samachara
www.samachara.com
ಚುನಾವಣಾ ರಾಜಕೀಯದ ಬಗ್ಗೆ ‘ಪ್ರಜಾಪ್ರಭು’ವಿನ ನಿರಾಸಕ್ತಿ ಏಕೆ?
COVER STORY

ಚುನಾವಣಾ ರಾಜಕೀಯದ ಬಗ್ಗೆ ‘ಪ್ರಜಾಪ್ರಭು’ವಿನ ನಿರಾಸಕ್ತಿ ಏಕೆ?

ರಾಜಕೀಯ ಅವ್ಯವಸ್ಥೆ ಹಾಗೂ ರಾಜಕಾರಣಿಗಳ ಬೂಟಾಟಿಕೆಯನ್ನು ಹತ್ತಿರದಿಂದ ಕಂಡಿರುವ ಜನಸಾಮಾನ್ಯ ದಿನದಿಂದ ದಿನಕ್ಕೆ ಚುನಾವಣಾ ರಾಜಕೀಯದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ.

ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಷ್ಟು ದಿನ ಬಹಿರಂಗ ಪ್ರಚಾರ, ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದ ರಾಜಕಾರಣಿಗಳ ಅಬ್ಬರ ತಗ್ಗಿದೆ. ಮನೆ ಮನೆ ಪ್ರಚಾರ ನಡೆಸುತ್ತಿರುವ ಅಭ್ಯರ್ಥಿಗಳು ಅಂತಿಮ ಹಂತದಲ್ಲಿ ಮತದಾರರ ಓಲೈಕೆಗೆ ಹಿಡಿಯಬಹುದಾದ ಎಲ್ಲಾ ಮಾರ್ಗಗಳನ್ನೂ ಹಿಡಿದಿದ್ದಾರೆ. ಆದರೆ, ರಾಜಕಾರಣಿಗಳ ಅಬ್ಬರದ ಮಧ್ಯೆ ಈ ಬಾರಿಯ ಚುನಾವಣಾ ಸಂದರ್ಭದಲ್ಲಿ ಎದ್ದು ಕಾಣುತ್ತಿರುವುದು ಜನಸಾಮಾನ್ಯರ ನಿರಾಸಕ್ತಿ.

ಹಳ್ಳಿಗಳ ಅರಳಿಕಟ್ಟೆ, ಟೀ ಅಂಗಡಿಗಳಿಂದ ಹಿಡಿದು ನಗರಗಳ ಹೋಟೆಲ್‌, ಬಸ್‌, ಕಚೇರಿಗಳವರೆಗೆ ರಾಜಕೀಯ ಮಾತನಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಯುವಕರಂತೂ ಚುನಾವಣಾ ರಾಜಕೀಯದ ಬಗ್ಗೆ ಬೇಸರ ತೋರುವುದು ಹೆಚ್ಚಾಗುತ್ತಿದೆ. ಮತದಾನದ ಪ್ರಮಾಣ ಹಾಗೂ ಚುನಾವಣೆಗೆ ಜನರ ನಿರಾಸಕ್ತಿಯನ್ನು ನೋಡಿದರೆ ಪ್ರಸ್ತುತ ರಾಜಕೀಯ ವ್ಯವಸ್ಥೆಯ ಬಗ್ಗೆ ಜನರು ರೋಸಿ ಹೋಗಿರುವಂತಿದೆ.

ರಾಜಕೀಯದ ಬಗ್ಗೆ ಜನರಿಗೆ ಆಸಕ್ತಿ ಕಡಿಮೆಯಾಗಿರುವುದರ ಜತೆಗೆ ರಾಜಕಾರಣಿಗಳ ಮೇಲೆ ಜನರ ಅಸಮಾಧಾನವೂ ಹೆಚ್ಚಾಗಿದೆ. ಹೀಗಾಗಿಯೇ ಮತದಾನ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಸ್ವಲ್ಪ ಮಟ್ಟಿಗಿನ ಏರಿಕೆ ಕಂಡರೂ ‘ನೋಟಾ’ ಚಲಾಯಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ.

2013ರ ಪಂಚ ರಾಜ್ಯಗಳ ಚುನಾವಣೆಯಲ್ಲಿ ಭಾರತದಲ್ಲಿ ಮೊದಲ ಬಾರಿಗೆ ನೋಟಾ ಪರಿಚಯಿಸಲಾಯಿತು. ನೋಟಾ ಪರಿಚಯಿಸಿದ ಮೊದಲ ಚುನಾವಣೆಯಲ್ಲಿ ಒಟ್ಟು ಮತದಾನ ಪ್ರಮಾಣದಲ್ಲಿ ಶೇಕಡ 1.85ರಷ್ಟು ಮತಗಳು ನೋಟಾಗೆ ಬಿದ್ದಿದ್ದವು. 2014ರ ಲೋಕಸಭಾ ಚುನಾವಣೆಯಲ್ಲಿ ಚಲಾವಣೆಯಾದ ನೋಟಾ ಪ್ರಮಾಣ ಶೇಕಡ 1.1. 2015ರ ದೆಹಲಿ ಮತ್ತು ಬಿಹಾರ ವಿಧಾನಸಭಾ ಚುನಾವಣೆ ವೇಳೆಗೆ ನೋಟಾ ಪ್ರಮಾಣ ಶೇಕಡ 2.02ರಷ್ಟು ಹೆಚ್ಚಾಗಿತ್ತು.

ಈ ಹಿಂದಿನ ಚುನಾವಣೆಗಳಲ್ಲಿ ಮತದಾನದ ಪ್ರಮಾಣವನ್ನು ನೋಡಿದರೆ ರಾಜ್ಯ ವಿಧಾನಸಭಾ ಚುನಾವಣೆಗೆ 2004ರಲ್ಲಿ ನಡೆದ ಚುನಾವಣೆ ವೇಳೆ ಇದ್ದ ಒಟ್ಟು ಮತದಾರರ ಸಂಖ್ಯೆ 3,85,86,754. ಈ ಪೈಕಿ ಮತದಾನ ಮಾಡಿದವರು 2,50,88,438. ಆಗ ಆಗಿದ್ದ ಮತದಾನದ ಶೇಕಡವಾರು ಪ್ರಮಾಣ 65%.

2008ರ ಚುನಾವಣೆಯಲ್ಲಿದ್ದ ಒಟ್ಟು ಮತದಾರರು 4,01,71,345. ಈ ಪೈಕಿ ಮತ ಚಲಾಯಿಸಿದ್ದು 2,61,56,630 ಮಂದಿ. ಶೇಕಡ 65.1ರಷ್ಟು ಮತದಾನ ರಾಜ್ಯದ 2008ರ ಚುನಾವಣೆಯಲ್ಲಿ ಆಗಿತ್ತು. 2013ರಲ್ಲಿ 4,36,52,789 ಮತದಾರರ ಪೈಕಿ 3,13,53,015 ಜನ ಮತ ಚಲಾಯಿಸಿದ್ದರು. ಈ ಪ್ರಮಾಣ ಶೇಕಡ 71.8%. 2008ರಿಂದ 2013ರ ಹೊತ್ತಿಗೆ ಮತದಾನ ಪ್ರಮಾಣದಲ್ಲಿ ಶೇಕಡ 6.7ರಷ್ಟು ಏರಿಕೆ ಕಂಡುಬಂದಿತ್ತು.

ಪ್ರಮುಖ ಪಕ್ಷಗಳ ಅಭ್ಯರ್ಥಿಗಳೆಲ್ಲರೂ ಕಳ್ಳರು ಎಂದು ಮತದಾರರಿಗೆ ಅನಿಸಿದಾಗ ಜನ ಕಡಿಮೆ ಕಳ್ಳ ಅಥವಾ ಸಮರ್ಥವಾದ ಸ್ವತಂತ್ರ ಅಭ್ಯರ್ಥಿ ಕಡೆಗೆ ನೋಡುತ್ತಾರೆ. ಆದರೆ, ಈ ಆಯ್ಕೆಗಳೇ ಇಲ್ಲದಿದ್ದಾಗ ನೋಟಾ ಒತ್ತುವುದೂ ಒಂದೇ, ಮತಗಟ್ಟೆಗೆ ಹೋಗದಿರುವುದೂ ಒಂದೇ.
- ರೂಪೇಶ್‌, ಯುವ ಮತದಾರ

ಬದಲಾಗುತ್ತಿರುವ ಮಾನಸಿಕತೆ

ಈ ಬಾರಿಯ ಚುನಾವಣೆಯ ವೇಳೆಗೆ ರಾಜಕೀಯದ ಬಗ್ಗೆ ಜನರ ನಿರಾಸಕ್ತಿ ಇನ್ನಷ್ಟು ಎದ್ದು ಕಾಣುತ್ತಿದೆ. ಇದರ ಪರಿಣಾಮ ಮತದಾನದ ಪ್ರಮಾಣದ ಮೇಲೂ ಆಗಲಿದೆ. ರಾಜಕಾರಣ ಹಾಗೂ ಪ್ರಸ್ತುತ ವ್ಯವಸ್ಥೆಯ ಬಗ್ಗೆ ಜನರ ಮನೋಭಾವ ಬದಲಾಗುತ್ತಿರುವುದೂ ರಾಜಕೀಯ ನಿರಾಸಕ್ತಿಗೆ ಕಾರಣವಾಗಿದೆ.

“ಮನುಷ್ಯನ ಅರಿವಿನ ಶಕ್ತಿ ತನ್ನ ಸುತ್ತಮುತ್ತ ಏನಾಗುತ್ತಿದೆ ಎಂಬುದನ್ನು ಸದಾ ಗ್ರಹಿಸುತ್ತಿರುತ್ತದೆ. ರಾಜಕೀಯ ಪಕ್ಷಗಳು, ನಾಯಕರು, ಅವರು ಆಡುತ್ತಿರುವ ಮಾತು, ಬಳಸುತ್ತಿರುವ ಭಾಷೆ – ಇವೆಲ್ಲವೂ ಗೊಂದಲದ ವಾತಾವರಣ ಸೃಷ್ಟಿಸುತ್ತಿವೆ. ಚುನಾವಣೆ ಎನ್ನುವುದು ಈಗ ಸಂಭ್ರಮವಾಗಿಲ್ಲ, ಅದು ಒತ್ತಡವಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಮತದಾರರಿಗೆ ಚುನಾವಣಾ ರಾಜಕೀಯದ ಬಗ್ಗೆ ನಿರಾಸಕ್ತಿ ಮೂಡುತ್ತಿದೆ” ಎನ್ನುತ್ತಾರೆ ಮನೋವಿಜ್ಞಾನಿ ಡಾ. ಅ. ಶ್ರೀಧರ್.

“ಪ್ರಜಾಪ್ರಭುತ್ವ ಎಂಬುದು ನೆಮ್ಮದಿಯನ್ನು ನಿರಂತರವಾಗಿ ಸೃಷ್ಟಿ ಮಾಡುತ್ತದೆ ಎಂಬುದು ಮನುಷ್ಯನಲ್ಲಿ ಸುಪ್ತವಾಗಿ ಬೆಳೆದಿರುತ್ತದೆ. ಆದರೆ, ರಾಜಕಾರಣಿಗಳ ನಾಟಕ, ಅವರ ಆಸ್ತಿ ಸಾವಿರಾರು ಕೋಟಿಗಳಿಗೆ ಏರುವುದು, ರಾಜಕಾರಣಿಗಳು ಜೈಲಿಗೆ ಹೋಗುವುದು, ಆರೋಪ- ಪ್ರತ್ಯಾರೋಪ ಮಾಡುವುದು ಜನರಲ್ಲಿ ಸುಪ್ತವಾಗಿರುವ ಈ ಅರಿವನ್ನು ಬದಲಿಸುತ್ತಿರುತ್ತದೆ. ಜನರು ಈ ಸ್ಥಿತಿಯನ್ನು ಬಹಳ ಸಂಕಟದಿಂದ ನೋಡುತ್ತಾರೆ. ಅದರಿಂದ ಒಂದು ರೀತಿಯ ಉದಾಸೀನ ಬೆಳೆಯುತ್ತದೆ” ಎಂಬುದು ಶ್ರೀಧರ್‌ ಅವರ ಅಭಿಪ್ರಾಯ.

“ಯುವಕರಲ್ಲಂತೂ ಯಾರೋ ಒಬ್ಬರಿಗೆ ಮತ ಹಾಕಿದರಾಯಿತು ಅಥವಾ ನಾನು ಯಾರಿಗೂ ಮತ ನೀಡುವುದಿಲ್ಲ ಎಂಬ ಮನೋಭಾವ ಕಾಣುತ್ತಿದೆ. ರಾಜಕಾರಣಿಗಳ ಒಳಗುಟ್ಟುಗಳೆಲ್ಲವೂ ಇಂದಿನ ಯುವಜನರಿಗೆ ಬೇಗ ಅರ್ಥವಾಗುತ್ತಿವೆ. ಬಡತನ ಇನ್ನೂ ದೇಶದಲ್ಲಿ ಉಳಿದಿದೆ. ಆದರೆ, ರಾಜಕಾರಣಿಗಳು ಮಾತ್ರ ಶ್ರೀಮಂತರಾಗುತ್ತಿದ್ದಾರೆ. ಇದೆಲ್ಲವೂ ಯುವಜನರಿಗೆ ಹೇಳಿಕೊಡಬೇಕಾಗಿಲ್ಲ. ಅವರ ಅರಿವಿನಲ್ಲೇ ಇದೆಲ್ಲವೂ ಸುಪ್ತವಾಗಿ ದಾಖಲಾಗುತ್ತಿರುತ್ತದೆ. ಹೀಗಾಗಿ ಯುವಕರು ಚುನಾವಣೆಯ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ” ಎನ್ನುತ್ತಾರೆ ಅವರು.

ಅಣ್ಣಾ ಹಜಾರೆ ಚಳವಳಿಯೂ ಪ್ರಸ್ತುತ ರಾಜಕೀಯ ಸಂದಿಗ್ಧತೆಗೆ ಪರಿಹಾರವಾಗದಿದ್ದುದು ಪರ್ಯಾಯ ರಾಜಕಾರಣದ ಬಗ್ಗೆ ಯೋಚಿಸುತ್ತಿರುವವರಲ್ಲೂ ನಿರಾಸೆ ಮೂಡಿಸಿತು. ಚುನಾವಣೆಗಳು ನಮ್ಮ ಬದುಕಿನಲ್ಲಿ ಯಾವುದೇ ಬದಲಾವಣೆಗಳನ್ನು ತರುವುದಿಲ್ಲ ಎಂದು ಜನ ಭಾವಿಸಿರುವುದು ರಾಜಕಾರಣದ ಬಗ್ಗೆ ಆಸಕ್ತಿ ಕಳೆದುಕೊಳ್ಳುವಂತೆ ಮಾಡಿದೆ.
- ಡಾ. ಅ. ಶ್ರೀಧರ್, ಮನೋವಿಜ್ಞಾನಿ

ಭರವಸೆ- ಈಡೇರಿಕೆಯ ಅಂತರ

ರಾಜಕಾರಣಿಗಳು ನೀಡುವ ಭರವಸೆಗಳು ಮತ್ತು ಭರವಸೆಗಳ ಈಡೇರಿಕೆಯ ನಡುವಿನ ಅಂತರದಿಂದಾಗಿ ಜನ ರೋಸಿ ಹೋಗಿರುವುದು ಜನರ ರಾಜಕೀಯ ನಿರಾಸಕ್ತಿಗೆ ಕಾರಣ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

“ಯಾವುದೇ ವಿಚಾರ ಬಂದಾಗಲೂ ತಮಗೇನು ಪ್ರಯೋಜನ ಎಂದೇ ಜನ ಯೋಚನೆ ಮಾಡುವುದು ಸಾಮಾನ್ಯ. ರಾಜಕಾರಣಿಗಳು ಯಾವಾಗಲೂ ತಾವು ನೀಡಿರುವ ಭರವಸೆಗಳೆಲ್ಲವನ್ನೂ ಕಾಲಮಿತಿಯಲ್ಲಿ ಈಡೇರಿಸಲು ಸಾಧ್ಯವಾಗುವುದಿಲ್ಲ. ಭರವಸೆ ಈಡೇರಿಸಬೇಕೆಂಬ ಉದ್ದೇಶ ರಾಜಕಾರಣಿಗಳಿಗೆ ಇದ್ದರೂ ಸಾಕಷ್ಟು ಆಡಳಿತಾತ್ಮಕ ತೊಡಕುಗಳು ಇರುತ್ತವೆ. ಇವೆಲ್ಲವೂ ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಹೀಗಾಗಿ ರಾಜಕಾರಣಿಗಳು ಭರವಸೆ ನೀಡುತ್ತಾರೆ ಈಡೇರಿಸುವುದಿಲ್ಲ ಎಂದು ಜನ ರಾಜಕೀಯದ ಬಗ್ಗೆ ನಿರಾಸಕ್ತಿ ವಹಿಸುತ್ತಿದ್ದಾರೆ” ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ಡಾ. ಹರೀಶ್‌ ರಾಮಸ್ವಾಮಿ.

ರಾಜಕಾರಣಿಗಳು ಕೊಟ್ಟ ಭರವಸೆ ಈಡೇರಿಸುವುದಿಲ್ಲ ಎಂಬ ಭಾವನೆ ಜನಸಾಮಾನ್ಯರಲ್ಲಿದೆ. ರಾಜಕಾರಣಿಗಳು ಮತ್ತು ಆಡಳಿತಾತ್ಮಕ ತೊಡಕುಗಳು ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಹೀಗಾಗಿ ಯಾರು ಅಧಿಕಾರಕ್ಕೆ ಬಂದರೂ ಏನೂ ಪ್ರಯೋಜನ ಇಲ್ಲ ಎಂದು ಜನ ರಾಜಕೀಯದ ಬಗ್ಗೆ ನಿರಾಸಕ್ತಿ ತೋರುತ್ತಾರೆ.
- ಡಾ. ಹರೀಶ್‌ ರಾಮಸ್ವಾಮಿ, ರಾಜಕೀಯ ವಿಶ್ಲೇಷಕ

“ಹೋಟೆಲ್‌ ನಡೆಸುವುದು ಸರಕಾರದ ಕೆಲಸ ಅಲ್ಲ. ಬಡವರಿಗೆ ಊಟ ತಂದುಕೊಡುತ್ತೇನೆ ಎಂಬುದು ಸರಕಾರದ ಕೆಲಸ ಅಲ್ಲ. ಉದ್ಯೋಗ ಕೊಡಿಸುತ್ತೇನೆ ಎಂದು ಹೇಳುವುದು ಸರಕಾರದ ಕೆಲಸ ಅಲ್ಲ. ಇದೆಲ್ಲವೂ ಜನರಿಗೆ ಅರ್ಥವಾಗಬೇಕು. ಜನಪ್ರಿಯ ಭರವಸೆಗಳನ್ನು ಕೊಟ್ಟರೆ ಜನ ಅದನ್ನು ನೋಡಿಕೊಂಡಾದರೂ ತಮಗೆ ಮತ ಹಾಕುತ್ತಾರೆ ಎಂಬ ಭಾವನೆಯೂ ರಾಜಕಾರಣಿಗಳಲ್ಲಿದೆ. ಇದೆಲ್ಲವೂ ಬದಲಾಗಬೇಕು. ಜನರಲ್ಲೂ ರಾಜಕೀಯ ಪ್ರಜ್ಞೆ ಮೂಡಬೇಕು” ಎನ್ನುತ್ತಾರೆ ಅವರು.

ಒಂದು ಕಡೆ ರಾಜಕೀಯ ವ್ಯವಸ್ಥೆಯ ಅವ್ಯವಸ್ಥೆ, ಅದರ ಜತೆಗೆ ರಾಜಕಾರಣಿಗಳ ಪೊಳ್ಳು ಭರವಸೆಗಳು ಹಾಗೂ ಮತ್ತೊಂದು ಕಡೆ ರಾಜಕೀಯದ ಮೇಲೆ ವಿಶ್ವಾಸವನ್ನೇ ಕಳೆದುಕೊಂಡಿರುವ ಜನರು – ಇದರ ಮಧ್ಯೆ ಯುವ ಜನತೆ ತಮ್ಮ ಆಯ್ಕೆ ಏನಾಗಬೇಕು ಎಂಬ ಗೊಂದಲದಲ್ಲಿದ್ದಾರೆ. ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಪೈಕಿ ಯಾರೂ ತಮ್ಮ ಆಯ್ಕೆಯಲ್ಲ ಎಂದು ಜನಕ್ಕೆ ಅನಿಸಿದಾಗ ಸಹಜವಾಗಿ ಕಾಣುತ್ತಿರುವ ಆಯ್ಕೆ ನೋಟಾ.