‘ಕತ್ತೆ ರಾಷ್ಟ್ರೀಯ ಪ್ರಾಣಿ, ಎಮ್ಮೆಗಳ ಅಭಿವೃದ್ಧಿ, ಜನರಿಗೆ ಹೆಲಿಕಾಪ್ಟರ್’: ಇದು ಒನ್‌ ಅಂಡ್ ಓನ್ಲಿ ವಾಟಾಳ್ ಪ್ರಣಾಳಿಕೆ!
COVER STORY

‘ಕತ್ತೆ ರಾಷ್ಟ್ರೀಯ ಪ್ರಾಣಿ, ಎಮ್ಮೆಗಳ ಅಭಿವೃದ್ಧಿ, ಜನರಿಗೆ ಹೆಲಿಕಾಪ್ಟರ್’: ಇದು ಒನ್‌ ಅಂಡ್ ಓನ್ಲಿ ವಾಟಾಳ್ ಪ್ರಣಾಳಿಕೆ!

ರಣ ಗಂಭೀರ ರಾಜಕೀಯ ವಾತಾವರಣದಲ್ಲಿ ನಗು ಮೂಡಿಸಿದ್ದಾರೆ ವಾಟಾಳ್. ಸೀರಿಯಸ್ ಆದ ಎಲೆಕ್ಷನ್ ಸುದ್ದಿಗಳನ್ನು ಓದಿ ಬೇಜಾರಾದವರು ವಾಟಾಳ್ ಪ್ರಣಾಳಿಕೆಯ ಈ ವಿವರಗಳ ಮೇಲೆ ಒಮ್ಮೆ ಕಣ್ಣಾಡಿಸಿ ಕೊಂಚ ರಿಲ್ಯಾಕ್ಸ್‌ ಆಗಬಹುದು. 

ವಾಟಾಳ್‌ ನಾಗರಾಜ್‌ – ತಮ್ಮ ವಿನೂತನ ಹಾಗೂ ವಿಚಿತ್ರ ಪ್ರತಿಭಟನೆ, ಮ್ಯಾನರಿಸಂಗಳಿಂದಲೇ ಕರ್ನಾಟಕದ ಮನೆ ಮನಗಳಿಗೆ ತಲುಪಿದವರು. ಈಗ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿರುವ ವಾಟಾಳ್‌ ನಾಗರಾಜ್‌ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದ್ದಾರೆ. ವಿಚಿತ್ರವೆನಿಸುವ ಭರವಸೆಗಳನ್ನು ಜನತೆಗೆ ನೀಡಿ, ರಣ ಗಂಭೀರ ರಾಜಕೀಯ ವಾತಾವರಣದಲ್ಲಿ ನಗು ಮೂಡಿಸಿದ್ದಾರೆ. ಸೀರಿಯಸ್ ಆದ ಎಲೆಕ್ಷನ್ ಸುದ್ದಿಗಳನ್ನು ಓದಿ ಬೇಜಾರಾದವರು ವಾಟಾಳ್ ಪ್ರಣಾಳಿಕೆಯ ಈ ವಿವರಗಳ ಮೇಲೆ ಒಮ್ಮೆ ಕಣ್ಣಾಡಿಸಿ ಕೊಂಚ ರಿಲ್ಯಾಕ್ಸ್‌ ಆಗಬಹುದು. 

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕನ್ನಡ ಚಳುವಳಿ ವಾಟಾಳ್‌ ಪಕ್ಷದಿಂದ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾಗಿರುವ ವಾಟಾಳ್‌ ನಾಗರಾಜ್‌ ಬುಧವಾರ ನಗರದ ವುಡ್‌ಲ್ಯಾಂಡ್‌ ಹೋಟೆಲ್‌ನಲ್ಲಿ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ.

ಪ್ರಣಾಳಿಕೆಯಲ್ಲಿ ಪ್ರೇಮಿಗಳಿಗೆ ಭರ್ಜರಿ ಯೋಜನೆಗಳನ್ನು ವಾಟಾಳ್‌ ನಾಗರಾಜ್‌ ಘೋಷಿಸಿದ್ದಾರೆ. ಫೆಬ್ರವರಿ 14ರ ಪ್ರೇಮಿಗಳ ದಿನದಂದು ಸರಕಾರಿ ರಜೆಯನ್ನು ಘೋಷಿಸುವುದಾಗಿ ಭರವಸೆ ನೀಡಿದ್ದಾರೆ. ಜತೆಗೆ ಪ್ರೇಮ ವಿವಾಹಕ್ಕೆ 50, 000 ರೂಪಾಯಿಗಳ ಸಹಾಯಧನವನ್ನು ದೊರೆಯುವಂತೆ ಮಾಡಲು ಹೋರಾಡುವುದಾಗಿ ತಿಳಿಸಿದ್ದಾರೆ.

ಬಡ ಮತ್ತು ಮಧ್ಯಮ ವರ್ಗದ ಜನತೆಯ ಖರ್ಚಿನ ಹೊರೆಯನ್ನು ತಗ್ಗಿಸಲು ವಾಟಾಳ್‌ ನಾಗರಾಜ್‌ ಮುಂದಾಗಿದ್ದಾರೆ. ಅದಕ್ಕಾಗಿ ಉಚಿತ ಹೇರ್‌ ಕಟಿಂಗ್‌ ಮತ್ತು ಶೇವಿಂಗ್‌ ಭಾಗ್ಯವನ್ನು ಜನರ ಮುಂದಿಟ್ಟಿದ್ದಾರೆ. ಈ ಮೂಲಕ ಬಡ ಮತ್ತು ಮಧ್ಯಮ ವರ್ಗದ ಗಂಡು ಹೈಕಳ ಖರ್ಚನ್ನು ವಾಟಾಳ್‌ ನಾಗರಾಜ್‌ ಕಡಿಮೆ ಮಾಡುವ ಭರವಸೆ ನೀಡಿದ್ದಾರೆ.

ಪ್ರಾಣಿಗಳನ್ನು ಕರೆ ತಂದು ಹೋರಾಟ ನಡೆಸುವುದು ವಾಟಾಳ್‌ ನಾಗರಾಜ್‌ರ ಸಾಮಾನ್ಯ ಗುಣಗಳಲ್ಲಿ ಒಂದು. ಈಗ ಆ ಪ್ರಾಣಿಗಳ ಅಭ್ಯುಧಯಕ್ಕಾಗಿ ಮಂಡಳಿಗಳನ್ನು ರಚಿಸುವ ಭರವಸೆಯನ್ನು ವಾಟಾಳ್‌ ಈಗ ಪ್ರಣಾಳಿಕೆಯಲ್ಲಿ ನೀಡಿದ್ದಾರೆ. ಕತ್ತೆಯನ್ನು ‘ಧರ್ಮ ದೇವತೆ’ ಎಂದು ಕರೆದಿರುವ ವಾಟಾಳ್‌ ನಾಗರಾಜ್‌, ಕತ್ತೆಗಳ ಕ್ಷೇಮಾಭಿವೃದ್ಧಿಗೆ ವಿಶೇಷ ಮಂಡಳಿಯನ್ನು ಸ್ಥಾಪಿಸಲಿದ್ದಾರೆ. ಜತೆಗೆ ಕತ್ತೆಗೆ ‘ರಾಷ್ಟ್ರೀಯ ಪ್ರಾಣಿ’ ಎಂಬ ಗೌರವವನ್ನು ಕಲ್ಪಿಸಲಿದ್ದಾರೆ.

ಎಮ್ಮೆಗಳ ಮೇಲೂ ವಾಟಾಳ್‌ ನಾಗರಾಜ್‌ ಪ್ರೀತಿ ಹರಿದಿದ್ದು, ವಾಟಾಳ್‌ ಗೆದ್ದಿದ್ದೇ ಆದಲ್ಲಿ ಎಮ್ಮೆಗಳ ಸಮಗ್ರ ಅಭಿವೃದ್ಧಿಗೆ ಮುಂದಾಗಲಿದ್ದಾರೆ. ಮಾನ್ಯತೆ ಕಳೆದುಕೊಂಡಿರುವ ಎಮ್ಮೆಗಳು ವಾಟಾಳ್‌ ಆಡಳಿತದಲ್ಲಿ ಹಲವಾರು ವಿಶೇಷ ಯೋಜನೆಗಳ ಫಲಾನುಭವಿಗಳಾಗಲಿವೆ.

ಎಮ್ಮೆ ಹಾಗೂ ಕತ್ತೆಗಳ ಸೌಖ್ಯ ಕಾಪಾಡಲು ಪಣ ತೊಟ್ಟಿರುವ ವಾಟಾಳ್‌ ನಾಗರಾಜ್‌ ಜನರನ್ನೇನೂ ಮರೆತಿಲ್ಲ. ಯಾವ ಸರಕಾರಗಳೂ ನೀಡದ ಹೆಲಿಕಾಫ್ಟರ್‌ ಭಾಗ್ಯವನ್ನು ಜನರ ಮುಂದಿಡಲಿದ್ದಾರೆ. ಐತಿಹಾಸಿಕ ನಗರ ಬೆಂಗಳೂರನ್ನು ನೋಡಲು ಇಚ್ಚಿಸಿರುವ ಜನರು ಹೆಲಿಕ್ಯಾಫ್ಟರ್‌ ಏರಿ ಬೆಂಗಳೂರು ಸುತ್ತಬಹುದು. ಈ ಭಾಗ್ಯ ಉಚಿತವಲ್ಲದಿದ್ದರೂ ಕಡಿಮೆ ಮೊತ್ತದ ಹಣವನ್ನು ಹೆಲಿಕ್ಯಾಫ್ಟರ್‌ ಭಾಗ್ಯದ ಫಲಾನುಭವಿಗಳು ಭರಿಸಬೇಕಿದೆ.

ಆರಂಭದಿಂದಲೂ ಕನ್ನಡ ಭಾಷೆ, ನೆಲ, ಜಲ, ರಂಗ ಭೂಮಿ, ಚಲನ ಚಿತ್ರ ವಲಯಗಳ ಬಗ್ಗೆ ಹಲವಾರು ಹೋರಾಟಗಳನ್ನು ನಡೆಸಿಕೊಂಡು ಬಂದಿರುವ ವಾಟಾಳ್‌ ನಾಗರಾಜ್‌ ಅಧಿಕಾರಕ್ಕೇರಿದರೆ ಚಿತ್ರ ಮಂದಿರಗಳಲ್ಲಿ ಕನ್ನಡ ಚಲನಚಿತ್ರಗಳ ಪ್ರದರ್ಶನವನ್ನು ಕಡ್ಡಾಯಗೊಳಿಸಲಿದ್ದಾರೆ. ನೆರೆ ರಾಜ್ಯಗಳ ಚಿತ್ರ ಮಂದಿರಗಳಲ್ಲೂ ಕೂಡ ಕನ್ನಡ ಚಿತ್ರಗಳು ತೆರೆ ಕಾಣಲಿವೆ.

ರಾಜ್ಯದಲ್ಲಿ ತಲೆದೋರಿರುವ ನೀರಿನ ಬರವನ್ನು ವಾಟಾಳ್‌ ನಾಗರಾಜ್‌ ಮರೆತಿಲ್ಲ. ಅಧಿಕಾರ ದೊರೆತರೆ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆಯ ವಿರುದ್ಧ ಮತ್ತಷ್ಟು ಶಕ್ತಿಯುತವಾಗಿ ಹೋರಾಟ ನಡೆಸಲಿದ್ದಾರೆ. ಬಯಲು ಸೀಮೆ ಜನರ ದಶಕಗಳ ಬೇಡಿಕೆಯಾದ ಶಾಶ್ವತ ಕುಡಿಯುವ ನೀರಿನ ಯೋಜನೆಗಳನ್ನು ವಾಟಾಳ್‌ ನಾಗರಾಜ್‌ ಜಾರಿಗೆ ತರಲಿದ್ದಾರೆ. ಒಂದು ವೇಳೆ ವಾಟಾಳ್‌ ಮುಖ್ಯಮಂತ್ರಿ ಪಟ್ಟವನ್ನು ಅಲಂಕರಿಸಿದರೆ ಕಳಸಾ – ಬಂಡೂರಿ ನಾಲಾ ಯೋಜನೆಯೂ ಜಾರಿಗೆ ಬರಲಿದೆ.

ಆಡಳಿತದಲ್ಲಿ ಕನ್ನಡ ಭಾಷೆಯನ್ನು ಮುನ್ನೆಲೆಗೆ ತರುವಲ್ಲಿ ವಾಟಾಳ್‌ ನಾಗರಾಜ್‌ ಶ್ರಮಿಸಲಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಆದ್ಯತೆ ನೀಡಲಿದ್ದಾರೆ. ವಾಟಾಳ್ ಆಡಳಿತದಲ್ಲಿ ಹೊರನಾಡ ಕನ್ನಡಿಗರು ಹಲವಾರು ಪ್ರಾಮುಖ್ಯತೆ ಗಳಿಸಲಿದ್ದಾರೆ. ಕರ್ನಾಟಕದ ಗಡಿನಾಡುಗಳು ಅಭಿವೃದ್ಧಿಯಾಗಲಿವೆ. ಜತೆಗೆ ನೆರೆ ರಾಜ್ಯಗಳಲ್ಲಿ ಸೇರಿಕೊಂಡಿರುವ ಕನ್ನಡದ ಪ್ರದೇಶಗಳನ್ನು ಕರ್ನಾಟಕದೊಳಗೆ ಸೇರಿಸಲು ವಾಟಾಳ್‌ ನಾಗರಾಜ್‌ ಮುಂದಾಗಲಿದ್ದಾರೆ.

‘ಕತ್ತೆ ರಾಷ್ಟ್ರೀಯ ಪ್ರಾಣಿ, ಎಮ್ಮೆಗಳ ಅಭಿವೃದ್ಧಿ, ಜನರಿಗೆ ಹೆಲಿಕಾಪ್ಟರ್’: ಇದು ಒನ್‌ ಅಂಡ್ ಓನ್ಲಿ ವಾಟಾಳ್ ಪ್ರಣಾಳಿಕೆ!

ಗ್ರಾಮೀಣ ಪ್ರದೇಶಗಳ ಬದಲು ಗ್ರಾಮೀಣ ಪ್ರದೇಶಗಳಲ್ಲಿನ ದೇವಸ್ಥಾನಗಳ ಅಭಿವೃದ್ಧಿಯ ಕಡೆಗೆ ವಾಟಾಳ್‌ ನಾಗರಾಜ್‌ ಗಮನ ಕೇಂದ್ರೀಕರಿಸಿದ್ದು, ವಾಟಾಳ್‌ ಗೆದ್ದರೆ, ಗ್ರಾಮಗಳಲ್ಲಿನ ದೇವಸ್ಥಾನಗಳ ಅರ್ಚಕರು ಹೆಚ್ಚಿನ ವೇತನವನ್ನು ಪಡೆಯಲಿದ್ದಾರೆ. ದೇವಸ್ಥಾನಗಳೂ ಕೂಡ ಅಭಿವೃದ್ಧಿಗೊಳ್ಳಲಿವೆ.

ಆಟೋ ರಿಕ್ಷಾ ಚಾಲಕರು ವಾಟಾಳ್‌ರನ್ನು ಗೆಲ್ಲಿಸಿದ್ದೇ ಆದಲ್ಲಿ ಉಚಿತ ಸಮವಸ್ತ್ರಗಳನ್ನು ಪಡೆಯಲಿದ್ದಾರೆ. ಜತೆಗೆ ರೈನ್‌ ಕೋಟ್‌ ಕೂಡ ದೊರೆಯಲಿದೆ. ಹೆಲ್ಮೆಟ್‌ ಕಡ್ಡಾಯದಿಂದ ಕಷ್ಟ ಅನುಭವಿಸುತ್ತಿರುವವವರಿಗೆ ಪೂರಕವಾಗಿ ಹೆಲ್ಮೆಟ್‌ ನಿಷೇಧ ಮಾಡುವುದಕ್ಕೆ ವಾಟಾಳ್‌ ನಾಗರಾಜ್‌ ಶ್ರಮಿಸಲಿದ್ದಾರೆ. ರಾಜ್ಯದಲ್ಲಿನ ಮಂಗಳ ಮುಖಿಯರು ವಾಟಾಳ್‌ ಆಡಳಿತ ಬಂದರೆ ಹಲವು ಯೋಜನೆಗಳ ಫಲಾನುಭವಿಗಳಾಗಲಿದ್ದಾರೆ. ಬೆಂಗಳೂರಿನ ಜನತೆಗೆ 20,000 ಹೊಸ ಸಾರ್ವಜನಿಕ ಟಾಯ್ಲೆಟ್‌ಗಳು ದೊರೆಯಲಿವೆ.

ಇದಿಷ್ಟೂ ಅಲ್ಲದೇ ತಾವು ಚುನಾವಣೆಗೆ ಸ್ಪರ್ಧಿಸಿರುವ ಚಾಮರಾಜನಗರ ವಿಧಾನ ಸಭಾ ಕ್ಷೇತ್ರದ ಜನರು ತನ್ನನ್ನು ಗೆಲ್ಲಿಸಿದ್ದೇ ಆದಲ್ಲಿ ಚಾಮರಾಜನಗರದ ಸಮಗ್ರ ಅಭಿವೃದ್ಧಿಗೆ ಮುಂದಾಗುವುದಾಗಿ ಭರವಸೆ ನೀಡಿದ್ದಾರೆ.

ಹಿಂದಿನಿಂದಲೂ ಚಾಮರಾಜನಗರ ಕಳಂಕವೊಂದನ್ನು ಹೊತ್ತುಕೊಂಡಿದೆ. ಚಾಮರಾಜನಗರಕ್ಕೆ ಹೋದವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆ ರಾಜಕೀಯ ವಲಯದಲ್ಲಿದೆ. ಮೇ 1ರ ಮಂಗಳವಾರದ ದಿನ ಪ್ರಧಾನಿ ಮೋದಿ ಚಾಮರಾಜನಗರ ಸಮೀಪದ ಸಂತೆಮರಹಳ್ಳಿಯಲ್ಲಿ ಚುನಾವಣಾ ಭಾಷಣ ನಡೆಸಿದ್ದಾರೆ. ಆದರೆ ಚಾಮರಾಜನಗರಕ್ಕೆ ಕಾಲಿಡದೆ ಹಾಗೆಯೇ ಹಿಂತಿರುಗಿದ್ದಾರೆ.

ಪ್ರಣಾಳಿಕೆ ಬಿಡುಗಡೆಯ ಜತೆಗೆ ಪ್ರಧಾನ ಮಂತ್ರಿ ಮೋದಿಯ ಈ ನಡೆಯನ್ನು ಟೀಕಿಸಿರುವ ವಾಟಾಳ್‌ ನಾಗರಾಜ್‌, ಮೋದಿ ಕೂಡ ಮೌಢ್ಯವನ್ನು ಬಿತ್ತುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಚಾಮರಾಜನಗರಕ್ಕೆ ಬರದೆ ಹಾಗೇ ಹೋಗಿರುವುದು ಮೌಢ್ಯವನ್ನು ಹೆಚ್ಚಿಸಿದಂತಾಗಿದೆ. ಇದು ಪ್ರಧಾನಿ ಮೋದಿ ಪ್ರಜಾಪ್ರಭುತ್ವಕ್ಕೆ ಮಾಡಿರುವ ಅವಮಾನ ಎಂದು ವಾಟಾಳ್‌ ನಾಗರಾಜ್‌ ದೂರಿದ್ದಾರೆ.

ವಾಟಾಳ್‌ ನಾಗರಾಜ್ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಮುಂದಿಟ್ಟಿದ್ದಾರೆ. ಯಾರೂ ಕೂಡ ಯೋಚಿಸಲಾಗದಂತಹ ಹಲವಾರು ವಿಶಿಷ್ಟ ಯೋಜನೆಗಳು ಈ ಪ್ರಣಾಳಿಕೆಯಲ್ಲಿವೆ. ತಮ್ಮ ಪ್ರಣಾಳಿಕೆಯನ್ನಿಡಿದು ವಾಟಾಳ್‌ ಚಾಮರಾಜನಗರ ಮತದಾರರ ಓಲೈಕೆಗೆ ಮುಂದಾಗಿದ್ದಾರೆ. ಇನ್ನು ವಾಟಾಳ್‌ ನಾಗರಾಜ್‌ರನ್ನು ಗೆಲ್ಲಿಸುವುದು ಅಥವಾ ಸೋಲಿಸುವುದು ಚಾಮರಾಜನಗರದ ಜನತೆಗೆ ಸೇರಿದ್ದು.

Also read: ‘ಕಾವೇರಿ ಕವರೇಜ್’: ಮುಖ್ಯಮಂತ್ರಿಗಳ ಆಪ್ತ; ಗೋಕಾಕ್ ಚಳವಳಿ ವಿರೋಧಿ ‘ವಾಚಾಳಿ ವಾಟಾಳ್’!