samachara
www.samachara.com
ಕರ್ನಾಟಕ ಜನಾದೇಶ 2018: ಇದು ರಾಜ್ಯದ ಜನ ಮಾತ್ರವೇ ನೀಡಬಹುದಾದ ತೀರ್ಪು!
COVER STORY

ಕರ್ನಾಟಕ ಜನಾದೇಶ 2018: ಇದು ರಾಜ್ಯದ ಜನ ಮಾತ್ರವೇ ನೀಡಬಹುದಾದ ತೀರ್ಪು!

ಮಂಗಳವಾರ ಹೊರಬಿದ್ದ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹಲವು ವಿರೋಧಾಭಾಸಗಳನ್ನು ಒಳಗೊಂಡ ಕಾರಣಗಳಿಗಾಗಿ ಕುತೂಹಲಕಾರಿಯಾಗಿದೆ.

ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ನಡೆದ ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಗಳು 2018ರ ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎಂದು ಮತದಾನಕ್ಕೆ ಮೊದಲು ಯಡಿಯೂರಪ್ಪ ಎದೆ ತಟ್ಟಿ ಹೇಳಿದ್ದರು. ಕೊನೆಗೆ ಎರಡೂ ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಫಲಿತಾಂಶದ ನಂತರ ಸಿಎಂ ಸಿದ್ದರಾಮಯ್ಯ ಈ ಉಪಚುನಾವಣೆಯೇ ವಿಧಾನಸಭೆಯ ದಿಕ್ಸೂಚಿ ಎಂದರು, ಹಾಗೆ ನಂಬಿಕೊಂಡರು ಕೂಡ. ಈಗ ಕಾಂಗ್ರೆಸ್ ಹೀನಾಯ ಸೋಲನ್ನು ಈ ಎರಡೂ ಕ್ಷೇತ್ರಗಳಲ್ಲಿ ಕಂಡಿದೆ.

ಮಂಗಳವಾರ ಹೊರಬಿದ್ದ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಇಂತಹ ಹಲವು ವಿರೋಧಾಭಾಸಗಳನ್ನು ಒಳಗೊಂಡ ಕಾರಣಗಳಿಗಾಗಿ ಕುತೂಹಲಕಾರಿಯಾಗಿದೆ.

ಚುನಾವಣೆಯ ಮೊದಲು ಯಾವುದೆಲ್ಲಾ ಇಲ್ಲಿ ‘ಮ್ಯಾಜಿಕ್’ ಮಾಡಬಹುದು ಎಂದು ಅಂದುಕೊಳ್ಳಲಾಗಿತ್ತೊ, ಅವು ಸೋಲಿನ ಹಾದಿಯಲ್ಲಿ ಸಾಗಿವೆ. ಸಮೀಕ್ಷೆಗಳು ತಲೆ ಕೆಳಗಾಗಿವೆ. ಊಹೆಗಳು, ವಿಶ್ಲೇಷಣೆಗಳನ್ನು ಮೀರಿ ಕ್ಷೇತ್ರಗಳ ಫಲಿತಾಂಶಗಳು ಹೊರಬಿದ್ದಿವೆ.

ಅಂತಿಮವಾಗಿ 224 ಕ್ಷೇತ್ರಗಳಲ್ಲಿ ಪೈಕಿ 190ರಲ್ಲಿ ಸ್ಪರ್ಧೆ ಮಾಡಿ, 38 ಸ್ಥಾನಗಳಿಸಿದ ಜೆಡಿಎಸ್‌ ‘ಕಿಂಗ್ ಮೇಕರ್‌’ ಆಗಿ ಹೊರಹೊಮ್ಮಿದೆ. ಆದರೆ ಸನ್ನಿವೇಶ, ‘ಮೇಕರ್’ ಪಕ್ಕಕ್ಕಿಟ್ಟು, ‘ಕಿಂಗ್’ ಆಗುವ ಸುವರ್ಣ ಹಾದಿ ನಿರ್ಮಿಸಿದೆ. ವಿಧಾನಸೌಧದ ಅಧಿಕಾರದ ಗದ್ದುಗೆ ಪದ್ಮನಾಭನಗರಕ್ಕೆ ಬಂದು ತಲುಪಿದೆ. ಬಿಜೆಪಿ ರಾಜಕೀಯ ಲೆಕ್ಕಾಚಾರಗಳಿಗೆ ಫಲಿತಾಂಶ ತಾಳೆಯಾಗದೆ ಹೋದರೆ ಕುಮಾರಸ್ವಾಮಿ ಎರಡನೇ ಬಾರಿಗೆ ಈ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಗೌಡರ ನಡೆಗಳು:

ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಎಚ್. ಡಿ. ದೇವೇಗೌಡ. 
ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಎಚ್. ಡಿ. ದೇವೇಗೌಡ. 

ಕರ್ನಾಟಕದ ರಾಜಕೀಯ ಅಧಿಕಾರದ ವಿಷಯ ಬಂದಾಗ, ಕಳೆದ ಮೂರು ದಶಕಗಳ ಕಾಲ ತಮ್ಮ ಛಾಯೆಯನ್ನು ಮರೆಯಾಗಲು ಬಿಡದೆ ಪ್ರಭಾವಿಸಿಕೊಂಡು ಬಂದವರು ಎಚ್. ಡಿ. ದೇವೇಗೌಡ. ರಾಜ್ಯದ ಇತಿಹಾಸದಲ್ಲಿ ಇಷ್ಟು ಸುದೀರ್ಘ ಕಾಲ ತಮ್ಮ ‘ರಾಜಕೀಯ ರಿಲವೆನ್ಸಿ’ಯನ್ನು ಕಾಪಿಟ್ಟುಕೊಂಡು ಬಂದ ಮತ್ತೊಬ್ಬ ನಾಯಕ ನಮಗೆ ಸಿಗುವುದಿಲ್ಲ. ಈ ಚುನಾವಣೆಯಲ್ಲೂ ದೇವೇಗೌಡರ ಕನಸುಗಳು ನನಸಾಗುವ ಎಲ್ಲಾ ಅವಕಾಶಗಳು ಸೃಷ್ಟಿಯಾಗಿವೆ. ಅವರನ್ನು ಪಕ್ಕಕ್ಕಿಟ್ಟು ವಿಧಾನಸಭೆಯ ರಚನೆ ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದು ಸೋತೂ ಗೆದ್ದ ಹೊಸ ರಾಜಕೀಯ ಅಧ್ಯಾಯವನ್ನು ಬರೆಯಲಿದೆ.

ಇನ್ನು ಗೆದ್ದೂ ಸೋತವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರುವವರು ಬಿ. ಎಸ್. ಯಡಿಯೂರಪ್ಪ. ಈ ಹೊತ್ತಿನ ದುರಂತ ನಾಯಕ. ನಾನಾ ಅಡತಡೆಗಳ ನಡುವೆಯೂ ತಮ್ಮದೇ ಧಾಟಿಯಲ್ಲಿ ಚುನಾವಣೆಯನ್ನು ಎದುರಿಸಿದರು. ತಮ್ಮ ಸ್ವಕ್ಷೇತ್ರ, ತಮ್ಮ ಜಿಲ್ಲೆಯಲ್ಲಿ ಹಾಗೂ ರಾಜ್ಯಾದ್ಯಂತ 104 ಸ್ಥಾನಗಳಲ್ಲಿ ಪಕ್ಷವನ್ನು ಗೆಲ್ಲಿಸಿದರು. ‘ಜಿಲೇಬಿ’ಯೂ ಕೈಗೆ ಬಂತು, ಬಾಯಲ್ಲಿ ರಸವೂ ಪುಟಿಯಿತು. ಆದರೆ ಕೈ ಬಾಯಿಯವರೆಗೆ ಹೋಗುವ ಮೊದಲೇ, ಅವಕಾಶ ತಪ್ಪಿ ಹೋಗಿದೆ.

ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ. (ಸಾಂದರ್ಭಿಕ ಚಿತ್ರ)
ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ. (ಸಾಂದರ್ಭಿಕ ಚಿತ್ರ)

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದೂ ಅದೇ ಕತೆ. ಚುನಾವಣೆಗೂ ಮೊದಲು ಜೆಡಿಎಸ್‌ ಒಡೆದರು. ಅಪ್ಪ- ಮಕ್ಕಳ ಪಕ್ಷ ಎಂದು ಹೀಗಳೆದರು. ರಾಹುಲ್ ಗಾಂಧಿ ಬಾಯಲ್ಲಿ, ಜೆಡಿಎಸ್- ಬಿಜೆಪಿ ಮೈತ್ರಿ ಬಗ್ಗೆ ಟೀಕೆ ಮಾಡಿಸಿದರು. ಈಗ ಅವರೇ ಖುದ್ದಾಗಿ ದೇವೇಗೌಡರ ಮನೆ ಬಾಗಿಲಿಗೆ ಹೋಗಿ ತಮ್ಮ ಅಧಿಕಾರವನ್ನು ನೀಡಿ ಬರಬೇಕಾಗಿ ಬಂದಿದೆ. ಇನ್ನು ಜೆಡಿಎಸ್‌ ಬಂಡಾಯ ಬಂಡಾಯ ನಾಯಕರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಜಮೀರ್ ತರದವರು ಗೆದ್ದಿದ್ದಾರೆ, ಆದರೆ ಹೊಸ ಸರಕಾರದಿಂದ ಏನನ್ನೂ ನಿರೀಕ್ಷೆ ಮಾಡುವುದು ಕಷ್ಟ ಎಂಬ ಪರಿಸ್ಥಿತಿಯನ್ನು ಅವರೇ ನಿರ್ಮಾಣ ಮಾಡಿಕೊಂಡಿದ್ದಾರೆ.

ಬಿಬಿಎಂಪಿ ನೆನಪು:

ವಿಧಾನಸಭೆ ಚುನಾವಣೆ 2018ರ ಫಲಿತಾಂಶ ಹಾಗೂ ನಂತರದ ರಾಜಕೀಯ ಸಮೀಕರಣಗಳು 2015ರಲ್ಲಿ ನಡೆದ ಬಿಬಿಎಂಪಿ ಚುನಾವಣೆಯನ್ನು ನೆನಪಿಸುತ್ತವೆ. ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಇದ್ದ 198 ವಾರ್ಡ್‌ಗಳ ಪೈಕಿ 100 ಸ್ಥಾನಗಳಲ್ಲಿ ಬಿಜೆಪಿ ಗೆದ್ದಿತ್ತು. ಕಾಂಗ್ರೆಸ್ 76 ಹಾಗೂ ಜೆಡಿಎಸ್‌ ಕೇವಲ 14 ವಾರ್ಡ್‌ಗಳಲ್ಲಿ ಅಧಿಕಾರ ಹಿಡಿದಿತ್ತು.

ತಾಂತ್ರಿಕ ಕಾರಣಗಳಿಗಾಗಿ ಹಾಗೂ ಬಿಜೆಪಿ ಹುಮ್ಮಸ್ಸಿನಲ್ಲಿ ಮೈಮರೆತ ಹಿನ್ನೆಲೆಯಲ್ಲಿ ಕಾಂಗ್ರೆಸ್- ಜೆಡಿಎಸ್‌ ಅಧಿಕಾರ ಅನುಭವಿಸುತ್ತಿವೆ. ಈಗ ವಿಧಾನಸಭೆಯ ಪರಿಸ್ಥಿತಿ ಇದೇ ಮಾದರಿಯಲ್ಲಿದೆ. ಇಲ್ಲಿ ಗೆದ್ದವರು ಸೋತಿದ್ದಾರೆ, ಸೋತವರು ಅಧಿಕಾರ ಕಳೆದುಕೊಂಡಿದ್ದಾರೆ. ಹೀನಾಯವಾಗಿ ಸೋತವರಿಗೆ ‘ಅಧಿಕಾರದ ಭಾಗ್ಯ’ ಒಲಿದು ಬಂದಿದೆ. ಇದು ಕರ್ನಾಟಕದ ಜನ ಮಾತ್ರವೇ ನೀಡಬಹುದಾದ ತೀರ್ಪು.