‘ನಕ್ಸಲ್‌ ಪ್ಯಾಕೇಜ್‌’: ಅಕ್ರಮಗಳ ಸಂತೆಯಲ್ಲಿ ಸುಧಾರಣೆಯ ಸೋಗು!
COVER STORY

‘ನಕ್ಸಲ್‌ ಪ್ಯಾಕೇಜ್‌’: ಅಕ್ರಮಗಳ ಸಂತೆಯಲ್ಲಿ ಸುಧಾರಣೆಯ ಸೋಗು!

ದೇಶದ ಆಂತರಿಕ ಭದ್ರತೆಗೆ ಅಪಾಯಕಾರಿ ಎಂದು ಪರಿಗಣಿಸಲ್ಪಟ್ಟ ಪಟ್ಟಿಯಲ್ಲಿ ಮೊದಲ ಸ್ಥಾನ ನಕ್ಸಲ್‌ ಹೋರಾಟ. ಇದನ್ನು ಹತ್ತಿಕ್ಕಲು ಎಲ್ಲಾ ಸರಕಾರಗಳು ಪ್ರಯತ್ನಿಸುತ್ತಲೇ ಬಂದಿವೆ. ಈಗ ಕೇರಳ ಸರಕಾರ ಪ್ಯಾಕೇಜ್‌ ಒಂದನ್ನು ಘೋಷಿಸಿದೆ. 

ಕೇರಳದ ಸರಕಾರ ಇತ್ತೀಚೆಗೆ ರಾಜ್ಯದಲ್ಲಿನ ಮಾವೋವಾದಿಗಳಿಗೆ ‘ನಕ್ಸಲ್‌ ಪ್ಯಾಕೇಜ್‌’ಗಳನ್ನು ಘೋಷಿಸಿದೆ. ಸ್ವಇಚ್ಛೆಯಿಂದ ನಕ್ಸಲಿಸಂ ತೊರದು ಬರುವವರಿಗೆ ಈ ಪ್ಯಾಕೇಜ್‌ಗಳನ್ನು ನೀಡಲಾಗುತ್ತದೆ. ನಕ್ಸಲಿಸಂ ಬಿಟ್ಟು ಹೊರಬರುವವರಿಗೆ ಉದ್ಯೋಗಗಳನ್ನು ನೀಡುವುದಾಗಿ ಸರಕಾರ ತಿಳಿಸಿದೆ. ರಾಜ್ಯದಲ್ಲಿ ಮಾವೋವಾದದ ಪ್ರಭಾವವನ್ನು ತಗ್ಗಿಸುವ ಸಲುವಾಗಿ ಈ ಕ್ರಮಕ್ಕೆ ಕೇರಳ ಸರಕಾರ ಮುಂದಾಗಿದೆ.

ನಕ್ಸಲೀಯರನ್ನು 3 ಹಂತಗಳಲ್ಲಿ ವರ್ಗೀಕರಿಸಿದೆ. ಸಂಘಟನೆಯಲ್ಲಿ ಹೊಂದಿರುವ ಪ್ರಭಾವ, ವಹಿಸಿರುವ ಸ್ಥಾನಗಳ ಆಧಾರದ ಮೇಲೆ ಈ ದರ್ಜೆಗಳನ್ನು ವಿಂಗಡಿಸಲಾಗಿದೆ. ನಕ್ಸಲಿಸಂ ಭಾಗವಾಗಿದ್ದು, ಈಗ ಶರಣಾಗತರಾಗಲು ಇಚ್ಛಿಸಿರುವ ಹೋರಾಟಗಾರರಿಗೆ ಅವರ ದರ್ಜೆಯ ಆಧಾರದ ಮೇಲೆ ಪ್ಯಾಕೇಜ್ ನೀಡಲಾಗುತ್ತದೆ. ಈ ಕುರಿತು ರಾಜ್ಯ ಸಂಪುಟ ತೀರ್ಮಾನ ತೆಗೆದುಕೊಂಡಿದೆ.

ಉನ್ನತ ಸ್ಥಾನದಲ್ಲಿರುವ ನಾಯಕರು ಶರಣಾಗತರಾದರೆ ಅವರಿಗೆ ಹಲವು ಕಂತುಗಳಲ್ಲಿ 5 ಲಕ್ಷಗಳನ್ನು ನೀಡಲಾಗುತ್ತದೆ. ವಿದ್ಯಾಭ್ಯಾಸಕ್ಕೆಂದು 15,000 ರೂಪಾಯಿಗಳನ್ನು ಶರಣಾಗತ ನಕ್ಸಲೀಯರು ಪಡೆಯಲಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಡಲು ಇಚ್ಛಿಸುವವರು 25,000ಗಳನ್ನು ಪಡೆಯಲಿದ್ದಾರೆ. ಕೌಶಲ್ಯಾಭಿವೃದ್ಧಿ ತರಬೇತಿಗಳಲ್ಲಿ ಭಾಗವಹಿಸಿ ಉದ್ಯೋಗ ಪಡೆಯುವತ್ತ ಚಿಂತಿಸಿರುವವರಿಗೆ ಮೂರು ತಿಂಗಳ ಕಾಲ 10,000 ರೂಪಾಯಿಗಳು ದೊರೆಯಲಿದೆ.

ಎರಡನೇ ಮತ್ತು ಮೂರನೇ ದರ್ಜೆಯಲ್ಲಿರುವ ನಾಯಕರಿಗೆ 3 ಲಕ್ಷ ರೂಪಾಯಿ ಸಿಗಲಿದೆ. ಆಧುನಿಕ ಶಸ್ತ್ರಾಸ್ತ್ರಗಳನ್ನು ಒಪ್ಪಿಸುವ ಮಾವೋವಾದಿಗಳಿಗೆ ವಿಶೇಷ ಪ್ರೋತ್ಸಾಹ ಧನಗಳು ದೊರೆಯಲಿವೆ. AK-47 ತಂದು ಕೊಟ್ಟವರಿಗೆ 25,000 ರೂಪಾಯಿಗಳು ದೊರೆಯಲಿವೆ.

ಇಂತಹದ್ದೇ ಪ್ಯಾಕೇಜ್‌ಗಳನ್ನು ನಕ್ಸಲಿಸಂ ಚಲಾವಣೆಯಲ್ಲಿರುವ ಹಲವು ರಾಜ್ಯಗಳು ಘೋಷಿಸಿವೆ. ಕರ್ನಾಟಕವೂ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. 2010ರ ಜೂನ್‌ ಅವಧಿಯಲ್ಲಿ ಹಾಗಲಗಂಚಿ ವೆಂಕಟೇಶ್‌ ಶರಣಾಗತರಾಗಿದ್ದರು. ವೆಂಕಟೇಶ್‌ಗೆ 1 ಲಕ್ಷ ರೂಪಾಯಿಗಳು ದೊರೆತಿತ್ತು. ವೆಂಕಟೇಶ್‌ ಜತೆಗೆ ಶರಣಾತರಾಗಿದ್ದ ಇನ್ನೂ ನಾಲ್ವರಿಗೆ 50,000 ರೂಪಾಯಿಗಳು ದಕ್ಕಿತ್ತು. ಹೀಗೆ ಕರ್ನಾಟಕದ ನಕ್ಸಲ್‌ ಚಳುವಳಿಯಲ್ಲಿದ್ದು ಹೊರಬಂದಿರುವವರಲ್ಲಿ ಕೇವಲ 5-6 ಜನ ಮಾತ್ರ ಪ್ಯಾಕೇಜ್‌ ಪಡೆದುಕೊಂಡಿದ್ದಾರೆ.

ಏನಿದು ನಕ್ಸಲ್‌ ಪ್ಯಾಕೇಜ್‌ ?:

ಭಾರತದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಮಾವೋವಾದವನ್ನು ದೇಶದ ಆಂತರಿಕ ಭದ್ರತೆಗೆ ನಂಬರ್ ವನ್ ಅಪಾಯ ಎಂದೇ ಕರೆದಿದ್ದರು. ಲಕ್ಷಾಂತರ ಸಂಖ್ಯೆಯ ಸೈನ್ಯವನ್ನು ಹೊಂದಿರುವ ಭಾರತದ ಆಡಳಿತ ವರ್ಗಕ್ಕೆ ನಕ್ಸಲಿಸಂ ಒಳಗಿನ ಮುಳ್ಳಾಗಿ ಪರಿಣಮಿಸಿದೆ. ಹೀಗೆ ದೇಶದ ಹಲವಾರು ರಾಜ್ಯಗಳಲ್ಲಿ ಪಸರಿಸಿ ನಿಂತಿರುವ ನಕ್ಸಲೀಯತೆಯನ್ನು ತಡೆಗಟ್ಟುವುದನ್ನು ಆಳುವ ವರ್ಗ ಸಧ್ಯದ ತುರ್ತು ಎಂದೇ ಪರಿಗಣಿಸಿದೆ. ನಕ್ಸಲಿಸಂಅನ್ನು ನಿವಾರಿಸಿಕೊಳ್ಳಲು ಸರಕಾರ ಕೈಗೊಂಡಿರುವ ಯೋಜನೆಗಳಲ್ಲಿ ನಕ್ಸಲ್‌ ಪ್ಯಾಕೇಜ್‌ ಕೂಡ ಒಂದು.

ಸರಕಾರ ಈ ಯೋಜನೆಯನ್ನು ‘ಎಡಪಂಥೀಯ ಉಗ್ರಗಾಮಿ’ಗಳ ಶರಣಾಗತಿ ಮತ್ತು ಪುನರ್ವಸತಿ ಯೋಜನೆ ಎಂದು ಕರೆಯುತ್ತದೆ ಎನ್ನುತ್ತಾರೆ ನಕ್ಸಲ್‌ ಚಳುವಳಿಯ ಭಾಗವಾಗಿದ್ದ ಸಿರಿಮನೆ ನಾಗರಾಜ್‌.

ಈ ಯೋಜನೆಯ ಅಡಿಯಲ್ಲಿ ಶರಣಾಗತಿಯಾಗುವವರಿಗೆ ಕೆಲವು ವಿಶೇಷ ಅವಕಾಶಗಳನ್ನು ಸರಕಾರ ನೀಡುತ್ತದೆ. ಕೌಶಲ್ಯಾಭಿವೃದ್ಧಿ, ಉದ್ಯೋಗ ಇತ್ಯಾದಿಗಳು ಈ ಯೋಜನೆಯಿಂದ ದೊರೆಯುತ್ತವೆ. 4 ಲಕ್ಷದವರೆಗೆ ಕಡಿಮೆ ಬಡ್ಡಿಯ ಸಾಲವನ್ನು ನೀಡಲಾಗುತ್ತದೆ. 
ಸಿರಿಮನೆ ನಾಗರಾಜ್‌, ನಕ್ಸಲ್‌ ಚಳುವಳಿಯಲ್ಲಿದ್ದ ಹಿರಿಯ ಹೋರಾಟಗಾರರು.

ಕರ್ನಾಟಕದಲ್ಲಿ ಹೀಗೆ ಸರಕಾರದಿಂದ ಪ್ಯಾಕೇಜ್‌ ಪಡೆದವರು ಎಷ್ಟು ಜನ ಎನ್ನುವ ಪ್ರಶ್ನೆಗೆ 5 ಅಥವಾ 6 ಜನರಿರಬಹುದು ಅಷ್ಟೇ ಎನ್ನುವ ಉತ್ತರಗಳು ದೊರೆಯುತ್ತವೆ. ಜತೆಗೆ ನಕ್ಸಲ್‌ ಪ್ಯಾಕೇಜ್‌ ಪಡೆದವರು ಅದಾಗಲೇ ಚಳುವಳಿಯಿಂದ ದೂರ ಉಳಿದಿದ್ದವರು ಎನ್ನುತ್ತಾರೆ ನಕ್ಸಲ್‌ ಚಳುವಳಿಯ ಭಾಗವಾಗಿದ್ದವರೊಬ್ಬರು.

ಕರ್ನಾಟಕದಲ್ಲಿ ನಕ್ಸಲ್‌ ಪ್ಯಾಕೇಜ್‌ ಘೋಷಣೆಯಾಗಿ ದಶಕವೇ ಕಳೆದಿದೆ. ಆದರೆ ಪ್ಯಾಕೇಜ್‌ ಪಡೆದು ಹೊರಬಂದವರು ಯಾರೂ ಇಲ್ಲ. ನಕ್ಸಲ್‌ ಹೋರಾಟಗಾರರು ಸರಕಾರಗಳು ಒಡ್ಡುವ ಪ್ಯಾಕೇಜ್‌ ಆಮಿಷಕ್ಕೆ ಬಲಿಪಶುಗಳಾಗಿಲ್ಲ. ತಮ್ಮ ಸ್ವಂತ ಕಾರಣಕ್ಕಾಗಿ ಕೆಲವರು ಹೋರಾಟವನ್ನು ಬಿಟ್ಟು ಶರಣಾಗತಿಯಾಗಿದ್ದಾರೆಯೇ ವಿನಃ ಪ್ಯಾಕೇಜ್‌ ದೊರೆಯುತ್ತದೆ ಎಂಬ ಸ್ವಾರ್ಥದಿಂದಲ್ಲ. 
ಪದ್ಮನಾಭ, ನಕ್ಸಲ್‌ ಚಳುವಳಿಯ ಭಾಗವಾಗಿದ್ದವರು.

ನಕ್ಸಲ್‌ ಚಳುವಳಿಯಲ್ಲಿದ್ದವರ ಪ್ರಕಾರ ಈ ಪ್ಯಾಕೇಜ್‌ ಹೋರಾಟಗಾರರನ್ನು ದಾರಿ ತಪ್ಪಿಸಲು ಆಳುವ ವರ್ಗಗಳು ಒಡ್ಡುತ್ತಿರುವ ಆಮಿ‍ಷಗಳಾಗಿವೆ. ಹೋರಾಟಗಾರರಿಗೆ ಹಣದ ಆಸೆ ಹುಟ್ಟಿಸಿ, ಹೊರತರುವ ಪ್ರಯತ್ನವನ್ನು ಸರಕಾರಗಳು ಮಾಡುತ್ತಿವೆ. ಇದು ಹೋರಾಟದ ದಿಕ್ಕು ಕೆಡಿಸುವ ಕುತಂತ್ರವಷ್ಟೇ ಎನ್ನುವುದು ಅವರ ವಾದ. ಈ ಪ್ಯಾಕೇಜ್‌ ದೊರೆಯುತ್ತದೆಂದು ಹೊರಬಂದಿರುವವರ ಸಂಖ್ಯೆಯೂ ಕೂಡ ಅತಿ ವಿರಳ ಎನ್ನುತ್ತಾರೆ ಚಳುವಳಿಯ ಜತೆಗಿದ್ದವರು.

ಪ್ಯಾಕೇಜ್‌ನೊಳಗಿನ ಭ್ರಷ್ಟಾಚಾರ :

ಸರಕಾರ ಪ್ಯಾಕೇಜ್‌ ನೀಡಿ ಚಳವಳಿಗಾರರ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಚಳವಳಿಯಿಂದ ಮೊದಲೇ ಹೊರಬಂದವರು ಮಾತ್ರ ಪ್ಯಾಕೇಜ್‌ ಪಡೆದಿದ್ದಾರೆ ಎನ್ನುತ್ತಾರೆ ಚಳವಳಿಗಾರರು. ಅಷ್ಟೇ ಅಲ್ಲದೇ ಈ ನಕ್ಸಲ್‌ ಪ್ಯಾಕೇಜ್‌ಗಳೂ ಕೂಡ ಭ್ರಷ್ಟರ ಕಣ್ಣಿಂದ ದೂರ ಉಳಿದಿಲ್ಲ.

ಸಾಮಾಜಿಕ ಹೋರಾಟಗಾರರೊಬ್ಬರು ಹೇಳುವಂತೆ ಕಾಡಿನಲ್ಲೇ ಮದುವೆಯಾದ ಗಂಡ ಹೆಂಡತಿಯ ಕುಟುಂಬವೊಂದು ಸ್ವಲ್ಪ ದಿನಗಳಲ್ಲೇ ಚಳವಳಿಯಿಂದ ದೂರ ಉಳಿದಿತ್ತು. ಕುಟುಂಬಕ್ಕೆ ಅಗತ್ಯವಾದ ನೆಲೆಯನ್ನು ಕಲ್ಪಿಸಿಕೊಂಡಿತ್ತಾದರೂ ಮುಖ್ಯವಾಹಿನಿ ಬಂದು ಬದುಕುವುದಕ್ಕೆ ಸಾಧ್ಯವಾಗಿರಲಿಲ್ಲ. ನಂತರದ ದಿನಗಳಲ್ಲಿ ಕುಟುಂಬ ಪೊಲೀಸರ ಮುಂದೆ ಶರಣಾಗಿ ನಕ್ಸಲ್‌ ಪ್ಯಾಕೇಜ್‌ಗೆ ಬೇಡಿಕೆ ಇಟ್ಟಿತ್ತು.

ಹೆಂಡತಿಗೆ ಮಾತ್ರವೇ ಕೆಲವು ಲಕ್ಷ ರೂಪಾಯಿಗಳ ಹಣವನ್ನು ನೀಡಿದ ಅಧಿಕಾರ ವರ್ಗ ಗಂಡನಿಗೆ ಪ್ಯಾಕೇಜ್‌ ನಿರಾಕರಿಸಿತ್ತು. ಯಾವುದೇ ಕೇಸುಗಳಿಲ್ಲದ ಕಾರಣ ಪ್ಯಾಕೇಜ್‌ ಕೊಡಲು ಸಾಧ್ಯವಿಲ್ಲ ಎಂದಿತ್ತು. ಅದುವರೆಗೂ ಅವಾಗವಾಗ ಪೋಲೀಸ್‌ ಠಾಣೆಗೆ ಹಾಜಾರಾಗಿ ಸಹಿ ಹಾಕುತ್ತಿದ್ದ ವ್ಯಕ್ತಿಯ ಮೇಲಿದ್ದ ಕೇಸುಗಳು ಪ್ಯಾಕೇಜ್‌ ನೀಡಿ ಎಂದು ಕೇಳಿದ ಕೂಡಲೇ ಇಲ್ಲವಾದವು. ಈ ದುಡ್ಡು ಎಲ್ಲಿ ಹೋಯಿತು ಎಂದು ಪ್ರಶ್ನಿಸುತ್ತಾರೆ ಚಳವಳಿಯಲ್ಲಿದ್ದವರು.

ಇದೊಂದೇ ಅಲ್ಲದೆ, ಚಳವಳಿಯಲ್ಲಿರುವವರನ್ನು ಹಿಡಿದುಕೊಟ್ಟರೆ ಇಂತಿಷ್ಟು ಹಣ ನೀಡುವುದಾಗಿ ಸರಕಾರ ಘೋಷಿಸಿರುತ್ತದೆ. ಸ್ವತ: ನಕ್ಸಲೀಯನೇ ಬಂದು ಶರಣಾಗತನಾದಲ್ಲಿ ಆ ಹಣವನ್ನು ಅವನಿಗೇ ಕೊಡಬೇಕಲ್ಲವೇ ಎಂಬ ಪ್ರಶ್ನೆಯೂ ಇದೆ. ಈ ಕಾರಣಕ್ಕಾಗಿಯೇ ಅನುದಾನವಿರುತ್ತದೆ. ಆದರೆ ಹಣ ಮಾತ್ರ ಸೇರಬೇಕಾದವರ ಕೈ ಸೇರುವುದಿಲ್ಲ ಎನ್ನುತ್ತಾರೆ ಹೋರಾಟಗಾರರು.

ಚಳವಳಿಗಾರರಲ್ಲಿ ಈ ನಕ್ಸಲ್‌ ಪ್ಯಾಕೇಜ್‌ ಎನ್ನುವುದೇ ಡೋಂಗಿ ಎನ್ನುವ ಅಭಿಪ್ರಾಯವಿದೆ. ಚಳವಳಿಯಿಂದ ಮೊದಲು ಹೊರಬಂದವರಿಗೆ ದೊಡ್ಡ ಪ್ಯಾಕೇಜ್‌ ನೀಡುವುದಾಗಿ ಘೋಷಿಸಿದ್ದರು. ಆದರೆ ಮೊದಲಿಗೆ ಹೊರಬಂದವರು ಈ ಆಮಿಷಗಳಿಗೆ ಒಳಗಾಗಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ಹೊರಬಂದವರು ಪ್ಯಾಕೇಜ್‌ಗೆ ಬೇಡಿಕೆಯಿಟ್ಟಿದ್ದರು. ಅಧಿಕಾರ ವರ್ಗ ಮಾತ್ರ ಹೇಳಿಕೊಂಡಿದ್ದ ರೀತಿ ಪ್ಯಾಕೇಜ್‌ ನೀಡಿರಲಿಲ್ಲ. ಒಟ್ಟಾರೆ ನಕ್ಸಲ್‌ ಪ್ಯಾಕೇಜ್‌ ಎನ್ನುವುದೇ ಬೂಟಾಟಿಕೆ ಎನ್ನುತ್ತಾರೆ ನಕ್ಸಲ್ ಚಳವಳಿಯ ಭಾಗವಾಗಿದ್ದವರು.

ಪ್ಯಾಕೇಜ್‌ನಿಂದ ನಕ್ಸಲಿಸಂ ಕೊನೆಗಾಣುವುದೇ?:

‘ನಕ್ಸಲ್‌ ಪ್ಯಾಕೇಜ್‌’: ಅಕ್ರಮಗಳ ಸಂತೆಯಲ್ಲಿ ಸುಧಾರಣೆಯ ಸೋಗು!

ಸಾಧ್ಯವೇ ಇಲ್ಲ ಎನ್ನುತ್ತಾರೆ ನಕ್ಸಲ್‌ ಚಳುವಳಿಯಲ್ಲಿದ್ದವರು. ಅವರ ಪ್ರಕಾರ ಚಳವಳಿಯಲ್ಲಿ ನಿರತರಾಗಿ ಸಮಾಜಕ್ಕೆಂದು ಜೀವನವನ್ನು ಮುಡುಪಿಡಲು ಸಿದ್ಧರಾದವರು ಪುಡಿಗಾಸಿಗೆ ಆಸೆ ಪಟ್ಟು ಸಿದ್ಧಾಂತಗಳನ್ನು ಮಾರಿಕೊಳ್ಳುವುದಿಲ್ಲ. ಆದರೆ ಸರಕಾರಿ ದಾಖಲೆಗಳು 2005ರಿಂದ 2010ರ ಅವಧಿಯಲ್ಲಿ ಶರಣಾಗತರಾಗಿರುವ ನಕ್ಸಲರ ಸಂಖ್ಯೆ 4000ಕ್ಕೂ ಹೆಚ್ಚು ಎಂದು ಸೂಚಿಸುತ್ತವೆ.

ಭಾರತದಿಂದ ನಕ್ಸಲಿಸಂಅನ್ನು ಕೊನೆಗಾಣಿಸಲು ಸರಕಾರ ಬಳಸುತ್ತಿರುವ ಸಾಧನಗಳಲ್ಲಿ ಈ ನಕ್ಸಲ್‌ ಪ್ಯಾಕೇಜ್‌ ಕೂಡ ಒಂದು ಅಷ್ಟೇ. ಒಂದೆಡೆ ದುಡ್ಡು ಕೊಟ್ಟು ನಕ್ಸಲೀಯತೆಯನ್ನು ಕೊನೆಗಾಣಿಸಲು ಸರಕಾರ ಪ್ರಯತ್ನಿಸುತ್ತಿದ್ದರೆ, ಅದೇ ಸರಕಾರ ನಿಯೋಜಿಸಿರುವ ಪೊಲೀಸರು ದಶಕಗಳ ಕಾಲದಿಂದಲೂ ಸಹಸ್ರಾರು ನಕ್ಸಲೀಯರುನ್ನು ಹತ್ಯೆಗಯ್ಯುತ್ತಲೇ ಬಂದಿದ್ದಾರೆ.

2009ರ ಅವಧಿಯಲ್ಲಿ ಭಾರತದ 10 ರಾಜ್ಯಗಳಲ್ಲಿನ 180 ಜಿಲ್ಲೆಗಳಲ್ಲಿ ನಕ್ಸಲ್‌ ಚಟುವಟಿಕೆಗಳು ನಡೆಯುತ್ತಿದ್ದವು ಎಂದು ಸರಕಾರಿ ಅಂಕಿ ಅಂಶಗಳೇ ಹೇಳುತ್ತವೆ. ಆದರೆ 2016ರ ವೇಳೆಗೆ ಈ ಸಂಖ್ಯೆ 106ಕ್ಕೆ ಇಳಿದಿದೆ. ಇಂದಿಗೆ ಭಾರತದ ಸುಮಾರು 60 ಜಿಲ್ಲೆಗಳಲ್ಲಿ ನಕ್ಸಲಿಸಂ ದಟ್ಟವಾಗಿ ಬೇರು ಬಿಟ್ಟಿದೆ.

2010ರ ನಂತರದಲ್ಲಿ ನಕ್ಸಲೀಯರ ಪ್ರಭಾವ ಕಡಿಮೆಗೊಳ್ಳುತ್ತಾ ಸಾಗಿದೆಯಾದರೂ ಸಧ್ಯಕ್ಕೆ ದೇಶದಲ್ಲಿ 20,000ದಿಂದ 25,000 ಪೂರ್ಣಕಾಲಿಕ ನಕ್ಸಲೀಯರು ಕಾರ್ಯನಿರತರಾಗಿದ್ದಾರೆ ಎನ್ನಲಾಗುತ್ತದೆ. ನಕ್ಸಲರ ಅಂತ್ಯಕ್ಕಾಗಿ ಅವರ ಬೇಡಿಕೆಗಳನ್ನು ಪೂರೈಸುವುದಕ್ಕೆ ಹೆಚ್ಚಿನ ಹೊತ್ತು ನೀಡುವುದಕ್ಕಿಂತ ಮದ್ದು ಗುಂಡುಗಳ ಮೂಲಕವೇ ಕೊನೆಗಾಣಿಸುವತ್ತ ಸರಕಾರಗಳು ಚಿಂತಿಸುತ್ತಿವೆ.

ನಕ್ಸಲರ ಹಕ್ಕೊತ್ತಾಯಗಳು ಹಾಗೂ ಸರಕಾರಗಳ ಕಣ್ಣೊರೆಸುವ ತಂತ್ರಗಳು :

‘ನಕ್ಸಲ್‌ ಪ್ಯಾಕೇಜ್‌’: ಅಕ್ರಮಗಳ ಸಂತೆಯಲ್ಲಿ ಸುಧಾರಣೆಯ ಸೋಗು!

ನಕ್ಸಲೀಯರು ಹುಟ್ಟಿಕೊಂಡಿರುವುದು ಸಾಮಾಜಿಕ ಸಮಸ್ಯೆಗಳನ್ನು ಕೊನೆಗಾಣಿಸಬೇಕು ಎಂಬ ಕಾರಣಕ್ಕೇ ಹೊರತು ಸಾಮಾನ್ಯ ವರ್ಗವನ್ನು ಹಿಂಸಿಸಬೇಕು ಎಂದೇನೂ ಅಲ್ಲ. ಜನರ ಹಕ್ಕುಗಳನ್ನು ಒದಗಿಸಲು ಅಸ್ತ್ರಗಳನ್ನು ಹಿಡಿದುನಿಂತಿರುವ ಬಂಡಾಯಗಾರರು ಸರಕಾರಗಳ ದೃಷ್ಟಿಯಲ್ಲಿ ಬಂಡುಕೋರರಾಗಿ ಕಾಣಿಸುತ್ತಿದ್ದಾರೆ.

ಭಾರತದಲ್ಲಿ ಮೋವೋವಾದಿ ಹೋರಾಟ ಆರಂಭಗೊಂಡ ಕಾಲದಿಂದ ಇದುವರೆಗೂ ಸುಮಾರು 3,250 ನಕ್ಸಲೀಯರು ಭದ್ರತಾ ಸಿಬ್ಬಂದಿಗಳ ಬಂದೂಕಿಗೆ ಬಲಿಯಾಗಿದ್ದಾರೆ. ಈವರೆಗೂ ನಡೆದಿರುವ ನಕ್ಸಲ್ ಮತ್ತು ಭದ್ರತಾ ಸಿಬ್ಬಂದಿಗಳ ನಡುವಿನ ಕಾದಾಟದಲ್ಲಿ ಸುಮಾರು 13,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಆಳುವ ಸರಕಾರಗಳು ಜನರ ಸಮಸ್ಯೆಗಳಿಗೆ ನೈಜವಾಗಿ ಕುವಿಗೊಟ್ಟು ಬಗೆ ಹರಿಸಲು ಮುಂದಾಗದ ಹೊರತು ನಕ್ಸಲ್‌ ಚಳವಳಿ ನಿಲ್ಲುವಂತದ್ದಲ್ಲ.

ನಕ್ಸಲರ ಹಕ್ಕೊತ್ತಾಯಗಳಿಗಿಂತಲೂ ಹೆಚ್ಚಾಗಿ ಅವರನ್ನು ನಿವಾರಿಸಿಕೊಳ್ಳುವುದರ ಕಡೆಗೆಯೇ ಗಮನ ಹರಿಸಿರುವ ಸರಕಾರಗಳು ನಕ್ಸಲ್‌ ಪೀಡಿತ ಪ್ರದೇಶಗಳ ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಮಂಜೂರು ಮಾಡುತ್ತಿವೆ. ಆದರೆ ಆ ಹಣ ತಲುಪಬೇಕಾದವರಿಗೆ ಸರಿಯಾಗಿ ತಲುಪುತ್ತಿಲ್ಲ ಎನ್ನುವುದು ಹತ್ತಿರದಿಂದ ನೋಡಿದವರ ಮಾತುಗಳು.

ಮಾವೋವಾದಿಗಳು ಪ್ರಬಲರಾಗಿರುವ ಪ್ರದೇಶಗಳಿಗೆ ರಸ್ತೆ ಹಾಕಿಸಲೆಂದೇ ಕೋಟ್ಯಾಂತರ ರೂಪಾಯಿಗಳು ಬಿಡುಗಡೆಯಾಗುತ್ತದೆ. ಆದರೆ ಈ ಹಣದಿಂದ ಸಿದ್ಧವಾಗುವ ರಸ್ತೆಗಳು ಆದಿವಾಸಿಗಳ, ಚಿಕ್ಕ ಪುಟ್ಟ ಹಳ್ಳಿಗಳ ಗ್ರಾಮಸ್ತರನ್ನು ನೇರವಾಗಿ ತಲುಪುವುದಿಲ್ಲ. ಪೊಲೀಸರ ವಾಹನಗಳು ಎಲ್ಲೆಲ್ಲಿ ಚಲಿಸಬೇಕೋ ಆ ಜಾಗಗಳು ಮಾತ್ರ ಡಾಂಬರೀಕರಣಗೊಳ್ಳುತ್ತವೆ. ಅನುದಾನ ದೊರೆತದ್ದು ಜನರಿಗೋ ಅಥವಾ ಪೊಲೀಸರಿಗೂ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ.
ನಕ್ಸಲ್‌ ಚಳುವಳಿಯಲ್ಲಿದ್ದ ಕಾರ್ಯಕರ್ತರೊಬ್ಬರು. 

ಒಂದೆಡೆ ದಶಕಗಳ ಕಾಲದಿಂದ ಹೋರಾಡುತ್ತಲೇ ಬಂದಿರುವ ಮಾವೋವಾದಿಗಳು, ಅವರನ್ನು ಮಟ್ಟ ಹಾಕಲು ಟೊಂಕಕಟ್ಟಿ ನಿಂತಿರುವ ಸರಕಾರಗಳು ಇವರೆಡರ ನಡುವಿನ ಜಟಾಪಟಿ ಕೊನೆಗೊಳ್ಳಬೇಕೆಂದರೆ, ಅಧಿಕಾರ ವರ್ಗ ಜನ ಸಾಮಾನ್ಯರ ಮೂಲಭೂತ ಹಕ್ಕುಗಳನ್ನು ಪ್ರಾಮಾಣಿಕವಾಗಿ ಒದಗಿಸಬೇಕೇ ಹೊರತು ನಕ್ಸಲ್‌ ಪ್ಯಾಕೇಜ್‌, ರೆಡ್ ಕಾರಿಡಾರ್‌ಗಳ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡುವುದಲ್ಲ.