samachara
www.samachara.com
ಜನಾದೇಶ- 2018: ಚುನಾವಣಾ ವಿಶೇಷಗಳು, ತಲೆಕೆಳಗಾದ ಲೆಕ್ಕಾಚಾರಗಳು!
COVER STORY

ಜನಾದೇಶ- 2018: ಚುನಾವಣಾ ವಿಶೇಷಗಳು, ತಲೆಕೆಳಗಾದ ಲೆಕ್ಕಾಚಾರಗಳು!

ಕರ್ನಾಟಕದ ಚುನಾವಣೆ ಕೇವಲ ಆಳುವ ಸರಕಾರದ ಆಯ್ಕೆಯಾಗಿ ಅಷ್ಟೇ ಆಗಿ ಕಾಣಿಸದೆ, ದೇಶದೆಲ್ಲೆಡೆ ಕೌತುಕವನ್ನೂ ಹುಟ್ಟಿಸಿದೆ. ಈಗ ತಲೆದೋರಿರುವ ಅತಂತ್ರತೆ ಹಲವಾರು ಚಿಂತನೆಗಳನ್ನು ಜನರ ತಲೆಯಲ್ಲಿ ಮೂಡಿಸಿದೆ.

ಈ ಬಾರಿ ಕರ್ನಾಟಕದ ಚುನಾವಣೆ ಕೆಲವು ವಿಶೇಷತೆಗಳನ್ನು ಹೊಂದಿದ್ದು ರಾಷ್ಟ್ರೀಯ ಮಟ್ಟದಲ್ಲೂ ಭಾರಿ ಗಮನ ಸೆಳೆದಿತ್ತು. ಈ ಚುನಾವಣೆ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಗಳ ನೇರನೇರಾ ಹಣಾಹಣಿಯಾಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ಇದು ರಾಷ್ಟ್ರೀಯ ಅಸ್ತಿತ್ವದ ಪ್ರಶ್ನೆ ಕೂಡ ಆಗಿತ್ತು. ಜೊತೆಗೆ ಬಹಳ ಕಾಲದಿಂದ ಅಧಿಕಾರ ಬಯಸುತ್ತಿದ್ದ ಜೆಡಿಎಸ್ ನ ಅಸ್ತಿತ್ವದ ಪ್ರಶ್ನೆಯೂ ಈ ಚುನಾವಣೆಯಲ್ಲಿತ್ತು. ಅದರ ಹಿರಿಯ ನಾಯಕರಲ್ಲಿ ಐವರು ಕಾಂಗ್ರೆಸ್ ಗೆ ಸೇರಿಕೊಂಡಿದ್ದು ಆ ಪಕ್ಷದಲ್ಲಿನ ಬಿಕ್ಕಟ್ಟಿನ ಮಟ್ಟವನ್ನು ತೋರಿಸಿತ್ತು.

ಕಾಂಗ್ರೆಸ್ ಪಕ್ಷ ಸಿದ್ಧರಾಮಯ್ಯ ನೇತೃತ್ವದಲ್ಲಿ ಐದು ವರ್ಷಗಳ ಅಧಿಕಾರದ ಅವಧಿ ಮುಗಿಸಿತ್ತು. ಕರ್ನಾಟಕ ಎರಡು ದಶಕಗಳ ಕಾಲ ಐದು ವರ್ಷಗಳ ಅವಧಿ ಪೂರೈಸಿದ ಸರ್ಕಾರವನ್ನು ಕಂಡಿರಲಿಲ್ಲ. ಜೊತೆಗೆ ಮೋದಿಯ ಬಿಜೆಪಿಗೆ ಬಹು ಪ್ರತಿಷ್ಠೆಯ ಚುನಾವಣೆಯಾಗಿತ್ತು. ದಕ್ಷಿಣ ಭಾರತದಲ್ಲಿ ತನ್ನ ಅಸ್ತಿತ್ವ ಉಳಿಸಿ ವಿಸ್ತರಿಸಲು ಬಹು ನಿರ್ಣಾಯಕ ಚುನಾವಣೆ ಕೂಡ ಆಗಿತ್ತು. ತಮಿಳುನಾಡಿನಲ್ಲಿ ಏಐಡಿಎಂಕೆ ಪಕ್ಷವನ್ನು ಬಳಸಿಕೊಂಡು 2019ರ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದಿಂದ ಒಂದಷ್ಟು ಎಂಪಿಗಳನ್ನು ಸಂಪಾದಿಸುವ ಪ್ರಯತ್ನಗಳನ್ನು ಈಗಾಗಲೇ ಬಿಜೆಪಿ ಶುರುಮಾಡಿದೆ.

ದಕ್ಷಿಣ ಭಾರತದೊಳಗೆ ಕಾಲಿಡಲು ಬುನಾದಿಯಾಗಿ 2018ರ ಕರ್ನಾಟಕದ ವಿಧಾನಸಭಾ ಚುನಾವಣೆಯನ್ನು ನಿರ್ವಹಿಸಿ ಬಹುಮತ ಪಡೆದು ಸರ್ಕಾರ ರಚಿಸುವ ಹುನ್ನಾರದಿಂದ ಬಿಜೆಪಿ ಬಿಡದೇ ಪ್ರಯತ್ನಿಸುತ್ತಾ ಬಂದಿತ್ತು. ಅದಕ್ಕಾಗಿ ಮೋದಿ ಅಮಿತ್ ಷಾ ನೇರವಾಗಿ ಕರ್ನಾಟಕದ ಚುನಾವಣೆಯನ್ನು ನಿರ್ವಹಿಸಿದ್ದರು. ಚುನಾವಣಾ ಪೂರ್ವದಲ್ಲಿ ಕರ್ನಾಟಕದ ಬಿಜೆಪಿ ಪರಿಸ್ಥಿತಿ ಅತಂತ್ರ ಬಿಕ್ಕಟ್ಟುಗಳಿಂದ ಕೂಡಿತ್ತು. ನಾಯಕರಲ್ಲಿನ ವೈಮನಸ್ಸು ಒಡಕುಗಳೇ ಪ್ರಧಾನವಾಗಿದ್ದವು. ನಂತರ ರಾಷ್ಟ್ರೀಯ ನಾಯಕರು ನೇರ ಪ್ರವೇಶ ಮಾಡಿ ಹುರುಪು ತುಂಬಿ ಎಲ್ಲರನ್ನೂ ಒಗ್ಗೂಡಿಸಲು ಪ್ರಯತ್ನಿಸಿದ್ದರು. ನಂತರದ ದಿನಗಳಲ್ಲಿ ಬಿಜೆಪಿಯ ರಾಜ್ಯ ನಾಯಕರು ಒಗ್ಗೂಡಿ ಕೆಲಸ ಮಾಡಿದಂತೆ ಕಂಡುಬಂತು. ಅದು ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವನ್ನು ಬಿಜೆಪಿ ನಿರ್ವಹಿಸಿದ ರೀತಿಯಿಂದ ಗೊತ್ತಾಗುತ್ತದೆ.

ಸಿದ್ಧರಾಮಯ್ಯ ಉರುಳಿಸಿದ ಲಿಂಗಾಯತ ದಾಳ ಆರಂಭದಲ್ಲಿ ರಾಜ್ಯ ಬಿಜೆಪಿ ನಾಯಕತ್ವವನ್ನು ದಂಗುಬಡಿಸಿ ಮಂಕು ಮೂಡಿಸಿದ್ದು ಸುಳ್ಳಲ್ಲ. ಆದರೆ ಆ ಬಗ್ಗೆ ಬಹಿರಂಗವಾಗಿ ಯಾವುದೇ ನಿಲುವನ್ನು ಹೇಳದೇ ಆ ಇಡೀ ದಾಳವನ್ನು ಬಿಜೆಪಿ ಹೆಚ್ಚುಕಮ್ಮಿ ತನ್ನ ಪರವಾಗಿ ತಿರುಗಿಸಿಕೊಂಡಿದ್ದು ಚುನಾವಣಾ ಫಲಿತಾಂಶ ನೋಡಿದಾಗ ಅರ್ಥವಾಗುವ ವಿಚಾರ. ಲಿಂಗಾಯತ ಪ್ರತ್ಯೇಕ ಧರ್ಮ ಕಾಂಗ್ರೆಸ್ಸಿಗೆ ಲಾಭ ತಂದು ಕೊಡುವುದರ ಬದಲಿಗೆ ನಷ್ಟಕ್ಕೆ ಕಾರಣವಾಯಿತು.

ಸಿದ‍್ಧರಾಮಯ್ಯ ಮುಖ್ಯಮಂತ್ರಿಯಾದ ಬೆನ್ನಲ್ಲೇ ಮತ್ತು ನಂತರ ಕೆಲವು ಜನಪ್ರಿಯ ಭಾಗ್ಯಗಳನ್ನು ಜನರಿಗೆ ನೀಡಿದ್ದರು. ಅವುಗಳು ಜನರಿಗೆ ಒಂದಷ್ಟು ಅನುಕೂಲ ಮಾಡಿಕೊಟ್ಟಿದ್ದು ಸುಳ್ಳಲ್ಲ. ಜೊತೆಗೆ ಶುದ್ಧ ಕುಡಿಯುವ ನೀರಿನ ಘಟಕಗಳು ನಗರ, ಪಟ್ಟಣ, ಹಳ್ಳಿ ಪ್ರದೇಶಗಳ ಕೆಲವು ಕಡೆಗಳಲ್ಲಿ ಸ್ಥಾಪನೆಯಾಗಿದ್ದವು. ಹಿಂದಿನ ಹಲವು ಸರ್ಕಾರಗಳಿಗೆ ಹೋಲಿಸಿದರೆ ಪರವಾಗಿಲ್ಲ ಅನ್ನುವಂತಹ ಆಡಳಿತ ನೀಡಿದ್ದರೆನ್ನಬಹುದು. ಆದರೆ ತಮ್ಮ ಜೊತೆಗೆ ಹಲವು ಭ್ರಷ್ಟರನ್ನು ಇಟ್ಟುಕೊಂಡಿದ್ದರು.

ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರಿನ ಹೆಸರಿನಲ್ಲಿ ಸಾವಿರಾರು ರೈತಾಪಿಗಳ ಭೂಮಿಗಳನ್ನು ಕಬಳಿಸಿದ ಖೇಣಿಯಂತಹವರನ್ನು ಪಕ್ಷದೊಳಕ್ಕೆ ಕರೆತಂದು ಆಶ್ರಯ ನೀಡಿದ್ದರು. ಅವೆಲ್ಲಾ ಕೇವಲ ಪಕ್ಷ ಕಟ್ಟುವ ಕೆಲಸವಾಗಿ ಮಾತ್ರ ನೋಡಲು ಸಾಧ್ಯವಿಲ್ಲ. ಅವೆಲ್ಲಕ್ಕಿಂತ ಮುಖ್ಯವಾಗಿ ಭ್ರಷ್ಟಾಚಾರ ವಿರೋಧಿ ಸ್ವಾಯತ್ತ ಸಂಸ್ಥೆ ಲೋಕಾಯುಕ್ತವನ್ನು ಹೆಚ್ಚುಕಡಿಮೆ ನಿಷ್ಕ್ರಿಯವೆನಿಸುವ ಮಟ್ಟಕ್ಕೆ ಇಳಿಸಿದ ಕಾರ್ಯವನ್ನು ಸಿದ್ಧರಾಮಯ್ಯ ಮಾಡಿದರು. ಸಿದ್ದರಾಮಯ್ಯರ ಕಾಲದಲ್ಲಿ ದೊಡ್ಡ ಹಗರಣಗಳಾಗಲೀ, ಭ್ರಷ್ಟಾಚಾರಗಳಾಗಲೀ ಕಂಡುಬರಲಿಲ್ಲ. ಆದ್ದರಿಂದ ಅದು ಭ್ರಷ್ಟಾಚಾರರಹಿತ ಸರ್ಕಾರವೆಂದು ಅರ್ಥವಲ್ಲ.

ಈ ಬಾರಿಯ ಚುನಾವಣೆಯನ್ನು ಕೋಮುವಾದ ಫ್ಯಾಸಿಸ್ಟ್‌ರ ವಿರುದ‍್ಧದ ಚುನಾವಣೆಯೆನ್ನುವಂತೆ ಹಲವು ಪ್ರಗತಿಪರವೆನಿಸಿಕೊಂಡಿದ್ದ ವ್ಯಕ್ತಿಗಳು ಮತ್ತು ಸಂಘಟನೆಗಳು ಬಿಂಬಿಸಿದ್ದರು. ಜೊತೆಗೆ ಕೋಮುವಾದ ಮತ್ತು ಭ್ರಷ್ಟಾಚಾರದ ನಡುವಿನ ಚುನಾವಣೆ ಎಂದೂ ಕೂಡ ಬಿಂಬಿಸಲಾಗಿತ್ತು. ಭ್ರಷ್ಟಾಚಾರಕ್ಕಿಂತಲೂ ಕೋಮುವಾದ ಅಪಾಯಕಾರಿ ಹಾಗಾಗಿ ಬಿಜೆಪಿಗೆ ಮತ ನೀಡಬೇಡಿ ಎಂದು ಪ್ರಚಾರ ಮಾಡಲಾಗಿತ್ತು. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಪರೋಕ್ಷ ಹಾಗೂ ಪ್ರತ್ಯಕ್ಷ ಬೆಂಬಲವನ್ನೂ ನೀಡಿ ರಾಜ್ಯಾದ್ಯಂತ ಚುನಾವಣಾ ಪ್ರಚಾರ ನಡೆಸಿದ್ದರು. ಅಲ್ಲದೆ ಕೋಮುವಾದಕ್ಕಿಂತ ಭ್ರಷ್ಟಾಚಾರ ಮೇಲು ಎಂದು ನೇರವಾಗೇ ಹೇಳಿದ್ದರು.

ಕೋಮುವಾದ ಮತ್ತು ಫ್ಯಾಸಿಸಂ ತಡೆಯಲು ಬಿಜೆಪಿಯನ್ನು ಸೋಲಿಸಿ ಎಂಬ ಕರೆಯೊಂದಿಗೆ ರಾಜ್ಯಾದ್ಯಂತ ಪ್ರಚಾರಾಂದೋಲನವನ್ನು ನಡೆಸಿದ್ದರು. ಇದಕ್ಕೆ ಹಲವಾರು ಬುದ್ಧಿಜೀವಿಗಳು ತಮ್ಮ ದನಿಗೂಡಿಸಿದ್ದರು. ಇದರಲ್ಲಿ ‘ಸಂವಿಧಾನ ಉಳಿವಿಗಾಗಿ ಕರ್ನಾಟಕ’ ಎಂದು ರಚನೆಗೊಂಡ ಸಂಘಟನೆ ತನ್ನ ಸಮಾರೋಪ ಹೇಳಿಕೆಯಲ್ಲಿ ಹೇಳಿಕೊಂಡಂತೆ ರಾಜ್ಯಾದ್ಯಂತ 38 ಸಮಾವೇಶಗಳನ್ನು, 50ಕ್ಕೂ ಹೆಚ್ಚು ವಿವಿಧ ಪಕ್ಷಗಳ ಜೊತೆಗೆ ಸಮಾಲೋಚನೆಗಳನ್ನು ನಡೆಸಿತು. ಲಕ್ಷಗಳ ಲೆಕ್ಕದಲ್ಲಿ ಕರಪತ್ರಗಳನ್ನು, ಸಾವಿರಾರು ಪುಸ್ತಿಕೆಗಳನ್ನು ರಾಜ್ಯಾದ್ಯಂತ ಹಂಚಿತ್ತು.

ಜಸ್ಟ್ ಆಸ್ಕಿಂಗ್, ಲಗೋರಿ ಮುಂತಾದ ಸಾಮಾಜಿಕ ಜಾಲತಾಣಗಳ ಸಹಯೋಗದಲ್ಲಿ ಪ್ರಚಾರ, ಗೆಲ್ಲುವ ಸಾಧ್ಯತೆ ಇರುವ ಅಭ್ಯರ್ಥಿಗಳಿಗೆ ಸಕ್ರಿಯ ಬೆಂಬಲ, ಸೋಲಿಸಲೇ ಬೇಕಿರುವ ಜನದ್ರೋಹಿಗಳ ಕ್ಷೇತ್ರಗಳಲ್ಲಿ ಪ್ರಜಾತಾಂತ್ರಿಕ ಮತಗಳು ವಿಭಜನೆಯಾಗದಂತೆ ತಡೆಯಲು ವಿಶೇಷ ತಂಡಗಳ ಮೂಲಕ ವ್ಯಾಪಕವಾಗಿ ಪ್ರಚಾರಾಂದೋಲನ ನಡೆಸಿತ್ತೆಂದು ಹೇಳಿತ್ತು. ಕೊನೆಯಲ್ಲಿ ತನ್ನ ಮುಕ್ತಾಯದ ಮಾತಿನಲ್ಲಿ 13ರಂದು ವಿಶ್ರಾಂತಿ ಪಡೆದುಕೊಂಡು ಹದಿನಾರರಂದು ಸಂಭ್ರಮ ಆಚರಿಸೋಣ ಎಂದೂ ಕೂಡ ಹೇಳಿತ್ತು.

ಕರ್ನಾಟಕದ ಮಟ್ಟಿಗೆ ಈ ಮಟ್ಟದಲ್ಲಿ ಈ ರೀತಿಯ ಸಂಘಟನೆಗಳು ಚುನಾವಣಾ ಪ್ರಚಾರಾಂದೋಲನ ನಡೆಸಿದ ಚರಿತ್ರೆ ಇಲ್ಲ. ಈ ಬಾರಿಯ ಚುನಾವಣೆ ಈ ಕಾರಣದಿಂದಲೂ ವಿಶೇಷವೆಂದೇ ಹೇಳಬೇಕು. ಯಾಕೆಂದರೆ ಇದರಲ್ಲಿ ಪ್ರಜಾತಾಂತ್ರಿಕ ಪರ್ಯಾಯ ನಿರ್ಮಿಸಬೇಕೆಂದು ಪ್ರತಿಪಾದಿಸುತ್ತಿದ್ದ ಶಕ್ತಿಗಳು ಸೇರಿಕೊಂಡಿದ್ದರು.

ಚುನಾವಣಾ ಪ್ರಚಾರ ಮುಗಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ಕೆಲಸ ಮಾಡಿದವರನ್ನು ಸ್ಮರಿಸಿ ತಮ್ಮ ಕೃತಜ್ಞತೆಯನ್ನು ಕೂಡ ಸಲ್ಲಿಸಿದ್ದರು.

ಹೀಗೆ ಹಲವು ಕಾರಣಗಳಿಂದ ಭಿನ್ನವಾಗಿ ನಿಲ್ಲುವ ಈ ಚುನಾವಣೆ ಅಂತಿಮಗೊಂಡು ಫಲಿತಾಂಶ ನೋಡಿದಾಗ ಮೋದಿಯ ವರ್ಚಸ್ಸಾಗಲೀ, ರಾಹುಲ್ ಪ್ರಯತ್ನವಾಗಲೀ, ಸಿದ್ದರಾಮಯ್ಯರ ವರ್ಚಸ್ಸು ಮತ್ತು ಆಡಳಿತದ ಕೊಡುಗೆಗಳಾಗಲೀ ಕೆಲಸ ಮಾಡಿದಂತೆ ಕಾಣುತ್ತಿಲ್ಲ. ಅಲ್ಲದೇ ಕೋಮುವಾದಿ ಫ್ಯಾಸಿಸ್ಟ್‌ರನ್ನು ಸೋಲಿಸಿ ಎಂದು ಪ್ರಚಾರಾಂದೋಲನ ನಡೆಸಿದ್ದೂ ಕೂಡ ಚುನಾವಣೆಯಲ್ಲಿ ಕೆಲಸಮಾಡಿದಂತೆ ಕಾಣುತ್ತಿಲ್ಲ. ಯಾಕೆಂದರೆ ಇವರುಗಳು ಸೋಲಿಸಿ ಎಂದು ಪ್ರಚಾರ ನಡೆಸಿದ್ದ ಬಿಜೆಪಿ ಪಕ್ಷವೇ ಅತೀ ದೊಡ್ಡ ಶಾಸಕಾಂಗ ಪಕ್ಷವಾಗಿ ಹಿಂದಿಗಿಂತಲೂ ಹೆಚ್ಚು ಬಲಶಾಲಿಯಾಗಿ ಹೊರಹೊಮ್ಮಿದೆ.

ಅದೇ ವೇಳೆಯಲ್ಲಿ ಜಾತ್ಯಾತೀತ ಎಂದು ಹಲವು ಪ್ರಗತಿಪರವೆನಿದ್ದ ವ್ಯಕ್ತಿ ಸಂಘಟನೆಗಳು ಬಿಂಬಿಸಿದ್ದ ಕಾಂಗ್ರೆಸ್ ಪಕ್ಷ ಬಿಜೆಪಿಗಿಂತಲೂ ಕಡಿಮೆ ಸ್ಥಾನ ಗಳಿಸಿದೆ. ಈಗ ಸರಕಾರ ರಚಿಸಲು ಬಿಜೆಪಿಯ ‘ಬಿ’ ಟೀಮ್ ಎಂದು ತಾನು ಮೊದಲು ಕರೆದಿದ್ದ ಅದೇ ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಿಡಿಯಲು ಹೊರಟಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕದ ವಿಧಾಸಭಾ ಚುನಾವಣೆ ಮತ್ತು 2019ರ ಲೋಕಸಭಾ ಚುನಾವಣೆಗಳು ಕೋಮುವಾದ, ಫ್ಯಾಸಿಸಂ, ಪರ್ಯಾಯ ಜನರಾಜಕಾರಣ ಹೀಗೆ ಹಲವು ವಿಚಾರಗಳನ್ನು ಗಂಭೀರ ಚರ್ಚೆಗೆ ಒಡ್ಡಬೇಕಾದ ಪರಿಸ್ಥಿತಿಯನ್ನು ನಿರ್ಮಿಸಿದೆ ಎಂದರೆ ತಪ್ಪಾಗಲಾರದು.