samachara
www.samachara.com
‘ಸಾಮಾಜಿಕ ಪ್ರಚಾರ’: ಬಿಜೆಪಿ ಯಥಾಸ್ಥಿತಿ, ಕಾಂಗ್ರೆಸ್ ಮುನ್ನಡೆ, ಹಿಂದೆ ಬೀಳದ ಜೆಡಿಎಸ್‌
COVER STORY

‘ಸಾಮಾಜಿಕ ಪ್ರಚಾರ’: ಬಿಜೆಪಿ ಯಥಾಸ್ಥಿತಿ, ಕಾಂಗ್ರೆಸ್ ಮುನ್ನಡೆ, ಹಿಂದೆ ಬೀಳದ ಜೆಡಿಎಸ್‌

ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ದೊಡ್ಡ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನದ ಸಂವಹನ ಪ್ರಕ್ರಿಯೆಗೆ ಎಲ್ಲಾ ಪಕ್ಷಗಳು ಒತ್ತು ನೀಡಿವೆ. ಅದರ ಫಲಾಫಲವನ್ನು ಫಲಿತಾಂಶವೇ ಹೇಳಬೇಕಿದೆ.

“ಇನ್ನು ಉಳಿದಿರುವುದು ಒಂದು ವಾರ. ಹೇಗಾದರೂ ಮಾಡಿ ನೆಗೆಟಿವ್ ಪ್ರಚಾರ ಆಗದಂತೆ ನೋಡಿಕೊಳ್ಳಬೇಕು,’’ ಎಂದರು ಕಾಂಗ್ರೆಸ್‌ ಐಟಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಉತ್ಸಾಹಿ ಯುವಕರೊಬ್ಬರು.

ಬೆಂಗಳೂರಿನ ಕನ್ನಿಂಗ್‌ಹ್ಯಾಮ್‌ ರಸ್ತೆಯಲ್ಲಿರುವ ಕಾಂಗ್ರೆಸ್‌ನ ತಾತ್ಕಾಲಿಕ ಐಟಿ ಕಚೇರಿಯ ಮುಂದೆ ನಿಂತುಕೊಂಡು ಮಾತನಾಡುತ್ತಿದ್ದ ಅವರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಬರುತ್ತದೆ ಎಂಬ ವಿಶ್ವಾಸ ತುಂಬಿ ತುಳುಕುತ್ತಿತ್ತು.

“ನಾವು ಇರೋದು 50 ಜನ ಅಷ್ಟೆ. ಆದರೆ 500 ಜನರ ಕೆಲಸ ಮಾಡುತ್ತಿದ್ದೇವೆ. ಸಂಬಳಕ್ಕಾಗಿ ಮಾತ್ರವೇ ಇಲ್ಲಿ ಕೆಲಸ ಮಾಡುತ್ತಿಲ್ಲ. ಸಿದ್ದರಾಮಯ್ಯ ಅವರಿಗಾಗಿ ನಾವು ನಮ್ಮ ಸಮಯ ಮುಡುಪಾಗಿಟ್ಟಿದ್ದೇವೆ. ಇನ್ನೊಂದು ವಾರ ಕಳೆದ ಸಾಕು,’’ ಎಂದರು.

2013ರ ಚುನಾವಣೆಗೆ ಹೋಲಿಸಿದರೆ, 2018ರ ಚುನಾವಣೆಯ ಪ್ರಚಾರ ವೈಖರಿ ಭಿನ್ನವಾಗಿದೆ. ವಿಶೇಷವಾಗಿ ಸಾಮಾಜಿಕ ಜಾಲತಾಣಗಳನ್ನು ಪ್ರಮುಖ ರಾಜಕೀಯ ಪಕ್ಷಗಳು ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿವೆ. ವಾಟ್ಸಾಪ್‌, ಟ್ವಿಟರ್ ಹಾಗೂ ಫೇಸ್‌ಬುಕ್ ಮೂಲಕ ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಜನರನ್ನು ತಲುಪಲಾಗುತ್ತಿದೆ. ಪ್ರತಿ ದಿನ ಪರಸ್ಪರ ಹಣಿಯಲು ಹೊಸ ಹೊಸ ಐಡಿಯಾಗಳನ್ನು ಇಲ್ಲಿ ಕಾರ್ಯರೂಪಕ್ಕೆ ಇಳಿಸಲಾಗುತ್ತಿದೆ.

“ಕಳೆದ ಚುನಾವಣೆಯಲ್ಲಿ ಫೇಸ್‌ಬುಕ್ ಆಲ್‌ಮೋಸ್ಟ್ ಒನ್‌ಸೈಡೆಡ್‌ ಅನ್ನಿಸುತ್ತಿತ್ತು. ಬಿಜೆಪಿ ಮತ್ತು ಬಲಪಂಥೀಯರೇ ಹೆಚ್ಚು ಅಭಿಪ್ರಾಯಗಳನ್ನು ಹರಿಯಬಿಡುತ್ತಿದ್ದರು. ಅದಕ್ಕೆ ಹೋಲಿಸಿದರೆ ಈ ಬಾರಿ ದೊಡ್ಡ ಮಟ್ಟದ ಬದಲಾವಣೆ ಕಾಣಿಸುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ ಈ ಬಾರಿ ಹೆಜ್ಜೆಹೆಜ್ಜೆಗೂ ಬಿಜೆಪಿಯನ್ನು ಎಕ್ಸ್‌ಪೋಸ್‌ ಮಾಡಿಕೊಂಡು ಬರುತ್ತಿದೆ,’’ ಎನ್ನುತ್ತಾರೆ ಬರಹಗಾರ ಟಿ. ಕೆ. ದಯಾನಂದ್. ಸಾಮಾಜಿಕ ಕಾಲತಾಣದಲ್ಲಿ ಸಕ್ರಿಯವಾಗಿರುವ ದಯಾನಂದ್, ಫೇಸ್‌ಬುಕ್‌ನ್ನು ಹತ್ತಿರದಿಂದ ನೋಡುತ್ತಿದ್ದಾರೆ.

ಪ್ರಧಾನಿ ಮೋದಿ ಆಗಮನದ ನಂತರವಂತೂ ಕಾಂಗ್ರೆಸ್ ಪೇಜ್‌ಗಳು, ಗ್ರೂಪ್‌ಗಳಲ್ಲಿ ತರಹೇವಾರಿ ‘ಕಂಟೆಂಟ್‌’ ಎದ್ದು ಕಾಣಿಸುತ್ತಿದೆ. “ಏನಿಲ್ಲ ಅಂದರೂ ಪ್ರತಿ ದಿನ ನಾನಾ ಮಾರ್ಗಗಳ ಮೂಲಕ 40 ಲಕ್ಷ ಜನರನ್ನು ತಲುಪಲಾಗುತ್ತಿದೆ,’’ ಎನ್ನುತ್ತಾರೆ ಕಾಂಗ್ರೆಸ್ ಐಟಿ ವಿಭಾಗದಲ್ಲಿ ಕೆಲಸ ಮಾಡುವವರು.

ಭಿನ್ನ ಕಾರ್ಯತಂತ್ರ:

ಕಾಂಗ್ರೆಸ್ ಐಟಿ ವಿಭಾಗ ಕಳಗಟ್ಟಿದೆ. ನಟಿ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಕಾಂಗ್ರೆಸ್ ಮಾಹಿತಿ ತಂತ್ರಜ್ಞಾನ ವಿಭಾಗದ ಹೊಣೆಗಾರಿಕೆ ಹೊತ್ತುಕೊಂಡ ನಂತರ ದೊಡ್ಡಮಟ್ಟದ ಬದಲಾವಣೆ ದೇಶದ ಮಟ್ಟದಲ್ಲಿ ಕಾಣಿಸುತ್ತಿದೆ. ರಾಜ್ಯದ ವಿಚಾರಕ್ಕೆ ಬಂದರೆ ಶ್ರೀವಸ್ತಾವ, ಭೂಷಣ್ ನಾಗ್ ತರದವರು ಫೇಸ್‌ಬುಕ್, ಟ್ವಿಟರ್ ಹಾಗೂ ವಾಟ್ಸಾಪ್‌ ಮೂಲಕ ಮಾಹಿತಿ ಹಂಚುವ, ಪಕ್ಷದ ಪ್ರಚಾರವನ್ನು ವೃತ್ತಿಪರತೆಯಿಂದ ನಿರ್ವಹಿಸಿಕೊಂಡು ಬರುತ್ತಿದ್ದಾರೆ.

“ನಮ್ಮಲ್ಲಿ ರಿಸರ್ಚ್‌ಗಾಗಿ ಒಂದು ಪ್ರತ್ಯೇಕ ತಂಡ ಮಾಡಲಾಗಿತ್ತು. ಇದು ಬಿಜೆಪಿ ಹಳೆಯ ಭ್ರಷ್ಟಾಚಾರದ ವಿವರಗಳಿಂದ ಹಿಡಿದು ಪ್ರಧಾನಿ ಮೋದಿ ಭಾಷಣದಲ್ಲಿನ ಸುಳ್ಳುಗಳನ್ನು ಹುಡುಕುವ ಕೆಲಸ ಮಾಡಿಕೊಂಡು ಬರುತ್ತಿದೆ. ಇದರ ಜತೆಗೆ ಕ್ರಿಯೇಟಿವ್ಸ್‌ ಎಂದು ಕರೆಯುವ ತಂಡ ಪೋಸ್ಟರ್‌ಗಳನ್ನು, ವಿಡಿಯೋಗಳನ್ನು ತಯಾರಿಸುತ್ತದೆ. ಕಂಟೆಂಟ್ ಬರೆಯಲು ಇನ್ನೊಂದು ತಂಡ ಇದೆ. ಅಂತಿಮವಾಗಿ ಸುಮಾರು 40 ಸಾವಿರ ವಾಟ್ಸಾಪ್‌ ಗ್ರೂಪ್‌ಗಳಿಗೆ, ಫೇಸ್‌ಬುಕ್‌ನಲ್ಲಿರುವ ನಾನಾ ಪೇಜ್‌ಗಳಿಗೆ, ಗ್ರೂಪ್‌ಗಳಿಗೆ, ಟ್ವಿಟರ್‌ಗೆ ಅಪ್‌ಲೋಡ್ ಮಾಡಲಾಗುತ್ತಿದೆ. ಇದೇ ಕೆಲಸ ಮಾಡಲು ಬಿಜೆಪಿಯಲ್ಲಿ ಸಾವಿರಾರು ಜನರಿದ್ದಾರೆ ಎಂದು ಹೇಳುತ್ತಾರೆ. ನಮ್ಮಲ್ಲಿ ಮಾತ್ರ 50 ಜನರ ಪುಟ್ಟ ತಂಡ ಈ ಕೆಲಸ ಮಾಡುತ್ತಿದೆ,’’ ಎಂದು ಮಾಹಿತಿ ನೀಡುತ್ತಾರೆ ಕಾಂಗ್ರೆಸ್ ಐಟಿ ವಿಭಾಗದ ಸದಸ್ಯರೊಬ್ಬರು.

ಕ್ರಿಯಾಶೀಲ ಜೆಡಿಎಸ್‌:

ಜೆಡಿಎಸ್‌ ಪ್ರಚಾರಕ್ಕೆ ಬಳಕೆಯಾಗುವ ಹಲವು ವೇದಿಕೆಗಳ ಪೈಕಿ ಹೀಗೊಂದು ಗ್ರೂಪ್. 
ಜೆಡಿಎಸ್‌ ಪ್ರಚಾರಕ್ಕೆ ಬಳಕೆಯಾಗುವ ಹಲವು ವೇದಿಕೆಗಳ ಪೈಕಿ ಹೀಗೊಂದು ಗ್ರೂಪ್. 

ಕಾಂಗ್ರೆಸ್ ಪಕ್ಷದಷ್ಟು ವ್ಯವಸ್ಥಿತವಾಗಿಲ್ಲದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಭಾವ ಬೀರುವಲ್ಲಿ ಜೆಡಿಎಸ್‌ ಕೂಡ ಹಿಂದೆ ಬಿದ್ದಿಲ್ಲ. ಎಚ್. ಡಿ. ಕುಮಾರಸ್ವಾಮಿ ಜೆಡಿಎಸ್‌ ಪ್ರಚಾರಕ್ಕೆ ಇಲ್ಲಿ ಬಳಕೆಯಾಗುತ್ತಿರುವ ಬ್ರಾಂಡ್‌ ಅಂಬಾಸಿಡರ್. ಅವರ ಹೆಸರಿನಲ್ಲಿಯೇ ಹಲವು ಗ್ರೂಪ್‌ಗಳು ಫೇಸ್‌ಬುಕ್‌ನಲ್ಲಿವೆ. ಜೆಡಿಎಸ್‌ ಹೆಸರಿನಲ್ಲಿರುವ ಪೇಜ್‌ಗಳು ಕೂಡ ಕ್ರೀಯಾಶೀಲವಾಗಿವೆ.

ಬಿಜೆಪಿ ಪಕ್ಷಕ್ಕೆ ಮಾಹಿತಿ ಮತ್ತು ತಂತ್ರಜ್ಞಾನದ ವಿಚಾರದಲ್ಲಿ ಉಳಿದ ಪಕ್ಷಗಳಿಗೆ ಹೋಲಿಸಿದರೆ ಹೆಚ್ಚು ಅನುಭವ ಇದೆ. ಆದರೆ ಸುಳ್ಳು ಮಾಹಿತಿಗಳ ಕಾರಣಕ್ಕೆ ಬಿಜೆಪಿಯ ಸಾಮಾಜಿಕ ಜಾಲತಾಣ ಪ್ರಚಾರ ತನ್ನ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಅದರ ಪರಿಣಾಮ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಢಾಳಾಗಿ ಕಾಣಿಸುತ್ತಿದೆ.

ಎಮೋಷನ್‌ಗೆ ಹೆಚ್ಚು ಒತ್ತು ನೀಡುವ ಬಿಜೆಪಿ ಪ್ರಚಾರದ ವೈಖರಿಗೆ ಇದೊಂದು ಉದಾಹರಣೆ. 
ಎಮೋಷನ್‌ಗೆ ಹೆಚ್ಚು ಒತ್ತು ನೀಡುವ ಬಿಜೆಪಿ ಪ್ರಚಾರದ ವೈಖರಿಗೆ ಇದೊಂದು ಉದಾಹರಣೆ. 

“ಬಿಜೆಪಿ ಪ್ರಚಾರ ವೈಖರಿ ಸಿದ್ಧಮಾದರಿ ಅಂತ ಅನ್ನಿಸುತ್ತದೆ. ಅವರು ಹೇಗೆ ರಿಯಾಕ್ಟ್ ಮಾಡುತ್ತಾರೆ ಎಂಬುದನ್ನು ನಾವು ಮೊದಲೇ ಊಹಿಸಿಕೊಳ್ಳಬಹುದು. ನಮಗೆ ಕಾಂಗ್ರೆಸ್ ಮತ್ತು ಬಿಜೆಪಿ ಇಬ್ಬರೂ ಟಾರ್ಗೆಟ್‌ಗಳೇ. ಅದರ ಜತೆಗೆ ಬಂಡಾಯ ಎದ್ದು ಪಕ್ಷದಿಂದ ಹೊರಹೋದವರೂ ನಮ್ಮ ಟಾರ್ಗೆಟ್‌ನಲ್ಲಿದ್ದಾರೆ. ಕುಮಾರಸ್ವಾಮಿ ಅವರ ಬಗೆಗೆ ಅಭಿಮಾನ ಹೊಂದಿರುವ ಸಾವಿರಾರು ಜನ ನಮ್ಮ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ಹೀಗಾಗಿ ರಾಷ್ಟ್ರೀಯ ಪಕ್ಷಗಳ ಸಾಮಾಜಿಕ ಜಾಲತಾಣಗಳ ಪ್ರಚಾರ ಭರಾಟೆ ನಡುವೆಯೂ ನಾವು ದೊಡ್ಡ ವರ್ಗವನ್ನು ಸೆಳೆಯಲು ಸಾಧ್ಯವಾಗಿದೆ,’’ ಎನ್ನುತ್ತಾರೆ ಜೆಡಿಎಸ್‌ ಪಕ್ಷದ ಟೆಕ್‌ ಸ್ವಯಂಸೇವಕರೊಬ್ಬರು.

ಬದಲಾದ ಕಂಟೆಂಟ್:

ಮತ ಚಲಾವಣೆಗೆ ವಾರ ಇದೆ ಎನ್ನುವಾಗ ಕಾಂಗ್ರೆಸ್ ತನ್ನ ಪ್ರಚಾರದ ವೈಖರಿಯನ್ನು ಬದಲಿಸಿಕೊಂಡಿದೆ. “ನಾವು ಹೆಚ್ಚು ಜೆಡಿಎಸ್‌ ವಿರುದ್ಧ ಪ್ರಚಾರ ಮಾಡಲಿಲ್ಲ. ಬದಲಿಗೆ ಸಿದ್ದರಾಮಯ್ಯ ಸರಕಾರದ ಸಾಧನೆಯ ಅಂಕಿ ಅಂಶಗಳನ್ನು ನೀಡುತ್ತ ಬಂದೆವು. ಅದರ ಜತೆಗೆ ಬಿಜೆಪಿ ಸುಳ್ಳುಗಳನ್ನು ಜನರ ಮುಂದಿಟ್ಟೆವು. ಈಗ ಮುಂದಿನ ಐದು ದಿನ ಫನ್‌ಗೆ ಹೆಚ್ಚು ಒತ್ತುಕೊಟ್ಟಿದ್ದೇವೆ,’’ ಎನ್ನುತ್ತಾರೆ ಕಾಂಗ್ರೆಸ್ ಐಟಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರು.

ಜೋಕರ್ಸ್‌ ಆಫ್‌ ಬಿಜೆಪಿ ಹೆಸರಿನ ಪೇಜ್‌. 
ಜೋಕರ್ಸ್‌ ಆಫ್‌ ಬಿಜೆಪಿ ಹೆಸರಿನ ಪೇಜ್‌. 

ಇದರ ಜತೆಗೆ, ಕಳೆದ ಮೂರ್ನಾಲ್ಕು ತಿಂಗಳುಗಳ ಅಂತರದಲ್ಲಿ ಜನರಿಂದ ಬರುವ ಪ್ರತಿಕ್ರಿಯೆಗಳನ್ನೂ ಅವರು ಗಮನಿಸಿದ್ದಾರೆ. “ಹೆಚ್ಚು ಗಂಭೀರ ವಿಷಯಗಳನ್ನು ಪೋಸ್ಟ್‌ ಮಾಡುವುದಕ್ಕಿಂತ ತಮಾಷೆಯಾಗಿ ವಿಚಾರ ಮುಂದಿಟ್ಟರೆ ಹೆಚ್ಚು ಜನರನ್ನು ನಾವು ತಲುಪುತ್ತೇವೆ. ಜೋಕರ್ಸ್‌ ಆಫ್‌ ಬಿಜೆಪಿಯಂತ ಪೇಜ್‌ ಹೆಚ್ಚು ಜನರನ್ನು ತಲುಪುತ್ತದೆ. ಹೀಗಾಗಿ ಮುಂದಿನ ಐದು ದಿನ ಫನ್‌ ಪೋಸ್ಟ್ಗಳನ್ನು ನೀವು ನಿರೀಕ್ಷಿಸಿ,’’ ಎನ್ನುತ್ತಾರೆ ಅವರು.

ಹೀಗೆ, ವರ್ಚುವಲ್‌ ಆದ ಯುದ್ದವೊಂದು ಮೂರು ಪ್ರಮುಖ ಪಕ್ಷಗಳಿಂದ ಜಾರಿಯಲ್ಲಿದೆ. ಇದು ಚುನಾವಣೆ ನಂತರವೂ ಮುಂದುವರಿಯುತ್ತದೆ ಎಂಬುದರ ಬಗ್ಗೆ ಖಾತ್ರಿ ಇಲ್ಲ. “ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇದೇ ತಂಡವನ್ನು ಮುಂದಿನ ಲೋಕಸಭಾ ಚುನಾವಣೆವರೆಗೆ ಉಳಿಸಿಕೊಳ್ಳಬಹುದು. ಇಲ್ಲವಾದರೆ ನಾವು ಕೆಲಸ ಬಿಡಬೇಕಾಗಿ ಬರಬಹುದು,’’ ಎಂಬುದು ಕಾಂಗ್ರೆಸ್ ಐಟಿ ಸದಸ್ಯರೊಬ್ಬರ ಮಾತುಗಳು.

ಮುಂದಿನ ದಿನಗಳಲ್ಲಿ ರಾಜಕೀಯ ಪ್ರಚಾರದ ಭರಾಟೆ ಸಾಮಾಜಿಕ ಜಾಲತಾಣಗಳಲ್ಲಿ ಕಡಿಮೆಯಾಗುವ ಸೂಚನೆಗಳಿವು. ಆದರೆ, ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ದೊಡ್ಡ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನದ ಸಂವಹನ ಪ್ರಕ್ರಿಯೆಗೆ ಎಲ್ಲಾ ಪಕ್ಷಗಳು ಒತ್ತು ನೀಡಿವೆ. ಅದರ ಫಲಾಫಲವನ್ನು ಫಲಿತಾಂಶವೇ ಹೇಳಬೇಕಿದೆ.