‘ಆಕಾಶದ ಅರ್ಧ ಭಾಗ’ವಾದ ಮಹಿಳೆಯರೇಕೆ ಚುನಾವಣೆಯಲ್ಲಿ ಅರ್ಧ ಭಾಗವಾಗಿಲ್ಲ?
COVER STORY

‘ಆಕಾಶದ ಅರ್ಧ ಭಾಗ’ವಾದ ಮಹಿಳೆಯರೇಕೆ ಚುನಾವಣೆಯಲ್ಲಿ ಅರ್ಧ ಭಾಗವಾಗಿಲ್ಲ?

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಅಂತಿಮ ಹಂತದಲ್ಲಿದೆ. ಈ ಸಂದರ್ಭದಲ್ಲಿ ಮಹಿಳೆಯರ ಚುನಾವಣಾ ಭಾಗವಹಿಸುವಿಕೆ ಬಗೆಗಿನ ವಾಸ್ತವ ಚಿತ್ರಣ ಇಲ್ಲಿದೆ.

ಮಹಿಳೆಯರು ಆಕಾಶದ ಅರ್ಧ ಭಾಗವೆಂದು ಹಲವರು ಹೇಳುತ್ತಿರುತ್ತಾರೆ. ಸಮಾಜದ ಎಲ್ಲಾ ರಂಗಗಳಲ್ಲೂ ಅವರ ಕೊಡುಗೆ ಇದ್ದೇ ಇದೆ. ಆದರೆ, ರಾಜಕೀಯ ಅಧಿಕಾರ ಹಾಗೂ ಆಸ್ತಿ ವಿಷಯ ಬಂದಾಗ ಮಾತ್ರ ಕತೆ ಪೂರ್ತಿ ಬೇರೆಯೇ ಆಗಿಬಿಡುತ್ತದೆ. ಈಗ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಅಂತಿಮ ಹಂತದಲ್ಲಿದೆ. ಈ ಸಂದರ್ಭದಲ್ಲಿ ಮಹಿಳೆಯರ ಚುನಾವಣಾ ಭಾಗವಹಿಸುವಿಕೆ ಬಗೆಗಿನ ವಾಸ್ತವ ಚಿತ್ರಣ ಇಲ್ಲಿದೆ.

ಕರ್ನಾಟಕದ ಚುನಾವಣಾ ರಂಗದಲ್ಲಿ ಮಹಿಳೆಯರು ಮೊದಲಿನಿಂದಲೂ ಮತದಾರರಾಗಿ ಭಾಗವಹಿಸುತ್ತಲೇ ಬಂದಿದ್ದಾರೆ. ಆದರೆ ಅಭ್ಯರ್ಥಿಗಳಾಗಿ ಸ್ಪರ್ಧಿಸುವವರು, ಅದೇ ರೀತಿ ಗೆಲ್ಲುವ ಮಹಿಳಾ ಅಭ್ಯರ್ಥಿಗಳು ಮಾತ್ರ ತೀರಾ ಕಡಿಮೆಯೇ. ಹಿಂದೆ 1957ರ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದಲ್ಲಿ 45 ಜನ ಮಹಿಳೆಯರು ಅಭ್ಯರ್ಥಿಗಳಾಗಿದ್ದರು. ಒಟ್ಟು ಅಭ್ಯರ್ಥಿಗಳಲ್ಲಿ ಶೇ. 3 ರಷ್ಟು ಜನ ಸ್ಪರ್ಧಿಸಿದ್ದರು. ಅದರಲ್ಲಿ ಗೆದ್ದವರು 22ಜನ ಮಾತ್ರ.

2009ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 556 ಜನ ಮಹಿಳೆಯರು ಸ್ಪರ್ಧಿಸಿದ್ದರೆ ಅದರಲ್ಲಿ ಗೆದ್ದವರು ಕೇವಲ 59 ಜನರು ಮಾತ್ರ. ಅಂದರೆ ಒಟ್ಟು ಸ್ಥಾನಗಳ ಶೇ.10ರಷ್ಟು ಮಾತ್ರ. ಶಾಸನ ಸಭೆಗಳಲ್ಲಿ ಶೇ. 33ರಷ್ಟು ಮಹಿಳಾ ಮೀಸಲಾತಿ ಇರಬೇಕೆಂಬ ಮಸೂದೆ ಕೇವಲ ಕಾಗದದಲ್ಲೇ ಇದೆ. ಅದು ಸಂಸತ್ತಿನ ಅನುಮೋದನೆ ಪಡೆಯಲು ಎಲ್ಲಾ ಪಕ್ಷಗಳಲ್ಲಿರುವ ಪುರುಷ ಮನಸುಗಳೇ ಅಡ್ಡಿಯಾಗಿ ನಿಂತಿರುವುದು ಗುಟ್ಟೇನೂ ಅಲ್ಲ. ಈಗಿನ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಂಸತ್ತಿನಲ್ಲಿ ಭಾರಿ ಬಹುಮತವಿದ್ದರೂ ಈ ಮಸೂದೆ ಅನುಮೋದನೆ ಮಾಡಲು ಅದು ತಯಾರಿಲ್ಲ.

ಕರ್ನಾಟಕದ 1983ರ ವಿಧಾನಸಭಾ ಚುನಾವಣೆಯಲ್ಲಿ 38ಜನ ಮಹಿಳೆಯರು ಸ್ಪರ್ಧಿಸಿದ್ದರೆ ಗೆದ್ದವರು ಕೇವಲ ಒಬ್ಬರೇ ಒಬ್ಬರು. ಅದೇ ರೀತಿ 1985ರ ವಿಧಾನಸಭಾ ಚುನಾವಣೆಯಲ್ಲಿ 114ಜನ ಮಹಿಳೆಯರು ಸ್ಪರ್ಧಿಸಿದ್ದರೆ ಗೆದ್ದವರು ಕೇವಲ 8 ಜನರು ಮಾತ್ರ. 2013ರ ವಿಧಾನಸಭಾ ಚುನಾವಣೆಯಲ್ಲಿ 175 ಜನ ಮಹಿಳೆಯರು ಸ್ಪರ್ಧಿಸಿದ್ದರು. ಗೆದ್ದವರು ಮಾತ್ರ ಆರೇ ಜನರಾಗಿದ್ದರು. ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 2655 ಸ್ಪರ್ಧಿಗಳು ಕಣದಲ್ಲಿದ್ದರೆ ಅದರಲ್ಲಿರುವ ಮಹಿಳೆಯರು ಕೇವಲ 222 ಮಾತ್ರ.

‘ಆಕಾಶದ ಅರ್ಧ ಭಾಗ’ವಾದ ಮಹಿಳೆಯರೇಕೆ ಚುನಾವಣೆಯಲ್ಲಿ ಅರ್ಧ ಭಾಗವಾಗಿಲ್ಲ?

ಆದರೆ ಮಹಿಳಾ ಮತದಾರರ ಸಂಖ್ಯೆ ಎರಡೂವರೆ ಕೋಟಿಗೂ ಹೆಚ್ಚಿದೆ. ಅವರ ಪ್ರತಿನಿಧಿತ್ವದ ಪರಿಸ್ಥಿತಿ ಮಾತ್ರ ಈ ಮಟ್ಟದಲ್ಲಿದೆಯೆಂದರೆ ಪರಿಸ್ಥಿತಿ ಅರ್ಥವಾಗುವ ವಿಚಾರ. ಜನಸಂಖ್ಯೆಯ ಅರ್ಧ ಬಾಗವಾಗಿರುವ ಮಹಿಳೆಯರಿಗೆ ರಾಜಕೀಯ ಅದಿಕಾರದಲ್ಲಿರುವ ಪ್ರತಿನಿಧಿತ್ವದ ಸ್ಥಿತಿ ಹೀಗಿದೆ. ಇನ್ನು ಮಹಿಳಾ ಸಬಲೀಕರಣವೆನ್ನುವ ಘೋಷಣೆಗಳನ್ನು ಒಳಗೊಂಡ ಭಾಷಣಗಳಿಗೆ ಇರುವ ಬೆಲೆಯಾದರೂ ಏನು ಎಂಬ ಪ್ರಶ್ನೆ ಸಹಜವಾಗಿ ಹುಟ್ಟುತ್ತದೆ. ಪಂಚಾಯಿತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ನೀಡಬೇಕೆಂಬ ತಿದ್ದುಪಡಿ ಮಾಡಿದ್ದರೂ ಅದಿನ್ನೂ ಕಾರ್ಯಗತವಾಗೇ ಇಲ್ಲ.

ಈಗಲೂ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಕೇವಲ ಶೇ. 33ರಷ್ಟು ಮಾತ್ರ ಮೀಸಲಾತಿ ಚಾಲ್ತಿಯಲ್ಲಿದೆ. ಹೋಲಿಕೆಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಾಗಿದ್ದರೂ ಆಲ್ಲಿ ಹೆಚ್ಚಾಗಿ ಅಧಿಕಾರದ ಚಲಾವಣೆ ಮಾಡುವವರು ಪುರುಷರೇ ಆಗಿರುವುದು ನಮ್ಮ ವ್ಯವಸ್ಥೆಯ ಕೈಗನ್ನಡಿ. ಅಲ್ಲದೇ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳಿಗೆ ಈಗ ಇರುವ ಅಧಿಕಾರ ತೀರಾ ಕಡಿಮೆ. ಅಲ್ಲಿನ ಪಿಡಿಒ, ಕಾರ್ಯದರ್ಶಿಗಳಂತಹವರಿಗೆ ಹೆಚ್ಚು ಅಧಿಕಾರವಿದೆ.

ಅದೂ ಅಲ್ಲದೇ ಸರ್ಕಾರದ ಕಾರ್ಯಕ್ರಮಗಳನ್ನು ಪ್ರಾದೇಶಿಕವಾಗಿ ಜಾರಿಮಾಡುವುದೇ ಪಂಚಾಯತಿಗಳ ಪ್ರಧಾನ ಕೆಲಸವನ್ನಾಗಿ ಮಾಡಲಾಗಿದೆ. ಸ್ಥಳೀಯವಾಗಿ ನಿರ್ಣಯಗಳನ್ನು ತೆಗೆದುಕೊಂಡು ಜಾರಿಮಾಡುವ ಅಧಿಕಾರ ಪಂಚಾಯತ್ ಸಂಸ್ಥೆಗಳಿಗೆ ಇಲ್ಲವೆಂದೇ ಹೇಳಬೇಕು. 2010ರ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಗಳಲ್ಲಿ ಶೇ50ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಾಗಿ ಇಡಲಾಗಿತ್ತು. ಆದರೆ ಪ್ರಮುಖ ಪಕ್ಷಗಳಿಗೆ ಆ ಮಟ್ಟದಲ್ಲಿ ಮಹಿಳಾ ಸ್ಪರ್ಧಾಳುಗಳನ್ನು ಕಂಡುಕೊಳ್ಳಲೇ ಕಷ್ಟವಾಗಿತ್ತೆಂದು ಹೇಳಲಾಗಿತ್ತು.

ಪುರುಷ ಪ್ರಾಬಲ್ಯವಿರುವ ರಾಜಕೀಯ ಕಣಕ್ಕೆ ಮಹಿಳೆಯರು ಬರಲು ಹಿಂಜರಿದರು. ರಾಜಕಾರಣಿಗಳಿಗೆ ಯಾವುದೇ ಬೆಲೆ ಇರುವುದಿಲ್ಲ. ಜನರ ಮಧ್ಯೆ ಅವಮಾನ ಅನುಭವಿಸಬೇಕಾಗುತ್ತದೆ, ತಮಗೆ ಅಲ್ಲಿ ಗೌರವ ಇರುವುದಿಲ್ಲ, ಅಲ್ಲದೆ ತಮಗೆ ಅಲ್ಲಿ ಅಧಿಕಾರ ಚಲಾಯಿಸಲು ಪಕ್ಷದ ಮುಖಂಡರುಗಳು ಬಿಡುವುದಿಲ್ಲ ಎಂಬ ಕಾರಣಗಳು ಬಲವಾಗಿ ಮಹಿಳೆಯರ ಭಾಗದಿಂದ ಬಂದಿದ್ದವು. ಅಲ್ಲದೇ ಈ ರಾಜಕಾರಣದ ಬಗ್ಗೆ ಮಹಿಳೆಯರಲ್ಲಿ ಅತೀವ ನಿರಾಸಕ್ತಿಯಿದೆ. ಯಾವುದಾದರೂ ಕೆಲಸ ನೋಡಿಕೊಂಡು ಬದುಕು ಸಾಗಿಸಿದರೆ ಸಾಕೆಂಬ ಭಾವನೆಗಳೇ ಹೆಚ್ಚಿನ ಮಹಿಳೆಯರದು.

ಇನ್ನು ರಾಜಕಾರಣದ ಹೆಸರಲ್ಲಿ ಗಲಾಟೆಗಳು, ಜಗಳಗಳು, ಒತ್ತಡತಂತ್ರಗಳು, ಬೆದರಿಕೆಗಳು ಹೀಗೆ ಹಲವು ಜಂಜಾಟಗಳ ಗೊಡವೆಯೇ ಬೇಡವೆಂದು ಮಹಿಳೆಯರು ಈ ರಾಜಕಾರಣದಿಂದ ಬಹಳ ದೂರ ಉಳಿದುಬಿಟ್ಟಿದ್ದಾರೆ. ಪಂಚಾಯತಿ ಚುನಾವಣೆಗಳ ನೆಪದಲ್ಲಿ ಮನೆಗಳು ಒಡೆದು ಚೂರಾಗಿರುವ ಹಲವು ಉದಾಹರಣೆಗಳು ನಮ್ಮ ಮುಂದಿರುವಾಗ ಅಂತಹ ಸಾಹಸಗಳಿಗೆ ಮಹಿಳೆಯರು ಹಿಂದೆ ಮುಂದೆ ನೋಡುವುದು ಸಹಜ.

“ಮಹಿಳೆಯರು ಚುನಾವಣಾ ಹಾಗೂ ರಾಜಕೀಯ ಪ್ರಕ್ರಿಯೆಗಳಲ್ಲಿ ಕಡಿಮೆ ಭಾಗವಹಿಸಲು ಕಾರಣ; ಅವರಲ್ಲಿರುವ ಅಜ್ಞಾನ ಹಾಗೂ ಸಾಮಾನ್ಯ ಜ್ಞಾನದ ಕೊರತೆ. ಶಿಕ್ಷಣ, ಓದು ಇದ್ದವರೂ ಕೂಡ ಪ್ರಜಾಪ್ರಭುತ್ವ, ಸಂವಿಧಾನಗಳ ಬಗ್ಗೆ ತಿಳಿಯಲು ಹೋಗುವುದಿಲ್ಲ. ತಮ್ಮ ರಾಜಕೀಯ ಕರ್ತವ್ಯಗಳ ಅರಿವನ್ನು ಬೆಳೆಸಿಕೊಳ್ಳುವ ಪ್ರಯತ್ನ ಮಾಡದೇ ಟಿವಿ ಧಾರವಾಹಿಗಳು, ಅಕ್ಷಯ ತೃತೀಯದಂತಹ ಕಂದಾಚಾರವನ್ನು ಬಳಸಿಕೊಂಡು ಕೊಳ್ಳುಬಾಕತನ ಪ್ರಾಯೋಜಿಸುವ ಕಾರ್ಯಕ್ರಮಗಳಲ್ಲಿ ಮುಳುಗುತ್ತಾರೆ” ಎಂದು ಬೇಸರ ವ್ಯಕ್ತಪಡಿಸುತ್ತಾರೆ ಮಾಜಿ ಸಚಿವೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಬಿ.ಟಿ. ಲಲಿತಾ ನಾಯಕ್.

‘ಆಕಾಶದ ಅರ್ಧ ಭಾಗ’ವಾದ ಮಹಿಳೆಯರೇಕೆ ಚುನಾವಣೆಯಲ್ಲಿ ಅರ್ಧ ಭಾಗವಾಗಿಲ್ಲ?
ಶ್ರೀಮಂತ ಹಾಗೂ ಬಡ ವರ್ಗದ ಮಹಿಳೆಯರು ದೇವಸ್ಥಾನ ಮತ್ತು ಮಠಗಳ ಪ್ರಭಾವಗಳಿಗೆ ಹೆಚ್ಚು ಸಿಲುಕಿ ರಾಜಕೀಯ ಪ್ರಜ್ಞೆಯ ಕಡೆ ಗಮನ ನೀಡುವುದಿಲ್ಲ. ಪಂಚಾಯತ್ ಸಂಸ್ಥೆಗಳಲ್ಲಿ ಭಾಗವಹಿಸುವುದರಿಂದ ಗ್ರಾಮೀಣ ಮಹಿಳೆಯರು ರಾಜಕೀಯ ಗ್ರಹಿಕೆಯಲ್ಲಿ ನಗರದ ಮಹಿಳೆಯರಿಗಿಂತ ಮುಂದಿದ್ದಾರೆ.
- ಬಿ.ಟಿ. ಲಲಿತಾ ನಾಯಕ್, ಮಾಜಿ ಸಚಿವೆ ಹಾಗೂ ಸಾಮಾಜಿಕ ಕಾರ್ಯಕರ್ತೆ

ಮಹಿಳಾ ಮತದಾರರ ಮತಗಳು ಈ ಬಾರಿ ನಿರ್ಣಾಯಕವೆಂದು ಹೇಳಲಾಗುತ್ತಿದೆ. 2013ರ ಚುನಾವಣಾ ಸಂದರ್ಭದಲ್ಲಿ ಒಟ್ಟು ಮೂರು ಕೋಟಿ ಹದಿಮೂರು ಲಕ್ಷಕ್ಕೂ ಹೆಚ್ಚು ನೊಂದಾಯಿತ ಮಹಿಳಾ ಮತದಾರರಲ್ಲಿ ಒಂದೂವರೆ ಕೋಟಿಗೂ ಹೆಚ್ಚು ಮಹಿಳಾ ಮತದಾರರು ತಮ್ಮ ಮತವನ್ನು ಚಲಾಯಿಸಿದ್ದರು. 2018ರ ಈ ಚುನಾವಣೆಯಲ್ಲಿ ಒಟ್ಟು ಎರಡು ಕೋಟಿ ನಲವತ್ತನಾಲ್ಕು ಲಕ್ಷ ಎಪ್ಪತೊಂದು ಸಾವಿರದ ಒಂಬೈನೂರ ಎಂಬತ್ತು ನೊಂದಾಯಿತ ಮಹಿಳಾ ಮತದಾರರಿದ್ದಾರೆ ಎಂದು ಚುನಾವಣಾ ಆಯೋಗ ಹೇಳುತ್ತಿದೆ.

ಕಳೆದ 2013ರ ಚುನಾವಣೆಯಲ್ಲಾಗಲೀ ಅದರ ಹಿಂದಿನ ಚುನಾವಣೆಗಳಲ್ಲಾಗಲೀ ನೊಂದಾಯಿತ ಮಹಿಳಾ ಮತದಾರರಲ್ಲಿ ಅರ್ಧಕ್ಕಿಂತಲೂ ಕಡಿಮೆ ಜನರು ತಮ್ಮ ಮತ ಚಲಾಯಿಸಿರುವುದು ಕಾಣಿಸುತ್ತದೆ. 2008ರ ಚುನಾವಣೆಗಿಂತಲೂ 2013ರಲ್ಲಿ ಮಹಿಳಾ ಮತಚಲಾವಣೆಯಲ್ಲಿ ಒಂದು ಸಣ್ಣ ಮಟ್ಟದ ಬೆಳೆವಣಿಗೆಯಾಗಿದ್ದು ಬಿಟ್ಟರೆ ಗಣನೀಯವಾಗಿದ್ದೇನೂ ಕಾಣುವುದಿಲ್ಲ.

ಸಾಮಾನ್ಯವಾಗಿ ಚುನಾವಣೆಗಳ ಬಗ್ಗೆ ಜನಸಾಮಾನ್ಯರಲ್ಲಿ ನಿರಾಸಕ್ತಿ ಇದೆ. ಇದಕ್ಕೆ ನಗರದ ವಿದ್ಯಾವಂತರೆನಿಸಿಕೊಂಡವರು ಕೂಡ ಹೊರತಾಗಿಲ್ಲ. ಹಾಗೆ ನೋಡಿದಾಗ ಗ್ರಾಮೀಣ ಭಾಗಕ್ಕಿಂತಲೂ ನಗರ ಪ್ರದೇಶಗಳಲ್ಲಿ ಚುನಾವಣಾ ನಿರಾಸಕ್ತಿ ಹೆಚ್ಚಾಗೇ ಇದೆ. ಉದಾಹರಣೆಗೆ ಗ್ರಾಮೀಣ ಭಾಗದಲ್ಲಿ ಶೇ 45 ರಷ್ಟು ಜನ ಮತ ಚಲಾವಣೆ ಮಾಡಿದ್ದರೆ ನಗರ ಪ್ರದೇಶದಲ್ಲಿ ಅದು ಶೇ 40ಕ್ಕೂ ಕಡಿಮೆಯಾಗಿರುತ್ತದೆ. ಬಹುತೇಕ ಸಂದರ್ಭಗಳಲ್ಲಿ ಇದು ವಾಡಿಕೆಯಾಗಿಯೇ ಎದ್ದು ಕಾಣಿಸುವ ವಿಚಾರ.

ಸಾಂದರ್ಭಿಕ ಚಿತ್ರ. 
ಸಾಂದರ್ಭಿಕ ಚಿತ್ರ. 

ಮತ ಚಲಾವಣೆಯಲ್ಲಿರುವ ನಿರಾಸಕ್ತಿಗಳಿಗೆ ಹಲವು ಕಾರಣಗಳಿವೆ. ಮತ ಪಡೆದು ಅಧಿಕಾರ ಪಡೆದವರು ನಂತರ ತಮ್ಮನ್ನು ಕಣ್ಣೆತ್ತಿಯೂ ಕೂಡ ನೋಡುವುದಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸದೇ ತಮ್ಮ ತಮ್ಮ ಸ್ವಾರ್ಥ ಹಾಗೂ ಲೂಟಿಗಳಲ್ಲಿ ಮುಳುಗಿರುತ್ತಾರೆ ಎನ್ನುವುದು ಅದರಲ್ಲಿ ಬಹು ಮುಖ್ಯವಾದುದು. ಮಹಿಳೆಯರು ಮುಖ್ಯವಾಗಿ ಮನೆ, ಕುಟುಂಬಗಳ ಜಂಜಾಟಗಳಲ್ಲೇ ಮುಳುಗಿರುತ್ತಾರೆ. ಬಹುತೇಕವಾಗಿ ಅವರು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇರುವುದಿಲ್ಲ. ಮಹಿಳೆಯರು ಹಲವು ನಿರ್ಬಂಧಗಳು ಮತ್ತು ಒತ್ತಡಗಳಲ್ಲಿ ಬದುಕು ಸಾಗಿಸುತ್ತಿರುವಾಗ ಈ ರಾಜಕೀಯ ಹಾಗೂ ಚುನಾವಣೆಗಳಿಂದ ದೂರವಿರಲು ಬಯಸುವುದು ಸಹಜ.

ಯಾರಿಗೆ ಮತ ನೀಡಿದರೂ ಬದಲಾವಣೆ ಏನಿರಲು ಸಾಧ್ಯ? ಎನ್ನುವ ನಿರಾಶೆಯೂ ಬಹಳ ಜನರಲ್ಲಿದೆ. ಇನ್ನು ಪಕ್ಷಗಳು, ಅಭ್ಯರ್ಥಿಗಳು ಕೊಡುಗೆಗಳ ಹೆಸರಿನಲ್ಲಿ ನೀಡುವ ಮತಲಂಚಗಳಿಗೆ ಬಲಿಯಾಗುವ ಊರಿನ ಮುಖಂಡರೆನಿಸಿಕೊಂಡವರು ಇಲ್ಲವೇ ಕುಟುಂಬಗಳ ಮುಖ್ಯಸ್ಥರು ಹೆಚ್ಚು ಲಂಚ ಸಿಗುವ ಕಾರಣಗಳಿಗೆ ತಮ್ಮ ತಮ್ಮ ಊರು ಮನೆಯ ಎಲ್ಲಾ ಮತಗಳನ್ನು ಬಿಕರಿಗಿಡುವ ಕಾರ್ಯ ಮಾಡುತ್ತಾ ಬಂದಿರುವುದು ವಾಡಿಕೆ.

ಈ ಎಲ್ಲಾ ನಾಟಕಗಳು, ಲಂಚಾವತಾರಗಳನ್ನು ನೇರವಾಗಿ ನೋಡುತ್ತಾ ಬಂದಿರುವ ಜನಸಾಮಾನ್ಯರು ಮತ ಚಲಾಯಿಸುವ ಪ್ರಕ್ರಿಯೆಗಳಿಂದ ದಿನೇ ದಿನೇ ದೂರವಾಗುತ್ತಿರುವುದರ ಪರಿಣಾಮ ಮಹಿಳೆಯರನ್ನೂ ಪ್ರಭಾವಿಸುತ್ತಿದೆ. ಹಾಗಾಗೇ ಚುನಾವಣಾ ಆಯೋಗ ಮತ ಚಲಾಯಿಸುವಂತೆ ಟಿವಿ ಇನ್ನಿತರ ಮಾಧ್ಯಮಗಳಲ್ಲಿ ಭಾರಿ ಪ್ರಚಾರ ನಡೆಸಬೇಕಾದ ಸ್ಥಿತಿ ಬಂದಿದೆ. ಸಿನಿಮಾ ಹಾಗೂ ಕ್ರಿಕೆಟ್ ತಾರೆಯರಿಂದ ಜನರಿಗೆ ಮತ ಚಲಾಯಿಸುವಂತೆ ಹೇಳಿಸುತ್ತಿರುವುದು ನಮ್ಮ ಪ್ರಜಾಪ್ರಭುತ್ವದ ವ್ಯಂಗ್ಯವೆನ್ನಬಹುದೇನೋ.