samachara
www.samachara.com
‘ಬಹಿರಂಗ ಪ್ರಚಾರ ಅಂತ್ಯ’: ಗುರುವಾರ ಸಂಜೆಯಿಂದ ಮತದಾನ ಮುಗಿಯುವವರೆಗೆ...
COVER STORY

‘ಬಹಿರಂಗ ಪ್ರಚಾರ ಅಂತ್ಯ’: ಗುರುವಾರ ಸಂಜೆಯಿಂದ ಮತದಾನ ಮುಗಿಯುವವರೆಗೆ...

ಹೀಗಾಗಿ ಚುನಾವಣಾ ಆಯೋಗ ಮತದಾನಕ್ಕೆ ಎರಡು ದಿನ ಮೊದಲೇ ಬಹಿರಂಗ ಪ್ರಚಾರಕ್ಕೆ ತಡೆ ಹಾಕುತ್ತದೆ. ಇದು ನಡೆದು ಬಂದ ಸಂಪ್ರದಾಯ. ಈ ಸಮಯದಲ್ಲಿ ಏನಿರುತ್ತೆ? ಏನೇನು ಇರುವ ಹಾಗಿಲ್ಲ? ವಿವರ ಇಲ್ಲಿದೆ. 

ಕರ್ನಾಟಕ ವಿಧಾನಸಭಾ ಚುನಾವಣೆ ಅಂತೂ ಇಂತೂ ಕೊನೆ ಹಂತಕ್ಕೆ ಬಂದು ನಿಂತಿದೆ.

ಮತದಾರ ಪ್ರಭು ಯಾರ ಕೈ ಎತ್ತಿ ಹಿಡಿಯಲಿದ್ದಾನೆ ಎಂದು ತಿಳಿಯುವ ಕೂತೂಹಲವೂ ಹೆಚ್ಚಿದೆ. ಸುರಕ್ಷಿತ ಮತ್ತು ನ್ಯಾಯಸಮ್ಮತ ಮತದಾನ ನಡೆಸಲು ಚುನಾವಣಾ ಆಯೋಗವೂ ಸಾಕಷ್ಟು ತಯಾರಿ ಮಾಡಿಕೊಂಡಿದೆ. ಚುನಾವಣೆಯಲ್ಲಿ ಯಾರಿಗೆ ಮತ ಹಾಕಬೇಕು ಎಂದು ಮತದಾರ ದೃಢವಾಗಿ ಯೋಚಿಸುವುದು ಇದೇ ಸಮಯದಲ್ಲೇ. ಹೀಗಾಗಿ ಇದನ್ನು ಮತದಾರನೊಳಗೆ ನಡೆವ ‘ಮತ ಮಂಥನ’ ಎಂದು ಕರೆಯಬಹುದು.

ಆದರೆ ಇದೇ ವೇಳೆ ಜನರನ್ನು ಜಾತಿ, ಧರ್ಮ, ಹಣ, ಹೆಂಡ ಇತ್ಯಾದಿಗಳ ಅಂಶಗಳನ್ನು ಮುಂದಿಟ್ಟು ಆಮಿಷಗಳನ್ನು ಒಡ್ಡಿ ಜನಾಭಿಪ್ರಾಯವನ್ನು ತಿರುಚುವ ಸಾಧ್ಯತೆ ಸಾಮಾನ್ಯವಾಗಿ ಕಂಡುಬರುತ್ತದೆ. ಹೀಗಾಗಿ ಚುನಾವಣಾ ಆಯೋಗ ಮತದಾನಕ್ಕೆ ಎರಡು ದಿನ ಮೊದಲೇ ಬಹಿರಂಗ ಪ್ರಚಾರಕ್ಕೆ ತಡೆ ಹಾಕುತ್ತದೆ. ಇದು ನಡೆದು ಬಂದ ಸಂಪ್ರದಾಯ.

48 ಗಂಟೆಗಳ ಮೊದಲು:

Karnataka Election Notification 12th May 2018.pdf
download

ಜನಪ್ರತಿನಿಧಿ ಆಯ್ಕೆ ಕಾಯ್ದೆ 1951 ಸೆಕ್ಷನ್ 126ರ ಅನ್ವಯ ಕೊನೆ 48 ಗಂಟೆಗಳಲ್ಲಿ ಚುನಾವಣಾ ಆಯೋಗವು ಬಹಿರಂಗ ಪ್ರಚಾರವನ್ನು ನಿಷೇಧಿಸುತ್ತದೆ. ಅದರ ಅಡಿಯಲ್ಲಿ ಕರ್ನಾಟಕದಲ್ಲಿ ಗುರುವಾರ ಸಂಜೆ 6 ಗಂಟೆಯಿಂದ 12ರ ಸಂಜೆ ಮತದಾನ ಪ್ರಕ್ರಿಯೆ ಮುಗಿಯುವವರೆಗೂ ಇದು ಜಾರಿಯಲ್ಲಿ ಇರುತ್ತದೆ. ಮೈಕ್, ಧ್ವನಿ ವರ್ಧಕ ಬಳಕೆ, ಸಮಾವೇಶ, ಗುಂಪು ಚರ್ಚೆ, ವಾಹನ ಬಳಕೆ ಇತ್ಯಾದಿ ಬಹಿರಂಗ ಪ್ರಚಾರ ಮಾಡುವುದಕ್ಕೆ ತಡೆ ಹಾಕಲಾಗಿದೆ.

ಕಾಲ್ನಡಿಗೆಯಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಮಾಡಬಹುದು. ಆದರೆ ನೂರಾರು ಮಂದಿ ಒಟ್ಟಿಗೆ ಪ್ರಚಾರ ಮಾಡುವುದಕ್ಕೂ ತಡೆ ಇದೆ. ಒಂದು ತಂಡದಲ್ಲಿ ಗರಿಷ್ಠ ಹತ್ತು ಮಂದಿ ಅಷ್ಟೆ ಇರಲು ಅವಕಾಶ ಇದೆ. ಈ ವೇಳೆ ಪ್ರಚಾರ ಮಾಡುವವರ ಬಳಿ ಅಪಾಯಕಾರಿ ಮಾರಕಾಸ್ತ್ರ, ಆಮಿಷ ಇತ್ಯಾದಿಗಳು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಅವಕಾಶ ಇದೆ. ಮತದಾರರನ್ನು ಬೆದರಿಸುವ, ಹೆದರಿಸಿ ಮತ ಪಡೆಯುವುದು ಕಾನೂನಿನ ಪ್ರಕಾರ ಗಂಭೀರ ಅಪರಾಧ ಎನ್ನಿಸಿಕೊಳ್ಳುತ್ತದೆ.

ಪ್ರವಾಸಿಗರು ಕ್ಷೇತ್ರಗಳ ವಸತಿಗೃಹದಲ್ಲಿ ತಂಗಿದ್ದರೆ ಅವರು ಪ್ರವಾಸಕ್ಕೆ ಬಂದಿರುವುದಕ್ಕೆ ಸೂಕ್ತ ದಾಖಲೆ ಒದಗಿಸಬೇಕು. ಉಳಿದಂತೆ ಕಲ್ಯಾಣಮಂಟಪ, ವಸತಿಗೃಹ, ಕ್ಲಬ್, ಬಾರ್‌ಗಳಲ್ಲಿ ಇತರ ಕ್ಷೇತ್ರಗಳ ಮತದಾರರು ತಂಗಿರುವ ಬಗ್ಗೆ ತಪಾಸಣೆ ಮಾಡಲಾಗುವುದು ಮತ್ತು ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಚುರುಕುಗೊಳಿಸಲಾಗುವುದು. ಈ ಹಿನ್ನೆಲೆಯಲ್ಲಿ ಆಯಾ ವಿಧಾನಸಭಾ ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರಬಿಟ್ಟು ಹೊರಗೆ ಹೋಗಬೇಕು. ಸ್ವ ಕ್ಷೇತ್ರದ ಮತದಾರರು, ಅಭ್ಯರ್ಥಿಗಳಿಗೆ ಮಾತ್ರ ಈ ನಿರ್ಬಂಧ ಅನ್ವಯಿಸದು.

ಮತದಾನದ ದಿನ:

ಬಿಗಿ ಭದ್ರತೆ ನಡುವೆ ಕರ್ನಾಟಕದಲ್ಲಿ ಮತದಾನ ನಡೆಯಲು ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. 
ಬಿಗಿ ಭದ್ರತೆ ನಡುವೆ ಕರ್ನಾಟಕದಲ್ಲಿ ಮತದಾನ ನಡೆಯಲು ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. 
ಇಂಡಿಯನ್ ಎಕ್ಸ್‌ಪ್ರೆಸ್. 

ಇನ್ನು ಮತದಾನದ ದಿನ ಮತಗಟ್ಟೆಯ 100 ಮೀಟರ್ ಸುತ್ತಳತೆ ವ್ಯಾಪ್ತಿಯಲ್ಲಿ ಮತಗಟ್ಟೆ ಸಿಬ್ಬಂದಿ, ಅಧಿಕಾರಿಗಳನ್ನು ಹೊರತುಪಡಿಸಿ ಉಳಿದವರು ಮೊಬೈಲ್, ವೈರ್ಲೆಸ್ ಫೋನ್ ಹೊಂದಿರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಈ ವೇಳೆ ಉಚಿತ ತಿಂಡಿ ತೀರ್ಥ ಇತ್ಯಾದಿಯಾಗಿ ಹಂಚುವುದು, ಹಣ ಅಮಿಷಗಳನ್ನು ಒಡ್ಡುವುದಕ್ಕೂ ತಡೆ ನೀಡಲಾಗಿದೆ.

ಅಲ್ಲದೆ ಮತದಾನದ ದಿನ ಎಲ್ಲ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಚುನಾವಣಾ ಆಯೋಗ ಸಂಬಳ ಸಹಿತ ರಜೆ ಘೋಷಿಸಿ ಆದೇಶಿಸಿದೆ. ಉದ್ಯೋಗಿಗಳು ಮತಚಲಾಯಿಸುವುದಕ್ಕೆ ಅನುಕೂಲವಾಗಲು ಅನುವು ಮಾಡಿಕೊಡುವಂತೆ ಆಯೋಗ ಈಗಾಗಲೇ ಕಾರ್ಖಾನೆ, ಸರ್ಕಾರಿ ಕಚೇರಿಗಳಿಗೆ ಸುತ್ತೋಲೆ ಹೊರಡಿಸಿದೆ.

ಗುಂಪು ಗುಂಪಾಗಿ ಜನರನ್ನು ಒಟ್ಟಾಗಿ ಒಂದು ಕ್ಷೇತ್ರದಿಂದ ಇನ್ನೊಂಡೆಗೆ ಕರೆದೊಯ್ಯುವುದು, ಭಾರಿ ಪ್ರಮಾಣದ ಜನರನ್ನು ಮತ್ತೊಂದು ಕ್ಷೇತ್ರದಲ್ಲಿ ಇಡುವುದು ಇತ್ಯಾದಿಗಳಿಗೆ ನಿಷೇಧ ಹೇರಲಾಗಿದೆ. ಒಂದೊಮ್ಮೆ ಅಗತ್ಯವಿದ್ದಲ್ಲಿ ಚುನಾವಣಾ ಆಯೋಗದಿಂದ ಅಂಥವರು ಕಾರಣ ನೀಡಿ ಅನುಮತಿ ಪಡೆಯಬೇಕಾಗುತ್ತದೆ.

ಮಧ್ಯ ಮರಾಟಕ್ಕೆ ತಡೆ:

ಕೊನೆಯ ಹಂತದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಿರುವ ಆಯೋಗ. 
ಕೊನೆಯ ಹಂತದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಿರುವ ಆಯೋಗ. 

ಮತದಾನದ ಪ್ರಯುಕ್ತ ಮೇ. 10ರ ಸಂಜೆ 6 ಗಂಟೆಯಿಂದ 12ರ ಮಧ್ಯರಾತ್ರಿವರೆಗೆ ಮತ್ತು ಮತ ಎಣಿಕೆ ಹಿನ್ನಲೆಯಲ್ಲಿ ಮೇ14ರ ಮಧ್ಯರಾತ್ರಿಯಿಂದ 15ರ ಮಧ್ಯರಾತ್ರಿವರೆಗೆ ಮದ್ಯ ಮಾರಾಟ, ಸಾಗಣೆ, ಮಾರಾಟ, ಶೇಖರಣೆ ನಿರ್ಬಂಧಿಸಲಾಗಿದೆ.

ಎಲ್ಲ ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಕಚೇರಿ, ಶಾಲಾ, ಕಾಲೇಜು, ವಿವಿಧ ಸಂಘ ಸಂಸ್ಥೆ, ಖಾಸಗಿ ಸಂಸ್ಥೆಗಳಿಗೆ ಮತ್ತು ಸ್ಥಳೀಯ ಸಂಸ್ಥೆ ಮತ್ತು ಬ್ಯಾಂಕ್‌ಗಳಿಗೆ ಸಾರ್ವತ್ರಿಕ ರಜೆ ಘೊಷಿಸಲಾಗಿದೆ. ಸಾರ್ವಜನಿಕ ಸಂಸ್ಥೆಗಳಲ್ಲಿ ಕಾಯಂ ಮತ್ತು ದಿನಗೂಲಿ ನೌಕರರಿಗೆ ಮತದಾನ ದಿನದಂದು ವೇತನ ಸಹಿತ ರಜೆ ನೀಡಲು ಸೂಚಿಸಲಾಗಿದೆ. ರಜೆ ನೀಡದೆ ಮತದಾನಕ್ಕೆ ಅಡ್ಡಿ ನೀಡಿದರೆ ಅಪರಾಧ ಎನ್ನಿಸಿಕೊಳ್ಳುತ್ತದೆ.

ಮಾಧ್ಯಮಗಳ ಹೊಣೆಗಾರಿಕೆ:

ಕನ್ನಡದ ಟಿವಿ ವಾಹಿನಿಗಳು, ವೃತ್ತ ಪತ್ರಿಕೆಗಳಿಗೆ ಕೊನೆಯ ಹಂತದಲ್ಲಿ ನಿರ್ಬಂಧಗಳನ್ನು ವಿಧಿಸಲಾಗಿದೆ. 
ಕನ್ನಡದ ಟಿವಿ ವಾಹಿನಿಗಳು, ವೃತ್ತ ಪತ್ರಿಕೆಗಳಿಗೆ ಕೊನೆಯ ಹಂತದಲ್ಲಿ ನಿರ್ಬಂಧಗಳನ್ನು ವಿಧಿಸಲಾಗಿದೆ. 

ಚುನಾವಣಾ ಆಯೋಗ ಟಿವಿ, ನ್ಯೂಸ್ ಪೇಪರ್, ರೇಡಿಯೋ ಇತ್ಯಾದಿಗಳಿಗೂ ಈ ಅವಧಿಯಲ್ಲಿ ನಿರ್ಬಂಧ ವಿಧಿಸಿದೆ. ಈ 48 ಗಂಟೆಗಳ ಅವಧಿಯಲ್ಲಿ ಯಾವುದೇ ವ್ಯಕ್ತಿ, ಪಕ್ಷದ ಪರವಾದ ಚರ್ಚೆಗಳ ಮೇಲೆ ನಿಷೇಧ ಹೇರಿದೆ. ವಿಶ್ಲೇಷಣೆ ನೆಪದಲ್ಲಿ ಅಭ್ಯರ್ಥಿ ಅಥವಾ ಪಕ್ಷಗಳ ಪರ ಒಲವು ಮೂಡಿಸುವ ಸಾಧ್ಯತೆಗಳನ್ನು ತಡೆಯಲು ಆಯೋಗ ಕ್ರಮಗಳನ್ನು ಕೈಗೊಂಡಿದೆ.

ಅಲ್ಲದೆ ಚುನಾವಣ/ ಮತದಾನ ಪೂರ್ವ ಸಮೀಕ್ಷೆಗಳ ಮೇಲೂ ನಿಷೇಧ ಜಾರಿಯಲ್ಲಿ ಇರುತ್ತದೆ. ಈ ವೇಳೆ ಎಲ್ಲ ಮಾಧ್ಯಮಗಳಲ್ಲಿ ರಾಜಕೀಯ ಪಕ್ಷ ಹಾಗೂ ವ್ಯಕ್ತಿಗಳ ಕುರಿತು ಅಭಿಪ್ರಾಯ ರೂಪಿಸುವ ಜಾಹಿರಾತುಗಳ ಪ್ರಸಾರಕ್ಕೂ ನಿರ್ಬಂಧ ವಿಧಿಸಲಾಗಿದೆ. ಒಂದು ವೇಳೆ ಜಾಹಿರಾತು ಪ್ರಸಾರವಾದರೆ ಅದು ಮಾಧ್ಯಮ ವೀಕ್ಷಣಾ ಸಮಿತಿ (ಎಂಸಿಎಂಸಿ) ಅನುಮತಿ ಪಡೆದಿರಬೇಕಾಗುತ್ತದೆ.

ಬಹಿರಂಗ ಪ್ರಚಾರ ಅಂತ್ಯಗೊಂಡ ನಂತರ ಮಾಧ್ಯಮಗಳು ಚುನಾವಣಾ ಪಕ್ಷ ಹಾಗೂ ಅಭ್ಯರ್ಥಿಗಳ ಹೊರತಾಗಿ ಪೊಲೀಸ್ ಭದ್ರತೆ, ಮತದಾನ ಮಾಡುವ ವಿಧಾನ, ಮತದಾನ ಕೇಂದ್ರಗಳು, ಮತದಾರರ ಸಂಖ್ಯೆ, ಪೊಲಿಂಗ್ ಬೂತ್ ಗಳ ಸಂಖ್ಯೆ ಇತ್ಯಾದಿಗಳ ಬಗ್ಗೆ ಮಾತ್ರ ಮಾಹಿತಿ ಪ್ರಸಾರ ಮಾಡಲು ಅನುಮತಿ ಇರುತ್ತದೆ.

ಆನ್‌ಲೈನ್‌ಗೂ ಮೂಗುದಾರ:

ಬಹಿರಂಗ ಪ್ರಚಾರ ಅಂತ್ಯ ಆದ ನಂತರ ಸಾಮಾಜಿಕ ಜಾಲತಾಣಗಳ ಬಳಕೆಯ ಮೇಲೂ ನಿರ್ಬಂಧಗಳಿವೆ. 
ಬಹಿರಂಗ ಪ್ರಚಾರ ಅಂತ್ಯ ಆದ ನಂತರ ಸಾಮಾಜಿಕ ಜಾಲತಾಣಗಳ ಬಳಕೆಯ ಮೇಲೂ ನಿರ್ಬಂಧಗಳಿವೆ. 
ದುರ್ಬಳಕೆ ಕಾರಣ ನೀಡಿ ಸಾಮಾಜಿಕ ಮಾಧ್ಯಮದ ಬಳಕೆಯನ್ನು ನಿಲ್ಲಿಸಲಾಗದು. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಫೇಸ್ಬುಕ್ ಮತದಾನ ಸಮಿತಿಯು ಸಾಮಾಜಿಕ ಮಾಧ್ಯಮದ ಪಾಲುದಾರನಾಗಿ ಉಳಿಯಲಿದೆ. ಹಾಗೊಂದು ವೇಳೆ ವ್ಯಕ್ತಿ ಹಾಗೂ ಪಕ್ಷದ ಪರ ಬಲ್ಕ್ ಆದ ಪ್ರಮಾಣದಲ್ಲಿ ಬಳಕೆ ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು.
ಓಂ ಪ್ರಕಾಶ್ ರಾವತ್‌, ಮುಖ್ಯ ಚುನಾವಣಾ ಅಧಿಕಾರಿ. 

ಚುನಾವಣಾ ಆಯೋಗವು ಫೇಸ್ ಬುಕ್, ವಾಟ್ಸಾಪ್, ಟ್ವಿಟರ್, ಇನ್‌ಸ್ಟಾಗ್ರಾಂ ಇತ್ಯಾದಿ ಸಾಮಾಜಿಕ ಜಾಲತಾಣಗಳ ಮೇಲೆ ನಿಷೇಧ ಹೇರುವುದನ್ನು ಕೈ ಬಿಟ್ಟಿದೆ. ಆದರೆ ಒಮ್ಮೆಲೆ ಬಾರಿ ಸಂಖ್ಯೆಯಲ್ಲಿ ಮಾಹಿತಿ ಬದಲಾವಣೆ ಮಾಡಿಕೊಳ್ಳುವುದಕ್ಕೆ ನಿಷೇಧ ಹೇರಿದೆ. ಅಂದರೆ ಒಂದೇಟಿಗೆ ಸಾವಿರಾರು ಸಂದೇಶಗಳನ್ನು ಕಳುಹಿಸುವವರ ಮೇಲೆ ನಿಗಾ ಇಡಲಾಗುವುದು ಎಂದು ಆಯೋಗ ಹೇಳಿದೆ.

ಸಾಮಾಜಿಕ ಜಾಲತಾಣಗಳನ್ನು ಗಮನಿಸುವ ಸಲುವಾಗಿ ಮೀಡಿಯಾ ಸರ್ಟಿಫೇಕೇಶ್ ಆಫ್ ಮಾನಿಟರಿಂಗ್ ಕಮಿಟಿ (ಎಂಸಿಎಂಸಿ)ಯನ್ನು ರಚಿಸಿದ್ದು ಯಾವುದೇ ಪಕ್ಷ, ವ್ಯಕ್ತಿಯ ಪರವಾಗಿ ಪ್ರಚಾರದಲ್ಲಿ ತೊಡಗುವ ನೆಟ್ಟಿಗರನ್ನು ಅದು ಗಮನಿಸುತ್ತಿರುತ್ತದೆ.

ಈ ಅವಧಿಯಲ್ಲಿ ಸಮಾಜಿಕ ಜಾಲತಾಣಗಳ ಮೂಲಕ ಜನರನ್ನು ಸೆಳೆಯುವುದು, ಯಾವುದೇ ಪಕ್ಷದ ಪ್ರಣಾಳಿಕೆ, ಭರವಸೆ ಇತ್ಯಾದಿ ಪ್ರಚಾರ ಕಂಡು ಬಂದಲ್ಲಿ, ಯಾರಾದರೂ ದೂರು ನೀಡಿದ್ದಲ್ಲಿ ಅಂತಹ ಪೋಸ್ಟ್‌, ಟ್ವೀಟ್, ಫೊಟೋಗಳನ್ನು ಹಂಚುವುದನ್ನು ತಡೆಯುವ ವ್ಯವಸ್ಥೆ ಇದೆ ಎಂದು ಹೇಳಲಾಗಿದೆ. ಪ್ರಚಾರದ ಲಾಭವನ್ನು ಪಡೆದುಕೊಳ್ಳುವ ಪಕ್ಷ ಅಥವಾ ಅಭ್ಯರ್ಥಿಯ ಮೇಲೆಯೇ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಆಯೋಗ ತಿಳಿಸಿದೆ.

ಇನ್ನು ಚುನಾವಣಾ ಆಯೋಗ ಕರ್ನಾಟಕದ ಮತದಾರರ ಸಂಖ್ಯೆ 4,90,06,901 (4.90 ಕೋಟಿ) ಎಂದು ಪರಿಗಣಿಸಿದೆ. ಇದು ಅಂತಿಮವಾಗಿ 4,96,82,368 (4.968 ಕೋಟಿ)ಗೆ ಏರಿಕೆಯಾಗಬಹುದು ಎಂದು ಅಂದಾಜಿಸಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 36 ಕ್ಷೇತ್ರಗಳ ಪರಿಶಿಷ್ಟ ಜಾತಿಗಳಿಗೂ, 15 ಕ್ಷೇತ್ರಗಳು ಪರಿಶಿಷ್ಟ ವರ್ಗಕ್ಕೂ ಮೀಸಲಾಗಿವೆ. 56, 696 ಮತದಾನ ಕೇಂದ್ರಗಳನ್ನು ನಿರ್ಮಿಸಲಾಗಿದ್ದು, 2013ಕ್ಕೆ ಹೋಲಿಸಿದರೆ ಶೇ.9ರಷ್ಟು ಹೆಚ್ಚು ಬೂತ್‌ಗಳನ್ನು ತೆರೆಯಲಾಗಿದೆ.

ಮತ ಚಲಾವಣೆಯ ಮೂಲಕ ಅಭ್ಯರ್ಥಿಯನ್ನು ಚುನಾಯಿಸಲು ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಅದಕ್ಕೂ ಮುನ್ನ ವಾತಾವರಣ ಹೇಗಿರಬೇಕು ಎಂಬುದನ್ನು ಇಲ್ಲಿ ಪರಿಚಯಿಸಲಾಗಿದೆ.