್ಕಿದೆ ಅಷ್ಟೆ. ರಾಜ್ಯದಲ್ಲಿ ಯಾರು ಅಧಿಕಾರ ಚಲಾಯಿಸಲಿದ್ದಾರೆ ಎಂಬುದು ರಾಜ್ಯಪಾಲರ ನಿರ್ಧಾರ ಮೇಲೀಗ ನಿಂತಿದೆ. ಆದರೆ ದೇಶದ ರಾಜಕೀಯ ಇತಿಹಾಸವನ್ನು ತಿರುಗಿ ನೋಡಿದರೆ, ಸಮ್ಮಿಶ್ರ ಸರಕಾರ ಕೈಕೊಟ್ಟಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.