ಬಾದಾಮಿಯ ‘ತಮ್ಮ ಜನ’ ಕೈ ಹಿಡಿಯುವ ವಿಶ್ವಾಸದಲ್ಲಿ ಸಿದ್ದರಾಮಯ್ಯ!
COVER STORY

ಬಾದಾಮಿಯ ‘ತಮ್ಮ ಜನ’ ಕೈ ಹಿಡಿಯುವ ವಿಶ್ವಾಸದಲ್ಲಿ ಸಿದ್ದರಾಮಯ್ಯ!

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆದಿರುವ ಕ್ಷೇತ್ರ ಬಾದಾಮಿ. ಜೆಡಿಎಸ್‌ನ ಮೂಲನಿವಾಸಿ ಮತ್ತು ಎರಡು ದೋಣಿ ಮೇಲೆ ಕಾಲಿಟ್ಟಿರುವ ‘ಹಿಂದುಳಿದ’ ನಾಯಕರ ಪೈಕಿ ಗೆಲುವು ಯಾರಿಗೆ?

ಚಾಲುಕ್ಯ ಸಾಮ್ರಾಟರ ರಾಜಧಾನಿಯಾಗಿದ್ದ ಬಾದಾಮಿಯಲ್ಲಿ ಈ ಬಾರಿ ಗೆಲುವಿನ ಧ್ವಜ ಹಾರಿಸಲು ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಮೂರೂ ಪಕ್ಷಗಳು ತೀವ್ರ ಪೈಪೋಟಿ ನಡೆಸಿವೆ. ದಕ್ಷಿಣ ಕರ್ನಾಟಕದಿಂದ ವಲಸೆ ಬಂದಿರುವ ಕಾಂಗ್ರೆಸ್‌ನ ಸಿದ್ದರಾಮಯ್ಯ ಹಾಗೂ ಮಧ್ಯ ಹೈದರಾಬಾದ್ ಕರ್ನಾಟಕದಿಂದ ವಲಸೆ ಬಂದಿರುವ ಬಿಜೆಪಿಯ ಬಿ. ಶ್ರೀರಾಮುಲು ಇಬ್ಬರಿಗೂ ಈ ಚುನಾವಣೆ ಪ್ರತಿಷ್ಠೆಯಾಗಿದೆ.

ಪಕ್ಷಗಳ ಮಟ್ಟದಲ್ಲೂ, ಕಣದಲ್ಲಿರುವ ಅಭ್ಯರ್ಥಿಗಳ ವೈಯಕ್ತಿಕ ಮಟ್ಟದಲ್ಲೂ ಬಾದಾಮಿ ಈಗ ಭಾರೀ ಪ್ರತಿಷ್ಠೆಯ ಕಣ. ಸಿದ್ದರಾಮಯ್ಯ ಮತ್ತು ಶ್ರೀರಾಮುಲು ಇಬ್ಬರೂ ಎರಡು ದೋಣಿಗಳ ಮೇಲೆ ಕಾಲಿಟ್ಟಿರುವವರು. ಸಿದ್ದರಾಮಯ್ಯ ಚಾಮುಂಡೇಶ್ವರಿಯಿಂದಲೂ ಸ್ಪರ್ಧಿಸಿದ್ದರೆ, ಶ್ರೀರಾಮುಲು ಮೊಳಕಾಲ್ಮೂರಿನಿಂದ ಈಗಾಗಲೇ ಉಮೇದುವಾರಿಕೆ ಸಲ್ಲಿಸಿದ್ದಾರೆ. ಹೀಗಾಗಿ ಬಾದಾಮಿಯ ಮೂಲನಿವಾಸಿ ಎಂದರೆ ಅದು ಜೆಡಿಎಸ್‌ನ ಹನುಮಂತ ಮಾವಿನಮರದ ಮಾತ್ರ.

ಸಿದ್ದರಾಮಯ್ಯ ನಿರಾಯಾಸವಾಗಿ ಗೆಲ್ಲುವ ಕಣವಾಗಿದ್ದ ವರುಣಾ ಕ್ಷೇತ್ರವನ್ನು ತಮ್ಮ ಮಗ ಯತೀಂದ್ರಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿ ಕಡೆಗೆ ಮುಖ ಮಾಡುವ ಮುನ್ನವೇ ಬಾದಾಮಿಯ ಬಗ್ಗೆ ಯೋಚನೆ ಮಾಡಿದ್ದರು ಎಂಬ ಮಾತುಗಳಿವೆ. ತಾವು ಯಾವ ಕ್ಷೇತ್ರದಿಂದ ಸ್ಪರ್ಧಿಸಿದರೆ ಗೆಲ್ಲಬಹುದು ಎಂಬ ಬಗ್ಗೆ ಗುಪ್ತಚರ ಇಲಾಖೆಯಿಂದ ತರಿಸಿಕೊಂಡಿದ್ದರು ಎನ್ನಲಾದ ವರದಿ ನಕಲಿ ಎಂಬುದು ಬಹಿರಂಗವಾಗಿತ್ತು. ಆದರೆ, ವರದಿಯಲ್ಲಿದ್ದ ಅಂಶ ನಕಲಿಯಾಗಲಿಲ್ಲ ಎಂಬುದು ಈಗ ಜಗಜ್ಜಾಹೀರಾಗಿದೆ.

ಚಾಮುಂಡೇಶ್ವರಿ ಕ್ಷೇತ್ರ ಒಂದರಿಂದಷ್ಟೇ ಸ್ಪರ್ಧೆ ಎಂದೇ ಹೇಳಿಕೊಂಡು ಬಂದ ಸಿದ್ದರಾಮಯ್ಯ ಒಕ್ಕಲಿಗ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಚಾಮುಂಡೇಶ್ವರಿ ತಮ್ಮ ಕೈ ಹಿಡಿಯುವುದು ಕಷ್ಟ ಎಂಬುದು ಮನವರಿಕೆಯಾದ ಮೇಲೆ ಬಾದಾಮಿ ಕ್ಷೇತ್ರಕ್ಕೆ ನಡೆದರು. ಆ ಬಳಿಕ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರಕ್ಕಿಂತ ಹೆಚ್ಚಿನ ಪ್ರಚಾರ ಮಾಡಿದ್ದು ಬಾದಾಮಿಯಲ್ಲೇ.

Also read: ELECTION TOUR : ಚಾಮುಂಡೇಶ್ವರಿ ಭಯದಲ್ಲಿ ಬಾದಾಮಿ ಕನಸು ಕಂಡ ಸಿದ್ದರಾಮಯ್ಯ?

ತಮ್ಮವರು ಕೈ ಹಿಡಿಯುವ ವಿಶ್ವಾಸ!

ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರದ ಒಟ್ಟು ಮತಗಳ ಸಂಖ್ಯೆ 2,14,834. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಕುರುಬ ಸಮುದಾಯದ ಮತಗಳು ಸಿದ್ದರಾಮಯ್ಯ ಕೈ ಹಿಡಿಯಲಿವೆ ಎಂಬ ಮಾತುಗಳಿವೆ. ಇದೇ ವಿಶ್ವಾಸದ ಮೇಲೆಯೇ ಸಿದ್ದರಾಮಯ್ಯ ದಕ್ಷಿಣ ತುದಿಯಿಂದ ಉತ್ತರ ತುದಿಯ ಕಡೆಗೆ ಚುನಾವಣಾ ಯಾತ್ರೆ ಬೆಳೆಸಿದ್ದು.

ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಉತ್ತರ ಕರ್ನಾಟಕದ ಬಾದಾಮಿಯ ಕಡೆಗೆ ಮುಖ ಮಾಡಿದ್ದರಿಂದ ಅವರಿಗೆ ಲಾಭವೇ ಹೆಚ್ಚು ಎಂಬ ಮಾತಿದೆ. ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ಜತೆಗೆ ಬಾದಾಮಿ ಕ್ಷೇತ್ರವನ್ನು ಆರಿಸಿಕೊಂಡಿದ್ದೇನೂ ಇತ್ತೀಚೆಗಲ್ಲ. 2017ರಿಂದಲೇ ಸಿದ್ದರಾಮಯ್ಯ ಉತ್ತರ ಕಡೆಗೆ, ಅದರಲ್ಲೂ ಬಾದಾಮಿ ಕ್ಷೇತ್ರದ ಕಡೆಗೆ ಆಸಕ್ತಿ ವಹಿಸಿದ್ದರು. ಅದಕ್ಕಾಗಿ ಬೇಕಾದ ಎಲ್ಲಾ ಸಿದ್ಧತೆಗಳನ್ನೂ ಕಳೆದ ವರ್ಷದಿಂದಲೇ ಮಾಡಿಕೊಂಡಿದ್ದರು ಎನ್ನುತ್ತಾರೆ ಈ ಭಾಗದ ಜನ.

ಬಾದಾಮಿ ಕ್ಷೇತ್ರದಲ್ಲಿ ಲಿಂಗಾಯತ ಮತಗಳ ಸಂಖ್ಯೆಯೇ ಹೆಚ್ಚಿದ್ದರೂ ಕುರುಬ ಮತಗಳು ಇಲ್ಲಿ ಸಿದ್ದರಾಮಯ್ಯ ಅವರಿಗೆ ವರವಾಗುವುದೇ ಹೆಚ್ಚು ಎಂಬ ಮಾತಿದೆ. ಬಾದಾಮಿ ಕ್ಷೇತ್ರದ ಕುರುಬರು ತಮ್ಮ ಸಮುದಾಯಕ್ಕೆ ಸೇರಿದ ಸಿದ್ದರಾಮಯ್ಯ ಅವರ ಕೈ ಬಿಡುವುದಿಲ್ಲ ಎಂಬ ಗಟ್ಟಿಯಾದ ನಂಬಿಕೆಯ ಮೇಲೆಯೇ ಉತ್ತರ ಕರ್ನಾಟಕ ಭಾಗದ ಕಾಂಗ್ರೆಸ್‌ ಮುಖಂಡರು ಸಿದ್ದರಾಮಯ್ಯ ಅವರಿಗೆ ಇಲ್ಲಿ ಅಖಾಡ ಸಜ್ಜು ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

Also read: ‘ಅಹಿಂದ’ ಮತ ಕ್ರೋಢೀಕರಣಕ್ಕೆ ರಣತಂತ್ರ: ಸಿದ್ದರಾಮಯ್ಯ ಅಶ್ವಮೇಧದ ಕುದುರೆ ಬಾದಾಮಿಗೆ 

“ಸಿದ್ದರಾಮಯ್ಯ ಬಾದಾಮಿ ಕಡೆಗೆ ಮುಖ ಮಾಡಲು ಉತ್ತರ ಕರ್ನಾಟಕದ ಕಾಂಗ್ರೆಸ್‌ ಮುಖಂಡರ ಒತ್ತಡವೂ ಇದೆ. ಮುಖ್ಯಮಂತ್ರಿ ಅಭ್ಯರ್ಥಿ ಸಿದ್ದರಾಮಯ್ಯ ಉತ್ತರ ಕರ್ನಾಟಕದಿಂದ ಸ್ಪರ್ಧಿಸಿದರೆ ಈ ಭಾಗದಲ್ಲಿ ಕಾಂಗ್ರೆಸ್‌ ಇನ್ನೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬಹುದು ಎಂಬ ಲೆಕ್ಕಾಚಾರ ಈ ಭಾಗದ ಕಾಂಗ್ರೆಸ್‌ ಮುಖಂಡರದ್ದು. ಹೀಗಾಗಿ ಉತ್ತರ ಕರ್ನಾಟಕದ ಯಾವುದಾದರೂ ಭಾಗದಿಂದ ಸಿದ್ದರಾಮಯ್ಯ ಸ್ಪರ್ಧೆಗೆ ಈ ಭಾಗದ ಕಾಂಗ್ರೆಸ್ ಮುಖಂಡರ ಒತ್ತಡವೂ ಇತ್ತು. ಜತೆಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವು ಸುಲಭವಲ್ಲ ಎಂಬುದನ್ನು ಅರಿತಿದ್ದ ಸಿದ್ದರಾಮಯ್ಯ ಬಾದಾಮಿ ಕಡೆಗೆ ಮುಖ ಮಾಡಿದರು” ಎನ್ನುತ್ತಾರೆ ಬಾದಾಮಿಯ ಸ್ಥಳೀಯರಾದ ಅತ್ತರ್.

ಕುರುಬ ಸಮುದಾಯ ತಮ್ಮ ಕೈ ಹಿಡಿಯುತ್ತದೆ ಎಂಬ ವಿಶ್ವಾಸದಿಂದಲೇ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರ ಆರಿಸಿಕೊಂಡಿರುವುದು. ಅವರ ಆ ವಿಶ್ವಾಸ ನಿಜವಾಗುವ ಸಾಧ್ಯತೆಯೇ ಹೆಚ್ಚು.
- ಅತ್ತರ್‌, ಸ್ಥಳೀಯರು, ಬಾದಾಮಿ

“ಬಾದಾಮಿ ಕ್ಷೇತ್ರದಲ್ಲಿ ಸುಮಾರು 45 ಸಾವಿರ ಕುರುಬ ಸಮುದಾಯದ ಮತದಾರರಿದ್ದಾರೆ. ಎಸ್‌ಸಿ/ಎಸ್‌ಟಿ ಮತಗಳು ಸುಮಾರು 35 ಸಾವಿರ ಹಾಗೂ ಮುಸ್ಲಿಂ ಮತಗಳು ಸುಮಾರು 22 ಸಾವಿರ ಇವೆ. ಈ ಅಹಿಂದ ಮತಗಳ ಲಾಭ ತಮಗಾಗುತ್ತದೆ ಎಂಬ ಲೆಕ್ಕಾಚಾರದಿಂದಲೇ ಸಿದ್ದರಾಮಯ್ಯ ಬಾದಾಮಿಯಿಂದ ಕಣಕ್ಕಿಳಿದಿರುವುದು. ಆದರೆ, ವಾಲ್ಮೀಕಿ ನಾಯಕ ಸಮುದಾಯದ ಮತಗಳ ಜತೆಗೆ 50 ಸಾವಿರಕ್ಕೂ ಹೆಚ್ಚಿರುವ ವೀರಶೈವ-ಲಿಂಗಾಯತ ಮತಗಳು ಬಿಜೆಪಿಗೆ ಬರಬಹುದು ಎಂಬ ಲೆಕ್ಕಾಚಾರದ ಮೇಲೆ ಬಿಜೆಪಿ ಶ್ರೀರಾಮುಲು ಅವರನ್ನು ಇಲ್ಲಿಂದ ಸ್ಪರ್ಧೆಗೆ ಇಳಿಸಿದೆ” ಎನ್ನುತ್ತಾರೆ ಅವರು.

ಹನುಮಂತ ಮಾವಿನಮರದ, ಸಿದ್ದರಾಮಯ್ಯ, ಬಿ. ಶ್ರೀರಾಮುಲು
ಹನುಮಂತ ಮಾವಿನಮರದ, ಸಿದ್ದರಾಮಯ್ಯ, ಬಿ. ಶ್ರೀರಾಮುಲು

ಲಿಂಗಾಯತ ಮತ ವಿಭಜನೆ?

ಆದರೆ, ಬಾದಾಮಿಯಲ್ಲಿ ಲಿಂಗಾಯತ ಮತಗಳೆಲ್ಲವೂ ಬಿಜೆಪಿಗೆ ಒಲಿಯುವ ಸಾಧ್ಯತೆಗಳು ಕಡಿಮೆ. ಏಕೆಂದರೆ, ಲಿಂಗಾಯತ ಸಮುದಾಯಕ್ಕೆ ಸೇರಿದ ಹನುಮಂತ ಮಾವಿನಮರದ ಈ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ. ಹೀಗಾಗಿ ಬಿಜೆಪಿಗೆ ವರವಾಗಬಹುದಾಗಿದ್ದ ಲಿಂಗಾಯತ ಮತಗಳನ್ನು ಜೆಡಿಎಸ್‌ ಇಲ್ಲಿ ಒಡೆಯುತ್ತದೆ ಎಂಬ ಮಾತಿದೆ.

“ಲಿಂಗಾಯತ ಮತಗಳಲ್ಲಿ ಹೆಚ್ಚಿನ ಪಾಲು ಲಿಂಗಾಯತ ಸಮುದಾಯದವರಾದ ಹನುಮಂತ ಮಾವಿನಮರದ ಅವರ ಉಡಿ ತುಂಬುವುದು ಖಚಿತ. ಒಂದಷ್ಟು ಜನಪ್ರಿಯತೆಯೂ ಹನುಮಂತ ಅವರಿಗೆ ಇತರೆ ಸಮುದಾಯಗಳ ಮತಗಳನ್ನು ತಂದುಕೊಡಬಹುದು. ಆದರೆ, ಶ್ರೀರಾಮುಲು, ಹನುಮಂತ ಮತ್ತು ಸಿದ್ದರಾಮಯ್ಯ ಅವರ ನಡುವಿನ ಪೈಪೋಟಿಯಲ್ಲಿ ಸಿದ್ದರಾಮಯ್ಯ ಅವರಿಗೇ ಗೆಲುವಿನ ಸಾಧ್ಯತೆ ಹೆಚ್ಚು” ಎನ್ನುತ್ತಾರೆ ಬಾಗಲಕೋಟೆಯ ಹಿರಿಯ ಪತ್ರಕರ್ತರೊಬ್ಬರು.

“ಈ ಭಾಗದ ಕುರುಬರು ಮುಗ್ಧರಿದ್ದಾರೆ. ತಮ್ಮ ಸಮುದಾಯವರು ಚುನಾವಣೆಗೆ ಸ್ಪರ್ಧಿಸಿದರೆ ಅವರಿಗೆ ಬಿಟ್ಟು ಬೇರೆಯವರಿಗೆ ಕುರುಬರು ಮತ ಹಾಕುವುದು ಕಡಿಮೆ. ಒಂದು ವೇಳೆ ಬಿಜೆಪಿ ಕುರುಬ ಸಮುದಾಯ ಅಭ್ಯರ್ಥಿಯೊಬ್ಬರನ್ನು ಇಲ್ಲಿಂದ ಕಣಕ್ಕೆ ಇಳಿಸಿದ್ದರೆ ಅದು ಸಿದ್ದರಾಮಯ್ಯ ಅವರಿಗೆ ಕಂಟಕವಾಗುತ್ತಿತ್ತು. ಮೂರೂ ಪ್ರಮುಖ ಪಕ್ಷಗಳಲ್ಲಿರುವ ಅಭ್ಯರ್ಥಿಗಳು ಬೇರೆ ಬೇರೆ ಸಮುದಾಯಕ್ಕೆ ಸೇರಿರುವವರು. ಒಂದು ಕಡೆ ಕುರುಬ ಮತಗಳು, ಮತ್ತೊಂದು ಕಡೆಯಿಂದ ಅಹಿಂದ ಮತಗಳು ಹಾಗೂ ವಿಭಜನೆಯಾಗುವ ಲಿಂಗಾಯತ ಮತಗಳು ಇವೆಲ್ಲವೂ ಸಿದ್ದರಾಮಯ್ಯ ಗೆಲುವಿನ ಹಾದಿಯನ್ನು ಸುಗಮವಾಗಿಸಬಲ್ಲವು” ಎಂಬುದು ಅವರ ಅಭಿಪ್ರಾಯ.

“ಲಿಂಗಾಯತ ಸ್ವತಂತ್ರ ಧರ್ಮದ ವಿಚಾರ ಕಾಂಗ್ರೆಸ್‌ಗಿಂತ ಬಿಜೆಪಿಗೆ ವರವಾಗಬಹುದು ಎಂಬ ಲೆಕ್ಕಾಚಾರ ಇಷ್ಟು ದಿನಗಳವರೆಗೆ ಇತ್ತು. ಆದರೆ, ಬಿಜೆಪಿ ಲಿಂಗಾಯತರಲ್ಲದವರನ್ನು ಕಣಕ್ಕೆ ಇಳಿಸಿರುವುದರಿಂದ ಆ ಲೆಕ್ಕಾಚಾರವೂ ಈಗ ಬದಲಾಗಿದೆ. ಲಿಂಗಾಯತ ಸಮುದಾಯಕ್ಕೆ ಸೇರಿರುವ ಜೆಡಿಎಸ್‌ ಅಭ್ಯರ್ಥಿ ಕನಿಷ್ಠ 15 ಸಾವಿರ ಲಿಂಗಾಯತರ ಮತಗಳನ್ನು ಪಡೆದರೂ ಅದರ ಲಾಭ ಕಾಂಗ್ರೆಸ್‌ನ ಸಿದ್ದರಾಮಯ್ಯ ಅವರಿಗೇ ಆಗುತ್ತದೆ” ಎನ್ನುತ್ತಾರೆ ಅವರು.

ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಮೂರೂ ಪಕ್ಷಗಳು ಬಾದಾಮಿಯಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿವೆ. ಮೂರೂ ಪಕ್ಷಗಳ ದೊಡ್ಡ ದೊಡ್ಡ ಮುಖಂಡರೇ ಪ್ರಚಾರ ಸಭೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ತಮ್ಮ ಸಮುದಾಯದ ಜನ ಹಾಗೂ ಅಹಿಂದ ಮತಗಳು ತಮ್ಮ ಕೈ ಹಿಡಿಯಬಹುದು ಎಂಬ ವಿಶ್ವಾಸದಲ್ಲಿ ಸಿದ್ದರಾಮಯ್ಯ ಇದ್ದರೆ, ಎಸ್‌ಸಿ/ಎಸ್‌ಟಿ ಹಾಗೂ ಲಿಂಗಾಯತ ಮತಗಳು ತಮಗೆ ಗೆಲುವು ತಂದುಕೊಡಲಿವೆ ಎಂಬ ವಿಶ್ವಾಸದಲ್ಲಿ ಬಿಜೆಪಿ ಇದೆ.

ಕಾಂಗ್ರೆಸ್‌- ಬಿಜೆಪಿಯ ದೊಡ್ಡ ಮಟ್ಟದ ಪೈಪೋಟಿಯಿಂದ ತಮಗೆ ಒಂದಷ್ಟು ಲಾಭವಾಗಬಹುದು ಎಂಬ ಲೆಕ್ಕಾಚಾರ ಜೆಡಿಎಸ್‌ನದ್ದು. ಜಾತಿ ಸಮೀಕರಣದ ಲೆಕ್ಕಾಚಾರದಲ್ಲಿ ಬಾದಾಮಿಯಲ್ಲಿ ಈ ಬಾರಿ ಯಾರು ವಿಜಯದ ಗರಿಯನ್ನು ಮುಡಿಗೇರಿಸಿಕೊಳ್ಳುತ್ತಾರೆ ಎಂಬ ಕುತೂಹಲವಂತೂ ಇದ್ದೇ ಇದೆ.