samachara
www.samachara.com
‘ಬದಲಾವಣೆ ಬಂದೇ ಬರುತ್ತದೆ’: ಯೋಗಿಯ ಗೋರಖ್‌ಪುರದಿಂದ ಡಾ. ಕಫೀಲ್ ಖಾನ್! 
COVER STORY

‘ಬದಲಾವಣೆ ಬಂದೇ ಬರುತ್ತದೆ’: ಯೋಗಿಯ ಗೋರಖ್‌ಪುರದಿಂದ ಡಾ. ಕಫೀಲ್ ಖಾನ್! 

ಎಂಟು ತಿಂಗಳು ಕಾಲ ಜೈಲಿನಿಂದ ಹೊರಬಂದ ಕಫೀಲ್ ಹಳೆಯ ದಿನಗಳನ್ನು ‘ಸಮಾಚಾರ’ದ ಜತೆ ಹಂಚಿಕೊಂಡರು. ಸದ್ಯ ಅವರ ಮನಸ್ಥಿತಿ, ರಾಜ್ಯ ಸರಕಾರದ ಸ್ಥಿತಿ ಹಾಗೂ ಭವಿಷ್ಯದ ಕನಸುಗಳನ್ನು ಬಿಚ್ಚಿಟ್ಟರು. ಅವರ ಜತೆಗಿನ ದೂರವಾಣಿ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಪ್ರಶಾಂತ್ ಹುಲ್ಕೋಡು

ಪ್ರಶಾಂತ್ ಹುಲ್ಕೋಡು

“ಗೋರಖ್‌ಪುರದ ಜೈಲು ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ. ಒಂದು ತರಹದ ನರಕ ಅದು. ಜೈಲಿನ ಸಾಮರ್ಥ್ಯವೇ 800 ಇರುವಾಗ ಎರಡು ಸಾವಿರ ಮೀರಿದ ಕೈದಿಗಳನ್ನು ಇಡಲಾಗಿದೆ. ಪ್ರತಿ ಬ್ಯಾಕರ್ ಸಾಮರ್ಥ್ಯ 60- 70 ಇರುವಾಗ 250 ಜನರನ್ನು ತುಂಬಿಸಿಡಲಾಗಿದೆ. ರಾಜ್ಯದ ಹೊರಗಿನ ಪರಿಸ್ಥಿತಿ ಹೇಗಿದೆಯೋ, ಜೈಲಿನ ಒಳಗೂ ಹಾಗೇ ಇದೆ,’’ ಎಂದರು ಡಾ. ಕಫೀಲ್ ಖಾನ್.

ಅವರು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಮಕ್ಕಳನ್ನು ಕೊಂದ ಆರೋಪಕ್ಕೆ ತುತ್ತಾದ ವೈದ್ಯ. 2017ರ ಆಗಸ್ಟ್‌ ತಿಂಗಳಿನಲ್ಲಿ ಇಲ್ಲಿನ ಬಿಆರ್‌ಡಿ ಮೆಡಿಕಲ್‌ ಕಾಲೇಜಿನ ಆಸ್ಪತ್ರೆಯಲ್ಲಿ 60 ಮಕ್ಕಳು ಕೃತಕ ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿದ್ದರು. ಇದು ಕಾವಿಧಾರಿ ಮುಖ್ಯಮಂತ್ರಿಯ ಆಡಳಿತ ವೈಖರಿಯ ಬಗ್ಗೆ ಪ್ರಶ್ನೆಗಳನ್ನು ಏಳುವಂತೆ ಮಾಡಿತ್ತು. ರಾಷ್ಟ್ರಮಟ್ಟದಲ್ಲಿ ಮಡಿದ ಕಂದಮ್ಮಗಳಿಗೆ ಅನುಕಂಪದ ಮಹಾಪೂರವೇ ಹರಿದು ಬಂದಿತ್ತು.

ಈ ಸಮಯದಲ್ಲಿ ಆಸ್ಪತ್ರೆಯಲ್ಲಿ ಮಕ್ಕಳನ್ನು ಉಳಿಸಲು ಶ್ರಮಿಸಿದ ಡಾ. ಕಫೀಲ್ ದೇಶದ ಗಮನಸೆಳೆದಿದ್ದರು. ಆದರೆ ಸ್ಥಳೀಯ ಆಡಳಿತ ಕೊನೆಗೊಮ್ಮೆ ಡಾ. ಕಫೀಲ್‌ರನ್ನೇ ಮಕ್ಕಳ ಸಾವಿಗೆ ಆರೋಪಿಯನ್ನಾಗಿಸಿ ಗೋರಖ್‌ಪುರ ಜೈಲಿಗೆ ಕಳುಹಿಸಿತು.

ಎಂಟು ತಿಂಗಳು ಕಾಲ ಜೈಲಿನಲ್ಲಿದ್ದು ಹೊರಬಂದ ಕಫೀಲ್ ಹಳೆಯ ದಿನಗಳನ್ನು ‘ಸಮಾಚಾರ’ದ ಜತೆ ಹಂಚಿಕೊಂಡರು. ಸದ್ಯ ಅವರ ಮನಸ್ಥಿತಿ, ರಾಜ್ಯ ಸರಕಾರದ ಸ್ಥಿತಿ ಹಾಗೂ ಭವಿಷ್ಯದ ಕನಸುಗಳನ್ನು ಬಿಚ್ಚಿಟ್ಟರು. ಒಂದು ರಾಜ್ಯ ಸರಕಾರವೇ ಶಾಮೀಲಾಗಿ ತಮ್ಮ ವಿರುದ್ಧ ತಿರುಗಿ ಬಿದ್ದು, ಜೈಲಿಗೆ ತಳ್ಳಿದರೂ, ಭತ್ತದ ಉತ್ಸಾಹ, ಹೊಸ ಭರವಸೆಗಳು ಅವರ ಮಾತಿನಲ್ಲಿ ವ್ಯಕ್ತವಾದವು. ಅವರ ಜತೆಗಿನ ದೂರವಾಣಿ ಸಂದರ್ಶನದ ಆಯ್ದ ಭಾಗ ಇಲ್ಲಿದೆ:

ಜೈಲಿಗೆ ತಳ್ಳುವ ಮುಂಚೆ ಡಾ. ಕಫೀಲ್ ಹೀಗಿದ್ದರು. 
ಜೈಲಿಗೆ ತಳ್ಳುವ ಮುಂಚೆ ಡಾ. ಕಫೀಲ್ ಹೀಗಿದ್ದರು. 

ಸಮಾಚಾರ: 60 ಮಕ್ಕಳು ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ ದಿನವನ್ನು ನಿಮ್ಮ ಪತ್ರ ತೆರೆದಿಟ್ಟಿತ್ತು. ಆ ದಿನ ಇವತ್ತಿಗೂ ಕಾಡುತ್ತಾ?

ಡಾ. ಕಫೀಲ್: ನಿಜ, ಈ ಬಗ್ಗೆ ನಾನು ತುಂಬಾ ಮಾತನಾಡಿದ್ದೇನೆ. ಅಂದು ನಡೆದ ಘಟನೆ ಇನ್ನೂ ಕಣ್ಣ ಮುಂದಿದೆ. ಅದನ್ನು ಮರೆಯಲು ಸಾಧ್ಯವೇ ಇಲ್ಲ. ಸಂಜೆ ಏಳುವರೆ ಹೊತ್ತಿಗೆ ಕೃತಕ ಆಮ್ಲಜನಕವನ್ನು ಪೂರೈಸುವ ಜಂಬೋ ಸಿಲಿಂಡರ್‌ಗಳು ಖಾಲಿಯಾಗುತ್ತ ಬಂದವು. ರಾತ್ರಿ 11 ಗಂಟೆ ಹೊತ್ತಿಗೆ ಇನ್ನು ರೋಗಿಗಳಿಗೆ ನೀಡಲು ಕೃತಕ ಆಮ್ಲಜನಕ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಯಿತು. ನಾವು ಇದನ್ನು ಆಸ್ಪತ್ರೆಯ ಆಡಳಿತದ ಗಮನಕ್ಕೆ ತರುತ್ತಲೇ ಇದ್ದೆವು.

ಇದಕ್ಕೂ ಒಂದು ವಾರ ಮುಂಚೆ ಖಾಸಗಿ ಆಸ್ಪತ್ರೆಗಳಿಂದ, ಸ್ಥಳೀಯ ಗುತ್ತಿಗೆದಾರರಿಂದ ಮಾತುಕತೆ ನಡೆಸಿ ಕೃತಕ ಆಮ್ಲಜನಿಕದ ಜಂಬೋ ಸಿಲಿಂಡರ್‌ಗಳನ್ನು ತಂದು ರೋಗಿಗಳಿಗೆ ನೀಡುತ್ತಾ ಬಂದಿದ್ದೆವು. ಕಳೆದ 6 ತಿಂಗಳುಗಳಲ್ಲಿ ಕನಿಷ್ಟ 48 ಜಂಬೋ ಸಿಲಿಂಡರ್‌ಗಳನ್ನು ಹೇಗೋಗೊ ವ್ಯವಸ್ಥೆ ಮಾಡಿಕೊಂಡಿದ್ದೆವು. ಇಷ್ಟಾದರೂ ಯಾರೂ ಗಮನ ನೀಡಲಿಲ್ಲ.

ಆದರೆ 60 ಮಕ್ಕಳ ಸಾವಿನ ಸುದ್ದಿ ಹೊರ ಬರುತ್ತಲೇ ಆಡಳಿತ ಎಚ್ಚೆತ್ತುಕೊಂಡಿತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಸ್ಪತ್ರೆಗೆ ಭೇಟಿ ನೀಡಿದರು. ಆದರೆ ಅಷ್ಟೊತ್ತಿಗೆ ಅವರ ಆಡಳಿತ ಬಗ್ಗೆ ತೀವ್ರ ಅಸಮಾಧಾನ ಎದ್ದು ಕಾಣಿಸುತ್ತಿತ್ತು.

ಸಮಾಚಾರ: ಇಷ್ಟಾದ ಮೇಲೆ ನೀವು ಯಾಕೆ ಟಾರ್ಗೆಟ್ ಆದ್ರಿ?

ಕಫೀಲ್: ಆ ಸಮಯದಲ್ಲಿ ಸರಕಾರ ಮುಖ ಉಳಿಸಿಕೊಳ್ಳಲೇಬೇಕಿತ್ತು. ಆಸ್ಪತ್ರೆಯ ವಿಭಾಗ ಮುಖ್ಯಸ್ಥರಾಗಲೀ, ಆಡಳಿತ ಮಂಡಳಿಯವರಾಗಲೀ ಹೊಣೆ ಹೊತ್ತುಕೊಳ್ಳಬೇಕಿತ್ತು. ಅದರ ಬದಲಿಗೆ ನಾನು ಸುಲಭವಾಗಿ ಸಿಕ್ಕೆ. ನಾನಾಗ ಮಕ್ಕಳ ಜೀವ ಉಳಿಸಲು ಹೋರಾಟ ನಡೆಸುತ್ತಿದ್ದೆ.

ಆಡಳಿತ ಮಂಡಳಿ ಕೃತಕ ಆಮ್ಲಜನಕ ಪೂರೈಕೆದಾರರಿಗೆ ಬಾಕಿ ಹಣ ನೀಡಲಿಲ್ಲ ಎಂಬ ವಿಚಾರ ಹೊರಬಿದ್ದಿತ್ತು. ಇದು ಸರಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಿತ್ತು. ಈ ಮಾಹಿತಿ ನಾನು ನೀಡಿದ್ದೇನೆ ಎಂಬುದು ಅವರ ಕೋಪಕ್ಕೆ ಕಾರಣ.

ನಾವು ಮಕ್ಕಳ ಸಾವಿನಿಂದ ಹೊರಬರಲಾಗದೆ ನಿಸ್ಸಾಯಕರಾಗಿ ಕುಳಿತಿದ್ದೆವು. ಈ ಸಮಯದಲ್ಲಿ ಕೃತಕ ಆಮ್ಲಜನಕದ ಸಿಲಿಂಡರ್‌ಗಳನ್ನು ನಾನು ಮಾರಾಟ ಮಾಡಿದ್ದೇನೆ ಎಂಬ ಸುಳ್ಳು ಮತ್ತು ಗಂಭೀರ ಆರೋಪ ಹೊರಿಸಿ ಜೈಲಿಗೆ ತಳ್ಳಿದರು. ಆದರೆ ಎಂಟು ತಿಂಗಳ ನಂತರ ಹೈಕೋರ್ಟ್‌ ಈ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರ ಇಲ್ಲ ಎಂದು ಜಾಮೀನು ನೀಡಿತು. ಕೇಸ್‌ ಕೂಡ ನಿಲ್ಲುವುದಿಲ್ಲ.

ಆದರೆ ಆ ಎಂಟು ತಿಂಗಳು ನಾನೊಬ್ಬನೇ ಅಲ್ಲ, ನನ್ನ ಕುಟುಂಬದವರು ಅನುಭವಿಸಿದ ಕಷ್ಟ ಕಡಿಮೆ ಅಲ್ಲ. ನನ್ನ ಸಹೋದರನ ಉದ್ಯಮ ಲಾಸ್ ಆಯಿತು. ನಾನು ಜೈಲು ಸೇರಿದೆ.

ಸಮಾಚಾರ: ಇಷ್ಟಾದ ಮೇಲೂ ನಿಮ್ಮ ಮಾತುಗಳಲ್ಲಿ ಭರವಸೆ ಕಾಣಿಸುತ್ತಿದೆ. ಇದನ್ನೆಲ್ಲಾ ಹೇಗೆ ಎದುರಿಸಿದಿರಿ?

ಕಫೀಲ್: ಜೈಲು ಎಂಬುದು ನರಕ. ಅದರಲ್ಲೂ ಗೋರಖ್‌ಪುರದ ಜೈಲಿನಲ್ಲಿ ಕೈದಿಗಳು ತುಂಬಿ ತುಳುಕುತ್ತಿದ್ದಾರೆ. ಜೈಲಿನ ಸಾಮರ್ಥ್ಯವೇ 800 ಇರುವಾಗ ಎರಡು ಸಾವಿರ ಮೀರಿದ ಕೈದಿಗಳನ್ನು ಇಡಲಾಗಿದೆ. ಪ್ರತಿ ಬ್ಯಾಕರ್ ಸಾಮರ್ಥ್ಯ 60- 70 ಇರುವಾಗ 250 ಜನರನ್ನು ತುಂಬಿಸಿಡಲಾಗಿದೆ. ರಾಜ್ಯದ ಹೊರಗಿನ ಪರಿಸ್ಥಿತಿ ಹೇಗಿದೆಯೋ, ಜೈಲಿನ ಒಳಗೂ ಇದೆ.

ನಾನು ಜೈಲಿನ ಒಳಗೆ ಇರುವಾಗ ಹೊರಗೆ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಪರವಾಗಿ ಜನ ಮಾತನಾಡುತ್ತಿದ್ದಾರೆ ಎಂದು ಕುಟುಂಬದವರು ಹೇಳುತ್ತಿದ್ದರು. ನಾನು ಜೈಲಿನಿಂದ ಹೊರಬಂದಾಗ ಸಾವಿರಾರು ಜನ ಬರಮಾಡಿಕೊಂಡರು. ಆ ಕ್ಷಣವನ್ನು ಮರೆಯಲು ಸಾಧ್ಯವೇ ಇಲ್ಲ.

ಜೈಲಿಂದ ಹೊರಬಂದ ಡಾ. ಕಫೀಲ್ ಕುಟುಂಬದ ಜತೆಗೆ ಎದುರಾದ ಕ್ಷಣ. 
ಜೈಲಿಂದ ಹೊರಬಂದ ಡಾ. ಕಫೀಲ್ ಕುಟುಂಬದ ಜತೆಗೆ ಎದುರಾದ ಕ್ಷಣ. 

ಇವರು (ಯೋಗಿ ಆಡಳಿತ) ನನ್ನನ್ನು ಮುಗಿಸಿಬಿಡಲು ಹೊರಟಿದ್ದರು. ಆದರೆ ಈಗ ಅವರ ಎಲ್ಲಾ ಸುಳ್ಳು ಆರೋಪಗಳ ಆಚೆಗೆ ಇರುವ ಸತ್ಯಗಳು ಜಗತ್ತಿಗೆ ತಲುಪಿವೆ. ನನಗೆ ಈಗ ಬರುತ್ತಿರುವ ಕರೆಗಳು ದೂರದ ಅಮೆರಿಕಾ, ದುಬೈ, ಲಂಡನ್ ಸೇರಿದಂತೆ ದೇಶದ ಎಲ್ಲೆಡೆಯಿಂದ ಬರುತ್ತಿವೆ. ನನ್ನಲ್ಲಿ ಭವಿಷ್ಯದ ಭರವಸೆಯನ್ನು ಅದೇ ಹುಟ್ಟುಹಾಕಿದೆ.

ಸಮಾಚಾರ: ಉತ್ತರ ಪ್ರದೇಶದ ಆರೋಗ್ಯ ವ್ಯವಸ್ಥೆ ಅಷ್ಟು ಅವ್ಯವಸ್ಥೆಯಿಂದ ಕೂಡಿದೆಯಾ? ಸ್ವತಃ ವೈದ್ಯರಾಗಿ ಹೇಗೆ ವಿವರಿಸುತ್ತೀರಿ?

ಕಫೀಲ್: ನೀವು ಬೆಂಗಳೂರಿನಲ್ಲಿ ಇರುವವರು. ಒಂದು ಕಿ. ಮೀ ಸುತ್ತಳತೆಯಲ್ಲಿ ನಿಮಗೆ ಮೆಡಿಕಲ್ ಕಾಲೇಜುಗಳು, ಫೈವ್‌ಸ್ಟಾರ್ ಆಸ್ಪತ್ರೆಗಳು, ಸರಕಾರಿ ಚಿಕಿತ್ಸಾಲಯಗಳು ಸಿಗುತ್ತವೆ. ಆದರೆ ಉತ್ತರ ಭಾರತದ ಪರಿಸ್ಥಿತಿ ಹಾಗಿಲ್ಲ.

ನಮ್ಮ ಬಿಆರ್‌ಡಿ ಮೆಡಿಕಲ್ ಕಾಲೇಜಿಗೆ ಪ್ರತಿ ವರ್ಷ ಉತ್ತರ ಪ್ರದೇಶ, ಬಿಹಾರ ಹಾಗೂ ನೇಪಾಳದಿಂದ ಕನಿಷ್ಟ 2 ಕೋಟಿ ಜನ ಆರೋಗ್ಯ ಸೇವೆಯನ್ನು ಹುಡುಕಿಕೊಂಡು ಬರುತ್ತಾರೆ. ಇಷ್ಟು ದೊಡ್ಡ ಭೂ ಪ್ರದೇಶದಲ್ಲಿ ಇರುವುದು ಇದೊಂದೇ ಮೆಡಿಕಲ್ ಕಾಲೇಜು. ಹೀಗಿರುವಾಗ ಇಲ್ಲಿನ ಆರೋಗ್ಯ ಸೇವೆಯ ಸ್ಥಿತಿ ಹೇಗಿದೆ ಎಂಬುದನ್ನು ನೀವೇ ಊಹಿಸಿಕೊಳ್ಳಿ.

ಸಮಾಚಾರ: ನಿಮ್ಮ ಅಗತ್ಯ ಸರಕಾರಕ್ಕೆ ಇಲ್ಲದಿರಬಹುದು. ಆದರೆ ಜನರಿಗೆ ಇದೆ ಅಂತ ಅನ್ಸುತ್ತೆ. ಮುಂದೆ ಮತ್ತೆ ಪ್ರಾಕ್ಟೀಸ್‌ಗೆ ಇಳಿಯುವ ಆಲೋಚನೆ ಇದೆಯಾ?

ಕಫೀಲ್: ಖಂಡಿತಾ ಇದೆ. ಘಟನೆ ನಂತರ ನನ್ನನ್ನು ಅಮಾನತ್ತು ಮಾಡಲಾಗಿದೆ. ಅದಿನ್ನೂ ತೆರವುಗೊಂಡಿಲ್ಲ. ನಾನು ಜೈಲಿಂದ ಹೊರಗೆ ಬಂದ ಮೇಲೆ ಮೆಡಿಕಲ್ ಕಾಲೇಜಿನಿಂದ ಯಾವ ಕರೆಯೂ ಬಂದಿಲ್ಲ. ಒಂದು ವೇಳೆ ಮರಳಿ ಕೆಲಸಕ್ಕೆ ಕರೆದರೆ ಹೋಗಿ ರೋಗಿಗಳ ಸೇವೆ ಮಾಡುತ್ತೇನೆ.

ಈಗಾಗಲೇ ಸ್ನೇಹಿತರು ಕೆಲವು ಸರಕಾರೇತರ ಸಂಸ್ಥೆಗಳ ಜತೆ ಸೇರಿ 500 ಬೆಡ್‌ ಆಸ್ಪತ್ರೆಯೊಂದನ್ನು ಕಟ್ಟುವ ಆಲೋಚನೆಯೂ ಇದೆ. ಇಲ್ಲಿನ ಜನರಿಗೆ ರಾಜಕೀಯದ ಆಚೆಗೂ ಆರೋಗ್ಯದ ಸೇವೆಯ ಅಗತ್ಯ ಇದೆ. ಅದನ್ನು ನನ್ನ ಕೈಲಾದ ಮಟ್ಟಿಗೆ ನೀಡಲು ನಾನು ಮನಸ್ಸು ಮಾಡಿದ್ದೇನೆ.

ಇಲ್ಲಿ ಪರಿಸ್ಥಿತಿ ಬದಲಾಗುತ್ತಿದೆ. ಕಳೆದ 30 ವರ್ಷಗಳಿಂದ ಗೋರಖ್‌ಪುರ ಯೋಗಿ ಕೈಲಿತ್ತು. ಆದರೆ ಇದೇ ಮೊದಲ ಬಾರಿಗೆ ಉಪಚುನಾವಣೆಯಲ್ಲಿ ಇಲ್ಲಿನ ಸೀಟನ್ನು ಕಳೆದುಕೊಂಡಿದ್ದಾರೆ. ಜನರಿಗೂ ನಿಧಾನವಾಗಿ ಅರ್ಥವಾಗುತ್ತಿದೆ. ಖಂಡಿತಾ ಬದಲಾವಣೆ ಬಂದೇ ಬರುತ್ತದೆ. ಅದಕ್ಕಾಗಿ ನಮ್ಮಂತವರು ಕಷ್ಟ ಅನುಭವಿಸಬೇಕಾಗಿ ಬಂದರೂ ಸಮಸ್ಯೆ ಇಲ್ಲ. ಅಂತಿಮವಾಗಿ ಜನರಿಗೆ ಒಳಿತಾಗಬೇಕು, ಅಷ್ಟೆ.