samachara
www.samachara.com
ಭರವಸೆಯ  ಸಂಕೇತವೆನಿಸಿದ್ದ ಭಾರತ ನ್ಯಾಯಾಂಗದ ಅಧೋಗತಿ ಸುತ್ತ...
COVER STORY

ಭರವಸೆಯ ಸಂಕೇತವೆನಿಸಿದ್ದ ಭಾರತ ನ್ಯಾಯಾಂಗದ ಅಧೋಗತಿ ಸುತ್ತ...

ನ್ಯಾಯಾಂಗ ತಮ್ಮ ರಕ್ಷಣೆಗೆ ಇದೆ ಎಂಬ ನಂಬಿಕೆ ಇದುವರೆಗೂ ಜನಸಾಮಾನ್ಯರಲ್ಲಿತ್ತು. ಆ ಭರವಸೆ ಜನಸಾಮಾನ್ಯರಿಗೆ ಎಷ್ಟೋ ಸಮಾಧಾನ ನೀಡಿತ್ತು. ಕೆಲವು ವರ್ಷಗಳಿಂದ ಆರಂಭವಾದ ಆ ನಂಬಿಕೆ ಹಾಗೂ ಸಮಾಧಾನಗಳ ಕುಸಿತ ಇಂದು ಪಾತಾಳದತ್ತ ಸಾಗುತ್ತಿದೆ.

ನಂದಕುಮಾರ್ ಕೆ. ಎನ್‌

ನಂದಕುಮಾರ್ ಕೆ. ಎನ್‌

ನ್ಯಾಯಾಧೀಶರುಗಳ ನೇಮಕಾತಿಗೆ ಶಿಫಾರಸು ಮಾಡುವ ಸರ್ವೋಚ್ಚ ನ್ಯಾಯಾಲಯದ ಕೊಲೆಜಿಯಂ ಬುಧವಾರ ಸಭೆ ಸೇರಿತ್ತು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್, ರಂಜನ್ ಗೊಗೋಯ್, ಮದನ್ ಬಿ. ಲೋಕೂರ್ ಮತ್ತು ಕುರಿಯನ್ ಜೋಸೆಫ್‍ರನ್ನು ಈ ಕೊಲೆಜಿಯಂ ಒಳಗೊಂಡಿತ್ತು.

ಈ ಸಭೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಕಗೊಳಿಸಿ ಕೊಲೆಜಿಯಂ ಮಾಡಿದ ತನ್ನ ಹಿಂದಿನ ಶಿಫಾರಸಿಗೆ ಬದ್ದತೆ ವ್ಯಕ್ತಪಡಿಸಿತು. ಸರ್ಕಾರ ಕೊಟ್ಟಿರುವ ಕಾರಣಗಳ ಬಗ್ಗೆ, ರಾಜ್ಯವಾರು ಪ್ರಾತಿನಿಧ್ಯದ ಕುರಿತು ವಿವರವಾದ ಪ್ರತಿಕ್ರಿಯೆಯನ್ನು ನೀಡುವ ಬಗ್ಗೆ ತೀರ್ಮಾನ ತೆಗೆದುಕೊಂಡಿತು.

ಅಲ್ಲದೇ ಇನ್ನೂ ಕೆಲವು ನ್ಯಾಯಾಧೀಶರುಗಳನ್ನು ಖಾಲಿಯಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳ ಹುದ್ದೆಗಳಿಗೆ ನೇಮಕಗೊಳಿಸಿ ಪ್ರಾದೇಶಿಕ ಪ್ರಾತಿನಿಧ್ಯ ವಿಷಯವನ್ನು ಸರಿಪಡಿಸುವ ನಿಟ್ಟಿನಲ್ಲಿ ತೀರ್ಮಾನಿಸಿತೆಂದು ಹೇಳಲಾಗಿದೆ. ಆದರೆ, ಅಧಿಕೃತ ಪ್ರಕಟಣೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ.

ಇದೇ ಜನವರಿ ಹತ್ತರಂದು ಕೊಲಿಜಿಯಂ ಶಿಫಾರಸ್ಸು ಮಾಡಿದ್ದ ಸರ್ವೊಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇಮಕಾತಿಯ ಪಟ್ಟಿಯಲ್ಲಿನ ಎರಡು ಹೆಸರುಗಳಲ್ಲಿ ಮಲ್ಲೋತ್ರ ಹೆಸರನ್ನು ಮಾತ್ರ ಸರ್ಕಾರ ಪುರಸ್ಕರಿಸಿತ್ತು. ಆ ಮೂಲಕ ಚರಿತ್ರೆಯಲ್ಲೇ ಪ್ರಥಮ ಬಾರಿಗೆ ಮಹಿಳಾ ನ್ಯಾಯವಾದಿಯೊಬ್ಬರನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ದೇಶ ನೋಡುವಂತಾಗಿತ್ತು. ಪಟ್ಟಿಯಲ್ಲಿದ್ದ ಮತ್ತೊಂದು ಹೆಸರು; ಕೆ. ಎಮ್. ಜೋಸೆಫ್‍ರ ನೇಮಕಾತಿಯನ್ನು ತಡೆಹಿಡಿಯಲಾಗಿತ್ತು.

ಕೇಂದ್ರ ಸರ್ಕಾರ ಒಂದೇ ರಾಜ್ಯದಿಂದ ಇಬ್ಬರು ನ್ಯಾಯಾಧೀಶರು ಸರ್ವೋಚ್ಚ ನ್ಯಾಯಾಲಯಕ್ಕೆ ನೇಮಕ ಮಾಡುವ ಅಗತ್ಯವೇನು ಎನ್ನುವ ಕಾರಣಗಳನ್ನು ನೀಡಿ ಕೊಲೆಜಿಯಂ ಶಿಫಾರಸನ್ನು ವಾಪಾಸು ಮಾಡಿತ್ತು. ಕೆ. ಎಮ್. ಜೋಸೆಫ್ ಕೇರಳ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದವರು.

ಈಗಾಗಲೇ ಕೇರಳದಿಂದ ಆಯ್ಕೆಯಾದ ನ್ಯಾಯಾಧೀಶರೊಬ್ಬರು ಸರ್ವೋಚ್ಚ ನ್ಯಾಯಾಲಯದಲ್ಲಿದ್ದಾರೆ. ಒಂದೇ ರಾಜ್ಯದಿಂದ ಇಬ್ಬರು ನ್ಯಾಯಾಧೀಶರುಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಇರುವುದಕ್ಕಿಂತ ಇತರ ರಾಜ್ಯಗಳನ್ನು ಪರಿಗಣಿಸುವುದು ಸೂಕ್ತವಲ್ಲವೆ ಎಂದು ಕೇಂದ್ರ ಸರ್ಕಾರ ಕೊಲೆಜಿಯಂಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಕೊಲಿಜಿಯಂಗೆ ಶಾಕ್‌:

ಜಸ್ಟಿಸ್ ಕೆ. ಎಂ. ಜೋಸೆಫ್. 
ಜಸ್ಟಿಸ್ ಕೆ. ಎಂ. ಜೋಸೆಫ್. 
Live Law

2016ರಲ್ಲಿ ಕೆ. ಎಮ್ ಜೋಸೆಫ್ ಜಾರ್ಖಂಡ್‌ನ ಮುಖ್ಯ ನ್ಯಾಯಾಧೀಶರಾಗಿದ್ದರು. ಆಗ ಜಾರ್ಖಂಡಿನಲ್ಲಿ ಮೋದಿ ಸರ್ಕಾರ ಹೇರಿದ್ದ ರಾಷ್ಟ್ರಪತಿ ಆಡಳಿತವನ್ನು ಅವರು ರದ್ದುಗೊಳಿಸಿದ್ದರು. ಇದೇ ಕಾರಣದಿಂದಾಗಿಯೇ ಈಗ ಅವರ ಹೆಸರನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ಪರಿಗಣಿಸಲು ಮೋದಿ ಸರ್ಕಾರ ತಯಾರಿಲ್ಲ ಎಂದೇ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಮೋದಿ ಸರ್ಕಾರದ ನಡೆಗಳು ಕೂಡ ಅನುಮಾನ ಮೂಡಿಸುತ್ತಿವೆ.

ಕೊಲೆಜಿಯಂ ಶಿಫಾರಸುಗಳನ್ನು ವಾಪಾಸು ಕಳಿಸಿದ ಕೇಂದ್ರ ಸರ್ಕಾರದ ನಡೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಭಾರತದ ಹಿಂದಿನ ಮುಖ್ಯ ನ್ಯಾಯಾಧೀಶ ಆರ್. ಎಮ್. ಲೋಧಾ, ಇದು ನ್ಯಾಯಾಂಗದ ಸ್ವಾತಂತ್ರ್ಯದ ಮೇಲಿನ ಹಲ್ಲೆ ಎಂದಿದ್ದಾರೆ. ಕೊಲೆಜಿಯಂ ಕಳಿಸಿದ ಶಿಫಾರಸನ್ನು ವಾಪಾಸು ಕಳಿಸಲು ಸರ್ಕಾರ ಹೇಳಿರುವ ಕಾರಣಗಳು ಮುಖ್ಯವೆನಿಸುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಕೊಲೆಜಿಯಂ ತನ್ನ ನಿಲುವಿಗೆ ಬದ್ದವಾಗಿರಬೇಕೆಂದು ಬಯಸುತ್ತಿರುವುದಾಗಿ ಒತ್ತಿ ಹೇಳಿದ್ದಾರೆ.

ನಿಯಮ ಏನಿದೆ?:

ನಿಯಮದ ಪ್ರಕಾರ ಕೊಲೆಜಿಯಂ ಮಾಡಿದ ಶಿಫಾರಸನ್ನು ಸರ್ಕಾರ ಒಪ್ಪಿಕೊಳ್ಳಬೇಕು. ಪುನರ್ ಪರಿಶೀಲನೆಗೆ ಎಂದು ಒಮ್ಮೆ ಮಾತ್ರ ವಾಪಾಸು ಕಳಿಸಬಹುದು. ಆದರೆ ತಿರಸ್ಕರಿಸುವ ಅಧಿಕಾರ ಸರ್ಕಾರಕ್ಕಿಲ್ಲ. ಕೊಲೆಜಿಯಂ ತನ್ನ ಹಳೇ ಶಿಫಾರಸನ್ನು ಪುನಃ ಕಳಿಸಿದರೆ ಸರ್ಕಾರ ಅದನ್ನು ಒಪ್ಪಿಕೊಳ್ಳಲೇ ಬೇಕು. ಇದು ನಿಯಮ ಹಾಗೂ ಶಿಷ್ಟಾಚಾರ.

ಆದರೆ ನಮ್ಮ ವ್ಯವಸ್ಥೆಯಲ್ಲಿ ಯಾವುದಾದರೂ ಕುಂಟು ನೆಪಗಳಿಗೆ, ವಿಳಂಬ ನೀತಿಗಳಿಗೆ ತಡೆ ಮಾಡುವುದು ಸ್ವಲ್ಪ ಕಷ್ಟ. ಅವುಗಳನ್ನು ಮಾಡಲು ಸರ್ಕಾರ ತೊಡಗಿದಾಗ ಸಂವಿಧಾನಬಧ್ಧ ಆಡಳಿತ ಯಂತ್ರಾಂಗಗಳು ಬಡವಾಗಲು ತೊಡಗುತ್ತವೆ. ಈಗ ನ್ಯಾಯಾಂಗ ವಿಚಾರದಲ್ಲಿ ನಡೆಯುತ್ತಿರುವುದು ಅದೇ.

ಇಂತಹ ಬೆಳವಣಿಗೆಗಳು ಹಿಂದೆಯೂ ಆಗಿದ್ದವು. ಈಗ ಅದು ಸ್ವಲ್ಪ ಹೆಚ್ಚಾಗತೊಡಗಿವೆ. ಆಧಾರ್ ವಿಚಾರದಲ್ಲಿ ನ್ಯಾಯಾಂಗವನ್ನು ಸರ್ಕಾರ ತನ್ನ ಮೂಗಿನ ನೇರಕ್ಕೆ ಬಳಸಿ ಜನಸಾಮಾನ್ಯರ ಮೇಲೆ ಹೇರಿದ್ದು ಇತ್ತೀಚಿನ ಒಂದು ಉದಾಹರಣೆ ಎನ್ನಬಹುದು. ಆಧಾರ್ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯ, ತನ್ನ ತೀರ್ಪನ್ನು ಯಾಕೆ ವಕ್ರೀಕರಿಸಿ ಜನರಿಗೆ ನಂಬಿಸಲು ಪ್ರಯತ್ನಿಸಿದ್ದು ಎಂದು ಕೇಂದ್ರ ಸರ್ಕಾರವನ್ನು ಇತ್ತೀಚಿಗೆ ಕೇಳಿದ್ದನ್ನು ನಾವಿಲ್ಲಿ ಗಮನಿಸಬಹುದು.

ನ್ಯಾಯಾಂಗ ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕ ಚರ್ಚೆಯ ಪ್ರಮುಖ ಬಿಂದುಗಳಲ್ಲಿ ಒಂದಾಗಿದೆ. ಅದು ಕೊಲೆಜಿಯಂ ಮಾಡುವ ನ್ಯಾಯಾಧೀಶರುಗಳ ನೇಮಕಾತಿ ಬಗೆಗಿನ ಶಿಫಾರಸುಗಳು, ನಂತರ ಆ ಶಿಫಾರಸುಗಳನ್ನು ವಾಪಾಸ್ಸು ಮಾಡುವ ಕೇಂದ್ರ ಸರ್ಕಾರ, ಅಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳು, ನ್ಯಾಯಾಂಗದ ಭ್ರಷ್ಟಾಚಾರ ಹಾಗೂ ನ್ಯಾಯಾಂಗದಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪಗಳು ಹಾಗೂ ಬ್ಲಾಕ್ ಮೇಲ್ ಗಳ ಬಗ್ಗೆ ಮಾತನಾಡುತ್ತಿರುವ ಶಾಂತಿಭೂಷಣ್, ಪ್ರಶಾಂತ್ ಭೂ‍ಷಣ್‌ರಂತಹ ನ್ಯಾಯವಾದಿಗಳು, ಇಂತಹುದೇ ಆರೋಪಗಳನ್ನು ಮಾಡಿದ್ದ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ದಲಿತ ಹಿನ್ನೆಲೆಯ ಕರ್ಣನ್ ರನ್ನು ನ್ಯಾಯಾಂಗ ನಿಂದನೆಯಡಿ ಆರು ತಿಂಗಳ ಶಿಕ್ಷೆ ವಿಧಿಸಿ ಜೈಲಿಗೆ ಅಟ್ಟಿದ ಸರ್ವೋಚ್ಚ ನ್ಯಾಯಾಲಯ ಇತ್ಯಾದಿ ಉದಾಹರಣೆಗಳು ಕಾಣಿಸುತ್ತವೆ.

ಇಷ್ಟಕ್ಕೇ ನಿಲ್ಲದೆ, ಸರ್ವೋಚ್ಚ ನ್ಯಾಯಾಲಯದ ನಾಲ್ವರು ಹಿರಿಯ ನ್ಯಾಯಾಧೀಶರುಗಳು ದೇಶದ ಜನತೆಯನ್ನುದ್ಧೇಶಿಸಿ ನಡೆಸಿದ ಪತ್ರಿಕಾಗೋಷ್ಠಿ. ಅಲ್ಲಿ ಮುಖ್ಯ ನ್ಯಾಯಾಧೀಶರ ಮೇಲೆ ಮಾಡಿದ ಗಂಭೀರವಾದ ಆರೋಪಗಳು, ಭಾರತದ ನ್ಯಾಯಾಂಗ ಮಾತ್ರವಲ್ಲ ಹಾಗೂ ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ ಎಂಬ ನೇರ ಎಚ್ಚರಿಕೆಗಳನ್ನು ರವಾನಿಸಿದ್ದವು.

ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ನಡೆದ ಹಿರಿಯ ನ್ಯಾಯಾಧೀಶರುಗಳ ಪತ್ರಿಕಾಗೋಷ್ಠಿ. 
ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ನಡೆದ ಹಿರಿಯ ನ್ಯಾಯಾಧೀಶರುಗಳ ಪತ್ರಿಕಾಗೋಷ್ಠಿ. 

ಇವೆಲ್ಲವೂ ಸಾರ್ವಜನಿಕ ಚರ್ಚೆಯ ಪ್ರಮುಖ ವಿಚಾರಗಳಾಗುತ್ತಾ ಬಂದಿವೆ. ಶಾಂತಿಭೂಷಣ್ ಹಾಗೂ ಪ್ರಶಾಂತ್ ಭೂಷಣ್ ಸರ್ವೋಚ್ಚ ನ್ಯಾಯಾಲಯದ ಒಟ್ಟು ನ್ಯಾಯಾಧೀಶರುಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನ ಭ್ರಷ್ಟರು ಎಂದು ನೇರವಾದ ಆರೋಪಗಳನ್ನು ಮಾಡಿದ್ದರು. ಅದನ್ನು ಉಲ್ಲೇಖಿಸಿ ನ್ಯಾಯಾಂಗ ನಿಂದನೆಯ ಅಸ್ತ್ರವನ್ನು ಅವರ ಮೇಲೆ ಪ್ರಯೋಗಿಸಲು ಯತ್ನಿಸಿದಾಗ, ಸಾಕ್ಷಿ ಪುರಾವೆಗಳೊಂದಿಗೆ ಅವರು ವಿವರಗಳನ್ನು ಬರೆದು ಮುಚ್ಚಿದ ಲಕೋಟೆಯಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸರ್ವೋಚ್ಚ ನ್ಯಾಯಾಲಯ ನಂತರ ಆ ಬಗ್ಗೆ ಏನನ್ನೂ ಮಾತಾಡಲಿಲ್ಲ.

ಅಂದರೆ ಅಂತಹ ಗಂಭೀರ ವಿಚಾರದ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ನಡೆಗಳು ಅಷ್ಟೇ ಗಂಭೀರವಾದ ಅನುಮಾನಗಳನ್ನು ಜನಸಾಮಾನ್ಯರಲ್ಲಿ ಹುಟ್ಟುಹಾಕಿಬಿಟ್ಟಿವೆ. ಅದು ನ್ಯಾಯಾಂಗದ ಘನತೆಗೆ ಬಲು ಗಂಭೀರವಾದ ಪೆಟ್ಟನ್ನು ನೀಡಿದ್ದಲ್ಲದೆ ತನ್ನಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ತೆರೆದುಕೊಳ್ಳದೇ ಅದನ್ನು ಮುಚ್ಚಿಕೊಳ್ಳಲು ಮಾಡಿದ ಪ್ರಯತ್ನವಾಗಿ ಜನರಿಗೆ ಕಂಡಿತ್ತು.

ಇವುಗಳೊಂದಿಗೆ ದೇಶವನ್ನು ಬಾಧಿಸಿದ ಹಲವು ಗಂಭೀರ ಪ್ರಕರಣಗಳ ವಿಚಾರಣೆಗಳು ಹಾಗೂ ನೀಡುತ್ತಿರುವ ತೀರ್ಪುಗಳ ಬಗ್ಗೆಯೂ ಮೇಲಿಂದ ಮೇಲೆ ವಿವಾದಗಳೇ ಆಗುತ್ತಿವೆ.

ಅದು ಗುಜರಾತ್ ಕೋಮು ಹತ್ಯಾಕಾಂಡಗಳಿರಬಹುದು, ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟದ ಪ್ರಕರಣವಿರಬಹುದು, ಬಿಜೆಪಿಯ ಈಗಿನ ಅಧ್ಯಕ್ಷ ಅಮಿತ್ ಷಾ ಮೇಲಿನ ಆರೋಪಗಳ ಖುಲಾಸೆಯಿರಬಹುದು ಹೀಗೆ ಪಟ್ಟಿ ಮಾಡಬಹುದು.

ಜೊತೆಗೆ ಸರ್ಕಾರದ ಪರವಾಗಿ ತೀರ್ಪು ನೀಡಿದ ನ್ಯಾಯಾಧೀಶರುಗಳು ನಿವೃತ್ತರಾಗುತ್ತಿದ್ದಂತೆ ರಾಜ್ಯಪಾಲ ಸೇರಿದಂತೆ ಹಲವು ಅಧಿಕಾರ ಪದವಿಗಳನ್ನು ನೀಡುತ್ತಿರುವ ವಿಚಾರಗಳು ಕೂಡ ಸಾರ್ವಜನಿಕ ಆಕ್ಷೇಪಗಳಿಗೆ ಗುರಿಯಾಗುತ್ತಾ ಅನುಮಾನಗಳು ಗಟ್ಟಿಯಾಗಲು ಕೂಡ ಕಾರಣವಾಗಿವೆ.

ಭಾರತದ ಶಾಸಕಾಂಗ ಹಾಗೂ ಕಾರ್ಯಾಂಗಗಳು ಜನರ ನಡುವಿನ ಪ್ರಮುಖ ಚರ್ಚೆಯ ವಿಷಯವಾಗಿ, ನಗೆಪಾಟಲಿಗೆ ಈಡಾಗುತ್ತಾ ತಮ್ಮ ವಿಶ್ವಸಾರ್ಹತೆಯನ್ನು ಕಳೆದುಕೊಂಡು ಹಲವು ವರ್ಷಗಳೇ ಕಳೆದಿವೆ. ಇವೆರಡೂ ಅಂಗಗಳು ಬ್ರಹ್ಮಾಂಡ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಧಿಕಾರದ ದುರುಪಯೋಗ, ಇನ್ನಿತರ ಅಕ್ರಮಗಳಿಗೆ ಪರ್ಯಾಯ ಅಂಗಗಳು ಎಂಬಂತೆ ಜನ ಸಾಮಾನ್ಯರ ಮನಸ್ಸಿನಲ್ಲಿ ಬೇರೂರಿಬಿಟ್ಟಿವೆ. ಅವುಗಳ ಬಗ್ಗೆ ಬಹುತೇಕ ಜನರಲ್ಲಿ ಯಾವುದೇ ಭರವಸೆ ಈಗ ಉಳಿದಿಲ್ಲ.

ಆದರೆ ಶಾಸಕಾಂಗ, ಕಾರ್ಯಾಂಗಗಳು ತಮ್ಮ ರಕ್ಷಣೆಗೆ ಇಲ್ಲದಿದ್ದರೂ ನ್ಯಾಯಾಂಗ ತಮ್ಮ ರಕ್ಷಣೆಗೆ ಇದೆ ಎಂಬ ನಂಬಿಕೆ ಇದುವರೆಗೂ ಜನಸಾಮಾನ್ಯರಲ್ಲಿತ್ತು. ಆ ಭರವಸೆ ಜನಸಾಮಾನ್ಯರಿಗೆ ಎಷ್ಟೋ ಸಮಾಧಾನ ನೀಡಿತ್ತು. ಕೆಲವು ವರ್ಷಗಳಿಂದ ಆರಂಭವಾದ ಆ ನಂಬಿಕೆ ಹಾಗೂ ಸಮಾಧಾನಗಳ ಕುಸಿತ ಇಂದು ಪಾತಾಳದತ್ತ ಸಾಗುತ್ತಿದೆ. ಇಂತಹ ಪರಿಸ್ಥಿತಿಗೆ ಕೇವಲ ನ್ಯಾಯಾಂಗ ಮಾತ್ರವೇ ಕಾರಣಕರ್ತವೆಂದು ಹೇಳಿದರೆ ಸರಿಯಾಗಲಾರದು. ಅದಕ್ಕೆ ಭಾರತದ ಒಟ್ಟಾರೆ ಆಡಳಿತಾಂಗಗಳ ಹೊಣೆಗಾರಿಕೆ ಪ್ರಧಾನವಾಗಿದೆ.

ಇದು ಇತ್ತೀಚೆಗೆ ಅಷ್ಟೇ ಶುರುವಾಗಿದ್ದು ಎಂದೂ ಹೇಳಿದರೂ ಸರಿಯಾಗುವುದಿಲ್ಲ. ಇದು ಕಾಂಗ್ರೆಸ್ ಸರ್ಕಾರಗಳ ಆಡಳಿತದ ಕಾಲದಿಂದಲೂ ನಡೆಯುತ್ತಾ ಬಂದಿದೆ. ತುರ್ತುಪರಿಸ್ಥಿತಿಯನ್ನು ಹೇರಿ ನ್ಯಾಯಾಂಗದ ಆದೇಶವನ್ನು ನಗಣ್ಯ ಮಾಡಲು ನಡೆಸಿದ ಪ್ರಯತ್ನ ನ್ಯಾಯಾಂಗ ಘನತೆಯನ್ನು ಕುಗ್ಗಿಸಲು ಮುನ್ನಡಿ ಬರೆದಿದ್ದು ಈಗ ಇತಿಹಾಸ. ವರ್ತಮಾನ ಕೂಡ ಇದೇ ಹಾದಿಯಲ್ಲಿರುವುದಿಂದ ಕೊಂಚ ಆತಂಕ ಪಡಲೇಬೇಕಿದೆ.