‘ದೇವೇಗೌಡರ ಗುಣಗಾನ’: ಅತಂತ್ರ ವಿಧಾನಸಭೆಯ ಮುನ್ಸೂಚನೆ ನೀಡಿದ ಪ್ರಧಾನಿ ಭಾಷಣ!
COVER STORY

‘ದೇವೇಗೌಡರ ಗುಣಗಾನ’: ಅತಂತ್ರ ವಿಧಾನಸಭೆಯ ಮುನ್ಸೂಚನೆ ನೀಡಿದ ಪ್ರಧಾನಿ ಭಾಷಣ!

ಗೌಡರನ್ನು ಹೊಗಳುವ ಮೂಲಕ ಮುಂಬರುವ ಚುನಾವಣಾ ಫಲಿತಾಂಶದಲ್ಲಿ ನಿಚ್ಚಳ ಬಹುಮತ ಪಡೆಯಲು ಯಾವ ಪಕ್ಷಗಳಿಗೂ ಸಾಧ್ಯವಿಲ್ಲ ಎಂಬುದನ್ನು ಪರೋಕ್ಷವಾಗಿ ಮೋದಿ ಒಪ್ಪಿಕೊಂಡಿದ್ದಾರೆ.

ಇಲ್ಲಿಂದ ಸರಿಯಾಗಿ 15ನೇ ದಿನಕ್ಕೆ ಹೊರಬೀಳಲಿರುವ ಚುನಾವಣೆ ಫಲಿತಾಂಶ ಅತಂತ್ರ ವಿಧಾನಸಭೆಯನ್ನು ನಿರ್ಮಾಣ ಮಾಡಲಿದೆಯಾ? ಹೀಗೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ ಪ್ರಧಾನಿ ಮೋದಿ ಉಡುಪಿಯಲ್ಲಿ ಮಾಡಿರುವ ಭಾಷಣ.

ಚಾಮರಾಜನಗರದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಮುಗಿಸಿದ ನರೇಂದ್ರ ಮೋದಿ ಉಡುಪಿಯಲ್ಲಿ ಹೊಸ ಬಾಂಬ್ ಎಸೆದಿದ್ದಾರೆ. ತಮ್ಮ ಮಾತಿನ ನಡುವೆ, ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಎಚ್. ಡಿ. ದೇವೇಗೌಡರನ್ನು ನೆನಪಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಜತೆಗೆ, ಅತಂತ್ರ ವಿಧಾನಸಭೆಯ ಮುನ್ಸೂಚನೆ ಸಿಕ್ಕಿರುವ ಸೂಚನೆಯನ್ನೂ ಅವರು ನೀಡಿದ್ದಾರೆ.

ಇಷ್ಟಕ್ಕೂ ಮೋದಿ ದೇವೇಗೌಡರನ್ನು ನೆನಪಿಸಿಕೊಂಡಿರುವ ಸಂದರ್ಭ ಹೇಗಿತ್ತು?: “ಮಾಜಿ ಪ್ರಧಾನಿ, ಈ ಮಣ್ಣಿನ ರೈತರ ಮಗ, ಶ್ರೀಮಾನ್ ದೇವೇಗೌಡರು ದಿಲ್ಲಿಗೆ ಯಾವಾಗ ಬಂದರೋ, ನನ್ನನ್ನು ಭೇಟಿ ಮಾಡಲು ಸಮಯ ಕೇಳಿದರು. ನಾನು ಸಿಕ್ಕೆ, ಅಷ್ಟೆ ಅಲ್ಲ ನನ್ನ ಮನೆಗೆ ಬಂದಾಗ, ಅವರು ಬಂದ ಕಾರಿನ ಡೋರ್‌ ತೆಗೆದು ಸ್ವಾಗತಿಸಿದೆ. ರಾಜನೀತಿ ದೃಷ್ಟಿಯಿಂದ ನನ್ನ ವಿರೋಧಿ ವಿಚಾರವನ್ನು ಅವರು ಇಟ್ಟುಕೊಂಡಿದ್ದಾರೆ. ಪಾರ್ಲಿಮೆಂಟ್‌ನಲ್ಲಿ ನಮ್ಮ ವಿರುದ್ಧ ವೋಟ್ ಮಾಡುತ್ತಾರೆ. ಆದರೆ ಅವರು ದೇಶದ ಪ್ರಮುಖ ನಾಯಕರು.’’ ಇದು ಮೋದಿ ದೇವೇಗೌಡರ ಕುರಿತು ಆಡಿರುವ ಮಾತುಗಳು.

ದೇವೇಗೌಡರನ್ನು ಭೇಟಿಯಾದ ಪ್ರಧಾನಿ ಮೋದಿ (ಫೈಲ್ ಚಿತ್ರ)
ದೇವೇಗೌಡರನ್ನು ಭೇಟಿಯಾದ ಪ್ರಧಾನಿ ಮೋದಿ (ಫೈಲ್ ಚಿತ್ರ)

ಮುಂದವರಿದ ಮೋದಿ, “ನಾನು ಕೇಳಲ್ಪಟ್ಟೆ, 15- 20 ದಿನಗಳ ಹಿಂದೆ ಚುನಾವಣೆ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರು, ದೇವೇಗೌಡರ ಬಗ್ಗೆ ಅಹಂಕಾರದಿಂದ ಮಾತುಗಳನ್ನಾಡಿದ್ದಾರೆ ಎಂದು. ಅವರಿಗೆ (ರಾಹುಲ್ ಗಾಂಧಿ) ಈಗ ರಾಜಕೀಯ ಬದುಕು ಆರಂಭವಾಗಿದೆ. ಆದರೆ ದೇವೇಗೌಡರು ವರಿಷ್ಠ ನಾಯಕ. ಅಂತವರಿಗೆ ಅಪಮಾನ ಮಾಡಿದ್ದಾರೆ ಎಂದರೆ ಅಹಂಕಾರ ಆಕಾಶ ಮುಟ್ಟಿದೆ ಅಂತ ಅರ್ಥ,’’ ಎಂದರು.

ಸಾಮಾನ್ಯವಾಗಿ ಪ್ರಧಾನಿಗೆ, ಮುಖ್ಯಮಂತ್ರಿಗಳಿಗೆ ತಮ್ಮದೇ ಆದ ಗುಪ್ತಚರ ಮಾಹಿತಿ ಮೂಲಗಳು ಎಲ್ಲಾ ವಿಚಾರದಲ್ಲೂ ಇರುತ್ತವೆ. ಇದಕ್ಕೆ ಚುನಾವಣೆ ಸಮೀಕ್ಷೆಗಳೂ ಹೊರತಾಗಿಲ್ಲ. ಪ್ರಧಾನಿ ಮೋದಿ ಉಡುಪಿಯಲ್ಲಿ ದೇವೇಗೌಡರಿಗೆ ಟವೆಲ್ ಹಾಕಿರುವ ರೀತಿ ನೋಡಿದರೆ, ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಮುನ್ಸೂಚನೆ ಸಿಕ್ಕಿರುವ ಸಾಧ್ಯತೆಯನ್ನು ರಾಜಕೀಯ ವಿಶ್ಲೇಷಕರು ಮುಂದಿಡುತ್ತಿದ್ದಾರೆ.

“ಮೋದಿ ಭಾ‍ಷಣದಲ್ಲಿ ದೇವೇಗೌಡರನ್ನು ನೆನಪಿಸಿಕೊಂಡ ರೀತಿ ಅಚ್ಚರಿ ಮೂಡಿಸುವಂತಿದೆ. ಒಂದು ವೇಳೆ ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಸರಕಾರ ರಚಿಸಲು ಜೆಡಿಎಸ್‌ ಅಗತ್ಯ ಬೀಳುತ್ತದೆ. ಈ ಕಾರಣಕ್ಕೆ ಗೌಡರನ್ನು ಹೊಗಳುವ ಕೆಲಸ ಮಾಡಿದ್ದಾರೆ. ಅಷ್ಟೆ ಅಲ್ಲ, ತಮ್ಮನ್ನು ಅಪಮಾನ ಮಾಡಿದ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುತ್ತೀರಾ ಎಂಬ ಪರೋಕ್ಷ ಪ್ರಶ್ನೆಯನ್ನೂ ಗೌಡರ ಮುಂದಿಟ್ಟಿದ್ದಾರೆ,’’ ಎನ್ನುತ್ತಾರೆ ಹಿರಿಯ ರಾಜಕೀಯ ವರದಿಗಾರರೊಬ್ಬರು.

ಅತಂತ್ರ ವಿಧಾನಸಭೆ?:

ರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಈವರೆಗೆ ಹೊರಬಿದ್ದ ಸಮೀಕ್ಷೆಗಳು(ಸಿ- ಫೋರ್ ಹೊರತುಪಡಿಸಿ) ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡಿಲ್ಲ. ಆಡಳಿತರೂಢ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನಗಳನ್ನು ಪಡೆಯುವ ಸಾಧ್ಯತೆಯನ್ನು ಹೇಳಿದ್ದರೂ, ಸ್ವತಂತ್ರವಾಗಿ ಸರಕಾರ ರಚನೆಗೆ ಅಗತ್ಯವಾದ 113 ಸೀಟುಗಳನ್ನು ಗಳಿಸುವುದು ಕಷ್ಟ ಎನ್ನುತ್ತಿವೆ ಸಮೀಕ್ಷೆಗಳು. ಹಾಗೆಯೇ, ಬಿಜೆಪಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ ಎಂದು ಹೇಳಿದರೂ, ಸರಕಾರ ರಚನೆಗೆ ನಂತರದ ಸ್ಥಾನದಲ್ಲಿರುವ ಜೆಡಿಎಸ್‌ ಬೆಂಬಲದ ಅಗತ್ಯವಿದೆ.

ಇದನ್ನು ಗಮನದಲ್ಲಿ ಇಟ್ಟುಕೊಂಡೇ ಕಾಂಗ್ರೆಸ್ ಪಕ್ಷ ಬಿಜೆಪಿ ಜತೆಜತೆಗೆ ಜೆಡಿಎಸ್‌ ವಿರುದ್ಧವೂ ವಾಗ್ಧಾಳಿಗಳನ್ನು ನಡೆಸಿಕೊಂಡು ಬಂದಿದೆ. ಮೈಸೂರಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಾಯಲ್ಲಿ, “ಜೆಡಿಎಸ್‌ ಎಂದರೆ ಜನತಾದಳ ಸಂಘಪರಿವಾರ,’’ ಎಂದು ಹೇಳಿಸಲಾಗಿತ್ತು. ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತು ಅಮಿತ್ ಶಾ ಖಾಸಗಿ ವಿಮಾನದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ ಕುರಿತು ಮಾಹಿತಿ ಇದೆ ಎಂದು ಹೇಳಿದ್ದರು.

ಒಟ್ಟಾರೆ, ಬಿಜೆಪಿ ಮತ್ತು ಜೆಡಿಎಸ್‌ ಚುನಾವಣೆ ಪೂರ್ವದಲ್ಲಿಯೇ ಹೊಂದಾಣಿಕೆ ಮಾಡಿಕೊಂಡಿವೆ ಎಂಬ ಸಂದೇಶವನ್ನು ಮೇಲಿಂದ ಮೇಲೆ ಕಾಂಗ್ರೆಸ್ ತೂರಿಬಿಡುವ ಪ್ರಯತ್ನ ಮಾಡುತ್ತಲೇ ಬಂದಿದ್ದು ಗಮನಾರ್ಹ. ಈ ಮೂಲಕ ಅಲ್ಪಸಂಖ್ಯಾತ ಮತಗಳು ಜೆಡಿಎಸ್‌ಗೆ ಹೋಗದಂತೆ ತಡೆಯುವ ಪ್ರಯತ್ನ ಢಾಳಾಗಿ ಕಾಣಿಸುತ್ತಿದೆ.

ಹೀಗಿರುವಾಗಲೇ, ಎನ್‌ಡಿಟಿವಿಗೆ ಸಂದರ್ಶನ ನೀಡಿದ ಎಚ್. ಡಿ. ದೇವೇಗೌಡ, ಯಾವುದೇ ಕಾರಣಕ್ಕೂ ಬಿಜೆಪಿ ಜತೆ ಹೋಗುವುದಿಲ್ಲ ಎಂಬ ಸೂಚನೆ ನೀಡಿದ್ದರು. ಒಂದು ವೇಳೆ ಕುಮಾರಸ್ವಾಮಿ ಹೊಂದಾಣಿಕೆ ಮಾಡಿಕೊಂಡರೆ, ಮನೆಯಿಂದಲೇ ಹೊರಹಾಕುವ ಮಾತುಗಳನ್ನವರು ಆಡಿದ್ದರು.

ಮೋದಿ ಗೂಗ್ಲಿ:

ಮತದಾನಕ್ಕೆ ಇನ್ನು 11 ದಿನಗಳು ಬಾಕಿ ಇವೆ. ಕೊನೆಯ ಹಂತದ ಪ್ರಚಾರದಲ್ಲಿ ಮೂರೂ ಪಕ್ಷಗಳು ತೊಡಗಿಸಿಕೊಂಡಿವೆ. ಈ ಹಂತದಲ್ಲಿ ತಮ್ಮ ಚುನಾವಣೆ ಪ್ರಚಾರವನ್ನು ಆರಂಭಿಸಿರುವ ಪ್ರಧಾನಿ ಮೋದಿ ಚಾಮರಾಜನಗರ ಜಿಲ್ಲೆಯಲ್ಲಿ ಜೆಡಿಎಸ್‌ ಕುರಿತು ಒಂದೇ ಒಂದು ಮಾತುಗಳನ್ನಾಡಿರಲಿಲ್ಲ.

Also read: ನಾಮಧಾರಿ, ಕಾಮಧಾರಿ, ಚರ್ವಿತ- ಚರ್ವಣ: ಮೋದಿ ಚುನಾವಣಾ ಭಾಷಣ

ಉಡುಪಿಗೆ ಬರುತ್ತಲೇ ಪ್ರಧಾನಿ ಮೋದಿ, ದೇವೇಗೌಡರನ್ನು ನೆನಪಿಸಿಕೊಂಡಿದ್ದಾರೆ. ಈ ಮೂಲಕ ಜೆಡಿಎಸ್‌ ಜತೆಗಿನ ತಮ್ಮ ಹೊಂದಾಣಿಕೆಯ ಸಾಧ್ಯತೆಯನ್ನು ಅವರು ಮುಂದಿಟ್ಟಿದ್ದಾರೆ. ಅದಕ್ಕಿಂತ ಹೆಚ್ಚಾಗಿ, ಮುಂಬರುವ ಚುನಾವಣಾ ಫಲಿತಾಂಶದಲ್ಲಿ ನಿಚ್ಚಳ ಬಹುಮತ ಪಡೆಯಲು ಯಾವ ಪಕ್ಷಗಳಿಗೂ ಸಾಧ್ಯವಿಲ್ಲ ಎಂಬುದನ್ನು ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಲಾಭ ಯಾರಿಗೆ?:

ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ತಾವು ಕಿಂಗ್ ಮೇಕರ್ ಅಲ್ಲ, ಕಿಂಗ್ ಎಂದು ಪದೇ ಪದೇ ಹೇಳಿಕೊಂಡು ಬರುತ್ತಿದ್ದಾರೆ. ಈ ಮೂಲಕ ಬಿಜೆಪಿ ಜತೆಗಿನ ಯಾವ ಹೊಂದಾಣಿಕೆಯನ್ನು ಅವರು ಅಲ್ಲಗೆಳೆಯುತ್ತಿದ್ದಾರೆ. ಕಾರಣ, ಜೆಡಿಎಸ್ ಬಿಜೆಪಿ ಜತೆಗೆ ಚುನಾವಣಾ ಮೈತ್ರಿ ವಿಚಾರ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬ ಲೆಕ್ಕಾಚಾರ. ಬಿಜೆಪಿ ತೋರಿಸುವ ಸಣ್ಣಮಟ್ಟಿಗಿನ ಸಾಫ್ಟ್ ಕಾರ್ನರ್‌ ಜೆಡಿಎಸ್‌ಗೆ ಅಲ್ಪಸಂಖ್ಯಾತ ಮತಗಳ ಕುತ್ತು ತರುತ್ತದೆ. ಇದನ್ನು ಸಾಮಾನ್ಯ ಜನ ಕೂಡ ಗ್ರಹಿಸುತ್ತಿದ್ದಾರೆ.

ಅದೇ ವೇಳೆ, ಕಾಂಗ್ರೆಸ್ ಕೂಡ ಜೆಡಿಎಸ್‌- ಬಿಜೆಪಿ ಹೊಂದಾಣಿಕೆಯನ್ನು ಚರ್ಚೆಗೆ ಎಳೆದು ತರುವ ಪ್ರಯತ್ನ ನಡೆಸುತ್ತಿದೆ. ಈ ಮೂಲಕ ಅಲ್ಪಸಂಖ್ಯಾತರು ಹಾಗೂ ಜಾತ್ಯಾತೀತ ಮತಗಳು ಅನಿವಾರ್ಯವಾಗಿ ಕಾಂಗ್ರೆಸ್ ತೆಕ್ಕೆಯಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನ ಎದ್ದು ಕಾಣಿಸುತ್ತಿದೆ.

ಇದೀಗ ಮೋದಿ ಆಡಿರುವ ಮಾತುಗಳ ಹಿಂದೆ ಇಂತಹ ಲೆಕ್ಕಾಚಾರಗಳನ್ನು ಮೀರಿದ ಸತ್ಯ ಅಡಗಿರುವ ಸಾಧ್ಯತೆ ಇದೆ. ಎಲ್ಲಾ ವಿಶ್ಲೇಷಣೆಗಳನ್ನು, ಸಾಧ್ಯತೆಗಳನ್ನು ದಾಟಿ ಒಂದು ವೇಳೆ ಅತಂತ್ರ ವಿಧಾನಸಭೆ ನಿರ್ಮಾಣವಾದ ಜೆಡಿಎಸ್‌ ಕಿಂಗ್ ಮೇಕರ್ ಆಗಲೇಬೇಕಾಗುತ್ತದೆ.

ಅಂತಹ ಸಮಯದಲ್ಲಿ ಕಾಂಗ್ರೆಸ್ ಜತೆಗಿನ ಹೊಂದಾಣಿಕೆಯನ್ನು ಇಲ್ಲವಾಗಿಸುವ ಮತ್ತು ಆ ಮೂಲಕ ಕಾಂಗ್ರೆಸ್ ತೆಕ್ಕೆಯಿಂದ ಕರ್ನಾಟಕವನ್ನು ಹೊರತರುವ ಪ್ರಯತ್ನ ಎದ್ದು ಕಾಣಿಸುತ್ತಿದೆ.ಒಟ್ಟಿನಲ್ಲಿ, ಮಣ್ಣಿನ ಮಗನ ಗುಣಗಾನ ಮಾಡಿದ ಮೋದಿ, ಬಿಜೆಪಿ ನಿಚ್ಚಳ ಬಹುಮತ ಪಡೆಯುವ ಅನುಮಾನದ ಬೆಂಕಿಗೆ ತುಪ್ಪ ಸುರಿದಿದ್ದಾರೆ.

ಮೋದಿ ಹೊಗಳಿಕೆಯಿಂದ ಯಾರಿಗೆ ಎಷ್ಟು ಲಾಭ, ಯಾರಿಗೆಷ್ಟು ನಷ್ಟ ಎಂಬುದನ್ನು ಮತದಾರ ಮೇ. 15ರಂದು ತಿಳಿಸಲಿದ್ದಾನೆ.