ಕೊನೆಹಂತದಲ್ಲಿ ಬಿಜೆಪಿ ಉರುಳಿಸುತ್ತಿರುವ ಹೊಸ ದಾಳದ ಹೆಸರು ‘ಲಿಂಗಾಯತ ಧರ್ಮ’!
COVER STORY

ಕೊನೆಹಂತದಲ್ಲಿ ಬಿಜೆಪಿ ಉರುಳಿಸುತ್ತಿರುವ ಹೊಸ ದಾಳದ ಹೆಸರು ‘ಲಿಂಗಾಯತ ಧರ್ಮ’!

ಸ್ವತಂತ್ರ ಲಿಂಗಾಯತ ಧರ್ಮದ ವಿಚಾರದಲ್ಲಿ ತನಗೇ ಲಾಭ ಎಂದು ಕಾಂಗ್ರೆಸ್‌ ಲೆಕ್ಕಾಚಾರ ಹಾಕುತ್ತಿರುವ ಹೊತ್ತಲ್ಲೇ ಬಿಜೆಪಿ ಇದೇ ಧರ್ಮದ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ನ ಕೈ ಕಟ್ಟಿಹಾಕುವ ಪ್ರಯತ್ನ ಮಾಡುತ್ತಿದೆ.

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವ ಹೊತ್ತಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿ ವೀರಶೈವ- ಲಿಂಗಾಯತ ವಿಚಾರವು ಚುನಾವಣಾ ಅಖಾಡದಲ್ಲಿರುವ ಅಭ್ಯರ್ಥಿಗಳ ಪ್ರಚಾರದಲ್ಲಿ ಸ್ಥಾನ ಪಡೆದುಕೊಳ್ಳುತ್ತಿದೆ.

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸು ಮಾಡಿರುವುದು ತಮಗೆ ವರವಾಗುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಇದ್ದರೆ, ‘ಕಾಂಗ್ರೆಸ್‌ ಪಕ್ಷ ಧರ್ಮವನ್ನು ಒಡೆದಿದೆ’ ಎಂಬ ಹುಯಿಲನ್ನು ಬಿಜೆಪಿ ಎಬ್ಬಿಸುತ್ತಿದೆ. ಎರಡೂ ಪಕ್ಷಗಳು ಧರ್ಮದ ವಿಚಾರವನ್ನು ಚುನಾವಣಾ ಲಾಭಕ್ಕೆ ಬಳಸಿಕೊಳ್ಳುತ್ತಿರುವುದಂತೂ ನಿಚ್ಚಳವಾಗಿದೆ.

ಲಿಂಗಾಯತರ ಪ್ರಾಬಲ್ಯ ಹೆಚ್ಚಾಗಿರುವ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ ಲಿಂಗಾಯತ ಮಠಗಳ ಮೊರೆ ಹೊಕ್ಕರೆ, ಬಿಜೆಪಿ ವೀರಶೈವ ಸ್ವಾಮೀಜಿಗಳನ್ನು ಆಶ್ರಯಿಸಿದೆ. ಮತ್ತೊಂದು ಕಡೆ ತಳಮಟ್ಟದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಹಣಿಯಲು ಬಿಜೆಪಿ ಲಿಂಗಾಯತ ಸ್ವತಂತ್ರ ಧರ್ಮದ ವಿಚಾರವನ್ನೇ ಬಳಸಿಕೊಳ್ಳುತ್ತಿದೆ. ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ಕಾಂಗ್ರೆಸ್‌ಗಿಂತ ಬಿಜೆಪಿಗೇ ಹೆಚ್ಚು ಲಾಭವಾಗಲಿದೆ ಎಂದು ಬಿಜೆಪಿ ನಂಬಿಕೊಂಡಿದೆ.

Also read: ಅಸ್ಮಿತೆಗಳ ಹುಡುಕಾಟ; ರಾಜಕೀಯ ಲೆಕ್ಕಾಚಾರ: ‘ಸ್ವತಂತ್ರ ಲಿಂಗಾಯತ ಧರ್ಮ’ ಯಾಕೆ ಬೇಕು?

“ಬಿಜೆಪಿ ಅಭ್ಯರ್ಥಿಗಳು ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ನಡೆಸುತ್ತಾ ಲಿಂಗಾಯತ ಸ್ವತಂತ್ರ ಧರ್ಮದ ವಿಚಾರವನ್ನೂ ಪ್ರಸ್ತಾಪಿಸುತ್ತಿದ್ದಾರೆ. ‘ಕಾಂಗ್ರೆಸ್‌ನವರು ಧರ್ಮವನ್ನು ಒಡೆದರು, ಹೀಗಾಗಿ ಅವರನ್ನು ಗೆಲ್ಲಿಸಬೇಡಿ’ ಎಂದು ಬಿಜೆಪಿ ಕಾರ್ಯಕರ್ತರು ಪ್ರಚಾರ ಮಾಡುತ್ತಿದ್ದಾರೆ. ತಳಮಟ್ಟದಲ್ಲಿ ಈ ರೀತಿಯ ಪ್ರಚಾರದಿಂದ ತಮಗೆ ರಾಜಕೀಯವಾಗಿ ಲಾಭವಾಗುತ್ತದೆ ಎಂದು ಬಿಜೆಪಿ ಭಾವಿಸಿರುವಂತಿದೆ” ಎನ್ನುತ್ತಾರೆ ಗದಗ ಜಿಲ್ಲೆಯ ಪತ್ರಕರ್ತರೊಬ್ಬರು.

“ಲಿಂಗಾಯತರಿಗೆ ಹೋಲಿಸಿದರೆ ವೀರಶೈವರ ಸಂಖ್ಯೆ ಕಡಿಮೆ ಇದೆ. ತಾವು ಲಿಂಗಾಯತ ಧರ್ಮದಿಂದ ದೂರ ಉಳಿದರೆ ಮುಂದೆ ತಮ್ಮ ಅಸ್ತಿತ್ವ ಏನು ಎಂಬ ಬಗ್ಗೆ ವೀರಶೈವರಿಗೆ ಆತಂಕವಿದೆ. ವೀರಶೈವ- ಲಿಂಗಾಯತ ಇಬ್ಬರನ್ನೂ ಕಾಂಗ್ರೆಸ್‌ ಒಡೆದಿದೆ ಎಂದು ಕೆಲವೆಡೆ ಮಾತುಗಳು ಕೇಳಿಬಂದರೆ, ಪ್ರತ್ಯೇಕ ಲಿಂಗಾಯತ ಧರ್ಮ ಘೋಷಣೆಯ ಮೂಲಕ ಕಾಂಗ್ರೆಸ್‌ ಪಕ್ಷ ಹಿಂದೂ ಧರ್ಮವನ್ನೂ ಒಡೆದಿದೆ ಎಂದು ಬಿಜೆಪಿ ಹೇಳುತ್ತಿದೆ. ಇದು ಚುನಾವಣೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ” ಎಂಬುದು ಅವರ ಮಾತು.

- ಮಠಾಧೀಶರೊಂದಿಗೆ ಬಿ.ಎಸ್‌. ಯಡಿಯೂರಪ್ಪ (ಸಾಂದರ್ಭಿಕ ಚಿತ್ರ)
- ಮಠಾಧೀಶರೊಂದಿಗೆ ಬಿ.ಎಸ್‌. ಯಡಿಯೂರಪ್ಪ (ಸಾಂದರ್ಭಿಕ ಚಿತ್ರ)

Also read: ಲಿಂಗಾಯತ ಸ್ವತಂತ್ರ ಧರ್ಮ; ಲಾಭ- ನಷ್ಟದ ಲೆಕ್ಕಾಚಾರದಲ್ಲಿ ಇಬ್ಬರಿಗೂ ಸಮಪಾಲು?

‘ಪ್ರತ್ಯೇಕ ಧರ್ಮ ಬಿಜೆಪಿಗೇ ಲಾಭ’

ಸ್ವತಂತ್ರ ಲಿಂಗಾಯತ ಧರ್ಮ ವಿಚಾರ ತಮಗೆ ಲಾಭವಾಗಲಿದೆ ಎಂದು ಕಾಂಗ್ರೆಸ್‌ ತಿಳಿದಿದ್ದರೆ, ಸದ್ಯದ ಪರಿಸ್ಥಿತಿಯ ರಾಜಕೀಯ ಲಾಭ ತಮಗೇ ಸಿಗುತ್ತದೆ ಎಂಬ ವಿಶ್ವಾಸ ಬಿಜೆಪಿಯದ್ದು. ಕಾಂಗ್ರೆಸ್‌ ಚುನಾವಣೆಯ ಸಮೀಪದಲ್ಲಿ ಪ್ರತ್ಯೇಕ ಧರ್ಮದ ಘೋಷಣೆ ಮಾಡಿದ್ದು ರಾಜಕೀಯ ಲಾಭಕ್ಕಾಗಿಯೇ ಹೊರತು, ಲಿಂಗಾಯತರನ್ನು ಉದ್ಧಾರ ಮಾಡುವ ಉದ್ದೇಶದಿಂದಲ್ಲ ಎನ್ನುತ್ತಾರೆ ಉತ್ತರ ಕರ್ನಾಟಕದ ಬಿಜೆಪಿ ಮುಖಂಡರು.

“ಕಾಂಗ್ರೆಸ್‌ ಪಕ್ಷ ಲಿಂಗಾಯತ ಸ್ವತಂತ್ರ ಧರ್ಮ ಘೋಷಣೆ ಮಾಡಿದ್ದೇ ಚುನಾವಣಾ ಲಾಭ ತೆಗೆದುಕೊಳ್ಳುವ ಉದ್ದೇಶದಿಂದ. ನಿಜಕ್ಕೂ ಲಿಂಗಾಯತರಿಗೆ ಒಳ್ಳೆಯದನ್ನು ಮಾಡಬೇಕೆಂಬ ಉದ್ದೇಶ ಕಾಂಗ್ರೆಸ್‌ ಪಕ್ಷಕ್ಕೆ ಇದ್ದಿದ್ದರೆ ಚುನಾವಣೆ ಸಮೀಪಿಸುವವರೆಗೂ ಕಾಯ್ದು ಕೂರಬೇಕಾದ ಅಗತ್ಯವೇನಿತ್ತು” ಎಂಬ ಪ್ರಶ್ನೆ ಬಿಜೆಪಿ ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ್ ಮಲಶೆಟ್ಟಿ ಅವರದ್ದು.

“ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಯನ್ನು ಕೊಡಿಸಬೇಕೆಂಬ ಉದ್ದೇಶ ಕಾಂಗ್ರೆಸ್‌ಗೆ ಇದ್ದಿದ್ದರೆ ಕೇಂದ್ರದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರದಲ್ಲಿದ್ದಾಗಲೇ ಶಿಫಾರಸು ಮಾಡಲು ಅವಕಾಶವಿತ್ತು. ಆದರೆ, ಈಗ ಕೇಂದ್ರಕ್ಕೆ ಶಿಫಾರಸು ಮಾಡಿ ಅದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಕಾಂಗ್ರೆಸ್‌ ನೋಡುತ್ತಿದೆ. ಆದರೆ, ಜನರಿಗೆ ಎಲ್ಲವೂ ಅರ್ಥವಾಗಿದೆ. ಲಿಂಗಾಯತ ಸ್ವತಂತ್ರ ಧರ್ಮದ ವಿಚಾರ ಕಾಂಗ್ರೆಸ್‌ಗೆ ಲಾಭವಾಗುವುದಿಲ್ಲ” ಎನ್ನುತ್ತಾರೆ ಅವರು.

ಕಾಂಗ್ರೆಸ್‌ ಪಕ್ಷ ಲಿಂಗಾಯತ ಸ್ವತಂತ್ರ ಧರ್ಮ ಘೋಷಣೆ ಮಾಡಿದ್ದು ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೇ ಲಾಭವಾಗಲಿದೆ. ಕಾಂಗ್ರೆಸ್‌ ಪಕ್ಷ ಧರ್ಮ ಒಡೆಯಿತು ಎಂದು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ.
- ಮೋಹನ್ ಮಲಶೆಟ್ಟಿ, ಬಿಜೆಪಿ ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ

Also read: ‘ಲಿಂಗಾಯತ ಎಸ್‌ಸಿ/ಎಸ್‌ಟಿ’: ಮೀಸಲಾತಿ ಕನಸುಗಳು ಮತ್ತು ಭವಿಷ್ಯದ ಸಿಕ್ಕುಗಳು

ಅಪಪ್ರಚಾರಕ್ಕೆ ಲಿಂಗಾಯತ ಅಸ್ತ್ರ?

ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಅಭ್ಯರ್ಥಿಗಳ ಪ್ರಚಾರದ ಜತೆಗೆ ಕಾಂಗ್ರೆಸ್‌ ವಿರುದ್ಧ ಅಪಪ್ರಚಾರಕ್ಕೆ ಲಿಂಗಾಯತ ಧರ್ಮದ ಅಸ್ತ್ರವನ್ನು ಬಿಜೆಪಿ ಬಳಸುತ್ತಿದೆ. ಬಿಜೆಪಿ ಪ್ರಚಾರ ಸಭೆಗಳಲ್ಲಿ ಧರ್ಮದ ಬಗ್ಗೆ ಹೆಚ್ಚು ಮಾತನಾಡದಿದ್ದರೂ ಹಳ್ಳಿ ಹಳ್ಳಿಗಳಲ್ಲಿ, ಮನೆ ಮನೆ ಪ್ರಚಾರಗಳಲ್ಲಿ ಲಿಂಗಾಯತ ಧರ್ಮದ ವಿಚಾರವನ್ನು ಪ್ರಸ್ತಾಪಿಸುತ್ತಿರುವುದು ನಿಜ ಎನ್ನುತ್ತಾರೆ ಈ ಭಾಗದ ಜನ.

“ಧರ್ಮದ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಪಕ್ಷಗಳು ಲಾಭ ಮಾಡಿಕೊಳ್ಳುವುದು ಹೊಸದೇನಲ್ಲ. ಈ ಬಾರಿ ಬಿಜೆಪಿ ಕಾಂಗ್ರೆಸ್‌ ವಿರುದ್ಧದ ಅಪಪ್ರಚಾರಕ್ಕೆ ಲಿಂಗಾಯತ ಧರ್ಮದ ವಿಚಾರವನ್ನು ಬಳಸಿಕೊಳ್ಳುತ್ತಿದೆ. ಸ್ವತಂತ್ರ ಲಿಂಗಾಯತ ಧರ್ಮದ ವಿಚಾರದಲ್ಲಿ ಕಾಂಗ್ರೆಸ್‌ಗೆ ಲಾಭ ಹೆಚ್ಚು. ಏಕೆಂದರೆ ಇಷ್ಟು ದಿನ ಲಿಂಗಾಯತರು ಬಿಜೆಪಿ ಬೆಂಬಲಿಸುತ್ತಲೇ ಬಂದವರು, ಈಗ ಸ್ವತಂತ್ರ ಧರ್ಮದ ಮಾನ್ಯತೆಯ ವಿಚಾರದಲ್ಲಿ ಕಾಂಗ್ರೆಸ್‌ ಕಡೆಗೆ ಒಲವು ತೋರುತ್ತಿದ್ದಾರೆ. ಹೀಗಾಗಿ ಸಾಂಪ್ರದಾಯಿಕ ಲಿಂಗಾಯತ ಮತದಾರರನ್ನು ಉಳಿಸಿಕೊಳ್ಳಲು ಬಿಜೆಪಿ ಧರ್ಮದ ವಿಚಾರವನ್ನು ಬಳಸಿಕೊಳ್ಳುತ್ತಿದೆ” ಎನ್ನುತ್ತಾರೆ ಗದಗ ಭಾಗದ ಲೇಖಕರೊಬ್ಬರು.

“ವೀರಶೈವ ಪಂಚಾಚಾರ್ಯರ ಪರ ಒಲವಿರುವ ಈ ಭಾಗದ ಕೆಲವು ಸ್ವಾಮೀಜಿಗಳು ಬಿಜೆಪಿಗೆ ಬೆಂಬಲ ನೀಡುವ ಉದ್ದೇಶದಿಂದ ಸ್ವತಂತ್ರ ಲಿಂಗಾಯತ ಧರ್ಮದ ವಿಚಾರವನ್ನು ಚುನಾವಣಾ ಪ್ರಚಾರಗಳಲ್ಲಿ ಹರಿಬಿಡುತ್ತಿದ್ದಾರೆ. ಆದರೆ, ಬಹುಸಂಖ್ಯಾತ ಲಿಂಗಾಯತರು ಈ ಬಾರಿ ಕಾಂಗ್ರೆಸ್‌ ಕಡೆಗೆ ಒಲವು ಹೊಂದಿದ್ದಾರೆ. ಅದನ್ನು ಒಡೆಯುವ ಉದ್ದೇಶ ಬಿಜೆಪಿಯದ್ದು” ಎಂಬುದು ಅವರ ಅಭಿಪ್ರಾಯ.

“ಲಿಂಗಾಯತ ಸ್ವತಂತ್ರ ಧರ್ಮದ ವಿಚಾರದಲ್ಲಿ ಕಾಂಗ್ರೆಸ್ ಕಳೆದುಕೊಳ್ಳುವಂಥದ್ದು ಏನೂ ಇಲ್ಲ. ಕಾಂಗ್ರೆಸ್‌ಗೆ ಈ ವಿಚಾರದಲ್ಲಿ ಸಿಕ್ಕಿದ್ದೆಲ್ಲವೂ ಅನುಕೂಲವೇ. ಹೀಗಾಗಿ ಲಿಂಗಾಯತ ಮತದಾರರನ್ನು ಕಳೆದುಕೊಳ್ಳುವ ಆತಂಕ ಬಿಜೆಪಿಗಿದೆ. ಇದನ್ನು ಹೇಗಾದರೂ ತಡೆಯುವ ಉದ್ದೇಶದಿಂದ ಬಿಜೆಪಿ ತನ್ನ ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ. ಲಿಂಗಾಯತ ಸ್ವತಂತ್ರ ಧರ್ಮದ ವಿಚಾರದಲ್ಲಿ ಯಾವ ಪಕ್ಷಕ್ಕೆ ಲಾಭವಾಗುತ್ತದೆ ಎಂಬುದು ಚುನಾವಣಾ ಫಲಿತಾಂಶದ ನಂತರವೇ ಗೊತ್ತಾಗಲಿದೆ” ಎನ್ನುತ್ತಾರೆ ಅವರು.

ಸ್ವತಂತ್ರ ಲಿಂಗಾಯತ ಧರ್ಮದ ವಿಚಾರದಲ್ಲಿ ಯಾರಿಗೆ ಲಾಭವಾಗುತ್ತದೆ ಎಂಬುದು ನಮಗೆ ಮುಖ್ಯವಲ್ಲ. ಸ್ವತಂತ್ರ ಧರ್ಮದ ಮಾನ್ಯತೆ ನೀಡುವ ವಿಚಾರದಲ್ಲಿ ಬಿಜೆಪಿ ನಿಲುವು ಏನು ಅನ್ನುವುದು ಮುಖ್ಯ. ಈ ವಿಚಾರದಲ್ಲಿ ಬಿಜೆಪಿ ಒಂದು ನಿಲುವಿಗೆ ಬರಲು ಸಾಧ್ಯವಾಗಿಲ್ಲ ಏಕೆ?
- ಜಿ.ಬಿ. ಪಾಟೀಲ್‌, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ
- ಮಠಾಧೀಶರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ (ಸಾಂದರ್ಭಿಕ ಚಿತ್ರ)
- ಮಠಾಧೀಶರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ (ಸಾಂದರ್ಭಿಕ ಚಿತ್ರ)

Also read: ‘ವೀರಶೈವ- ಲಿಂಗಾಯತ’: ಬ್ರಾಹ್ಮಣೋ ಬ್ರಹ್ಮಾಂಡ ಘಾತಕ ವರ್ಸಸ್ ಜಂಗಮೋ ಜಗದ್ಘಾತಕ!

‘ಧರ್ಮದ ವಿಚಾರ ಮುಖ್ಯವಲ್ಲ’

ಒಂದು ಕಡೆಗೆ ಬಿಜೆಪಿ ಕಾಂಗ್ರೆಸ್‌ ಕಾಲೆಳೆಯಲು ಸ್ವತಂತ್ರ ಲಿಂಗಾಯತ ಧರ್ಮದ ವಿಚಾರವನ್ನು ಬಳಸಿಕೊಳ್ಳುತ್ತಿದ್ದರೆ, ಇದರ ಲಾಭ ಪಡೆಯಲು ಕಾಂಗ್ರೆಸ್‌ ಕೂಡಾ ಪ್ರಯತ್ನ ನಡೆಸುತ್ತಿದೆ. ಲಿಂಗಾಯತ ಮಠಗಳ ಮೂಲಕ ಭೇಟಿಯ ಮೂಲಕ ಕಾಂಗ್ರೆಸ್‌ ಮುಖಂಡರು ಲಿಂಗಾಯತ ಮತ ಬೇಟೆಗೆ ಈಗಾಗಲೇ ಸಿದ್ಧತೆ ನಡೆಸಿಕೊಂಡಿದ್ದಾರೆ. ಆದರೆ, ಧರ್ಮದ ವಿಚಾರ ಚುನಾವಣೆ ಸಂದರ್ಭದಲ್ಲಿ ತಮಗೆ ಮುಖ್ಯವಾಗಿಲ್ಲ ಎನ್ನುತ್ತಾರೆ ಉತ್ತರ ಕರ್ನಾಟಕ ಭಾಗದ ಕಾಂಗ್ರೆಸ್‌ ಮುಖಂಡರು.

“ವೀರಶೈವ- ಲಿಂಗಾಯತ ಎಂಬ ಪ್ರತ್ಯೇಕತೆ ಹಿಂದಿನಿಂದಲೂ ನಮ್ಮ ಭಾಗದಲ್ಲಿಲ್ಲ. ಸ್ವತಂತ್ರ ಧರ್ಮವಾಗುವುದರಿಂದ ಸಮಾಜಕ್ಕೆ ಒಂದಿಷ್ಟು ಅನುಕೂಲಗಳಿವೆ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಮಾಡಿರುವ ಕೆಲಸ ಜನಕ್ಕೆ ಗೊತ್ತಿದೆ. ಆದರೆ, ಧರ್ಮದ ವಿಚಾರವನ್ನು ಮುಂದಿಟ್ಟುಕೊಂಡು ನಾವು ಚುನಾವಣಾ ರಾಜಕೀಯ ಮಾಡುತ್ತಿಲ್ಲ. ಚುನಾವಣೆಯಲ್ಲಿ ನಮಗೆ ಧರ್ಮದ ವಿಚಾರ ಮುಖ್ಯವಾಗಿಲ್ಲ” ಎನ್ನುತ್ತಾರೆ ಬೀದರ್‌ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ.

ಧರ್ಮದ ವಿಚಾರದಲ್ಲಿ ರಾಜಕೀಯ ಮಾಡುವುದು ಕಾಂಗ್ರೆಸ್‌ಗೆ ಅಗತ್ಯವಿಲ್ಲ. ಆದರೆ, ಕಾಂಗ್ರೆಸ್‌ ವಿರುದ್ಧ ಅಪಪ್ರಚಾರಕ್ಕೆ ಬಿಜೆಪಿ ಧರ್ಮದ ವಿಚಾರವನ್ನು ಬಳಸಿಕೊಳ್ಳುತ್ತಿದೆ.
- ಬಸವರಾಜ ಜಾಬಶೆಟ್ಟಿ, ಬೀದರ್‌ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ

“ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಕಾಂಗ್ರೆಸ್‌ ವಿರುದ್ಧ ತಳಮಟ್ಟದಲ್ಲಿ ಪ್ರಚಾರ ನಡೆಸುತ್ತಿದೆ. ಆದರೆ, ಈ ರೀತಿಯ ಅಪಪ್ರಚಾರದ ರಾಜಕಾರಣಕ್ಕೆ ಚುನಾವಣೆಯಲ್ಲಿ ಗೆಲುವು ಸಿಗುವುದು ಕಷ್ಟ” ಎನ್ನುತ್ತಾರೆ ಜಾಬಶೆಟ್ಟಿ.

ಒಂದು ಕಡೆಗೆ ಕಾಂಗ್ರೆಸ್‌ ಸ್ವತಂತ್ರ ಲಿಂಗಾಯತ ಧರ್ಮದ ವಿಚಾರದಲ್ಲಿ ಚುನಾವಣಾ ಲಾಭದ ಲೆಕ್ಕಾಚಾರದಲ್ಲಿದ್ದರೆ, ಅದೇ ವಿಚಾರವನ್ನು ಬಳಸಿಕೊಂಡು ಕಾಂಗ್ರೆಸ್‌ ಕಾಲೆಳೆಯಲು ಬಿಜೆಪಿ ಮುಂದಾಗಿದೆ. ಸ್ವತಂತ್ರ ಧರ್ಮದ ವಿಚಾರದಲ್ಲಿ ಈ ಪ್ರಚಾರ- ಅಪಪ್ರಚಾರಗಳಿಂದ ಯಾರಿಗೆ ಲಾಭವಾಗುತ್ತದೆ ಎಂಬ ಗುಟ್ಟು ರಟ್ಟಾಗುವ ದಿನಗಳೇನೂ ದೂರ ಇಲ್ಲ.