samachara
www.samachara.com
‘ಗಾಂಧಿಗಿರಿ’ಗೆ ಜೈ ಎಂದ ಅರ್ಮೇನಿಯಾ: ಭ್ರಷ್ಟ ಪ್ರಧಾನಿಯನ್ನು ಬದಲಿಸಿದ ಜನ!
COVER STORY

‘ಗಾಂಧಿಗಿರಿ’ಗೆ ಜೈ ಎಂದ ಅರ್ಮೇನಿಯಾ: ಭ್ರಷ್ಟ ಪ್ರಧಾನಿಯನ್ನು ಬದಲಿಸಿದ ಜನ!

ಇದು 30 ಲಕ್ಷ ಜನಸಂಖ್ಯೆ ಹೊಂದಿರುವ ಪುಟ್ಟ ದೇಶವೊಂದಲ್ಲಿ ಶಾಂತಿಯುತವಾಗಿ ನಡೆದ ಅಧಿಕಾರ ಹಸ್ತಾಂತರದ ಕತೆ. ಪತ್ರಕರ್ತನೊಬ್ಬ ದೇಶದ ಚುಕ್ಕಾಣಿ ಹಿಡಿದ ವರ್ತಮಾನದ ಸಂಗತಿ. 

ಅರ್ಮೇನಿಯಾದಲ್ಲಿ ಕಳೆದ ಮೂರು ತಿಂಗಳಿಂದ ನಡೆಯುತ್ತಿದ್ದ ಹಿಂಸಾಚಾರ ರಹಿತ ಗಾಂಧಿಗಿರಿಗೆ ಕೊನೆಗೂ ಜಯ ದೊರೆತಿದೆ.

ಭ್ರಷ್ಟ ಸರ್ಕಾರದ ವಿರುದ್ದ ಅಸಹಕಾರದ ಹೋರಾಟದ ನೇತೃತ್ವವಹಿಸಿದ್ದ ಪತ್ರಿಕಾ ಸಂಪಾದಕ ನಿಕೋಲ್ ಪಶಿನಿಯನ್ ಅವರನ್ನು ಹಂಗಾಮಿ ಪ್ರಧಾನಿಯಾಗಿ ಸಂಸತ್ ಆಯ್ಕೆ ಮಾಡಿದೆ. ಈ ಮೂಲಕ 10 ವರ್ಷಗಳಿಂದ ರಾಷ್ಟ್ರಪತಿಯಾಗಿ, ಪ್ರಧಾನಿಯಾಗಿ ಅಧಿಕಾರ ಅನುಭವಿಸುತ್ತಿದ್ದ ಅರ್ಮೆನಿಯನ್ ರಿಪಬ್ಲಿಕ್ ಪಕ್ಷದ ಸೆರ್ಜ್ ಸಾರ್ಜಿಯನ್ ಯುಗಾಂತ್ಯವಾಗಿದೆ.

ಅವರು ಜನರ ಹೋರಾಟಕ್ಕೆ ಕೊನೆಗೂ ತಲೆ ಬಾಗಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ನಿಕೋಲ್ 105 ಸಂಸದ ಬಲ ಹೊಂದಿರುವ ಸಂಸತ್ತಿನಲ್ಲಿ 42 ಸಂಸದರ ಬೆಂಬಲದೊಂದಿಗೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಇದೇ ವೇಳೆ ಮಾತನಾಡಿರುವ ಅವರು, “ತಾವು ಅಧಿಕಾರಕ್ಕಾಗಿ ಈ ಹೋರಾಟ ಮಾಡಲಿಲ್ಲ. ಸೂಕ್ತ ಸಮಯದಲ್ಲಿ ಸಂಸತ್ತನ್ನು ವಿಸರ್ಜಿಸಿ ಹೊಸದಾಗಿ ಚುನಾವಣೆಯನ್ನು ನಡೆಸಲಾಗುವುದು,” ಎಂದು ಭರವಸೆ ನೀಡಿದ್ದಾರೆ.

ಅರ್ಮೆನಿಯಾ ಪ್ರಧಾನಿಯಾಗಲು ಕನಿಷ್ಠ 45 ಸಂಸದರ ಬೆಂಬಲ ಬೇಕಾಗುತ್ತದೆ. ಆದರೆ 43 ಸಂಸದರ ಬಲ ಹೊಂದಿರುವ ನಿಕೋಲ್ ಪ್ರಧಾನಿಯಾಗುವ ಅವಕಾಶ ಕಳೆದುಕೊಂಡಿದ್ದರು.

ಸಾರ್ಜಿಯನ್ ಇಲ್ಲಿನ ರಿಪಬ್ಲಿಕನ್ ಪಕ್ಷದ ಮುಖ್ಯಸ್ಥನಾಗಿ ಕಳೆದ ಹತ್ತು ವರ್ಷಗಳಿಂದ ದೇಶದ ರಾಷ್ಟ್ರಪತಿಯಾಗಿ ಅಧಿಕಾರ ಮಾಡಿದ್ದರು. ಹದಿನೈದು ದಿನಗಳ ಹಿಂದೆ ನಡೆದ ಚುನಾವಣೆಯಲ್ಲಿ ಪ್ರಧಾನಿಯಾಗಲು ಯಾರಿಗೂ ಸ್ಪಷ್ಟ ಬಹುಮತ ಬಂದಿರಲಿಲ್ಲ. ಇದೇ ನೆಪವೊಡ್ಡಿ ಸಾರ್ಜಿಯನ್ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ ತಾವೇ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಆದರೆ ಇದನ್ನು ವಿರೋಧಿಸಿ ಹದಿನೈದು ದಿನಗಳ ಹಿಂದೆ ಅರ್ಮೇನಿಯನ್ ಕಾಂಗ್ರೆಸ್ ಪಕ್ಷದ ನಾಯಕನೂ ಆಗಿದ್ದ ನಿಕೋಲ್ ಪಶಿನ್ಯನ್ ಅನಿರ್ಧಿಷ್ಟ ಅಸಹಕಾರ ಪ್ರತಿಭಟನೆಗೆ ಕರೆ ಕೊಟ್ಟಿದ್ದರು. ಅದನ್ನು ಬೆಂಬಲಿಸಿ ಲಕ್ಷಾಂತರ ಮಂದಿ ರಸ್ತೆಗಿಳಿದಿದ್ದರು. ರಸ್ತೆ, ವಿಮಾನ ನಿಲ್ದಾಣ, ಮೆಟ್ರೋಗಳನ್ನು ಬ್ಲಾಕ್ ಮಾಡಿ ಪ್ರತಿಭಟನೆ ನಡೆಸಿದ್ದರು. ‘ಪ್ರಧಾನಿ ಸಾರ್ಜಿಯನ್ ರಾಜೀನಾಮೆ ನೀಡಬೇಕು. ಅತಿ ಹೆಚ್ಚು ಸ್ಥಾನಗಳಿಸಿರುವ ನಿಕೋಲ್ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಬೇಕು’ ಎಂದು ಆಗ್ರಹಿಸಿದ್ದರು.

ಮೊದಲು ಇದನ್ನು ತಿರಸ್ಕರಿಸಿದ್ದ ರಿಪಬ್ಲಿಕನ್ ದೇಶದಲ್ಲಿ ಆಡಳಿತ ವರ್ಗ ಪ್ರತಿಭಟನಾಕಾರರ ವಿರುದ್ಧವೇ ತಿರುಗಿ ಬಿದ್ದಿತ್ತು. ಅರಾಜಕತೆ ಸೃಷ್ಟಿಸುತ್ತಿದ್ದಾರೆ ಎಂದು ಪಶಿನಿಯನ್ ಮೇಲೆಯೇ ಆರೋಪಿಸಿದ್ದರು. ಆದರೆ ಪಶಿನಿಯನ್ ಆಡಳಿತ ವರ್ಗದ ಧೋರಣೆ ಹಾಗೂ ಅಧಿಕಾರ ದಾಹವನ್ನು ಜನರಿಗೆ ಅರ್ಥ ಮಾಡಿಸುವ ಮೂಲಕ ಪ್ರಧಾನಿ ಸಾರ್ಜಿಯನ್ ಸುಳ್ಳು ಹಾಗೂ ಸಂಚನ್ನು ವಿಫಲಗೊಳಿಸಿದ್ದರು. ಪ್ರತಿಭಟನೆ ಹಾಗೂ ಜನ ಬೆಂಬಲ ಹೆಚ್ಚಾಗುತ್ತಿದ್ದಂತೆ ಸ್ವತಃ ರಿಪಬ್ಲಿಕನ್ ಪಕ್ಷವೇ ತಮ್ಮ ಪ್ರಧಾನಿಯನ್ನು ಕೆಳಗೆ ಇಳಿಯುವಂತೆ ಮಾಡುವ ಮೂಲಕ ನಿಕೋಲ್ ಪಶಿನಿಯನ್ ಅವರನ್ನು ಬೆಂಬಲಿಸಿದೆ.

ಸಂಸತ್ ನಲ್ಲಿ ನಿಕೋಲ್ ಪಶಿನ್ಯನ್‌ಗೆ ಸಂಸದರ ಬೆಂಬಲ ವ್ಯಕ್ತವಾಗುತ್ತಿದ್ದಂತೆ ದೇಶಾದ್ಯಂತ ಭಾರಿ ಸಂಖ್ಯೆಯ ಜನರು ಹರ್ಷ ವ್ಯಕ್ತಪಡಿಸಿದ್ದರು. ತಾವು ಹದಿನೈದು ದಿನಗಳಿಂದ ಪ್ರತಿಭಟನೆ ನಡೆಸಿದ್ದ ರಾಜಧಾನಿ ಯೆರವಾನ್‌ನ ರಿಪಬ್ಲಿಕ್ ಚೌಕದಲ್ಲಿ ಜನರು ನಿಕೋಲ್ ಪರ ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದರು. ಇದಕ್ಕೆ ದೇಶದ ಖ್ಯಾತ ಕಲಾವಿದ, ರಾಕ್ ಸ್ಟಾರ್ ಸರ್ಜ್ ಥಾಂಕಿಯಾನ್ ಅವರು ಸಾಥ್ ನೀಡಿದ್ದು ಜನರ ಸಂತಸವನ್ನು ಹೆಚ್ಚಿಸಿತು. ಅವರು ತಿಂಗಳಿಂದ ಜನರ ಹೋರಾಟಕ್ಕೆ ಸಾಂಸ್ಕೃತಿಕ ರೂಪ ಕೊಟ್ಟಿದ್ದರು.

‘ಗಾಂಧಿಗಿರಿ’ಗೆ ಜೈ ಎಂದ ಅರ್ಮೇನಿಯಾ: ಭ್ರಷ್ಟ ಪ್ರಧಾನಿಯನ್ನು ಬದಲಿಸಿದ ಜನ!

ನೂತನ ಪ್ರಧಾನಿ ನಿಕೋಲ್, ತಮ್ಮನ್ನು ಬೆಂಬಲಿಸಿದ ಸಂಸದರನ್ನು ಉದ್ದೇಶಿಸಿ ಮಾತನಾಡಿದರು. “ಇದು ನನ್ನ ಗೆಲುವಲ್ಲ, ಶಾಂತಿಯುತ ಕ್ರಾಂತಿಗೆ (ವೆಲ್ವೆಟ್ ರೆವಲ್ಯೂಶನ್) ಕಾರಣರಾದ ಇದು ನಿಮ್ಮ ಗೆಲವು,” ಎಂದು ಪ್ರಶಂಸಿದರು. ಅಲ್ಲದೆ ಇನ್ಮುಂದೆ ದೇಶದಲ್ಲಿ ನಿರುದ್ಯೋಗ, ಭ್ರಷ್ಟಾಚಾರ, ಅರಾಜಕತೆ ಸೃಷ್ಟಿಯಾಗದಂತೆ ಆಡಳಿತ ನಡೆಸುವುದಾಗಿ ಭರವಸೆ ನೀಡಿದರು.

ದೇಶದಲ್ಲಿ ನಾಶವಾಗಿರುವ ಮಾನವ ಹಕ್ಕುಗಳಿಗೆ ಮತ್ತೆ ಬೆಲೆ ತಂದುಕೊಡುವುದಾಗಿ ಹೇಳಿದ ಅವರು, “ಕಾನೂನಿನ ಎದುರು ಎಲ್ಲರೂ ಸಮಾನರು. ಇನ್ನು ಮುಂದೆ ಕೆಲವರಷ್ಟೇ ಹೆಚ್ಚಿನ ಸೌಲಭ್ಯಗಳನ್ನು ಅನುಭವಿಸಲು ಬಿಡುವುದಿಲ್ಲ. ಇಂಥ ಹುಚ್ಚಾಟಗಳು ಇನ್ನು ಅರ್ಮೇನಿಯಾದಲ್ಲಿ ನಡೆಯಲು ಸಾಧ್ಯವಿಲ್ಲ,” ಎಂದಿದ್ದಾರೆ.

ಹಳೆಯ ಸೋವಿಯತ್ ಒಕ್ಕೂಟದ ರಾಷ್ಟ್ರವಾಗಿದ್ದ ಅರ್ಮೇನಿಯಾ, ಏಕ ಪಕ್ಷದ ಆಳ್ವಿಕೆಗೆ ಅಂತ್ಯ ಹಾಡಿದೆ. ಅಲ್ಲಿನ ಅಧಿಕಾರ ಹಸ್ತಾಂತರಕ್ಕಾಗಿ ನಡೆದ ಶಾಂತಿಯುತ ಹೋರಾಟಕ್ಕೆ ಜಗತ್ತಿನಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿಟ್ ಪುಟಿನ್ ನಿಕೋಲ್‌ಗೆ ಅಭಿನಂದನೆ ಸಲ್ಲಿಸಿದ್ದು, ಬೇಗ ರಷ್ಯಾಕ್ಕೆ ಭೇಟಿ ನೀಡುವಂತೆ ಆಹ್ವಾನ ಇತ್ತಿದ್ದಾರೆ. ಕೇವಲ 30 ಲಕ್ಷ ಜನಸಂಖ್ಯೆಯ ಅರ್ಮೇನಿಯಾ ದೇಶಕ್ಕೆ ತನ್ನದೇ ಆದ ಸೈನ್ಯವಿಲ್ಲ. ಹೀಗಾಗಿ ರಷ್ಯಾದ ಸೇನೆ ಅರ್ಮೇನಿಯಾ ಗಡಿಗಳ ರಕ್ಷಣಾ ಜವಾಬ್ದಾರಿಯನ್ನು ನೋಡಿಕೊಳ್ಳುತ್ತದೆ.

ಹಳೆಯ ಸೋವಿಯತ್ ಒಕ್ಕೂಟದ ಅಝರ್ ಬೈಜಾನ್ ಸೇರಿದಂತೆ ಹಲವು ದೇಶಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಯತ್ನಿಸುವ ರಷ್ಯಾ, ಅರ್ಮೆನಿಯಾದಲ್ಲಿ ಮೂರು ತಿಂಗಳಿಂದ ನಡೆಯುತ್ತಿದ್ದ ರಾಜಕೀಯ ಹೋರಾಟಕ್ಕೆ ಮಧ್ಯ ಪ್ರವೇಶಿಸಿರಲಿಲ್ಲ. ಹೀಗಾಗಿ ನೂತನ ಪ್ರಧಾನಿ ನಿಕೋಲ್ ಮಾಸ್ಕೋದೊಂದಿಗೆ ರಕ್ಷಣಾ ಸಹಕಾರವನ್ನು ಮುಂದುವರೆಸುವುದಾಗಿ ಹೇಳಿದ್ದು, ಶಾಂತಿಯುತ ಸಂಬಂಧವನ್ನು ಕಾಪಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

ಇನ್ನು ದೇಶದ ಹಲವು ಗಣ್ಯರು, ಸಂಸದರು ಇದು ಅರ್ಮೆನಿಯಾದ ಐತಿಹಾಸಿಕ ದಿನ ಎಂದು ಬಣ್ಣಿಸಿದ್ದು, 20 ವರ್ಷಗಳಿಂದ ಆಡಳಿತ ಮಾಡಿದ್ದ ರಿಪಬ್ಲಿಕ್ ಪಕ್ಷವನ್ನು ಜನರು ಮನೆಗೆ ಕಳುಸಹಿದ್ದಾರೆ ಎಂದು ಬಣ್ಣಿಸಿದ್ದಾರೆ. ಪನಿಶ್ಯನ್ ಸಹದ್ಯೋಗಿ ಲೆನ ನಜರ್ಯನ್, “20 ವರ್ಷಗಳಿಂದ ಜನರು ಪರ್ಯಾಯ ರಾಜಕೀಯಕ್ಕಾಗಿ ಹೋರಾಟ ಮಾಡಿದ್ದರು. ಅದು ಇಂದಿಗೆ ಅಂತ್ಯವಾಗಿದೆ. ದೇಶವು ಇನ್ನು ನಿತ್ಯ ಪ್ರತಿಭಟನೆಗಳಿಂದ ಮುಕ್ತವಾಗಲಿದೆ. ಪೊಲೀಸರು ಇನ್ನು ಜನರನ್ನು ನಿಯಂತ್ರಿಸುವ ಹೊರೆಯಿಂದ ಮುಕ್ತವಾಗಲಿದ್ದಾರೆ. ಶಾಲಾ ಟೀಚರ್‌ಗಳು ಮಕ್ಕಳ ಹೊಣೆ ಹೊರುವ ತಲೆ ನೋವಿನಿಂದ ಮುಕ್ತ ಆಗಲಿದ್ದಾರೆ. ಸ್ಥಳೀಯ ಆಡಳಿತ ಅತಿಯಾದ ಹೊರೆಯಿಂದ ಮುಕ್ತವಾಗಲಿದೆ,” ಎಂದಿದ್ದಾರೆ.

‘ಗಾಂಧಿಗಿರಿ’ಗೆ ಜೈ ಎಂದ ಅರ್ಮೇನಿಯಾ: ಭ್ರಷ್ಟ ಪ್ರಧಾನಿಯನ್ನು ಬದಲಿಸಿದ ಜನ!

ಯಾರು ಈ ನಿಕೋಲ್ ಪಶಿನಿಯನ್?

ಮೂಲತಃ ಪಶಿನಿಯನ್ ಒಬ್ಬ ಕ್ರೀಡಾ ತರಬೇತುಗಾರ ಮಗ. ನಿಕೋಲ್ ವಿದ್ಯಾರ್ಥಿ ಜೀವನದಿಂದಲೇ ಹೋರಾಟ ಮಾಡಿಕೊಂಡು ಬಂದವರು. 1995ರಲ್ಲೇ ಸರ್ಕಾರ ಭ್ರಷ್ಟಾಚಾರಗಳ ವಿರುದ್ಧ ಬರೆದ ಕಾರಣಕ್ಕೆ ಅವರನ್ನು ಅರ್ಮೆನಿಯಾ ವಿಶ್ವವಿದ್ಯಾಲಯದಿಂದ ಅರ್ಧದಲ್ಲೇ ಹೊರ ಹಾಕಲಾಗಿತ್ತು. ಪ್ರಧಾನಿ, ರಾಷ್ಟ್ರಪತಿ, ಸ್ಪೀಕರ್ ಸೇರಿದಂತೆ ಪ್ರಮುಖ ನಾಯಕರ ಯೋಜನೆ, ನೀತಿಗಳನ್ನು ಕಟುವಾಗಿ ವಿಮರ್ಶೆ ಮಾಡಿದ್ದರು.

ಇದಾದ ನಂತರ ಅವರು ‘ಹಯಕ್ಕನ್ ಝಮನಕ್’ (ಇದು ರಷ್ಯನ್ ಪದ- ಸರಿಯಾದ ಅರ್ಥವನ್ನು ಯಾವ ನಿಘಂಟು ನೀಡಿಲ್ಲ!) ಎಂಬ ಪತ್ರಿಕೆಯನ್ನು ಪ್ರಾರಂಭಿಸಿ, ಸರ್ಕಾರದ ವಿರುದ್ಧ ಹೋರಾಟವನ್ನು ತೀವ್ರಗೊಳಿಸಿದರು. ಹೀಗಾಗಿ ರಾತ್ರೋರಾತ್ರಿ ಅವನ ಪತ್ರಿಕೆ ದೇಶದ ಅತ್ಯಂತ ಹೆಚ್ಚು ಮಾರಾಟವಾಗುವ ಪತ್ರಿಕೆಯಾಗಿ ರೂಪುಗೊಂಡಿತು.

2008ರಲ್ಲಿ ಸರ್ಜಿಯನ್ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಇದನ್ನು ವಿರೋಧಿಸಿ ಪಶಿನಿಯನ್ ರೋಡಿಗಿಳಿದರು. ಅವರಿಗೆ ಜನ ಬೆಂಬಲವೂ ದೊರೆಯಿತು. ಸರ್ಕಾರ ಅವರ ಮೇಲೆ ಗೋಲಿಬಾರ್ ನಡೆಸಿತು. ಈ ವೇಳೆ ಸುಮಾರು 10 ಮಂದಿ ಸಾವಿಗೀಡಾದರು. ಹಿಂಸೆ, ದೇಶದ್ರೋಹ, ಪಿತೂರಿ ಇತ್ಯಾದಿ ಆರೋಪಗಳ ಮೇಲೆ ಸರ್ಕಾರ ಪಶಿನಿಯನ್ ಅವರನ್ನು 2011ರ ವರೆಗೆ ಎರಡು ವರ್ಷ ಜೈಲಿಗೆ ತಳ್ಳಿತ್ತು. ಈ ವೇಳೆ ಅವರ ಪತ್ನಿ ಪತ್ರಿಕೆಯನ್ನು ಮುನ್ನಡೆಸುತ್ತಿದ್ದರು.

2012ರಲ್ಲಿ ನಡೆದ ಚುನಾವಣೆಯಲ್ಲಿ ಮೊದಲ ಬಾರಿಗೆ ಪಶಿನಿಯನ್ ಸಂಸತ್ತಿಗೆ ಆಯ್ಕೆಯಾದರು. ಈ ನಂತರ ದೇಶದ ಬಗ್ಗೆ ಪ್ರಚಾರ ಮಾಡಿ ಜನರಿಗೆ ಅರ್ಥ ಮಾಡಿಸಿದರು. ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಿಗೊಳಿಸಲು ತಮ್ಮನ್ನು ಪ್ರಧಾನಿ ಮಾಡುವ ಬೇಡಿಕೆಯನ್ನು ಜನರ ಮುಂದಿಟ್ಟು ಹೋರಾಟ ಆರಂಭಿಸಿದ್ದರು.