‘ಸ್ಮಾರಕಗಳ ಬಿಕರಿ’: ಕೆಂಪು ಕೋಟೆಯನ್ನು ಕಾರ್ಪೊರೇಟ್‌ ಸಂಸ್ಥೆಗೆ ‘ದತ್ತು’ ನೀಡಿದ ಮೋದಿ ಸರಕಾರ!
COVER STORY

‘ಸ್ಮಾರಕಗಳ ಬಿಕರಿ’: ಕೆಂಪು ಕೋಟೆಯನ್ನು ಕಾರ್ಪೊರೇಟ್‌ ಸಂಸ್ಥೆಗೆ ‘ದತ್ತು’ ನೀಡಿದ ಮೋದಿ ಸರಕಾರ!

ಮೋದಿ ನೇತೃತ್ವದ ಸರಕಾರ, ದೇಶದ ಐತಿಹಾಸಿಕ ಸ್ಮಾರಕಗಳನ್ನು ಕಾರ್ಪೋರೇಟ್‌ ಸಂಸ್ಥೆಗಳಿಗೆ ದತ್ತು ನೀಡುವ ಯೋಜನೆಯನ್ನು ರೂಪಿಸಿದೆ. ‘ಅಡಾಪ್ಟ್‌ ಎ ಹೆರಿಟೇಜ್‌’ ಎಂಬುದು ಅದಕ್ಕೆ ಇಟ್ಟಿರುವ ಹೆಸರು. ವಿವರ ಇಲ್ಲಿದೆ. 

ದೇಶದ ರಾಜಧಾನಿಯಲ್ಲಿರುವ ಕೆಂಪು ಕೋಟೆ ಎಂದಾಕ್ಷಣ ನೆನಪಾಗುವುದು ತ್ರಿವರ್ಣ ಧ್ವಜ ಮತ್ತು ಸ್ವತಂತ್ರ ಭಾರತದ ಸಾರ್ವಭೌಮತ್ವದ ಸಂಕೇತ. ವಿಷಯ ಏನಪ್ಪ ಅಂದರೆ, ಪ್ರಧಾನಿ ಮೋದಿ ನೇತೃತ್ವದ ಸರಕಾರ ಈ ಕೆಂಪು ಕೋಟೆಯನ್ನು ಮುಂದಿನ ಐದು ವರ್ಷಗಳಿಗೆ ಕಾರ್ಪೊರೇಟ್ ಸಂಸ್ಥೆಯೊಂದಕ್ಕೆ 'ದತ್ತು' ದತ್ತು ನೀಡಿದೆ. ನಂಬಿ, ಕೆಂಪು ಕೋಟೆಯನ್ನು ಈಗ ದಾಲ್ಮಿಯ ಭಾರತ್ ಗ್ರೂಪ್‌ ಎಂಬ ಕಾರ್ಪೊರೇಟ್ ಕಂಪನಿಯ ಸ್ವತ್ತು.

ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಐತಿಹಾಸಿಕ ಸ್ಮಾರಕಗಳನ್ನು ದತ್ತು ನೀಡುವ ಯೋಜನೆಯನ್ನು ಜಾರಿಗೆ ತಂದಿದೆ ಎನ್‌ಡಿಎ ಸರಕಾರ. ಇದರ ಭಾಗವಾಗಿ ಇದೀಗ ದಾಲ್ಮಿಯಾ ಭಾರತ್ ಗ್ರೂಪ್, 17ನೇ ಶತಮಾನದಲ್ಲಿ ನಿರ್ಮಾಣಗೊಂಡ ಕೆಂಪು ಕೋಟೆಯ ಮೇಲೆ ಮುಂದಿನ ಐದು ವರ್ಷಗಳಿಗೆ ಹಕ್ಕು ಸಾಧಿಸಿದೆ.

ಐದನೇ ಮೊಘಲ್ ದೊರೆ ಶಹಜಹಾನ್ ಕಟ್ಟಿದ ಭವ್ಯ ಸ್ಮಾರಕವನ್ನು ದತ್ತು ಪಡೆಯಲು ಇಂಡಿಗೋ ಏರ್‌ಲೈನ್ಸ್‌, ಜಿಎಂಆರ್‌ ಗ್ರೂಪ್‌ಗಳು ಟೆಂಡರ್ ಸಲ್ಲಿಸಿದ್ದವು. ಆದರೆ ಕೊನೆಗೆ 250 ಕೋಟಿಗೆ ದಾಲ್ಮಿಯಾ ಭಾರತ್‌ ಗ್ರೂಪ್‌ ಕೆಂಪು ಕೋಟೆಯ ಮೇಲೆ ಸ್ವಾಮ್ಯ ಸಾಧಿಸಿದೆ.

‘ಸ್ಮಾರಕಗಳ ಬಿಕರಿ’: ಕೆಂಪು ಕೋಟೆಯನ್ನು ಕಾರ್ಪೊರೇಟ್‌ ಸಂಸ್ಥೆಗೆ ‘ದತ್ತು’ ನೀಡಿದ ಮೋದಿ ಸರಕಾರ!

ಈಗಾಗಲೇ ದಾಲ್ಮಿಯಾ ಗ್ರೂಪ್‌ ಕೆಂಪು ಕೋಟೆಯ ಚಹರೆಯನ್ನು ಬದಲಿಸಲು ವಿಸ್ತೃತ ಯೋಜನೆಯನ್ನು ಹಾಕಿಕೊಂಡಿದೆ. ಅದರ ಭಾಗವಾಗಿ ಮೇ. 23ರೊಳಗೆ ಸ್ವಚ್ಚತಾ ಕಾರ್ಯ ಮುಗಿಯಲಿದೆ. ರಾತ್ರಿ ವೇಳೆಗಾಗಿ ದೀಪಾಲಂಕಾರಗಳು ನಡೆಯಲಿದೆ. ಅದಾದ ನಂತರ ತಾತ್ಕಾಲಿಕವಾಗಿ ಮತ್ತೆ ಸರಕಾರಕ್ಕೆ ಕೆಂಪು ಕೋಟೆಯನ್ನು ನೀಡಲಾಗುತ್ತದೆ.

ಮುಂದಿನ ಸ್ವಾತಂತ್ರ್ಯ ದಿನಾಚರಣೆ ದಿನ ಪ್ರಧಾನಿ ಮೋದಿ ಇದೇ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಲಿದ್ದಾರೆ. ದೇಶವನ್ನು ಉದ್ದೇಶಿಸಿ ಭಾಷಣವನ್ನು ಮಾಡಲಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ನಂತರ ಮತ್ತೆ ದಾಲ್ಮಿಯಾ ಗ್ರೂಪ್‌ ಕೆಂಪು ಕೋಟೆಯನ್ನು ಸುಪರ್ದಿಗೆ ಪಡೆಯಲಿದೆ.

ಮುಂದಿನ ದಿನಗಳಲ್ಲಿ ಸಂಗೀತ ಕಾರ್ಯಕ್ರಮಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೆಂಪು ಕೋಟೆ ಬಳಕೆಯಾಗಲಿದೆ. ಪ್ರವಾಸೋದ್ಯಮವನ್ನು ಬೆಳೆಸುವ ದೃಷ್ಟಿಯನ್ನು ಇಟ್ಟುಕೊಂಡು ಕೆಂಪು ಕೋಟೆಯ ಪುನರುಜ್ಜೀವನಕ್ಕೂ ದಾಲ್ಮಿಯಾ ಗ್ರೂಪ್ ಚಿಂತನೆ ನಡೆಸಿದೆ ಎಂದು ವರದಿಗಳು ಹೇಳುತ್ತಿವೆ.

“ನಾವು ಮುಂದಿನ 30 ದಿನಗಳಲ್ಲಿ ಕೆಲಸ ಆರಂಭಿಸಲಿದ್ದೇವೆ ಮತ್ತು ಐದು ವರ್ಷಗಳ ಕಾಲ ಕೋಟೆಯನ್ನು ನಿರ್ವಹಣೆಯನ್ನು ಮಾಡಲಿದ್ದೇವೆ. ಅದಾದ ನಂತರ ಸರಕಾರ ಒಪ್ಪಿದರೆ ಇನ್ನಷ್ಟು ವರ್ಷಗಳ ಕಾಲ ದತ್ತು ಯೋಜನೆಯನ್ನು ವಿಸ್ತರಿಸಲಾಗುವುದು. ಇದರಿಂದ ದಾಲ್ಮಿಯಾ ಬ್ರಾಂಡ್‌ಗೆ ಅನುಕೂಲವಾಗಲಿದೆ. ಕೆಂಪು ಕೋಟೆಯಲ್ಲಿ ಜಗತ್ತಿನ ಸ್ಮಾರಕಗಳ ಸಾಲಿನಲ್ಲಿ ನಿಲ್ಲಿಸುವ ಪ್ರಯತ್ನ ಮಾಡಲಿದ್ದೇವೆ,’’ ಎಂದು ದಾಲ್ಮಿಯಾ ಭಾರತ್ ಸಿಮೆಂಟ್‌ನ ಸಿಇಓ ಮಹೇಂದ್ರ ಸಂಘಿ ‘ಬಿಜಿನೆಸ್‌ ಸ್ಟ್ಯಾಂಡರ್ಡ್‌’ಗೆ ತಿಳಿಸಿದ್ದಾರೆ.

ಕೆಂಪು ಕೋಟೆಯನ್ನು ದತ್ತು ನೀಡುವ ನಿಟ್ಟಿನಲ್ಲಿ ದಾಲ್ಮಿಯಾ ಭಾರತ್ ಲಿಮಿಟೆಡ್ ಹಾಗೂ ಪ್ರವಾಸೋದ್ಯಮ ಇಲಾಖೆ, ಸಂಸ್ಕೃತಿ ಇಲಾಖೆ ಹಾಗೂ ಪುರಾತತ್ವ ಇಲಾಖೆಗಳ ನಡುವೆ ಏಪ್ರಿಲ್ 9ಕ್ಕೆ ಒಪ್ಪಂದ ನಡೆದಿದೆ. ಅದನ್ನು ಪ್ರವಾಸೋದ್ಯಮ ಇಲಾಖೆ ಏಪ್ರಿಲ್ 25ರಂದು ಬಹಿರಂಗಗೊಳಿಸಿದೆ.

ಆಗ್ರಾದಲ್ಲಿರುವ ತಾಜ್ ಮಹಲ್. 
ಆಗ್ರಾದಲ್ಲಿರುವ ತಾಜ್ ಮಹಲ್. 

ಮೋದಿ ನೇತೃತ್ವದ ಸರಕಾರ, ದೇಶದ ಐತಿಹಾಸಿಕ ಸ್ಮಾರಕಗಳನ್ನು ಕಾರ್ಪೋರೇಟ್‌ ಸಂಸ್ಥೆಗಳಿಗೆ ದತ್ತು ನೀಡುವ ಯೋಜನೆಯನ್ನು ರೂಪಿಸಿದೆ. 'ಅಡಾಪ್ಟ್‌ ಎ ಹೆರಿಟೇಜ್‌’ ಹೆಸರಿನ ಯೋಜನೆಯಲ್ಲಿ ಕೆಂಪು ಕೋಟೆ ಸೇರಿದಂತೆ ದೇಶದ ಸುಮಾರು 100 ಸ್ಮಾರಕಗಳನ್ನು ಮುಂದಿನ ದಿನಗಳಲ್ಲಿ ಕಾರ್ಪೊರೇಟ್‌ ಕಂಪನಿಗಳು ದತ್ತು ತೆಗೆದುಕೊಳ್ಳಲು ಸೆಪ್ಟೆಂಬರ್‌ 2017ರಲ್ಲಿಯೇ ಅವಕಾಶ ನೀಡಲಾಗಿದೆ. ಉತ್ತರ ಪ್ರದೇಶದಲ್ಲಿರುವ ತಾಜ್‌ ಮಹಲ್‌, ಹಿಮಾಚಲ ಪ್ರದೇಶದ ಕಂಗ್ರಾ ಕೋಟೆ, ಮುಂಬೈನ ಬೌದ್ಧ ಕಾನೇರಿ ಗುಹೆಗಳು, ಹರಿದ್ವಾರದ ಸತಿ ಘಾಟ್‌, ಅಂಧ್ರ ಪ್ರದೇಶದ ಗಂಡಿಕೋಟ ಕೋಟೆ, ಕೋನಾರ್ಕ್‌ನ ಸೂರ್ಯ ದೇವಸ್ಥಾನಗಳು ಪಟ್ಟಿಯಲ್ಲಿವೆ.

ಸದ್ಯ ಲಭ್ಯ ಮಾಹಿತಿಗಳ ಪ್ರಕಾರ, ತಾಜ್‌ ಮಹಲ್‌ ಸ್ಮಾರಕವನ್ನು ದತ್ತು ತೆಗೆದುಕೊಳ್ಳಲು ಜಿಎಂಆರ್‌ ಗ್ರೂಪ್‌ ಹಾಗೂ ಐಟಿಸಿ ಕಂಪನಿಗಳು ಟೆಂಡರ್‌ ಸಲ್ಲಿಸಿವೆ.

ಇದಿಷ್ಟು ಈವರೆಗೆ ಲಭ್ಯ ಮಾಹಿತಿ. ಐತಿಹಾಸಿಕ ಸ್ಮಾರಕಗಳು ದೇಶದ ಸಂಸ್ಕೃತಿ ಮತ್ತು ಇತಿಹಾಸವನ್ನು ಬಿಂಬಿಸುತ್ತವೆ. ಅವುಗಳನ್ನು ಖಾಸಗಿಯವರಿಗೆ ವಹಿಸಿಕೊಡುವ ಮೂಲಕ ಸರಕಾರ ತನ್ನ ಹೊಣೆಗಾರಿಕೆಯಿಂದ ಕಳಚಿಕೊಳ್ಳಲು ಹೊರಟಿರುವುದು ಈ ಮೂಲಕ ಸ್ಪಷ್ಟವಾಗುತ್ತಿದೆ.