samachara
www.samachara.com
ಕರ್ನಾಟಕದ ನೆಲದಲ್ಲಿ ಮೋದಿ ಭಾಷಣ: ಜನರ ಈ ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸುವರೇ? 
COVER STORY

ಕರ್ನಾಟಕದ ನೆಲದಲ್ಲಿ ಮೋದಿ ಭಾಷಣ: ಜನರ ಈ ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸುವರೇ? 

ಚುನಾವಣಾ ಚಾಣಾಕ್ಯ ಬಿರುದಾಂಕಿತ ಅಮಿತ್‌ ಶಾ ಕರ್ನಾಟಕದಲ್ಲಿ ಕೈಚೆಲ್ಲಿ ಕುಳಿತಿದ್ದಾರೆ. ಹೀಗಾಗಿ  ರಾಜ್ಯ ಬಿಜೆಪಿಗೆ ಪ್ರಧಾನಿ ನರೇಂದ್ರ ಮೋದಿ ಭಾ‍ಷಣಗಳೇ ಕೊನೆಯ ಆಸರೆಯಾಗಿವೆ. ಪ್ರಧಾನಿ ಬಾಯಲ್ಲಿ ರಾಜ್ಯದ ಜನ ಏನನ್ನು ಕೇಳಲು ಬಯಸುತ್ತಿದ್ದಾರೆ? 

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಕರ್ನಾಟಕದ ವಿಧಾನಸಭಾ ಚುನಾವಣೆಗೆ ಬಾಕಿ ಉಳಿದಿರುವುದು ಇನ್ನು ಕೇವಲ12 ದಿನಗಳು ಮಾತ್ರ. ದೇಶದ 22 ರಾಜ್ಯಗಳನ್ನು ಆಳುತ್ತಿರುವ ಬಿಜೆಪಿಗೆ ದಕ್ಷಿಣ ಭಾರತದ ರಾಜ್ಯವೀಗ  ಪ್ರತಿಷ್ಠೆಯ ಪ್ರಶ್ನೆಯಾಗಿದೆ. ದೇಶದೆಲ್ಲೆಡೆ ಮಂಕಾಗಿರುವ ಕಾಂಗ್ರೆಸ್‌ ಅಸ್ತಿತ್ವದ ಅಳಿವು ಉಳಿವುಗಳನ್ನು ನಿರ್ಧರಿಸುವ ಸ್ಪರ್ಧೆಯೂ ಇದಾಗಿದೆ. ಪ್ರಾದೇಶಿಕ ಪಕ್ಷ ಜೆಡಿಎಸ್‌ ಕೂಡ ಕಿಂಗ್‌ ಮೇಕರ್‌ ಆಗುವ ಕನಸು ಕಾಣುತ್ತಿದೆ. ಹೀಗಿರುವಾಗ, ಅಮಿತ್‌ ಶಾ ಕೂಡ ಕೈಚೆಲ್ಲಿದ ಮೇಲೆ ಬಿಜೆಪಿ ತನ್ನ ಭತ್ತಳಿಕೆಯಲ್ಲಿರುವ ಕೊನೆಯ ಅಸ್ತ್ರ ‘ಮೋದಿ ಭಾಷಣ’ವನ್ನೇ ನಂಬಿಕೊಂಡಂತಿದೆ. 

ಕಾರಣ ಇಷ್ಟೆ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಇಷ್ಟು ದಿನಗಳ ತನ್ನ ಚುನಾವಣಾ ಪ್ರಚಾರದಲ್ಲಿ ಹೇಳಿಕೊಳ್ಳುವ ಮೈಲಿಗಲ್ಲನ್ನು ಸ್ಥಾಪಿಸಲು ಸಾಧ್ಯವಾಗಿಲ್ಲ. ಪರಿವರ್ತನಾ ಯಾತ್ರೆ ಹೆಸರಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಿಂಗಳ ಹಿಂದೆಯೇ ರಾಜ್ಯ ಸುತ್ತಿ ಬಂದಿದ್ದಾರೆ. ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಮ್ಮ ನೆಲೆಯನ್ನು ತಾತ್ಕಾಲಿಕವಾಗಿ ಕರ್ನಾಟಕಕ್ಕೆ ವರ್ಗಾಯಿಸಿಕೊಂಡಿದ್ದಾರೆ. ಆದರೆ ಇವರಿಬ್ಬರ ಮಾತುಗಳು ಜನರಲ್ಲಿ ಮೋಡಿ ಮಾಡುತ್ತಿಲ್ಲ, ಬಿಜೆಪಿ ಗುರುತಿಸುವ ಮಟ್ಟಕ್ಕೆ ತನ್ನ ಪ್ರಚಾರದ ವರ್ಚಸ್ಸನ್ನು ಬೆಳೆಸಿಕೊಳ್ಳಲು ಸಾಧ್ಯವಾಗಿಲ್ಲ.

ಕೊನೆಯ ಆಸರೆ ಮೋದಿ:

ಈಗ ಕೊನೆಯದೊಂದು ಹುಲ್ಲು ಕಡ್ಡಿಯ ಆಸರೆಯಂತೆ ಕಾಣಿಸುತ್ತಿರುವುದು ಪ್ರಧಾನಿ ಮೋದಿಯ ಚುನಾವಣಾ ಪ್ರವಾಸ. ಅದಕ್ಕಾಗಿ ರಾಜ್ಯ ಬಿಜೆಪಿ ಕಾದು ಕುಳಿತಿದೆ. ಜಾತಿ ರಾಜಕಾರಣ, ಧರ್ಮ ರಾಜಕಾರಣಗಳಿಂದ ಸಂಪೂರ್ಣ ಗೆಲುವು ದಾಖಲಿಸಲು ಸಾಧ್ಯವಿಲ್ಲ ಎಂದೆನಿಸಿದ ಮೇಲೆ ಮೋದಿ ತಮ್ಮ ಅಭಿವೃದ್ಧಿಯ ಅಸ್ತ್ರವನ್ನು ಹಿಡಿದುಕೊಂಡು ಕರ್ನಾಟಕದ ಚುನಾವಣಾ ಕಣಕ್ಕಿಳಿಯುವ ಮುನ್ಸೂಚನೆ ನೀಡಿದ್ದಾರೆ. ಮೋದಿಯ ಮೆರವಣಿಗೆಗಳು ಮತ್ತು ಅಬ್ಬರದ ಭಾಷಣಗಳ ಮೇಲೆ ಬಿಜೆಪಿಯ ಭವಿಷ್ಯ ದಾಖಲಾಗಬಹುದೆಂಬ ಅಂಶಗಳು ಚರ್ಚೆಗೆ ಬರುತ್ತಿವೆ. ರಾಜ್ಯ ಬಿಜೆಪಿ ಅಂದುಕೊಂಡಂತೆ ಆಗಿದ್ದರೆ ಪ್ರಧಾನಿ ಮೋದಿ ಈ ವೇಳೆಗಾಗಲೇ ಕೊನೆ ಹಂತದ ಪ್ರಚಾರವನ್ನು ನಡೆಸುತ್ತಿರಬೇಕಾಗಿತ್ತು. ಆದರೆ ವಿದೇಶಗಳನ್ನು ಸುತ್ತುತ್ತಿರುವ ಮೋದಿ, ಆಪ್‌ ಮೂಲಕ ತಮ್ಮ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದಾರೆ.

ಕಾರ್ಮಿಕ ದಿನಾಚರಣೆಯ ದಿನ, ಮೇ 1ರಂದು ಮೋದಿ ರಾಜ್ಯದಲ್ಲಿ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ. ಆಡಳಿತ ಪಕ್ಷ ಕಾಂಗ್ರೆಸ್‌ಅನ್ನು ಹೀಗಳಿಯದೇ ಮತ ಯಾಚಿಸುವುದು ಕಷ್ಟವಿದೆ. ಆದರೆ ಕರ್ನಾಟದ ಜನರು ಮೋದಿಯಿಂದ ಕಾಂಗ್ರೆಸ್ ವಿರೋಧಿ ಬೈಗುಳಗಳನ್ನಷ್ಟೇ ಬಯಸುತ್ತಿಲ್ಲ. ದೇಶದಲ್ಲಿನ ಹಲವಾರು ಸಮಸ್ಯೆಗಳಿಗೆ ನೀವು ಕೈಗೊಂಡಿರುವ ಪರಿಹಾರಗಳೇನು ಎಂದು ಮೋದಿಯನ್ನು ಪ್ರಶ್ನಿಸುತ್ತಿದ್ದಾರೆ. ನಿಮ್ಮ ಸರಕಾರ ತಂದ ಹಲವಾರು ಯೋಜನೆಗಳಿಂದ ದೇಶದ ಜನರಿಗೆ ಆಗುತ್ತಿರುವ ಲಾಭಗಳೇನು ಎಂದು ಪ್ರಧಾನಿಯನ್ನು ಕೇಳುತ್ತಿದ್ದಾರೆ.

ಅನಾಣ್ಯೀಕರಣ:

ಕರ್ನಾಟಕದ ನೆಲದಲ್ಲಿ ಮೋದಿ ಭಾಷಣ: ಜನರ ಈ ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸುವರೇ? 

ಬರೀ ಕರ್ನಾಟಕದವಲ್ಲವೇ ಇಡೀ ದೇಶದ ಜನ ಪ್ರಧಾನಿಗಳ ಮುಂದಿಟ್ಟಿರುವ ಪ್ರಶ್ನೆಗಳಲ್ಲಿ ಅನಾಣ್ಯೀಕರಣವೂ ಒಂದು. 2016ರ ನವೆಂಬರ್‌ 8ರಂದು ಇಡೀ ದೇಶಕ್ಕೆ ದೊಡ್ಡ ಶಾಕ್‌ ನೀಡಿದ್ದ ಮೋದಿಯ ಬಹು ನಿರೀಕ್ಷಿತ ಅನಾಣ್ಯೀಕರಣ ಹಲವಾರು ವಿವಾದಗಳನ್ನು ಹುಟ್ಟುಹಾಕಿತ್ತು. ದೇಶದಲ್ಲಿ ಚಾಲ್ತಿಯಲ್ಲಿದ್ದ ಶೇ.86ರಷ್ಟು ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಿದ್ದ ಮೋದಿ, 50 ದಿನಗಳ ಕಾಲ ಸಹಿಸಿಕೊಳ್ಳಬೇಕೆಂದು ಪ್ರಜೆಗಳಲ್ಲಿ ಮನವಿ ಮಾಡಿದ್ದರು.

ಕಪ್ಪು ಹಣವನ್ನು ಆರ್ಥಿಕ ವ್ಯವಸ್ಥೆಯಿಂದ ಹೊರಗಟ್ಟುವ ನಿಟ್ಟಿನಲ್ಲಿ ಬಂದ ಈ ಅನಾಣ್ಯೀಕರಣದಿಂದ ಅದ ಉಪಯೋಗವಾದರೂ ಏನು ಎನ್ನುವ ಬಗ್ಗೆ 2017ರಲ್ಲೇ ಚರ್ಚೆ ಆರಂಭವಾಗಿತ್ತು. ಪ್ರಧಾನಿ ಮೋದಿ ಬೆಟ್ಟವನ್ನು ಅಗೆದು ಇಲಿ ಹಿಡಿಯಲು ಹೊರಟಿದ್ದಾರೆಯೇ ಎನ್ನುವ ಮಾತುಗಳು ಸತ್ಯಕ್ಕೆ ಹತ್ತಿರವಾಗಿದ್ದವು. ಸುಮಾರು 50 ಲಕ್ಷ ಜನರು ಉದ್ಯೋಗಗಳನ್ನು ಕಳೆದುಕೊಂಡಿದ್ದರು. ಆರ್ಥಿಕ ವಿಶ್ಲೇಷಣೆಗಳ ಪ್ರಕಾರ ಅನಾಣ್ಯೀಕರಣದ ಪ್ಲಾನ್‌ ಪೂರ್ತಿಯಾಗಿ ನೆಲಕಚ್ಚಿತ್ತು. ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದು ನೀವು ಸಾಧಿಸಿದ್ದಾದರೂ ಏನು ಎಂಬ ಪ್ರಶ್ನೆಗೆ ಮೋದಿ ಇದುವರೆಗೂ ಸ್ಪಷ್ಟವಾದ ಉತ್ತರವನ್ನು ನೀಡಿಲ್ಲ.

ಜಿಎಸ್‌ಟಿಯಿಂದ ಸಾಧಿಸಿದ್ದೇನು?:

ಕರ್ನಾಟಕದ ನೆಲದಲ್ಲಿ ಮೋದಿ ಭಾಷಣ: ಜನರ ಈ ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸುವರೇ? 

ಇದು ದೇಶ ಹಾಗೂ ರಾಜ್ಯದ ಜನತೆ ಮೋದಿಯ ಮುಂದಿಟ್ಟಿರುವ ಮತ್ತೊಂದು ಪ್ರಮುಖ ಪ್ರಶ್ನೆ. ಇಡೀ ದೇಶಕ್ಕೆ ಏಕರೂಪದ ತೆರಿಗೆಯನ್ನು ವಿಧಿಸಲು ಮುಂದಾದ ಮೋದಿಯವರ ಮತ್ತೊಂದು ಬಹು ನಿರೀಕ್ಷಿತ ಯೋಜನೆ ಜಿಎಸ್‌ಟಿ ಅನುಷ್ಠಾನಕ್ಕೆ ಬರುವುದಕ್ಕೆ ಮೊದಲೇ ಟೀಕೆಗೊಳಗಾಗಿತ್ತು. ಹಠ ಸಾಧಿಸಿ ತಂದ ಜಿಎಸ್‌ಟಿ ಹಲವಾರು ದಿನನಿತ್ಯ ಉಪಯೋಗಿಸುವ ವಸ್ತುಗಳ ಬೆಲೆಯನ್ನು ಏರಿಸಿತ್ತು.

ಅಧಿಕಾರಕ್ಕೇರುವ ಮೊದಲು ದೇಶದಲ್ಲಿ ಜಿಎಸ್‌ಟಿಯನ್ನು ಅಳವಡಿಸಲು ಇದು ಸೂಕ್ತ ಸಮಯವಲ್ಲ ಎಂದಿದ್ದ ಮೋದಿ ಅಧಿಕಾರಕ್ಕೇರಿದ ನಂತರ ತಾವೇ ಜಿಎಸ್‌ಟಿಯನ್ನು ಜಾರಿಗೆ ತಂದು ಜನಸಾಮಾನ್ಯರಿಂದ ಮುಖಭಂಗ ಅನುಭವಿಸಿದ್ದರು. ಜಿಎಸ್‌ಟಿ ಜಾರಿಗೆ ಬಂದು ಒಂದು ವರ್ಷದ ಅವಧಿಯಲ್ಲಿ ಸರಕಾರದ ಬೊಕ್ಕಸಕ್ಕೆ ಸೇರಿದ ಹಣ ಸರಿ ಸುಮಾರಿ 7.41 ಲಕ್ಷ ಕೋಟಿ. ಆದರೆ ಇದರಿಂದ ಜನರಿಗಾದ ಲಾಭವೇನು ಎಂಬ ಪ್ರಶ್ನೆಗೆ ಮೋದಿಯಿಂದ ಇದುವರೆಗೂ ಸ್ಪಷ್ಟ ಉತ್ತರ ದೊರೆತಿಲ್ಲ.

ದೇಶದ ಜನರಿಗೆ ದೊರೆತ ಉದ್ಯೋಗಗಳೆಷ್ಟು?:

ಕರ್ನಾಟಕದ ನೆಲದಲ್ಲಿ ಮೋದಿ ಭಾಷಣ: ಜನರ ಈ ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸುವರೇ? 

ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಪ್ರತಿ ವರ್ಷ 1 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ ನೀಡಿದ್ದರು. ಆದರೆ ಈ ಭರವಸೆ ಕೇವಲ ಭರವಸೆಯಾಗಿಯೇ ಉಳಿದಿದೆ. ಹೇಳಿದಂತೆ ನಡೆದಿದ್ದರೆ ಈವರೆಗೆ ಭಾರತದಲ್ಲಿ ಮೋದಿ ಸರಕಾರ 4 ಕೋಟಿಗೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಬೇಕಿತ್ತು. ಆದರೆ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ ಹೇಳುವ ಪ್ರಕಾರ ಮೋದಿ ಅಡಳಿತಾವಧಿಯಲ್ಲಿ ಸೃಷ್ಟಿಯಾಗಿರುವ ಉದ್ಯೋಗಗಳ ಸಂಖ್ಯೆ ಕೇವಲ 8. 23 ಲಕ್ಷ.

2013-14ರ ಹಣಕಾಸು ವರ್ಷದ ಅವಧಿಯಲ್ಲಿ ಶೇ. 4.9ರಷ್ಟಿದ್ದ ನಿರುದ್ಯೋಗದ ದರ 2016ರ ವೇಳೆಗೆ ಶೇ.5ನ್ನು ತಲುಪಿತ್ತು. ಈಗ ದೇಶ ಶೂನ್ಯ ಉದ್ಯೋಗ ಸೃಷ್ಟಿಯತ್ತ ಸಾಗುತ್ತಿದೆ ಎಂದು ವರದಿಗಳೇ ತಿಳಿಸುತ್ತವೆ. ಉದ್ಯೋಗಗಳನ್ನು ಸೃಷ್ಟಿಸುವ ಬದಲು ಇರುವ ಉದ್ಯೋಗಗಳನ್ನೂ ಕಿತ್ತುಕೊಳ್ಳುತ್ತಿರುವ ಸರಕಾರದ ವಿರುದ್ಧ ಸದಾ ಒಂದಲ್ಲೊಂದು ಪ್ರತಿಭಟನೆಗಳು ನಡೆಯುತ್ತಲೇ ಇವೆ. ಆದರೆ ಪ್ರಧಾನಿ ಮೋದಿ ಈವರೆಗೂ ಇದಕ್ಕೆ ಉತ್ತರಿಸಿಲ್ಲ.

ಗಗನದತ್ತ ಮುಖ ಮಾಡಿರುವ ಬೆಲೆಗಳು?:

ಕರ್ನಾಟಕದ ನೆಲದಲ್ಲಿ ಮೋದಿ ಭಾಷಣ: ಜನರ ಈ ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸುವರೇ? 

ಯುಪಿಎ ಅಧಿಕಾರಾವಧಿಯಲ್ಲಿ ಬೆಲೆ ಏರಿಕೆ ವಿರುದ್ಧ ಘರ್ಜಿಸುತ್ತಿದ್ದ ಬಿಜೆಪಿ, ತಮ್ಮ ಅವಧಿಯಲ್ಲಿ ತಂದ ಬದಲಾವಣೆಗಳೇನು ಎನ್ನುವುದು ಜನರ ಪ್ರಮುಖ ಪ್ರಶ್ನೆಗಳಲ್ಲೊಂದು. ಅಧಿಕಾರಕ್ಕೆ ಬಂದ ನಂತರ ಬೆಲೆಗಳು ಆಕಾಶಕ್ಕೇರುತ್ತಿವೆಯೇ ಹೊರತು ಹಿಮ್ಮುಖ ಚಲನೆ ಕಾಣಿಸುತ್ತಿಲ್ಲ. ಆಹಾರ ಸಾಮಗ್ರಿ ದಿನನಿತ್ಯ ಗೃಹ ಬಳಕೆಯ ವಸ್ತುಗಳು ಸೇರಿದಂತೆ ಪೆಟ್ರೋಲ್‌ ಡೀಸೆಲ್‌ ಕೂಡ ಹಿಂದೆಂದೂ ಕಾಣದಷ್ಟು ದುಬಾರಿಯಾಗಿವೆ. ಮೋದಿ ಸರಕಾರ ಹುಟ್ಟು ಹಾಕಿದ ಅಭಿವೃದ್ಧಿಯ ಕನಸು ಇದೆಯೇ ಎಂಬ ಪ್ರಶ್ನೆ ಜನ ಸಾಮಾನ್ಯರಲ್ಲಿದೆ. ಇದು ಕನ್ನಡಿಗರ ಪ್ರಶ್ನೆಯೂ ಕೂಡ. ಈವರೆಗೂ ಮೋದಿ ನಡೆಸಿರುವ ಚುನಾವಣಾ ಭಾಷಣಗಳಲ್ಲಿ ಈ ಕುರಿತು ಬಾಯಿ ಬಿಟ್ಟಿಲ್ಲ.

ಹೆಚ್ಚಾಗುತ್ತಿರುವ ಅತ್ಯಾಚಾರಗಳು:

ಕರ್ನಾಟಕದ ನೆಲದಲ್ಲಿ ಮೋದಿ ಭಾಷಣ: ಜನರ ಈ ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸುವರೇ? 

ಮೋದಿ ಮುಂದಿರುವ ಪ್ರಶ್ನೆಗಳ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ವಿಷಯ ಅತ್ಯಾಚಾರ. ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ತಡೆಗೆ ಮೋದಿ ಕೈಗೊಂಡಿರುವ ಕ್ರಮಗಳೇನು ಎಂಬ ಪ್ರಶ್ನೆ ಜನರ ಮನದಲ್ಲಿದೆ. ಇತ್ತೀಚಿಗೆ ತಂದ ಪೋಕ್ಸೋ ಕಾಯ್ದೆ ತಿದ್ದುಪಡಿಯನ್ನು ಹಲವಾರು ಹೋರಾಟಗಾರರು ಪ್ರಶ್ನಿಸಿದ್ದಾರೆ. ಬಿಜೆಪಿ ಸರಕಾರವೇ ಅಸ್ತಿತ್ವದಲ್ಲಿರುವ ಉತ್ತರ ಪ್ರದೇಶದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈಗಿರುವಾಗ ಬಿಜೆಪಿಯನ್ನು ಗೆಲ್ಲಿಸಿ ಎಂದು ಯಾವ ಸಾಧನೆಯನ್ನಿಡಿದು ಮತ ಕೇಳುತ್ತಿದ್ದೀರಿ ಎನ್ನುವುದು ಕನ್ನಡಿಗರ ಪ್ರಶ್ನೆ.

ಇವಿಷ್ಟೇ ಪ್ರಶ್ನೆಗಳಲ್ಲದೆ ಅಚ್ಚೇ ದಿನ್‌, ಕಾಶ್ಮೀರ ವಿವಾದ, ಪತ್ರಿಕಾ ಸ್ವಾತಂತ್ರ್ಯ, ಹೆಚ್ಚುತ್ತಿರುವ ದಲಿತರ ಮೇಲಿನ ದೌರ್ಜನ್ಯ, ಬಿಜೆಪಿ ನಾಯಕರು ನೀಡುತ್ತಿರುವ ಅಸಂಬದ್ಧ ಹೇಳಿಕೆಗಳು ಕೇವಲ ರಾಷ್ಟ್ರೀಯ ಪ್ರಜೆಗಳ ಪ್ರಶ್ನೆಗಳು ಮಾತ್ರವಲ್ಲದೇ ಕನ್ನಡಿಗರ ಪ್ರಶ್ನೆಗಳೂ ಆಗಿವೆ.

ಕರ್ನಾಟಕದ ಸಮಸ್ಯೆಗಳೇ ಆದ ಮಹಾದಾಯಿ ನದಿ ನೀರು ವಿವಾದ, ಕಾವೇರಿ ನದಿ ನೀರು ಹಂಚಿಕೆ ಕುರಿತಾದ ಮೋದಿಯ ಮೌನ, ಸಂವಿಧಾನ ಬದಲಿಸುತ್ತೇವೆಂಬ ಬಿಜೆಪಿ ನಾಯಕರ ಹೇಳಿಕೆಗಳು ಬಿಜೆಪಿಗೆ ಯಾವ ಕಾರಣಕ್ಕೆ ಮತ ನೀಡಬೇಕೆಂಬ ಪ್ರಶ್ನೆಯನ್ನು ಜನರಲ್ಲಿ ಮೂಡಿಸಿವೆ.

ಮೋದಿ ಈ ಎಲ್ಲಾ ಜ್ವಲಂತ ಸಮಸ್ಯೆಗಳ ಪರಿಹಾರದ ಕುರಿತು ಮಾತನಾಡುತ್ತಾರೆಯೇ ಅಥವಾ ಮತ್ತದೇ ತಮ್ಮ ಕಾಂಗ್ರೆಸ್‌ ವಿರೋಧಿ ಬೈಗುಳಗಳನ್ನು ಜನಕ್ಕೆ ಉಣಬಡಿಸಿ ವಾಪಸ್ಸು ಹೋಗುತ್ತಾರೆಯೇ ಎನ್ನುವುದನ್ನು ಅವರ ಚುನಾವಣಾ ಪ್ರಚಾರ ಭಾಷಣಗಳು ಸಾಬೀತುಪಡಿಸಲಿವೆ. ಅದಕ್ಕಾಗಿ ಇನ್ನು 24 ಗಂಟೆಗಳಷ್ಟೆ ಬಾಕಿ ಇದೆ.