ಡಾ. ಜಿ. ಪರಮೇಶ್ವರ್‌, ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ
COVER STORY

ಮತ್ತೆ ಮುನ್ನೆಲೆಗೆ ಬಂದ ದಲಿತ ಸಿಎಂ ಚರ್ಚೆ; ಏನಾಗಲಿದೆ ಕಾಂಗ್ರೆಸ್ ಹೈಕಮಾಂಡ್‌ ಲೆಕ್ಕಾಚಾರ?

ಕಾಂಗ್ರೆಸ್‌ನಲ್ಲಿ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಾರಿ ಸಿದ್ದರಾಮಯ್ಯ ಕೂಡಾ ಸಿಎಂ ಹುದ್ದೆ ವಿಚಾರದಲ್ಲಿ ಸಡಿಲ ಇರುವುದು ದಲಿತರೊಬ್ಬರು ಸಿಎಂ ಆಗುವ ಕನಸು ಜೀವ ಪಡೆಯುವಂತೆ ಮಾಡಿದೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ಮುಗಿದಿದೆ. ಈ ಬಾರಿ ಒಟ್ಟು ಶೇಕಡ 72.13ರಷ್ಟು ಮತದಾನವಾಗಿದೆ. 2013ರ ಚುನಾವಣೆಗಿಂತ ಈ ಬಾರಿ ಮತದಾನದ ಪ್ರಮಾಣ ಶೇಕಡ 1.9ರಷ್ಟು ಹೆಚ್ಚಾಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷಗಳು ತಮಗೇ ಬಹುಮತ ಸಿಗುವ ವಿಶ್ವಾಸದಲ್ಲಿವೆ.

ಈ ಬಾರಿಯೂ ತಾವೇ ಮುಖ್ಯಮಂತ್ರಿಯಾಗುವುದು ಖಚಿತ ಎಂದು ಸಿದ್ದರಾಮಯ್ಯ ಹೇಳುತ್ತಿದ್ದರೆ, ಬಿಜೆಪಿ 125ರಿಂದ 130 ಸ್ಥಾನ ಗೆಲ್ಲುವುದು ಖಚಿತ ಎಂದು ಬಿ.ಎಸ್‌. ಯಡಿಯೂರಪ್ಪ ತಮ್ಮ ವಿಶ್ವಾಸದ ಭವಿಷ್ಯ ನುಡಿದಿದ್ದಾರೆ.

ಚುನಾವಣಾ ಫಲಿತಾಂಶಕ್ಕೆ ಇನ್ನೂ ಎರಡು ದಿನ ಬಾಕಿ ಇರುವಾಗಲೇ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮಾತನಾಡುತ್ತಿದ್ದಾರೆ. ಈ ಮಧ್ಯೆ ಜೆಡಿಎಸ್‌ ಕೂಡಾ ಫಲಿತಾಂಶ ಅತಂತ್ರವಾಗುವುದಿಲ್ಲ, ತಮಗೇ ಬಹುಮತ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ. ಈ ಎಲ್ಲಾ ಅಪಸವ್ಯಗಳೂ ಮಂಗಳವಾರ ಮಧ್ಯಾಹ್ನದ ವೇಳೆಗೆ ಕೊನೆಯಾಗಲಿವೆ.

ಈ ಮಧ್ಯೆ ಕಾಂಗ್ರೆಸ್‌ ಪಾಳಯದಲ್ಲಿ ಈಗ ದಲಿತ ಮುಖ್ಯಮಂತ್ರಿಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಮೈಸೂರಿನಲ್ಲಿ ಭಾನುವಾರ ಮಾತನಾಡಿರುವ ಸಿದ್ದರಾಮಯ್ಯ, “ಒಂದು ವೇಳೆ ಹೈಕಮಾಂಡ್‌ ದಲಿತ ಮುಖ್ಯಮಂತ್ರಿ ನಿರ್ಧಾರ ತೆಗೆದುಕೊಂಡರೆ ಆ ನಿರ್ಧಾರಕ್ಕೆ ನಾನು ಬದ್ಧ” ಎಂದಿದ್ದಾರೆ. ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌, “ದಲಿತ ಮುಖ್ಯಮಂತ್ರಿ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು” ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡಾ ದಲಿತ ಸಿಎಂ ವಿಚಾರದ ಚರ್ಚೆ ಈಗ ಬೇಡ ಎಂದಿದ್ದಾರೆ. ಜತೆಗೆ ಈ ಹಿಂದೆ ಇಂತಹ ಹಲವು ಚರ್ಚೆಗಳು ನಡೆದಿವೆ. ಕೇವಲ ಹೇಳಿಕೆಗಳನ್ನು ಕೊಡುವುದು ಬೇಡ. ಮನಸ್ಸಿದ್ದರೆ ಸಿಎಂ ಹುದ್ದೆ ಬಿಟ್ಟು ಕೊಡಲಿ ಎಂದಿದ್ದಾರೆ.

ನಾನೊಬ್ಬ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತ. ಈ ಹಿರಿಯ ಕಾರ್ಯಕರ್ತನಿಗೆ ಸಿಎಂ ಹುದ್ದೆ ಕೊಡುವ ಮನಸ್ಸಿದ್ದರೆ ಕೊಡಲಿ. ಬರೀ ಹೇಳಿಕೆ ಕೊಡುವುದು ಬೇಡ. ದಲಿತ ಸಿಎಂ ಬಗ್ಗೆ ಸುಮ್ಮನೆ ಈಗ ಚರ್ಚೆ ಬೇಡ. ಸಿಎಂ ಹುದ್ದೆ ಬಂದರೆ ಬರುತ್ತದೆ, ಹೋದರೆ ಹೋಗುತ್ತದೆ.
- ಮಲ್ಲಿಕಾರ್ಜುನ ಖರ್ಗೆ, ಹಿರಿಯ ಕಾಂಗ್ರೆಸ್‌ ನಾಯಕ

ಈ ಇಬ್ಬರೂ ಕಾಂಗ್ರೆಸ್‌ನ ದಲಿತ ಮುಖಂಡರು ದಲಿತ ಸಿಎಂ ವಿಚಾರದಲ್ಲಿ ಹೈಕಮಾಂಡ್‌ ಕಡೆಗೆ ಮಾತು ಹೊರಳಿಸುತ್ತಿದ್ದರೂ ಇಬ್ಬರೊಳಗೂ ಮುಖ್ಯಮಂತ್ರಿ ಗಾದಿಗೇರಬೇಕೆಂಬ ಬಯಕೆ ಇದ್ದೇ ಇದೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತ ಪಡೆದರೂ ಜಿ. ಪರಮೇಶ್ವರ್‌ಗೆ ಗೆಲವು ಸಿಗಲಿಲ್ಲ. ವಿಧಾನ ಪರಿಷತ್ ಸದಸ್ಯರಾಗಿಸಿ, ಗೃಹ ಸಚಿವ ಸ್ಥಾನ ನೀಡಿದರೂ ಪರಮೇಶ್ವರ್‌ ಅವರೊಳಗೆ ಸಿಎಂ ಆಗದ ಬೇಸರ ಆಗಾಗ ಹೊರಗೆ ಇಣುಕುತ್ತಲೇ ಇತ್ತು.

ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೂ ಕಾಂಗ್ರೆಸ್‌ನಲ್ಲಿ ದಲಿತ ಸಿಎಂ ಚರ್ಚೆ ನಡೆದಿತ್ತು. ಆದರೆ, ಚುನಾವಣೆಯ ಸಂದರ್ಭದಲ್ಲಿ ರಾಜ್ಯ ನಾಯಕತ್ವದ ವಿಚಾರದಲ್ಲಿ ಗೊಂದಲಗಳು ಬೇಡ ಎಂದು ಕಾಂಗ್ರೆಸ್‌ ಹೈಕಮಾಂಡ್‌ ತಾಕೀತು ಮಾಡಿತ್ತು. ಕೊನೆಗೆ ಸಿದ್ದರಾಮಯ್ಯ ಹೆಸರಿನಲ್ಲೇ ಚುನಾವಣೆ ಎದುರಿಸಿದ ಕಾಂಗ್ರೆಸ್‌ ಒಳಗೆ ಈಗ ದಲಿತ ಸಿಎಂ ಚರ್ಚೆಗಳು ಮತ್ತೆ ಕಾವು ಪಡೆದುಕೊಂಡಿವೆ.

2019ರ ಲೋಕಸಭಾ ಚುನಾವಣೆವರೆಗೂ ಸಿದ್ದರಾಮಯ್ಯ ಅವರನ್ನು ಮೊದಲು ಮುಖ್ಯಮಂತ್ರಿ ಮಾಡಿ ಬಳಿಕ ದಲಿತರಿಗೆ ಸಿಎಂ ಪಟ್ಟ ಕಟ್ಟುವ ಲೆಕ್ಕಾಚಾರ ಕಾಂಗ್ರೆಸ್‌ ಹೈಕಮಾಂಡ್‌ನಲ್ಲಿದೆ ಎಂಬ ಮಾತುಗಳು ಕೇಳಿಬಂದಿವೆ. ಒಂದು ವೇಳೆ ಇಂಥದ್ದೇ ನಿರ್ಧಾರಕ್ಕೆ ಕಾಂಗ್ರೆಸ್ ಹೈಕಮಾಂಡ್‌ ಬಂದರೆ ಸಿದ್ದರಾಮಯ್ಯ ಹೆಸರಿನಲ್ಲಿ ಚುನಾವಣೆ ಎದುರಿಸಿ ಮತ್ತೊಬ್ಬರನ್ನು ಸಿಎಂ ಮಾಡಿದರು ಎಂಬ ಟೀಕೆಗಳಿಂದ ತಪ್ಪಿಸಿಕೊಳ್ಳಲು ಹೈಕಮಾಂಡ್‌ಗೆ ಅವಕಾಶವಿದೆ.

ಆದರೆ, ಕಾಂಗ್ರೆಸ್ ಬಹುಮತ ಪಡೆದರೆ ದಲಿತರನ್ನು ಮುಖ್ಯಮಂತ್ರಿಯಾಗಿ ಮಾಡಲು ಇದು ಸೂಕ್ತ ಸಂದರ್ಭ ಎಂಬುದು ಕಾಂಗ್ರೆಸ್‌ ಒಳಗಿರುವ ದಲಿತ ಮುಖಂಡರ ಮಾತು. ಈ ವಿಚಾರದಲ್ಲಿ ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ ಎಂದು ಸಿದ್ದರಾಮಯ್ಯ ಹೇಳಿರುವುದರಿಂದ ರಾಜ್ಯದಲ್ಲಿ ದಲಿತರ ಮುಖ್ಯಮಂತ್ರಿ ಕನಸು ನನಸಾಗಲು ಹೆಚ್ಚಿನ ಅವಕಾಶವಿದೆ ಎನ್ನುತ್ತಾರೆ ಮುಖಂಡರು.

ದಲಿತ ಮುಖ್ಯಮಂತ್ರಿ ಮಾಡುವ ಕಾಂಗ್ರೆಸ್‌ನ ಬದ್ಧತೆ ಪ್ರದರ್ಶನಕ್ಕೆ ಇದು ಸಕಾಲ. ರಾಜ್ಯದಲ್ಲಿ ಕಾಂಗ್ರೆಸ್‌ ಬಹುಮತ ಪಡೆದರೆ ದಲಿತ ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್‌ಗೆ ಇದಕ್ಕಿಂತ ಒಳ್ಳೆಯ ಸಂದರ್ಭ ಬೇಕಾಗಿಲ್ಲ.
- ಎಲ್‌. ಹನುಮಂತಯ್ಯ, ಕಾಂಗ್ರೆಸ್‌ ಮುಖಂಡ, ರಾಜ್ಯಸಭಾ ಸದಸ್ಯ

“ಲೋಕಸಭಾ ಚುನಾವಣೆಗೆ ಇದು ಯಾವ ರೀತಿಯ ಪರಿಣಾಮ ಬೀರುತ್ತದೆಯೋ ಅದು ಬೇರೆಯೇ ವಿಚಾರ. ಅದು ಸಕಾರಾತ್ಮವೂ ಆಗಬಹುದು, ನಕಾರಾತ್ಮವೂ ಆಗಬಹುದು. ಲೋಕಸಭಾ ಚುನಾವಣೆಯನ್ನು ನಿರ್ಧರಿಸುವ ರಾಷ್ಟ್ರೀಯ ವಿಚಾರಗಳೇ ಬೇರೆ ಬೇರೆಯಾಗಿರುತ್ತವೆ. ಆದರೆ, ರಾಜ್ಯದಲ್ಲಿ ದಲಿತ ಸಿಎಂ ಮಾಡಲು ಕಾಂಗ್ರೆಸ್‌ ಹೈಕಮಾಂಡ್‌ಗೆ ಈಗ ಸಕಾಲ” ಎಂಬುದು ಕಾಂಗ್ರೆಸ್‌ ಮುಖಂಡ, ರಾಜ್ಯಸಭಾ ಸದಸ್ಯ ಎಲ್‌. ಹನುಮಂತಯ್ಯ ಅವರ ಮಾತು.

“ರಾಜ್ಯದಲ್ಲಿ ದಲಿತ ಸಿಎಂ ಆಗಲು ಖಂಡಿತ ಸಾಧ್ಯತೆ ಇದೆ. ಕಾಂಗ್ರೆಸ್‌ಗೆ ಬಹುಮತ ಬಂದರೆ ದಲಿತ ಸಿಎಂ ಮಾಡಲು ಸೂಕ್ತವಾದ ಸಂದರ್ಭ ಇದು. ಒಬ್ಬರನ್ನು ತೆಗೆದು ಮತ್ತೊಬ್ಬರನ್ನು ಸಿಎಂ ಮಾಡುವುದು ಸೂಕ್ತವಲ್ಲ. ಅದರೆ, ಇದು ರಾಜ್ಯದಲ್ಲಿ ಸರಕಾರ ರಚನೆಯ ಸಂದರ್ಭದ ಆರಂಭ ಕಾಲ. ಹೈಕಮಾಂಡ್‌ ದಲಿತ ಸಿಎಂ ನಿರ್ಧಾರ ತೆಗೆದುಕೊಂಡರೆ ನನ್ನ ವಿರೋಧ ಇಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಹೈಕಮಾಂಡ್‌ ಕೂಡಾ ದಲಿತ ಸಿಎಂ ಪರವಾಗಿದೆ” ಎನ್ನುತ್ತಾರೆ ಅವರು.

ರಾಜ್ಯದಲ್ಲಿ ಕಾಂಗ್ರೆಸ್‌ ಬಹುಮತ ಪಡೆದು, ಕಾಂಗ್ರೆಸ್‌ ಹೈಕಮಾಂಡ್‌ ದಲಿತರನ್ನು ಮುಖ್ಯಮಂತ್ರಿ ಮಾಡುವ ನಿರ್ಧಾರಕ್ಕೆ ಬಂದರೆ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ. ಪರಮೇಶ್ವರ್‌ ಮತ್ತು ಕೆ.ಎಚ್‌. ಮುನಿಯಪ್ಪ ಅವರ ಪೈಕಿ ಒಬ್ಬರನ್ನು ಸಿಎಂ ಕುರ್ಚಿಯಲ್ಲಿ ಕೂರಿಸಲಿದೆ. ಮಂಗಳವಾರ ಹೊರ ಬೀಳುವ ಜನಾದೇಶದ ಮೇಲೆ ಈ ಎಲ್ಲಾ ಲೆಕ್ಕಾಚಾರಗಳೂ ನಿಂತಿವೆ.