ಸಂಪೂರ್ಣ ವಿದ್ಯುಧೀಕರಣ ಯೋಜನೆ: ಮೋದಿ ಮಾತಿನಲ್ಲಿ ಸತ್ಯ ಎಷ್ಟಿದೆ? ಉತ್ಪ್ರೇಕ್ಷೆ ಎಷ್ಟಿದೆ? 
COVER STORY

ಸಂಪೂರ್ಣ ವಿದ್ಯುಧೀಕರಣ ಯೋಜನೆ: ಮೋದಿ ಮಾತಿನಲ್ಲಿ ಸತ್ಯ ಎಷ್ಟಿದೆ? ಉತ್ಪ್ರೇಕ್ಷೆ ಎಷ್ಟಿದೆ? 

ಓರೆಕೋರೆಗಳ ನಡುವೆ ಭಾರತದ ಪ್ರಧಾನಿ ಸಂಪೂರ್ಣ ವಿದ್ಯುಧೀಕರಣವನ್ನು ಬಿಜೆಪಿ ಸರಕಾರ ಕಳೆದ ನಾಲ್ಕು ವರ್ಷಗಳಲ್ಲಿ ಪೂರೈಸಿದೆ ಎನ್ನುತ್ತಿದ್ದಾರೆ. ಇದನ್ನು ಹಸೀ ಸುಳ್ಳು ಅನ್ನದೆ ಬೇರೆ ದಾರಿ ಇಲ್ಲ.

ಪ್ರಧಾನಿ ಮೋದಿ ಕಳೆದ ಭಾನುವಾರ ಹೀಗೊಂದು ಘೋಷಣೆಯನ್ನು ಮಾಡಿದ್ದರು. ಭಾರತದ ಎಲ್ಲಾ ಹಳ್ಳಿಗಳೂ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದ್ದು, ಸರಕಾರ ಶೇ.100ರಷ್ಟು ಗ್ರಾಮೀಣ ವಿದ್ಯುಧೀಕರಣವನ್ನು ಸಾಧಿಸಿದೆ ಎಂದು ಟ್ವಿಟ್‌ ಮಾಡಿದ್ದರು. ಮೋದಿಯವರ ಈ ಟ್ವೀಟ್‌ ದೊಡ್ಡದಾಗಿ ಸದ್ದು ಮಾಡಿತ್ತು.

ಬಿಜೆಪಿ ಬೆಂಬಲಿಗರು ಇದೊಂದು ದೊಡ್ಡ ಸಾಧನೆ ಎಂಬಂತೆ ಬಿಂಬಿಸತೊಡಗಿದ್ದರು. ಇಡೀ ಸಾಧನೆಯನ್ನು ಬಿಜೆಪಿ ಸರಕಾರದ ಹೆಗಲಿಗೇರಿಸಿದ್ದರು. ಬಿಜೆಪಿ ಹಿಂಬಾಲಕರ ಅಬ್ಬರದ ನಡುವೆಯೇ ಒಂದಷ್ಟು ಸಹಜ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಹಾಗಾದರೆ ಕಳೆದ ೭೦ ವರ್ಷಗಳಲ್ಲಿ ದೇಶವನ್ನು ಆಳಿದ ಯಾವ ಸರಕಾರಗಳೂ ಹಳ್ಳಿಗಳಿಗೆ ವಿದ್ಯುತ್ ನೀಡರಲಿಲ್ಲವಾ? ಮೋದಿ ಪ್ರಧಾನಿ ಆಗುವ ಮುಂಚೆ ದೇಶದ ಇಂಧನ ಸರಬರಾಜಿನಲ್ಲಿ ನಡೆದ ಪ್ರಗತಿ ಏನು? ಎಂಬ ಪ್ರಶ್ನೆಗಳು ಪ್ರಮುಖವಾದವು.

ಸರಕಾರಿ ಅಂಕಿ ಅಂಶಗಳೇ ಹೇಳುವ ಪ್ರಕಾರ, ಬಿಜೆಪಿ ಸರಕಾರ 2014ರಲ್ಲಿ ಅಧಿಕಾರಕ್ಕೆ ಬರುವ ವೇಳೆ ವಿದ್ಯುತ್‌ ವ್ಯವಸ್ಥೆ ಹೊಂದಿರದಿದ್ದ ದೇಶದ ಹಳ್ಳಿಗಳ ಸಂಖ್ಯೆ ಸರಿ ಸುಮಾರು 18,000 ಮಾತ್ರ. 6 ಲಕ್ಷಕ್ಕಿಂತಲೂ ಹೆಚ್ಚು ಹಳ್ಳಿಗಳನ್ನು ಹೊಂದಿದ್ದ ಭಾರತದ ಶೇ. 97ರಷ್ಟು ಹಳ್ಳಿಗಳು 2014ಕ್ಕೂ ಮುಂಚೆಯೇ ವಿದ್ಯುತ್‌ ಸಂಪರ್ಕವನ್ನು ಪಡೆದಿದ್ದವು ಎನ್ನುತ್ತವೆ ಅಧಿಕೃತ ಅಂಕಿ ಅಂಶಗಳು.

ಅಧಿಕಾರಕ್ಕೆ ಬಂದ ಕಲವೇ ದಿನಗಳಲ್ಲಿ ಬಿಜೆಪಿ ಸರಕಾರ ದೀನ್‌ ದಯಾಳ್‌ ಗ್ರಾಮೀಣ ಜ್ಯೋತಿ ಯೋಜನೆಯನ್ನು ಜಾರಿಗೆ ತಂದಿತ್ತು. ದೇಶದ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ಪೂರೈಕೆ ಮಾಡಬೇಕು ಎನ್ನುವುದು ಈ ಯೋಜನೆಯ ಉದ್ದೇಶಗಳಲ್ಲೊಂದು. 2017ರ ಸೆಪ್ಟೆಂಬರ್‌ ತಿಂಗಳಿನಲ್ಲಿ ಸೌಭಾಗ್ಯ ಎಂಬ ಮತ್ತೊಂದು ವಿದ್ಯುತ್‌ ಪೂರೈಕೆ ಯೋಜನೆಯನ್ನು ಬಿಜೆಪಿ ಸರಕಾರ ಅನುಷ್ಠಾನಕ್ಕೆ ತಂದಿತ್ತು.

ಈ ಎರಡೂ ಯೋಜನೆಗಳು ಕೂಡ ಯುಪಿಎ ಸರಕಾರದ ರಾಜೀವ್‌ ಗಾಂಧಿ ಗ್ರಾಮೀಣ ವಿದ್ಯುತೀಕರಣ ಯೋಜನೆಯ ನಕಲು ಹಾಗೂ ಮುಂದುವರಿದ ಭಾಗಗಳೇ ಆಗಿದ್ದವು. ರಾಜೀವ್‌ ಗಾಂಧಿ ಗ್ರಾಮೀಣ ವಿದ್ಯುಧೀಕರಣ ಯೋಜನೆಯಲ್ಲಿ ಇದ್ದ ಬಹುತೇಕ ಅಂಶಗಳು ಈ ಯೋಜನೆಗಳಲ್ಲಿಯೂ ಕಂಡುಬಂದಿತ್ತು. ಬಿಜೆಪಿ ಸರಕಾರದ ದೀನ್‌ ದಯಾಳ ಯೋಜನೆಗಿಂತ ಕಾಂಗ್ರೆಸ್‌ ಸರಕಾರದ ರಾಜೀವ್‌ ಗಾಂಧಿ ಯೋಜನೆಯೇ ಹೆಚ್ಚು ವೇಗವಾಗಿ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕವನ್ನು ಕಲ್ಪಿಸಿತ್ತು ಎನ್ನುತ್ತವೆ ಸಿಗುತ್ತಿರುವ ಮಾಹಿತಿ.

ರಾಜೀವ್‌ ಗಾಂಧಿ ಗ್ರಾಮೀಣ ವಿದ್ಯುಧೀಕರಣ ಯೋಜನೆ ಜಾರಿಯಾಗಿದ್ದು 2005ರಲ್ಲಿ. ಕಾಂಗ್ರೆಸ್‌ ಸರಕಾರ ಈ ಯೋಜನೆಯಡಿಯಲ್ಲಿ 2014ರ ವೇಳೆಗೆ 1,82,280 ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕವನ್ನು ಒದಗಿಸಿತ್ತು. ಪ್ರತಿ ವರ್ಷವೊಂದಕ್ಕೆ ಕಾಂಗ್ರೆಸ್‌ ಸರಕಾರ ವಿದ್ಯುಧೀಕರಣಗೊಳಿಸಿದ ಸರಾಸರಿ ಹಳ್ಳಿಗಳ ಸಂಖ್ಯೆ 12,000. 2014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ 4 ವರ್ಷಗಳ ಅವಧಿಯಲ್ಲಿ 18,000 ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿದೆ. ಬಿಜೆಪಿ ಸರಕಾರ ಪ್ರತಿ ವರ್ಷವೊಂದಕ್ಕೆ ವಿದ್ಯುಧೀಕರಣಗೊಳಿಸಿರುವ ಹಳ್ಳಿಗಳ ಸರಾಸರಿ ಸಂಖ್ಯೆ 4,800.

ಸಂಪೂರ್ಣ ವಿದ್ಯುಧೀಕರಣ ಯೋಜನೆ: ಮೋದಿ ಮಾತಿನಲ್ಲಿ ಸತ್ಯ ಎಷ್ಟಿದೆ? ಉತ್ಪ್ರೇಕ್ಷೆ ಎಷ್ಟಿದೆ? 
ಚಿತ್ರ ಕೃಪೆ: ನ್ಯೂಸ್‌ಕ್ಲಿಕ್‌

ಇನ್ನು, ಬಡತನ ರೇಖೆಗಿಂತಲೂ ಕೆಳಗಿರುವ ಭಾರತೀಯರಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವಲ್ಲಿ ಕೂಡ ಬಿಜೆಪಿ ಸರಕಾರದ ನಿಧಾನಗತಿಯನ್ನು ಈ ಕೆಳಗಿನ ಅಂಕಿ ಅಂಶಗಳು ಹೇಳುತ್ತಿವೆ. ಯುಪಿಎ ಸರಕಾರವೇ ಉತ್ತಮ ಸಾಧನೆಯನ್ನು ತೋರಿಸಿದೆ ಎಂಬುದನ್ನು ವಿರೋಧಗಳ ಆಚೆಗೂ ಒಪ್ಪಿಕೊಳ್ಳಲೇಬೇಕಿದೆ.

ಸಂಪೂರ್ಣ ವಿದ್ಯುಧೀಕರಣ ಯೋಜನೆ: ಮೋದಿ ಮಾತಿನಲ್ಲಿ ಸತ್ಯ ಎಷ್ಟಿದೆ? ಉತ್ಪ್ರೇಕ್ಷೆ ಎಷ್ಟಿದೆ? 
ಚಿತ್ರ ಕೃಪೆ: ನ್ಯೂಸ್‌ಕ್ಲಿಕ್‌

ಏನಿದು ಗ್ರಾಮೀಣ ವಿದ್ಯುಧೀಕರಣ?:

ಸರಕಾರ ವಿಶ್ಲೇಷಿಸುವಂತೆ ಗ್ರಾಮೀಣ ವಿದ್ಯುಧೀಕರಣ ಎಂದರೆ ಹಳ್ಳಿಯಲ್ಲಿನ ಪ್ರತಿಯೊಬ್ಬ ನಾಗರೀಕರು ವಿದ್ಯುತ್‌ ವ್ಯವಸ್ಥೆಯನ್ನು ಹೊಂದಿದ್ದಾರೆ ಎಂದೇನೂ ಅಲ್ಲ. ಶಾಲೆಗಳು, ಪಂಚಾಯಿತಿ ಕಾರ್ಯಾಲಯಗಳು, ಗ್ರಾಮೀಣ ಆರೋಗ್ಯ ಕೇಂದ್ರಗಳ ಜತೆಗೆ ಹಳ್ಳಿಯಲ್ಲಿನ ಶೇ.10 ರಷ್ಟು ಮನೆಗಳು ವಿದ್ಯುತ್‌ ಸಂಪರ್ಕವನ್ನು ಹೊಂದಿದ್ದರೆ ಅಂತಹ ಹಳ್ಳಿಗಳನ್ನು ವಿದ್ಯುಧೀಕರಣಗೊಂಡ ಹಳ್ಳಿಗಳು ಎಂದು ಕರೆಯಲಾಗುತ್ತದೆ. ಹಾಗಾದರೆ ವಿದ್ಯುತ್‌ ಸಂಪರ್ಕ ಹೊಂದದ ಉಳಿದ ಹಳ್ಳಿಗರು ಲೆಕ್ಕಕ್ಕಿಲ್ಲವೇ?

ಸರಕಾರಿ ಅಂಕಿ ಅಂಶಗಳೇ ತಿಳಿಸುವಂತೆ ಭಾರತದಲ್ಲಿನ 6 ಲಕ್ಷ ಹಳ್ಳಿಗಳ ಪೈಕಿ ಹಳ್ಳಿಗಳಲ್ಲಿನ ಎಲ್ಲಾ ಜನರು ವಿದ್ಯುತ್‌ ಸಂಪರ್ಕವನ್ನು ಹೊಂದಿರುವುದು ಕೇವಲ ಶೇ. 8ರಷ್ಟು ಹಳ್ಳಿಗಳಲ್ಲಷ್ಟೇ. ಉಳಿದ ಶೇ. 92ರಷ್ಟು ಗ್ರಾಮಗಳಲ್ಲಿನ ಎಲ್ಲಾ ಮನೆಗಳು ವಿದ್ಯುತ್‌ ದೀಪಗಳು ಉರಿಯುವುದಿಲ್ಲ. ಇಷ್ಟು ಪ್ರಮಾಣದ ಭಾರತೀಯ ನಾಗರೀಕರು ಇನ್ನೂ ಕತ್ತಲಿನಲ್ಲಿ ಕಾಲ ಕಳೆಯುತ್ತಿರುವಾಗ ಭಾರತ ಶೇ.100ರಷ್ಟು ವಿದ್ಯುಧೀಕರಣಗೊಂಡ ದೇಶ ಎಂದು ಹೇಗೆ ಕರೆಯಲು ಸಾಧ್ಯ?

ಇಂಡಿಯಾ ಟುಡೇ ಸುದ್ದಿ ಸಂಸ್ಥೆ ಪ್ರಧಾನಿ ಮೋದಿಯವರ ಮಾತುಗಳನ್ನು ಆಧರಿಸಿ, ಸತ್ಯದ ಪರಿಶೀಲನೆ ನಡೆಸುವ ಸಲುವಾಗಿ ಭಾರತದ ನಾನಾ ಭಾಗಗಳಿಗೆ ತನ್ನ ವರದಿಗಾರರನ್ನು ಕಳಿಸಿತ್ತು. ಅವರೆಲ್ಲರೂ ಹೊತ್ತು ತಂದ ಮಾಹಿತಿ ಪ್ರಕಾರ, ಮಧ್ಯ ಪ್ರದೇಶದ ನರ್ಮಾದಾ ನದಿಯ ದಡದಲ್ಲಿರುವ 5 ಐದು ಹಳ್ಳಿಗಳಲ್ಲಿ 1ಕ್ಕೆ ಮಾತ್ರ ವಿದ್ಯುತ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಈ 5 ಹಳ್ಳಿಗಳನ್ನು ಒಂದೇ ಹಳ್ಳಿ ಎಂದು ಸರಕಾರ ಪರಿಗಣಿಸಿದೆ. ಜಾರ್ಖಂಡ್‌ನ ಸಪ್ರಮ್‌ ಎಂಬ ಹಳ್ಳಿಯಲ್ಲಿ ಸರಕಾರಿ ದಾಖಲೆಗಳ ಪ್ರಕಾರ, 2 ವರ್ಷಗಳ ಹಿಂದೆಯೇ ವಿದ್ಯುತ್‌ ಕಂಬಗಳನ್ನು ಹೂಳಲಾಗಿದೆ. ಆದರೆ ವಿದ್ಯುತ್‌ ಮಾತ್ರ ದೊರೆತಿಲ್ಲ. ರಾಜಸ್ಥಾನದ ದೋಲ್‌ಪುರ್‌ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ವಿದ್ಯುತ್‌ ಎಂದರೇನು ಎಂಬುದು ಇನ್ನೂ ಗೊತ್ತೇ ಇಲ್ಲ.

ದಾಖಲೆಗಳಲ್ಲಷ್ಟೇ ವಿದ್ಯುತ್‌:

ಮತ್ತೊಂದು ಆಯಾಮದಿಂದ ನೋಡುವುದಾದರೆ ಹಲವಾರು ಹಳ್ಳಿಗಳು ವಿದ್ಯುಧೀಕರಣಗೊಂಡಿರುವ ಮಾಹಿತಿ ಕೇವಲ ದಾಖಲೆಗಳಲ್ಲಿ ಮಾತ್ರವಿದೆ. ಹಳ್ಳಿಗಳಲ್ಲಿ ವಿದ್ಯುತ್‌ ಕಂಬಗಳನ್ನು ನೆಡಲಾಗಿದೆಯಾದರೂ ವಿದ್ಯುತ್‌ ಮಾತ್ರ ಹರಿದು ಬರುತ್ತಿಲ್ಲ. ಕೆಲವು ಹಳ್ಳಿಗಳಲ್ಲಿ ಟ್ರಾನ್ಸ್‌ಫಾರ್ಮರ್‌ಗಳು ಸರಿಯಾಗಿ ಕೆಲಸ ನಿರ್ವಹಿಸಲು ಅಗತ್ಯವಾಗಿರುವ ತೈಲಗಳಿಲ್ಲ. ಇನ್ನೂ ಕೆಲವು ಹಳ್ಳಿಗಳಲ್ಲಿ ಟ್ರಾನ್ಸ್‌ಫಾರ್ಮರ್‌ಗಳೇ ಕಾಣೆಯಾಗಿವೆ. ಆದರೆ ಸರಕಾರದ ದಾಖಲೆಗಳಲ್ಲಿ ಈ ಅಂಶಗಳು ಕಾಣಿಸುವುದಿಲ್ಲ. ಸರಕಾರಿ ದಾಖಲೆಗಳ ಪ್ರಕಾರ ಈ ಹಳ್ಳಿಗಳೆಲ್ಲಾವೂ ವಿದ್ಯುತ್‌ ಸಂಪರ್ಕ ಪಡೆದಿವೆ.

ದೊರೆಯುತ್ತಿರುವ ವಿದ್ಯುತ್‌ ಎಷ್ಟು?:

ಮೋದಿ ವಿದ್ಯುತ್‌ ಸಂಪರ್ಕ ಬಗ್ಗೆಯಷ್ಟೆ ಮಾತನಾಡಿ ಭಾರತ ಶೇ.100ರಷ್ಟು ವಿದ್ಯುಧೀಕರಣಗೊಂಡಿದೆ ಎಂದಿದ್ದಾರೆ. ಆದರೆ ಎಷ್ಟೋ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವಿದ್ದರೂ ಕೂಡ ಸಮರ್ಪಕ ವಿದ್ಯುತ್‌ ಪೂರೈಕೆಯಾಗುತ್ತಿಲ್ಲ.

ಪ್ರಯಾಸ್‌ ಎಂಬ ಸ್ವಯಂ ಸೇವಾ ಸಂಸ್ಥೆ ನಡೆಸಿರುವ ಸಮೀಕ್ಷೆ ಪ್ರಕಾರ ಭಾರತದ ಶೇ.52ರಷ್ಟು ಹಳ್ಳಿಗಳಲ್ಲಿ ದಿನವೊಂದಕ್ಕೆ 15 ಗಂಟೆಗಳಷ್ಟು ಕಾಲ ವಿದ್ಯುತ್‌ ಕಡಿತಗೊಂಡಿರುತ್ತದೆ. 2015ರಲ್ಲಿ ಕೊಲಂಬಿಯಾ ವಿಶ್ವ ವಿದ್ಯಾಲಯ ಭಾರತದ 6 ರಾಜ್ಯಗಳಲ್ಲಿ ಸಂಶೋಧನೆ ನಡೆಸಿದೆ. ಈ ಸಂಶೋಧನೆಯ ವರದಿ ಹೇಳುವಂತೆ ಈ ರಾಜ್ಯಗಳಲ್ಲಿನ ಶೇ.75ರಷ್ಟು ಜನರು ದಿನಕ್ಕೆ 12 ಗಂಟೆಗಳಿಗೂ ಕಡಿಮೆ ಸಮಯ ವಿದ್ಯುತ್‌ ಪಡೆಯುತ್ತಾರೆ. ಜಾರ್ಖಂಡ್‌ ಶೇ.2ರಷ್ಟು ಮನೆಗಳ ಮಾತ್ರ ದಿನಕ್ಕೆ 20 ಗಂಟೆಗಿಂತ ಹೆಚ್ಚಿನ ವಿದ್ಯುತ್‌ ಸಂಪರ್ಕವನ್ನು ಹೊಂದಿವೆ.

ಲಕ್ಕೆಕ್ಕೇ ಸಿಗದಿರುವ ಗ್ರಾಮಗಳು:

ಮತ್ತೂ ಕೆಲವು ಸಮೀಕ್ಷೆಗಳು ಹೇಳುವ ಪ್ರಕಾರ ಸರಕಾರದ ಕಣ್ಣಿಗೂ ಕಾಣಿಸದಿರುವ ಲಕ್ಷಾಂತರ ಹಳ್ಳಿಗಳು ಭಾರತದಲ್ಲಿ ಅಸ್ತಿತ್ವದಲ್ಲಿವೆ. ಸರಕಾರಿ ದಾಖಲೆಗಳೇ ಈ ಕುರಿತು ಗೊಂದಲಮಯವಾಗಿವೆ. ಅಂದಾಜುಗಳ ಪ್ರಕಾರ ಭಾರತದಲ್ಲಿರುವ ಹಳ್ಳಿಗಳ ಸಂಖ್ಯೆ 10 ಲಕ್ಷವನ್ನು ಮೀರುತ್ತದೆ. ಆದರೆ ಸರಕಾರ ದಾಖಲೆಗಳು ಕೇವಲ 6 ಲಕ್ಷ ಹಳ್ಳಿಗಳಿವೆ ಎಂದು ಹೇಳುತ್ತವೆ. ಹೀಗೆ ಎಷ್ಟೋ ಹಳ್ಳಿಗಳು ಲೆಕ್ಕದಲ್ಲೇ ಇಲ್ಲದಿರುವಾಗ ಭಾರತ ಸಂಪೂರ್ಣ ವಿದ್ಯುಧೀಕರಣಗೊಂಡ ರಾಷ್ಟ್ರ ಎನ್ನುವುದಾದರೂ ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಭಾರತದಲ್ಲಿ ಲಕ್ಷಾಂತರ ಅಸಂಖ್ಯಾತ ಮಂದಿಗೆ ಮನೆಗಳೇ ಇಲ್ಲ. ಲಕ್ಷಾಂತರ ಭಾರತೀಯರಿಗೆ ತಾವು ಭಾರತೀಯರು ಎಂದು ಹೇಳಿಕೊಳ್ಳಲು ಯಾವುದೇ ಪುರಾವೆಗಳಿಲ್ಲ. ಅವರು ವಾಸಿಸುವ ಪ್ರದೇಶಗಳಿಗೆ ಕನಿಷ್ಟ ಹಳ್ಳಿ, ಗ್ರಾಮದ ಮೊಹರು ಇನ್ನೂ ಬಿದ್ದಿಲ್ಲ. ಇವರಿಗೆ ಇಂದಿಗೂ ಕೂಡ ವಿದ್ಯುತ್‌ನ ಪರಿಕಲ್ಪನೆಯನ್ನೇ ತಲುಪಿಲ್ಲ. ಇಷ್ಟೆಲ್ಲಾ ಓರೆಕೋರೆಗಳ ನಡುವೆ ಭಾರತದ ಪ್ರಧಾನಿಯ ಸಂಪೂರ್ಣ ವಿದ್ಯುಧೀಕರಣವನ್ನು ಬಿಜೆಪಿ ಸರಕಾರ ಕಳೆದ ನಾಲ್ಕು ವರ್ಷಗಳಲ್ಲಿ ಪೂರೈಸಿದೆ ಎನ್ನುತ್ತಿದ್ದಾರೆ. ಇದನ್ನು ಹಸೀ ಸುಳ್ಳು ಅನ್ನದೆ ಬೇರೆ ದಾರಿ ಇಲ್ಲ.