ಆಹಾ ರಾಹುಲ್ ಗಾಂಧಿ ಮದುವೆ ಅಂತೆ: ರಾಯ್‌ಬರೇಲಿಯಿಂದ ಹೊಸ ಗಾಳಿಸುದ್ದಿ!
COVER STORY

ಆಹಾ ರಾಹುಲ್ ಗಾಂಧಿ ಮದುವೆ ಅಂತೆ: ರಾಯ್‌ಬರೇಲಿಯಿಂದ ಹೊಸ ಗಾಳಿಸುದ್ದಿ!

ದೇಶದ ಎಲಿಜೆಬಲ್ ಬ್ಯಾಚುಲರ್‌ಗಳ ಪೈಕಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಕೂಡ ಒಬ್ಬರು. 47 ರಾಹುಲ್ ಮದುವೆ ಸುತ್ತ ಈವರೆಗೆ ಸಾಕಷ್ಟು ಗಾಳಿಸುದ್ದಿಗಳು ಹರಿದಾಡಿವೆ. ಇದು ಹೊಸ ಸೇರ್ಪಡೆ ಅಷ್ಟೆ. 

ನೀವು ಸಾಮಾಜಿಕ ಜಾಲತಾಣಗಳನ್ನು ಬಳಸುವವರಾದರೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ತಮ್ಮ ಸಹೋದ್ಯೋಗಿ ಅದಿತಿ ಸಿಂಗ್‌ ಜತೆ ಮಾದುವೆಯಾಗುತ್ತಿದ್ದಾರೆ ಎನ್ನುವ ಮಾಹಿತಿ ನಿಮ್ಮ ಕಣ್ಣಿಗೆ ಬಿದ್ದಿರಲೇಬೇಕು. ಸಾಮಾಜಿಕ ಜಾಲತಾಣಗಳ ತುಂಬಾ ಹರಿದಾಡುತ್ತಿರುವ ರಾಹುಲ್‌ ಗಾಂಧಿ ಹಾಗೂ ಅದಿತಿ ಸಿಂಗ್‌ ಫೋಟೊಗಳನ್ನು ನೀವು ನೋಡಿರಲೇಬೇಕು. 

ಒಂಡೆದೆ ರಾಹುಲ್‌ ಗಾಂಧಿ ಕರ್ನಾಟಕದ ಚುನಾವಣೆಯ ಹಿನ್ನಲೆಯಲ್ಲಿ ಇಡೀ ಕರ್ನಾಟಕ ಸುತ್ತುತ್ತಿದ್ದಾರೆ. ಆದರೆ ದೇಶದ ತುಂಬಾ ರಾಹುಲ್‌ ಗಾಂಧಿ ಮದುವೆಯ ಬಗ್ಗೆ ಚರ್ಚೆಯೊಂದನ್ನು ಕಿಡಿಗೇಡಿಗಳು ಹುಟ್ಟುಹಾಕಿದ್ದಾರೆ. ಹಾಗಂತ ಇದು ಮೊದಲೇ ಬಾರಿ ಏನಲ್ಲ. ಆಗಾಗ್ಗೆ ರಾಹುಲ್ ಮದುವೆ ಸುತ್ತ ಒಂದಿಲ್ಲೊಂದು ಗಾಳಿಸುದ್ದಿಗಳು ಹರಡುತ್ತಲೇ ಇರುತ್ತವೆ. ಈ ಬಾರಿ ಹರಡಿರುವ ಗಾಳಿ ಸುದ್ದಿಯ ಮೂಲ ರಾಯ್ ಬರೇಲಿ.

ಕಾಂಗ್ರೆಸ್ ಪಕ್ಷದ ಮೊದಲ ಕುಟುಂಬದ ಸಂಸತ್ ಕ್ಷೇತ್ರ ರಾಯ್‌ಬರೇಲಿ. ಇಲ್ಲಿನ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವುದು ಕಾಂಗ್ರೆಸ್‌ನ ಅದಿತಿ ಸಿಂಗ್. ಕೌಟುಂಬಿಕ ಹಿನ್ನೆಲೆಯಿಂದ ರಾಜಕೀಯ ಪ್ರವೇಶಿಸಿದ ಅದಿತಿ ಕಳೆದ ಬಾರಿಯ ಯುಪಿಯಲ್ಲಿ ಗೆದ್ದ ಕೆಲವೇ ಕೆಲವು ಕಾಂಗ್ರೆಸ್ ಎಂಎಲ್‌ಎಗಳ ಪೈಕಿ ಒಬ್ಬರು. ಅದೂ 90 ಸಾವಿರ ಬಹುಮತದೊಂದಿಗೆ ಆಯ್ಕೆ ಆದ ಅದಿತಿ ಸಿಂಗ್, ರಾಹುಲ್ ಜತೆ ಇರುವ ಫೊಟೋಗಳಿಗೆ ಈಗ ಹೊಸ ಬಣ್ಣ ಕಟ್ಟಿ ಹರಿಬಿಡಲಾಗಿದೆ.

ಯಾವಾಗ ಅದಿತಿ ಸಿಂಗ್ ಹಾಗೂ ರಾಹುಲ್ ಮದುವೆ ಆಗಿದ್ದಾರೆ, ಇನ್ನೊಂದು ವಾರದಲ್ಲಿ ಅಧಿಕೃತ ಸುದ್ದಿ ಹೊರಬೀಳಲಿದೆ ಎಂಬ ಸುದ್ದಿಗಳು ಆಕ್ರಮಿಸಿಕೊಂಡವೋ, ಸ್ವತಃ ಅದಿತಿ ಸಿಂಗ್, ಸ್ವಷ್ಟೀಕರಣ ನೀಡಿದ್ದಾರೆ.

ಶಾಸಕಿ ಅದಿತಿ ಸಿಂಗ್. 
ಶಾಸಕಿ ಅದಿತಿ ಸಿಂಗ್. 

“ಕಳೆದ 2 ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಂದಂತಿಗಳನ್ನು ಕಂಡು ನನಗೆ ಆಶ್ಚರ್ಯವಾಗುತ್ತಿದೆ. ರಾಹುಲ್‌ ಗಾಂಧಿ ಕೇವಲ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಷ್ಟೇ ಅಲ್ಲ, ಜತೆಗೆ ನನ್ನ ದೊಡ್ಡ ಅಣ್ಣನಿದ್ದಂತೆ. ನನಗೆ ಅವರ ಮೇಲೆ ಅಪಾರವಾದ ಗೌರವವಿದೆ. ನಮ್ಮಿಬ್ಬರ ಮದುವೆ ಎಂಬ ವದಂತಿಯ ಬಗ್ಗೆ ಯಾರೂ ಕೂಡ ಗಮನ ನೀಡಬೇಡಿ ಎಂದು ಪ್ರಾರ್ಥಿಸುತ್ತೇನೆ,” ಎಂದು ಅದಿತಿ ಸಿಂಗ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಮುಂದುವರೆದು, ಇಂತಹ ವದಂತಿಗಳು ನನ್ನನ್ನು ಅಸಮಾಧಾನಗೊಳಿಸಿವೆ. ರಾಹುಲ್‌ ಗಾಂಧಿ ತನ್ನ ಅಣ್ಣನೆಂದು ನಿಮ್ಮ ಮುಂದೆ ಸ್ಪಷ್ಟೀಕರಣ ನೀಡುತ್ತಿದ್ದೇನೆ. ಈ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ನನಗೆ ದುಃಖವಾಗುತ್ತಿದೆ ಎಂದು ಅದಿತಿ ಸಿಂಗ್‌ ಹೇಳಿದ್ದಾರೆ.

ಅದಿತಿ ಸಿಂಗ್‌ ಮೊದಲ ಬಾರಿಗೆ ಉತ್ತರ ಪ್ರದೇಶದ ರೇ ಬರೇಲಿ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿದ್ದಾರೆ. 2017ರಲ್ಲಿ ನಡೆದ ಚುನಾವಣೆಯಲ್ಲಿ ರಾಜ್ಯದ್ಯಂತ ಬಿಜೆಪಿ ಗೆದ್ದಿತ್ತಾದರೂ ಕಾಂಗ್ರೆಸ್‌ನಿಂದ ಟಿಕೇಟ್‌ ಪಡೆದು ಚುನಾವಣೆಯನ್ನು ಎದುರಿಸಿದ್ದ ಅದಿತಿ ಸಿಂಗ್‌, ಬಿಜೆಪಿ ವಿರುದ್ಧ ಜಯಭೇರಿ ಬಾರಿಸಿದ್ದರು.

ಅದಿತಿ ಸಿಂಗ್‌ ಅನುಭವಿ ಕಾಂಗ್ರೆಸ್‌ ನಾಯಕ ಅಖಿಲೇಶ್‌ ಸಿಂಗ್‌ರ ಮಗಳು. ಅಖಿಲೇಶ್ ಸಿಂಗ್‌ ಸತತ 5 ಬಾರಿ ರೇ ಬರೇಲಿ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿದ್ದವರು. ರಾಹುಲ್‌ ಗಾಂಧಿ ಕುಟುಂಬಕ್ಕೆ ಆಪ್ತರಾಗಿದ್ದ ಅಖಿಲೇಶ್‌ ಸಿಂಗ್, ತಮ್ಮ ಮಗಳು ಅದಿತಿ ಸಿಂಗ್‌ ಕಾಂಗ್ರೆಸ್‌ ಟಿಕೇಟ್‌ ಕೊಡಿಸುವಲ್ಲಿ ಸಫಲರಾಗಿದ್ದರು. ಅದಿತಿ ಸಿಂಗ್‌ ಕೂಡ ಪ್ರಿಯಾಂಕಾ ವಾದ್ರಾಗೆ ಆಪ್ತರು. ಕೆಲವರ ಪ್ರಕಾರ ಪ್ರಿಯಾಂಕಾ ವಾದ್ರಾ ನೀಡಿದ ಸಲಹೆಯ ಮೇರೆಗೆ ಕಾರ್ಪೊರೇಟ್‌ ವೃತ್ತಿಯನ್ನು ತೊರೆದ ಅದಿತಿ ಸಿಂಗ್‌, ರಾಜಕಾರಣಕ್ಕೆ ಇಳಿದಿದ್ದರು.

ಪ್ರಿಯಾಂಕ, ರಾಹುಲ್ ಜತೆ ವೇದಿಕೆಯಲ್ಲಿ ಅದಿತಿ ಸಿಂಗ್. 
ಪ್ರಿಯಾಂಕ, ರಾಹುಲ್ ಜತೆ ವೇದಿಕೆಯಲ್ಲಿ ಅದಿತಿ ಸಿಂಗ್. 

ಅದಿತಿ ಸಿಂಗ್‌ ದೆಹಲಿ ಹಾಗೂ ಮುಸೌರಿಗಳಲ್ಲಿ ವಿದ್ಯಾಭ್ಯಾಸ ನಡೆಸಿವರು. ಅಮೆರಿಕಾದ ಡ್ಯೂಕ್‌ ವಿಶ್ವ ವಿದ್ಯಾಲಯದಿಂದ ಮ್ಯಾನೇಜ್‌ಮೆಂಟ್‌ ಪದವಿಯನ್ನು ಪಡೆದಿದ್ದವರು. 2017ರ ವೇಳೆಯಲ್ಲಿ ನಡೆದ ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ 90,000 ಮತಗಳ ಅಂತರದಿಂದ ಗೆದ್ದು ಬಂದಿದ್ದರು.

ರಾಹುಲ್‌ ಗಾಂಧಿ ಜತೆ ನಿಂತು ತೆಗೆಸಿಕೊಂಡಿದ್ದ ಫೋಟೋವನ್ನು ಬಳಸಿ ಕಿಡಿಗೇಡಿಗಳು ಸುಳ್ಳು ಸುದ್ದಿಯನ್ನು ಅಪಪ್ರಚಾರ ಮಾಡಿದ್ದಾರೆ. ಈಗ ಅದಿತಿ ಸಿಂಗ್‌ ನೀಡಿರುವ ಸ್ಪಷ್ಟನೆ ಈ ಗೊಂದಲಗಳಿಗೆ ತೆರೆ ಎಳೆದಿದೆ. ಈ ಹಿಂದೆ ರಾಹುಲ್ ಗಾಂಧಿ ವಿದೇಶಿ ಗೆಳತಿ ಜತೆ ಸ್ನೇಹದಿಂದ ಇದ್ದ ಸುದ್ದಿಯನ್ನು ಸ್ವತಃ ಹೇಳಿಕೊಂಡಿದ್ದರು. ಆದರೆ ಆ ಸಂಬಂಧ ಮಧ್ಯದಲ್ಲಿಯೇ ಕಡಿದುಹೋಗಿತ್ತು. ನಂತರ ನನ್ನ ಬದುಕನ್ನು ಕಾಂಗ್ರೆಸ್‌ಗೆ ಮುಡುಪಾಗಿಟ್ಟಿರುವುದಾಗಿ ರಾಹುಲ್ ಹೇಳಿಕೊಂಡಿದ್ದರು. ಮದುವೆಯ ಪ್ರಶ್ನೆಯನ್ನು ಅವರು ತಳ್ಳಿಹಾಕಿದ್ದರು.