ಮೋದಿ-ಅಮಿತ್ ಶಾ ದರ್ಬಾರ್
COVER STORY

ನಾಲ್ಕು ವರ್ಷ ಪೂರೈಸಲಿರುವ ಮೋದಿ ಸರಕಾರ: ‘ಲೋಕಲ್ ಸರ್ಕಲ್’ ಸಮೀಕ್ಷೆ ಏನನ್ನುತ್ತೆ? 

ದೇಶದ 250 ಜಿಲ್ಲೆಗಳ ಸುಮಾರು 62,000 ಪ್ರಜೆಗಳನ್ನು ಮಾತನಾಡಿಸಿ, ಅವರಿಗೆ ಪ್ರಶ್ನೆಗಳನ್ನು ಕೇಳಿ ವರದಿಯೊಂದನ್ನು ಸಿದ್ಧಪಡಿಸಿದೆ. ಈ ವರದಿ ಹೇಳುವಂತೆ ಜನರಿಗೆ ಮೋದಿ ಸರಕಾರದ ಮೇಲಿದ್ದ ನಂಬಿಕೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.

ಲೋಕಲ್‌ ಸರ್ಕಲ್ಸ್‌ ಎಂಬ ಭಾರತದ ಪ್ರಮುಖ ಸಮಾಜಿಕ ಜಾಲತಾಣವೊಂದು ಮೋದಿ ಸರಕಾರದ 4 ವರ್ಷಗಳ ಸಾಧನೆಯ ಕುರಿತು ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯ ವರದಿ ಪ್ರಕಾರ ಭಾರತದ ಶೇ. 28ರಷ್ಟು ಮಂದಿ ಮೋದಿ ಸರಕಾರ ನಮ್ಮ ನಿರೀಕ್ಷೆಗಳನ್ನೂ ಮೀರಿ ಅಭಿವೃದ್ಧಿ ಸಾಧಿಸುತ್ತಿದೆ ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಶೇ.29ರಷ್ಟು ಮಂದಿ ಮೋದಿಯದು ಉತ್ತಮ ಸರಕಾರ ಎಂಬ ನಿಲುವನ್ನು ಹೊಂದಿದ್ದಾರೆ. ಶೇ.47ರಷ್ಟು ಮಂದಿಗೆ ಸರಕಾರದ ಕುರಿತು ಸಮಾಧಾನವಿಲ್ಲ.

ದೇಶದ 250 ಜಿಲ್ಲೆಗಳ ಸುಮಾರು 62,000 ಪ್ರಜೆಗಳನ್ನು ಮಾತನಾಡಿಸಿ, ಅವರಿಗೆ ಪ್ರಶ್ನೆಗಳನ್ನು ಕೇಳಿ ವರದಿಯೊಂದನ್ನು ಸಿದ್ಧಪಡಿಸಿದೆ. ಈ ವರದಿ ಹೇಳುವಂತೆ ಜನರಿಗೆ ಮೋದಿ ಸರಕಾರದ ಮೇಲಿದ್ದ ನಂಬಿಕೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.

2013ರಲ್ಲಿ 325 ಲೋಕಸಭಾ ಕ್ಷೇತ್ರಗಳಲ್ಲಿ ಗೆಲವು ದಾಖಲಿಸಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ, ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಅಧಿಕಾರವನ್ನು ಸ್ಥಾಪಿಸಿತ್ತು. ಅಧಿಕಾರದ ಗದ್ದುಗೆಯೇರುವ ಸಲುವಾಗಿ ಹತ್ತು ಹಲವು ಭರವಸೆಗಳನ್ನು ಜನತೆಗೆ ನೀಡಿತ್ತು.

ಅಭಿವೃದ್ಧಿ ಹಾಗೂ ಸ್ವಚ್ಛ ಸರಕಾರದ ಭರವಸೆಗಳು ಜನರನ್ನು ಬಿಜೆಪಿಯತ್ತ ತಿರುಗುವಂತೆ ಮಾಡಿದ್ದವು. ಈ ಭರವಸೆಗಳ ಕಾರಣದಿಂದಾಗಿ ಬಿಜೆಪಿ ಬಹುಮತ ಗಳಿಸಿ ಅಧಿಕಾರಕ್ಕೆ ಬಂದಿತ್ತು. ಅಧಿಕಾರ ಗಳಿಸಿದ ಮೊದಲ ದಿನಗಳಲ್ಲಿ ಮೋದಿ ಹವಾ ಜೋರಾಗಿಯೇ ಇತ್ತು. ಆದರೆ ನಾಲ್ಕು ವರ್ಷಗಳು ಕಳೆಯುವ ಹೊತ್ತಿಗೆ ಜನರ ಮನಸ್ಸಿನಲ್ಲಿ ಮೋದಿ ಬಗೆಗಿನ ಜನಪ್ರಿಯತೆ ಮಂಕಾಗುತ್ತಿದೆ ಎನ್ನುತ್ತದೆ ‘ಲೋಕಲ್ ಸರ್ಕಲ್ಸ್’ ಸಮೀಕ್ಷೆ.

ಲೋಕಲ್‌ ಸರ್ಕಲ್ಸ್ ವರದಿ, ಹೇಳುವಂತೆ ಮೋದಿ ಸರಕಾರದ ಸಾಧನೆ ಶೇ.57ರಷ್ಟು ಮಂದಿಗೆ ತೃಪ್ತಿ ತಂದಿದೆ. ಈ ಶೇ. 57ರಲ್ಲಿ ಶೇ. 28ರಷ್ಟು ಮಂದಿಗೆ ಮೋದಿ ಸರಕಾರ ತಾನು ನೀಡಿದ ಭರವಸೆಗಳಿಗಿಂತಲೂ ಹೆಚ್ಚಿನ ಸಾಧನೆ ಮಾಡಿದೆ ಎಂಬ ಅಭಿಪ್ರಾಯವಿದೆ. 29ರಷ್ಟು ಜನ ಮೋದಿ ಸರಕಾರ ತಾನು ನೀಡಿದ ಭರವಸೆಗಳನ್ನು ಈಡೇರಿಸಿದೆ ಎಂದಿದ್ದಾರೆ.

ಶೇ.43ರಷ್ಟು ಮಂದಿಗೆ ಮೋದಿ ಸರಕಾರ ತಾನು ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ ಎಂಬ ಅಭಿಪ್ರಾಯವಿದೆ. 2016ರ ವೇಳೆಗೆ ಶೇ.36ರಷ್ಟಿದ್ದ ಈ ಸಂಖ್ಯೆ, 2017ಕ್ಕೆ ಶೇ.39ನ್ನು ತಲುಪಿತ್ತು. 2018ರಲ್ಲಿ ಶೇ.43ರಷ್ಟು ಜನ ಮೋದಿ ಸರಕಾರದ ವಿರುದ್ಧ ಅಸಮಾಧಾನವನ್ನು ತೋರಿದ್ದಾರೆ. ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಮೋದಿ ವಿರುದ್ಧದ ಅಸಮಾಧಾನ, ಸರಕಾರ ನಂಬಿಕೆಯನ್ನು ಕಳೆದುಕೊಳ್ಳುತ್ತಿದೆ ಎನ್ನುವುದರ ಸೂಚಕ.

ನಾಲ್ಕು ವರ್ಷ ಪೂರೈಸಲಿರುವ ಮೋದಿ ಸರಕಾರ: ‘ಲೋಕಲ್ ಸರ್ಕಲ್’ ಸಮೀಕ್ಷೆ ಏನನ್ನುತ್ತೆ? 

ಈ ಸಮೀಕ್ಷೆಗಾಗಿ ಲೋಕಲ್‌ ಸರ್ಕಲ್ಸ್‌ ಸಂಸ್ಥೆ 22 ವಿವಿಧ ವಲಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಜನರ ಮುಂದಿಟ್ಟಿದೆ. ಚುನಾವಣೆಗಳಲ್ಲಿ ನೀಡಿದ್ದ ಭರವಸೆಗಳ ಈಡೇರಿಕೆ, ಜೀವನ ಮಟ್ಟದ ಸುಧಾರಣೆ, ಸರಕಾರದ ನೀತಿಗಳು, ಮೂಲಭೂತ ಸೌಕರ್ಯಗಳು, ಅಭಿವೃದ್ಧಿ ಯೋಜನೆಗಳು, ಬೆಲೆ ಏರಿಕೆ, ರೈತರ ಬದುಕು ಇತ್ಯಾದಿ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಜನರ ಮುಂದಿಡಲಾಗಿದೆ. ಒಂದೊಂದು ವಲಯಕ್ಕೂ ಕೂಡ ಬೇರೆ ಬೇರೆಯಾದ ಅನಿಸಿಕೆಗಳು ಜನರಿಂದ ವ್ಯಕ್ತವಾಗಿದೆ. ಒಂದು ವಲಯದಲ್ಲಿ ಮೋದಿ ಸರಕಾರದ ಸಾಧನೆ ಉತ್ತಮವೆನಿಸಿದರೆ ಮತ್ತೊಂದರಲ್ಲಿ ಕಳಪೆಯಾಗಿ ಕಾಣಿಸುತ್ತದೆ.

ಲೋಕಲ್‌ ಸರ್ಕಲ್ಸ್‌ ಕೇಳೀರುವ ಬಹುಮುಖ್ಯ ಪ್ರಶ್ನೆಗಳೇನು?:

ಲೋಕಲ್‌ ಸರ್ಕಲ್ಸ್‌ ಕೇಳಿರುವ ಬಹುಮುಖ್ಯ ಪ್ರಶ್ನೆಗಳಲ್ಲಿ  ಜೀವನ ಗುಣಮಟ್ಟದ ಪ್ರಶ್ನೆಯೂ ಒಂದು. ಈ ಪ್ರಶ್ನೆಗೆ ಸಂಬಂಧಿಸಿದಂತೆ ದೊರೆತ ಉತ್ತರಗಳಲ್ಲಿ ಬಹುಪಾಲು ಜನರದ್ದು ಒಂದೇ ತೆರನಾದ ಅಭಿಪ್ರಾಯ. ಶೇ.60ರಷ್ಟು ಮಂದಿ ಮೋದಿ ಸರಕಾರದಿಂದ ಜೀವನ ಮಟ್ಟದ ಸುಧಾರಣೆಯೇನೂ ಆಗಿಲ್ಲ ಎಂಬ ಉತ್ತರವನ್ನು ನೀಡಿದ್ದಾರೆ. ಜಿಎಸ್‌ಟಿ ಜಾರಿಗೆ ಬಂದಿದ್ದರಿಂದ ಸಾಮಾನ್ಯ ಜನರಿಗೇನು ಅನೂಕೂಲವಿಲ್ಲ ಎನ್ನುವುದು ಜನರ ಮಾತು.

ದಿನದಿಂದ ದಿನಕ್ಕೆ ಬದುಕು ಸಾಗಿಸಲು ಅಗತ್ಯವಿರುವ ಹಣದ ಮೌಲ್ಯ ಹೆಚ್ಚುತ್ತಿದೆಯೇ ಹೊರತು ಕಡಿಮೆಯಂತೂ ಆಗುತ್ತಿಲ್ಲ ಎಂದು ಜನ ಹೇಳಿದ್ದಾರೆ. ಮೋದಿ ಅಧಿಕಾರಕ್ಕೆ ಬಂದ ನಂತರ 2016ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇ.38 ಜನ ದಿನನಿತ್ಯ ಬಳಕೆಗೆ ವಸ್ತುಗಳ ಬೆಲೆ ಕಡಿಮೆಯಾಗಿದೆ ಎಂದಿದ್ದರು. ಈ ಸಂಖ್ಯೆ 2017ಕ್ಕೆ ಶೇ. 28ಕ್ಕೆ ಕುಸಿದಿತ್ತು. 2018ರಲ್ಲಿ ಶೇ.33ರಷ್ಟು ಜನ ಜೀವನ ಮಟ್ಟದ ಸುಧಾರಣೆಯಾಗಿದೆ ಎಂದಿದ್ದಾರೆ. ಆದರೆ ಆರಂಭದ ಮೋದಿ ಜನಪ್ರಿಯತೆಗೆ ಹೋಲಿಸಿದರೆ, ಪ್ರಮಾಣ ಕಡಿಮೆಯಾಗುತ್ತಿರುವುದು ಸಮೀಕ್ಷೆಯಲ್ಲಿ ಎದ್ದು ಕಾಣಿಸುತ್ತಿದೆ.

ನಾಲ್ಕು ವರ್ಷ ಪೂರೈಸಲಿರುವ ಮೋದಿ ಸರಕಾರ: ‘ಲೋಕಲ್ ಸರ್ಕಲ್’ ಸಮೀಕ್ಷೆ ಏನನ್ನುತ್ತೆ? 

ಮಹಿಳೆ ಮತ್ತು ಮಕ್ಕಳ ಭದ್ರತೆಗೆ ಸಂಬಂಧ ಪಟ್ಟಂತೆ ಕೂಡ ಜನರಲ್ಲಿ ಸರಕಾರದ ಬಗ್ಗೆ ನಂಬಿಕೆಯಿಲ್ಲ. ಮೋದಿ ಸರಕಾರದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಕಡಿಮೆಯಾಗಿದೆ ಎಂದಿರುವವರು ಶೇ.32 ಮಂದಿಯಷ್ಟೇ. 2016ರಲ್ಲಿ ಶೇ.38ರಷ್ಟು ಜನ ಭದ್ರತೆಯಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದರು. 2017ಕ್ಕೆ ಈ ಸಂಖ್ಯೆ ಶೇ.60ರಷ್ಟಿತ್ತು ಎಂಬುದು ಗಮನಾರ್ಹ.

2018ರಲ್ಲಿ ಶೇ.58ರಷ್ಟು ಮಂದಿ ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಭದ್ರತೆಯಿಲ್ಲ ಎಂದಿದ್ದಾರೆ. ಇತ್ತೀಚಿಗೆ ಹೆಚ್ಚಾಗಿ ಬಯಲಿಗೆ ಬರುತ್ತಿರುವ ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ದೇಶದ ಜನರಲ್ಲಿ ಸರಕಾರದ ಬಗೆಗಿನ ನಂಬಿಕೆ ಕಳೆದು ಹೋಗಲು ಕಾರಣವಾಗಿರಬಹುದು.

ನಾಲ್ಕು ವರ್ಷ ಪೂರೈಸಲಿರುವ ಮೋದಿ ಸರಕಾರ: ‘ಲೋಕಲ್ ಸರ್ಕಲ್’ ಸಮೀಕ್ಷೆ ಏನನ್ನುತ್ತೆ? 

ಆರೋಗ್ಯ ಸೇವೆಗೆ ಸಂಬಂಧಿಸಿದಂತೆಯೂ ಕೂಡ ಜನರಲ್ಲಿ ಮೋದಿ ಸರಕಾರದ ಬಗೆಗಿನ ನಂಬಿಕೆ ಕಡಿಮೆಯಿದೆ. ಶೇ.32ರಷ್ಟು ಜನ ತಮ್ಮ ನಗರಗಳಲ್ಲಿ ಉತ್ತಮ ಆರೋಗ್ಯ ಸೇವೆ ಲಭ್ಯವಾಗುತ್ತಿದೆ ಎಂದರೆ ಶೇ.62ರಷ್ಟು ಜನ ಆರೋಗ್ಯ ವಲಯ ಸುಧಾರಿಸಿಲ್ಲ ಎಂಬ ಅಭಿಪ್ರಾಯವನ್ನು ಹೊಂದಿದ್ದಾರೆ.

ಸ್ವಚ್ಛ ಭಾರತ ಯೋಜನೆಯ ಬಗ್ಗೆ ಶೇ.51ರಷ್ಟು ಜನರಿಗೆ ಸಮಾಧಾನವಿಲ್ಲ. ಶೇ.43ರಷ್ಟು ಜನ ಸ್ವಚ್ಛ ಭಾರತ್ ಯೋಜನೆ ಕೆಲಸ ಮಾಡುತ್ತಿದೆ ಎಂದಿದ್ದಾರೆ.

ಮೂಲಭೂತ ಸೌಕರ್ಯಗಳೆನಿಸಿದ ರಸ್ತೆ, ವಿದ್ಯುತ್‌, ನೀರಾವರಿ ಇತ್ಯಾದಿಗಳು ಮೋದಿ ಅಧಿಕಾರಾವಧಿಯಲ್ಲಿ ಅಭಿವೃದ್ಧಿಗೊಂಡಿವೆ ಎಂದು ಶೇ.65ರಷ್ಟು ಜನ ಅಭಿಪ್ರಾಯಿಸಿದ್ದಾರೆ. ಶೇ.29ರಷ್ಟು ಜನರಿಗೆ ಅಭಿವೃದ್ಧಿಯಾಗಿದೆ ಎಂದೇನೂ ಎನಿಸಿಲ್ಲ. ಉಳಿದ ಶೇ.6ರಷ್ಟು ಜನ ಯಾವುದೇ ಅಭಿಪ್ರಾಯವನ್ನು ನೀಡಿಲ್ಲ. 2016ರಲ್ಲಿದ್ದ ಶೇ.72ರಷ್ಟು ಜನ ಮೂಲಸೌಕರ್ಯಗಳ ವಿಚಾರದಲ್ಲಿ ಮೋದಿ ಸರಕಾರವನ್ನು ಶ್ಲಾಘಿಸಿದ್ದರು. ನಾಲ್ಕು ವರ್ಷಗಳಲ್ಲಿ ಈ ಸಂಖ್ಯೆ ಶೇ. 65ಕ್ಕೆ ಕುಸಿದಿದೆ.

ಭಾರತದಲ್ಲಿ ಉದ್ಯಮ ಸ್ನೇಹಿ ವಾತಾವರಣ ಸೃಷ್ಟಿಯಾಗಿದೆಯೇ ಎಂಬ ಪ್ರಶ್ನೆಗೆ ಈ ವರ್ಷ ಹೆಚ್ಚಿನ ಜನ ಹೌದು ಎಂದಿದ್ದಾರೆ. 2017ರಲ್ಲಿ ಶೇ.36ರಷ್ಟು ಮಂದಿ ಉದ್ಯಮ ಸ್ನೇಹಿ ವಾತಾವರಣವಿದೆ ಎಂದಿದ್ದರು. ಈ ಬಾರಿ ಈ ಸಂಖ್ಯೆ ಶೇ.46ಕ್ಕೆ ಏರಿದೆ. ಆದರೆ 2016ರಲ್ಲಿ ಶೇ.60 ಮಂದಿ ಉತ್ತಮ ಉದ್ಯಮಿಕ ವಾತಾವರಣವಿದೆ ಎಂಬ ಅಭಿಪ್ರಾಯವನ್ನು ಮಂಡಿಸಿದ್ದರು.

ಶೇ.47ರಷ್ಟು ಜನ ರೈತರ ಬದುಕು ಸುಧಾರಿಸಿಲ್ಲ ಎಂದಿದ್ದಾರೆ. ಶೇ.60ರಷ್ಟು ಜನ ಬೆಲೆ ಏರಿಕೆ ಜಾಸ್ತಿಯಾಗಿದೆ ಎಂದಿದ್ದಾರೆ. ಭ್ರಷ್ಟಾಚಾರ ಕಡಿಮೆಯಾಗಿದೆಯಾ ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ಶೇ.49ರಷ್ಟು ಮಂದಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಇತರೆ ದೇಶಗಳ ಮುಂದೆ ಭಾರತದ ಘನತೆ ಹೆಚ್ಚಾಗಿದೆಯೇ ಎನ್ನುವ ಪ್ರಶ್ನೆಗೆ ಮಾತ್ರ ಶೇ.82ರಷ್ಟು ಜನ ಹೌದು ಎಂದಿದ್ದಾರೆ.

ನಾಲ್ಕು ವರ್ಷ ಪೂರೈಸಲಿರುವ ಮೋದಿ ಸರಕಾರ: ‘ಲೋಕಲ್ ಸರ್ಕಲ್’ ಸಮೀಕ್ಷೆ ಏನನ್ನುತ್ತೆ? 

ಒಟ್ಟಾರೆ 22 ವಲಯಗಳ ಕುರಿತಾದ ಜನರ ಅಭಿಪ್ರಾಯವನ್ನು ಒಟ್ಟು ಮಾಡಿ ನೋಡುವುದಾದರೆ ಶೇ.57ರಷ್ಟು ಮಂದಿಗೆ ಮೋದಿ ಸರಕಾರದ ಬಗ್ಗೆ ಸಮಾಧಾನವಿದೆ. ಉಳಿದವರಿಗೆ ಇಲ್ಲ.

ಆದರೆ ಈ ಸಮೀಕ್ಷೆ ಪರಿಪೂರ್ಣ ಎನಿಸುವುದಿಲ್ಲ. ಲೋಕಲ್‌ ಸರ್ಕಲ್ಸ್ ತಾನು ಸಮೀಕ್ಷೆ ನಡೆಸಿದ ಎಲ್ಲರ ಬಳಿ ಎಲ್ಲಾ ಪ್ರಶ್ನೆಗಳನ್ನು ಕೇಳಿಲ್ಲ. ಲೋಕಲ್‌ ಸರ್ಕಲ್ಸ್ ಕೇಳಿದ ಕೆಲವು ಪ್ರಶ್ನೆಗಳಿಗಷ್ಟೇ ಜನ ಉತ್ತರಿಸಿದ್ದಾರೆ. 22 ಪ್ರಶ್ನೆಗಳಲ್ಲಿ ಪ್ರತಿಯೊಂದು ಪ್ರಶ್ನೆಗಳಿಗೆ ಸರಿಸುಮಾರು 7,000ದಿಂದ 8,000 ಜನರಿಂದಷ್ಟೇ ಉತ್ತರ ಪಡೆಯಲಾಗಿದೆ. ದೇಶದ ಜನಸಂಖ್ಯೆಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ದತ್ತಾಂತ. ಇದನ್ನು ಶೇಕಡವಾರು ಪ್ರಮಾಣದಲ್ಲಿ ನೋಡಬಹುದಾದರೂ, ಅಂತಿಮವಾಗಿ ಇಡೀ ದೇಶದ ಜನಾಭಿಪ್ರಾಯ ಎಂದು ಹೇಳುವುದು ಕಷ್ಟ.

ಈ ಸಮೀಕ್ಷೆ ನಗರ, ಅರೆನಗರ, ಗ್ರಾಮೀಣ ಭಾಗದ ಜನರನ್ನು ಒಳಗೊಂಡಿದೆ ಎನ್ನುವುದೇನೋ ನಿಜ. ಆದರೆ ಆನ್‌ಲೈನ್‌ ಜಾಲತಾಣ ಲೋಕಲ್‌ ಸರ್ಕಲ್ಸ್‌ ತಲುಪಲು ಸಾಧ್ಯವಾಗುವುದು  ಆನ್‌ಲೈನ್‌ನಲ್ಲಿರುವವರನ್ನು ಮಾತ್ರ. ಇವರನ್ನು ಹೊರತು ಪಡಿಸಿದಂತೆ ದೇಶದಲ್ಲಿ ಅಂತರ್ಜಾಲದ ಗಂಧ ಗಾಳಿಯೇ ತಿಳಿಯದ ಅರ್ಧದಷ್ಟು ಜನಸಂಖ್ಯೆ ಇದೆ. ಈ ದೃಷ್ಟಿಯಿಂದ ನೋಡುವುದಾದರೆ ಈ ಲೋಕಲ್ ಸರ್ಕಲ್ಸ್‌ ಸಮೀಕ್ಷೆ ಅಪೂರ್ಣ ಅನ್ನಿಸಿಕೊಳ್ಳುತ್ತದೆ.

ಮೇ. 26ಕ್ಕೆ ಮೋದಿ ನೇತೃತ್ವದ ಎನ್‌ಡಿಎ ಸರಕಾರ ನಾಲ್ಕು ವರ್ಷಗಳ ಆಡಳಿತವನ್ನು ಪೂರೈಸಲಿದೆ. ಹೀಗಾಗಿ ಇಂತಹ ಸಮೀಕ್ಷೆಗಳು ಸಹಜವಾಗಿಯೇ ಮಹತ್ವ ಪಡೆದುಕೊಳ್ಳುತ್ತವೆ ಮತ್ತು ಮುಂದಿನ 15 ದಿನಗಳಲ್ಲಿ ಇಂತಹ ಹಲವು ಸಮೀಕ್ಷೆಗಳನ್ನು ನಿರೀಕ್ಷಿಸಬಹುದಾಗಿದೆ.