samachara
www.samachara.com
‘NOTA’: ಭಾರತೀಯ ಮತದಾರರ ಬಳಿಯಿರುವ ಕೆಲಸಕ್ಕೆ ಬಾರದ ಅಸ್ತ್ರ
COVER STORY

‘NOTA’: ಭಾರತೀಯ ಮತದಾರರ ಬಳಿಯಿರುವ ಕೆಲಸಕ್ಕೆ ಬಾರದ ಅಸ್ತ್ರ

ಒಂದು ಕಾಲದಲ್ಲಿ ಚುನಾವಣಾ ಪಾರದರ್ಶಕತೆಗೆ ಒತ್ತು ಎಂದು ಜಾರಿಗೆ ಬಂದಿದ್ದು ನೋಟ. ಇವತ್ತು ಅದೇ ನೋಟವನ್ನು ಚಲಾವಣೆ ಮಾಡುವುದು ಕೆಲಸಕ್ಕೆ ಬಾರದ ಕಸರತ್ತಿನಂತಾಗಿದೆ. ಈ ಹಿನ್ನೆಲೆಯಲ್ಲಿ ನೋಟಾ ಸುತ್ತ ಒಂದು ನೋಟ ಇಲ್ಲಿದೆ. 

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

‘ನೋಟಾ’- ಈ ಪದ ಬಹುತೇಕ ಭಾರತೀಯರಿಗೆ ಪರಿಚಯವಿದೆ. ಮತದಾನದ ಸಂಧರ್ಭದಲ್ಲಿ ಹಲವಾರು ಜನ ನೋಟಾವನ್ನೇ ತಮ್ಮ ಆಯ್ಕೆಯನ್ನಾಗಿಸಿಕೊಳ್ಳುತ್ತಿದ್ದಾರೆ. ದೇಶದ ರಾಜಕಾರಣದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಪ್ರಾರಂಭಗೊಂಡ ನೋಟಾ ಇಂದು ಲಕ್ಷಾಂತರ ಜನರನ್ನು ಆಕರ್ಷಿಸುತ್ತಿದೆ.

ಭಾರತದಲ್ಲಿ ನೋಟಾ ಜಾರಿಗೆ ಬಂದಾಗಿನಿಂದ, ಚುನಾವಣೆಗಳ ಸಮಯದಲ್ಲಿ ಇದರ ಕುರಿತು ಪ್ರಚಾರ ಕಾಣಿಸುತ್ತದೆ. ‘ನೋಟಾ ಆಯ್ಕೆ ನಿಮ್ಮದಾಗಲಿ’ ಎಂಬ ಕ್ಯಾಂಪೈನ್‌ ಕೂಡ ರಾಜಕೀಯ ಪಕ್ಷಗಳ ಪ್ರಚಾರದ ರೂಪದಲ್ಲಿಯೇ ನಡೆದ ಉದಾಹರಣೆಗಳಿವೆ. ದೆಹಲಿಯಲ್ಲಿ ಇಂತಹದ್ದೇ ಅಭಿಯಾನವನ್ನು ಆಮ್‌ ಆದ್ಮಿ ಪಕ್ಷ 15 ದಿನಗಳ ಕಾಲ ನಿರಂತರವಾಗಿ ನಡೆಸಿತ್ತು.

‘ನೋಟಾಗೆ ಮತ ಚಲಾಯಿಸಬೇಡಿ’ ಎಂಬ ಕ್ಯಾಂಪೇನ್‌ ರಾಜ್ಯದಲ್ಲಿ ಅಲ್ಲಲ್ಲಿ ಕಾಣಿಸುತ್ತಿದೆ. ಕರ್ನಾಟಕ ಚುನಾವಣೆಗೆ ಇನ್ನು ಮೂರು ದಿನಗಳಿರುವ ಸಂಧರ್ಭದಲ್ಲಿ ಅಲ್ಲಲ್ಲಿ ಜನ ಯಾವುದೇ ಕಾರಣಕ್ಕೂ ನೋಟಾ ಒತ್ತಿ ನಿಮ್ಮ ಮತ ಹಾಳು ಮಾಡಿಕೊಳ್ಳಬೇಡಿ ಎಂದು ಆಗ್ರಹಿಸುತ್ತಿದ್ದಾರೆ. ಬೆಂಗಳೂರು ಮೆಟ್ರೋಗಳಲ್ಲಿ ಕೆಲವರಿಂದ ಇಂತಹದ್ದೊಂದು ಪ್ರಚಾರ ಆರಂಭವಾಗಿದೆ. ನೋಟಾಗೆ ಮತ ಚಲಾಯಿಸಿ ಮತವನ್ನು ವ್ಯರ್ಥಗೊಳಿಸುವ ಬದಲು ಯಾವುದಾದರೂ ಅಭ್ಯರ್ಥಿಗೆ ಮತ ನೀಡಿ ಎಂದು ಕಾರ್ಯಕರ್ತರು ಪ್ರಚಾರ ಮಾಡುತ್ತಿದ್ದಾರೆ.

ನೋಟಾ – ಏನಿದು? :

‘ನನ್ ಆಫ್‌ ದಿ ಎಬವ್’ ಅನ್ನುವುದ ಸಂಕ್ಷಿಪ್ತ ರೂಪವೇ ನೋಟಾ(NOTA). ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಯಾರೊಬ್ಬರೂ ಜನಪ್ರತಿನಿಧಿಯಾಗಲು ಅರ್ಹರಲ್ಲ ಎಂಬ ನಿಲುವನ್ನು ಹೊಂದಿರುವ ಮತದಾರರು ನೋಟಾಗೆ ಮತ ನೀಡಬಹುದು. ಆಗ ಮತದಾರ ಮತ ಚಲಾಯಿಸಿದಂತೆಯೂ ಆಗುತ್ತದೆ. ಜತೆಗೆ ಯಾವ ಅಭ್ಯರ್ಥಿಗೂ ಮತದಾರನ ಮತ ಸೇರುವುದಿಲ್ಲ. ಮತಯಂತ್ರಗಳ ಕೊನೆಯ ಬಟನ್‌ ನೋಟಾ ಆಗಿದ್ದು, ಮತಯಂತ್ರಕ್ಕೂ ಮುಂಚೆ ಪ್ರತ್ಯೇಕ ಬ್ಯಾಲೆಟ್‌ ಪೇಪರ್‌ಗಳಲ್ಲಿ ಋಣಾತ್ಮಕ ಮತಗಳನ್ನು ದಾಖಲಿಸಬಹುದಿತ್ತು.

ನೋಟಾದ ಪರಿಕಲ್ಪನೆ ಭಾರತದ್ದೇನಲ್ಲ. ಭಾರತಕ್ಕೂ ಮುಂಚೆಯೇ ಹಲವಾರು ರಾಷ್ಟ್ರಗಳ ಮತದಾನ ವ್ಯವಸ್ಥೆಗಳು ಈ ಆಯ್ಕೆಯನ್ನು ಒಳಗೊಂಡಿದ್ದವು. ಬೇರೆ ಬೇರೆ ದೇಶಗಳ ಮತದಾರರು ಭಾರತೀಯ ಮತದಾರರಿಗಿಂತ ಮೊದಲೇ ನೋಟಾ ಮೂಲಕ ಚುನಾವಣಾ ಅಭ್ಯರ್ಥಿಗಳನ್ನು ತಿರಸ್ಕರಿಸಿದ್ದರು.

ಅಮೆರಿಕಾದ ನವಾಡಾ ರಾಜ್ಯ ಮೊದಲು ನೋಟಾ ಪರಿಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಿತು. ನಂತರದ ದಿನಗಳಲ್ಲಿ ಹಲವಾರು ರಾಷ್ಟ್ರಗಳು ನೋಟಾ ಆಯ್ಕೆಯನ್ನು ನೀಡಲು ಮುಂದಾಗಿದ್ದವು. ರಷ್ಯಾದಲ್ಲೂ ಕೂಡ 2006ರವರೆಗೆ ನೋಟಾ ಚಾಲ್ತಿಯಲ್ಲಿತ್ತು. ಗ್ರೀಸ್, ಸ್ಪೈನ್‌,ಕೊಲಂಬಿಯಾ ಕೂಡ ನೋಟಾ ಆಯ್ಕೆಯನ್ನು ಹೊಂದಿದವು. 2008ರಿಂದ ಬಾಂಗ್ಲಾ ದೇಶ ನೋಟಾವನ್ನು ಅಳವಡಿಸಿಕೊಂಡಿತು. 2013ರ ಚುನಾವಣೆಯಲ್ಲಿ ಪಾಕಿಸ್ತಾನ ನೋಟಾವನ್ನು ಬಳಸಿಕೊಂಡಿತ್ತಾದರೂ ನಂತರದ ದಿನಗಳಲ್ಲಿ ತೆಗೆದು ಹಾಕಿತ್ತು. ಇವಷ್ಟೇ ಅಲ್ಲದೇ ಇನ್ನೂ ಹಲವಾರು ದೇಶಗಳಲ್ಲಿ ನೋಟಾ ಪ್ರಕ್ರಿಯೆ ಜಾರಿಯಲ್ಲಿದೆ.

ಭಾರತದಲ್ಲಿ ನೋಟಾ:

ನೋಟಾ ಬರುವುದಕ್ಕೂ ಮುಂಚೆಯೇ ಭಾರತದಲ್ಲಿ ಋಣಾತ್ಮಕ ಓಟುಗಳನ್ನು ದಾಖಲಿಸುವ ಅವಕಾಶವಿತ್ತು. ಯಾರಿಗೂ ಮತ ಹಾಕಲು ಇಷ್ಟವಿಲ್ಲದಿದ್ದ ಮತದಾರರು ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರು ಬರೆದು, ಪ್ರತ್ಯೇಕ ಬ್ಯಾಲೇಟ್‌ ಪೇಪರ್‌ನಿಂದ ಮತ ಚಲಾಯಿಸಬೇಕಿತ್ತು.

1961ರ ಚನಾವಣಾ ನಿಯಮದ ಸೆಕ್ಷನ್‌ 49(೦) ಅಡಿಯಲ್ಲಿ ಮತದಾರರು 17A ಎಂಬ ಅರ್ಜಿಯಲ್ಲಿ ತಮ್ಮ ಚುನಾವಣಾ ಕ್ರಮಸಂಖ್ಯೆಯನ್ನು ಬರೆದು, ಋಣಾತ್ಮಕ ಓಟುಗಳನ್ನು ಹಾಕಬಹುದಿತ್ತು. ಅಕ್ರಮವನ್ನು ತಡಿಯುವ ಸಲುವಾಗಿ ಚುನಾವಣಾ ಅಧಿಕಾರಿಗಳೇ ಖುದ್ದಾಗಿ ಮತದಾರನ ಅಭಿಪ್ರಾಯ ಹಾಗೂ ಸಹಿಯನ್ನು ದಾಖಲಿಸಿಕೊಳ್ಳುತ್ತಿದ್ದರು.

ಆದರೆ ಈ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಹಲವಾರು ತಕರಾರುಗಳು ಕೂಡಾ ಇದ್ದವು. ಋಣಾತ್ಮಕ ಓಟು ದಾಖಲಿಸುವಾಗ ಚುನಾವಣಾ ಅಧಿಕಾರಿಗಳು ಮುಂದೆ ನಿಂತಿದ್ದರೆ ಅದು ಮತದಾರರ ಗೌಪ್ಯತೆಯನ್ನು ಕಾಪಾಡಿದಂತಾಗುವುದಿಲ್ಲ ಎಂದು ಸಾಕಷ್ಟು ಜನ ವಾದಿಸಿದ್ದರು. ಸುಪ್ರಿಂ ಕೋರ್ಟ್ ಕೂಡ ಈ ಪ್ರಕ್ರಿಯೆಯನ್ನು ಅಲ್ಲಗೆಳೆದಿತ್ತು. ಮತದಾರರ ಗೌಪ್ಯತೆಯನ್ನು ಕಾಯುವ ನಿಟ್ಟಿನಲ್ಲಿ ನೋಟಾ ಪರಿಕಲ್ಪನೆಯನ್ನು ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.

2013ರ ಸೆಪ್ಟೆಂಬರ್‌ ಅವಧಿಯಲ್ಲಿ ಸುಪ್ರಿಂ ಕೋರ್ಟ್‌ ಭಾರತದಲ್ಲೂ ಕೂಡ ನೋಟಾವನ್ನು ಜಾರಿಗೊಳಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ಆದೇಶಿಸಿತ್ತು. ನೋಟಾ ಭಾರತದ ರಾಜಕಾರಣವನ್ನು ಸ್ವಚ್ಛಗೊಳಿಸುತ್ತದೆ ಎಂದು ಸುಪ್ರಿಂ ಕೋರ್ಟ್‌ ಹೇಳಿತ್ತು. ಈ ನೋಟಾ ಆಯ್ಕೆಯ ಅಳವಡಿಕೆ ಭಾರತೀಯ ಚುನಾವಣಾ ವ್ಯವಸ್ಥೆಯ ಸುಧಾರಣೆಯ ಬಹುಮುಖ್ಯ ಭಾಗವಾಗಿ ಕಂಡಿತ್ತು.

ಭಾರತದ 5 ರಾಜ್ಯಗಳಲ್ಲಿ 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ನೋಟಾ ಮೊದಲ ಬಾರಿಗೆ ಬಳಕೆಯಾಗಿತ್ತು. ಕರ್ನಾಟಕದ ಮತದಾರರೂ ಕೂಡ ನೋಟಾವನ್ನು ಆಯ್ಕೆ ಮಾಡಿದ್ದರು. ಆದರೆ ಒಟ್ಟಾರೆ ಮತದಾರರ ಸಂಖ್ಯೆಯಲ್ಲಿ ಶೇ.1.5ರಷ್ಟು ಜನ ನೋಟಾವನ್ನು ಆಯ್ಕೆ ಮಾಡಿಕೊಂಡಿದ್ದರು. ದೆಹಲಿಯಲ್ಲಿ ಸುಮಾರು 50,000ದಷ್ಟು ಜನ ನೋಟಾ ಕ್ಲಿಕ್ಕಿಸಿದ್ದರು. ಛತ್ತೀಸ್‌ಗಢದಲ್ಲಿ 3.56 ಲಕ್ಷ, ಮಧ್ಯ ಪ್ರದೇಶದಲ್ಲಿ 5.9 ಲಕ್ಷ ಹಾಗೂ ರಾಜಸ್ಥಾನದಲ್ಲಿ 5.67 ಲಕ್ಷ ನೋಟಾ ಮತಗಳು ಬಿದ್ದಿದ್ದವು. ಸಧ್ಯದ ಅಂದಾಜುಗಳ ಪ್ರಕಾರ ಶೇ.2.49ರಷ್ಟು ಮತದಾರರು ನೋಟಾ ಆಯ್ಕೆಗೆ ಮುಂದಾಗುತ್ತಿದ್ದಾರೆ.

ನೋಟಾ ನೂನ್ಯತೆಗಳು :

ನೋಟಾ ಆಯ್ಕೆಯನ್ನು ಮತದಾರರಿಗೆ ನೀಡಿದ ನಂತರ ಹೊಸದೊಂದು ಭರವಸೆ ಜನರಲ್ಲಿ ಕಂಡು ಬಂದಿತ್ತು. ಯಾವುದೇ ಪಕ್ಷಗಳ ಅಥವಾ ವ್ಯಕ್ತಿಗಳಿಂದ ಸಂತುಷ್ಟರಾಗದ, ಯಾವ ಅಭ್ಯರ್ಥಿಗಳೂ ಕೂಡ ಉತ್ತಮರಲ್ಲ ಎಂದು ತರ್ಕಿಸುವ ವ್ಯಕ್ತಿಗಳು ನೋಟಾವನ್ನು ಆಯ್ಕೆ ಮಾಡಲು ಮುಂದಾಗಿದ್ದರು. ನೋಟಾಗೆ ಹೆದರಿ ಪಕ್ಷಗಳು ಉತ್ತಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತವೆ ಎಂದು ಸುಪ್ರಿಂ ಕೋರ್ಟ್‌ ಹೇಳಿತ್ತು. ಆದರೆ ಅಂತಹ ಯಾವ ಬದಲಾವಣೆಗಳೂ ಕೂಡ ಮುಂದಿನ ದಿನಗಳಲ್ಲಿ ಕಂಡು ಬಂದಿಲ್ಲ. ಹಲವಾರು ಕ್ರಿಮಿನಲ್‌ ಮೊಕದ್ದಮೆಗಳನ್ನು ಎದುರಿಸುತ್ತಿರುವ ಅಭ್ಯರ್ಥಿಗಳೆಲ್ಲರೂ ಲೀಲಾಜಾಲವಾಗಿ ಚುನಾವಣೆಗಳಲ್ಲಿ ಗೆಲ್ಲುತ್ತಿದ್ದಾರೆ.

ಭಾರತದ ಮತದಾನದ ವ್ಯವಸ್ಥೆಯ ಭಾಗವಾಗಿರುವ ನೋಟಾ ನಿರೀಕ್ಷಿಸಿದ ಮಟ್ಟದಲ್ಲಿ ಫಲಿತಾಂಶವನ್ನು ನೀಡುತ್ತಿಲ್ಲ. ಕಾರಣ ಅದರೊಳಗಿನ ನೂನ್ಯತೆ. ನೋಟಾ ಆಯ್ಕೆಯನ್ನು ತಮ್ಮದಾಗಿಸಿಕೊಂಡಿರುವ ಮತದಾರರ ಸಂಖ್ಯೆ ಎಷ್ಟೇ ದೊಡ್ಡ ಪ್ರಮಾಣದ್ದಾಗಿದ್ದರೂ ಕೂಡ, ಹೆಚ್ಚಿನ ಸಂಖ್ಯೆ ಮತ ಗಳಿಸಿದ ಅಭ್ಯರ್ಥಿಯೇ ಗೆಲುವು ದಾಖಲಿಸುತ್ತಾನೆ.

ಉದಾಹರಣೆಗೆ ನೂರು ಓಟುಗಳಲ್ಲಿ 75 ಓಟುಗಳು ನೋಟಾ ಪಾಲಾಗಿರುತ್ತವೆ. 15 ಓಟುಗಳನ್ನು ಯಾವುದೋ ಪಕ್ಷದ ಅಭ್ಯರ್ಥಿ ಗಳಿಸಿರುತ್ತಾನೆ. ಉಳಿದವರಿಗೆ 1-2 ಮತಗಳು ದೊರೆತಿರುತ್ತವೆ. ಆಗ 15 ಮತಗಳನ್ನು ಪಡೆದ ಅಭ್ಯರ್ಥಿ ಚುನಾಯಿತನಾಗುತ್ತಾನೆಯೇ ಹೊರತು, ನೋಟಾವನ್ನು ಆಯ್ಕೆ ಮಾಡಿದ 75 ಜನರಿಗೆ ಯಾವುದೇ ಉಪಯೋಗಗಳು ದೊರೆಯುವುದಿಲ್ಲ.

ಹಲವಾರು ಚುನಾವಣೆಗಳಲ್ಲಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವ ಕೆಲವು ಪಕ್ಷಗಳ ಅಭ್ಯರ್ಥಿಗಳಿಗಿಂತ ನೋಟಾ ಮತಗಳ ಸಂಖ್ಯೆಯೇ ಹೆಚ್ಚಿದೆ. ಕೆಲವೆಡೆ ಗೆದ್ದ ಅಭ್ಯರ್ಥಿ ಗಳಿಸಿದ ಓಟುಗಳ ಆರನೇ ಒಂದು ಭಾಗಕ್ಕಿಂತಲೂ ಹೆಚ್ಚು ಓಟುಗಳು ನೋಟಾಗೆ ಬಿದ್ದಿವೆ. ನೋಟಾ ಬಳಕೆ ಬಂದ ನಂತರ ಅಭ್ಯರ್ಥಿಗಳ ಬಗ್ಗೆ ಬೇಸರಗೊಂಡಿರುವ ಜನವರ್ಗವನ್ನು ಮತ ಕೇಂದ್ರಗಳಿಗೆ ಕರೆತರುತ್ತಿದೆಯಾದರೂ, ಯಾವುದೇ ಉಪಯೋಗವಿಲ್ಲದೆ ನೋಟಾ ಓಟುಗಳು ವ್ಯರ್ಥವಾಗುತ್ತಿವೆ.

ನೋಟಾ ಭಾರತೀಯ ಪ್ರಜಾಪ್ರಭುತ್ವ ಪ್ರಬುಧ್ಧಗೊಳ್ಳುತ್ತಿರುವ ಮುನ್ಸೂಚನೆ ಎಂಬ ಅಭಿಪ್ರಾಯಗಳಿವೆ. ಆದರೆ ಎಲ್ಲಾ ಅಭ್ಯರ್ಥಿಗಳಿಗಿಂತಲೂ ಕೂಡ ಹೆಚ್ಚು ಜನ ನೋಟಾ ಆಯ್ಕೆ ಮಾಡಿದರೂ ಸಹ ಉಳಿದ ಅಭ್ಯರ್ಥಿಗಳಿಗಿಂತ ಹೆಚ್ಚು ಮತ ಗಳಿಸಿದವನೇ ಚುನಾಯಿತ ಪ್ರತಿನಿಧಿಯಾಗುತ್ತಾನೆ ಎಂಬ ಅಂಶ ಭಾರತದ ನೋಟಾವನ್ನು ಹಲ್ಲಿಲ್ಲದ ಹಾವನ್ನಾಗಿಸಿದೆ. 100ಕ್ಕೆ 90 ಮತಗಳು ನೋಟಾವನ್ನು ಸೂಚಿಸಿದರೂ ಸಹ ಉಳಿದ 10 ಮತಗಳಲ್ಲಿ ಯಾರು ಹೆಚ್ಚು ಮತ ಗಳಿಸಿದ್ದಾರೋ ಅವರೇ ಮುಖ್ಯಾಗುತ್ತಾರೆ ವಿನಃ ನೋಟಾ ಮತಗಳು ವ್ಯರ್ಥವಾಗಿ ಹೋಗುತ್ತವೆ.

ಭಾರತದಲ್ಲಿನ ಹಲವಾರು ಸಂಘಟನೆಗಳು ಹಾಗೂ ವ್ಯಕ್ತಿಗಳು ನೋಟಾ ಆಯ್ಕೆಗೆ ಮುಂದಾಗುವಂತೆ ಅಭಿಯಾನಗಳನ್ನು ನಡೆಸುತ್ತಲೇ ಬರುತ್ತಿದ್ದಾರೆ. ಇತ್ತೀಚಿನ ಚುನಾವಣೆಗಳಲ್ಲಿ ನೋಟಾ ಮತಗಳ ಸಂಖ್ಯೆಯೂ ಹೆಚ್ಚುತ್ತಿದೆ. ಹಲವಾರು ಚುನಾವಣೆಗಳಲ್ಲಿ ನೋಟಾ ಹೆಚ್ಚು ಮತಗಳಿಸಿದವರ ಪೈಕಿ 3ನೇ ಸ್ಥಾನದಲ್ಲಿ ನಿಲ್ಲುತ್ತದೆ. ಆದರೂ ಕೂಡ ವ್ಯರ್ಥ ಮತಗಳಾಗಿಯೇ ಉಳಿದುಕೊಳ್ಳುತ್ತಿದೆ.

ನೋಟಾ ಕುರಿತಾದ ಸಲಹೆ ಸೂಚನೆಗಳು:

ಭಾರತದಲ್ಲಿ ನೋಟಾವನ್ನು ಬಲವರ್ಧಿಸಲು ಹಲವಾರು ಚರ್ಚೆಗಳು ನಡೆಯುತ್ತಲೇ ಇವೆ. ನೋಟಾದ ಸುಧಾರಣೆಗಾಗಿ ಹಲವರಿಂದ ನಾನಾ ಸಲಹೆಗಳು ಕೇಳಿ ಬರುತ್ತಲೇ ಇವೆ. ಆದರೆ ಇವ್ಯಾವುದರ ಬಗ್ಗೆಯೂ ಕೂಡ ಭಾರತೀಯ ಚುನಾವಣಾ ಆಯೋಗ ತಲೆ ಕೆಡಿಸಿಕೊಂಡಿಲ್ಲ.

ಚುನಾವಣಾ ಕ್ಷೇತ್ರದಲ್ಲಿನ ಹೆಚ್ಚು ಜನ ನೋಟಾವನ್ನು ಆಯ್ಕೆ ಮಾಡಿದರೆ ಮರು ಚುನಾವಣೆ ನಡೆಯಬೇಕು ಎಂಬ ವಾದಗಳಿವೆ. ಆದರೆ ಇದಕ್ಕೆ ಚುನಾವಣಾ ಆಯೋಗ ಸೊಪ್ಪು ಹಾಕುತ್ತಿಲ್ಲ. ಇಂತಿಷ್ಟು ಶೇಕಡಾವಾರು ಮತದಾರರು ನೋಟಾಗೆ ಮತ ನೀಡಿದರೆ ಮರು ಚುನಾವಣೆ ನಡೆಯಬೇಕು ಎನ್ನುವ ಮಾತುಗಳೂ ಕೇಳಿ ಬಂದಿವೆ. ಆದರೆ ಈ ಮಾತುಗಳೂ ಕೂಡ ಚಾಲ್ತಿಗೆ ಬಂದಿಲ್ಲ.

ಇಷ್ಟೇ ಅಲ್ಲದೇ, ನೋಟಾದ ಕಾರಣದಿಂದ ಸೋಲನ್ನು ಅನುಭವಿಸಿದ ವ್ಯಕ್ತಿಗಳು ನಿರ್ದಿಷ್ಟ ಸಮಯದವರೆಗೆ ಚುನಾವಣೆಗೆ ಸ್ಪರ್ಧಿಸಬಾರದು. ನೋಟಾದ ಮೊತ್ತಕ್ಕಿಂತಲೂ ಕಡಿಮೆ ಮತಗಳನ್ನು ಪಡೆದ ಅಭ್ಯರ್ಥಿಗಳನ್ನು ಶಾಶ್ವತವಾಗಿ ಅಭ್ಯರ್ಥಿಗಳ ಪಟ್ಟಿಯಿಂದ ದೂರವಿಡಬೇಕು ಎಂಬ ಸಲಹೆಗಳಿವೆ. ಇವ್ಯಾವುವೂ ಕೂಡ ಲೆಕ್ಕಕ್ಕಿಲ್ಲದಂತಾಗಿವೆ.

ಸಧ್ಯದ ಮಟ್ಟಿಗೆ ಭಾರತದ ನೋಟಾ ಭಾರತೀಯ ಪ್ರಜೆಗಳ ಅಶಕ್ತ ಅಸ್ತ್ರ. ನೋಟಾ ಓಟು ಚುನಾವಣಾ ಅಭ್ಯರ್ಥಿಗಳಿಗೆ ಪ್ರತಿರೋಧವಾಗಿ ಕಾಣಿಸುತ್ತದೆಯಾದರೂ, ಮರು ಚುನಾವಣೆ ನಡೆಸಬಲ್ಲ ಶಕ್ತಿ ಅದಕ್ಕಿಲ್ಲ. ಬಹುಮತ ಸಾಧಿಸಿದರೂ ಕೂಡ ಬಹುಪಾಲು ಜನರಿಂದ ತಿರಸ್ಕೃತನಾದ ವ್ಯಕ್ತಿಯೇ ಚುನಾಯಿತನಾಗುತ್ತಾನೆ ಎನ್ನುವುದು ನೋಟಾದ ದುರಂತ. ಭಾರತದ ಚುನಾವಣಾ ವ್ಯವಸ್ಥೆಯ ಢಾಂಬಿಕತೆಗೆ ಇದು ಸಾಕ್ಷಿಯಾಗಿದೆ.