ಮೋದಿಗೆ ಎದುರಾಗಿ ನಿಂತಿರುವ ದೇಶದ ಏಕೈಕ ‘ಪ್ರಾದೇಶಿಕ’ ನಾಯಕ!
COVER STORY

ಮೋದಿಗೆ ಎದುರಾಗಿ ನಿಂತಿರುವ ದೇಶದ ಏಕೈಕ ‘ಪ್ರಾದೇಶಿಕ’ ನಾಯಕ!

ಇಡೀ ರಾಷ್ಟ್ರದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗಟ್ಟಿಯಾಗಿ ಮಾತನಾಡುವ ಏಕೈಕ ಪ್ರಾದೇಶಿಕ ನಾಯಕ ಸಿದ್ದರಾಮಯ್ಯ. ಕಾಂಗ್ರೆಸ್‌ಗೆ ವಲಸೆ ಬಂದ ಸಿದ್ದರಾಮಯ್ಯ ಇಂದು ಮೋದಿಗೆ ಎದುರಾಗಿ ನಿಲ್ಲಬಲ್ಲ ಮುಂಚೂಣಿಯ ಕಾಂಗ್ರೆಸ್‌ ಮುಖಂಡ.

ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ಈ ಹೊತ್ತಿಗೆ ಕಾಂಗ್ರೆಸ್‌ನಲ್ಲಿ ಮುಂಚೂಣಿಯಲ್ಲಿರುವ ಮುಖಂಡ ಸಿದ್ದರಾಮಯ್ಯ. ಜೆಡಿಎಸ್‌ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ಜಾತ್ಯತೀತ ಪಕ್ಷದಿಂದ ಹೊರಬಂದು ಸಿದ್ದರಾಮಯ್ಯ ಅಹಿಂದ ಹೋರಾಟ ಸಂಘಟಿಸಿ, ಅಹಿಂದದ ನೆರಳಲ್ಲೇ ಕಾಂಗ್ರೆಸ್‌ ತೆಕ್ಕೆಗೆ ಸೇರಿದ್ದು ಈಗ ಇತಿಹಾಸ. ಕಾಂಗ್ರೆಸ್‌ಗೆ ವಲಸೆ ಬಂದ ಸಿದ್ದರಾಮಯ್ಯ ಇಂದು ಮೋದಿ ವಿರುದ್ಧ ಮಾತನಾಡುವ ದೇಶದ ಏಕೈಕ ಪ್ರಾದೇಶಿಕ ನಾಯಕ ಎನಿಸಿದ್ದಾರೆ.

ಮೂಲ ಕಾಂಗ್ರೆಸಿಗರು ಕಟ್ಟಿದ ಗೂಡಿಗೆ ಬಂದು ಸೇರಿದ ಸಿದ್ದರಾಮಯ್ಯ ಮೂಲ ಕಾಂಗ್ರೆಸಿಗರನ್ನೇ ತೆರೆಮರೆಗೆ ತಳ್ಳಿ ತಾವು ಮುಂಚೂಣಿಗೆ ಬಂದಿದ್ದು ಪಕ್ಷದ ಹಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ಎಚ್‌. ವಿಶ್ವನಾಥ್‌ ಆದಿಯಾಗಿ ಎಸ್‌.ಎಂ. ಕೃಷ್ಣ, ವಿ. ಶ್ರೀನಿವಾಸ್‌ ಪ್ರಸಾದ್ ಅವರಂಥ ಮೂಲ ಕಾಂಗ್ರೆಸಿಗರು ಪಕ್ಷ ತೊರೆಯಲು ಸಿದ್ದರಾಮಯ್ಯ ಅವರೇ ಕಾರಣ ಎಂಬುದು ಈಗ ಗುಟ್ಟಾಗೇನೂ ಉಳಿದಿಲ್ಲ. ಆದರೂ ಈ ಗೊಂದಲಗಳೆಲ್ಲವನ್ನೂ ಮೀರಿ ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಇಂದು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೋದಿ ವಿರುದ್ಧ ಮಾತನಾಡುವ ನಾಯಕರಾಗಿ ಸುದ್ದಿಯಲ್ಲಿದ್ದಾರೆ.

ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರನ್ನು ‘ನರಹಂತಕ’ ಎಂದು ಕರೆದಿದ್ದು ದೊಡ್ಡ ಸುದ್ದಿಯಾಗಿತ್ತು. ಅದಾದ ಬಳಿಕ ಮೋದಿ ನಡೆಯನ್ನು ಟೀಕಿಸುವುದರಲ್ಲಿ ಸಿದ್ದರಾಮಯ್ಯ ಹಿಂದೆ ಉಳಿಯಲಿಲ್ಲ. ಮೋದಿ ಏಟಿಗೆ ಎದುರೇಟು ಕೊಡುತ್ತಲೇ ಬಂದ ಸಿದ್ದರಾಮಯ್ಯ ಇಡೀ ದೇಶದಲ್ಲಿ ಪ್ರಧಾನಿ ವಿರುದ್ಧ ತೀಕ್ಷ್ಣವಾಗಿ ಮಾತನಾಡುವ ಏಕೈಕ ಮುಖ್ಯಮಂತ್ರಿಯಾಗಿದ್ದಾರೆ.

ದೇಶದಲ್ಲಿ ಗೋಹತ್ಯೆಯ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜಕಾರಣ ಮಾಡಲು ಮುಂದಾದ ಸಂದರ್ಭದಲ್ಲಿ ಗೋ ಮಾಂಸ ಸೇವನೆ ವಿಚಾರವಾಗಿ ಮಾತನಾಡಿದ ಕಾರಣಕ್ಕೂ ಸಿದ್ದರಾಮಯ್ಯ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದರು. “ನಾನು ಇದುವರೆಗೂ ಗೋ ಮಾಂಸ ತಿಂದಿಲ್ಲ. ಒಂದು ವೇಳೆ ತಿನ್ನಬೇಕಾದ ಸಂದರ್ಭ ಬಂದರೆ ಅದಕ್ಕಾಗಿ ಹಿಂಜರಿಯುವುದಿಲ್ಲ” ಎಂದು ಹೇಳಿದ್ದರು ಸಿದ್ದರಾಮಯ್ಯ. ಈ ವಿಚಾರವಾಗಿ ಬಿಜೆಪಿ ಮುಖಂಡರು ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದಿದ್ದರು. ಎಷ್ಟೇ ಟೀಕೆಗಳು ಬಂದರೂ ಸಿದ್ದರಾಮಯ್ಯ ತಲೆಕೆಡಿಸಿಕೊಳ್ಳಲಿಲ್ಲ.

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ದಿನಗಳು ಸಮೀಪಿಸುತ್ತಿದ್ದಂತೆ ದಕ್ಷಿಣ ಭಾರತದಲ್ಲಿ ಬಿಜೆಪಿ ಖಾತೆ ತೆರೆಯಬೇಕೆಂಬ ಕಾರಣಕ್ಕೆ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕರ್ನಾಟಕ ಭೇಟಿ, ಸಮಾವೇಶಗಳು ಹೆಚ್ಚಾದವು. ಕರ್ನಾಟಕದಲ್ಲಿ ಖಾತೆ ತೆರೆಯುವ ಮೂಲಕ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಮಲ ಅರಳುತ್ತದೆ ಎಂಬ ಬಿಜೆಪಿ ಲೆಕ್ಕಾಚಾರಕ್ಕೆ ಕರ್ನಾಟಕದಲ್ಲಿ ತಾಳೆಯಾಗುವಂಥದ್ದು ಯಾವುದೂ ಕೇಸರಿ ಪಕ್ಷಕ್ಕೆ ಸಿಕ್ಕಿಲ್ಲ. ಈ ವಿಚಾರದಲ್ಲಿ ಖುದ್ದು ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್‌ ಶಾಗೂ ಕರ್ನಾಟಕದ ಜನರ ರಾಜಕೀಯ ನಾಡಿ ಮಿಡಿತವನ್ನು ಅರಿಯುವುದು ಸಾಧ್ಯವಾಗಲಿಲ್ಲ.

ಇದರಿಂದ ನಿರಾಶರಾಗದ ಬಿಜೆಪಿ ಪ್ರಮುಖರು ತಮ್ಮ ನೇರ ಬಾಣವನ್ನು ಪ್ರಯೋಗಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ. ಆವರೆಗೂ ರಾಹುಲ್‌ ಗಾಂಧಿಯನ್ನು ಲೇವಡಿ ಮಾಡಿಕೊಂಡೇ ಬಂದಿದ್ದ ಬಿಜೆಪಿ ದಿಗ್ಗಜರು ಸಿದ್ದರಾಮಯ್ಯ ಅವರ ವಿರುದ್ಧವೂ ಮೊದಲು ಬಿಟ್ಟಿದ್ದು ಲೇವಡಿಯ ಬಾಣವನ್ನೇ. ಆದರೆ, ಲೇವಡಿಗಳ ಬಗ್ಗೆ ಸಿದ್ದರಾಮಯ್ಯ ಸೊಪ್ಪು ಹಾಕದಿರುವುದನ್ನು ಮನಗಂಡ ಬಿಜೆಪಿ ಸಿದ್ದರಾಮಯ್ಯ ವಿರುದ್ಧ ನೇರ ಟೀಕೆಗೆ ಇಳಿಯಿತು.

“ಸಿದ್ದರಾಮಯ್ಯ ಅಹಿಂದ ಅಲ್ಲ ಅಹಿಂದು” ಎಂದು ಅಮಿತ್‌ ಶಾ ಟೀಕೆ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, “ಅಮಿತ್‌ ಶಾ ತಾವು ಹಿಂದುವೋ, ಜೈನರೋ ಎಂಬುದನ್ನು ಮೊದಲು ಸ್ಪಷ್ಟ ಪಡಿಸಲಿ” ಎಂದು ಹೇಳುವ ಧರ್ಮದ ವಿಚಾರದಲ್ಲಿ ಬಿಜೆಪಿ ತಮ್ಮ ಕಾಲೆಳೆಯುವುದನ್ನು ಕಟ್ಟಿಹಾಕಿದ್ದರು.

“ಸಿದ್ದರಾಮಯ್ಯ ಸರಕಾರ ಭ್ರಷ್ಟಚಾರದಲ್ಲಿ ಮುಳುಗಿದೆ” ಎಂದು ಮೋದಿ ಟೀಕಿಸಿದಾಗ ಇದಕ್ಕೆ ಪುರಾವೆ ಕೊಡಿ ಎಂದು ನೇರವಾಗಿ ಮೋದಿಯನ್ನು ಪ್ರಶ್ನಿಸಿದವರು ಸಿದ್ದರಾಮಯ್ಯ. ಮೋದಿ ಟೀಕೆಗಳಿಗೆ ಸಮರ್ಥವಾಗಿ ಎದುರೇಟು ಕೊಡುತ್ತಾ ಬಂದ ಸಿದ್ದರಾಮಯ್ಯ ಮುಂದುವರಿದು ಮೋದಿ ಸರಕಾರದ ಸಾಧನೆ ಹಾಗೂ ತಮ್ಮ ಸರಕಾರದ ಸಾಧನೆಯ ಪಟ್ಟಿಗಳನ್ನು ಮುಂದಿಡುತ್ತಾ ಹೋದರು.

ಒಂದು ಹಂತದಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ಮಟ್ಟದ ಮುಖಂಡರಿಗೂ ಮೋದಿ ವಿರುದ್ಧ ಮಾತನಾಡುವ ಪ್ರಾದೇಶಿಕ ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ನಡೆ ಫಲ ಕೊಡುತ್ತದೆ ಎಂಬುದು ಅರ್ಥವಾದಂತೆ ಕಾಣುತ್ತದೆ. ಹೀಗಾಗಿ ಖುದ್ದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಳ್ಳುತ್ತಾ ಬಂದರು. ಮೋದಿ ವಿರುದ್ಧ ಗಟ್ಟಿಯಾಗಿ ಮಾತನಾಡುವ ಒಬ್ಬ ನಾಯಕನೂ ರಾಷ್ಟ್ರಮಟ್ಟದಲ್ಲಿ ಕಾಣದಿದ್ದಾಗ ಕಾಂಗ್ರೆಸ್‌ಗೆ ಅನುಕೂಲಕಾರಿಯಾಗಿ ಕಂಡಿದ್ದು ಸಿದ್ದರಾಮಯ್ಯ.

“ಸಿದ್ದರಾಮಯ್ಯ ಅವರಿಗೆ ತಮ್ಮ ಮಾತಿನ ಬಗ್ಗೆ, ನಡೆಯ ಬಗ್ಗೆ ಸ್ಪಷ್ಟತೆ ಇದೆ. ಹೀಗಾಗಿ ಅವರು ವಿನಾ ಕಾರಣ ಟೀಕೆಗಳಿಗೆ ಹೋಗುವುದಿಲ್ಲ. ತಮ್ಮ ವಿರುದ್ಧ ಬಂದ ಗಂಭೀರ ಆರೋಪಗಳಿಗೆ ತಿರುಗೇಟು ನೀಡದೆಯೂ ಸುಮ್ಮನೆ ಇರುವವರಲ್ಲ. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮೋದಿ ಅವರ ವಿರುದ್ಧ ಗಟ್ಟಿಯಾಗಿ ಮಾತನಾಡುವ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ” ಎನ್ನುತ್ತಾರೆ ಕಾಂಗ್ರೆಸ್‌ ಮುಖಂಡ ವಿ.ಎಸ್. ಉಗ್ರಪ್ಪ.

“ಸಿದ್ದರಾಮಯ್ಯ ದರ್ಪದ ವ್ಯಕ್ತಿ ಎಂದು ಕೆಲವರು ಆರೋಪ ಮಾಡುತ್ತಾರೆ. ಆದರೆ, ಅದು ದರ್ಪ ಅಲ್ಲ. ಗಟ್ಟಿಯಾಗಿ ಮಾತನಾಡುವ ಮೂಲಕವೇ ಅವರು ಮೋದಿ ಅವರನ್ನು ಎದುರಿಸಲು ಸಾಧ್ಯವಾಗಿರುವುದು. ಇದನ್ನೇ ದರ್ಪ ಎಂದು ಕರೆಯುವುದು ಸರಿಯಲ್ಲ” ಎಂಬುದು ಅವರ ಮಾತು.

ಕಾಂಗ್ರೆಸ್‌ನ ವಲಸೆ ಹಕ್ಕಿ:

ಜೆಡಿಎಸ್‌ನಿಂದ ಹೊರಬಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ರಾಜಕೀಯ ಪಕ್ಷವೊಂದರಲ್ಲಿ ನೆಲೆಯ ಅಗತ್ಯವಿದ್ದಂತೆ ಕಾಂಗ್ರೆಸ್‌ಗೂ ಸಿದ್ದರಾಮಯ್ಯ ಅಗತ್ಯ ಇತ್ತು ಎಂಬ ಮಾತುಗಳಿವೆ. ಹೀಗಾಗಿಯೇ ಅಹಿಂದ ಮುಖಂಡರೊಟ್ಟಿಗೆ ಕಾಂಗ್ರೆಸ್‌ ಸೇರಿದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ನಲ್ಲಿ ಸ್ಥಾನಮಾನಗಳು ದೊರಕುತ್ತಾ ಹೋದವು. ಸಿದ್ದರಾಮಯ್ಯ ಬಗ್ಗೆ ಏನೇ ಅಪಸ್ವರಗಳು ಕಾಂಗ್ರೆಸ್‌ನಲ್ಲಿ ಇದ್ದರೂ ಕಾಂಗ್ರೆಸ್‌ ಹೈಕಮಾಂಡ್‌ ಸಿದ್ದರಾಮಯ್ಯ ಅವರಿಗೆ ಕಡಿವಾಣ ಹಾಕಲು ಮುಂದಾಗಲಿಲ್ಲ. ಹೀಗಾಗಿಯೇ ಸಿದ್ದರಾಮಯ್ಯ ತಾವು ನಡೆದಿದ್ದೇ ದಾರಿ ಎಂಬಂತಾದರು ಎನ್ನಲಾಗುತ್ತದೆ.

ಮೂಲ ಕಾಂಗ್ರೆಸಿಗರನ್ನು ತುಳಿದು ಬೆಳೆಯಬೇಕೆಂದು ನಿಶ್ಚಯಿಸಿಕೊಂಡೇ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬಂದಿದ್ದು, ಮೂಲ ಕಾಂಗ್ರೆಸಿಗರ ಸಹನೆಯನ್ನು ಸಿದ್ದರಾಮಯ್ಯ ಅಸಹಾಯಕತೆ ಎಂದು ಭಾವಿಸಿದರು ಎನ್ನುತ್ತಾರೆ ಪಕ್ಷ ತೊರೆದಿರುವ ಮುಖಂಡರು.

“ಸಿದ್ದರಾಮಯ್ಯ ಮೂಲ ಕಾಂಗ್ರೆಸಿಗರನ್ನು ತುಳಿದೇ ಬೆಳೆದರು. ಕಾಂಗ್ರೆಸ್‌ ಪಕ್ಷದಲ್ಲಿರುವ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅವರಿಗೆ ಬೇಕಾಗಿರಲಿಲ್ಲ. ತಾವೊಬ್ಬರು ಬೆಳೆದರೆ ಸಾಕು ಎಂಬಂಥ ಮನೋಭಾವ ಸಿದ್ದರಾಮಯ್ಯ ಅವರದ್ದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಡೆಯುವ ರಾಜಕಾರಣವನ್ನು ಅವರು ಕಲಿತೇ ಇಲ್ಲ” ಎನ್ನುತ್ತಾರೆ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಈಗಿನ ಜೆಡಿಎಸ್‌ ಮುಖಂಡ ಎಚ್‌. ವಿಶ್ವನಾಥ್‌.

“ಕಾಂಗ್ರೆಸ್‌ ಪಕ್ಷ ಸಿದ್ದರಾಮಯ್ಯ ಅವರನ್ನು ಒಪ್ಪಿಕೊಂಡು ಪಕ್ಷದೊಳಗೆ ಕರೆದುಕೊಂಡಿತು. ಜಿ. ಪರಮೇಶ್ವರ್‌, ಖರ್ಗೆ, ಮೊಯಿಲಿ ಮೊದಲಾದರು ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬರಲು ನೇರವಾಗಿ ಸಹಕಾರ ನೀಡಿದವರು. ಇಂದು ಸಿದ್ದರಾಮಯ್ಯ ಅವರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಇಂಥ ಸ್ವಾರ್ಥದ ರಾಜಕಾರಣ ಯಾವತ್ತಿಗೂ ಮಾದರಿ ಆಗಲಾರದು” ಎಂಬುದು ವಿಶ್ವನಾಥ್‌ ಅಭಿಪ್ರಾಯ.

ಆದರೆ, ಸಿದ್ದರಾಮಯ್ಯ ಆಪ್ತರು ಮಾತ್ರ ಅವರ ವಿರುದ್ಧದ ಈ ಆರೋಪಗಳನ್ನು ಒಪ್ಪುವುದಿಲ್ಲ. ಸಿದ್ದರಾಮಯ್ಯ ದರ್ಪ, ಸ್ವಾರ್ಥದ ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಸುಳ್ಳು ಎಂದು ವಾದಿಸುವ ಪಡೆಯೇ ಸಿದ್ದರಾಮಯ್ಯ ಬೆನ್ನಿಗಿದೆ. ಸಿದ್ದರಾಮಯ್ಯ ಹಿಂದುಳಿದ ಜನಾಂಗದಿಂದ ಬಂದ ‘ಜನಪರ’ ನಾಯಕ, ಇದನ್ನು ಸಹಿಸಲು ಸಾಧ್ಯವಾಗದವರು ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರ ಮಾಡುತ್ತಾರೆ ಎಂಬುದು ಅವರ ಬೆಂಬಲಿಗರ ವಾದ.

“ಸಿದ್ದರಾಮಯ್ಯ ಕಾಂಗ್ರೆಸಿಗರನ್ನು ವಿಶ್ವಾಸಕ್ಕೆ ತೆಗದುಕೊಳ್ಳದೇ ಇದ್ದಿದ್ದರೆ ಕಾಂಗ್ರೆಸ್‌ ಪಕ್ಷದಲ್ಲಿ ವಿಪಕ್ಷ ನಾಯಕ, ಮುಖ್ಯಮಂತ್ರಿಯಾಗಲು ಸಾಧ್ಯವೇ ಇರಲಿಲ್ಲ. ಪಕ್ಷ ಎಂದ ಮೇಲೆ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಆದರೆ, ಸಿದ್ದರಾಮಯ್ಯ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂಬ ಮಾತು ಸುಳ್ಳು” ಎನ್ನುತ್ತಾರೆ ವಿ.ಎಸ್‌. ಉಗ್ರಪ್ಪ.

“ಒಂದು ವೇಳೆ ಸಿದ್ದರಾಮಯ್ಯ ಕಾಂಗ್ರೆಸ್‌ ಪಕ್ಷದ ಶಾಸಕರು, ಹೈಕಮಾಂಡ್‌ ಹಾಗೂ ಸಂಪುಟದ ಸಹೋದ್ಯೋಗಿಗಳ ಜತೆಗೆ ವಿಶ್ವಾಸದಿಂದ ಇರದಿದ್ದರೆ ಐದು ವರ್ಷ ಅಧಿಕಾರದಲ್ಲಿರಲು ಸಾಧ್ಯವಾಗುತ್ತಿತ್ತೇ? ಪಕ್ಷ, ಸರಕಾರ ಎಂದಾಗ ಕೆಲವು ಗೊಂದಲಗಳು ಉಂಟಾಗುವುದು ಸಹಜ. ಅದೇ ಕಾರಣಕ್ಕೆ ಸಿದ್ದರಾಮಯ್ಯ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಲಾಗದು” ಎಂಬುದು ಅವರ ಮಾತು.

ದೇಶದಲ್ಲಿ ಮೋದಿ ಅಲೆ ಜೋರಾಗಿದ್ದ ಸಂದರ್ಭದಲ್ಲಿ ಮೋದಿ ವಿರುದ್ಧ ಗಟ್ಟಿಯಾಗಿ ಮಾತನಾಡಿದ ಕಾರಣಕ್ಕೆ ಸುದ್ದಿಯಾಗಿದ್ದ ಸಿದ್ದರಾಮಯ್ಯ ಇಂದು ಮೋದಿ ಅಲೆಯನ್ನು ದಕ್ಷಿಣ ಭಾರತದಲ್ಲಿ ಕಟ್ಟಿಹಾಕುವ ಮಟ್ಟಕ್ಕೆ ತಮ್ಮ ಪ್ರಭಾವ ಬೆಳೆಸಿಕೊಂಡಿದ್ದಾರೆ. ಮೋದಿ ಅಲೆ ಎಂಬುದು ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ ದೊಡ್ಡ ಮಟ್ಟಕ್ಕೆ ಕಾಣುತ್ತಿಲ್ಲ ಎಂದರೆ ಅದಕ್ಕೆ ಸಿದ್ದರಾಮಯ್ಯ ಪ್ರಭಾವವೂ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ.