ಮತ ಚಲಾವಣೆಗೆ ಕ್ಷಣಗಣನೆ: ಈವರೆಗೆ ಬಂದ ಸಮೀಕ್ಷೆಗಳು ಹೇಳಿದ್ದೇನು?
COVER STORY

ಮತ ಚಲಾವಣೆಗೆ ಕ್ಷಣಗಣನೆ: ಈವರೆಗೆ ಬಂದ ಸಮೀಕ್ಷೆಗಳು ಹೇಳಿದ್ದೇನು?

ಭಾರತದಲ್ಲಿ ಚುನಾವಣೆಗಳು ಎದುರಾದರೆ ಸಮೀಕ್ಷೆಗಳಿಗೂ ಎಲ್ಲಿಲ್ಲದ ಮಾರ್ಕೆಟ್ ಲಭ್ಯವಾಗುತ್ತದೆ. ಕರ್ನಾಟಕದ ವಿಧಾನಸಭೆ ಚುನಾವಣೆಗೂ ನಾನಾ ಸಮೀಕ್ಷಗಳು ನಡೆದಿವೆ. ಇವುಗಳ ಮೇಲೊಂದು ಪಕ್ಷಿನೋಟ ಇಲ್ಲಿದೆ. 

ಕರ್ನಾಟಕ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇನ್ನೇನು 48 ಗಂಟೆಗಳಲ್ಲಿ ಮತದಾನ ಸಹ ಆರಂಭವಾಗಲಿದೆ. ಮೇ 15ಕ್ಕೆ ಅಧಿಕೃತ ಫಲಿತಾಂಶ ಬರಲಿದೆ.

ಆದರೆ ಅನಧಿಕೃತವಾಗಿ ಮತದಾನ ಪೂರ್ವ ಸಮೀಕ್ಷೆಗಳು ಈಗಾಗಲೇ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ನೀಡಿಬಿಟ್ಟಿವೆ. ಬಹುತೇಕ ಸಮೀಕ್ಷೆಗಳು ಅತಂತ್ರ ವಿಧಾನಸಭೆಯ ನಿರ್ಮಾಣವಾಗಲಿದೆ ಮತ್ತು ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದಿವೆ. ಸಿಫೋರ್ ಕಾಂಗ್ರೆಸ್ ಬಹುಮತ ಬರುತ್ತೆ ಅಂದ್ರೆ, ಟಿವಿ5 ಸಮೀಕ್ಷೆ ಬಿಜೆಪಿಗೆ ಬಹುಮತ ನೀಡಿದೆ. ಅಂತಿಮ ಫಲಿತಾಂಶ ಸಹಜವಾಗಿಯೇ ಈ ಸಮೀಕ್ಷೆಗಳ ವಿಶ್ವಾರ್ಹತೆ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟುಹಾಕಲಿದೆ.

ಕಾಂಗ್ರೆಸ್‌ಗೆ ಬಹುಮತ:

ಸಿಫೋರ್ ಸಮೀಕ್ಷೆ. 
ಸಿಫೋರ್ ಸಮೀಕ್ಷೆ. 

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮೊದಲು ಸದ್ದು ಮಾಡಿದ್ದು ಸಿಫೋರ್ ಸಮೀಕ್ಷೆ. ಸಿಫೋರ್ ಸಮೀಕ್ಷೆ 2013ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಿತ್ತು. ಸಿಫೋರ್ ಸಮೀಕ್ಷೆಯಂತೆ ಕಾಂಗ್ರೆಸ್ ಬಹುಮತ ಪಡೆದು ಐದು ವರ್ಷ ಸರ್ಕಾರ ನಡೆಸಿದೆ. 2018ರ ಚುನಾವಣೆಯಲ್ಲೂ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಸಿಫೋರ್ ಸಮೀಕ್ಷೆ ಹೇಳಿದೆ.

ಮಾರ್ಚ್ 30ರಂದು ತನ್ನ ಮೊದಲ ಸಮೀಕ್ಷೆ ಬಹಿರಂಗಗೊಳಿಸಿದ್ದ ಸಿಫೋರ್ ಕಾಂಗ್ರೆಸ್, 126ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತೆ ಎಂದಿತ್ತು. ಬಿಜೆಪಿ 70 ಮತ್ತು ಜೆಡಿಎಸ್ 27 ಸ್ಥಾನಗಳನ್ನ ಪಡೆಯಲಿವೆ ಎಂದು ಭವಿಷ್ಯ ನುಡಿದಿತ್ತು. ಏಪ್ರಿಲ್ 30ರಂದು ತನ್ನ ಎರಡನೇ ಸಮೀಕ್ಷೆ ಪ್ರಕಟಿಸಿದ್ದ ಸಿಫೋರ್, ಕಾಂಗ್ರೆಸ್ 118ರಿಂದ 128 ಸ್ಥಾನ ಗೆದ್ದು ಸರ್ಕಾರ ರಚಿಸಲಿದೆ. ಬಿಜೆಪಿ 63 ರಿಂದ 73 ಮತ್ತು ಜೆಡಿಎಸ್ ಮತ್ತು ಬಿಎಸ್‌ಪಿ ಮೈತ್ರಿಕೂಟ 29ರಿಂದ 36 ಸ್ಥಾನ ಗೆಲ್ಲಲಿದೆ ಎಂದು ಹೇಳಿದೆ. 20 ಸಾವಿರಕ್ಕಿಂತ ಹೆಚ್ಚು ಜನರನ್ನ ಮಾತನಾಡಿಸಿ ವಿವಿಧ ಆಯಾಮಗಳ ಪ್ರಶ್ನೆಗಳ ಮೂಲಕ ಅಭಿಪ್ರಾಯ ಸಂಗ್ರಹಿಸಿರೋ ಸಿಫೋರ್, ತನ್ನ ದತ್ತಾಂಶ ಶೇಕಡಾ 95ರಷ್ಟು ಪಕ್ಕಾ ಎಂದಿದೆ.

ಅತಂತ್ರ ವಿಧಾನಸಭೆ:

ಹಲವು ಸಂಸ್ಥೆಗಳು ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ ಎಂದು ತಮ್ಮ ವಾದ ಮಂಡಿಸಿದೆ.

ಜೈನ್ ವಿವಿ-ಲೋಕನೀತಿ-ಸಿಎಸ್‌ಡಿಎಸ್ ನಡೆಸಿದ್ದ ಸಮೀಕ್ಷೆ ಪ್ರಕಾರ, ಬಿಜೆಪಿ 89-95 ಸ್ಥಾನ, ಕಾಂಗ್ರೆಸ್ 85-91 ಸ್ಥಾನ ಮತ್ತು ಜೆಡಿಎಸ್ 32-38 ಸ್ಥಾನ ಗೆಲ್ಲಲಿದೆ. ಬಿಜೆಪಿ ಕಾಂಗ್ರೆಸ್‌ಗಿಂತ ಒಂದೆರಡು ಸ್ಥಾನಗಳನ್ನ ಹೆಚ್ಚು ಗೆಲ್ಲಲಿದೆ ಎಂದು ಈ ಸಮೀಕ್ಷೆ ಹೇಳಿದೆ.

ಎಬಿಪಿ ಸಮೀಕ್ಷೆ. 
ಎಬಿಪಿ ಸಮೀಕ್ಷೆ. 
ದಿ ಕ್ವಿಂಟ್. 

ಆದರೆ ಮೇ ತಿಂಗಳ ಮೊದಲ ವಾರದಲ್ಲಿ ಬಹಿರಂಗವಾದ ಎಬಿಪಿ ನ್ಯೂಸ್-ಲೋಕನೀತಿ-ಸಿಎಸ್‌ಡಿಎಸ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಕಾಂಗ್ರೆಸ್ 97 ಸ್ಥಾನ, ಬಿಜೆಪಿ 84 ಸ್ಥಾನ ಮತ್ತು ಜೆಡಿಎಸ್ 37 ಸ್ಥಾನ ಪಡೆಯಲಿದೆ ಎಂದು ಲೋಕನೀತಿ-ಸಿಎಸ್‌ಡಿಎಸ್‌ನ ಹೊಸ ಸಮೀಕ್ಷೆ ಹೇಳಿದೆ.

ಇಂಡಿಯಾ ಟುಡೆ ಸಮೀಕ್ಷೆ. 
ಇಂಡಿಯಾ ಟುಡೆ ಸಮೀಕ್ಷೆ. 

ಇನ್ನು, ಇಂಡಿಯಾ ಟುಡೆ-ಕರ್ವಿ ಸಮೀಕ್ಷೆ ಸಹ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದಿದೆ. ಕಾಂಗ್ರೆಸ್ 90 ರಿಂದ 101 ಸ್ಥಾನ, ಬಿಜೆಪಿ 78 ರಿಂದ 86 ಸ್ಥಾನ ಮತ್ತು ಜೆಡಿಎಸ್ 34ರಿಂದ 43 ಎಂದು ಹೇಳಿದೆ.

ಟೌಮ್ಸ್ ನೌ ಸಮೀಕ್ಷೆ. 
ಟೌಮ್ಸ್ ನೌ ಸಮೀಕ್ಷೆ. 

ಟೈಮ್ಸ್ ನೌ-ವಿಎಂಆರ್ ಸಮೀಕ್ಷೆ ಸಹ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆಯ ಭವಿಷ್ಯ ನುಡಿದಿದೆ. ಟೈಮ್ಸ್ ನೌ ಸಮೀಕ್ಷೆ ಪ್ರಕಾರ, ಕಾಂಗ್ರೆಸ್ 91 ಸ್ಥಾನ , ಬಿಜೆಪಿ 89 ಸ್ಥಾನ ಮತ್ತು ಜೆಡಿಎಸ್-ಬಿಎಸ್‌ಪಿ ಮೈತ್ರಿ 40 ಸ್ಥಾನಗಳನ್ನ ಗೆಲ್ಲಲಿದೆ.

ಇಂಡಿಯಾ ಟಿವಿ ಸಮೀಕ್ಷೆ. 
ಇಂಡಿಯಾ ಟಿವಿ ಸಮೀಕ್ಷೆ. 

ಬುಧವಾರ ಬಿಡುಗಡೆಯಾಗಿರೋ ಇಂಡಿಯಾ ಟಿವಿ ಸಮೀಕ್ಷೆ ಕಾಂಗ್ರೆಸ್ 96 ಸ್ಥಾನಗಳನ್ನ ಗೆಲ್ಲಲಿದೆ, ಬಿಜೆಪಿ 85 ಸ್ಥಾನ ಮತ್ತು ಜೆಡಿಎಸ್ ಬಿಎಸ್‌ಪಿ ಮೈತ್ರಿಕೂಟ 38 ಸ್ಥಾನಗಳನ್ನ ಪಡೆಯಲಿದೆ ಎಂದು ಹೇಳಿದೆ.

ರಾಷ್ಟ್ರೀಯ ಸುದ್ದಿವಾಹಿನಿಗಳು ಮತ್ತು ಇತರೆ ಸಂಸ್ಥೆಗಳ ಸಮೀಕ್ಷೆಗಳು ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನ ಗೆಲ್ಲಲಿದೆ ಎಂದಿವೆ.

ಬಿಜೆಪಿಗೆ ಬಹುಮತ ನೀಡಿದ ಟಿವಿ5:

ಅಚ್ಚರಿ ರೀತಿಯಲ್ಲಿ ಎಲ್ಲಾ ಸಮೀಕ್ಷೆಗಳು ಅತಂತ್ರ ವಿಧಾನಸಭೆ ಮತ್ತು ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಲಿದೆ ಎಂದು ಹೇಳಿದರೆ, ಆಂಧ್ರ ಮೂಲದ ಟಿವಿ5 ಕನ್ನಡ ಸಮೀಕ್ಷೆ ಬೇರೆಯದ್ದೇ ಕಥೆ ಹೇಳಿದೆ.

ಟಿವಿ5 ಸಮೀಕ್ಷೆ ಪ್ರಕಾರ, ಬಿಜೆಪಿ 110ರಿಂದ 120 ಸ್ಥಾನ ಗಳಿಸಲಿದೆ. ಕಾಂಗ್ರೆಸ್ 65 ರಿಂದ 75 ಸ್ಥಾನ ಗೆಲ್ಲಲಿದೆ. ಜೆಡಿಎಸ್ 38 ರಿಂದ 42 ಸ್ಥಾನಗಳನ್ನ ಪಡೆಯಲಿದೆ.

ಜನ್ ಕಿ ಬಾತ್ ಅನ್ನೋ ಸಮೀಕ್ಷೆ ಬಿಜೆಪಿ 107 ಸ್ಥಾನ ಗೆಲ್ಲಲಿದೆ ಎಂದು ಹೇಳಿದೆ. ಕಾಂಗ್ರೆಸ್ 75 ಸ್ಥಾನ ಮತ್ತು ಜೆಡಿಎಸ್ 40 ಸ್ಥಾನ ಗೆಲ್ಲಲಿದೆ ಅನ್ನೋದು ಜನ್ ಕಿ ಬಾತ್ ಸಮೀಕ್ಷೆ.

ಇತ್ತ ಬಿಟಿವಿ ಸಮೀಕ್ಷೆ ಕಾಂಗ್ರೆಸ್‌ಗೆ 94 ಸ್ಥಾನ, ಬಿಜೆಪಿ 84 ಸ್ಥಾನ ಮತ್ತು ಜೆಡಿಎಸ್‌ಗೆ 42 ಸ್ಥಾನ ನೀಡಿದೆ.

ಪಬ್ಲಿಕ್ ಟಿವಿ ಸಮೀಕ್ಷೆಯಂತೆ ಕಾಂಗ್ರೆಸ್ 89 ರಿಂದ 94 ಸ್ಥಾನ, ಬಿಜೆಪಿ 86ರಿಂದ 91 ಸ್ಥಾನ ಮತ್ತು ಜೆಡಿಎಸ್ 38 ರಿಂದ 43 ಸ್ಥಾನ ಗೆಲ್ಲಲಿದೆ. ಈ ಮೂಲಕ ಬಿಟಿವಿ ಮತ್ತು ಪಬ್ಲಿಕ್ ಟಿವಿ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ ಮತ್ತು ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಲಿದೆ ಎಂದಿವೆ..

ಪೊಳ್ಳು ಸಮೀಕ್ಷೆಗಳು:

ಈ ಮೇಲಿನ ಸಮೀಕ್ಷೆಗಳ ಪೈಕಿ ಕೆಲ ಸಮೀಕ್ಷೆಗಳು ತೀರಾ ಅಚ್ಚರಿಕರ ರೀತಿಯಲ್ಲಿ ನಡೆದಿವೆ ಎನ್ನಲಾಗುತ್ತಿದೆ. ಕೆಲ ಟಿವಿ ಚಾನೆಲ್‌ಗಳ ಪ್ರಮುಖರು ನ್ಯೂಸ್ ರೂಂಗಳಲ್ಲೇ ಸಮೀಕ್ಷೆ ನಡೆಸಿದ್ದಾರೆ ಅಂತಾ ಟಿವಿ ಮಾಧ್ಯಮದಲ್ಲಿ ಕೆಲಸ ಮಾಡ್ತಿರೋ ಪತ್ರಕರ್ತರೇ ಹೇಳುತ್ತಾರೆ. ಒಂದು ಕಪ್ ಟೀ ಮತ್ತು ಪೆನ್ ಪೇಪರ್‌ಗಳಲ್ಲೇ ಕರ್ನಾಟಕ ವಿಧಾನಸಭೆ ಚುನಾವಣೆಯ ಸಮೀಕ್ಷೆ ಮಾಡಿ ಮುಗಿಸಿರೋ ಉದಾಹರಣೆಗಳು ಇವೆ.

ಇನ್ನೂ ರಾಷ್ಟ್ರೀಯ ಸುದ್ದಿವಾಹಿನಿಗಳ ಸಮೀಕ್ಷೆಗಳ ಮೇಲೆ ಕಳೆದ ಚುನಾವಣೆಯ ಸಮೀಕ್ಷೆಗಳ ನೆರಳು ಇದೆ. 2013 ರಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ ಎಂದು ಹೇಳಿದ್ದ ಸಮೀಕ್ಷೆಗಳು ಈ ವರ್ಷವೂ ಹಳೇ ದತ್ತಾಂಶಗಳನ್ನೇ ಅವಲಂಬಿಸಿವೆ ಅಂತಾ ಹೇಳಲಾಗುತ್ತಿದೆ.

ಹೀಗೆ, ಮತದಾನಕ್ಕೂ ಮೊದಲೇ ಜನರ ಮನಸ್ಸಿನಲ್ಲೇನಿದೆ ಎಂಬುದನ್ನು ತಿಳಿಯುವ ಕಸರತ್ತು ನಡೆದಿದೆ. ಅಂತಿಮವಾಗಿ ಮೇ 15ರಂದು ಫಲಿತಾಂಶ ಹೊರಬೀಳಲಿದೆ. ಅಂದು ಕೇವಲ ಅಭ್ಯರ್ಥಿಗಳ ಭವಿಷ್ಯ ಮಾತ್ರ ಅಲ್ಲ, ಈ ಸಮೀಕ್ಷೆಗಳ ಸಾಚಾತನಗಳ ಬಗ್ಗೆಯೂ ಸ್ಪಷ್ಟತೆ ಸಿಗಲಿದೆ.