ಯಂಡಮೂರಿ ಕಾದಂಬರಿ ನೆನಪಿಸಿದ ಶ್ರೀರಾಮುಲು ‘160 ಕೋಟಿ ಡೀಲ್’ ವೀಡಿಯೋ!
COVER STORY

ಯಂಡಮೂರಿ ಕಾದಂಬರಿ ನೆನಪಿಸಿದ ಶ್ರೀರಾಮುಲು ‘160 ಕೋಟಿ ಡೀಲ್’ ವೀಡಿಯೋ!

ಈ ಹೊತ್ತಿನಲ್ಲಿ ಇದೊಂದು ರಾಜಕೀಯ ನಡೆದ ಇದ್ದರೂ ಇರಬಹುದು. ಆದರೆ ವಿಡಿಯೋದಲ್ಲಿನ ಮಾತುಕತೆಗಳು ವಿಶ್ವಾಸಾರ್ಹ ಎನ್ನಿಸಿಕೊಂಡಿದ್ದ ನ್ಯಾಯಾಂಗ ವ್ಯವಸ್ಥೆಯನ್ನೇ ಅಣಕಿಸುವಂತಿದೆ. 

‘ಮಳೆ ನಿಂತರೂ ಮರದನಿ ನಿಲ್ಲದು’ ಎಂಬಂತೆ ಅಕ್ರಮ ಗಣಿಗಾರಿಕೆ ಸುತ್ತಲಿನ ವಿಚಾರ ಮತ್ತೆ ಮುನ್ನೆಲೆ ಬಂದಿದೆ. ಈ ಬಾರಿ ಮತ್ತೊಮ್ಮೆ ಗಣಿಧಣಿಗಳೊಂದಿಗೆ ಕೇಳಿ ಬಂದಿರುವ ಹೆಸರು ದೇಶದ ನ್ಯಾಯಾಂಗ ವ್ಯವಸ್ಥೆಯ ಸರ್ವೋಚ್ಛ ನ್ಯಾಯಾಧೀಶರ ವಿರುದ್ಧ.

ಇತ್ತೀಚೆಗೆ ಸದ್ಯ ಸಿಜೆಐ ಆಗಿರುವ ದೀಪಕ್ ಮಿಶ್ರಾ ವಿರುದ್ಧ ಅಕ್ರಮ ವ್ಯವಹಾರಗಳು, ತೀರ್ಪು ನೀಡಿಕೆಯಲ್ಲಿ ಅನುಮಾನ, ಕೇಸುಗಳ ಹಂಚಿಕೆಯಲ್ಲಿ ತಾರತಮ್ಯ ಮತ್ತಿತರ ಆರೋಪಗಳು ಕೇಳಿ ಬಂದಿದ್ದವು. ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಸಿಜೆಐ ಪದ್ಯಚ್ಯುತಿ ಕೋರಿ ರಾಜ್ಯಸಭಾ ಅಧ್ಯಕ್ಷರು ಹಾಗೂ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರೂ ಅವು ತಿರಸ್ಕೃತವಾಗಿದ್ದವು. ಈ ವೇಳೆ ಹಲವು ನ್ಯಾಯಾಧೀಶರು ನ್ಯಾಯಾಂಗವನ್ನು ಅನುಮಾನಿಸುವುದು ಸರಿಯಲ್ಲ ಎಂದು ಪರೋಕ್ಷವಾಗಿ ಟೀಕಿಸಿದ್ದರು. ಆದರೆ ಕರ್ನಾಟಕದ ಚುನಾವಣೆ ಹಿನ್ನೆಲೆಯಲ್ಲಿ ಈಗ ಸಿಜೆಐ ವಿರುದ್ಧವೇ ಕೇಳಿ ಬಂದಿರುವ ಆರೋಪ ನ್ಯಾಯಾಂಗದ ವಿಶ್ವಾಸವನ್ನು ಮತ್ತೆ ಪ್ರಶ್ನಿಸುವಂತೆ ಮಾಡಿದೆ.

ಬಿಜೆಪಿ ನಾಯಕ ಶ್ರೀರಾಮುಲು ಅವರು ತಮ್ಮ ಆಪ್ತ ಸ್ನೇಹಿತ ಹಾಗೂ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಆರೋಪಿಯಾಗಿರುವ ಓಬಳಾಪುರಂ ಮೈನಿಂಗ್ ಕಂಪನಿ ( ಓಎಂಸಿ) ಪ್ರಕರಣದಲ್ಲಿ ತಮ್ಮ ಪರ ತೀರ್ಪು ಕೊಡುವಂತೆ ನಡೆಡೆಸಿದ ಡೀಲ್ ವಿಡಿಯೋ ಹೊರಬಿದ್ದಿದೆ. 2010ರಲ್ಲಿ ಸುಪ್ರೀಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್ ಅವರನ್ನು ಒಪ್ಪಿಸಲು ಡೀಲ್ ಕುದುರಿಸುವ ದೃಶ್ಯಗಳು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಜನರಿಗೆ ತಲುಪಿವೆ. ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವ ಈ ಹೊತ್ತಿನಲ್ಲಿ ಇದೊಂದು ರಾಜಕೀಯ ನಡೆದ ಇದ್ದರೂ ಇರಬಹುದು. ಆದರೆ ವಿಡಿಯೋದಲ್ಲಿನ ಮಾತುಕತೆಗಳು ವಿಶ್ವಾಸಾರ್ಹ ಎನ್ನಿಸಿಕೊಂಡಿದ್ದ ನ್ಯಾಯಾಂಗ ವ್ಯವಸ್ಥೆಯನ್ನೇ ಅಣಕಿಸುವಂತಿದೆ. ಹೀಗಾಗಿ ವಿಡಿಯೋದ ರಾಜಕೀಯ ಪರಿಣಾಮಗಳ ಆಚೆಗೂ ನ್ಯಾಯಂಗ ವ್ಯವಸ್ಥೆಯ ಹಿನ್ನೆಲೆಯಲ್ಲಿ ಗಂಭೀರವಾದುದು.

ಕೇಂದ್ರ ಹಸಿರು ಪೀಠ ಬಳ್ಳಾರಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಪರಿಸರಕ್ಕೆ ಭಾರಿ ಪ್ರಮಾಣದಲ್ಲಿ ನಷ್ಟವಾಗುತ್ತಿದೆ ಎಂದು ಗಣಿಗಾರಿಕೆಗೆ ನಿಷೇಧ ಹೇರಿತ್ತು. ಈ ವೇಳೆ ಎಚ್ಚರಗೊಂಡ ಗಣಿಧಣಿಗಳು ಸಾವಿರಾರು ಕೋಟಿ ರೂಪಾಯಿ ಆದಾಯ ತಂದುಕೊಡುತ್ತಿದ್ದ ಅಕ್ರಮ ಗಣಿ ಸಾಮ್ರಾಜ್ಯವನ್ನು ಉಳಿಸಿಕೊಳ್ಳುವ ಸಲುವಾಗಿ ಅಕ್ರಮ ದಾರಿ ಹಿಡಿಯುವ ಮಾತುಗಳು ದೃಶ್ಯಾವಳಿಯಲ್ಲಿದೆ.

ವಿಡಿಯೋದಲ್ಲಿ ಶ್ರೀರಾಮುಲು. 
ವಿಡಿಯೋದಲ್ಲಿ ಶ್ರೀರಾಮುಲು. 

ಆ ಸಮಯದಲ್ಲಿ ನಡೆದ ಈ ಡೀಲ್ ಮಾತುಕತೆಯ ಭಾಗವಾಗಿಯೇ ಗಣಿಧಣಿಗಳು ಹೈಕೋರ್ಟ್ ನಲ್ಲಿ ಹಸಿರು ಪೀಠದ ಆದೇಶವನ್ನ ಪ್ರಶ್ನಿಸಿದರು. ಈ ವೇಳೆ ಹೈಕೋರ್ಟ್ ಗ್ರೀನ್ ಟ್ರಿಬ್ಯುನಲ್ ಆದೇಶವನ್ನು ತಡೆಹಿಡಿದು ಗಣಿಗಾರಿಕೆಗೆ ಓಕೆ ಅಂದಿತ್ತು. ಆದರೆ ಇದನ್ನೂ ಪ್ರಶ್ನಿಸಿ ಕೆಲವರು ಸುಪ್ರೀಂಕೋರ್ಟ್ ಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಮುಖ್ಯ ಲಂಚಾವತಾರ ಆರಂಭವಾಗುವುದೇ ಈಗ. ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿಯುವ ಅಥವಾ ತಳ್ಳಿ ಹಾಕುವ ಆದೇಶವನ್ನು ಪಡೆಯಲು ಗಣಿಧಣಿಗಳು ಮಧ್ಯವರ್ತಿಗಳ ಮೂಲಕ ಯತ್ನಿಸಿದ್ದಾರೆ. ಅಂದು ಸಚಿವರಾಗಿದ್ದ ಶ್ರೀರಾಮುಲು ಅಂದಿನ ಸಿಜೆಐ ಅಳಿಯ ಶ್ರೀನಿಜನ್, ಮಂಗಳೂರಿನ ಒಬ್ಬ ಸ್ವಾಮೀಜಿ, ಮಧ್ಯವರ್ತಿ ಕುಬಾಳನ್, ಕ್ಯಾಪ್ಟನ್ ರೆಡ್ಡಿ ಮತ್ತಿತರರು ಸೇರಿ ಹಣದ ವ್ಯವಹಾರದ ಮಾತುಕತೆ ನಡೆಸುವುದು ಇಲ್ಲಿ ರಿವೀಲ್ ಆಗಿವೆ.

ಈ ಸಂಬಂಧ ರಾಮುಲು, ಸಿಜೆಐ ಅಳಿಯ ಶ್ರಿನಿಜನ್ , ಏಜೆಂಟ್‌ಗಳು ಸೇರಿ ಕೊಚ್ಚಿ, ಬೆಂಗಳೂರು, ಹೈದರಾಬಾದ್ ಸೇರಿದಂತೆ ಮೂರರಿಂದ ನಾಲ್ಕು ಭೇಟಿಗಳು ನಡೆದಿವೆ. ಹೈಕೋರ್ಟ್ ತೀರ್ಪು ಎತ್ತಿಹಿಡಿಯಲು ಒಟ್ಟು 160 ಕೋಟಿ ರೂಪಾಯಿಗಳ ಡೀಲನ್ನು ಅಂತಿಮಗೊಳಿಸಲಾಗಿರುತ್ತದೆ. ಅದರಂತೆ 160 ಕೋಟಿಗಳನ್ನು ಕಳಿಸಿ ಕೊಟ್ಟಿದ್ದೇನೆ ಎಂದು ಶ್ರೀರಾಮುಲು ಹೇಳಿಕೊಳ್ಳುತ್ತಾರೆ.

ಆದರೆ ಶ್ರೀನಿಜನ್ ಮತ್ತು ಮೂವರು ಏಜೆಂಟರ್ ಗಳು ಇದನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾರೆ. ತಮಗೆ ಕೇವಲ ನೂರು ಕೋಟಿಯನ್ನು ಮಾತ್ರ ತಲುಪಿಸಲಾಗಿದೆ ಎಂದು ಸಿಜೆಐ ಅಳಿಯ ಶ್ರೀನಿಜನ್ ಬೇಸರ ಮಾತುಗಳಲ್ಲಿ ಹೇಳುತ್ತಾರೆ. ನೂರು ಕೋಟಿಯಲ್ಲಿ ಯಾರ್ಯಾರಿಗೆ ಹಂಚಿಕೆ ಆಗಿದೆ ಎಂದೂ ಹೇಳಲಾಗುತ್ತದೆ. ಅಲ್ಲದೆ ಶ್ರೀರಾಮುಲು ಅವರು ಕೇವಲ 100 ಕೋಟಿಯನ್ನು ಮಾತ್ರ ಕೊಟ್ಟು 60 ಕೋಟಿಯನ್ನು ಕೊಡದೆ ಯಾಮಾರಿಸುತ್ತಿದ್ದಾರೆ ಎಂಬ ಆರೋಪಗಳು ವ್ಯಕ್ತವಾಗುತ್ತವೆ.

ವಿಡಿಯೋ ಗ್ರಾಬ್. 
ವಿಡಿಯೋ ಗ್ರಾಬ್. 

ತೀರ್ಪು ಹೊರ ಬೀಳುವುದು ಸಿಜೆಐ ಬಾಲಕೃಷ್ಣ ಅವರು ನಿವೃತ್ತರಾಗುವ ಒಂದು ದಿನ ಮೊದಲು. ಹೀಗಾಗಿ ಒಂದು ಹಂತದಲ್ಲಿ ಸಿಜೆಐ ಅಳಿಯ ಶ್ರೀನಿಜನ್ “ ನೋಡಿ ಈಗಲೂ ನಮಗೆ ಹಲವು ಮಂದಿ ಗೊತ್ತಿದ್ದಾರೆ. ತೀರ್ಪನ್ನು ಉಲ್ಟಾ ಮಾಡುವ ಶಕ್ತಿ ನಮಗಿದೆ” ಎಂದು ಬೆದರಿಸುವ ಮಾತುಗಳೂ ಚರ್ಚೆಯಲ್ಲಿ ಇವೆ.

ಪಕ್ಕಾ ಯಂಡಮೂರಿ ಕಾದಂಬರಿ:

ಇಡೀ ದೃಶ್ಯಗಳು ಯಂಡಮೂರಿ ವೀರೇಂದ್ರನಾಥ್ ಅವರ ಸಸ್ಪೆನ್ಸ್ ಕಾದಂಬರಿಯನ್ನು ನೆನಪಿಸುತ್ತವೆ. ಎಲ್ಲಾ ಹವಾಲಾ ಮತ್ತು ಬಹುಕೋಟಿ ಹಗರಣಗಳಲ್ಲಿ ಕಂಡು ಬರುವಂತೆ ಇಲ್ಲಿ ಸ್ಥಳದಿಂದ ಸ್ಥಳ, ವ್ಯಕ್ತಿಯಿಂದ ವ್ಯಕ್ತಿಗಳು ಬದಲಾಗುತ್ತಾ ಹೋಗುತ್ತಾರೆ. ಚರ್ಚೆಯಲ್ಲಿ  ಏಜೆಂಟ್ ಗಳು ಶ್ರೀರಾಮುಲು ಅವರನ್ನು ನೀವು ಸಿಎಂ ಆಗುತ್ತೀರಿ ಎಂದು ಹೊಗಳುವುದು, ಮೂವರು ಸಹೋದರರು ಸತ್ಯವಂತರು ಎಂದು ಏಜೆಂಟ್ ಗಳು ರೆಡ್ಡಿ ಸಹೋದರರಿಗೆ ಬಹುಪರಾಕ್ ಹಾಕುವುದು, ಗಾಲಿ ಜನಾರ್ದನ ರೆಡ್ಡಿಯ ಗುಣಗಾನ ಮಾಡುವುದೂ ನಡೆಯುತ್ತದೆ.

ವಿಚಿತ್ರ ಎಂದರೆ ಗಣಿಗಾರಿಕೆಯೇ ಅಕ್ರಮ ಇದನ್ನು ಸಕ್ರಮ ಮಾಡಿಕೊಳ್ಳಲು ಅಕ್ರಮವಾಗಿ ಸಿಜೆಐ ಒಬ್ಬರನ್ನು ಫಿಕ್ಸ್ ಮಾಡಲು ಕೂತ ಏಜೆಂಟಗಳು ಮತ್ತು ಗಣಿಧಣಿಗಳು ಒಬ್ಬರನ್ನೊಬ್ಬರು ಪರಸ್ಪರ ಗುಣಗಾನ ಮಾಡಿಕೊಳ್ಳುತ್ತಾರೆ.  ಹೊಗಳಿಕೆ, ಪ್ರಶಂಸೆ, ಪ್ರಾಮಾಣಿಕತೆಯ ಮಾತನಾಡುತ್ತಾರೆ. ಇವೆಲ್ಲಾ ವ್ಯವಸ್ಥೆಯೊಂದನ್ನು ಅಣಕಿಸುವಂತೆ ಭಾಸವಾಗುತ್ತವೆ ಮತ್ತು ತಮಾಷೆಯಾಗಿ ಕಾಣುತ್ತೆ. ಮಧ್ಯವರ್ತಿಗಳು ಡೀಲು ಕುದುರಿಸಲು ಬಳಸುವ ಭಾಷೆ, ನಾಜೂಕು, ವಂದಿಮಾಗದತನ ಇತ್ಯಾದಿಗಳು ಸಿನಿಮಾ ಮಾದರಿಯಲ್ಲಿ ಬಯಲಾಗಿವೆ.

ವಿಡಿಯೋದಲ್ಲಿ ಏನಿದೆ?:

ಸಚಿವ ಶ್ರೀರಾಮುಲು, ಸಿಜೆಐ ಅಳಿಯ ಶ್ರೀನಿಜನ್, ಗಣಿ ಏಜೆಂಟ್ ಗಳಾದ ಕುಬಾಳನ್, ಕ್ಯಾಪ್ಟನ್ ರೆಡ್ಡಿ, ಮಂಗಳೂರಿನ ಒಬ್ಬರು ಜ್ಯೋತಿಷಿ ಸೇರಿದಂತೆ ನಡೆದ ಸಂವಾದದ ಪೂರ್ಣಪಾಠ ಇಲ್ಲಿದೆ.

9.30: ಶ್ರೀರಾಮುಲು ( ಫೋನಿನಲ್ಲಿ ಮಾತನಾಡುತ್ತಾ) ಹಲೋ ಸಾರ್.. ನಮಸ್ಕಾರ್ ಎಲ್ಲಿದ್ದೀರಿ ಸಾರ್? ಸಂಜೆ ಮಾತನಾಡೋಣ ಶ್ರೀರಾಮುಲು ಅಂದಿದ್ದಿರಿ. ಯಾವತ್ತು ಮಾತಾಡೋಣ ಸಾರ್.  ನಾನು ಕ್ಯಾಪ್ಟನ್ ಕೋ ಬ್ರದರ್ ಸರ್. ಬಂದಿದಾರೆ ಸಾರ್ ಬಂದಿದ್ದಾರೆ. ಯಾವತ್ತಾನ ಒಂದಿನ ಮಾತಾಡೋಣ ಶ್ರೀರಾಮುಲು ಅಂದಿದ್ರಿ. ಇನ್ನು ಈವತ್ತು ನೀವು ಬರುವುದು ಬೇಡ ಸಾರ್. ನಾನು ಹೊರಗೆ ಹೋಗ್ತಿದ್ದೀನಿ. ನಾನು ಈ ವಾರವೆಲ್ಲಾ ಇರ್ತೇನೆ. ಏನಂದ್ರೆ ಅವರು ನನ್ನ ಮೇಲೆ ತಪ್ಪು ತಿಳಿಬಾರದು ಅಂತ ಅಷ್ಟೆ. ಅಂದ್ರೆ ಯಾವಾಗ ಸಿಕ್ತಿರಿ ಸಾರ್. ನಾನೇ ಬೇಕಾದ್ರೆ ಬರುತ್ತೇನೆ. ಯಾವತ್ತು ಸೇರಬಹುದು ಸಾರ್. ಸಾರ್ ನಾಳೆ ನ್ಯೂಝಿಲೆಂಡ್ ಹೋಗ್ತಾ ಇದೀರಾ. ಆಗಿದ್ರೆ ಮತ್ತೆ ಲೇಟಾಗುತ್ತೆ ಸಾರ್. ನಾಳೆ ಬೆಳಿಗ್ಗೆನಾ ಸಾರ್ ? ಓಕೆ ಸಾರ್ 9.15ಗೆ ಮಾತನಾಡೋಣ ಆಗಬಹುದು.

ಏಜೆಂಟ್ : ಸರ್ ಈ ವಿಚಾರದಲ್ಲಿ ಮಾತ್ರ  ಏನೇ ಇರಲಿ ನಾವು ಸಂಬಂಧಿಕರು, ನಮ್ಮ ಸಂಬಂಧಗಳು ಚೆನ್ನಾಗಿರಬೇಕು. ನನಗೆ ಈ ಟೆನ್ಷನ್ ಇವೆಲ್ಲಾ ಲೈಫಲ್ಲೇ ಇಲ್ಲ.

ಶ್ರೀರಾಮುಲು: ಸರ್ ನೀವು ಮಂಗಳೂರು ಏರ್ ಫೋರ್ಟಲ್ಲಿ ಭೇಟಿ ಆದಾಗ ನಮ್ಮನ್ನು ಬೆಂಗಳೂರು, ದೆಹಲಿಗೆ ಬರಲು ಹೇಳಿದ್ರಂತೆ. ಆದರೆ ನಮ್ಮ ಜನಾರ್ಧನ ರೆಡ್ಡಿ ಸರ್ ಮತ್ತು ಶ್ರೀರಾಮುಲು ಅವರು ಬಾಲಣ್ಣ ಅವರೊಂದಿಗೆ ಚೆನ್ನೈ ಬರುತ್ತೇವೆ. ಸ್ವಲ್ಪ ಕನ್ ಫ್ಯೂಷನ್ ಆಗಿದೆ ಅಂತ ಹೇಳಿ ಅಮೌಂಟ್ ಏನಿದೆ ಅದ್ನ ಸೆಟಲ್ ಮಾಡೋಣ ಅಂತ ಹೇಳಿದ್ರು.  ರೆಡ್ಡಿ ಸರ್ ಒಳ್ಳೆಯವರು ಸರ್  ದುಡ್ಡಿನ ವಿಚಾರದಲ್ಲಿ ಅವರು ಹೇಳಿದಂತೆಯೇ ನಡೆದುಕೊಳ್ಳುತ್ತಾರೆ.

ಏಜೆಂಟ್ : ಸರ್ ಸುಳ್ಳಲ್ಲ ಸರ್ ಅಲ್ಲಿ ನಾನು , ಬಾಲಕೃಷ್ಣ ಸರ್ ಅಳಿಯ ಮತ್ತು ಸಂದೀಪ್ ಮೂರೇ ಜನ ಇದ್ದಿದ್ದು,

ಏಜೆಂಟ್: ಅವೆಲ್ಲಾ ಬಿಡಿ ಸಂಬಂಧ ಮುಖ್ಯ. ಹೌದು ಸರ್ ನಮಗೆ ನೀವು ಮುಖ್ಯ ನಿಮ್ಮ ವಿಶ್ವಾಸ ಮುಖ್ಯ ಸರ್. ಹೋಗ್ತಾ ಹೋಗ್ತಾ ನಿಮಗೇ ಗೊತ್ತಾಗತ್ತೆ ಸರ್, ಭವಿಷ್ಯದಲ್ಲಿ ನಿಮ್ಮೊಂದಿಗೆ ನಾವು ಹೇಗಿರುತ್ತೇವೆ ಅಂತ. ಸರ್ ನಾನು ತುಂಬ ಸಲ ಮಾಡ್ದೆ ಸರ್ ನೀವು ಫೋನೇ ಎತ್ತಿಲ್ಲ.

ಏಜೆಂಟ್ : ಸರ್  ನೀವು ಬೇಜಾರಾಗ್ಬೇಡಿ ಸರ್ ಏನಾದ್ರೂ ಅದ್ರೆ ಕ್ಯಾಪ್ಟನ್ ಸರ್ ಜೊತೆ ಮಾತಾಡಣ ಸರ್. ನಿಮಗಾಗಿ ಬೇಕಾದ್ರೆ ಪ್ರಾಣಾನೇ ಕೊಡ್ತೀವಿ ಸರ್, ಬೇಕಾದ್ರೆ ನೀವೆ ಮುಂದೆ ಪರೀಕ್ಷೆ ಮಾಡಿ. ಅವತ್ತು ಜನಾರ್ಧನ ರೆಡ್ಡಿಯವರು ಕೂಡಾ

ಏಜೆಂಟ್ : ಹೀಗೆ ಮನೆಯಲ್ಲಿ ಹೇಳಿಲ್ವಾ ಸರ್, ಅಕ್ಷಯ ಪಾತ್ರೆ ಇದು ಇಟ್ಕೊಳ್ಳಿ ಅಂತ, ಮುಂದೆ ಭವಿಷ್ಯದಲ್ಲಿ ಗೊತ್ತಾಗತ್ತೆ ಸರ್, ಇವ್ರು ಸಿಎಂ ಆಗ್ತಾರೆ ಸರ್.

ಏಜೆಂಟ್ : ಸರ್ ನೀವು ಕೊಟ್ಟಿರೋ 60 ಕೋಟಿ ನಲ್ಲಿ  5 ಕೋಟಿ ಬೇರೆಯವರಿಗೆ ಕೊಟ್ಟಿದ್ದೀರಿ, ಉಳಿದದ್ದರಲ್ಲಿ  ಅರ್ಧ-ಅರ್ಧ ಅವರು ಹಂಚಿಕೊಂಡು ಬಾಲಕೃಷ್ಣ  ಅವರಿಗೆ ಕೊನೆಗೆ ಹೇಳಿದ್ದೀರ. ಬಾಲಕೃಷ್ಣ ಅವರಿಗೆ 50 ಕೊಡ್ತೀರಾ ಅಂತ ಹೇಳಿದ್ರು, ಆಗ ಒಂದು ಕ್ಲಾರಿಟಿ ಬಂದಿದೆ.  ಆವತ್ತು ಮಧ್ಯರಾತ್ರಿ ಬನ್ನಿ ಅಂತ ಹೇಳಿ ನಮ್ಮತ್ರ ಈ ಬಗ್ಗೆ ಶ್ರೀರಾಮುಲು ಸರ್ ಬಾಲನ್ನ ಸರ್ ಮತ್ತೆ ಜನಾರ್ಧನ ರೆಡ್ಡಿ ಸರ್ ಮಾತಾಡಿದರೆ ಅಂತ ಹೇಳಿದರು. ಆಗ ನಾನು ಶ್ರೀರಾಮುಲು ಸರ್ ಮಾತಾಡಿದಾರೆ ಅಂದ್ರೆ ಮುಗಿತು ಅವರು ಕಮಿಟ್ ಮೆಂಟ್ ಅಂದ್ರೆ ಕಮಿಟ್ ಮೆಂಟ್,  ಆದ್ರೆ ನಿಮ್ಮ ಭಾಷೆಗೂ ಅವರ ಭಾಷೆಗೂ ವ್ಯತ್ಯಾಸ ಇದೆ ಅಂತ ಹೇಳಿದೆ.

ಏಜೆಂಟ್ : ಅಲ್ಲ ಇದನ್ನೂ ಹೇಳ್ಬಿಡೋಣ ಸಾರ್ ಗೆ , ಮತ್ತೆ ನಾವು ಮೀಟ್ ಆದಾಗ ಜನಾರ್ಧನ ರೆಡ್ಡಿ ಸರ್ ಅವರು ನಾವೇನ್ ಮಾಡಿದಿವಿ ಅನ್ನೋದನ್ನು ತಮ್ಮ ಮಕ್ಕಳ ಮೇಲೆ ಆಣೆ ಮಾಡಿ ಹೇಳಲಿ. 160 ಕೋಟಿ ಕೊಟ್ಟಿದ್ದಾರೆ ಆದರೆ ರಾಘವಾಚಾರ್ ಅವರ್ 500 ಕೋಟಿ ಅಂತಿದಾರೆ,. ಇದನ್ನು ನಾವು ಹೇಳಿದರೆ ನೀವು ನಂಬಲಿಲ್ಲ ಸರ್.

ಶ್ರೀರಾಮುಲು: ಹೌದು ಈಗ ನೀವು ಹೇಳಿದ ಮೇಲೆ ನಂಗೂ ಗೊತ್ತಾಯ್ತಪ್ಪಾ…

ಏಜೆಂಟ್ : ಹೌದು ಸರ್, ನಾವು ಹೇಳಿದಾಗ ನೀವು ನಂಬಲಿಲ್ಲ ಸರ್,

ಏಜೆಂಟ್ : ಗೊತ್ತಾಯ್ತು, ಅದ್ಕೆ ನಾನು ಹೇಳಿದ್ದು, ನಾನು ನಿಮ್ಮನ್ನೂ ಡಿಸ್ಟರ್ಬ್ ಮಾಡೋದಿಲ್ಲ. ಯಾಕಂದ್ರೆ ನೀವಿರೋ ಪೊಸಿಷನ್ ಗೆ ನೀವು ಹೀಗೆ ಕೂತು ಮಾತಾಡಿದ್ದೆ ದೊಡ್ಡದು.

ಏಜೆಂಟ್ : ಅಲ್ಲ ಅಣ್ಣ, ಕೊನೆಗೆ ದೇವರ ದಯೆಯಂತೆ ಈ ಸರ್ ಗೆ ಅರ್ಥವಾದಂತೆ ನಮ್ಮ ಜನಾರ್ಧನ ರೆಡ್ಡಿ ಸರ್ ಗೆ ನಾವೇನು ಮಾಡಿದ್ದೇವೆ ಅಂತ ಅರ್ಥವಾಗುವ ಹಾಗೆ ಆದರೆ ಒಳ್ಳೆಯದು.

ರಾಮುಲು : ಅಲ್ಲ ಜನಾರ್ಧನ್ ರೆಡ್ಡಿ ಸಾರ್ ಇದನ್ನೆಲ್ಲ ನೋಡಿ ಮತ್ತೆ ಕೋಪ ಮಾಡಿಕೊಂಡ್ರೆ ಕಷ್ಟ.

ಏಜೆಂಟ್ : ಕೋಪ ಮಾಡಿಕೊಳ್ಳೋದು ಏನು ಇಲ್ಲ ಸಾರ್.

ಅದೆಲ್ಲಾ ಬಿಡಪ್ಪ ನಮಗೇನಂದ್ರೆ ನಿಮ್ಮಿಂದ ಒಳ್ಳೇ ಮನಸ್ಥಿತಿ ಮತ್ತು ವಿಶ್ವಾಸ ಬಿಟ್ಟರೆ ನಾವು ಏನನ್ನೂ ಸಹ ಆಶಿಸಿಲ್ಲ. ನಮ್ಮ ಉದ್ದೇಶ ನಿಮಗೆ ಒಳ್ಳೆಯದಾಗಬೇಕಷ್ಟೇ. ನಿಮಗೆ ಒಳ್ಳೆಯದಾದರೆ ನಮಗೇನು ಸರ್.

ಏಜೆಂಟ್ : ಸರ್ ನಾವೇನಂದುಕೊಂಡ್ವಿ ಅಂದ್ರೆ, ನಾನು ರಜನೀಶ್ ಸರ್ ಹೇಳ್ತಾ ಇದೀವಿ. ನಿಮ್ಮ ಜನಾರ್ಧನ ಅವರ ಕೆಲಸ ಮುಗಿದ ಮೇಲೆ ನಿಮ್ಮಿಂದ ಸಂತೋಷವಾಗಿ ತೆಗೆದುಕೊಳ್ಳಬೇಕು ಅಂತ ಬಯಸಿದ್ವಿ. ನಿಮ್ಮೊಂದಿಗೆ ಜಗಳ ಆಡಿ ತೆಗೆದುಕೊಳ್ಳಬೇಕು ಅಂತ ಬಯಸಿರಲಿಲ್ಲ ಸರ್,

ಏಜೆಂಟ್ : ಸರ್ ಅವರಿಂದ  ನಮ್ಗೇನು ಬೇಡ ಸರ್, ಬಾಲಣ್ಣ ಏನಾದ್ರೂ ಹೇಳಲಿ, ಅವರು ಪೂರ್ತಿ ವಾದಿಸುವುದನ್ನು ವಾದಿಸಲಿ, ನೀವು ಪೂರ್ತಿ ಕಂಟೆಂಟ್ ಕೇಳ್ಬೇಡಿ ಅಂತ ಹೇಳಿದ್ದು ಸರ್, ಇದ್ನ ಕೇಳಿದವರೇ ನಮ್ಮ ಜನಾರ್ಧನ ರೆಡ್ಡಿ ಸರ್ ಹಳೇದೂ ಮಾತಾಡಿಲ್ಲ. ಹೊಸದೂ ಮಾತಾಡಿಲ್ಲ ಸರ್. ಸರಿ ಸರ್ ಧನ್ಯವಾದಗಳು.

ಏಜೆಂಟ್ : ಸಾರ್ ಹಣದ ವಿಷಯವಲ್ಲ, ಸಂಬಂಧ ಮುಖ್ಯ ಅಲ್ವಾ ಸಾರ್.

ರಾಮುಲು: ನಿಮಗೆ ಆಗುವ ಅನುಕೂಲ ಏನಿದೆಯೋ ಮಾಡಿಕೊಡ್ತೇವೆ. ಆದರೆ ನಮಗೆ ಕ್ಲಿಯರ್ ಮಾಹಿತಿ ಬೇಕು.