samachara
www.samachara.com
ಉತ್ತರ& ದಕ್ಷಿಣ ಕೊರಿಯಾಗಳೇ ಒಂದಾಗುವುದಾದರೆ ಭಾರತ- ಪಾಕಿಸ್ತಾನ ಯಾಕಾಗಬಾರದು? 
COVER STORY

ಉತ್ತರ& ದಕ್ಷಿಣ ಕೊರಿಯಾಗಳೇ ಒಂದಾಗುವುದಾದರೆ ಭಾರತ- ಪಾಕಿಸ್ತಾನ ಯಾಕಾಗಬಾರದು? 

ಭಾರತ ಮತ್ತು ಪಾಕಿಸ್ತಾನ ಒಂದಾಗಬೇಕು ಅಥವಾ ಒಕ್ಕೂಟವಾಗಬೇಕು ಎಂದು ಹೇಳಿದವರಲ್ಲಿ ಬಿಜೆಪಿ ನಾಯಕರಾದ ದೀನದಯಾಳ್ ಉಪಾಧ್ಯಾಯ, ಸಮಾಜವಾದಿ ಚಿಂತಕ ರಾಮ್ ಮನೋಹರ್ ಲೋಹಿಯಾ ಮೊದಲಾದವರು ಕಾಣಿಸುತ್ತಾರೆ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

"ನನ್ನ ಗ್ರಹಿಕೆಯ ಪ್ರಕಾರ ದೇಶ ವಿಭಜನೆ ಸಮಸ್ಯೆಗಳನ್ನು ಬಗೆಹರಿಸಿಲ್ಲ ಎಂಬುದನ್ನು ಎರಡೂ ದೇಶಗಳು ದಶಕಗಳ ನಂತರ ಅರಿತುಕೊಳ್ಳುವ ಸಮಯ ಬರುತ್ತದೆ. ಏಕೆ ಒಟ್ಟಾಗಬಾರದು ಮತ್ತು ಒಂದು ರೀತಿಯ ಒಕ್ಕೂಟವನ್ನು ಅಥವಾ ಅದೇ ಮಾದರಿಯಲ್ಲಿ ಏನಾದರೊಂದನ್ನು ಏಕೆ ರೂಪಿಸಬಾರದು..?”

ಹೀಗಂಥ ಭಾರತ ಮತ್ತು ಪಾಕಿಸ್ತಾನದ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು ಬಿಜೆಪಿಯ ಭೀಷ್ಮ, ಭಾರತದ ಉಪಪ್ರಧಾನಿಯಾಗಿದ್ದ ಎಲ್.ಕೆ. ಅಡ್ವಾಣಿ. ಸರಿಯಾಗಿ 14 ವರ್ಷಗಳ ಹಿಂದೆ ಅವರು (ಏಪ್ರಿಲ್ 29, 2004) ಪಾಕಿಸ್ತಾನ ಪ್ರಖ್ಯಾತ ಪತ್ರಿಕೆ ‘ಡಾನ್’ಗೆ ನೀಡಿದ ಸಂದರ್ಶನದಲ್ಲಿ ಈ ಮಾತುಗಳನ್ನು ಹೇಳಿದ್ದರು.

ಹೀಗೆ ಅವರ ಸಂದರ್ಶನ ಮುದ್ರಣವಾಗಿ ಒಂದೂವರೆ ದಶಕಗಳ ಬಳಿಕ ಭಾರತ ಪಾಕಿಸ್ತಾನದ ಪರಿಸ್ಥಿತಿಯಲ್ಲೇನು ಬದಲಾವಣೆಯಾಗಿಲ್ಲ. ಆದರೆ ನಮಗಿಂತಲೂ ಕಡು ವೈರಿಗಳೆಂದು ಬಿಂಬಿತವಾಗಿದ್ದ, ಅಣ್ವಸ್ತ್ರ ಯುದ್ಧಕ್ಕೂ ಹಾತೊರೆಯುತ್ತಿದ್ದ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾಗಳು ಒಂದಾಗಿವೆ.

ಇನ್ನೇನು ಎಲ್ಲಾ ಮುಗಿಯಿತು ದಕ್ಷಿಣ ಮತ್ತು ಉತ್ತರ ಕೊರಿಯಾಗಳು ಭಸ್ಮವಾದವು ಎನ್ನುವ ಹೊತ್ತಲ್ಲಿ ಎರಡೂ ರಾಷ್ಟ್ರಗಳ ನಾಯಕರು ಕೈಕುಲುಕಿದ್ದಾರೆ. ಗಡಿಯಾಚೆಯಿಂದ ಬಂದ ಉತ್ತರ ಕೊರಿಯಾದ ‘ಸರ್ವಾಧಿಕಾರಿ’ ಕಿಮ್ ಜಾಂಗ್ ಉನ್‌ರನ್ನು ದಕ್ಷಿಣ ಕೊರಿಯಾ ಗಣರಾಜ್ಯದ ಮುಖ್ಯಸ್ಥ ಮೂನ್ ಜೇ ಇನ್ ಆತ್ಮೀಯವಾಗಿ ತಮ್ಮ ನೆಲಕ್ಕೆ ಬರಮಾಡಿಕೊಂಡಿದ್ದಾರೆ. ಸಂಬಂಧದ ತಂತುವೊಂದು ಎರಡು ದೇಶಗಳನ್ನು ತಣ್ಣಗೆ ಬೆಸೆದು ಬಿಟ್ಟಿದೆ.

ಹಾಗೆ ನೋಡಿದರೆ, ಶುಕ್ರವಾರದ ಭೇಟಿ ಸಾಂಕೇತಿಕತೆಯನ್ನು ಮೀರಿತ್ತು. 1950 ರಿಂದ 53ರವರೆಗೆ ನಡೆದ ಯುದ್ಧದ ನಂತರ ಎರಡೂ ದೇಶಗಳ ನಡುವೆ ವೈರತ್ವ, ಶತ್ರುತ್ವ ಬೆಳೆದು ನಿಂತಿತ್ತು. ಆರ್ಥಿಕ ದಿಗ್ಬಂಧನಗಳಂಥ ನಿಯಂತ್ರಣ ಕ್ರಮಗಳೇನೇ ಹೇರಿದರೂ ದಕ್ಷಿಣ ಕೊರಿಯಾವನ್ನು ಭಸ್ಮ ಮಾಡುವುದಾಗಿ ಕಿಮ್ ಜಾಂಗ್ ಉನ್ ಅಬ್ಬರಿಸುತ್ತಲೇ ಇದ್ದರು. ಆದರೆ ಉಭಯ ದೇಶದ ನಾಯಕರು ಕೈಕುಲುಕಿ ಅಪ್ಪಿಕೊಂಡಾಗ ಇಷ್ಟೆಲ್ಲಾ ಬೆಳವಣಿಗೆಗಳು ಎರಡೂ ದೇಶದ ನಡುವೆ ನಡೆದೇ ಎಲ್ಲವೇನೋ ಎಂಬಂತೆ ಭಾಸವಾಗುತ್ತಿತ್ತು.

ಈ ಮರೆಯಲಾಗದ ಭೇಟಿ ಹಲವು ಚಾರಿತ್ರಿಕ ಘಟನೆಗಳು ನಡೆದಿವೆ. ಎರಡೂ ದೇಶಗಳ ನಡುವಿನ ಐತಿಹಾಸಿಕ ಶೃಂಗಸಭೆ, ನಾಯಕರ ನಡುವಿನ ಖಾಸಗಿ ಭೇಟಿ, ಎರಡೂ ದೇಶಗಳ ಶಾಂತಿ ಮಾತುಕತೆಯ ಸ್ಮರಣಾರ್ಥ ಉಭಯ ದೇಶಗಳನ್ನು ಮಣ್ಣು ಮತ್ತು ನೀರನ್ನು ಬಳಸಿ ವೃಕ್ಷವನ್ನೂ ಇದೇ ಸಂದರ್ಭದಲ್ಲಿ ನೆಡಲಾಯಿತು. ಉಭಯ ನಾಯಕರು ಕೇಕ್ ನಲ್ಲಿ ಮೂಡಿದ ಸಂಯುಕ್ತ ಕೊರಿಯಾದ ಭೂಪಟವನ್ನು ಒಟ್ಟಾಗಿ ಅನಾವರಣ ಮಾಡಿದರು. ಈ ಸಂದರ್ಭದ ನಡೆದ ಉಪಹಾರದಲ್ಲೂ ಎರಡೂ ದೇಶಗಳ ಖಾದ್ಯಗಳನ್ನು ಉಣಬಡಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಎರಡೂ ದೇಶಗಳ ಸಂಗೀತದ ಆಲಾಪಗಳಿತ್ತು. ಈ ಸಂದರ್ಭ ಕಿಮ್ ಮತ್ತು ಮೂನ್ ಭೇಟಿಯ ಮಧುರ ಕ್ಷಣಗಳನ್ನು ತೆರೆಯ ಮೆಲೆ ಬಿತ್ತರಿಸಲಾಯಿತು. ಕೊನೆಗೆ ಕಿಮ್ ಜಾಂಗ್ ಉನ್ ರನ್ನು ಮೂನ್ ಜೇ ಇನ್ ತಮ್ಮ ದೇಶದಿಂದ ಆತ್ಮೀಯವಾಗಿ ಬೀಳ್ಕೊಟ್ಟರು.

ಈ ಎಲ್ಲಾ ನಡೆಗಳು ಸಾಂಕೇತಿಕವಾಗಿದ್ದರೂ ಇವುಗಳ ಮೂಲಕ ಕೊರಿಯಾ ದೇಶಗಳ ಮಧ್ಯೆ ಒಂದು ಹಂತದ ಸಾಂಕೇತಿಕ ಬೆಸುಗೆ ಹಾಕಲಾಯಿತು. ಇದು ಭವಿಷ್ಯದಲ್ಲಿ ಹುಟ್ಟಬಹುದಾದ ಸಂಬಂಧಗಳಿಗೀಗ ಸೇತುವೆಯಾಗಿದೆ. ಇದರ ಮುಂದುವರಿದ ಭಾಗವಾಗಿ ಈಗ ದಕ್ಷಿಣ ಕೊರಿಯಾ ಅಧ್ಯಕ್ಷರು ಉತ್ತರ ಕೊರಿಯಾದ ರಾಜಧಾನಿ ಪ್ಯಾಂಗ್ಯಾಂಗ್ ಗೆ ಭೇಟಿ ನೀಡಲಿದ್ದಾರೆ. ಮುಂದಿನ ದಿನಗಳಲ್ಲಿ ಎರಡೂ ದೇಶಗಳು ಇಡಲಿರುವ ಹೆಜ್ಜೆಗಳತ್ತ ಜಗತ್ತೇ ಕುತೂಹಲದಿಂದ ನೋಡುತ್ತಿದೆ.

ಭಾರತ-ಪಾಕಿಸ್ತಾನಕ್ಕೇನು ಅಡ್ಡಿ?

ಉತ್ತರ& ದಕ್ಷಿಣ ಕೊರಿಯಾಗಳೇ ಒಂದಾಗುವುದಾದರೆ ಭಾರತ- ಪಾಕಿಸ್ತಾನ ಯಾಕಾಗಬಾರದು? 

ಹಾಗೆ ನೋಡಿದರೆ ಭಾರತ ಮತ್ತು ಪಾಕಿಸ್ತಾನದ ದ್ವೇಷ ಸಂಬಂಧಗಳು ಕೊರಿಯಾಗಳಷ್ಟು ತೀವ್ರತರವಾಗಿಲ್ಲ. ಹೀಗಿರುವಾಗ ಉತ್ತರ ಮತ್ತು ದಕ್ಷಿಣ ಕೊರಿಯಾಗಳೇ ಒಂದಾಗಿವೆ, ನಾವು ಯಾಕೆ ಒಂದಾಗಬಾರದು ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ಹಾಗಂಥ ಇದರ ಬಗ್ಗೆ ಆಲೋಚನೆಗಳೇ ನಡೆದಿಲ್ಲ ಎನ್ನುವಂತಿಲ್ಲ. ಭಾರತ ಮತ್ತು ಪಾಕಿಸ್ತಾನ ಒಂದಾಗಬೇಕು ಅಥವಾ ಒಕ್ಕೂಟವಾಗಬೇಕು ಎಂದು ಹೇಳಿದವರಲ್ಲಿ ಬಿಜೆಪಿ ನಾಯಕರಾದ ದೀನದಯಾಳ್ ಉಪಾಧ್ಯಾಯ, ಸಮಾಜವಾದಿ ಚಿಂತಕ ರಾಮ್ ಮನೋಹರ್ ಲೋಹಿಯಾ ಮೊದಲಾದವರು ಕಾಣಿಸುತ್ತಾರೆ. ಇಂಥಹದ್ದೊಂದು ಚರ್ಚೆಯನ್ನು ಈ ಇಬ್ಬರೂ ನಾಯಕರೇ ಹುಟ್ಟು ಹಾಕಿದ್ದರು ಎನ್ನಲೂಬಹುದು.

ಇವರಿಬ್ಬರೂ ಭಾರತ ಪಾಕಿಸ್ತಾನ ಒಂದಾಗುವ ಬಗ್ಗೆ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು ಎಂಬುದಾಗಿ 2013ರಲ್ಲಿ ಏಪ್ರಿಲ್ ನಲ್ಲಿ ಎಲ್. ಕೆ. ಅಡ್ವಾಣಿ ಹೇಳಿದ್ದರು. ದೇಶ ವಿಭಜನೆಯಿಂದ ತಮಗೆ ತಾವು ಒಳ್ಳೆಯದನ್ನು ಮಾಡಿಕೊಳ್ಳಲಿಲ್ಲ ಎಂಬುದನ್ನು ಪಾಕಿಸ್ತಾನದಲ್ಲಿರುವ ಮುಸ್ಲಿಮರು ಅರ್ಥಮಾಡಿಕೊಳ್ಳುವ ದಿನ ಬಂದೇ ಬರುತ್ತದೆ ಎಂಬುದನ್ನು ದೀನ್ ದಯಾಳ್ ಉಪಾಧ್ಯಾಯರು ಲೋಹಿಯಾ ಅವರಿಗೆ ಹೇಳಿದ್ದರಂತೆ.

ಪಾಕಿಸ್ತಾನದ ಮೇಲೆ ಯುದ್ಧವನ್ನು ಹೇರುವುದು. ಈ ಮೂಲಕ ಆ ದೇಶವನ್ನು ಸೋಲಿಸಿ ಅಖಂಡ ಭಾರತ ನಿರ್ಮಿಸುವ ಸಂಘ ಪರಿವಾರದ ಕಲ್ಪನೆಗೆ ಇದು ವಿರುದ್ಧವಾದುದು ಎಂಬುದು ಅಡ್ವಾಣಿಯವರ ಮಾತಿನಿಂದ ತಿಳಿಯುತ್ತದೆ. ಒಟ್ಟಾರೆ ಇದು ಯುದ್ಧ ಬಿಟ್ಟು ಶಾಂತಿಯಿಂದ ದೇಶಗಳು ಒಂದಾಗುವ ಪ್ರಕ್ರಿಯೆ ಅಷ್ಟೇ. ಈ ಬಗ್ಗೆ ಅಡ್ವಾಣಿ ಈ ಹಿಂದಿನ ಪ್ರಧಾನಿ ಡಾ. ಮನ್ ಮೋಹನ್ ಸಿಂಗ್ ಅವರಿಗೂ ವಿವರಿಸಿದ್ದರಂತೆ. ಆದರೆ ಪಾಕಿಸ್ತಾನ ಪದೇ ಪದೇ ತಕರಾರು ತೆಗೆಯುತ್ತಿದ್ದರೆ ಈ ರೀತಿ ಒಂದಾಗುವುದು ಅಸಾಧ್ಯ ಎಂದು ಅಡ್ವಾಣಿ ಸಿಂಗ್ ಬಳಿ ಹೇಳಿದ್ದರಂತೆ.

ಇದೇನೇ ಇರಲಿ, ಈ ನಿಟ್ಟಿನಲ್ಲಿ ಲೋಹಿಯಾ ಒಂದು ಹೆಜ್ಜೆ ಮುಂದೆ ಹೋಗಿ ಭಾರತ ಮತ್ತು ಪಾಕಿಸ್ತಾನಗಳು ಹೇಗೆ ಒಂದಾಗಬೇಕು ಎಂಬ ಸೂತ್ರವನ್ನೇ ಮುಂದಿಟ್ಟಿದ್ದರು.

“ಎರಡೂ ದೇಶಗಳು ಪ್ರತ್ಯೇಕವಾಗಿಯೇ ಕಾರ್ಯ ನಿರ್ವಹಿಸಬೇಕು. ಆದರೆ ಪೌರತ್ವ ಒಂದೇ ಇರಬೇಕು. ವಿದೇಶಾಂಗ ನೀತಿ, ಸೇನೆ ಮತ್ತು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ದೇಶಗಳ ಒಕ್ಕೂಟಕ್ಕೆ ಕೆಲವು ಕನಿಷ್ಠ ಅಧಿಕಾರಗಳಿರಬೇಕು. ಈ ಒಕ್ಕೂಟದಲ್ಲಿ ಒಟ್ಟು ಐದು ವಿಭಾಗಗಳಿರುತ್ತವೆ; ಭಾರತ, ಪಾಕಿಸ್ತಾನ, ಕಾಶ್ಮೀರ ಕಣಿವೆ, ಸಂಯುಕ್ತ ಬಂಗಾಳ ಮತ್ತು ಪಕ್ತೂನಿಸ್ತಾಸ್. ನಿಧಾನಕ್ಕೆ ಎರಡೂ ದೇಶಗಳ ನಡುವೆ ಪ್ರಯಾಣ, ಸಂಪರ್ಕಗಳು ಸುಲಭವಾಗಬೇಕು. ವ್ಯಾಪಾರ ಸಂಬಂಧ ಹೆಚ್ಚಾಗಬೇಕು. ಮಾಧ್ಯಮಗಳು ಒಂದು ದೇಶದ ವಿರುದ್ಧ ಸುದ್ದಿ ಮಾಡುವುದನ್ನು ನಿಲ್ಲಿಸಬೇಕು. ಮುಂದೆ ಹೀಗೆ ಸಂಬಂಧ ಬೆಳೆಯುತ್ತಾ ಹೋಗಬೇಕು,” ಎಂಬುದು ಲೋಹಿಯಾ ಸಿದ್ಧಾಂತವಾಗಿತ್ತು.

ಈ ಚಿಂತನೆ ಕಾರ್ಯಸಾಧುವೇ ಎಂಬುದೇ ಇಲ್ಲಿವರೆಗಿನ ಪ್ರಶ್ನೆಯಾಗಿತ್ತು. ಆದರೆ ಅಣ್ವಸ್ತ್ರ ಉಡಾಯಿಸಿ ದಕ್ಷಿಣ ಕೊರಿಯಾವನ್ನು ನಾಶ ಮಾಡಲು ಹೊರಟ ಉತ್ತರ ಕೊರಿಯಾ ಸರ್ವಾಧಿಕಾರಿಯೇ ಕೈಕುಲುಕಲು ಮುಂದಾಗುತ್ತಾನೆ ಎಂದರೆ, ಸಂಸ್ಕೃತಿ, ಆಹಾರ, ಭಾಷೆ, ನೆಲವನ್ನೇ ಹಂಚಿಕೊಂಡು ಹುಟ್ಟಿದ್ದ ಪಾಕಿಸ್ತಾನ ಮತ್ತು ಭಾರತಕ್ಕೆ ಒಂದಾಗಲು ಸಾಧ್ಯವಾಗುವುದಿಲ್ಲವೇ?