samachara
www.samachara.com
ಮತ್ತೆ ಅಧಿಕಾರ ಕೇಂದ್ರಕ್ಕೆ ‘ಬಳ್ಳಾರಿ ರಿಪಬ್ಲಿಕ್’: ಟಾನಿಕ್ ಕೊಟ್ಟು, ಜಾಪಾಳ ಬೆರೆಸಿದ ಫಲಿತಾಂಶ!
COVER STORY

ಮತ್ತೆ ಅಧಿಕಾರ ಕೇಂದ್ರಕ್ಕೆ ‘ಬಳ್ಳಾರಿ ರಿಪಬ್ಲಿಕ್’: ಟಾನಿಕ್ ಕೊಟ್ಟು, ಜಾಪಾಳ ಬೆರೆಸಿದ ಫಲಿತಾಂಶ!

1.5 ಲಕ್ಷ ಕೋಟಿ ರೂಪಾಯಿ ಮೊತ್ತದ, ಸುಮಾರು 10 ಕೋಟಿ ಟನ್‌ನಷ್ಟು ಕಬ್ಬಿಣದ ಅದಿರು ಅಕ್ರಮ ಗಣಿಗಾರಿಕೆ ಅದಾಗಿತ್ತು. ಗಣಿಧಣಿಗಳ ಈ ಆಟಾಟೋಪವು ರಾಷ್ಟ್ರಮಟ್ಟದಲ್ಲಿ ‘ಬಳ್ಳಾರಿ ರಿಪಬ್ಲಿಕ್’ ಎಂದೇ ಕುಖ್ಯಾತವಾಗಿತ್ತು.

ಭಾರಿ ಕುತೂಹಲ ಕೆರಳಿಸಿದ್ದ 2018ರ ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ಇದು ಕಾಂಗ್ರೆಸ್, ಬಿಜೆಪಿ, ರಾಜಕೀಯ ಪಂಡಿತರು, ವಿಶ್ಲೇಷಕರು ಸೇರಿದಂತೆ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ. ವಿಶೇಷವಾಗಿ ‘ಬಳ್ಳಾರಿ ರಿಪಬ್ಲಿಕ್’ ಪಾಲಿಗೆ ಇದು ಟಾನಿಕ್ ನೀಡಿದೆ. ಈ ಮೂಲಕ ಹಳೆಯ ಗಣಿ ಅಕ್ರಮದ ದಿನಗಳು ಮರುಕಳಿಸುವ ಆತಂಕವೂ ಎದುರಾಗಿದೆ.

ಬಳ್ಳಾರಿಯ ಅಕ್ರಮ ಗಣಿಗಾರಿಕೆ ಉಚ್ಛ್ರಾಯ ಹಂತದಲ್ಲಿ ಇದ್ದ 2008ರಿಂದ 2013ರವರೆಗೆ ಬಿಜೆಪಿ ಸರ್ಕಾರ ನಡೆಯುತ್ತಿದ್ದದ್ದು ವಿಧಾನಸೌಧದಲ್ಲಿ ಅಲ್ಲ; ಬಳ್ಳಾರಿಯಿಂದ ಎಂಬ ಮಾತುಗಳಿವೆ. ಸಾಕ್ಷಿ ಎಂಬಂತೆ ಲೋಕಾಯುಕ್ತದ ಎರಡು ವರದಿಗಳು, ಸಿಇಸಿ ಸುಪ್ರಿಂ ಕೋರ್ಟ್‌ಗೆ ಸಲ್ಲಿಸಿದ ವರದಿಗಳು, ಅದರ ಆಧಾರದ ಮೇಲೆ ಸಿಬಿಐ ಸಲ್ಲಿಸಿದ ದೋಷಾರೋಪ ಪಟ್ಟಿಗಳು ಇವೆ.

ಲೋಕಾಯುಕ್ತ ಸಂತೋಷ್ ಹೆಗಡೆ ಮತ್ತು ಯುವಿ ಸಿಂಗ್- ಬಳ್ಳಾರಿ ಅಕ್ರಮ ಗಣಿ ವರದಿ ಜತೆಗೆ. 
ಲೋಕಾಯುಕ್ತ ಸಂತೋಷ್ ಹೆಗಡೆ ಮತ್ತು ಯುವಿ ಸಿಂಗ್- ಬಳ್ಳಾರಿ ಅಕ್ರಮ ಗಣಿ ವರದಿ ಜತೆಗೆ. 

1.5 ಲಕ್ಷ ಕೋಟಿ ರೂಪಾಯಿ ಮೊತ್ತದ, ಸುಮಾರು 10 ಕೋಟಿ ಟನ್‌ನಷ್ಟು ಕಬ್ಬಿಣದ ಅದಿರು ಅಕ್ರಮ ಗಣಿಗಾರಿಕೆ ಅದಾಗಿತ್ತು. ಗಣಿಧಣಿಗಳ ಈ ಆಟಾಟೋಪವು ರಾಷ್ಟ್ರಮಟ್ಟದಲ್ಲಿ ‘ಬಳ್ಳಾರಿ ರಿಪಬ್ಲಿಕ್’ ಎಂದೇ ಕುಖ್ಯಾತವಾಗಿತ್ತು. ಆ ನಂತರ ಸೀನಿಯರ್ ರೆಡ್ಡಿಗಾರು ಜೈಲು ಸೇರಿದ ಮೇಲೆ ನಡೆದ ಚುನಾವಣೆಯಲ್ಲಿ ಗಣಿ ಧಣಿಗಳು ಅಧಿಕಾರ ಕಳೆದುಕೊಂಡಿದ್ದರು.

ಇದಾದ ಮೇಲೆ ತುಂಗಭದ್ರಾ ನದಿಯಲ್ಲಿ ಸಾಕಷ್ಟು ನೀರು ಹರಿದಿದೆ. 5 ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ ಇದೇ ರಿಪಬ್ಲಿಕ್ ಶ್ರೀರಾಮುಲು ಎಂಬ ಹಿಂದುಳಿದ ವರ್ಗದ ನಾಯಕನನ್ನು ಮುಂದಿಟ್ಟುಕೊಂಡು ವಿಧಾನಸಭೆಗೆ ಆರಿಸಿ ಬಂದ ಅಚ್ಚರಿ ಮೂಡಿಸಿದ್ದಾರೆ.

ಜೈಲಿನಿಂದ ಬಿಡುಗಡೆಯಾದ ಮೇಲೆ ನೋಟು ನಿಷೇಧದ ನಡುವೆಯೂ ಸುಮಾರು 500 ಕೋಟಿ ರೂ ಖರ್ಚು ಮಾಡಿ ಮಗಳ ಮದುವೆ ಮಾಡಿ ಪ್ರಚಾರದಲ್ಲಿದ್ದರು ಗಾಲಿ ಜನಾರ್ಧನ ರೆಡ್ಡಿ. ಸುಪ್ರಿಂ ಕೋರ್ಟ್‌ ಬಳ್ಳಾರಿಗೆ ಕಾಲಿಡದಂತೆ ಹೇಳಿದ್ದರೂ, ಗಡಿ ಭಾಗದಲ್ಲಿ ನಿಂತು ಚುನಾವಣೆಗೆ ನೆರವಾಗಿದ್ದರು. ಆರೋಪಗಳ ಹೊರತಾಗಿಯೂ ಬಿಜೆಪಿ ರಾಜ್ಯಾಧ್ಯಕ್ಷ ‘ಬಳ್ಳಾರಿ ರಿಪಬ್ಲಿಕ್‌’ ಜತೆಗಿಟ್ಟುಕೊಂಡೆ ಚುನಾವಣೆ ಎದುರಿಸಿದ್ದರು.

ಬಳ್ಳಾರಿ ರಿಪಬ್ಲಿಕ್ ಸೃಷ್ಟಿಸಿದ್ದ ಗಣಿ ಪ್ರದೇಶ ಹೀಗಿತ್ತು. 
ಬಳ್ಳಾರಿ ರಿಪಬ್ಲಿಕ್ ಸೃಷ್ಟಿಸಿದ್ದ ಗಣಿ ಪ್ರದೇಶ ಹೀಗಿತ್ತು. 

ಶ್ರೀರಾಮುಲು ಎರಡು ಕ್ಷೇತ್ರಗಳಲ್ಲಿ, ಅದರಲ್ಲಿ ಒಂದು ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿದರು. ಬಿಜೆಪಿಯ ‘ಡಾರ್ಕ್‌ ಹಾರ್ಸ್‌’ ಎಂದು ಕರೆಸಿಕೊಂಡರು. ಪಕ್ಷದೊಳಗಿನ ವಿರೋಧದ ನಡುವೆಯೂ ತಮ್ಮ ಸಂಬಂಧಿಗಳಿಗೆ ಮತ್ತೆ ಟಿಕೆಟ್ ಕೊಡಿಸಿದ್ದರು. ಸಿನಟ ಕಿಚ್ಚ ಸುದೀಪ್ ಮುಂತಾದವರನ್ನು ಕರೆಸಿ ಪ್ರಚಾರಕ್ಕೆ ತಾರಾ ಮೆರಗನ್ನೂ ನೀಡಿದ್ದರು. ಈಗ ಚುನಾವಣೆಯ ಫಲಿತಾಂಶ ‘ಬಳ್ಳಾರಿ ರಿಪಬ್ಲಿಕ್‌’ಗೆ ಪ್ರಾತಿನಿಧ್ಯ ನೀಡಿದೆ.

ಜಿ. ಕರುಣಾಕರ ರೆಡ್ಡಿ ಕಾಂಗ್ರೆಸ್‌ನ ಎಂ. ಪಿ. ರವೀಂದ್ರ ಅವರನ್ನು 9,600 ಮಂತಳಿಂದ ಮಣಿಸಿ ಗೆಲುವಿನ ನಗೆ ಬೀರಿದ್ದಾರೆ. ಕೂಡ್ಲಗಿಯಿಂದ ಎನ್. ವೈ.ಗೋಪಾಲಕೃಷ್ಣ ಗೆದ್ದಿದ್ದಾರೆ. ಬಳ್ಳಾರಿ ನಗರದಿಂದ ಫಕೀರಪ್ಪ 2600 ಮತಗಳಿಂದ ಹಾಗೂ ಕಂಪ್ಲಿಯಿಂದ ಸ್ಪರ್ಧಿಸಿದ್ದ ರೆಡ್ಡಿಗಳ ಅಳಿಯ ಸುರೇಶ್ ಬಾಬು 75,037 ಮತಗಳನ್ನು ಪಡೆದು ಕೇವಲ 5555 ಮತಗಳಿಂದ ಕಾಂಗ್ರೆಸ್‌ನ ಜೆ.ಎನ್.ಜಗದೀಶ್ ಎದುರು ಸೋತಿದ್ದಾರೆ.

ಇದೇ ವೇಳೆಗೆ, ಅಂದು ಅಕ್ರಮ ಗಣಿ ಆರೋಪದಲ್ಲಿ ಜೈಲಯ ಪಾಲಾಗಿದ್ದ, 2008-2013ರ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಆನಂದ್ ಸಿಂಗ್ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದಾರೆ. ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಸಿಬಿಐನಿಂದ ಬಂಧಿತರಾಗಿ ವಿಚಾರಣೆಯನ್ನೂ ಎದುರಿಸಿದ್ದ ಅವರು ಬಿಜೆಪಿ ತೊರೆದು ಕೈ ಹಿಡಿದಿದ್ದರು.

ಗಣಿ ಉದ್ಯಮಿಗಳ ಪೈಕಿ ಸಂತೋಷ್ ಲಾಡ್ ಹಾಗೂ ಅನಿಲ್ ಲಾಡ್ ಸಹೋದರರನ್ನು ದಯನೀಯವಾಗಿ ಸೋತಿದ್ದಾರೆ. ಇದು ಪಕ್ಷ ಮೀರಿದ ಗಣಿ ಧಣಿಗಳ ನಡುವಿನ ಕದನವಾದ್ದರಿಂದ ಸಹಜವಾಗಿಯೇ ಗಾಲಿ ಜನಾರ್ಧನ ರೆಡ್ಡಿ ಪಾಳಯಕ್ಕೆ ನೆರವಾಗಲಿದೆ.

ಒಟ್ಟಾರೆ ಈ ಬೆಳವಣಿಗೆಗಳು, ಸಹಜವಾಗಿಯೇ ಈ ಭಾಗದಲ್ಲಿ ಬಿಜೆಪಿ ಶಕ್ತಿ ಹೆಚ್ಚಿಸಿಕೊಳ್ಳಲು ‘ಬಳ್ಳಾರಿ ರಿಪಬ್ಲಿಕ್’ ನೆರವಾಗಿದ್ದು ಫಲಿತಾಂಶ ಹೇಳುತ್ತಿದೆ.

ದೇಶದಲ್ಲಿ ಜನರಿಗೆ ರಾಜಕೀಯ ಅರಿವು ಬಂದಿಲ್ಲ. ಮೂರು ವರ್ಷ ಜೈಲಿನಲ್ಲಿದ್ದ ಜನಾರ್ದನ ರೆಡ್ಡಿ ಹೊರ ಬಂದಾಗ ಅವರನ್ನು ಜನ ಸ್ವಾಗತಿಸಿದ ರೀತಿ ನೋಡಿದರೆ ಗೊತ್ತಾಗುತ್ತದೆ. ರೆಡ್ಡಿ ಮಗಳ ಅದ್ಧೂರಿ ಮದುವೆ ಇದಕ್ಕೆ ಪುಷ್ಟಿ ನೀಡುತ್ತದೆ. ಯಡಿಯೂರಪ್ಪ ಜೈಲಿಗೆ ಹೋಗುವಾಗ, ಹೊರಗೆ ಬರುವಾಗಲೂ ವಿಜಯದ ಸಂಕೇತ ತೋರಿಸುತ್ತಾರೆ. ಜನರು ಇದನ್ನು ವಿರೋಧಿಸಬೇಕಿತ್ತು. ಆದರೆ ಇವಕ್ಕೆ ಅವರು ಸಂಭ್ರಮಿಸಿದ್ದಾರೆ. ಜನರ ಈ ಮೈಂಡ್ ಸೆಟ್ ಬದಲಾಗುವ ತನಕ ಜವಾಬ್ದಾರಿಯುತ ರಾಜಕಾರಣವನ್ನು ನಾವು ಕಾಣಲು ಸಾಧ್ಯವಿಲ್ಲ.
ಎಚ್‌.ವಿ. ವಾಸು, ಕರ್ನಾಟಕ ಜನಶಕ್ತಿ ಸಂಘಟನೆ. 

ಇದು ‘ಬಳ್ಳಾರಿ ರಿಪಬ್ಲಿಕ್’ ಮತ್ತೆ ಅಧಿಕಾರ ಕೇಂದ್ರಕ್ಕೆ ಬಂದಾಗ ಕೇಳಿ ಬರುವ ವಿಮರ್ಶೆ. ಈ ಬಾರಿಯ ಫಲಿತಾಂಶ ಬಳ್ಳಾರಿ ರೆಡ್ಡಿ ಕುಟುಂಬದ ಪಾಲಿಗೆ ಸಿಹಿಯಾಗಿದ್ದರೂ, ಒಟ್ಟಾರೆ ಬೆಳವಣಿಗೆಗಳು ಪೂರಕವಾಗೇನೂ ಇಲ್ಲ.

ರಾಜ್ಯದಲ್ಲಿ ಕಾಂಗ್ರೆಸ್ ಜತೆ ಸೇರಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದೇ ಆದರೆ, ಬಳ್ಳಾರಿ ರಿಪಬ್ಲಿಕ್ ವಿಚಾರದಲ್ಲಿ ಒಂದಷ್ಟು ಬೆಳವಣಿಗೆಗಳು ನಡೆಯಲಿವೆ. ಹಿಂದೆ, 20 ತಿಂಗಳ ಅವಧಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ತೀವ್ರ ಮುಜುಗರಕ್ಕೆ ಒಳಗಾಗಿದ್ದು ಇದೇ ‘ರೆಡ್ಡಿ ಪಬ್ಲಿಕ್’ನಿಂದ. ಅದನ್ನು ಅವರು ಮರೆತಿರುವ ಸಾಧ್ಯತೆಗಳು ಕಡಿಮೆ. ಅವರು ಮರೆತರು ದೇವೇಗೌಡರು ನೆನಪಿಟ್ಟುಕೊಂಡಿದ್ದಾರೆ.

“ನಾವು ಸಮಸ್ಯೆಗೆ ಸಿಕ್ಕಿಕೊಳ್ಳಲು ಕರ್ನಾಟಕದಲ್ಲಿ ದೇವೇಗೌಡ ಹಾಗೂ ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಅವರುಗಳನ್ನು ಎದುರುಹಾಕಿಕೊಂಡಿದ್ದು ಕಾರಣ,’’ ಎಂದು ಸೋಮಶೇಖರ್ ರೆಡ್ಡಿ ಹಿಂದೊಮ್ಮೆ ಹೇಳಿದ್ದರು.

ಇವತ್ತು ಗೆದ್ದರೂ, ಅಧಿಕಾರ ಕೇಂದ್ರದಿಂದ ದೂರವೇ ಉಳಿಯಬೇಕಾದ ಅನಿವಾರ್ಯತೆ ‘ಬಳ್ಳಾರಿ ರಿಪಬ್ಲಿಕ್’ಗೆ ಇದೆ. ಹೀಗಾಗಿ ಇವರ ಪಾಲಿಗೆ ಮುಂದಿನ ವರ್ಷಗಳು ತೀರು ಸುಲಭವಾಗೇನೂ ಕಾಣುವುದಿಲ್ಲ. ಹಾಗಂತ ಐದು ವರ್ಷಗಳ ವನವಾಸ, ಜೈಲುವಾಸ ಅನುಭವಿಸಿ ಬಂದಿರುವ ‘ಬಳ್ಳಾರಿ ರಿಪಬ್ಲಿಕ್’ ಸುಮ್ಮನೆ ಅಂತೂ ಕುಳಿತುಕೊಳ್ಳುವುದಿಲ್ಲ. ಅವರ ಮುಂದಿನ ನಡೆಗಳಿಗೆ ಭಾವಿ ಮುಖ್ಯಮಂತ್ರಿಗಳ ಪ್ರತಿಕ್ರಿಯೆ ಮಾತ್ರವೇ ಭವಿಷ್ಯವನ್ನು ನಿರ್ಧರಿಸಲಿದೆ.