samachara
www.samachara.com
‘ರೇಪ್ ಇನ್ ಇಂಡಿಯಾ’: ಹತ್ತು ವರ್ಷಗಳಲ್ಲಿ ದುಪ್ಪಟ್ಟಾಗಲು ಕಾರಣಗಳೇನು?
COVER STORY

‘ರೇಪ್ ಇನ್ ಇಂಡಿಯಾ’: ಹತ್ತು ವರ್ಷಗಳಲ್ಲಿ ದುಪ್ಪಟ್ಟಾಗಲು ಕಾರಣಗಳೇನು?

ಲಿಂಗ ಸಮಾನತೆ, ಮಹಿಳಾ ಸಬಲೀಕರಣ ಮತ್ತಿತರ ಪದಗಳು ಕೇವಲ ಪದಗಳಾಗಿಯೇ ಉಳಿದಿವೆ. ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ. ಬಿಹಾರದ ಜೆಹನಾಬಾದ್‌ನಲ್ಲಿ ನಡೆದ ಕೃತ್ಯ ಇದರ ಮುಂದುವರೆದ ಭಾಗವಷ್ಟೇ.

ಶರತ್‌ ಶರ್ಮ ಕಲಗಾರು

ಶರತ್‌ ಶರ್ಮ ಕಲಗಾರು

ಭಾರತದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರಾ? ಈ ಪ್ರಶ್ನೆಗೆ ಉತ್ತರ ಹುಡುಕಿ ಹೊರಟರೆ ಹಿಂದೆದಿಂಗಿಂತಲೂ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ದುಪ್ಪಟ್ಟಾಗಿವೆ ಎಂಬ ಎನ್‌ಸಿಆರ್‌ಬಿ ವರದಿ ಈ ಮಾತಿಗೆ ಪೂರಕವಾದ ಸಾಕ್ಷಿ ಒದಗಿಸುತ್ತದೆ.

ಕಳೆದ 10 ವರ್ಷಗಳಲ್ಲಿ (2007 ಇಂದ 2016) ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಶೇಕಡ 83% ಹೆಚ್ಚಿದೆ.

ಬಿಹಾರದ ಜೆಹನಾಬಾದಿನಲ್ಲಿ ನಡೆದಿರುವ ಹೇಯ ಕೃತ್ಯ ಇಡೀ ದೇಶದಾದ್ಯಂತ ಸದ್ದು ಮಾಡುತ್ತಿದೆ. ತನ್ನ ಪಾಡಿಗೆ ಹೋಗುತ್ತಿದ್ದ ಯುವತಿಯನ್ನು ಏಳು ಕಾಮುಕರು ಅತ್ಯಾಚಾರ ಮಾಡಲು ಯತ್ನಿಸಿದ್ದಾರೆ. ಅತ್ಯಾಚಾರ ಯತ್ನಕ್ಕೆ ಕೈಹಾಕಿದ ಕಾಮಪಿಪಾಸುಗಳನ್ನು ಯುವತಿ ಪರಿಪರಿಯಾಗಿ ಬೇಡಿಕೊಂಡರೂ ಕರುಣೆ ತೋರಲಿಲ್ಲ.

ಜತೆಗೆ ಘಟನೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುವ ದಾರ್ಷ್ಟ್ಯತೆಯನ್ನು ಪಾಪಿಗಳು ತೋರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಕೈಕಟ್ಟಿ ಕುಳಿತಿದ್ದ ಪೊಲೀಸರು ಈಗ ನಾಲ್ಕು ಮಂದಿಯನ್ನು ಬಂಧಿಸಿದ್ದು, ಇನ್ನೂ ಮೂವರು ತಲೆಮರೆಸಿಕೊಂಡಿದ್ದಾರೆ.

ಬಂಧಿತರೆಲ್ಲರೂ 18 ವರ್ಷ ಒಳಪಟ್ಟಿರುವವರು. ಜತೆಗೆ ವ್ಯಾಪಕ ಖಂಡನೆ ವ್ಯಕ್ತವಾಗುವ ವರೆಗೂ ಪೊಲೀಸರಿಗೆ ಪ್ರಕರಣದ ಗಂಭೀರತೆಯ ಅರಿವಾಗಿರಲಿಲ್ಲ. ಅಥವಾ ಅತ್ಯಾಚಾರವಾಗಿಲ್ಲವಲ್ಲ, ಯತ್ನವಷ್ಟೇ ಎಂಬ ಹರುಕು ಯೋಚನೆ ಇರಬಹುದು. ಇಡೀ ಮಾನವ ಸಮಾಜವೇ ತಲೆ ತಗ್ಗಿಸಬೇಕಾದ ಪ್ರಕರಣವಾದಾಗಲೂ ಪೊಲಿಸರು ಎಂದಿನ ನಿರ್ಲಕ್ಷ್ಯ ತೋರಿಸಿದ್ದಾರೆ.

ಜೆಹನಾಬಾದ್‌ನ ಘಟನೆಯನ್ನಾಧರಿಸಿ ಭಾರತದ ಇಂದಿನ ಚಿತ್ರಣವನ್ನು ಅವಲೋಕನ ಮಾಡಿದರೆ ದೇಶ ಎತ್ತ ಸಾಗುತ್ತಿದೆ ಎಂಬ ಅನುಮಾನ ಹುಟ್ಟದೇ ಇರದು. ಪೊಲೀಸ್‌ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಿಂದಲೇ 83% ಹೆಚ್ಚಿದೆ.

ಭಾರತದಲ್ಲಿ ಇಂದಿಗೂ ದೌರ್ಜನ್ಯಕ್ಕೊಳಗಾದ ಮಹಿಳೆ ಆಚೆ ಬಂದು ದೂರು ನೀಡಲು ಭಯಪಡುತ್ತಾರೆ. ಹಾಗಿದ್ದರೆ ದಾಖಲಾಗದ ಪ್ರಕರಣಗಳೆಷ್ಟಿರಬಹುದು. ಒಂದು ಮೂಲದ ಪ್ರಕಾರ ದಾಖಲಾದ ಪ್ರಕರಣಗಳ ಅರ್ಧವಾದರೂ ಪ್ರಕರಣಗಳು ನಡೆದಿರುತ್ತವೆ. ಆದರೆ ಇಂದಿನ ಸಾಮಾಜಿಕ ವ್ಯವಸ್ಥೆಯ ಹಿನ್ನೆಲೆಯಲ್ಲಿ ಮಹಿಳೆ ಮುಂದೆ ಬಂದು ದೂರು ನೀಡುತ್ತಿಲ್ಲವಷ್ಟೇ.

ಕಾರಣಗಳೇನು?:

ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣಗಳಿಗೆ ಕಾರಣಗಳೇನಿರಬಹುದು? ಸನಾತನವಾದಿಗಳು ಮತ್ತು ಮೂಲಭೂತವಾದಿಗಳ ಚಿಂತನೆ ಇದಕ್ಕೆ ಕಾರಣವಾ ಎಂಬ ಮಾತುಗಳೂ ಕೇಳಿ ಬರುತ್ತವೆ.

ಯಾಕೆಂದರೆ ಭಾರತೀಯ ಶಿಕ್ಷಣದಲ್ಲಿ ಇಂದಿಗೂ ಲೈಂಗಿಕತೆ ಭಾಗವಾಗಿಲ್ಲ. ಲೈಂಗಿಕ ಶಿಕ್ಷಣವನ್ನು ಮಕ್ಕಳಲ್ಲಿ ತುಂಬುತ್ತಿಲ್ಲ. ವಯೋಸಹಜ ಕಾಮನೆಗಳು ಎಲ್ಲರಲ್ಲೂ ಇರುತ್ತದೆ. ಕೆಲವರು ಕಾಮನೆಗಳನ್ನು ಹಿಡಿದಿಡಬಲ್ಲರು, ಕೆಲವರು ಕಟ್ಟಿಹಾಕಲಾರದೇ ಅತ್ಯಾಚಾರದಂತ ಕೃತ್ಯಕ್ಕೆ ಕೈಹಾಕುತ್ತಾರೆ.

ಆದರೆ ಲೈಂಗಿಕತೆಯ ಬಗ್ಗೆ ಮುಕ್ತ ವಾತಾವರಣ ನಿರ್ಮಾಣವಾದಲ್ಲಿ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಬಹುದು ಎಂಬ ಮಾತುಗಳನ್ನು ಮನೋವಿಜ್ಞಾನಿಗಳು ಹೇಳುತ್ತಾರೆ.

ಇತಿಹಾಸದ ಪುಟಗಳನ್ನು ತಿರುವಿದರೆ ಭಾರತದಂತ ಎಷ್ಟೋ ದೇಶಗಳು ಹೆಣ್ಣನ್ನು ಕೇವಲ ಭೋಗಕ್ಕಾಗಿ ಬಳಸಿಕೊಂಡ ಉದಾಹರಣೆಗಳೇ ಕಾಣುತ್ತವೆ. ಪುರುಷ ಪ್ರಧಾನ ವ್ಯವಸ್ಥೆಯ ಕರಿಛಾಯೆಗಳು ಇನ್ನೂ ಸಮಾಜದಲ್ಲಿ ಬೇರೂರಿದೆ. ಇವೆಲ್ಲಾ ಅಂಶಗಳೂ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಾರಣಗಳಿರಬಹುದು.

18 ವರ್ಷದೊಳಗಿನ ಯುವತಿಯರ ಮೇಲೆ ದೌರ್ಜನ್ಯ ಪ್ರಕರಣಗಳೂ ಹೆಚ್ಚುತ್ತಿವೆ, ಜತೆಗೆ 18 ವರ್ಷದೊಳಗಿನ ಯುವಕರು ಹಲವು ಅತ್ಯಾಚಾರ ಪ್ರಕರಣದ ಆರೋಪಿಗಳಿದ್ದಾರೆ. ಬಾಲ್ಯದಿಂದಲೇ ಲೈಂಗಿಕ ಶಿಕ್ಷಣವನ್ನು ನೀಡಿದಲ್ಲಿ, ಈ ಪ್ರಕರಣಗಳನ್ನು ತಡೆಯುವ ಸಾಧ್ಯತೆ ಹೆಚ್ಚು.

ಎನ್‌ಸಿಆರ್‌ಬಿ ದಾಖಲೆಗಳ ಪ್ರಕಾರ 2007ರಲ್ಲಿ ಒಂದು ಲಕ್ಷ ಮಹಿಳೆಯರಲ್ಲಿ 16.3 ಮಂದಿ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುತ್ತಿದ್ದರು. ಆದರೆ 2017ರ ವೇಳೆಗೆ ಈ ಸಂಖ್ಯೆ 53ಕ್ಕೇರಿದೆ. ಹತ್ತು ವರ್ಷಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ವಿಭಜನೆ ಮಾಡಿದರೆ, ಮಹಿಳೆಯ ಘನತೆಗೆ ಅಪಮಾನ ಮಾಡಿದ ಪ್ರಕರಣಗಳು 119% ಹೆಚ್ಚಳವಾಗಿದೆ.

ಪತಿಯಿಂದ ನಡೆಯುವ ಹಲ್ಲೆ ಪ್ರಕರಣಗಳೂ ಹೆಚ್ಚಿದ್ದು, 45% ಏರಿಕೆ ಕಂಡಿದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದರೂ, ಆರೋಪಿಗಳು ಶಿಕ್ಷೆ ಅನುಭವಿಸುತ್ತಿಲ್ಲ. ಆರೋಪ ಸಾಭೀತುಪಡಿಸುವಲ್ಲಿ ಪೊಲೀಸ್‌ ಇಲಾಖೆ ಸೋಲುತ್ತಲೇ ಬಂದಿದೆ. ಆರೋಪಿಗಳಿಗೆ ಶಿಕ್ಷೆಯಾದಾಗ ಮಾತ್ರ ಅತ್ಯಾಚಾರಿಗಳಿಗೆ ಭಯದ ವಾತಾವರಣ ನಿರ್ಮಾಣವಾಗಲಿದೆ. ಆದರೆ ಕೇವಲ 4.2 % ಅಪರಾಧಿಗಳು ಶಿಕ್ಷೆಗೆ ಗುರಿಯಾಗಿದ್ದಾರೆ. ಇನ್ನುಳಿದ ಆರೋಪಿಗಳು ಕಾನೂನಿನ ಹಸ್ತದಿಂದ ತಪ್ಪಿಸಿಕೊಂಡಿದ್ದಾರೆ.

‘ಸಮಾಚಾರ’ದ ಜತೆ ಮಾತನಾಡಿದ ಮನೋವಿಜ್ಞಾನಿ ಡಾ. ಅ. ಶ್ರೀಧರ್‌ ಹೇಳುವ ಪ್ರಕಾರ, ಸಾಮಾಜಿಕ ಮನಸ್ಥಿತಿಯಲ್ಲಿ ಆಗಬೇಕಾದ ಬದಲಾವಣೆ ಆಗುತ್ತಿಲ್ಲದಿರುವುದೇ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಮೂಲ ಕಾರಣ . “ಅದು ಆಗಬೇಕಾದರೆ ಪ್ರಮುಖವಾಗಿ ಕಾನೂನಿನ ಮಾರ್ಪಾಡು, ಶೈಕ್ಷಣಿಕ ಪದ್ಧತಿ, ರಾಜಕೀಯ ಇಚ್ಛಾಶಕ್ತಿ ಬೇಕು. ಆದರೆ ಅವು ಕಾಣುತ್ತಲೇ ಇಲ್ಲ,” ಎನ್ನುತ್ತಾರೆ.

“ಸಮಾನತೆಯಿಂದ ಮತ್ತು ಗೌರವದಿಂದ ಮಹಿಳೆಯನ್ನು ನೋಡುವ ವ್ಯವಸ್ಥೆ ನಿರ್ಮಾಣವಾಗಬೇಕು. ಪಟ್ಟಣ ಪ್ರದೇಶಗಳಲ್ಲೂ ಇದು ಕಾಣುತ್ತಿಲ್ಲ, ಹಳ್ಳಗಳಲ್ಲೂ ಕಾಣುತ್ತಿಲ್ಲ. ಕಾಮದ ಅರಿವಿಲ್ಲದೇ ಎಷ್ಟೋ ಜನ ಅತ್ಯಾಚಾರದಂತ ಕೃತ್ಯಕ್ಕೆ ಕೈಹಾಕುತ್ತಾರೆ. ಮಾಧ್ಯಮದ ತಪ್ಪೂ ಇದರಲ್ಲಿ ದೊಡ್ಡದಿದೆ. ಮಾಧ್ಯಮಗಳು ಹಿಂಸಾತ್ಮಕ ಕಾರ್ಯಕ್ರಮಗಳನ್ನು ತೋರಿಸುತ್ತವೆ. ಇದರಿಂದ ಸಾಮಾಜಿಕ ವ್ಯವಸ್ಥೆ ಇನ್ನೂ ಹದಗೆಡುತ್ತಿವೆ,”
ಡಾ. ಅ. ಶ್ರೀಧರ್‌, ಮನೋವಿಜ್ಞಾನಿ

ಮುಂದುವರೆಯುವ ಅವರು, “ಕಾನೂನು ಬಿಗಿಯಾಗಿರಬಹುದು ಆದರೆ ಪೊಲೀಸ್‌ ಇಲಾಖೆಯಲ್ಲಿ ಆ ಬಲವಿಲ್ಲ. ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಕೊರತೆಯಿದೆ. ಈ ಪ್ರಕರಣಗಳ ತೀರ್ಪು ಯಾವಾಗ ಕೊಡಬೇಕು? ಜತೆಗೆ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವವರು ಇತ್ತೀಚೆಗೆ ಅದರ ಭಾವಚಿತ್ರವನ್ನೋ ಅಥವಾ ವಿಡಿಯೋವನ್ನೋ ಮಾಡುತ್ತಿದ್ದಾರೆ. ಇದು ಸ್ಮಾರ್ಟ್‌ಫೋನ್‌ ಮತ್ತು ಸಾಮಾಜಿಕ ಜಾಲತಾಣದ ಎಫೆಕ್ಟ್‌ ಎಂದರೆ ತಪ್ಪಾಗಲಾರದು. ಇವತ್ತಿನ ಸಾಮಾಜಿಕ ವ್ಯವಸ್ಥೆಯ ಪರಿಣಾಮದಿಂದ ‘ಆತ್ಮ ಪ್ರಜ್ಞೆ’ಯನ್ನೂ ಜನ ಕಳೆದುಕೊಳ್ಳುತ್ತಿದ್ದಾರೆ. ಆತ್ಮ ಪ್ರಜ್ಞೆಯೇ ಇಲ್ಲದಿದ್ದರೆ ಇನ್ಯಾವ ಕಾನೂನಿಗೂ ಹೆದರುವುದಿಲ್ಲ,” ಎನ್ನುತ್ತಾರೆ ಡಾ. ಅ. ಶ್ರೀಧರ್‌.

“ಸರಕಾರಗಳೂ ಕೂಡ ಈ ಘಟನೆಗಳಿಗೆ ಕಾರಣವಾಗಿವೆ. ಶಾಸನ ಸಭೆಗಳು ದುಶ್ಯಾಸನ ಸಭೆಗಳಾಗಿವೆ. ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಬೇಕು, ಉತ್ತಮ ಶಿಕ್ಷಣ ನೀಡಬೇಕು. ಆ ಮೂಲಕ ಮಕ್ಕಳಲ್ಲಿ ನಿಗ್ರಹ ಶಕ್ತಿ ಬೆಳೆಯುತ್ತದೆ ಮತ್ತು ಶಿಕ್ಷಣದಿಂದ ಪರಸ್ಪರ ಗೌರವಿಸುವ ಪ್ರವೃತ್ತಿ ಬೆಳೆಯುತ್ತದೆ,” ಎನ್ನುತ್ತಾರೆ ಮನೋವಿಜ್ಞಾನಿಯೊಬ್ಬರು.

ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತಡೆಯಲು ಜನಸಾಮಾನ್ಯರಲ್ಲಿ ಕಾಣೆಯಾಗುತ್ತಿರುವ ಆತ್ಮ ಪ್ರಜ್ಞೆಯನ್ನು ಹುಟ್ಟಿಸಬೇಕಿದೆ. ಜತೆಗೆ ಕಾನೂನಿನ ಮಾರ್ಪಾಡು, ರಾಜಕೀಯ ಇಚ್ಛಾಶಕ್ತಿ ಮತ್ತು ಲೈಂಗಿಕ ಶಿಕ್ಷಣ ಅಗತ್ಯವಾಗಿದೆ. ಮೂಲಭೂತವಾದಿಗಳು ಇನ್ನೂ ಗೊಡ್ಡು ಸಂಪ್ರದಾಯವಾದಕ್ಕೆ ಗಂಟು ಬಿದ್ದರೆ ಮಕ್ಕಳಲ್ಲಿ ಲೈಂಗಿಕತೆಯ ಬಗ್ಗೆ ಅರಿವು ಮೂಡುವುದಿಲ್ಲ. ಬಾಲ್ಯದಿಂದಲೇ ಲೈಂಗಿಕತೆಯ ಅರಿವು ಹುಟ್ಟಿಸುವ ಕೆಲಸ ಮುಂದಾದರೂ ನಡೆಯಲಿದೆಯಾ ಎಂಬುದನ್ನು ಕಾದು ನೋಡಬೇಕು.