samachara
www.samachara.com
ರಾಜ್ಯ ರಾಜಕೀಯದಲ್ಲಿ ‘ಅನಿರೀಕ್ಷಿತ’ ಹವಾಮಾನ; ಮಧ್ಯಾಹ್ನದ ಹೊತ್ತಿಗೆ ಬದಲಾದ ಚಿತ್ರಣ!
COVER STORY

ರಾಜ್ಯ ರಾಜಕೀಯದಲ್ಲಿ ‘ಅನಿರೀಕ್ಷಿತ’ ಹವಾಮಾನ; ಮಧ್ಯಾಹ್ನದ ಹೊತ್ತಿಗೆ ಬದಲಾದ ಚಿತ್ರಣ!

ಚುನಾವಣಾ ಫಲಿತಾಂಶ ಅತಂತ್ರವಾದರೂ ಜೆಡಿಎಸ್‌ಗೆ ಅಧಿಕಾರ ಅನಾಯಾಸವಾಗಿ ಮನೆ ಬಾಗಿಲಿಗೆ ಬಂದಿದೆ. ಕಾಂಗ್ರೆಸ್‌ ಜೆಡಿಎಸ್‌ಗೆ ಬೆಂಬಲ ಘೋಷಿಸಿರುವುದರಿಂದ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆದರೂ ಅಧಿಕಾರದಿಂದ ದೂರ ಉಳಿಯಬೇಕಾದ ಸ್ಥಿತಿಯಲ್ಲಿದೆ.

ಬೆಂಗಳೂರಿನ ಆಗಸದಲ್ಲಿ ಮಂಗಳವಾರ ಬೆಳಿಗ್ಗೆ ಮೋಡ ಮುಸುಕಿದ ವಾತಾವರಣವಿತ್ತು. ಆದರೆ, ಮಧ್ಯಾಹ್ನದ ಬಳಿಕ ಬಿಸಿಲೇರಿತ್ತು. ಬಿಸಿಲಿನ ನಡುವೆಯೂ ಆಗಾಗ ಮೋಡ ಮುಸುಕುವುದು ತಪ್ಪಲಿಲ್ಲ. ರಾಜ್ಯ ರಾಜಕೀಯದ ಹವಾಮಾನ ಮಂಗಳವಾರ ಹೆಚ್ಚೂ ಕಡಿಮೆ ಹೀಗೆಯೇ ಇತ್ತು!

ಕರ್ನಾಟಕ ವಿಧಾನಸಭಾ ಚುನಾವಣೆಗೆ ನಡೆದ ಚುನಾವಣೆಯ ಫಲಿತಾಂಶ ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಹಲವು ಏರಿಳಿತಗಳನ್ನು ಕಂಡಿತು. ಇನ್ನೇನು ಸ್ಪಷ್ಟ ಬಹುಮತ ಬಂದೇ ಬಿಟ್ಟಿತು ಎಂದುಕೊಂಡು ಸಂಭ್ರಮಿಸಿದ ಬಿಜೆಪಿಗೆ ಮಧ್ಯಾಹ್ನದ ಹೊತ್ತಿಗೆ ಕಂಡು ಬಂದ ಚಿತ್ರಣ ತೀವ್ರ ನಿರಾಸೆ ಉಂಟು ಮಾಡಿತ್ತು.

ಮತ ಎಣಿಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಬಿಜೆಪಿ ಆರಂಭಿಕ ಮುನ್ನಡೆ ಕಾಯ್ದುಕೊಂಡಿತ್ತು. ಬೆಳಿಗ್ಗೆ 10 ಗಂಟೆಯ ಹೊತ್ತಿಗೆ ಬಿಜೆಪಿಯ ಮುನ್ನಡೆಯ ಅಂಕಿ ಸಂಖ್ಯೆ ಏರುತ್ತಾ ಹೋಯಿತು. ಮುಂದಿನ ಅರ್ಧ ಗಂಟೆಯ ಹೊತ್ತಿಗೆ ಬಿಜೆಪಿ ಮುನ್ನಡೆಯ ಲೆಕ್ಕಾಚಾರ ನೂರರ ಗಡಿ ದಾಟಿತ್ತು. 222 ಸ್ಥಾನಗಳ ಪೈಕಿ ಸ್ಪಷ್ಟ ಬಹುಮತಕ್ಕೆ ಬೇಕಾದ 113 ಸ್ಥಾನಗಳ ಮುನ್ನಡೆಯ ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಗೆಲುವಿನ ಸಂಭ್ರಮಾಚರಣೆಯಲ್ಲಿ ತೊಡಗಿದರು.

ಮಲ್ಲೇಶ್ವರದ ಬಿಜೆಪಿ ಕಚೇರಿಯ ಎದುರು ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ, ಬಣ್ಣದ ಹೋಳಿಯಾಡಿ ಸಂಭ್ರಮಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಧ್ಯಾಹ್ನದ ಬಳಿಕ ವಿಶೇಷ ವಿಮಾನದಲ್ಲಿ ದೆಹಲಿ ಹೊರಟು ಅಮಿತ್‌ ಶಾ ಅವರನ್ನು ಭೇಟಿಯಾಗಿ ಸರಕಾರ ರಚನೆಯ ಮಾತುಕತೆ ನಡೆಸುತ್ತಾರೆ ಎಂಬ ಸುದ್ದಿ ಆ ಹೊತ್ತಿಗೆ ಬಹುತೇಕ ಎಲ್ಲಾ ಸುದ್ದಿ ವಾಹಿನಿಗಳ ಬ್ರೇಕಿಂಗ್‌ ನ್ಯೂಸ್‌ ಆಗಿತ್ತು.

ರಾಜ್ಯದ ಜನ ನಮಗೆ ಬಹುಮತ ನೀಡಿದ್ದಾರೆ. ಕಾಂಗ್ರೆಸ್ ವಿರುದ್ಧ ಜನಾದೇಶ ಬಂದಿದೆ. ಆದರೂ ಕಾಂಗ್ರೆಸ್‌ ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ. ಸರಕಾರ ರಚನೆಗೆ ಏನೆಲ್ಲಾ ಸಾಧ್ಯತೆ ಇದೆ ಎಂಬ ಬಗ್ಗೆ ಪಕ್ಷದ ರಾಷ್ಟ್ರೀಯ ನಾಯಕರ ಜತೆ ಚರ್ಚಿಸಿ ಮುಂದಿನ ನಿರ್ಧಾರಕ್ಕೆ ಬರುತ್ತೇವೆ.
- ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ಆದರೆ, ಬಿಜೆಪಿಯ ಸಂಭ್ರಮದ ಸುದ್ದಿಯ ಬೆನ್ನಲ್ಲೇ ಕಾಂಗ್ರೆಸ್‌ ಮುನ್ನಡೆಯ ಸುದ್ದಿಯೂ ಕಾಣಿಸಿಕೊಳ್ಳುತ್ತಿತ್ತು. ನಿಮಿಷ ನಿಮಿಷಗಳಲ್ಲಿ ಕಾಂಗ್ರೆಸ್‌ ಮುನ್ನಡೆಯ ಅಂಕಿ ಸಂಖ್ಯೆ ಬದಲಾಗುತ್ತಿತ್ತು. ಬಿಜೆಪಿಯ ಮುನ್ನಡೆಯ ಸಂಖ್ಯೆ ಕಡಿಮೆಯಾಗಿ ಕಾಂಗ್ರೆಸ್‌ ಮುನ್ನಡೆಯ ಸಂಖ್ಯೆ ಸ್ವಲ್ಪ ಮಟ್ಟಿಗೆ ಏರಲು ಆರಂಭಿಸಿತ್ತು.

ಮಧ್ಯಾಹ್ನದ ಹೊತ್ತಿಗೆ 70 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ ಕಾಂಗ್ರೆಸ್ 80ರ ತುದಿ ಮುಟ್ಟಲಿಲ್ಲ. ಬಿಜೆಪಿಯ ಸಂಖ್ಯೆ 110ರಿಂದ 106ರೊಳಗೆ ಏರಿಳಿತವಾಗುತ್ತಿತ್ತು. ಇತ್ತ ಜೆಡಿಎಸ್‌ ಸ್ಥಾನಗಳು 40ರ ಆಸುಪಾಸು ಓಲಾಡುತ್ತಿದ್ದವು. ಬಿಜೆಪಿ ಮುನ್ನಡೆಯ ಸಂಖ್ಯೆ ಇಳಿಮುಖವಾಗಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುನ್ನಡೆಯ ಸಂಖ್ಯೆಗಳಲ್ಲಿ ಸ್ವಲ್ಪಮಟ್ಟಿಗಿನ ಏರಿಕೆ ಕಂಡುಬಂದಾಗಲೇ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿಯ ಮಾತು ಮುನ್ನೆಲೆ ಬಂದಿತ್ತು.

ಮಧ್ಯಾಹ್ನ 3 ಗಂಟೆಯ ಬಳಿಕ ಕಾಂಗ್ರೆಸ್‌ 78 ಮತ್ತು ಜೆಡಿಎಸ್‌ 36 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಂತೆ ಬಿಜೆಪಿ ಸಂಭ್ರಮಾಚರಣೆಯ ಮೇಲೆ ಕಾರ್ಮೋಡ ಆವರಿಸಿತ್ತು. ಸೋಲನ್ನು ಒಪ್ಪಿಕೊಂಡ ಕಾಂಗ್ರೆಸ್ ಆ ಮುಖಂಡರು ಜೆಡಿಎಸ್‌ಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದರು. ಅಲ್ಲಿಗೆ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗಳಿಸಿಯೂ ಅಧಿಕಾರಕ್ಕೆ ಹತ್ತಿರ ಬರುವುದು ಕಷ್ಟ ಎಂಬ ಚಿತ್ರಣ ನಿಚ್ಚಳವಾಗಿತ್ತು.

ಚುನಾವಣೆಗೂ ಮುನ್ನಾ ಇದ್ದ ಜನಾಭಿಪ್ರಾಯಕ್ಕಿಂತ ಭಿನ್ನ ಹಾಗೂ ಅನಿರೀಕ್ಷಿತ ಫಲಿತಾಂಶ ಈ ಬಾರಿ ಹೊರಬಿದ್ದಿದೆ.

‘ಕಿಂಗ್‌ ಮೇಕರ್‌ ಅಲ್ಲ ಕಿಂಗ್’?

ಈ ಬಾರಿಯ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆಯ ಸಂದರ್ಭ ಸೃಷ್ಟಿಯಾದರೆ ಜೆಡಿಎಸ್‌ ಕಿಂಗ್‌ ಮೇಕರ್‌ ಆಗಲಿದೆ ಎಂಬ ಮಾತುಗಳು ದಟ್ಟವಾಗಿದ್ದವು. ಆದರೆ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ತಾವು ಕಿಂಗ್‌ ಮೇಕರ್‌ ಅಲ್ಲ ಕಿಂಗ್‌ ಆಗುವುದಾಗಿ ಹಲವು ಬಾರಿ ಹೇಳಿಕೊಂಡಿದ್ದರು. ಜೆಡಿಎಸ್‌ ಸರಕಾರ ರಚಿಸಲು ಕಾಂಗ್ರೆಸ್‌ ಬೆಂಬಲ ಘೋಷಿಸಿರುವುದರಿಂದ ಕುಮಾರಸ್ವಾಮಿ ವಿಶ್ವಾಸ ನಿಜವಾಗುವ ಕಾಲ ಸನಿಹದಲ್ಲಿದೆ.

ಕಾಂಗ್ರೆಸ್‌ ಬೆಂಬಲಿತ ಜೆಡಿಎಸ್‌ ನೇತೃತ್ವದ ಸರಕಾರದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಬಹತೇಕ ಖಚಿತವಾಗಿದೆ. ಅತ್ತ ಕಾಂಗ್ರೆಸ್‌ ರಾಜ್ಯಪಾಲರಿಗೆ ಬೆಂಬಲ ಪತ್ರ ನೀಡಲು ಮುಂದಾಗುತ್ತಿದ್ದಂತೆ ಇತ್ತ ಕುಮಾರಸ್ವಾಮಿ ಸರಕಾರ ರಚನೆಗಾಗಿ ರಾಜ್ಯಪಾಲರನ್ನು ಭೇಟಿಯಾಗಲು ಮುಂದಾಗಿದ್ದಾರೆ. ಆದರೆ, ಸರಕಾರ ರಚನೆ ಸಂಬಂಧ ಈವರೆಗೆ ಜೆಡಿಎಸ್‌ ಏನನ್ನೂ ಮಾಧ್ಯಮಗಳ ಮುಂದೆ ಹೇಳಿಕೊಂಡಿಲ್ಲ.

ಮಧ್ಯಾಹ್ನದವರೆಗೂ ಮತ ಎಣಿಕೆ ಕೇಂದ್ರಗಳ ಮೇಲಿದ್ದ ಗಮನವೆಲ್ಲಾ ಮಧ್ಯಾಹ್ನದ ಬಳಿಕ ಎಚ್‌.ಡಿ. ದೇವೇಗೌಡರ ನಿವಾಸದತ್ತ ಹೊರಳಿತ್ತು. ದೇವೇಗೌಡರ ನಿವಾಸಕ್ಕೆ ಹಿರಿಯ ಕಾಂಗ್ರೆಸ್‌ ಮುಖಂಡ ಸಿ.ಕೆ. ಜಾಫರ್‌ ‍ಷರೀಫ್‌ ಬಂದು ದೇವೇಗೌಡರ ಜತೆಗೆ ಮಾತುಕತೆ ನಡೆಸಿದರು. ಈ ಮಧ್ಯೆ ಎಚ್‌.ಡಿ.ಕುಮಾರಸ್ವಾಮಿ ದೇವೇಗೌಡರ ನಿವಾಸದ ಮಹಡಿಯ ಮೇಲೆ ನಿಂತು ಅಭಿಮಾನಿಗಳಿಗೆ ನಮಿಸಿ ಹೊರಹೋದರು.

“ಈ ಬಾರಿಯ ಕುಮಾರಸ್ವಾಮಿಯೇ ಮುಖ್ಯಮಂತ್ರಿ” ಎಂದು ಖಚಿತವಾಗಿ ನಂಬಿದ್ದ ಜೆಡಿಎಸ್‌ ಅಭಿಮಾನಿಗಳಿಗೆ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಪಟ್ಟ ಅನಾಯಾಸವಾಗಿ ಒಲಿಯುತ್ತಿರುವುದು ಅತೀವ ಸಂತಸ ತಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈಗ ವಿಜೃಂಭಿಸುತ್ತಿರುವುದು ಕುಮಾರಸ್ವಾಮಿ. ಫೇಸ್‌ಬುಕ್‌ನ ಹಲವು ಗ್ರೂಪ್‌ಗಳ ಹೆಸರು ಈಗ ‘ಕುಮಾರಣ್ಣ ಮುಖ್ಯಮಂತ್ರಿ’ ಎಂದು ಬದಲಾಗಿದೆ. ಹಲವರು ತಮ್ಮ ಪ್ರೊಫೈಲ್‌ ಪಿಕ್ಚರ್‌ಗಳನ್ನು ಕುಮಾರಸ್ವಾಮಿ ಚಿತ್ರದೊಂದಿಗೆ ಅಪ್‌ಡೇಟ್‌ ಮಾಡಿದ್ದಾರೆ.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಸಿದ್ಧತೆಗಳು ಈಗಾಗಲೇ ಆರಂಭವಾಗಿವೆ. ಆದರೆ, ಬೆಂಬಲ ನೀಡಿದ್ದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ಗೆ ಜೆಡಿಎಸ್‌ ಯಾವ ‘ಉಡುಗೊರೆ’ ನೀಡಲಿದೆ ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. ಇದರ ನಡುವೆ ಸರಕಾರ ರಚನೆಗೆ ಅವಕಾಶ ಕೋರಲು ಬಿ.ಎಸ್. ಯಡಿಯೂರಪ್ಪ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ.

ಇತ್ತ ಕಾಂಗ್ರೆಸ್‌ನ ರಾಷ್ಟ್ರೀಯ ಮುಖಂಡ ಗುಲಾಂ ನಬಿ ಆಜಾದ್‌ ಜತೆಗೆ ಸಿದ್ದರಾಮಯ್ಯ ಸಂಜೆ ವೇಳೆಗೆ ದೇವೇಗೌಡರ ನಿವಾಸಕ್ಕೆ ಭೇಟಿ ನೀಡುವುದು ಖಚಿತವಾಗಿದೆ. ಸರಕಾರ ರಚನೆಗೆ ಅವಕಾಶ ಕೋರಿ ಕುಮಾರಸ್ವಾಮಿ ರಾಜ್ಯಪಾಲರಿಗೆ ಮನವಿ ಸಲ್ಲಿಸುವ ಸಿದ್ಧತೆಯಲ್ಲಿದ್ದಾರೆ. ಈ ಮಧ್ಯೆ ಬೆಂಗಳೂರಿನ ಆಗಸದಲ್ಲಿ ಬೆಳಿಗ್ಗೆಯಿಂದಲೂ ಹರಿದಾಡುತ್ತಿದ್ದ ಮೋಡಗಳು ಸಂಜೆ ಹೊತ್ತಿಗೆ ಒಂದಿಷ್ಟು ಮಳೆ ಸುರಿಸಿ ನಗರದ ತಾಪಮಾನವನ್ನೂ, ದಿನದ ರಾಜಕೀಯ ಬೆಳವಣಿಗೆಗಳನ್ನೂ ಸ್ವಲ್ಪಮಟ್ಟಿಗೆ ತಣ್ಣಗಾಗಿಸಿವೆ.