samachara
www.samachara.com
ಹತ್ತರಲ್ಲಿ ಮತ್ತೊಂದು ಚುನಾವಣೆ; ಎಲ್ಲ ಊರ ಮೈಕುಗಳಲ್ಲೂ ಒಂದೇ ಮಾತು!
COVER STORY

ಹತ್ತರಲ್ಲಿ ಮತ್ತೊಂದು ಚುನಾವಣೆ; ಎಲ್ಲ ಊರ ಮೈಕುಗಳಲ್ಲೂ ಒಂದೇ ಮಾತು!

ರಾಜ್ಯ ಚುನಾವಣೆಗೆ ದಿನಗಣನೆ ಶುರುವಾಗಿರುವ ಹೊತ್ತಲ್ಲಿ ಪಕ್ಷಗಳ ಪ್ರಚಾರ ಸಭೆಗಳ ಅಬ್ಬರವೂ ಜೋರಾಗಿದೆ. ಆದರೆ, ಯಾವ ಪಕ್ಷಗಳ ಮುಖಂಡರೂ ಗಂಭೀರವಾದ ವಿಚಾರಗಳನ್ನೇನೂ ಜನರ ಮುಂದಿಡುತ್ತಿಲ್ಲ, ಏಕೆ?

‘ಪ್ರಜಾತಂತ್ರದ ಹಬ್ಬ’ ಎಂದು ಕರೆಯಲಾಗುವ ಚುನಾವಣೆಗೆ ದಿನಗಣನೆ ಶುರುವಾಗಿದೆ. ಕರ್ನಾಟಕ ವಿಧಾನಸಭೆಗೆ ನಡೆಯುವ ಚುನಾವಣೆಗೆ ಇನ್ನು ಕೆಲವೇ ದಿನಗಳು ಉಳಿದಿವೆ. ಒಂದು ಕಡೆಗೆ ಅಭ್ಯರ್ಥಿಗಳ ಫೋಟೊ, ‘ಸಾಧನೆ’ಗಳ ಪಟ್ಟಿ ಹೊತ್ತ ವಾಹನಗಳು, ‘ನಿಮ್ಮ ಮತ ಯಾರಿಗೆ?’ ಎಂದು ಸದ್ದು ಮಾಡುತ್ತಿವೆ.

ಮತ್ತೊಂದು ಕಡೆಗೆ ದೊಡ್ಡ ಪಕ್ಷಗಳ ‘ದೊಡ್ಡ ದೊಡ್ಡ’ ಮುಖಂಡರು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ದೊಡ್ಡ ಸಮಾವೇಶಗಳನ್ನು ನಡೆಸಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾ ಇತರೆ ಪಕ್ಷಗಳ ಮುಖಂಡರನ್ನು ಲೇವಡಿ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ, ಈ ದೊಡ್ಡ ಸಮಾವೇಶಗಳಲ್ಲಿ, ಪಕ್ಷಗಳ ದೊಡ್ಡ ಮುಖಂಡರ ಮಾತುಗಳಲ್ಲಿ ‘ದೊಡ್ಡದು’ ಅನಿಸುವಂಥದ್ದು ಮಾತ್ರ ಏನೂ ಕಾಣುತ್ತಿಲ್ಲ.

ಬಿಜೆಪಿಯನ್ನು ಗೆಲ್ಲಿಸುವ ಚಾಣಕ್ಯ ಎನಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಕರ್ನಾಟಕದ ರಾಜಕೀಯದ ನಾಡಿ ಮಿಡಿತ ಅರ್ಥವಾದಂತೆ ಕಾಣುತ್ತಿಲ್ಲ. ಈ ಹಿಂದೆ ರಾಜ್ಯಕ್ಕೆ ಬಂದು ಹೋಗಿರುವ ಅಮಿತ್‌ ಶಾ ಮೋಡಿ ಕರ್ನಾಟಕದಲ್ಲಿ ಹೊರನೋಟಕ್ಕೇನೂ ಕಾಣುತ್ತಿಲ್ಲ. ಹೀಗಾಗಿ ಬಿಜೆಪಿ ತನ್ನ ಅತ್ಯುನ್ನತ ನಾಯಕ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರ್ನಾಟಕದ ಚುನಾವಣಾ ವೇದಿಕೆಗೆ ಕರೆತಂದಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ಸಮಾವೇಶದಲ್ಲಿ ಮಾತನಾಡುತ್ತಿರುವ ಮೋದಿ ಮಾತು ಕೂಡಾ ಇಲ್ಲಿ ಮೋಡಿ ಮಾಡಿದಂತಿಲ್ಲ.

ರಾಜ್ಯದಲ್ಲಿರುವುದು ಸಿದ್ದಾ ರುಪಾಯ್ಯ ಸರಕಾರ. ಕರ್ನಾಟಕವನ್ನು ಕಾಂಗ್ರೆಸ್‌ ಸಾಲದಲ್ಲಿ ಮುಳುಗಿಸಿದೆ. ಸಚಿವರ ಖಜಾನೆ ಮಾತ್ರ ಭರ್ತಿಯಾಗುತ್ತಿದೆ. ಜನ ಅದರ ಒಂದೊಂದು ಪೈಸೆಯ ಲೆಕ್ಕವನ್ನೂ ಕೇಳಬೇಕು.
- ನರೇಂದ್ರ ಮೋದಿ, ಪ್ರಧಾನಮಂತ್ರಿ

ಇನ್ನೊಂದೆಡೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಬಿಜೆಪಿ ಪ್ರಶ್ನೆಗಳಿಗೆ ಕಾಂಗ್ರೆಸ್‌ನ ಉತ್ತರ ಎಂಬಂತೆ ಮಾತನಾಡುತ್ತಿದ್ದಾರೆಯೇ ಹೊರತು ಬಿಜೆಪಿ ವಿರುದ್ಧ, ಬಿಜೆಪಿಯಲ್ಲಿದ್ದವರ ವಿರುದ್ಧ ಹಾಗೂ ಬಿಜೆಪಿಯಲ್ಲಿರುವವರ ಭ್ರಷ್ಟಾಚಾರದ ಬಗ್ಗೆ ದೊಡ್ಡ ದನಿ ಎತ್ತುತ್ತಿಲ್ಲ. ಮೋದಿ ಲೇವಡಿಗೆ ಪ್ರತಿ ಲೇವಡಿ, ಮೋದಿ ಆರೋಪಕ್ಕೆ ಪ್ರತ್ಯಾರೋಪ ಎಂಬಂತಿದೆ ರಾಹುಲ್‌ ಭಾಷಣ.

ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳ ಅತ್ಯುನ್ನತ ಸ್ಥಾನದಲ್ಲಿರುವವರು ರಾಜ್ಯದಲ್ಲಿ ಚುನಾವಣಾ ಸಮಾವೇಶಗಳಲ್ಲಿ ಮಾತನಾಡುತ್ತಿದ್ದರೂ ಎದುರಾಳಿ ಪಕ್ಷಗಳ ಹೇಳಿಕೊಳ್ಳುವಂಥ ಹುಳುಕುಗಳನ್ನು ಈವರೆಗೆ ಯಾರೂ ಹೊರತೆಗೆದಿಲ್ಲ. ಕೇವಲ ವೈಯಕ್ತಿಕ ಮಟ್ಟದ ಏಟು- ಎದುರೇಟಿನಂಥ ಮಾತುಗಳೇ ದೊಡ್ಡ ವೇದಿಕೆಗಳಿಂದಲೂ ಕೇಳಿಬರುತ್ತಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ವೈಯಕ್ತಿಕವಾಗಿ ಟೀಕೆ ಮಾಡುತ್ತಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಇತಿಹಾಸವನ್ನು ತಿರುಚುತ್ತಿವೆ.
- ರಾಹುಲ್‌ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

ಇತರೆ ಪಕ್ಷಗಳ ಭ್ರಷ್ಟಾಚಾರಗಳನ್ನು ಹೊರಗೆಳೆಯುವ, ಭ್ರಷ್ಟಾಚಾರ ಹಗರಣಗಳನ್ನು ಜನರ ಮುಂದಿಡುವ, ಪ್ರಜಾತಂತ್ರದ ಹಬ್ಬದಲ್ಲಿ ಪ್ರಜೆಗಳ ಕಣ್ಣು ತೆರೆಸುವಂಥ ಯಾವುದನ್ನೂ ಯಾವ ಪಕ್ಷದ ಯಾವ ನಾಯಕರೂ ಮಾಡುತ್ತಿಲ್ಲ. ಒಬ್ಬ ಮುಖಂಡನ ಆರೋಪಕ್ಕೆ ಕೌಂಟರ್‌ ಕೊಡುವಂಥ ಸಾಮಾನ್ಯ ಭಾಷಣಗಳೇ ರಾಜ್ಯ ಚುನಾವಣೆಯ ಸಂದರ್ಭದಲ್ಲೂ ಕೇಳಿ ಬರುತ್ತಿವೆಯೇ ಹೊರತು ವಿಶೇಷವಾದದ್ದೇನೂ ಈ ಮುಖಂಡರ ಭಾಷಣಗಳು ತೋರಿಸುತ್ತಿಲ್ಲ.

ಪ್ರತಿ ಐದು ವರ್ಷಕ್ಕೆ ಬರುವ ಚುನಾವಣೆಯಂತೆ ಇದೂ ಒಂದು ಚುನಾವಣೆಯಂತೆ ಜನ ಸಾಮಾನ್ಯರಿಗೆ ಭಾಸವಾಗಲು ಇಷ್ಟು ಸಾಕೆನಿಸುತ್ತದೆ. 200ರಿಂದ 300 ರೂಪಾಯಿ ಹಣ ಪಡೆದು ಸಮಾವೇಶಕ್ಕೆ ಬರುವ ‘ಬಾಡಿಗೆ ಕಾರ್ಯಕರ್ತ’ರಿಗೂ ವೇದಿಕೆಯ ದೊಡ್ಡ ಮುಖಂಡರ ಭಾಷಣಗಳು ಬಾಯಿ ಪಾಠವಾಗುವಂತಿವೆ.

ರೈತರ ಬಗ್ಗೆ ಭಾಷಣ ಮಾಡುವುದು ಕಾಂಗ್ರೆಸ್‌ನವರಿಗೆ ಫ್ಯಾಷನ್‌ ಆಗಿದೆ. ಕಾಂಗ್ರೆಸ್‌ನವರು ರೈತರ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
- ನರೇಂದ್ರ ಮೋದಿ, ಪ್ರಧಾನಮಂತ್ರಿ

ಅವೇ ಮಾತುಗಳು, ಅದೇ ಲೇವಡಿಗಳು ಪಕ್ಷಗಳ ಮುಖಂಡರ ಬಾಯಿಗಳಿಂದ ಹೊರಬರುತ್ತಿವೆ. ದಿನದಿನಕ್ಕೆ ಬದಲಾಗುತ್ತಿರುವುದು ವೇದಿಕೆಗಳೇ ಹೊರತು ಮಾತುಗಳಲ್ಲ ಎಂಬ ಪರಿಸ್ಥಿತಿ ಸದ್ಯ ಕರ್ನಾಟಕ ಚುನಾವಣಾ ಸಂದರ್ಭದಲ್ಲಿ ಕಾಣುತ್ತಿದೆ.

ಸಿದ್ದರಾಮಯ್ಯ ಸರಕಾರವನ್ನು 10 ಪರ್ಸೆಂಟ್‌ ಕಮಿಷನ್‌ ಸರಕಾರ ಎಂದು ಕರೆದಿದ್ದ ಮೋದಿ ಈವರೆಗೂ ಆ ಹತ್ತು ಪರ್ಸೆಂಟ್‌ ಕಮಿಷನ್‌ನ ಒಳಗುಟ್ಟೇನು ಎಂಬುದನ್ನು ಜನರ ಮುಂದೆ ಹೇಳುತ್ತಿಲ್ಲ. ಚುನಾವಣಾ ಪ್ರಚಾರ ಸಭೆಗಳಲ್ಲೂ ಕಾಂಗ್ರೆಸ್‌ ಸರಕಾರದ ಅವಧಿಯ ಹಗರಣಗಳ ಬಗ್ಗೆ ಬಿಜೆಪಿ ಗಟ್ಟಿಯಾಗಿ ಮಾತನಾಡುತ್ತಿಲ್ಲ.

ಇನ್ನು ಕಾಂಗ್ರೆಸ್‌ ಸರಕಾರ ಕೂಡಾ ಬಳ್ಳಾರಿ ರೆಡ್ಡಿ ಸೋದರರ ವಿರುದ್ಧದ ಗಣಿ ಹಗರಣಗಳಲ್ಲಿ ‘ಸೌಮ್ಯ’ವಾಗಿ ನಡೆದುಕೊಂಡಿರುವುದನ್ನು ನಾಡಿನ ಜನತೆ ನೋಡಿದ್ದಾರೆ. ಬಿಜೆಪಿ ಸರಕಾರದ ಅವಧಿಯನ್ನು ನಡೆದ ಭ್ರಷ್ಟಾಚಾರಗಳ ಜಾಡು ಹಿಡಿದು ಅದನ್ನು ಜನರ ಮುಂದಿಡುವ ಕೆಲಸವನ್ನು ಇತ್ತ ಕಾಂಗ್ರೆಸ್‌ ಕೂಡಾ ಮಾಡುತ್ತಿಲ್ಲ.

ನುಡಿದಂತೆ ನಡೆಯಲು ಮೋದಿ ಅವರಿಗೆ ಸಾಧ್ಯವೇ? ಮೋದಿ ಅವರ ಪಕ್ಕ ಯಡಿಯೂರಪ್ಪ ಮತ್ತು ಜೈಲಿಗೆ ಹೋಗಿಬಂದ ನಾಲ್ವರು ಮಾಜಿ ಸಚಿವರು ನಿಲ್ಲುತ್ತಾರೆ.
- ರಾಹುಲ್‌ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

ಈ ಬಾರಿ ಪೂರ್ಣ ಬಹುಮತ ಬರದಿದ್ದರೂ ಕಿಂಗ್‌ ಮೇಕರ್‌ ಆಗುವ ಕನಸು ಕಾಣುತ್ತಿರುವ ಜೆಡಿಎಸ್‌ ಕೂಡಾ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಗಂಭೀರವಾದ ಮಾತುಗಳನ್ನು ಆಡುತ್ತಿಲ್ಲ. ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವಕಾಶ ಸಿಕ್ಕಲ್ಲೆಲ್ಲಾ ಯಾರು ಯಾರು ತಮಗೆ ‘ಅನ್ಯಾಯ’ ಮಾಡಿದ್ದಾರೆ ಎಂದು ಪಕ್ಷ ತೊರೆದವರ ಬಗ್ಗೆ ಮಾತನಾಡುತ್ತಿದ್ದಾರೆಯೇ ಹೊರತು ಅವರೂ ಕೂಡಾ ಉಳಿದ ಎರಡೂ ದೊಡ್ಡ ಪಕ್ಷಗಳ ಬಗ್ಗೆ ಗಂಭೀರವಾದ ‘ಸತ್ಯ’ಗಳನ್ನು ಹೊರಹಾಕುತ್ತಿಲ್ಲ.

ಇದೆಲ್ಲವನ್ನೂ ನೋಡಿದರೆ 2018ರ ಕರ್ನಾಟಕ ವಿಧಾನಸಭಾ ಚುನಾವಣೆ ಕೂಡಾ ಹತ್ತು ಚುನಾವಣೆಗಳಲ್ಲಿ ಮತ್ತೊಂದರಂತೆ ಕಾಣುತ್ತಿದೆ. ರಾಜಕೀಯದ ಬಗ್ಗೆ, ಚುನಾವಣಾ ವ್ಯವಸ್ಥೆಯ ಬಗ್ಗೆ ಜನಸಾಮಾನ್ಯ ಆಸಕ್ತಿ ಕಳೆದುಕೊಳ್ಳುತ್ತಿರುವುದಕ್ಕೆ; ಯಾರು ಎಷ್ಟು ದುಡ್ಡು ಕೊಟ್ಟರೂ ಪಡೆದು ಯಾರೋ ಒಬ್ಬರಿಗೆ ಮತ ಹಾಕಲು ಸಿದ್ಧವಾಗುತ್ತಿರುವುದಕ್ಕೆ ಸುಧಾರಣೆ ಕಾಣದ ಈ ಚುನಾವಣಾ ವ್ಯವಸ್ಥೆಯೇ ಕಾರಣ ಎನಿಸುತ್ತದೆ.

‘ನಿನ್ನ ಗುಟ್ಟು ನಾನು ಹೇಳುವುದಿಲ್ಲ, ನನ್ನ ಗುಟ್ಟು ನೀನು ಹೇಳಬೇಡ’ ಎಂಬಂಥ ಕಳ್ಳರಕೂಟದ ಮಾದರಿಯ ರಾಜಕಾರಣಿಗಳಿಂದ ಅದೇ ಹಳೆಯ ಮಾದರಿಯ ಚುನಾವಣೆಯನ್ನು ಜನ ಸಹಿಸಿಕೊಳ್ಳಬೇಕಾದ ಸ್ಥಿತಿ ಇಂದು ನಿರ್ಮಾಣವಾಗಿದೆ. ಜಗತ್ತಿನ ಮಾದರಿ ಪ್ರಜಾಪ್ರಭುತ್ವ ರಾಷ್ಟ್ರ ಎನಿಸಿರುವ ಭಾರತದ ಚುನಾವಣಾ ವ್ಯವಸ್ಥೆಯ ದುರಂತ ಇದು.