samachara
www.samachara.com
‘ಮಹಿಳೆಯರ ಮತಕ್ಕೆ 200ರ ನೋಟು’: ಕುಮಾರಸ್ವಾಮಿಯವರಿಗೊಂದು ಕಿವಿಮಾತು!
COVER STORY

‘ಮಹಿಳೆಯರ ಮತಕ್ಕೆ 200ರ ನೋಟು’: ಕುಮಾರಸ್ವಾಮಿಯವರಿಗೊಂದು ಕಿವಿಮಾತು!

ಪ್ರಜಾಪ್ರಭುತ್ವವನ್ನು ಪ್ರೋತ್ಸಾಹಿಸಲು 200 ರೂಪಾಯಿ ಕೊಡುವುದಾಗಿ ಜೆಡಿಎಸ್‌ ಹೇಳುತ್ತಿರುವುದು ದೊಡ್ಡ ಬೂಟಾಟಿಕೆ. ಮತ ಚಲಾವಣೆ ಮಾಡುವವರಿಗೆ ಅಧಿಕೃತವಾಗಿ ಲಂಚ ನೀಡುವ ಸಂಪ್ರದಾಯಕ್ಕೆ ಇದು ನಾಂದಿ ಹಾಡುತ್ತದೆಯಷ್ಟೇ.

ನಂದಕುಮಾರ್ ಕೆ. ಎನ್‌

ನಂದಕುಮಾರ್ ಕೆ. ಎನ್‌

ರಾಜ್ಯ ವಿಧಾನಸಭಾ ಚುನಾವಣೆಗಾಗಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿರುವ ಜೆಡಿಎಸ್‌ ಗಮನ ಸೆಳೆಯುವಂತಹ ಒಂದು ‘ಭರವಸೆ’ ನೀಡಿದೆ. ಮತ ಚಲಾಯಿಸುವ ಪ್ರತಿ ಮಹಿಳೆಯರಿಗೂ 200 ರೂ.ಗಳನ್ನು ‘ಪ್ರಜಾಪ್ರಭುತ್ವ ಪ್ರೋತ್ಸಾಹ ಧನ’ ವೆಂದು ನೀಡಲಾಗುವುದು ಎಂಬ ಭರವಸೆಯನ್ನು ಪಕ್ಷ ಪ್ರಕಟಸಿದೆ.

ಚುನಾವಣಾ ಪ್ರಕ್ರಿಯೆಗಳಡೆಗೆ ಜನರ ನಿರಾಸಕ್ತಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಜನರನ್ನು ಚುನಾವಣಾ ಪ್ರಕ್ರಿಯೆಗಳಲ್ಲಿ ಹಿಡಿದಿಡಲು ಇಂತಹ ಅಗ್ಗದ ಗಿಮಿಕ್ ಗಳನ್ನು ಪಕ್ಷಗಳು ಮಾಡಬೇಕಾದ ಪರಿಸ್ಥಿತಿ ಬಂದಿರುವುದನ್ನು ಇದು ಸೂಚಿಸುತ್ತಿದೆ.

ಕರ್ನಾಟಕದಲ್ಲಿ ಏನಾದರೂ ಪ್ರಾದೇಶಿಕ ಪಕ್ಷವೊಂದು ಇದೆ ಎಂದರೆ ಅದು ಜಾತ್ಯಾತೀತ ಜನತಾದಳವೆನ್ನುವ ಮಟ್ಟಕ್ಕೆ ಪಕ್ಷವನ್ನು ರೂಪಿಸಿದ ಹಿರಿಮೆಯಲ್ಲಿ ಹೆಚ್‌.ಡಿ. ಕುಮಾರಸ್ವಾಮಿ ಅವರ ದೊಡ್ಡ ಕೊಡುಗೆ ಇದೆ. ಅಧಿಕಾರ ರಾಜಕಾರಣದ ಪಟ್ಟುಗಳನ್ನು ಹಾಕುವುದರಲ್ಲಿ ಕುಮಾರಸ್ವಾಮಿ ದೇವೇಗೌಡರಿಗಿಂತ ಒಂದು ಹೆಜ್ಜೆ ಮುಂದೆ ಎಂದು ಕೂಡ ಹೇಳಬಹುದು.

ತಂದೆಯ ಮಾತನ್ನು ಧಿಕ್ಕರಿಸಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿದ ಕಾರಣದಿಂದಲೇ ಮುಖ್ಯಮಂತ್ರಿ ಪಟ್ಟವನ್ನು ತನ್ನದಾಗಿಸಿಕೊಂಡವರು ಹೆಚ್‌ಡಿಕೆ. ಆದರೆ ಇದಕ್ಕೆ ಹೆಚ್.ಡಿ. ದೇವೇಗೌಡರು ಪರೋಕ್ಷ ಬೆಂಬಲ ನೀಡಿದ್ದರು ಎಂದೂ ಕೂಡ ಹೇಳಲಾಗಿತ್ತು. ಈ ಪಕ್ಷಕ್ಕೆ ಪ್ರಾದೇಶಿಕತೆಯ ಅಸ್ಮಿತೆ ಕಾರ್ಯಸೂಚಿಗಳು ಹಾಗೂ ತನ್ನದೆಂದು ಹೇಳಿಕೊಳ್ಳಲು ಒಂದು ಸಿದ್ದಾಂತವಿಲ್ಲವಾದರೂ ಕರ್ನಾಟಕದ ಪ್ರಾದೇಶಿಕ ಪಕ್ಷವೆಂದೇ ಗುರ್ತಿಸಿಕೊಳ್ಳುತ್ತಿದೆ. ರಾಷ್ಟ್ರ ರಾಜಕಾರಣದಲ್ಲೂ ತನ್ನ ಗುರುತನ್ನು ಛಾಪಿಸಿದೆ.

ಹೆಚ್.ಡಿ. ಕುಮಾರಸ್ವಾಮಿ ಜನಪ್ರಿಯ ರಾಜಕಾರಣಿಯಷ್ಟೇ ಅಲ್ಲ ಯಶಸ್ವಿ ಸಿನಿಮಾ ನಿರ್ಮಾಪಕ ಕೂಡಾ. ಅಕ್ರಮ ಗಣಿಗಾರಿಕೆಗೆ ಕುಖ್ಯಾತಿ ಪಡೆದ ಗಾಲಿ ಜನಾರ್ದನ ರೆಡ್ಡಿ ಸಿಡಿಸಲು ಯತ್ನಿಸಿದ 150 ಕೋಟಿ ರೂಪಾಯಿ ಲಂಚ ಪ್ರಕರಣದ ಕಾರಣದಿಂದಲೂ ಸುದ್ಧಿಯಾದವರು. ನಟಿ ರಾಧಿಕಾ ಜೊತೆ ಮದುವೆ ಕಾರಣಕ್ಕೆ ರೋಚಕ ಸುದ್ಧಿಗಳಿಗೆ ಗ್ರಾಸವಾದವರು ಹೆಚ್‌ಡಿಕೆ.

‘ಆಕಸ್ಮಿಕ’ ಮುಖ್ಯಮಂತ್ರಿ!

‘ಮಹಿಳೆಯರ ಮತಕ್ಕೆ 200ರ ನೋಟು’: ಕುಮಾರಸ್ವಾಮಿಯವರಿಗೊಂದು ಕಿವಿಮಾತು!

ಹೆಚ್. ಡಿ. ದೇವೇಗೌಡರು ಹೇಗೆ ಆಕಸ್ಮಿಕ ಪ್ರಧಾನಿಯಾದರೋ ಹಾಗೇ ಹೆಚ್.ಡಿ.ಕೆ ಆಕಸ್ಮಿಕವಾಗಿ ಕರ್ನಾಟಕದ ಹದಿನೆಂಟನೇ ಮುಖ್ಯಮಂತ್ರಿಯಾದವರು. ಇದನ್ನು ಅವರು ಕೂಡ ಒಪ್ಪಿಕೊಂಡ ವಿಚಾರ. ಆ ಸಂದರ್ಭದ ನಿರ್ವಾತವನ್ನು ತುಂಬಲು ನಡೆದ ಹೊಂದಾಣಿಕಾ ರಾಜಕೀಯದ ಕಾರಣದಿಂದ ಅಪ್ಪ ಮಗ ಇಬ್ಬರೂ ದೇಶ ಹಾಗೂ ರಾಜ್ಯದ ಅತ್ಯುನ್ನತ ಅಧಿಕಾರ ಸ್ಥಾನಗಳಲ್ಲಿ ಕುಳಿತವರು. ಅದಕ್ಕಾಗಿಯೇ ಕಾಂಗ್ರೆಸ್ಸಿನ ಧರ್ಮಸಿಂಗ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿದ್ದರು ಕೂಡ.

ಅವರು ‘ಕಿಂಗ್’ ಆಗುವುದಾದರೂ ‘ಕಿಂಗ್ ಮೇಕರ್’ ಆಗುವುದಾದರೂ ಸೂತ್ರ ಮಾತ್ರ ಒಂದೆ. ಅದು ಅವರ ‘ಎಲ್ಲಾ ಕಡೆ ಸಲ್ಲುವ’ ಹೊಂದಾಣಿಕಾ ರಾಜಕೀಯ. ಹಾಗಾಗಿ ಜೆಡಿಎಸ್ ದೇವೇಗೌಡರ ಮುಖ್ಯಮಂತ್ರಿ ಅವಧಿಯ ನಂತರ ಕರ್ನಾಟಕದಲ್ಲಿ ತನ್ನ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿಲ್ಲವಾದರೂ ನಿರ್ಲಕ್ಷಿಸಲಿಕ್ಕಾಗದ ರಾಜ್ಯದ ರಾಜಕೀಯ ಶಕ್ತಿಯಾಗಿ ಉಳಿದುಕೊಳ್ಳುತ್ತಾ ಬಂದಿದೆ.

ಹೆಚ್. ಡಿ. ಕೆ 1996ರಲ್ಲಿ ಈಗಿನ ರಾಮನಗರ ಜಿಲ್ಲೆಯ ಕನಕಪುರ ವಿದಾನಸಭಾ ಕ್ಷೇತ್ರದಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದವರು. ನಂತರ 1998 ಹಾಗೂ 1999 ರಲ್ಲಿ ಕ್ರಮವಾಗಿ ಕನಕಪುರ ಹಾಗೂ ಸಾತನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಸೋಲುಗಳನ್ನೂ ಅನುಭವಿಸಿದವರು. ಒಂದು ಹಂತದಲ್ಲಿ ಈ ರಾಜಕೀಯವೇ ಬೇಡ ಎಂದು ಹಿಂದೆ ಸರಿಯುವ ತೀರ್ಮಾನವನ್ನು ತೆಗೆದುಕೊಂಡು ಸುದ್ಧಿಗೆ ಗ್ರಾಸವಾದವರು.

ವಿಶೇಷ ಭರವಸೆಗಳ ಪ್ರಣಾಳಿಕೆ

ಜೆಡಿಎಸ್ ಪ್ರಣಾಳಿಕೆ ಮುಖಪುಟ ಹೀಗಿದೆ. 
ಜೆಡಿಎಸ್ ಪ್ರಣಾಳಿಕೆ ಮುಖಪುಟ ಹೀಗಿದೆ. 

ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಹೆಚ್.ಡಿ.ಕೆ ನೇತೃತ್ವದ ಜಾತ್ಯಾತೀತ ಜನತಾದಳ ಕೆಲವು ವಿಶೇಷ ಭರವಸೆಗಳನ್ನು ತನ್ನ ಪ್ರಣಾಳಿಕೆಯಲ್ಲಿ ನೀಡಿದೆ. ಗರ್ಭಿಣಿ ಮಹಿಳೆಯರಿಗೆ, ಬಡ ಮಹಿಳೆಯರಿಗೆ, 65 ಹಾಗೂ 80 ವರ್ಷ ಮೀರಿದವರಿಗೆ ಮಾಸಾಶನ ನೀಡುವ, ಸಣ್ಣ ವ್ಯಾಪಾರಿಗಳಿಗೆ ದಿನಕ್ಕೆ ಶೇ. 2ರ ನಿರ್ವಹಣಾ ವೆಚ್ಚದಲ್ಲಿ 5000ವರೆಗೆ ಸಾಲ ಸೌಲಭ್ಯ ಕಲ್ಪಿಸುವ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಹೀಗೆ ಸೂಕ್ತ ಹಾಗೂ ಆಕರ್ಷಕವೆನಿಸುವ ಹಲವು ಯೋಜನೆಗಳ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಿದೆ.

ಜೆಡಿಎಸ್‌ನ ಪ್ರಣಾಳಿಕೆಯ ಭರವಸೆಗಳ ಪೈಕಿ ವಿಶೇಷವಾಗಿ ಗಮನ ಸೆಳೆಯುವಂತಹ ಒಂದು ಭರವಸೆ ಇದೆ. ಮತ ಚಲಾಯಿಸುವ ಪ್ರತಿ ಮಹಿಳೆಯರಿಗೂ 200 ರೂ. ಗಳನ್ನು ‘ಪ್ರಜಾಪ್ರಭುತ್ವ ಪ್ರೋತ್ಸಾಹ ಧನ’ ವೆಂದು ನೀಡಲಾಗುವುದು ಎಂಬ ಯೋಜನೆಯೊಂದನ್ನು ಪಕ್ಷ ಪ್ರಕಟಸಿದೆ. ಇದು ವಿಚಿತ್ರವಾದ ಭರವಸೆಯಾಗಿದೆ. ಚುನಾವಣಾ ಪ್ರಕ್ರಿಯೆಗಳಲ್ಲಿ ದಿನೇ ದಿನೇ ಜನರ ನಿರಾಸಕ್ತಿ ಹೆಚ್ಚಾಗುತ್ತಿರುವ ಇಂದಿನ ಸಂದರ್ಭದಲ್ಲಿ ಜನರನ್ನು ಚುನಾವಣಾ ಪ್ರಕ್ರಿಯೆಗಳಲ್ಲಿ ಹಿಡಿದಿಡಲು ಇಂತಹ ಅಗ್ಗದ ಗಿಮಿಕ್ ಗಳನ್ನು ಮಾಡಬೇಕಾದ ಪರಿಸ್ಥಿತಿ ಬಂದಿರುವುದನ್ನು ಇದು ಸೂಚಿಸಿರುವುದು ನಿಜ. ಆದರೆ ಇದು ಪ್ರಜಾಪ್ರಭುತ್ವವನ್ನು ಪ್ರೋತ್ಸಾಹಿಸಲು ಎಂದು ಹೇಳುವುದು ದೊಡ್ಡ ಬೂಟಾಟಿಕೆ. ಯಾಕೆಂದರೆ ಮತ ಚಲಾವಣೆ ಮಾಡುವವರಿಗೆ ಅಧಿಕೃತವಾಗಿ ಲಂಚ ನೀಡುವ ಸಂಪ್ರದಾಯಕ್ಕೆ ಇದು ನಾಂದಿ ಹಾಡುವುದು ಬಿಟ್ಟರೆ ಬೇರೇನೂ ಆಗಲು ಸಾಧ್ಯವಿಲ್ಲ.

ಅಂದರೆ ಈಗ ಅನಧಿಕೃತವಾಗಿ ಸಾವಿರಾರು ರೂಪಾಯಿಗಳನ್ನು ಊಟಕ್ಕೆಂದೋ, ಕೊಡುಗೆಯೆಂದೋ ಜನರಿಗೆ ಹಂಚಿ ಅವರ ಮತಗಳನ್ನು ಖರೀದಿಸಲು ನಡೆಯುತ್ತಿರುವ ಚುನಾವಣಾ ದಂಧೆಗಳನ್ನು ಮಾನ್ಯ ಮಾಡುವ ಒಂದು ಪ್ರಯತ್ನವೇ ವಿನಹ ಇದು ಬೇರೇನೂ ಅಲ್ಲ. ಇದನ್ನು ಪ್ರಜಾಪ್ರಭುತ್ವಕ್ಕೆ ಪ್ರೋತ್ಸಾಹ ಎಂದರೆ ಅದು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಮಾರಕವಾದ ಚಿಂತನೆಯಾಗುತ್ತದೆ.

ನಿಜ ಏನೆಂದರೆ ಇತರ ಪಕ್ಷಗಳಂತೆ ಜೆಡಿಎಸ್‌ನಲ್ಲೂ ಅವರು ಹೇಳಿಕೊಳ್ಳುವಂತಹ ಯಾವುದೇ ಪ್ರಜಾತಾಂತ್ರಿಕ ಪದ್ಧತಿಗಳನ್ನು ಪಾಲಿಸುವ ಪರಿಪಾಠವೇ ಇಲ್ಲ. ಅದು ‘ಅಪ್ಪ ಮಕ್ಕಳ ಪಕ್ಷ’ವೆಂದೇ ಜನರಿಂದ ಗುರುತಿಸಲ್ಪಟ್ಟಿರುವುದು ಕೂಡ. ಹೆಚ್.ಡಿ. ದೇವೇಗೌಡ, ಹೆಚ್.ಡಿ. ಕುಮಾರಸ್ವಾಮಿ, ಹೆಚ್.ಡಿ. ರೇವಣ್ಣ ಅದರ ಹೈಕಮಾಂಡ್. ಬೇರೆಯವರ ಒಳಗೊಳ್ಳುವಿಕೆ ಅಷ್ಟಕ್ಕಷ್ಟೆ. ಇನ್ನು ಎಲ್ಲಿಯ ಪ್ರಜಾಪ್ರಭುತ್ವ ನೀತಿಗಳನ್ನು ಇದು ಪಾಲಿಸಲು ಸಾಧ್ಯ ಹೇಳಿ?

ಸ್ವತಃ ಕುಮಾರಸ್ವಾಮಿಯೇ ಪಕ್ಷದ ನೀತಿಗೆ ವಿರುದ್ಧವಾಗಿ ಬಿಜೆಪಿಯೊಂದಿಗೆ ಕೈ ಜೋಡಿಸಿ ಸರ್ಕಾರ ರಚಿಸಿದ್ದರೂ ಯಾವುದೇ ಕ್ರಮವನ್ನು ಕೈಗೊಳ್ಳದ ಆ ಪಕ್ಷ ಸಣ್ಣ ಪುಟ್ಟ ಕಾರಣಗಳಿಗೆ ಇತರ ಸದಸ್ಯರ ಮೇಲೆ ಉಗ್ರ ಕ್ರಮ ಕೈಗೊಂಡಿದ್ದುಂಟು. ಈ ಮಟ್ಟದ ಏಕಪಕ್ಷೀಯ ಹಾಗೂ ತಾರತಮ್ಯ ನೀತಿಗಳನ್ನು ಪಾಲಿಸುವ ಪಕ್ಷ ಪ್ರಜಾಪ್ರಭುತ್ವ ಪ್ರೋತ್ಸಾಹಿಸುವ ಉದ್ಧೇಶದಿಂದ ಇಂತಹ ಯೋಜನೆ ಜಾರಿ ಮಾಡಿದೆಯೆಂದರೆ ಅದು ಹಾಸ್ಯಾಸ್ಪದವಲ್ಲವೇ?

ಅಲ್ಲದೇ ಹೆಚ್. ಡಿ ದೇವೇಗೌಡ ಕುಟುಂಬ ರಾಜ್ಯದ ಶ್ರೀಮಂತ ಕಾರ್ಪೊರೆಟ್ ರಾಜಕೀಯ ಕುಟುಂಬಗಳಲ್ಲಿ ಒಂದು. ಅದು ಟಿವಿ, ಕೇಬಲ್, ಬ್ರಾಡ್ ಬಾಂಡ್ ಇಂಟರ್ನೆಟ್ ಸೇವೆ, ಚಲನಚಿತ್ರ ಹಾಗೂ ಧಾರವಾಹಿ ನಿರ್ಮಾಣ ಇನ್ನಿತರ ಆರ್ಥಿಕ ವ್ಯವಹಾರಗಳಲ್ಲಿ ತೊಡಗಿಕೊಂಡಿರುವ ಕುಟುಂಬ. ಕುಟುಂಬದ ಒಟ್ಟು ಆಸ್ತಿಯೇ ಸಾವಿರಾರು ಕೋಟಿಗಳಷ್ಟಿದೆ ಎಂಬ ಗುಮಾನಿ ಜನರಲ್ಲಿದೆ. ಈಗಿನ ಚುನಾವಣಾ ಸಂದರ್ಭದಲ್ಲಿ ಕುಮಾರಸ್ವಾಮಿ ಕುಟುಂಬ ಘೋಷಿಸಿಕೊಂಡ ಒಟ್ಟು ಆಸ್ತಿ ಸುಮಾರು 170 ಕೋಟಿಯಷ್ಟಿದೆ.

ಕಾರ್ಪೋರೆಟ್‌ ಪ್ರಪಂಚ ಹೇಳುವ ಪ್ರಜಾಪ್ರಭುತ್ವಕ್ಕೂ, ಅವರು ಆಳದಲ್ಲಿ ಅವರು ನಡೆದುಕೊಳ್ಳುವ ರೀತಿಗೂ ಒಂದಕ್ಕೊಂದು ಸಂಬಂಧ ಕಾಣಿಸುವುದಿಲ್ಲ. ಸಮಾಜದ ಎದುರಿಗೆ, ಡೆಮಾಕ್ರಸಿ, ಪ್ರಜಾಪ್ರಭುತ್ವದ ಗಿಳಿಪಾಠ ಹೇಳುತ್ತಾ ತಾವುಗಳು ಮಾತ್ರ ಅವುಗಳನ್ನು ನಿತ್ಯ ಬದುಕಿನಲ್ಲಿ ಚಲಾಯಿಸದೆ ಮುಖವಾಡಗಳನ್ನು ಹಾಕಿಕೊಂಡು ಬದುಕುವ ವರ್ಗ ಇದು. ಇದಕ್ಕೆ ಎಚ್‌ಡಿಕೆ ಕುಟುಂಬ ಕೂಡ ಹೊರತಾಗಿಲ್ಲ. ಏನೇ ಪ್ರಾದೇಶಿಕ ಬೇರುಗಳು, ಮಣ್ಣಿನ ಗುಣಗಳು, ರೈತ ಪರ ಅಂದಕೊಂಡರೂ ಅವರಿಗಿದ್ದ ಅವಕಾಶಗಳನ್ನು ಕೈಚೆಲ್ಲಿ ಮತ್ತದೇ ಕಾರ್ಪೊರೇಟ್ ಪ್ರೇರಿತ ರಾಷ್ಟ್ರೀಯ ಪಕ್ಷಗಳ ಮಾದರಿಯಲ್ಲಿ ರಾಜಕಾರಣವನ್ನು, ಕುಟುಂಬದ ಉದ್ದಿಮೆಗಳನ್ನು ನಡೆಸಿಕೊಂಡು ಬಂದವರು ಅವರು.

ಹೆಚ್‌ಡಿಕೆ ಆಕರ್ಷಣೆ

ಹೀಗಿದ್ದರೂ, ಹೆಚ್‌ಡಿಕೆ ಇತರ ರಾಜಕೀಯ ನಾಯಕರಿಗಿಂತ ಜನರನ್ನು ಆಕರ್ಷಿಸುವಲ್ಲಿ ಸ್ವಲ್ಪ ಭಿನ್ನವಾಗಿ ನಿಲ್ಲುತ್ತಾರೆ. ಅವರ ದೇಹಭಾಷೆ, ಅವರ ಮಾತುಗಳು ಇತರ ನಾಯಕರಿಗಿಂತ ಅವರನ್ನು ಪ್ರತ್ಯೇಕಿಸಿ ನೋಡುವಂತೆ ಮಾಡುತ್ತದೆ. ಅವರ ಭಾಷಣಗಳಾಗಲೀ ಮಾತುಗಳಾಗಲೀ ಜನಸಾಮಾನ್ಯರಿಗೆ ಆಪ್ತವಾಗಿ ತಮ್ಮ ಊರಿನ ಇಲ್ಲವೇ ಪಕ್ಕದ ಮನೆಯ ಪರಿಚಿತ ವ್ಯಕ್ತಿಯೊಬ್ಬ ಸಹಜವಾಗಿ ತಮ್ಮೊಡನೆ ಸ್ಪಂದಿಸುತ್ತಿರುವಂತೆ ತೋರುತ್ತದೆ. ಎದರಿಗೆ ಸಿಕ್ಕವರ ಹೆಗಲ ಮೇಲೆ ಕೈ ಹಾಕಿ ‘ಬ್ರದರ್’ ಎಂಬ ಮಣ್ಣಿನ ಆಪ್ತತೆಯೊಂದು ಅವರಲ್ಲಿ ಕಾಣಿಸುತ್ತದೆ.

ಸಿದ್ದರಾಮಯ್ಯ ಅವರಲ್ಲಿ ಕಾಣುವ ಉಡಾಫೆ ದೋರಣೆಯಾಗಲೀ, ಯಡಿಯೂರಪ್ಪ ಅವರ ಸಂವೇಧನಾರಹಿತ ಉರಿ ಭಾವವನ್ನಾಗಲೀ ಇವರಲ್ಲಿ ಕಾಣುವುದಿಲ್ಲ. ಜೊತೆಗೆ ಅವರು ಮಾಡುವ ಹಲವು ಗಿಮಿಕ್ ಗಳು ಜನರನ್ನು ಕೆಲವು ಪ್ರದೇಶಗಳಲ್ಲಿ ಅವರ ಜೊತೆಗೆ ನಿಲ್ಲುವಂತೆ ಮಾಡುತ್ತಿರುವುದು ಸುಳ್ಳಲ್ಲ. ಹಾಗೇ ನೋಡಿದರೆ ಜೆಡಿಎಸ್‌ ಪಕ್ಷ ಈಗ ಹೆಚ್‌ಡಿಕೆ ವರ್ಚಸ್ಸಿನಿಂದಾಗಿಯೇ ನಿಂತುಕೊಂಡು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ ಎಂದು ಕೂಡ ಹೇಳಬಹುದು.

ಆದರೆ ಅದೊಂದರಿಂದಲೇ ಒಂದು ರಾಜಕೀಯ ಪಕ್ಷವನ್ನು ಬೆಳೆಸಿಕೊಂಡು ಹೋಗಲು ಸಾಧ್ಯವಿಲ್ಲ ಎನ್ನುವುದು ವಾಸ್ತವ. ಹಾಗಾಗಿ ಪ್ರಾದೇಶಿಕ ಪಕ್ಷವೆಂದು ಬಿಂಬಿತವಾಗಿರುವ ಜೆಡಿಎಸ್ ಸ್ಥಿತ್ಯಂತರ ಸನ್ನಿವೇಶದಲ್ಲಿದೆ. ಬಹುಕಾಲದಿಂದ ಅದರ ಜೊತೆಗಿದ್ದ ಮೂವರು ಪ್ರಮುಖ ನಾಯಕರುಗಳು ಅದರಿಂದ ಹೊರಬಂದು ಇತ್ತೀಚೆಗೆ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡಿದ್ದನ್ನು ಈ ಹಿನ್ನಲೆಯಲ್ಲಿ ನಾವು ನೋಡಬಹುದು.

ಈ ಚುನಾವಣೆಯಲ್ಲಿ ಜೆಡಿಎಸ್ ಮತ್ತೊಮ್ಮೆ ಕಿಂಗ್ ಮೇಕರ್ ಆಗುವ ಎಲ್ಲಾ ಸಾಧ್ಯತೆಗಳಿವೆ ಎಂಬ ವರದಿಗಳು ಬರುತ್ತಿವೆ. ಹೀಗಿರುವಾಗಲೇ ಮತಹಾಕಿದ ಮಹಿಳೆಯರಿಗೆ 200 ರೂಪಾಯಿ ಪ್ರೋತ್ಸಾಹ ನೀಡುವುದಾಗಿ ದಿಕ್ಸೂಚಿ ನೀಡಿದ್ದಾರೆ ಕುಮಾರಸ್ವಾಮಿ. ಸಿಕ್ಕ 20 ತಿಂಗಳುಗಳ ಆಡಳಿತದಲ್ಲಿ ಜನಪ್ರಿಯತೆ ಕಳೆದು ಹೋಗಲು ಇಂತಹ ಎರಡು ಆಲೋಚನೆಗಳು ಸಾಕು. ಜನಪ್ರಿಯತೆ ಪಡೆದುಕೊಳ್ಳುವುದು ಸುಲಭ, ಆದರೆ ಉಳಿಸಿಕೊಳ್ಳುವುದು ಕಷ್ಟ. ಈ ಕಿವಿಮಾತನ್ನು ಕುಮಾರಸ್ವಾಮಿಯರಿಗೆ ದೊಡ್ಡಗೌಡರಾದರೂ ಕೂರಿಸಿಕೊಂಡು ಹೇಳಬೇಕಿದೆ.