samachara
www.samachara.com
ಉತ್ತರ ಕರ್ನಾಟಕದ ನೈಜ ಸಮಸ್ಯೆಗಳನ್ನು ಈ ಬಾರಿಯೂ ಮುಟ್ಟದ ರಾಜಕೀಯ ಪಕ್ಷಗಳು
COVER STORY

ಉತ್ತರ ಕರ್ನಾಟಕದ ನೈಜ ಸಮಸ್ಯೆಗಳನ್ನು ಈ ಬಾರಿಯೂ ಮುಟ್ಟದ ರಾಜಕೀಯ ಪಕ್ಷಗಳು

ಯಾವ ಸರಕಾರ ಬಂದರೂ ತಮ್ಮನ್ನು ಎರಡನೇ ದರ್ಜೆಯ ಪ್ರಜೆಗಳಂತೆ ಕಾಣುವುದು ತಪ್ಪಿದ್ದಲ್ಲ ಎಂಬ ಭಾವನೆ ಉತ್ತರ ಕರ್ನಾಟಕದ ಜನರಲ್ಲಿದೆ. ಈ ಮಾತಿಗೆ ಇಂಬು ಕೊಡುವಂತೆ ಯಾವ ರಾಜಕೀಯ ಪಕ್ಷಗಳೂ ಈ ಭಾಗದ ಸಮಸ್ಯೆಗಳನ್ನು ಅಪ್ಪಿತಪ್ಪಿಯೂ ಮುಟ್ಟಿಲ್ಲ. 

ತುಂಗ ಭದ್ರಾ ನದಿಯಿಂದ ಉತ್ತರ ಭಾಗದ ಕರ್ನಾಟಕದ ಜನರಿಗೆ ಸಹಜವಾಗಿಯೇ ದಕ್ಷಿಣ ಕರ್ನಾಟಕ ಹಾಗೂ ಸರಕಾರಗಳ ಮೇಲೆ ಸಿಟ್ಟಿದೆ. ಕಾರಣ ಅಭಿವೃದ್ಧಿಯ ವಿಚಾರ ಬಂದಾಗ ಸರಕಾರಗಳು ಉತ್ತರ ಕರ್ನಾಟಕವನ್ನು ಎರಡನೇ ಆದ್ಯತೆಯಾಗಿ ಪರಿಗಣಿಸುವುದು.

ಉತ್ತರ ಕರ್ನಾಟಕದ ನಿಜವಾದ ಸಮಸ್ಯೆಗಳ ಬಗ್ಗೆ ರಾಜಕೀಯ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಾದರೂ ಮಾತನಾಡುತ್ತವೆ ಎಂದುಕೊಂಡಿದ್ದ ನಿರೀಕ್ಷೆ ಹುಸಿಯಾಗಿದೆ. ಪ್ರಧಾನಿ ಮೋದಿಯಿಂದ ಹಿಡಿದು ಸಿದ್ದರಾಮಯ್ಯ, ಕುಮಾರಸ್ವಾಮಿ ಸೇರಿದಂತೆ ಯಾರೊಬ್ಬರೂ ಈ ಬಾರಿ ಉತ್ತರ ಕರ್ನಾಟಕದ ನಿಜವಾದ ಸಮಸ್ಯೆಗಳನ್ನು ಚುನಾವಣಾ ವಿಷಯವಾಗಿ ತೆಗೆದುಕೊಂಡೇ ಇಲ್ಲ.

ನೀರಾವರಿ ಸಮಸ್ಯೆ, ಮಹದಾಯಿ ಕುಡಿಯುವ ನೀರಿನ ಯೋಜನೆ, ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಸಮಸ್ಯೆ, ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗದಿರುವ ವಿಚಾರಗಳನ್ನು ಯಾವ ರಾಜಕೀಯ ಪಕ್ಷಗಳೂ ಈ ಬಾರಿಯ ಚುನಾವಣೆಯಲ್ಲಿ ಮಾತನಾಡಿಲ್ಲ.

ಮಹದಾಯಿ ವಿಚಾರದಲ್ಲಿ ಪ್ರಧಾನಿ ಮೋದಿ ಆರು ತಿಂಗಳಲ್ಲಿ ಯೋಜನೆ ಜಾರಿಗೊಳಿಸುವ ಗಿಲೀಟಿನ ಭರವಸೆ ನೀಡಿ ಹೋಗಿದ್ದಾರೆ. ಉಳಿದ ಪಕ್ಷಗಳೂ ಮಹದಾಯಿ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಂಡಿವೆಯೇ ಹೊರತು ನಿಜವಾಗಿ ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಯಾರಿಗೂ ಇಲ್ಲ ಎನ್ನುತ್ತಾರೆ ಈ ಭಾಗದ ಜನ.

‘ರಾಜಕೀಯಕ್ಕಷ್ಟೇ ಮಹದಾಯಿ’:

“ಮಹದಾಯಿ ವಿಚಾರವನ್ನು ಎಲ್ಲಾ ರಾಜಕೀಯ ಪಕ್ಷಗಳೂ ರಾಜಕೀಯಕ್ಕೆ ಬಳಸಿಕೊಂಡಿದ್ದು ಬಿಟ್ಟರೆ ನಿಜವಾಗಿ ಸಮಸ್ಯೆಗೆ ಸೂಕ್ತ ಪರಿಹಾರ ಕಾಣಿಸುವ ಮಾರ್ಗದ ಹುಡುಕಾಟಕ್ಕೆ ಯಾರೂ ಮುಂದಾಗಿಲ್ಲ. ಮಹದಾಯಿ ಹೋರಾಟ ಆರಂಭವಾಗಿ 1032 ದಿನ ಕಳೆದರೂ ಸರಕಾರಗಳಿಗೆ ಈ ವಿಚಾರದ ಗಂಭೀರತೆ ಅರ್ಥವಾಗುತ್ತಿಲ್ಲ. ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಮೂರೂ ರಾಜಕೀಯ ಪಕ್ಷಗಳಿಗೆ ಇಲ್ಲ” ಎನ್ನುತ್ತಾರೆ ಮಹದಾಯಿ ಹೋರಾಟಗಾರ ವೀರೇಶ ಸೊರಬದಮಠ.

“ಮಹದಾಯಿ ವಿಚಾರದಲ್ಲಿ ಇಚ್ಛಾಶಕ್ತಿ ತೋರದ ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳು ಈ ಭಾಗಕ್ಕೆ ಅಗತ್ಯ ಇಲ್ಲ. ಹೀಗಾಗಿ ನೋಟಾ ಚಲಾಯಿಸುವಂತೆ ಜನರಲ್ಲಿ ಮನವಿ ಮಾಡಿದ್ದೇವೆ. ಜನರಿಗೂ ಈ ರಾಜಕಾರಣಿಗಳ ಪೊಳ್ಳು ಭರವಸೆಗಳನ್ನು ಕೇಳೀ ಕೇಳೀ ಸಾಕಾಗಿದೆ. ಜನ ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕು” ಎಂಬುದು ಅವರ ಮಾತು.

“ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುವ ಕೆಲವರು ಚುನಾವಣೆ ಸಂದರ್ಭದಲ್ಲಿ ಒಂದಲ್ಲಾ ಒಂದು ರಾಜಕೀಯ ಪಕ್ಷಗಳ ಜತೆಗೆ ಸೇರಿ ಬಿಡುತ್ತಾರೆ. ಚುನಾವಣೆ ಸಂದರ್ಭದಲ್ಲಿ ಜನರೇ ರಾಜಕಾರಣಗಳನ್ನು ಸಮಸ್ಯೆಯ ವಿಚಾರವಾಗಿ ಪ್ರಶ್ನಿಸಬೇಕು. ಆದರೆ, ಚುನಾವಣೆ ಹತ್ತಿರ ಬಂದಾಗ ಹೋರಾಟಗಾರರ ನಡೆಯೂ ಬದಲಾಗಿ ಬಿಡುತ್ತದೆ” ಎನ್ನುತ್ತಾರೆ ಅವರು.

ಎಲ್ಲಾ ಪಕ್ಷಗಳಲ್ಲೂ ಇಚ್ಛಾಶಕ್ತಿಯ ಬದಲು ಭ್ರಷ್ಟಾಚಾರ ಎದ್ದು ಕಾಣುತ್ತಿದೆ. ಹಿಂದೆ ಬ್ರಿಟಿಷರನ್ನು ಒದ್ದು ಓಡಿಸಲು ಇಂಗ್ಲೆಂಡ್‌ ಆದರೂ ಇತ್ತು. ನಮ್ಮವರೇ ಆದ ಈಗಿನ ಭ್ರಷ್ಟ ರಾಜಕಾರಣಿಗಳನ್ನು ಎಲ್ಲಿಗೆ ಓಡಿಸಬೇಕು?
- ವೀರೇಶ ಸೊರಬದಮಠ, ಮಹದಾಯಿ ಹೋರಾಟಗಾರ

ಎರಡನೇ ದರ್ಜೆಯ ಪ್ರಜೆಗಳು

ಉತ್ತರ ಕರ್ನಾಟಕದ ಜನತೆ ಎಂದರೆ ಎರಡನೇ ದರ್ಜೆಯ ಪ್ರಜೆಗಳಿದ್ದಂತೆ ಎಂಬ ಭಾವನೆ ರಾಜಕಾರಣಿಗಳಲ್ಲೂ ಹಾಗೂ ದಕ್ಷಿಣ ಕರ್ನಾಟಕದವರಲ್ಲೂ ಇದೆ. ಹೀಗಾಗಿಯೇ ದಕ್ಷಿಣ ಕರ್ನಾಟಕದಲ್ಲಿ ಆದಷ್ಟು ಅಭಿವೃದ್ಧಿ ಕಾರ್ಯಗಳು ಉತ್ತರ ಕರ್ನಾಟಕದಲ್ಲಿ ಆಗುತ್ತಿಲ್ಲ ಎಂಬ ಅಸಮಾಧಾನ ಈ ಭಾಗದ ಜನರಲ್ಲಿದೆ.

“ಯಾವುದೇ ವಿಷಯಗಳಲ್ಲೂ ಉತ್ತರ ಕರ್ನಾಟಕಕ್ಕೆ ಸೂಕ್ತ ಸ್ಥಾನ ಮಾನ ಸಿಗುತ್ತಿಲ್ಲ. ಅದು ನೀರಾವರಿ ವಿಷಯ ಇರಬಹುದು, ರೈತರ ಸಮಸ್ಯೆ ಇರಬಹುದು, ಅಭಿವೃದ್ಧಿ ಕಾರ್ಯಗಳಿರಬಹುದು, ಸಾಂಸ್ಕೃತಿಕ ನೀತಿಗಳಿರಬಹುದು- ಯಾವ ವಿಚಾರದಲ್ಲೂ ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ನಡೆದುಕೊಂಡೇ ಬಂದಿದೆ. ಈ ಭಾಗದ ಜನರಲ್ಲೂ ಈ ಭಾವನೆ ಗಟ್ಟಿಯಾಗಿದೆ. ಇದಕ್ಕೆ ಕಾರಣ ರಾಜಕಾರಣಿಗಳ ನಡೆ” ಎನ್ನುತ್ತಾರೆ ಬೆಳಗಾವಿ ಭಾಗದ ಹಿರಿಯ ಪತ್ರಕರ್ತರೊಬ್ಬರು.

“ಚುನಾವಣೆ ಸಂದರ್ಭದಲ್ಲೂ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಮುಟ್ಟಲೇ ಹೋಗಲಿಲ್ಲ. ಕೇವಲ ಆರೋಪ ಪ್ರತ್ಯಾರೋಪ, ಬೈಯ್ದಾಟಗಳೇ ಚುನಾವಣಾ ಪ್ರಚಾರಗಳಲ್ಲಿ ಕಂಡವು. ಆಯಾ ಭಾಗದ ನಿಜವಾದ ಸಮಸ್ಯೆಗಳನ್ನು ಎತ್ತಿ ಹಿಡಿದು ಮಾತನಾಡುವ ರಾಜಕಾರಣಿಗಳ ಕೊರತೆ ಈಗ ಕಾಡುತ್ತಿದೆ” ಎಂಬುದು ಅವರ ಅಭಿಪ್ರಾಯ.

“ಯಾವುದೇ ಅಭಿವೃದ್ಧಿ ಕಾರ್ಯಗಳಿರಲಿ, ಅನುದಾನ ಹಂಚಿಕೆಯಲ್ಲಿರಲಿ ದಕ್ಷಿಣ ಕರ್ನಾಟಕ ಭಾಗಕ್ಕೆ ಆಗಿ ಉಳಿದರೆ ಉತ್ತರ ಕರ್ನಾಟಕದ ಕಡೆಗೆ ಎಂಬ ಮನೋಭಾವ ಆಳುವ ಸರಕಾರಕ್ಕಿದೆ. ಈ ಭಾಗದ ನೀರಾವರಿ ಸಮಸ್ಯೆಗಳ ಸಮರ್ಪಕ ಅನುಷ್ಠಾನ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಅನುದಾನ ನೀಡುವಲ್ಲಿ ಸರಕಾರಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ” ಎನ್ನುತ್ತಾರೆ ಅವರು.

“ಉತ್ತರ ಕರ್ನಾಟಕದಲ್ಲಿ ಸಮಸ್ಯೆಗಳು ಜೀವಂತವಾಗಿರಲು ಈ ಭಾಗದ ಜನಪ್ರತಿನಿಧಿಗಳೂ ಕಾರಣ. ಈ ಭಾಗದ ಜನಪ್ರತಿನಿಧಿಗಳಿಗೆ ಈ ಭಾಗದ ಸಮಸ್ಯೆಗಳನ್ನು ಪರಿಹರಿಸಬೇಕೆಂಬ ಅರಿವಿಲ್ಲ. ಈ ಭಾಗದ ನಿಜವಾದ ಸಮಸ್ಯೆಗಳು ಏನು ಎಂಬುದನ್ನು ತಿಳಿದುಕೊಳ್ಳು ಗೋಜಿಗೇ ಜನಪ್ರತಿನಿಧಿಗಳು ಹೋಗಿಲ್ಲ. ಇನ್ನು ಹೊರಗಿನಿಂದ ಬರುವ ಪಕ್ಷಗಳ ಮುಖಂಡರು ಇನ್ನೇನು ಮಾತನಾಡಲು ಸಾಧ್ಯ?” ಎಂಬ ಪ್ರಶ್ನೆ ಅವರದ್ದು.

ಒಂದೆಡೆ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ಚುನಾವಣಾ ವಿಷಯವಾಗಿ ಮಾತನಾಡುವ ಗೋಜಿಗೇ ಹೋಗದ ರಾಜಕೀಯ ಪಕ್ಷಗಳು, ಮತ್ತೊಂದೆಡೆ ತಮ್ಮ ನೆಲದ ಸಮಸ್ಯೆಗಳನ್ನು ಪರಿಹರಿಸಬೇಕೆಂಬ ಇಚ್ಛಾಶಕ್ತಿ ಇಲ್ಲದ ಜನಪ್ರತಿನಿಧಿಗಳು, ಇವರ ಮಧ್ಯೆ ಮತದಾರರ ಪ್ರಭು ಈ ಬಾರಿಯ ಚುನಾವಣೆಯಲ್ಲಿ ಮತದಾನ ಮಾಡಲು ಕ್ಷಣಗಣನೆ ನಡೆಯುತ್ತಿದೆ.