samachara
www.samachara.com
- ಸಾಂದರ್ಭಿಕ ಚಿತ್ರ
- ಸಾಂದರ್ಭಿಕ ಚಿತ್ರ
COVER STORY

ಚರ್ಚೆಯ ವಸ್ತುವಾಗದ ಪ್ರಾದೇಶಿಕ ಅಸಮಾನತೆ; ಹೈ- ಕ ಅಭಿವೃದ್ಧಿ ಇನ್ನೂ ಮರೀಚಿಕೆ!

ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗಾಗಿ ಮಂಡಳಿ ಸ್ಥಾಪಿಸಿರುವ ಸರಕಾರ ಸಾವಿರಾರು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತಿದ್ದರೂ ಸಮಸ್ಯೆಗಳು ಇನ್ನೂ ಜೀವಂತವಾಗಿವೆ. ಆದರೂ ಹೈ-ಕ ಭಾಗದ ಸಮಸ್ಯೆಗಳು ಈ ಬಾರಿಯ ಚುನಾವಣೆಯ ವಿಷಯವಾಗದಿರಲು ಕಾರಣ ಏನು?

ದಯಾನಂದ

ದಯಾನಂದ

ಪ್ರತಿ ವರ್ಷ ನವೆಂಬರ್‌ 1ರಂದು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ರಾಜ್ಯೋತ್ಸವದ ಸಂಭ್ರಮ ಕಾಣುತ್ತಿದ್ದರೆ ಹೈದರಾಬಾದ್‌ ಕರ್ನಾಟಕ ಹೋರಾಟಗಾರರು ಪ್ರತ್ಯೇಕ ರಾಜ್ಯದ ಧ್ವಜ ಹಾರಿಸುತ್ತಿದ್ದುದನ್ನು ನಾಡು ಕಂಡಿದೆ. ಆದರೆ, ಸದ್ಯ ಇದೆಲ್ಲವೂ ಇತಿಹಾಸದ ಪುಟ ಸೇರಿ ಹೈದರಾಬಾದ್‌ ಕರ್ನಾಟಕಕ್ಕೆ ‘ವಿಶೇಷ ಸ್ಥಾನಮಾನ’ ಎಂಬ ಮರೀಚಿಕೆಯೊಂದು ಈ ಭಾಗದಲ್ಲಿ ಓಡಾಡುತ್ತಿದೆ!

ಹಾಗೆ ನೋಡಿದರೆ ಕರ್ನಾಟಕದಲ್ಲಿ ‘ಪ್ರಾದೇಶಿಕ ಅಸಮಾನತೆ’ ಎಂಬ ಅಳಲು ಮೊದಲು ಕೇಳಿಬಂದಿದ್ದೇ ಹೈದರಾಬಾದ್‌ ಕರ್ನಾಟಕ ಭಾಗದಿಂದ. ಪ್ರಾದೇಶಿಕ ಅಸಮಾನತೆಯ ಕಾರಣದಿಂದಾಗಿಯೇ ಹೈದರಾಬಾದ್‌ ಕರ್ನಾಟಕ ಪ್ರತ್ಯೇಕತೆಯ ಕೂಗೂ ಕೇಳಿಬಂದಿತ್ತು.

ಸಂವಿಧಾನದ 371ಜೆ ತಿದ್ದುಪಡಿಯ ಮೂಲಕ ಈ ಭಾಗಕ್ಕೆ ವಿಶೇಷ ಸ್ಥಾನಮಾನ ಘೋಷಣೆಯಾದಾಗ ಹೈ- ಕ ಪ್ರದೇಶದ ಆರು ಜಿಲ್ಲೆಗಳಾದ ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರ್ಗಿ ಮತ್ತು ಬೀದರ್‌ನ ಜನ ತಮಗೇನೋ ದೊಡ್ಡ ನಿಧಿ ಸಿಕ್ಕಂತೆ ಸಂಭ್ರಮಿಸಿದ್ದು ನಿಜ. ಆದರೆ, ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗಾಗಿ ಸರಕಾರ ಒಂದು ಮಂಡಳಿಯನ್ನು ರಚಿಸಿ ಐದು ವರ್ಷಗಳಾದರೂ ಇನ್ನೂ ಹೇಳಿಕೊಳ್ಳುವಂಥ ಕೆಲಸಗಳು ಆಗಿಲ್ಲದಿರುವುದು ಈ ಭಾಗದ ಜನರನ್ನು ಭ್ರಮನಿರಸನಗೊಳಿಸಿರುವುದಂತೂ ಸುಳ್ಳಲ್ಲ.

ಹೈದರಾಬಾದ್‌ ಕರ್ನಾಟಕ ಭಾಗದ ನಿಜವಾದ ಸಮಸ್ಯೆಗಳಾದ ಸಾಮಾಜಿಕ, ಶೈಕ್ಷಣಿಕ ಅಸಮಾನತೆ, ನಿರುದ್ಯೋಗ, ಬಡತನದಂತಹ ಸಮಸ್ಯೆಗಳು 371ಜೆ ನಂತರವೂ ಜೀವಂತವಾಗಿವೆ. ಅಭಿವೃದ್ಧಿ ಮಂಡಳಿಯು ಒಂದಷ್ಟು ರಸ್ತೆ ನಿರ್ಮಾಣ, ಗ್ರಾಮಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಿಸುವಂಥ ಕೆಲಸಗಳನ್ನು ಮಾಡಿರುವುದು ಬಿಟ್ಟರೆ ಜನಸಾಮಾನ್ಯರ ಜೀವನಮಟ್ಟ ಸುಧಾರಿಸುವಂಥ ಕೆಲಸಗಳನ್ನು ಮಂಡಳಿ ಮಾಡಿಲ್ಲ ಎಂಬ ಅಸಮಾಧಾನ ಈ ಭಾಗದ ಜನರಲ್ಲಿದೆ. ಆದರೆ, ಈ ಅಸಮಾಧಾನ ಈ ಬಾರಿಯ ಚುನಾವಣೆಯಲ್ಲಿ ಗಂಭೀರ ವಿಶೇಷವೇ ಆಗಿಲ್ಲ.

ನಿಜವಾದ ಸಮಸ್ಯೆ ತೆರೆಮರೆಗೆ!

ಹೈದರಾಬಾದ್‌ ಕರ್ನಾಟಕ ಪ್ರದೇಶದ ನಿಜವಾದ ಸಮಸ್ಯೆಗಳು ಚುನಾವಣೆಯ ಹೊತ್ತಲ್ಲಿ ತೆರೆಮರೆಗೆ ಸರಿದಿವೆ. ಯಾವ ಪಕ್ಷಗಳಿಗೂ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಮತ ಕೇಳುವ ಧೈರ್ಯವಿಲ್ಲ. ಒಂದು ಕಡೆ ಸಮಸ್ಯೆಗಳು ತಾಂಡವವಾಡುತ್ತಿದ್ದರೆ, ಮತ್ತೊಂದು ಕಡೆ ಸಮಸ್ಯೆಗಳನ್ನು ಪರಿಹರಿಸುವ ಮನಸ್ಸೇ ಜನಪ್ರತಿನಿಧಿಗಳಲ್ಲಿ ಇಲ್ಲ ಎಂಬ ಮಾತುಗಳು ಇಲ್ಲಿ ಕೇಳಿಬರುತ್ತಿವೆ.

“ಹೈದರಾಬಾದ್‌ ಕರ್ನಾಟಕ ಭಾಗದ ನಿಜವಾದ ಸಮಸ್ಯೆಗಳನ್ನು ಯಾವ ಪಕ್ಷಗಳೂ ಮುನ್ನೆಲೆಗೆ ತಂದು ಚರ್ಚೆ ಮಾಡುತ್ತಿಲ್ಲ. ಈ ಭಾಗಕ್ಕೆ ಬಂದು ಭಾಷಣ ಮಾಡಿಹೋದ ಪ್ರಧಾನಮಂತ್ರಿಗಳೂ ಈ ನೆಲದ ನಿಜವಾದ ಸಮಸ್ಯೆಗಳ ಬಗ್ಗೆ ಮಾತನಾಡಲಿಲ್ಲ. ಬಿಜೆಪಿಯವರಿಗೆ ಹಿಂದುತ್ವವೇ ಪ್ರಧಾನವಾಗಿದೆ. ಕಾಂಗ್ರೆಸ್‌ ಪಕ್ಷದವರಾದರೂ ಇಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಬೇಕಿತ್ತು. ಆದರೆ, ಅವರು ಕೇವಲ ಬಿಜೆಪಿ ನಾಯಕರ ಆರೋಪಗಳಿಗೆ ಪ್ರತಿಕ್ರಿಯೆ ಕೊಡುವುದರಲ್ಲಿ ನಿರತರಾಗಿದ್ದಾರೆ. ಇನ್ನು ಜೆಡಿಎಸ್‌ ಅನುಕೂಲಸಿಂಧು ರಾಜಕಾರಣದ ಹುಡುಕಾಟದಲ್ಲಿದೆ” ಎನ್ನುತ್ತಾರೆ ಕಲಬುರ್ಗಿಯ ಸಾಮಾಜಿಕ ಕಾರ್ಯಕರ್ತೆ ಕೆ. ನೀಲಾ.

ರಸ್ತೆ, ಕಮಾನು ನಿರ್ಮಿಸುವುದೇ ಅಭಿವೃದ್ಧಿಯಲ್ಲ. ಜನತೆಗೆ ಏನು ಬೇಕು ಎಂಬುದನ್ನು ಅರಿತು ಆ ನಿಟ್ಟಿನಲ್ಲಿ ಕೆಲಸ ಮಾಡುವುದು ಮುಖ್ಯ. ಹೈ- ಕ ಅಭಿವೃದ್ಧಿ ಮಂಡಳಿ ಈ ಭಾಗದ ಜನರ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವಂಥ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಬೇಕು. ಕಾಲಮಿತಿಯೊಳಗೆ ಸಮಗ್ರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಬೇಕು.
- ಕೆ. ನೀಲಾ, ಸಾಮಾಜಿಕ ಕಾರ್ಯಕರ್ತೆ

“ಕೃಷಿ ಕೂಲಿ ಕಾರ್ಮಿಕರು, ಬಡವರು ಹೆಚ್ಚಾಗಿರುವ ಪ್ರದೇಶ ಹೈದರಾಬಾದ್‌ ಕರ್ನಾಟಕ. ಆದರೆ, ಜನರಿಗೆ ಉದ್ಯೋಗ ಕೊಡುವ ಶಾಶ್ವತ ಯೋಜನೆಗಳು ಇಲ್ಲಿಲ್ಲ. ಉದ್ಯೋಗ ಖಾತ್ರಿ ಯೋಜನೆಯಿಂದ ಒಂದಷ್ಟು ಪ್ರಯೋಜನವಾಗಿದೆ. ಆದರೆ, ಅದರಿಂದ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ. ಹೈದರಾಬಾದ್‌ ಕರ್ನಾಟಕ ಭಾಗದ ಜನತೆಯ ಶಿಕ್ಷಣ, ಉದ್ಯೋಗ, ಆರೋಗ್ಯ, ಅನ್ನದ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಮತ ಕೇಳುವ ಯಾವ ಅಭ್ಯರ್ಥಿಗಳೂ ಇಲ್ಲಿ ಕಾಣುವುದಿಲ್ಲ” ಎಂಬುದು ನೀಲಾ ಅವರ ಮಾತು.

ಸಮಸ್ಯೆಗಳೇ ಹೆಚ್ಚು

“ಹೈದರಾಬಾದ್‌ ಕರ್ನಾಟಕ ಭಾಗದ ಹಲವು ಹಳ್ಳಿಗಳಲ್ಲಿ ಕುಡಿಯುವ ನೀರಿನ ತೀವ್ರ ಸಂಕಷ್ಟವಿದೆ. ಹಲವು ತಾಂಡಾಗಳಲ್ಲಿ ಕನಿಷ್ಠ ಮೂಲ ಸೌಕರ್ಯಗಳೂ ಇಲ್ಲದೆ ಜನ ನಿಕೃಷ್ಟವಾಗಿ ಬದುಕುತ್ತಿದ್ದಾರೆ. ಸರಿಯಾದ ನೀರಾವರಿ ವ್ಯವಸ್ಥೆ ಇಲ್ಲದೆ ಭೂಮಿ ಬರಡಾಗಿದೆ. ಕೃಷಿ ರೈತರ ಕೈಹಿಡಿಯುತ್ತಿಲ್ಲ. ಕೂಲಿಗಾಗಿ ಜನ ಪರದಾಡುತ್ತಿದ್ದಾರೆ. ಪ್ರೌಢಶಾಲೆಯೇ ಹಲವು ಮಕ್ಕಳ ಉನ್ನತ ಶಿಕ್ಷಣವಾಗಿದೆ. ಪರಿಸ್ಥಿತಿ ಹೀಗಿರುವಾಗ ಜನಪ್ರತಿನಿಧಿಗಳಿಗೆ ಇಂಥ ಗಂಭೀರ ಸಮಸ್ಯೆಗಳು ಬೇಡವಾಗಿವೆ. ಆದರೆ, ಜನರೂ ಈ ಸಮಸ್ಯೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮತದಾನ ಮಾಡುವ ಸ್ಥಿತಿಯಲ್ಲಿಲ್ಲ” ಎಂಬುದು ಕಲಬುರ್ಗಿಯ ಪತ್ರಕರ್ತರೊಬ್ಬರ ಮಾತು.

“ಕಲಬುರ್ಗಿಯಲ್ಲಿ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳಿವೆ. ಆದರೆ, ಜನ ಸಾಮಾನ್ಯರ ಶೈಕ್ಷಣಿಕ, ಸಾಮಾಜಿಕ ಪ್ರಗತಿ ಆಗಿಲ್ಲ. ಜನ ಸಾಮಾನ್ಯರಿಗೆ ಹೇಳಿಕೊಳ್ಳುವಂಥ ಶಿಕ್ಷಣ ಸಿಗುತ್ತಿಲ್ಲ. ಇಲ್ಲಿನ ಸಮಸ್ಯೆಗಳು ಈ ಜನರಿಗೆ ಸಮಸ್ಯೆ ಎಂದು ಅನಿಸುತ್ತಿಲ್ಲ. ತಾಂಡಾಗಳ ಬಗ್ಗೆ ಮಾತನಾಡುವುದು ಒಂದು ಕಡೆಗಿರಲಿ, ಕಲಬುರ್ಗಿ ನಗರದಲ್ಲೇ ಕುಡಿಯುವ ನೀರಿಗೆ ತೊಂದರೆ ಇದೆ. ನೈರ್ಮಲ್ಯದ ತೊಂದರೆ ಇದೆ. ಜನಪ್ರತಿನಿಧಿಗಳು ಇದನ್ನೆಲ್ಲ ಕಂಡೂ ಕಾಣದಂತೆ ಇದ್ದಾರೆ. ಜನರೂ ಈ ವಿಷಯಗಳನ್ನು ಜನಪ್ರತಿನಿಧಿಗಳ ಮುಂದೆ ಮಾತನಾಡಲು ಹೆದರುತ್ತಾರೆ. ಹೀಗಾಗಿ ಯಾವ ಪಕ್ಷಗಳ ಅಭ್ಯರ್ಥಿಗಳೂ ಸಮಸ್ಯೆಗಳ ಬಗ್ಗೆ ಸೊಲ್ಲೆತ್ತುತ್ತಿಲ್ಲ” ಎನ್ನುತ್ತಾರೆ ಅವರು.

“ದಿನ ಬೆಳಗಾದರೆ ಕಲಬುರ್ಗಿ ರೈಲು ನಿಲ್ದಾಣದಲ್ಲಿ ಕೂಲಿ ಕಾರ್ಮಿಕರ ಗುಂಪುಗಳು ಕಾಣುತ್ತವೆ. ಗುತ್ತಿಗೆದಾರರು, ಮೇಸ್ತ್ರಿಗಳು ಬಂದು ಹರಾಜು ಕೂಗಿದಂತೆ ಕೂಗಿ ಕಡಿಮೆ ದುಡ್ಡಿಗೆ ಒಪ್ಪಿಕೊಂಡವರನ್ನು ಕೂಲಿಗೆ ಕರೆದುಕೊಂಡು ಹೋಗುತ್ತಾರೆ. ಉಳಿದವರಿಗೆ ಕೂಲಿ ಸಿಕ್ಕರೆ ಉಂಟು ಇಲ್ಲವಾದರೆ ಇಲ್ಲ. ಇಂಥ ಸಮಸ್ಯೆಗಳ ಬಗ್ಗೆ ಈ ಭಾಗದ ಜನಪ್ರತಿನಿಧಿಗಳು ಕಣ್ಣಿದ್ದೂ ಕುರುಡರಾಗಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಅವರು.

ಜನ ಸಾಮಾನ್ಯರಿಗೆ ಅರಿವಿಲ್ಲ

ಹೈದರಾಬಾದ್ ಕರ್ನಾಟಕದ ಸಮಸ್ಯೆಗಳ ಬಗ್ಗೆ ಈ ಭಾಗದ ಕೆಲ ವಿದ್ಯಾವಂತರು ಚರ್ಚೆ ಮಾಡುತ್ತಾರೆ, ಬಿಟ್ಟರೆ ಜನ ಸಾಮಾನ್ಯರಿಗೆ ಈ ಭಾಗದ ಸಮಸ್ಯೆಗಳು ಹಾಗೂ ಅವನ್ನು ಚುನಾವಣಾ ರಾಜಕಾರಣದ ಸಂದರ್ಭದಲ್ಲಿ ಪ್ರಶ್ನೆ ಮಾಡುವ ಮಟ್ಟದ ಅರಿವಿಲ್ಲ ಎನ್ನುತ್ತಾರೆ ಹೈದರಾಬಾದ್‌ ಕರ್ನಾಟಕ ಹೋರಾಟಗಾರರು.

“ಹೈದರಾಬಾದ್‌ ಕರ್ನಾಟಕದ ನಿಜವಾದ ಸಮಸ್ಯೆಗಳ ಬಗ್ಗೆ ವಿದ್ಯಾವಂತರು ಮಾತನಾಡುವುದು ಬಿಟ್ಟರೆ ಜನಸಾಮಾನ್ಯರಿಗೆ ಈ ಬಗ್ಗೆ ಅರಿವೇ ಇಲ್ಲ. ಜನಪ್ರತಿನಿಧಿಗಳಲ್ಲಿ ಈ ವಿಚಾರಗಳನ್ನು ಪ್ರಶ್ನಿಸಬೇಕೆನ್ನುವ ಮನಸ್ಥಿತಿಯೂ ಜನಸಾಮಾನ್ಯರಲ್ಲಿಲ್ಲ. ಹಣ ಹಾಗೂ ಜಾತಿಯ ವರ್ಚಸ್ಸೇ ಚುನಾವಣೆಗಳಲ್ಲಿ ಮುಖ್ಯವಾಗುತ್ತಿರುವುದರಿಂದ ಜನಸಾಮಾನ್ಯರು ತಮ್ಮ ಪಾಡಿಗೆ ತಾವಿರುವುದೇ ಪಾಡು ಎಂಬಂತಿದ್ದಾರೆ” ಎಂಬುದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಉಪಾಧ್ಯಕ್ಷ ಡಾ. ರಜಾಕ್‌ ಉಸ್ತಾದ್ ಅವರ ಮಾತು.

ಹೈ-ಕ ಅಭಿವೃದ್ಧಿ ಮಂಡಳಿಯ 6000 ಕೋಟಿ ರೂಪಾಯಿ ಅನುದಾನದ ಹಣದಲ್ಲಿ ಸುಮಾರು 2000 ಕೋಟಿ ರೂಪಾಯಿ ಖರ್ಚಾಗಿದೆ. ಇಷ್ಟು ಹಣ ಖರ್ಚಾಗಿರುವುದಕ್ಕೆ ಒಂದಷ್ಟು ಕೆಲಸ ಆಗಿರುವುದು ಕಾಣುತ್ತದೆ. ಆದರೆ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಒತ್ತು ಸಿಕ್ಕಿಲ್ಲ.
- ಡಾ. ರಜಾಕ್‌ ಉಸ್ತಾದ್, ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಉಪಾಧ್ಯಕ್ಷ

“ಹೈ-ಕ ಅಭಿವೃದ್ಧಿ ಮಂಡಳಿಗೆ ಪ್ರಾದೇಶಿಕ ಆಯುಕ್ತರೇ ಕಾರ್ಯದರ್ಶಿಯಾಗಿದ್ದಾರೆ. ಅವರಿಗೆ ಇದು ಪಾರ್ಟ್‌ ಟೈಂ ಕೆಲಸ. ಜಿಲ್ಲಾ ಪಂಚಾಯತ್‌, ಲೋಕೋಪಯೋಗಿ ಇಲಾಖೆಯ ಮೂಲಕ ಮಂಡಳಿಯ ಕೆಲಸಗಳನ್ನು ಮಾಡಿಸಬೇಕಾದ ಪರಿಸ್ಥಿತಿ ಇದೆ. ಮಂಡಳಿಗೆ ಪ್ರತ್ಯೇಕವಾಗಿ ಆಯಾ ಜಿಲ್ಲೆ, ತಾಲ್ಲೂಕುಗಳಲ್ಲಿ ಕಚೇರಿಗಳಾಗಬೇಕು, ಪೂರ್ಣ ಪ್ರಮಾಣದಲ್ಲಿ ಮಂಡಳಿಗಾಗಿಯೇ ಕೆಲಸ ಮಾಡುವ ಸಿಬ್ಬಂದಿ ಬೇಕು. ಈ ವಿಷಯಗಳನ್ನೇ ಜನಪ್ರತಿನಿಧಿಗಳು ಮಾತನಾಡುತ್ತಿಲ್ಲ. ಅಭಿವೃದ್ಧಿ ಮರೀಚಿಕೆಯಾಗಿರುವ ಹೊತ್ತಲ್ಲಿ ಅದನ್ನು ಮುಟ್ಟದಿರುವುದೇ ಜಾಣತನ ಎಂದು ಎಲ್ಲಾ ಪಕ್ಷಗಳೂ ಭಾವಿಸಿರುವಂತಿವೆ” ಎನ್ನುತ್ತಾರೆ ಅವರು.

“ಕಾಂಗ್ರೆಸ್‌ ಸರಕಾರ ಅನುದಾನ ನೀಡಿದ್ದರೂ ಅದು ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಿಲ್ಲ. ಹೀಗಾಗಿ ಕಾಂಗ್ರೆಸ್‌ನವರು ಹೈ-ಕ ಮಂಡಳಿಯ ಕೆಲಸಗಳ ಬಗ್ಗೆ ಮಾತನಾಡುತ್ತಿಲ್ಲ. ಮಂಡಳಿಗೆ ಕೇಂದ್ರ ಸರಕಾರ ಅನುದಾನ ನೀಡಿದೆ ಎಂದು ಬಿಜೆಪಿಯವರು ಜನರಿಗೆ ಸುಳ್ಳು ಹೇಳುತ್ತಾ ತಿರುಗುತ್ತಿದ್ದಾರೆ. ಜೆಡಿಎಸ್‌ ಈ ವಿಚಾರವನ್ನು ಮುಟ್ಟೇ ಇಲ್ಲ. ಹೀಗಾಗಿ ಯಾವ ಪಕ್ಷಕ್ಕೂ ಹೈದರಾಬಾದ್‌ ಕರ್ನಾಟಕ ಭಾಗದ ನಿಜವಾದ ಸಮಸ್ಯೆಗಳು ಮುಖ್ಯ ಎನಿಸುತ್ತಲೇ ಇಲ್ಲ. ದುಡ್ಡು, ಜಾತಿ ಬಲ ಇದ್ದರೆ ಚುನಾವಣೆ ಗೆಲ್ಲಬಹುದು ಎಂಬ ಲೆಕ್ಕಾಚಾರ ಎಲ್ಲಾ ಪಕ್ಷಗಳ ಅಭ್ಯರ್ಥಿಗಳಲ್ಲೂ ಇದೆ” ಎಂಬುದು ರಜಾಕ್‌ ಅವರ ಅಭಿಪ್ರಾಯ.

ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಕಿತ್ತೆಗೆಯುವ ಉದ್ದೇಶದಿಂದ ಸ್ಥಾಪನೆಯಾಗಿರುವ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು ಸಾಮಾಜಿಕ, ಶೈಕ್ಷಣಿಕ, ಆರೋಗ್ಯ, ಬಡತನದಂತಹ ಸಮಸ್ಯೆಗಳ ಮೇಲೆ ಕೆಲಸ ಮಾಡದಿರುವುದು ಹಾಗೂ ಜನರು ತಮ್ಮ ಸಮಸ್ಯೆಗಳ ಬಗ್ಗೆ ಮಾತಾಡದಿರುವುದು ಈ ಭಾಗವನ್ನು ಹಿಂದೆಯೇ ಉಳಿಯುವಂತೆ ಮಾಡಿದೆ.

ಜನಸಾಮಾನ್ಯರು ತಮ್ಮ ಸಮಸ್ಯೆಗಳ ಬಗ್ಗೆ ಮಾತೇ ಆಡದಿರುವುದು ಎಲ್ಲಾ ಪಕ್ಷಗಳ ಅಭ್ಯರ್ಥಿಗಳಿಗೂ ಅನುಕೂಲಕರವಾಗಿದೆ. ಹೀಗಾಗಿ ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಸಮಸ್ಯೆಗಳು ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ವಿಷಯವೇ ಅಗಿಲ್ಲ. ಸಮಸ್ಯೆಗಳ ಬಗ್ಗೆ ಜನರೂ ಮಾತನಾಡದಿರುವುದು ಹಾಗೂ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ನಿಜವಾದ ಸಮಸ್ಯೆಗಳನ್ನು ಮರೆತಂತಿರುವುದು ಪ್ರಾದೇಶಿಕ ಅಸಮಾನತೆಯ ಕಂದರವನ್ನು ಇನ್ನಷ್ಟು ದೊಡ್ಡದಾಗಿಸುತ್ತಿರುವುದು ದುರಂತ.