samachara
www.samachara.com
ಸುಪ್ರಿಂ ಕೋರ್ಟ್. 
ಸುಪ್ರಿಂ ಕೋರ್ಟ್. 
COVER STORY

ಸಿಜೆಐ ಪದಚ್ಯುತಿ ಬಗ್ಗೆ ಮಾತನಾಡುವುದು ನ್ಯಾಯಾಂಗದ ಘನತೆಗೆ ಧಕ್ಕೆ ತರುತ್ತಾ? 

ದೇಶದ ನ್ಯಾಯಾಂಗ ವ್ಯವಸ್ಥೆಯ ಅತ್ಯುನ್ನತ ಹುದ್ದೆಯಲ್ಲಿರುವ ಸಿಜೆಐ ಪದಚ್ಯುತಿಗೊಳಿಸುವ ಪ್ರಸ್ತಾವನೆ, ಅದನ್ನು ತಿರಸ್ಕರಿಸಿದ್ದ ರಾಜ್ಯಸಭಾ ಅಧ್ಯಕ್ಷರ ಕ್ರಮ, ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಾಪಾಸ್ ಸುತ್ತಾ... 

govindaby chaguppe

govindaby chaguppe

ದೇಶದ ನ್ಯಾಯಾಂಗ ವ್ಯವಸ್ಥೆಯ ಅತ್ಯುನ್ನತ ಹುದ್ದೆಯಲ್ಲಿರುವ ಸಿಜೆಐ ಪದಚ್ಯುತಿಗೊಳಿಸುವ ಪ್ರಸ್ತಾವನೆ, ಅದನ್ನು ತಿರಸ್ಕರಿಸಿದ್ದ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯನಾಯ್ಡು ಅವರ ಕ್ರಮ, ಹಾಗೂ ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಕಾಂಗ್ರೆಸ್ ಕೊನೆಗೂ ತನ್ನ ಅರ್ಜಿಯನ್ನು ವಾಪಸ್ ಪಡೆದಿದೆ. ಈ ಮೂಲಕ ನ್ಯಾಯಾಂಗ ವ್ಯವಸ್ಥೆಯ ವಿರುದ್ಧ ಶಾಸಕಾಂಗದ ಹೋರಾಟಕ್ಕೆ ಸಂಸತ್‌ನಲ್ಲಿ 44 ಸ್ಥಾನಗಳನ್ನು ಹೊಂದಿರುವ ‘ವಿರೋಧ ಪಕ್ಷ’ ಅಧಿಕೃತ ತಿಲಾಂಜಲಿಯನ್ನು ಇಟ್ಟಂತಾಗಿದೆ.

ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಪ್ರತಾಂಪ್ ಸಿಂಗ್ ಬಾಜ್ವಾ ಹಾಗೂ ಆಮಿ ಹರ್ಷದ್ ರಾಯ್ ಯಾಜ್ಞಿಕ್ ಅವರು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಹಾಭಿಯೋಗ ನಿಲುವಳಿ ನೋಟಿಸ್ ತಿರಸ್ಕಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅವರ ಪರವಾಗಿ ವಕೀಲ ಹಾಗೂ ಕಾಂಗ್ರೆಸ್ ಸಂಸದ ಕಪಿಲ್ ಸಿಬಿಲ್ ವಾದ ಮಂಡಿಸಿದರು.

ಎ. ಕೆ. ಸಿಕ್ರಿ ನೇತೃತ್ವದ ಎಸ್. ಎ. ಬೊಬ್ಡೆ, ಎಸ್. ವಿ. ರಮಣ, ಅರುಣ್ ಮಿಶ್ರ, ಆದರ್ಶ ಕೆ. ಗಿರಿ ಸೇರಿದಂತೆ ಐದು ಮಂದಿಯನ್ನು ಒಳಗೊಂಡ ಸಾಂವಿಧಾನಿಕ ಪೀಠ ವಿಚಾರಣೆಯನ್ನು ಆರಂಭಿಸಿತು. ಈ ವೇಳೆ ವಕೀಲ ಕಪಿಲ್ ಸಿಬಲ್, “ಪ್ರಕರಣವನ್ನು ವಿಚಾರಣೆ ಮಾಡಲು ಸಂವಿಧಾನ ಪೀಠ ಹೇಗೆ ರಚನೆಯಾಯಿತು. ಸಾಂವಿಧಾನಿಕ ಪೀಠವನ್ನು ರಚಿಸಲು ಯಾರು ಆದೇಶಿಸಿದ್ದಾರೆ,” ಎಂದು ತಮಗೆ ಮಾಹಿತಿ ಬೇಕು ಎಂದು ಕೇಳಿದರು.

ಆದರೆ ಕೋರ್ಟ್ ಈ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿತು. ವಾದ ಮುಂದುವರೆಸಿದ ವಕೀಲ ಕಪಿಲ್ ಸಿಬಲ್, “ನಮಗೆ ನ್ಯಾಯಾಂಗದ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ನಾನು ಈ ಮಾಹಿತಿಯನ್ನು ಕೇಳುತ್ತಿರುವುದು ಯಾವುದೇ ನ್ಯಾಯಾಧೀಶರ ಮೇಲೆ ಅನುಮಾನದಿಂದ ಅಲ್ಲ. ಬದಲಾಗಿ ಅರ್ಜಿದಾರರು ಸಂವಿಧಾನದ 145 (3) ಅನುಚ್ಛೇಧದ ಅನುಸಾರ ಈ ಬಗ್ಗೆ ಮಾಹಿತಿ ಕೇಳಿ ಪಡೆದುಕೊಳ್ಳಬಹುದು,” ಎಂದು ವಾದಿಸಿದರು. “ಕೋರ್ಟ್ ಕೂಡ ಮಾಹಿತಿಯನ್ನು ನೀಡಲು ಹಿಂದೇಟು ಹಾಕುತ್ತಿದೆ. ಅದರಲ್ಲಿ ಅಂಥ ರಹಸ್ಯವಾದ್ದೇನಿದೆ?,” ಎಂದು ಪ್ರಶ್ನಿಸಿದರು.

ಈ ವೇಳೆ ಐವರು ನ್ಯಾಯಾಧೀಶರನ್ನು ಒಳಗೊಂಡ ಪೀಠವನ್ನು ಆಡಳಿತದ ಆದೇಶದಂತೆ (ಅಡ್ಮಿನಿಸ್ಟ್ರೇಟಿವ್ ಆರ್ಡರ್) ರಚಿಸಲಾಗಿದೆ ಎಂದು ಕೋರ್ಟ್ ಹೇಳಿತು. ಮುಂದುವರೆದ ವಕೀಲ ಕಪಿಲ್ ಸಿಬಲ್, “ಅಡ್ಮಿನಿಸ್ಟ್ರೇಟಿವ್ ಆರ್ಡರ್ ಅಂದರೆ ಯಾವುದು? ಯಾರಿಂದ ಆದೇಶ ಬಂದಿದೆ? ಅದರ ಸಂಬಂಧ ಇರುವ ಆದೇಶ ಪತ್ರವನ್ನು ತಮಗೆ ಕೊಡುವಂತೆ,” ಕೋರಿದರು.

ಕಪಿಲ್ ಸಿಬಲ್, ಹಿರಿಯ ಕಾಂಗ್ರೆಸ್ ನಾಯಕ ಹಾಗೂ ನ್ಯಾಯವಾದಿ. 
ಕಪಿಲ್ ಸಿಬಲ್, ಹಿರಿಯ ಕಾಂಗ್ರೆಸ್ ನಾಯಕ ಹಾಗೂ ನ್ಯಾಯವಾದಿ. 
ಪಿಟಿಐ

ಇದಕ್ಕೆ ಮಧ್ಯ ಪ್ರವೇಶಿಸಿದ ಇಬ್ಬರು ವಕೀಲರಾದ ಆರ್.ಪಿ. ಲೂತ್ರಾ ಹಾಗೂ ಅಶ್ವಿನಿ ಉಪಧ್ಯಾಯ, “ಸಿಬಿಲ್ ಅವರು ಕಾಂಗ್ರೆಸ್ ಸಂಸದರ ಪರವಾಗಿ ವಿಚಾರಣೆಗೆ ಉಪಸ್ಥಿತಿ ವಹಿಸಿರುವುದೇ ತಪ್ಪು. ಮುಖ್ಯ ನ್ಯಾಯಮೂರ್ತಿಗಳ ಮಹಾಭೀಯೋಗಕ್ಕೆ ಸಹಿ ಹಾಕಿರುವ 71 ಮಂದಿಯಲ್ಲಿ ಕಪಿಲ್ ಸಿಬಲ್ ಕೂಡ ಇದ್ದಾರೆ. ಹೀಗಿದ್ದಾಗ ಯಾವುದೇ ದೂರುದಾರರ ಪರ ವಾದ ಮಾಡಬಾರದು ಎಂದು ಸುಪ್ರೀಂಕೋರ್ಟ್ ಬಾರ್ ಕೌನ್ಸಿಲ್ ನಿಯಮಾವಳಿಯೇ ಇದೆ,” ಎಂದು ಆಕ್ಷೇಪ ತೆಗೆದರು.

ಸಾಂವಿಧಾನಿಕ ಪೀಠ ಪ್ರತಿಕ್ರಿಯಿಸಿ, ಈ ಬಗ್ಗೆ ವಕೀಲರಾದ ಕಪಿಲ್ ಸಿಬಲ್ ಅವರೇ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಹೇಳಿತು. ಇದರಿಂದ ವಿಚಲಿತರಾದ ಸಿಬಲ್, “ಇದರ ಸಾಧ್ಯಾಸಾಧ್ಯತೆಗಳನ್ನು ತಿಳಿದುಕೊಂಡು ತಾನು ಅರ್ಜಿ ಹಿಂಪಡೆಯುವ ಅಥವಾ ವಾದಿಸುವ ನಿರ್ಧಾರ ಕೈಗೊಳ್ಳಲು ಸಮಯದ ಅವಕಾಶ ನೀಡುವಂತೆ,” ಮನವಿ ಮಾಡಿದರು. ಆದರೆ ನ್ಯಾಯಾಲಯ ಇದಕ್ಕೆ ಸಮ್ಮತಿಸಲಿಲ್ಲ. ಒಂದೋ ಪ್ರಕರಣವನ್ನು ವಾದಿಸಿ, ಇಲ್ಲ ಹಿಂಪಡೆಯಿರಿ ಎಂದಿತು. ಈ ವೇಳೆ ಬೇರೆ ನಿರ್ವಾಹವಿಲ್ಲದೆ ಸಿಬಲ್ ಅರ್ಜಿಯನ್ನು ವಾಪಸ್ ಪಡೆದರು.

ಅಲ್ಲದೆ ಇದೇ ಪ್ರಕರಣದ ಸಂಬಂಧ ಮಾತನಾಡಿದ ಸರ್ಕಾರದ ಅಟಾರ್ನಿ ಜನರಲ್ ಕೆ. ಕೆ. ವೇಣುಗೋಪಾಲ್, “ಮಹಾಭಿಯೋಗಕ್ಕೆ ಏಳು ಪಕ್ಷಗಳ 71 ಸಂಸದರು ಸಹಿ ಹಾಕಿದ್ದಾರೆ. ಆದರೆ ಕಪಿಲ್ ಸಿಬಲ್ ಈಗ ವಾದ ಮಾಡಲು ಬಂದಿರುವುದು ಕೇವಲ ಇಬ್ಬರು ಸಂಸದರು ಸಲ್ಲಿಸಿದ ಅರ್ಜಿಯ ಪರವಾಗಿ. ಹೀಗಾಗಿ ಇಡೀ ಪ್ರಕರಣದ ವಿಚಾರಣೆಯೇ ಆಧಾರ ರಹಿತವಾದದ್ದು,” ಎಂದು ಆರೋಪಿಸಿದರು.

ಸುಪ್ರೀಂಕೋರ್ಟ್ ನಲ್ಲಿ ವಿಪಕ್ಷಗಳ ಮಹಾಭಿಯೋಗಕ್ಕೆ ಸೋಲಾಗಿರುವುದು ಸರಿಯಾಗೆ ಇದೆ. ಕಾಂಗ್ರೆಸ್ ಸೋಲಿನ ಹತಾಶೆಯಿಂದ ಇಂಥ ಕ್ರಮಕ್ಕೆ ಮುಂದಾಗಿತ್ತು.
ಅಮಿತ್ ಸಿಹ್ನಾ, ಬಿಜೆಪಿ ವಕ್ತಾರ

ಇನ್ನು ವಿಚಾರಣೆಯಲ್ಲಿ ಆರೋಪಿತ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೊರಗಿದ್ದರು. ಜೊತೆಗೆ ಕೋರ್ಟ್ ನಲ್ಲಿ ಪ್ರಕರಣಗಳು ರೋಸ್ಟರ್ ಆಧಾರದಲ್ಲಿ ನಡೆಯುತ್ತಿಲ್ಲ ಎಂದು ಪತ್ರಿಕಾಗೋಷ್ಠಿ ನಡೆಸಿ ಆರೋಪಿಸಿದ್ದ ಜಸ್ಟೀಸ್ ಚಲಮೇಶ್ವರ್, ರಂಜನ್ ಗೊಗೋಯ್, ಮದನ್ ಬಿ. ಲೋಕುರ್ ಮತ್ತು ಕುರಿಯನ್ ಜೋಸೆಫ್ ಅವರನ್ನೂ ವಿಚಾರಣೆಯಿಂದ ಹೊರಗಿಡಲಾಗಿತ್ತು ಎಂಬುದು ಗಮನಾರ್ಹ.

ಕಾಂಗ್ರೆಸ್ ಕುತಂತ್ರಕ್ಕೆ ಸುಪ್ರೀಂನಲ್ಲಿ ಸೋಲಾಗಿದೆ. ಅವುಗಳ ದೂರಿನಲ್ಲಿ ಯಾವುದೇ ಹುರುಳು ಇರಲಿಲ್ಲ. ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು ಇದನ್ನು ಸಂಪೂರ್ಣವಾಗಿ ಪರಾಮರ್ಶೆ ಮಾಡಿಯೇ ಮಹಾಭಿಯೋಗ ನಿಲುವಳಿ ನೊಟೀಸನ್ನು ತಿರಸ್ಕರಿಸಿದ್ದರು.
ಮೀನಾಕ್ಷಿ ಲೇಖಿ, ಬಿಜೆಪಿ ಸಂಸದೆ

ಕೆಲ ತಿಂಗಳ ಹಿಂದೆ ಸುಪ್ರೀಂಕೋರ್ಟ್ ನಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದು ನ್ಯಾ.ಚಲಮೇಶ್ವರ್ ಸೇರಿದಂತೆ ನಾಲ್ವರು ನ್ಯಾಯಮೂರ್ತಿಗಳು ಆರೋಪಿಸಿದ್ದರು. ಸಿಬಿಐ ವಿಶೇಷ ನ್ಯಾಯಾಧೀಶ ನ್ಯಾ.ಲೋಯಾ ಹತ್ಯೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ಆರೋಪ ಕೇಳಿ ಬಂದಿತ್ತು. ಸಿಜೆಐ ಇಂಥ ಗಂಭೀರ ಪ್ರಕರಣವನ್ನು ಕಿರಿಯ ನ್ಯಾಯಾಧೀಶರಿಗೆ ವಹಿಸಿದ್ದನ್ನು ಅವರು ಬೊಟ್ಟು ಮಾಡಿದ್ದರು.

ಅಮಿತ್ ಶಾ ಅವರು ಗುಜರಾತ್ ಗೃಹ ಮಂತ್ರಿಯಾಗಿದ್ದ ವೇಳೆ ಸೊಹ್ರಬುದ್ಧೀನ್ ಹಾಗೂ ಅವರ ಸಂಬಂಧಿಕರ ಹತ್ಯೆ ನಡೆದಿತ್ತು. ಈ ಎನ್ ಕೌಂಟರ್ ನಲ್ಲಿ ಅಮಿತ್ ಶಾ ಹೆಸರೂ ಸೇರ್ಪಡೆಯಾಗಿತ್ತು. ಈ ಗಂಭೀರ ಪ್ರಕರಣದ ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಧೀಶ ಲೋಯಾ ನಡೆಸುತ್ತಿದ್ದರು. ಆದರೆ 2014ರ ಡಿ.1ರಂದು ನಾಗಪುರಕ್ಕೆ ಸಂಬಂಧಿಕರ ಮದುವೆಗೆಂದು ಹೋಗಿದ್ದ ಅವರು ಸಾವನ್ನಪ್ಪಿದ್ದರು. ವೈದ್ಯರು ಹಾಗೂ ಅವರ ಜೊತೆಗಿದ್ದ ನ್ಯಾಯಧೀಶರು ಹೃದಯಘಾತ ಎಂದು ಹೇಳಿದ್ದರು. ಈ ಬಗ್ಗೆ ತನಿಖಾ ವರದಿ ಪ್ರಕಟಿಸಿದ್ದ ಕೆಲ ಮಾಧ್ಯಮಗಳು ಲೋಯಾ ಹತ್ಯೆ ಹೃದಯಘಾತದಿಂದ ಆಗಿರುವುದಕ್ಕೆ ಹೆಚ್ಚು ಸಾಕ್ಷಿಗಳಿಲ್ಲ. ಇದರ ಹಿಂದೆ ಲೋಯಾ ಹತ್ಯೆಯ ಪಿತೂರಿಗಳಿವೆ ಎಂದು ಹೇಳಿದ್ದವು.

ಲೋಯಾ ಸಾವು ಪ್ರಕರಣವನ್ನು ಸಿಬಿಐ ತನಿಖೆಗೆ ತನಿಖೆಗೆ ವಹಿಸಿಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಏಪ್ರಿಲ್ 19ರಂದು ವಿಚಾರಣೆ ನಡೆಸಿದ್ದ ದೀಪಕ್ ಮಿಶ್ರಾ ಅವರನ್ನು ಒಳಗೊಂಡ ಸಾಂವಿಧಾನಿಕ ಪೀಠ ದೂರನ್ನು ವಜಾ ಮಾಡಿತ್ತು. ಅಲ್ಲದೆ ಹರ್ ಕಿಶನ್ ಲೋಯಾ ಸಾವಿನಲ್ಲಿ ಯಾವುದೇ ಗೊಂದಲವಿಲ್ಲ. ಅವರ ಸಾವು ಸಹಜವಾಗಿದೆ ಎಂದು ಹೇಳಿತ್ತು.

ದೀಪಕ್ ಮಿಶ್ರಾ ವಿರುದ್ಧದ ಆರೋಪಗಳೇನು ?

ಸಿಜೆಐ ದೀಪಕ್ ಮಿಶ್ರಾ. 
ಸಿಜೆಐ ದೀಪಕ್ ಮಿಶ್ರಾ. 

ಮಹಾಭಿಯೋಗಕ್ಕೆ ನಿಲುವಳಿ ಕೋರಿ ನೋಟಿಸ್ ನೀಡಿದ್ದ ಕಾಂಗ್ರೆಸ್ ನೇತೃತ್ವದ ವಿವಿಧ ಪಕ್ಷಗಳು ಸಿಜೆಐ ದೀಪಕ್ ಮಿಶ್ರಾ ವಿರುದ್ಧ ನಾಲ್ಕು ಗಂಭೀರ ಆರೋಪಗಳನ್ನು ಮಾಡಿದ್ದವು. ಈ ಆರೋಪಗಳಲ್ಲಿ ನ್ಯಾಯಮೂರ್ತಿ ಲೋಯಾ ಹತ್ಯೆ ಪ್ರಕರಣದ ವಿಚಾರಣೆಯನ್ನು ಸಿಜೆಐ ನೇತೃತ್ವದ ಸಾಂವಿಧಾನಿಕ ಪೀಠ ರದ್ದು ಮಾಡಿದ್ದೂ ಸೇರಿದೆ.

ಒಡಿಶಾದ ಪ್ರಸಾದ್ ಎಜುಕೇಶನ್ ಟ್ರಸ್ಟ್ ಅವ್ಯವಹಾರದ ಪ್ರಕಣದಲ್ಲಿ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ವಿರುದ್ಧ ಲಂಚ ಪಡೆದ ಆರೋಪವಿದ್ದು, ಸಿಬಿಐ ಅದಕ್ಕೆ ಸಾಕ್ಷ್ಯಗಳನ್ನು ಒದಗಿಸಿದೆ. ಆದರೆ ಆ ಬಗ್ಗೆ ಎಫ್ ಐ ಆರ್ ದಾಖಲಿಸಿಲು ಸಿಜೆಐ ಸಿಬಿಐಗೆ ಅವರು ಅನುಮತಿ ನೀಡಿಲ್ಲ.

ಪ್ರಸಾದ್ ಎಜುಕೇಶನ್ ಎಂಬ ಟ್ರಸ್ಟ್ ಅವ್ಯವಹಾರದಲ್ಲಿ ಸಿಜೆಐ ಅವರು ವ್ಯಾಪ್ತಿ ಮೀರಿ ಹುದ್ದೆಯಲ್ಲಿ ಮುಂದುವರೆದಿದ್ದ ಆರೋಪವಿದೆ.

ಸುಪ್ರೀಂಕೋರ್ಟ್ ನಲ್ಲಿ ಸೀನಿಯಾರಿಟಿ ( ರೋಸ್ಟರ್ ) ಆಧಾರದಲ್ಲಿ ಪ್ರಕರಣಗಳನ್ನು ಹಂಚದೆ ತಮಗೆ ಮನಸ್ಸಿಗೆ ಬಂದವರಿಗೆ ಕೇಸುಗಳ ವಿಚಾರಣೆಯನ್ನು ಹಂಚಿದ ಆರೋಪವೂ ಸಿಜೆಐ ಅವರ ಮೇಲಿದೆ. ಅಲ್ಲದೆ ಅವರು ವಕೀಲರಾಗಿದ್ದಾಗ ನಕಲಿ ಅಫಿದವಿತ್ ಸಲ್ಲಿಸಿ ಭೂಮಿಯನ್ನು ಪಡೆದಿದ್ದರು. ಜಿಲ್ಲಾಧಿಕಾರಿ ಅದನ್ನು ರದ್ದು ಮಾಡಿದ್ದರೂ ಮರಳಿಸಿರಲಿಲ್ಲ. ಆದರೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಆದ ಮೇಲೆ ಅದನ್ನು ಹಿಂತಿರುಗಿಸಿದ್ದರು ಎಂಬ ಆರೋಪಗಳು ಸೇರಿವೆ.

ಸಹಜವಾಗಿ ಯಾವುದೇ ಗಂಭೀರ ಪ್ರಕರಣದ ವಿಚಾರಣೆಯನ್ನು ಸಾಂವಿಧಾನಿಕ ಪೀಠ ನಡೆಸುತ್ತದೆ. ಐದು ಮಂದಿ ಇರುವ ಪೂರ್ಣವಾದ ಸಾಂವಿಧಾನಿಕ ಪೀಠವನ್ನು ರಚಿಸುವ ಅಧಿಕಾರವನ್ನು ಮುಖ್ಯ ನ್ಯಾಯಮೂರ್ತಿಗಳು ಮಾತ್ರ ಹೊಂದಿರುತ್ತಾರೆ. ಹೀಗಾಗಿ ಅಡ್ಮಿನಿಸ್ಟ್ರೇಟಿವ್ ಆರ್ಡ್ ರ್ ಮೂಲಕ ರಚನೆಯಾಗಿದೆ ಎಂದರೆ ಹೇಗೆ ಎಂದು ತಿಳಿಯುತ್ತಿಲ್ಲ.
ಸಿ.ಎಸ್.ದ್ವಾರಕನಾಥ್, ಹಿರಿಯ ವಕೀಲರು ಹಾಗೂ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು. 

ಪದಚ್ಯುತಿ ಹೇಗೆ?

ಸಿಜೆಐ ಮಹಾಭಿಯೋಗ ಅರ್ಥಾತ್ ಪದಚ್ಯುತಿಗೆ ಲೋಕಸಭೆಯ ನೂರು ಸಂಸದರು ಹಾಗೂ ರಾಜ್ಯಸಭೆಯ 50 ಸಂಸದರ ಒಪ್ಪಿಗೆಯ ಸಹಿ ಇರಬೇಕು. ರಾಜ್ಯಸಭೆ ಮತ್ತು ಲೋಕಸಭೆಯ ಅಧ್ಯಕ್ಷರು ಈ ಪದಚ್ಯುತಿ ದೂರನ್ನು ಒಪ್ಪಿದರೆ ಸ್ವತಃ ತನಿಖೆ ಮಾಡಿಸಿ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳುತ್ತಾರೆ. ಒಂದೊಮ್ಮೆ ವಿಪಕ್ಷಗಳ ದೂರಿನಲ್ಲಿ ಆಧಾರವಿಲ್ಲದಿದ್ದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.

ಕರ್ನಾಟಕದ ಸಿಜೆ ಪಿ.ಡಿ.ದಿನಕರನ್, ಕೋಲ್ಕೊತ್ತಾ ಹೈಕೋರ್ಟ್ ನ್ಯಾ.ಸೌಮಿತ್ರಾ ಸೇನ್ ವಿರುದ್ಧ ಮಹಾಭಿಯೋಗ ನಡೆದಿತ್ತು. ಆದರೆ ಈ ಸಂಬಂಧ ಅವರು ರಾಜೀನಾಮೆ ನೀಡಿದ್ರು. ರಾಮಸ್ವಾಮಿ ಹೆಸರಿನ ಸುಪ್ರೀಂಕೋರ್ಟ್ ನ್ಯಾಯಾಧೀಶರೂ ಸೇರಿದಂತೆ ಸುಮಾರು ಮೂವರು ಜಡ್ಜ್ ಗಳ ವಿರುದ್ಧ ಆರೋಪಗಳು ಕೇಳಿ ಬಂದಿದ್ದವು. ಆದರೆ ಇಂಥ ಇಬ್ಬರು ರಾಜೀನಾಮೆ ನೀಡಿದ್ದರೆ ಸುಪ್ರೀಂಕೋರ್ಟ್ ಜಡ್ಜ್ ವಿರುದ್ಧದ ಪ್ರಕರಣ ಬಿದ್ದು ಹೋಗಿತ್ತು.