samachara
www.samachara.com
ಹಸು ಸಾಕಿ, ಹತ್ತು ಲಕ್ಷ ಗಳಿಸಿ ಎಂದ ಸಿಎಂ ಬಿಪ್ಲಬ್ ದೇಬ್ ಎಂಎ ಪದವೀಧರ!
COVER STORY

ಹಸು ಸಾಕಿ, ಹತ್ತು ಲಕ್ಷ ಗಳಿಸಿ ಎಂದ ಸಿಎಂ ಬಿಪ್ಲಬ್ ದೇಬ್ ಎಂಎ ಪದವೀಧರ!

ಇಷ್ಟಕ್ಕೂ ಈ ಬಿಪ್ಲಬ್ ಯಾರು ಎಂದು ಹುಡುಕಿಕೊಂಡು ಹೊರಟರೆ ಜನಸಂಘದ ಜತೆಗಿನ ಅವರ ಕುಟುಂಬದ ನಂಟಿನ ಕತೆ ತೆರೆದುಕೊಳ್ಳುತ್ತದೆ.

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಪುರಾಣ ಕತೆಗಳಲ್ಲಿ ಬರುವ ಪ್ರಸಂಗಗಳನ್ನು ಇಟ್ಟುಕೊಂಡು ವಿಜ್ಞಾನದ ಬೆಳವಣಿಗಳಿಗೆ ಹೋಲಿಸುವ ಪರಿಪಾಠವನ್ನು ಆರಂಭಿಸಿದ್ದು ದೇಶದ ಬಲಪಂಥೀಯ ಮನಸ್ಥಿತಿ. ಕೆಲವು ದಶಕಗಳ ಹಿಂದೆ ಇದು ಸಣ್ಣ ಮಟ್ಟದಲ್ಲಿ ಕೇಳಿಬರುತ್ತಿತ್ತು. ಆದರೆ ಬಿಜೆಪಿ ದೇಶದ ಹಲವು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದ ಮೇಲೆ ಉನ್ನತ ಹುದ್ದೆಯಲ್ಲಿರುವವರೇ ಪುರಾಣಕ್ಕೂ, ವಿಜ್ಞಾನಕ್ಕೂ ತಳಕುಹಾಕುವ ಕೆಲಸ ಮಾಡುತ್ತಿದ್ದಾರೆ. ಸಹಜವಾಗಿಯೇ ಇದು ದೇಶವಾಸಿಗಳ ಗಮನ ಸೆಳೆಯುತ್ತಿದೆ, ಜನರಲ್ಲಿ ನಗೆಗಡಲನ್ನು ಸೃಷ್ಟಿಸಿದೆ. 

ಕೆಲವು ದಿನಗಳ ಹಿಂದೆ ಅಂತರ್ಜಾಲದ ಬಳಕೆ ಮಹಾಭಾರತದ ಕಾಲದಿಂದಲೇ ಬಳಕೆಯಲ್ಲಿತ್ತು ಎಂದು ಹೇಳಿಕೆ ನೀಡಿ ತೀವ್ರ ಅಪಹಾಸ್ಯಕ್ಕೆ ಗುರಿಯಾಗುವ ಸರದಿ ಈಗ ತ್ರಿಪುರದ ಮುಖ್ಯಮಂತ್ರಿ ಬಿಪ್ಲಬ್‌ ಕುಮಾರ್‌ ದೇಬ್‌ ಅವರದ್ದು.

ಅವರ ಈ ಹಾಸ್ಯ ಚಟಾಕಿಗಳು ಇಷ್ಟಕ್ಕೆ ನಿಲ್ಲುವುದಿಲ್ಲ. ತನ್ನ ರಾಜ್ಯದ ಯುವಜನತೆಗೆ ಸರಕಾರಿ ಉದ್ಯೋಗಗಳ ಹಿಂದೆ ಅಲೆಯುವ ಬದಲು ನಿಮ್ಮ ಮನೆಗಳಲ್ಲಿ ಹಸುಗಳನ್ನು ಸಾಕಿ ಎಂದು ಉಪದೇಶ ನೀಡುವ ಮೂಲಕ ಹೊಸ ಚರ್ಚೆಗೂ ನಾಂದಿ ಹಾಡಿದ್ದಾರೆ. ಕಳೆದ ತ್ರಿಪುರ ಚುನಾವಣೆಯಲ್ಲಿ ನಿರುದ್ಯೋಗದ ವಿಷಯವೇ ಪ್ರಧಾನವಾಗಿತ್ತು. ಅಧಿಕಾರಕ್ಕೆ ಬರುತ್ತಲೇ, ತನ್ನ ಸರಕಾರದ ಹೊಣೆಗಾರಿಕೆಯನ್ನು ಮರೆತ ಬಿಪ್ಲಬ್‌, ಹಸು ಸಾಕಿ, ಪಾನ್ ಶಾಪ್ ಇಡಿ ಅಂತ ಯುವಜನತೆಗೆ ಕರೆ ನೀಡಿದ್ದಾರೆ. ಈ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.

ಒಂದು ಲೀಟರ್‌ ಹಾಲಿಗೆ 50 ರೂಪಾಯಿ ಬೆಲೆಯಿದೆ. ಹಸು ಸಾಕಿದರೆ 10 ವರ್ಷಕ್ಕೆ 10 ಲಕ್ಷ ಸಂಪಾದಿಸಬಹುದು ಎಂದರು ಮುಖ್ಯಮಂತ್ರಿ ಬಿಪ್ಲಬ್‌. ಯುವಜನರಿಗೆ ಪಾನ್‌ ಮಸಾಲಾ ಅಂಗಡಿಗಳನ್ನು ತೆರೆಯುವಂತೆ ಸೂಚಿಸಿದ್ದರು. ನಾಗರಿಕ ಸೇವೆಗಳನ್ನು ಸಲ್ಲಿಸಲು ಸಿವಿಲ್‌ ಎಂಜಿನಿಯರ್‌ಗಳಿಗಷ್ಟೇ ಅರ್ಹತೆ ಇದೆ ಎಂದರು. ಮೆಕಾನಿಕಲ್‌ ಎಂಜಿನಿಯರಿಂಗ್‌ ಪೂರೈಸಿರುವ ಯುವಜನರು ಸರಕಾರಿ ಹುದ್ದೆಗಳಿಗೆ ಸೂಕ್ತವಲ್ಲ ಎನ್ನುವ ಮೂಲಕ ಅತಾರ್ಕಿಕ ವಾದ ಮಂಡಿಸಿದರು.

ಹೀಗೆ, ಪದೇ ಪದೇ ಅಸಂಬದ್ಧ ಹೇಳಿಕೆಗಳನ್ನು ನೀಡಿ ಪಕ್ಷಕ್ಕೆ ಮುಜುಗರವನ್ನು ಉಂಟು ಮಾಡುತ್ತಿರುವ ಬಿಪ್ಲಬ್‌ ಕುಮಾರ್‌ಗೆ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ತಮ್ಮನ್ನು ಭೇಟಿಯಾಗುವಂತೆ ತಿಳಿಸಿದ್ದಾರೆ. ಮೇ 2ರಂದು ಬಿಪ್ಲಬ್‌ ದೆಹಲಿಯಲ್ಲಿ ಮೋದಿ ಹಾಗೂ ಅಮಿತ್‌ ಶಾರನ್ನು ಭೇಟಿಯಾಗಬೇಕಿದೆ. ಈ ಭೇಟಿಯ ನಂತರ ಬೆಳವಣಿಗೆಗಳು ಏನಾಗಬಹುದು ಎಂಬುದನ್ನು ಕಾದು ನೋಡಬೇಕಿದೆ. ಇಷ್ಟಕ್ಕೂ ಈ ಬಿಪ್ಲಬ್ ಯಾರು ಎಂದು ಹುಡುಕಿಕೊಂಡು ಹೊರಟರೆ ಜನಸಂಘದ ಜತೆಗಿನ ಅವರ ಕುಟುಂಬದ ನಂಟಿನ ಕತೆ ತೆರೆದುಕೊಳ್ಳುತ್ತದೆ.

ಯಾರೀತ ಬಿಪ್ಲಬ್‌ ಕುಮಾರ್‌ ದೇಬ್‌?

ಎರಡು ದಶಕಗಳ ಕಾಲ ತ್ರಿಪುರವನ್ನು ಆಳ್ವಿಕೆ ಮಾಡಿದ್ದ ಮಾಣಿಕ್‌ ಸರ್ಕಾರ್‌ರನ್ನು ಹಿಂದಿಕ್ಕಿ, ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿರುವ ಬಿಪ್ಲಬ್‌ ಕುಮಾರ್‌ ದೇಬ್‌ ಜನಿಸಿದ್ದು ತ್ರಿಪುರಾದ ಕಾಕ್ರಬಾನ್‌ ಎಂಬ ಹಳ್ಳಿಯಲ್ಲಿ. 1969ರಲ್ಲಿ ಹಿಂದೂ ಸಮುದಾಯದ ಒಳಗೆ ಗುರುತಿಸಿಕೊಂಡಿರುವ ಕಯಾಸ್ತಾ ಜಾತಿಯ ಮಧ್ಯಮ ಕುಟುಂಬದಲ್ಲಿ ಜನಿಸಿದ ಬಿಪ್ಲಬ್‌ ತಂದೆಯ ಹೆಸರು ಹಿರಧನ್‌ ದೇಬ್‌. ಹಿರಧನ್‌ ದೇಬ್‌ ಜನ ಸಂಘದಲ್ಲಿ ಸಕ್ರಿಯವಾಗಿ ನಿರತರಾಗಿದ್ದವರು.

ಪ್ರಾರ್ಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಉದಯ್‌ಪುರದ ಸರಕಾರಿ ಶಾಲೆಯಲ್ಲಿ ಪೂರೈಸಿದ ಬಿಪ್ಲಬ್‌ ಕುಮಾರ್‌ ದೇಬ್‌, ತ್ರಿಪುರಾದ ಅಗರ್ತಲಾ ವಿಶ್ವವಿದ್ಯಾಲಯದಿಂದ ಬಿ. ಎ ಪದವಿಯನ್ನು ಪೂರೈಸಿದರು. ಪದವಿ ವಿದ್ಯಾಭ್ಯಾಸದಲ್ಲಿ ತೊಡಗಿದ್ದ ಸಮಯದಲ್ಲಿ ಬಿಪ್ಲಬ್‌ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪರಿಚಯವಾಗಿತ್ತು. ಪದವಿ ನಂತರದ ಉನ್ನತ ಶಿಕ್ಷಣಕ್ಕಾಗಿ ದೆಹಲಿ ವಿಶ್ವ ವಿದ್ಯಾಲಯಕ್ಕೆ ತೆರಳಿದ ಬಿಪ್ಲಬ್‌, ಎಂ.ಎ ಪದವಿಯನ್ನು ಪಡೆದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಮಾಣಿಕ ನಾಯಕರುಗಳಾಗಿದ್ದ ಗೋಬಿಂದ ಆಚಾರ್ಯ ಮತ್ತು ಕೃಷ್ಣ ಗೋಪಾಲ ಶರ್ಮಾ ಬಿಪ್ಲಬ್‌ ಕುಮಾರ್‌ ದೇಬ್‌ಗೆ ಜ್ಞಾನವನ್ನು ತುಂಬುವ ಕೆಲಸದಲ್ಲಿ ನಿರತರಾಗಿದ್ದರು. ಇವರಿಬ್ಬರ ಮಾರ್ಗದರ್ಶನದಲ್ಲಿ ಸತತ 16 ವರ್ಷಗಳ ಕಾಲ ಬಿಪ್ಲಬ್‌ ಕುಮಾರ್‌ ದೇಬ್‌ ದೆಹಲಿಯಲ್ಲಿ ಸಂಘದ ಕಾರ್ಯಗಳಲ್ಲಿ ಭಾಗವಹಿಸಿದ್ದರು.

2001ರಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಸ್ಥಳೀಯ ಶಾಖೆಯಲ್ಲಿ ಡೆಪ್ಯೂಟಿ ಮ್ಯಾನೇಜರ್‌ ಆಗಿ ಸೇವೆ ಸಲ್ಲಿಸುತ್ತಿದ್ದ ನಿತಿ ಜತೆಗೆ ಮದುವೆಯಾದ ಬಿಪ್ಲಬ್‌ ಕುಮಾರ್ ದೇಬ್‌ಗೆ ಇಬ್ಬರು ಮಕ್ಕಳಿದ್ದಾರೆ. ಮಗನ ಹೆಸರು ಆರ್ಯನ್‌ ದೇಬ್‌. ಮಗಳ ಹೆಸರು ಶ್ರೇಯಾ ದೇಬ್‌.

2015ರಲ್ಲಿ ದೆಹಲಿಯಿಂದ ತ್ರಿಪುರಗೆ ಮರಳಿದ ಬಿಪ್ಲಬ್‌ ಕುಮಾರ್‌ ದೇಬ್‌, ಭಾರತೀಯ ಜನತಾ ಪಕ್ಷದ ಜನ ಸಂಪರ್ಕ ಪ್ರಮಖ್‌ ಆಗಿ ಕೆಲಸ ಆರಂಭಿಸಿದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಗಣೇಶ್‌ ಸಿಂಗ್‌ ಬಿಪ್ಲಬ್‌ರನ್ನು ತರಬೇತುಗೊಳಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.

ಇವರ ಜತೆಗೆ ಬಿಜೆಪಿಯ ಸುನಿಲ್‌ ದಿಯೋದರ್‌ ಕೂಡ ಬಿಪ್ಲಬ್‌ಗೆ ಬೌದ್ಧಿಕ ತಳಪಾಯವನ್ನು ಹಾಕಿಕೊಟ್ಟಿದ್ದರು. 2016ರ ಜನವರಿ 6ರಂದು ಬಿಪ್ಲಬ್‌ ಕುಮಾರ್‌ ದೇಬ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ಪದವಿ ದೊರೆತಿತ್ತು. ಕೇಸರಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ದೀರ್ಘಕಾಲದಿಂದ ಅಲಂಕರಿಸಿಕೊಂಡು ಬಂದಿದ್ದ ಸುದೀಂದ್ರ ದಸಗುಪ್ತಾ ಬಿಪ್ಲಬ್‌ ಕುಮಾರ್‌ ದೇಬ್‌ಗೆ ಅಧಿಕಾರವನ್ನು ಬಿಟ್ಟುಕೊಟ್ಟಿದ್ದರು.

ತ್ರಿಪುರದ ವಿಧಾನ ಸಭಾ ಚುನಾವಣೆಗಳು ಸನಿಹವಿದ್ದಾಗ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಬಿಪ್ಲಬ್‌ ಕುಮಾರ್‌ ದೇಬ್‌ ತ್ರಿಪುರದಲ್ಲಿನ ಆದಿವಾಸಿ ಸಮುದಾಯಗಳ ಬಾಹುಳ್ಯವಿರುವ ಪ್ರದೇಶಗಳಲ್ಲಿ ಪ್ರಚಾರ ಆರಂಭಿಸಿದ್ದರು. 25 ವರ್ಷಗಳಿಂದ ಭದ್ರವಾಗಿ ಬೇರೂರಿದ್ದ ಕೆಂಪು ಬಾವುಟವನ್ನು ಕಿತ್ತೊಗೆದು, ಅದರ ಜಾಗದಲ್ಲಿ ಕೇಸರಿ ಬಾವುಟಗಳನ್ನು ನೆಡಲು ಬೇಕಿದ್ದ ಎಲ್ಲಾ ಸಿದ್ಧತೆಗಳನ್ನು ಬಿಜೆಪಿ ಮಾಡಿಕೊಳ್ಳುತ್ತಾ ಸಾಗಿತ್ತು.

ಪ್ರಧಾನಿ ನರೇಂದ್ರ ಮೋದಿಯನ್ನು ತನ್ನ ರಾಜಕೀಯ ಗುರು ಎಂದು ಘೋಷಿಸಿಕೊಂಡಿದ್ದ ಬಿಪ್ಲಬ್‌ ಕುಮಾರ್‌ ದೇವ್‌, ಅಗರ್ತಲ ಜಿಲ್ಲೆಯ ಬನಮಲಿಪುರ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

ರಾಜ್ಯದಲ್ಲಿದ್ದ ನಿರುದ್ಯೋಗವನ್ನು ಚುನಾವಣಾ ಅಸ್ತ್ರವನ್ನಾಗಿ ಬಿಪ್ಲಬ್‌ ಬಳಸಿಕೊಂಡಿದ್ದರು. ನಿರುದ್ಯೋಗವನ್ನು ತೊಲಗಿಸುವುದಾಗಿ ಮನೆ ಮನೆ ಪ್ರಚಾರವನ್ನು ಆರಂಭಿಸಿದ್ದ ಬಿಪ್ಲಬ್‌ ಜತೆಗೆ ಸುನಿಲ್‌ ದಿಯೋದರ್‌ ಕೂಡ ಕೈ ಜೋಡಿಸಿದ್ದರು.

ಅಧಿಕಾರಕ್ಕೆ ಬಂದರೆ ನಿವೃತ್ತಿ ವೇತನದ ಫಲಾನುಭವಿಗಳಿಗೆ ಅನುಕೂಲಕರ ಎನಿಸುವ 7ನೇ ವೇತನ ಆಯೋಗದ ಶಿಫಾರಸ್ಸನ್ನು ಜಾರಿಗೆ ತರುವುದಾಗಿ ಬಿಪ್ಲಬ್‌ ಕುಮಾರ್‌ ದೇಬ್‌ ತ್ರಿಪುರ ಪ್ರಜೆಗಳಿಗೆ ಭರವಸೆ ನೀಡಿದ್ದರು.

ಸತತ 25 ವರ್ಷಗಳಿಂದ ಬದಲಾವಣೆ ಕಾಣದಿದ್ದ ಆಡಳಿತ, ದೇಶದಲ್ಲಿ ಉಂಟಾದ ಮೋದಿ ಅಲೆ, ದೇಶದ ಹಲವಾರು ರಾಜ್ಯಗಳಲ್ಲಿ ಅಧಿಕಾರವನ್ನು ಹಿಡಿದ ಬಿಜೆಪಿ - ಈ ಎಲ್ಲಾ ಅಂಶಗಳು ತ್ರಿಪುರದಲ್ಲಿದ್ದ ಕಮ್ಯುನಿಸ್ಟ್‌ ಸರಕಾರವನ್ನು ಉರುಳಿಸಿ, ತ್ರಿಪುರವನ್ನು ಕೇಸರಿ ಪಾಳಯಕ್ಕೆ ಸೇರಿಸಿದವು.

ಬನಮಲಿಪುರ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಪ್ರತಿಸ್ಪರ್ಧಿಯಾಗಿದ್ದ ಸಿಪಿಐ ಪಕ್ಷದ ಅಮೋಲ್‌ ಚಕ್ರಬೋರ್ತಿಯನ್ನು ಅಖಂಡ ಬಹುಮತದಿಂದ ಸೋಲಿಸಿದ ಬಿಪ್ಲಬ್‌ಗೆ ಮುಖ್ಯಮಂತ್ರಿ ಪಟ್ಟ ದೊರೆಯಿತು.

ಮಾರ್ಚ್‌ ತಿಂಗಳ 8ರಂದು ಬಿಪ್ಲಬ್‌ ಕುಮಾರ್‌ ದೇಬ್‌ ತ್ರಿಪುರದ ಮುಖ್ಯಮಂತ್ರಿಯಾಗಿ ಪಟ್ಟಾಭಿಷಕ್ತರಾದರು. ಬಿಜೆಪಿಯ ಯುವ ಮುಖ್ಯಮಂತ್ರಿಗಳು ಎನಿಸಿಕೊಂಡಿರುವ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌, ಅರುಣಾಚಲ ಪ್ರದೇಶದ ಪೆಮಾ ಖಂಡು ಹಾಗೂ ಮೇಘಾಲಯದ ಚೊರ್ನಾಡ್‌ ಸಂಗ್ಮಾರ ಸಾಲಿಗೆ ಬಿಪ್ಲಬ್‌ ಹೆಸರು ಸೇರ್ಪಡೆಗೊಂಡಿತು.

ಆದರೆ ಅಧಿಕಾರಕ್ಕೇರಿದ ಬಿಪ್ಲಬ್‌ ತಾವು ನೀಡಿದ ಭರವಸೆಗಳನ್ನು ಈಡೇರಿಸುವ ಬದಲು ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡಿ ದೇಶಾದ್ಯಂತ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ. ತಮ್ಮ ಹೇಳೀಕೆಗಳಿಂದ ತಮ್ಮ ಬುದ್ದಿಮತ್ತೆ ಎಷ್ಟಿದೆ ಎಂಬುದನ್ನು ಸಾಭೀತು ಪಡಿಸುತ್ತಿದ್ದಾರೆ.

ಈಗ ಅಮಿತ್‌ ಶಾ ಮತ್ತು ಮೋದಿ ಜತೆಗಿನ ಮಾತುಕತೆಯ ನಂತರವಾದರೂ ಬಿಪ್ಲಬ್‌ ಕಿಮಾರ್‌ ದೇಬ್‌ ಸುಮ್ಮನಾಗುತ್ತಾರೆಯೇ ಎನ್ನುವುದನ್ನು ಕಾಲವೇ ತಿಳಿಸಲಿದೆ.