ಚುನಾವಣಾ ಪ್ರಣಾಳಿಕೆಗಳು: ಪ್ರಮುಖ ಮೂರು ಪಕ್ಷಗಳಲ್ಲಿ ಯಾವುದು ಹಿತ?
COVER STORY

ಚುನಾವಣಾ ಪ್ರಣಾಳಿಕೆಗಳು: ಪ್ರಮುಖ ಮೂರು ಪಕ್ಷಗಳಲ್ಲಿ ಯಾವುದು ಹಿತ?

‘ಸಮಾಚಾರ’ ಮೂರು ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪ್ರಣಾಳಿಕೆಗಳಲ್ಲಿನ ಹೂರಣವನ್ನು ಸಮಗ್ರವಾಗಿ ನಿಮಗಿಲ್ಲಿ ಕಟ್ಟಿಕೊಡಲಿದೆ.

ಪ್ರಣಾಳಿಕೆ ಎಂದರೆ ಭವಿಷ್ಯದ ಮುನ್ನೋಟಗಳು. ಚುನಾವಣೆ ವೇಳೆಯಲ್ಲಿ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದರೆ ತಾವೇನು ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಂಬುದನ್ನು ಅಧಿಕೃತವಾಗಿ ಜನರ ಮುಂದಿಡುವ ಹೊಸ್ತಿಕೆಗಳು ಇವು. ರಾಜ್ಯ ವಿಧಾನಸಭೆ ಮತ ಚಲಾವಣೆಗೆ ಇನ್ನು ಮೂರು ದಿನ ಬಾಕಿ ಇದೆ. ಪ್ರಮುಖ ಮೂರು ಪಕ್ಷಗಳ ಪ್ರಣಾಳಿಕೆಗಳೂ ಸೇರಿದಂತೆ, ಹಲವು ಸಣ್ಣ ಪುಟ್ಟ ಪಕ್ಷಗಳ ಪ್ರಣಾಳಿಕೆಗಳು ಜನರ ಮುಂದಿವೆ.

ಜನ ಪ್ರಣಾಳಿಕೆಗಳನ್ನು ನೋಡಿಯೇ ಮತ ಚಲಾವಣೆ ಮಾಡುತ್ತಾರೆ ಎಂದರೆ ಉತ್ಪ್ರೇಕ್ಷೆಯಾಗುತ್ತದೆ. ಆದರೆ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದರೆ ಅವರು ನಡೆಸುವ ಆಡಳಿತ ಹೇಗಿರಲಿದೆ ಎಂಬುದನ್ನು ಈ ಪ್ರಣಾಳಿಕೆಗಳು ದಿಕ್ಸೂಚಿಯಂತೆ ತೋರುತ್ತವೆ.

ಈ ಹಿನ್ನೆಲೆಯಲ್ಲಿ ‘ಸಮಾಚಾರ’ ಮೂರು ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ ಪ್ರಣಾಳಿಕೆಗಳಲ್ಲಿನ ಹೋರಣವನ್ನು ಸಮಗ್ರವಾಗಿ ನಿಮಗಿಲ್ಲಿ ಕಟ್ಟಿಕೊಡಲಿದೆ.

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ವಾದ ಹಿಂದೆಯೇ ಬಿಡುಗಡೆಯಾದರೆ, ಉಳಿದ ಎರಡು ಪಕ್ಷಗಳ ಪ್ರಣಾಳಿಕೆಗಳು ಎರಡು ಮೂರು ದಿನಗಳ ಅಂತರದಲ್ಲಿ ಬಿಡುಗಡೆಯಾದವು.

ಪ್ರಣಾಳಿಕೆಗಳನ್ನು ಕೇಂದ್ರೀಕರಿಸಿ ಚುನಾವಣಾ ಪ್ರಚಾರ ಮಾಡುವ ಪರಿಪಾಠ ಎಂದೋ ಕಾಣೆಯಾಗಿದ್ದರೂ ಪ್ರತಿಚುನಾವಣೆಯ ಸಂದರ್ಭಗಳಲ್ಲೂ ಪ್ರಣಾಳಿಕೆ ಬಿಡುಗಡೆ ಮಾಡುವ ಪರಿಪಾಠವನ್ನು ರಾಜಕೀಯ ಪಕ್ಷಗಳು ಈಗಲೂ ಉಳಿಸಿಕೊಂಡಿವೆ. ತಮ್ಮ ಪ್ರಣಾಳಿಕೆಗಳಿಗೆ ಎಷ್ಟು ಪ್ರಾಮುಖ್ಯತೆ ನೀಡುತ್ತವೆ ಎನ್ನುವುದು ಅವರುಗಳು ಚುನಾವಣಾ ದಿನಾಂಕದ ಹೊಸ್ತಿಲಲ್ಲಿ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿದಾಗಲೇ ಅರ್ಥವಾಗುವಂತ ಸಂಗತಿ.

ಅಧಿಕಾರಕ್ಕೆ ಬಂದಾಗ ಹಿಂದೆ ಬಿಡುಗಡೆ ಮಾಡಿದ್ದ ಪ್ರಣಾಳಿಕೆಗಳಲ್ಲಿನ ಕಾರ್ಯಕ್ರಮಗಳನ್ನು ಎಷ್ಟು ಮಟ್ಟದಲ್ಲಿ ಕಾರ್ಯರೂಪಕ್ಕೆ ಇಳಿಸಲಾಗಿದೆ ಎನ್ನುವ ಬಗ್ಗೆ ಯಾವ ಅವಲೋಕನವೂ ಈ ಪಕ್ಷಗಳ ದಾಖಲೆಗಳಲ್ಲಿ ಇರದಿರುವುದೇ ವಾಡಿಕೆ. ಅದರಂತೆ ಕಾಂಗ್ರೆಸ್ ಬಿಡುಗಡೆ ಮಾಡಿದ ತನ್ನ ಪ್ರಣಾಳಿಕೆಯಲ್ಲಿ ಕಳೆದ ಅವಧಿಯಲ್ಲಿ 53.17 ಲಕ್ಷದಷ್ಟು ಉದ್ಯೋಗ ಸೃಷ್ಟಿ ಮಾಡಿದ್ದೇವೆ, 2016-2017 ನೇ ಸಾಲಿನಲ್ಲಿ 169,774 ಮನೆಗಳನ್ನು ನಿರ್ಮಿಸಿದ್ದೇವೆ ಎನ್ನುವ ವಿಷಯ ಬಿಟ್ಟರೆ ಹಿಂದಿನ ಪ್ರಣಾಳಿಕೆಯನ್ನು ಎಷ್ಟರ ಮಟ್ಟದಲ್ಲಿ ಅನುಷ್ಠಾನ ಮಾಡಲಾಗಿದೆ ಎಂಬ ಬಗ್ಗೆ ಯಾವ ಪ್ರಸ್ತಾಪವೂ ಇಲ್ಲ.

ಏಪ್ರಿಲ್ 28ರಂದು ಬೆಂಗಳೂರು ಜ್ಞಾನಜ್ಯೋತಿ ಸಭಾಂಗಣದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್ ನಾಯಕರು. 
ಏಪ್ರಿಲ್ 28ರಂದು ಬೆಂಗಳೂರು ಜ್ಞಾನಜ್ಯೋತಿ ಸಭಾಂಗಣದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್ ನಾಯಕರು. 

ಈ ಬಾರಿಯ ಕಾಂಗ್ರೆಸ್‌ ಪ್ರಣಾಳಿಕೆ ಹಿಂದಿನಂತಲ್ಲದೆ ಕೆಲವು ವಿಶೇಷತೆಗಳನ್ನು ಹೊಂದಿದೆ. ಅದು ರಾಜ್ಯದ ಬೆಳಗಾವಿ ಕರ್ನಾಟಕ, ಕಲ್ಬುರ್ಗಿ ಕರ್ನಾಟಕ, ಹಳೇ ಮೈಸೂರು ಹೀಗೆ ಪ್ರದೇಶವಾರು ಮತ್ತು ಜಿಲ್ಲಾವಾರು ಸಮಸ್ಯೆಗಳು ಹಾಗೂ ಅವಶ್ಯಕತೆಗಳ ಮೇಲೆ ನಿರ್ದಿಷ್ಟೀಕರಿಸಿ ತನ್ನ ಪ್ರಣಾಳಿಕೆಯನ್ನು ಸಿದ್ದಪಡಿಸಿದೆ. ಇಂತಹ ಅಭ್ಯಾಸ ಕಾಂಗ್ರೆಸ್ ಸೇರಿದಂತೆ ಬಹುತೇಕ ರಾಜಕೀಯ ಪಕ್ಷಗಳಿಗೆ ಹಿಂದೆ ಇರಲಿಲ್ಲ. ಸಾಮಾನ್ಯವಾಗಿ ಚರ್ವಿತ ಚರ್ವಣ ಮೇಲ್ಮಟ್ಟದ ಘೋಷಣೆಗಳ ರೀತಿಯಲ್ಲೇ ಎಲ್ಲಾ ಪಕ್ಷಗಳ ಪ್ರಣಾಳಿಕೆಗಳು ಇರುತ್ತಿದ್ದವು. ಕಾಂಗ್ರೆಸ್‌ ಪ್ರಣಾಳಿಕೆ ಹಾಗಾಗಿ ಸ್ವಲ್ಪ ವಿಸ್ತೃತವಾಗಿ ಹಾಗೂ ವಿವರವಾಗಿ ಕರ್ನಾಟಕದ ಸಮಸ್ಯೆಗಳನ್ನು ನೋಡಿದೆ ಎನ್ನಬಹುದು.

ಆದರೆ ಕಾಂಗ್ರೆಸ್ ನ ಪ್ರಣಾಳಿಕೆ ಎಲ್ಲೂ ಮೂಲಭೂತ ಸಮಸ್ಯೆಗಳಾದ ಭೂಮಿ ಪ್ರಶ್ನೆ, ನಿರ್ವಸಿತರ ಪ್ರಶ್ನೆ, ಕೋಮು ದೌರ್ಜನ್ಯ, ಜಾತಿದೌರ್ಜನ್ಯ, ಮಹಿಳಾ ದೌರ್ಜನ್ಯ ಮೊದಲಾದ ಗಂಭೀರ ಸಮಸ್ಯೆಗಳನ್ನು ಕಡೆ ಕಣ್ಣೆತ್ತಿಯೂ ನೋಡುವುದಿಲ್ಲ. ಆದಿವಾಸಿಗಳ ಬಗ್ಗೆ ಹೇಳುತ್ತದಾದರೂ ಅವರು ವಾಸ ಮಾಡುತ್ತಿರುವ ಭೂಮಿಗೆ ಹಕ್ಕು ಪತ್ರ ನೀಡುವ ವಿಚಾರದ ಪ್ರಸ್ತಾಪವನ್ನೇ ಮಾಡುವುದಿಲ್ಲ.

ಅಷ್ಟೇ ಅಲ್ಲದೆ ಲಕ್ಷಾಂತರ ಜನರ ಸಮಸ್ಯೆಯಾಗಿರುವ ಬಗರ್ ಹುಕುಂ ಭೂಮಿಗೆ ಹಕ್ಕುಪತ್ರ ನೀಡುವ ಬಗ್ಗೆ ಯಾವುದೇ ಪ್ರಸ್ತಾವನೆಯಿಲ್ಲ. ಹಿಂದೆ ಆ ಬಗ್ಗೆ ಒಂದಷ್ಟು ಶೂರತ್ವದ ಮಾತುಗಳು ಕೇಳಿಬಂದಿದ್ದು ಬಿಟ್ಟರೆ ಮೂಲಭೂತವಾಗಿ ಆ ಸಮಸ್ಯೆ ಇನ್ನೂ ಜೀವಂತವಾಗಿದೆ. ಭೂಮಿ ಮತ್ತು ವಸತಿ ಬಗ್ಗೆ ಕಾನೂನು ತಿದ್ದುಪಡಿ ಆಗಿದೆ. ಹಾಗಾಗಿ ಆ ಸಮಸ್ಯೆ ಬಗೆಹರಿದಂತೆಯೇ ಎಂಬ ಪ್ರಚಾರ ಮಾತ್ರ ಜೋರಾಗೇ ನಡೆಯಿತು. ನಮ್ಮ ದೇಶದಲ್ಲಿ ಕೇವಲ ಕಾನೂನು ಮೂಲಕವೇ ಸಮಸ್ಯೆ ಬಗೆಹರಿಯುವುದಾಗಿದ್ದರೆ ಎಷ್ಟೋ ಸಮಸ್ಯೆಗಳು ಬಗೆಹರಿದು ಬಿಡುತ್ತಿದ್ದವು. ಆ ರೀತಿ ಆಗುತ್ತಿಲ್ಲ ಎನ್ನುವುದೇ ವಾಸ್ತವ.

ಹಿಂದೆ ಭ್ರಷ್ಟಾಚಾರದ ಬಗ್ಗೆ ಬಹಳ ಸಾರ್ವಜನಿಕ ಚರ್ಚೆಗಳು ನಡೆದು ಹೋರಾಟಗಳು ನಡೆದಿದ್ದವು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವಲ್ಲಿ ಅವರು ಗಣಿರೆಡ್ಡಿಗಳ ಕೊಳ್ಳೆ ಹಾಗೂ ಭ್ರಷ್ಟಾಚಾರಗಳ ವಿರುದ್ದ ನಡೆಸಿದ ಪಾದಯಾತ್ರೆ ಕೂಡ ಗಣನೀಯ ಕೊಡುಗೆ ನೀಡಿದ್ದು ಸುಳ್ಳಲ್ಲ. ಆದರೆ ಅಧಿಕಾರಕ್ಕೆ ಬಂದ ಮೇಲೆ ಅವರು ಭ್ರಷ್ಟಾಚಾರ ನಿಯಂತ್ರಣದಲ್ಲಿ ದೇಶದ ಗಮನವನ್ನೇ ಸೆಳೆದಿದ್ದ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಅವನತಿಗೆ ಮುಖ್ಯ ಕಾರಣರಾಗಿದ್ದು ಈಗ ಇತಿಹಾಸ. ಆ ಬಗ್ಗೆ ಭ್ರಷ್ಟಾಚಾರ ವಿರೋಧಿ ಹೋರಾಟಗಾರರು ಈಗ ಮಾತನಾಡದಿರುವುದು ಕೂಡ ಆಶ್ಚರ್ಯ. ಅದಕ್ಕೆ ತಕ್ಕಂತೆ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ಪ್ರಸ್ತಾಪವೇ ಇಲ್ಲ

ಚಿತ್ರದುರ್ಗದಲ್ಲಿ ಸೇನಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯು ಪರಮಾಣು ಸಂಬಂಧಿತ ಚಟುವಟಿಕೆ ನಡೆಸುವ ಉದ್ದೇಶದಿಂದ ರೈತರ ಜಮೀನುಗಳನ್ನು ವಶಪಡಿಸಿಕೊಳ್ಳುತ್ತಿರುವ ವಿಚಾರ ವಿವಾದವೆಬ್ಬಿಸಿದ್ದರೂ ಅದರ ಬಗ್ಗೆ ಕಾಂಗ್ರೆಸ್ ಪ್ರಣಾಳಿಕೆ ಚಕಾರವೆತ್ತಿಲ್ಲ. ಬದಲಿಗೆ ಆ ಸಂಶೋಧನಾ ಕೇಂದ್ರಕ್ಕೆ ಪೂರಕವಾಗಿ ಕೈಗಾರಿಕೆಗಳನ್ನು ಸ್ಥಾಪಿಸಲು ಉತ್ತೇಜನ ನೀಡುವ ಕುರಿತು ಪ್ರಣಾಳಿಕೆಯಲ್ಲಿ ಹೇಳಿದೆ.

ಇನ್ನುಳಿದಂತೆ ಹಲವು ವಿಚಾರಗಳು ಜನರಿಗೆ ಆಕರ್ಷಿಸಿ ಮನವರಿಕೆ ಮಾಡುವಂತೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಸಿದ್ದಪಡಿಸಿದೆ. ನೀರಾವರಿ, ಸಣ್ಣ ಮತ್ತು ಮದ್ಯಮ ಕೈಗಾರಿಕಾಭಿವೃಧ್ಧಿ, ಕೃಷಿ ಮಾರುಕಟ್ಟೆಗಳ ಸ್ಥಾಪನೆ, ಕೃಷಿ ಉತ್ಪನ್ನಗಳ ಸಂಗ್ರಹಾಗಾರಗಳ ಸ್ಥಾಪನೆ, ಉದ್ಯೋಗಾವಕಾಶಗಳ ನಿರ್ಮಾಣ ಹೀಗೆ ಪಟ್ಟಿ ಸಾಗುತ್ತದೆ. ಜೊತೆಗೆ ಮಾಹಿತಿ ತಂತ್ರಜ್ಞಾನ ಕೇಂದ್ರಗಳನ್ನಾಗಿ ಮಂಗಳೂರು ಮೈಸೂರು ಹುಬ್ಬಳ್ಳಿಗಳನ್ನು ಅಭಿವೃಧ್ಧಿಪಡಿಸುವ ಪ್ರಸ್ತಾವನೆ ಮಾಡಿದೆ. ಇವುಗಳು ಹಲವು ಹಳೆಯ ಪ್ರಣಾಳಿಕೆಯಲ್ಲೂ ಇದ್ದವು.

ರಾಜ್ಯದಲ್ಲಿ ಜಿಲ್ಲಾವಾರು ಪ್ರವಾಸೋದ್ಯಮ ಅಭಿವೃಧ್ದಿಯಂತಹ ಹಳೇ ಪ್ರಸ್ತಾವನೆಗಳು ಈ ಪ್ರಣಾಳಿಕೆಯಲ್ಲೂ ಸ್ಥಾನ ಪಡೆದುಕೊಂಡಿವೆ. ಸರ್ಕಾರಿ ಶಾಲೆಗಳಿಗೆ ಶಿಕ್ಷಕರನ್ನು ನೇಮಕ ಮಾಡುವ ಬಗ್ಗೆ ಹೇಳುವ ಪ್ರಣಾಳಿಕೆ ಹೊಸ ಸರ್ಕಾರಿ ಶಾಲೆಗಳನ್ನು ತೆರೆಯುವ ಬಗ್ಗೆಯಾಗಲೀ, ಇರುವ ಸರ್ಕಾರಿ ಶಾಲೆಗಳನ್ನು ಅಭಿವೃಧ್ದಿ ಪಡಿಸುವ, ರಾಜ್ಯ ಭಾಷೆ ಕನ್ನಡವನ್ನು ಶಿಕ್ಷಣದ ಎಲ್ಲಾ ಪ್ರಾಕಾರಗಳ ಭಾಷೆಯನ್ನಾಗಿ ಮಾಡುವ ಬಗ್ಗೆ ಸೊಲ್ಲನ್ನೇ ಎತ್ತುವುದಿಲ್ಲ.

ಕನ್ನಡ ನುಡಿ ತಂತ್ರಜ್ಞಾನವನ್ನು ಅಭಿವೃಧ್ದಿಪಡಿಸುವ ಮಾತೇ ಇಲ್ಲ. ಅದೇ ರೀತಿ ಇತರ ರಾಜ್ಯ ಭಾಷೆಗಳಾದ ತುಳು, ಕೊಂಕಣಿ, ಕೊಡವ ಭಾಷೆಗಳ ಕುರಿತು ಏನನ್ನೂ ಹೇಳುವುದಿಲ್ಲ. ಆದರೆ ಅದೇ ವೇಳೆಯಲ್ಲಿ ಇಂಗ್ಲೀಷನ್ನು ಕಲಿಸುವ ಅದಕ್ಕೆ ಶಿಕ್ಷಕರನ್ನು ನೇಮಿಸುವ ಬಗ್ಗೆ ಪ್ರಣಾಳಿಕೆಯಲ್ಲಿ ಪ್ರಸ್ತಾವನೆಯಿದೆ. ಹಲವು ಭರವಸೆಗಳು ಹಲವು ಜಿಲ್ಲಾವಾರು ಭರವಸೆಗಳಲ್ಲಿ ಪುನರಾರ್ತನೆಗೊಳ್ಳುತ್ತವೆ.

ಕೃಷಿ ವಿಚಾರದಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಕಾಂಗ್ರೆಸ್ ಪ್ರಣಾಳಿಕೆ ಕುಲಾಂತರಿ ತಳಿಗಳ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಹೇಳಿದೆ. ಇದು ಅಪಾಯಕಾರಿ ನಡೆ. ಕೃಷಿ ವಿಚಾರದಲ್ಲಿ ರೈತರ ಮೂಲಭೂತ ಸಮಸ್ಯೆಗಳನ್ನು ಕಳೆದ ಐದು ವರ್ಷಗಳಲ್ಲಿ ಅರ್ಥಮಾಡಿಕೊಳ್ಳಲು ಕಾಂಗ್ರೆಸ್ ಸೋತಿದೆ. ರೈತ ನಾಯಕ, ತಮ್ಮ ಗುರು ಎಂದು ಸ್ವತಃ ಸಿದ್ದರಾಮಯ್ಯ ಹೇಳಿಕೊಂಡ ನಂಜುಂಡಸ್ವಾಮಿ ಅವರನ್ನು ನೆನಪಿಸಿಕೊಳ್ಳುವ ಕೆಲಸ ಆಗಿದೆ. ಆದರೆ ನಂಜುಂಡಸ್ವಾಮಿ ಅವರ ಆಶಯಗಳಿಗೆ ವಿರುದ್ಧವಾಗಿ ಕುಲಾಂತರಿ ತಳಿಗಳಿಗೆ ಉತ್ತೇಜನ ನೀಡಲಾಗುತ್ತದೆ ಎಂಬ ಅಂಶ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇರುವುದು ಗಮನಾರ್ಹ ಸಂಗತಿ.

ಬಿಜೆಪಿ ಚುನಾವಣಾ ಪ್ರಣಾಳಿಕೆಯ ಜತೆ ನಾಯಕರು. 
ಬಿಜೆಪಿ ಚುನಾವಣಾ ಪ್ರಣಾಳಿಕೆಯ ಜತೆ ನಾಯಕರು. 

ಇನ್ನು ಬಿಜೆಪಿ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಮೇಲ್ಮಟ್ಟದಲ್ಲಿ ಸಮಸ್ಯೆಗಳನ್ನು ನೋಡಿದಂತೆ ಮಾಡಿ ತೇಲಿಸಿಕೊಂಡು ಹೋಗಲಾಗಿದೆ. ಅದರಲ್ಲಿ ಆಲಿಪುರ್ (ದೆಹಲಿ), ದಾದರ್, ಲಂಡನ್ ಮೊದಲಾದ ಕಡೆಗೆ ‘ಡಾ ಭೀಮ್ ರಾವ್ ರಾಮ್ ಜಿ ಅಂಬೇಡ್ಕರ್ ತೀರ್ಥಯಾತ್ರೆ’ ನಿಧಿಗೆ ಹಣ ಮೀಸಲಿಡಲಾಗುವುದು ಎಂದು ಭರವಸೆ ನೀಡಿದೆ. ಆ ಮೂಲಕ ಅಂಬೇಡ್ಕರ್ ಇದ್ದು ಓಡಾಡಿದ ಸ್ಥಳಗಳನ್ನು ತೀರ್ಥಯಾತ್ರಾ ಸ್ಥಳಗಳನ್ನಾಗಿ ಮಾಡಿ ಅಂಬೇಡ್ಕರ್ ದೈವೀಕರಿಸುವ ಕಾರ್ಯವನ್ನು ಅಧಿಕೃತವಾಗಿ ಮಾಡಲು ಹೊರಟಿದೆ.

ಜೊತೆಗೆ ಭ್ರಷ್ಟಾಚಾರದ ಬಗ್ಗೆ ಹೇಳುತ್ತಾ, ಅಧಿಕಾರಕ್ಕೆ ಬಂದಲ್ಲಿ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯಾದ ಲೋಕಾಯುಕ್ತವನ್ನು ಮೊದಲಿನ ಅಧಿಕಾರದೊಂದಿಗೆ ತನ್ನ ಮೊದಲ ಸಂಪುಟ ಸಭಯಲ್ಲೇ ಪುನರ್ ಸ್ಥಾಪಿಸುವುದಾಗಿ ಹೇಳಿದೆ. ಮುಂದುವರೆದು ಭ್ರಷ್ಟಾಚಾರ ಬಹಿರಂಗಪಡಿಸುವವರನ್ನು ರಕ್ಷಿಸಲು ‘ವಿಷಲ್ ಬ್ಲೋವರ್’ ಕಾಯಿದೆಯನ್ನು ಜಾರಿಗೆ ತರುವುದಾಗಿ ಹೇಳಿಕೊಂಡಿದೆ.

ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಕೋಮುವಾದಿ ಛಾಪನ್ನು ಒತ್ತಿಹೇಳಿದೆ. ಮಠ ಮಂದಿರಗಳಿಗೆ ಉದಾರ ದೇಣಿಗೆಯನ್ನು ಪ್ರಸ್ತಾಪಿಸಲಾಗಿದೆ. ಜೊತೆಗೆ ಕಾಂಗ್ರೆಸ್ ಸರ್ಕಾರದ ಇಂದಿರಾ ಕ್ಯಾಂಟೀನ್ ರೀತಿಯ ಅನ್ನಪೂರ್ಣ ಕ್ಯಾಂಟೀನ್ ಯೋಜನೆಗಳಂತಹವುಗಳನ್ನೂ ಮುಂದಿಟ್ಟಿದೆ. ಕಾಂಗ್ರೆಸ್ಸಿನ ಭಾಗ್ಯಗಳ ಪ್ರಭಾವ ಅವುಗಳನ್ನು ಬಲವಾಗಿ ಟೀಕಿಸುತ್ತಾ ಬಂದ ಬಿಜೆಪಿ ಮೇಲೂ ಸಾಕಷ್ಟು ಪ್ರಮಾಣದಲ್ಲಿ ಆಗಿದೆ ಎನ್ನುವುದು ವಾಸ್ತವ.

ಜೆಡಿಎಸ್ ಪ್ರಣಾಳಿಕೆ ಮುಖಪುಟ ಹೀಗಿದೆ. 
ಜೆಡಿಎಸ್ ಪ್ರಣಾಳಿಕೆ ಮುಖಪುಟ ಹೀಗಿದೆ. 

ಇನ್ನು ಜೆಡಿಎಸ್ ಪ್ರಣಾಳಿಕೆ ಕೂಡ ಮೇಲ್ಮಟ್ಟದ ಹಳೆಯ ಶೈಲಿಯ ಜಾಳು ಜಾಳಾದ ಭರವಸೆಗಳನ್ನೇ ನೀಡಿದೆ. ಕೆಲವು ಕೊಡುಗೆಗಳನ್ನು ಹೇಳಿದೆ. ಯಾವುದೇ ನಿರ್ದಿಷ್ಟತೆ ಇಲ್ಲದ ಮತ್ತೊಂದು ಪ್ರಣಾಳಿಕೆ ಇದಾಗಿದೆ. ಇದು ಕೂಡ ಚರ್ವಿತ ಚರ್ವಣದ ರೋಗದಿಂದ ಹೊರಬಂದಿಲ್ಲ.

ವಿಶೇಷವಾಗಿ ಇದು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾ ಲೋಕಾಯುಕ್ತ ಸಂಸ್ಥೆಯನ್ನು ಹೆಚ್ಚಿನ ಅಧಿಕಾರದೊಂದಿಗೆ ಪುನರ್ ಸ್ಥಾಪಿಸಿ ಈಗಿರುವ ಎಸಿಬಿಯನ್ನು ರದ್ದುಗೊಳಿಸುವುದಾಗಿ ಹೇಳಿಕೊಂಡಿದೆ. ಇದುವರೆಗೂ ಯಾವುದೇ ಪ್ರಣಾಳಿಕೆಗಳಲ್ಲಿ ಬಾರದೇ ಇದ್ದ ವಿಚಾರವೊಂದನ್ನು ಈ ಪ್ರಣಾಳಿಕೆ ಹೇಳಿದೆ.

ಅದೇನೆಂದರೆ ಸಾಕ್ಷಾಧಾರವಿಲ್ಲದೇ ಸುಳ್ಳು ಕೇಸುಗಳಲ್ಲಿ ಜನರನ್ನು ಸಿಕ್ಕಿಸುವ ಪೊಲೀಸರ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಹೇಳಿದೆ. ನೀರಾವರಿ ಯೋಜನೆಗಳಿಗಾಗಿ 1,50,000 ಲಕ್ಷ ಕೋಟಿ ಹಣ ಹೂಡುವುದಾಗಿ ಹೇಳಿದೆಯಾದರೂ ಎಲ್ಲಿಂದ ಇಷ್ಟೊಂದು ಹಣವನ್ನು ಹೊಂದಿಸಲಾಗುತ್ತದೆ ಎಂಬ ಬಗ್ಗೆ ಯಾವ ವಿವರವೂ ಇಲ್ಲ. ಒಟ್ಟು 50,000 ಕೋಟಿಯಷ್ಟಿರುವ ರೈತರ ಸಾಲ ಮನ್ನಾ ಮಾಡುವ ಬಗ್ಗೆಯೂ ಹೇಳಿದೆ. ಅಲ್ಲೂ ಸಂಪನ್ಮೂಲ ಕ್ರೋಢಿಕರಣ ಹೇಗೆ ಎಂಬ ಬಗ್ಗೆ ಏನನ್ನೂ ಹೇಳುವುದಿಲ್ಲ.

ಕಾಂಗ್ರೆಸ್, ಬಿಜೆಪಿ ಪ್ರಣಾಳಿಕೆಗಿಂತ ಜೆಡಿಎಸ್ ಪ್ರಣಾಳಿಕೆಯಲ್ಲಿರುವ ಒಂದು ಭಿನ್ನವಾಗಿರುವ ಅಂಶವೇನೆಂದರೆ ಅತಿ ಹೆಚ್ಚು ಮಾರುಕಟ್ಟೆಗೆ ಬರುತ್ತಿರುವ ಚೀನಾದ ಉತ್ಪನ್ನಗಳಿಗೆ ಸೆಡ್ಡುಹೊಡೆಯಲು ಸ್ಥಳೀಯವಾಗಿ ಉತ್ಪಾದನೆ ಮಾಡುವ ಯೋಜನೆಯೊಂದನ್ನು ಅದು ಮುಂದಿಟ್ಟಿದೆ. ಜೊತೆಗೆ ಚಾಮರಾಜನಗರ ಜಿಲ್ಲೆಯನ್ನು ‘ಮೆಡಿಕಲ್ ಎಲೆಕ್ಟ್ರಾನಿಕ್ಸ್’ ಜಿಲ್ಲೆಯನ್ನಾಗಿ ಮಾಡುವ ಬಗ್ಗೆ ಹೇಳಿಕೊಂಡಿದೆ. ಅದು ಏನು ಎಂಬ ಬಗ್ಗೆ ಯಾವ ವಿವರವೂ ಅದರಲ್ಲಿಲ್ಲ.

ಇನ್ನೊಂದು ಅಪಾಯಕಾರಿ ಯೋಜನೆಯೊಂದನ್ನು ಜೆಡಿಎಸ್ ಹೇಳಿದೆ. ಅದು ಮತ ಹಾಕುವ ಮಹಿಳೆಯರಿಗೆ 200 ರೂಪಾಯಿಗಳನ್ನು ‘ಪ್ರಜಾಪ್ರಭುತ್ವ ಪ್ರೋತ್ಸಾಹ ಧನ’ ವನ್ನಾಗಿ ನೀಡುವ ಯೋಜನೆ ಮುಂದಿಟ್ಟಿದೆ. ಒಂದು ಮತಕ್ಕೆ ಅಭ್ಯರ್ಥಿಗಳು ಸಾವಿರಾರು ರೂಪಾಯಿ ನೀಡುತ್ತಿರುವ ಇಂದಿನ ಸಂಧರ್ಭದಲ್ಲಿ ಈ ಯೋಜನೆ ಪ್ರಜಾಪ್ರಭುತ್ವದ ಆತ್ಮಹತ್ಯೆಗೆ ಪ್ರೋತ್ಸಾಹ ನೀಡಿದಂತಿದೆ. ಇನ್ನು ಸೇವಾ ಹಕ್ಕು ಕಾಯ್ದೆ, ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ನಾಗರಿಕರನ್ನೊಳಗೊಂಡ ಮಂಡಳಿ ರಚನೆಯ ಯೋಜನೆಯಂತಹ ಭಿನ್ನವಾದ ವಿಚಾರಗಳನ್ನು ಜೆಡಿಎಸ್ ಮುಂದಿಟ್ಟಿದೆ.

ಆದರೆ ಸರ್ವೋಚ್ಚ ನ್ಯಾಯಾಲಯ ಹಲವಾರು ಬಾರಿ ಒತ್ತಿಹೇಳಿದ್ದ ಪೋಲೀಸ್ ವ್ಯವಸ್ಥೆಯ ಸುಧಾರಣೆಯ ಬಗ್ಗೆ ಈ ಯಾವ ಪಕ್ಷಗಳೂ ಮಾತನಾಡದಿರುವುದು ಆಶ್ಚರ್ಯವೇನೂ ಅಲ್ಲ.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಗತಿಪರ ಟಚ್ ನೀಡಲು ಪ್ರಯತ್ನಿಸಲಾಗಿದೆ. ಆದರೆ ಕಾಂಗ್ರೆಸ್ ಸೇರಿದಂತೆ ಯಾವ ಪಕ್ಷಗಳೂ ಕೂಡ ಪ್ರಣಾಳಿಕೆ ಬಗ್ಗೆ ಗಂಭೀರವಾಗಿರುವಂತೆ ಕಾಣುತ್ತಿಲ್ಲ. ಮುಂದೆ ಬರುವ ಸರ್ಕಾರ ಮಾಡುವ ಕೆಲಸಗಳ ಮೇಲೆ ಈಗಿನ ಪ್ರಣಾಳಿಕೆಗಳ ಅನುಷ್ಠಾನ ನಿಂತಿದೆ ಎಂದು ನಮ್ಮ ಸಮಾಧಾನಕ್ಕೆ ಅಂದುಕೊಳ್ಳಬಹುದೇನೋ. ಅದಕ್ಕೆ ಜನರ ಜಾಗೃತ ನಿಗಾ ಮಾತ್ರ ಅತ್ಯಾವಶ್ಯಕ.