samachara
www.samachara.com
ELECTION TOUR: ಶಾಂತಿನಗರದಲ್ಲಿ ಹ್ಯಾರಿಸ್ ಪಾಲಿಗೆ ‘ಇಂದಿರಾ ಕ್ಯಾಂಟೀನ್‌’ ಮತಗಳ ಅಕ್ಷಯ ಪಾತ್ರೆ
COVER STORY

ELECTION TOUR: ಶಾಂತಿನಗರದಲ್ಲಿ ಹ್ಯಾರಿಸ್ ಪಾಲಿಗೆ ‘ಇಂದಿರಾ ಕ್ಯಾಂಟೀನ್‌’ ಮತಗಳ ಅಕ್ಷಯ ಪಾತ್ರೆ

ಸತತ ಎರಡು ಬಾರಿ ಆಯ್ಕೆಯಾಗಿರುವ ಎನ್‌.ಎ. ಹ್ಯಾರಿಸ್‌ ಗೆಲುವಿನ ಓಟಕ್ಕೆ ಅಡ್ಡಗೋಡೆಯಾಗಿ ಬಿಜೆಪಿಯ ವಾಸುದೇವ ಮೂರ್ತಿ ನಿಂತಿದ್ದಾರೆ. ಕ್ಷೇತ್ರದಲ್ಲಿರುವ ತಿಗಳ ಸಮುದಾಯದ ಮತ ಕ್ರೋಢೀಕರಣವಾದಲ್ಲಿ ಹ್ಯಾರಿಸ್‌ ಸೋಲುವ ಸಾಧ್ಯತೆಯಿದೆ. 

ಶರತ್‌ ಶರ್ಮ ಕಲಗಾರು

ಶರತ್‌ ಶರ್ಮ ಕಲಗಾರು

ಈ ಬಾರಿ ಕಾಂಗ್ರೆಸ್‌ನಿಂದ ಎನ್‌.ಎ. ಹ್ಯಾರಿಸ್‌ಗೆ ಟಿಕೆಟ್‌ ಸಿಗುವುದೇ ಅನುಮಾವಾಗಿತ್ತು. ಆದರೆ ಶಾಂತಿನಗರ ಕ್ಷೇತ್ರದಿಂದ ಸ್ಪರ್ದಿಸಲು ಅಭ್ಯರ್ಥಿ ಇಲ್ಲದ ಹಿನ್ನೆಲೆಯಲ್ಲಿ ಹ್ಯಾರಿಸ್‌ಗೆ ಟಿಕೆಟ್‌ ನೀಡಲಾಗಿದೆ. ಟಿಕೆಟ್‌ ಸಿಗುವವರೆಗೂ ಕಾಯುತ್ತಿದ್ದ ಹ್ಯಾರಿಸ್‌ ತಮ್ಮ ಆರ್ಭಟವನ್ನು ಕ್ಷೇತ್ರದಲ್ಲಿ ಆರಂಭಿಸಿದ್ದಾರೆ. ಜನಪ್ರಿಯ ಯೋಜನೆಗಳ ಪ್ರಣಾಳಿಕೆಯನ್ನು ಜನರ ಮುಂದಿಟ್ಟಿರುವ ಹ್ಯಾರಿಸ್‌, ಪುತ್ರ ನಲಪಾಡ್‌ ಅಟಾಟೋಪಕ್ಕೆ ಈಗಲೂ ಕ್ಷಮೆ ಯಾಚಿಸುತ್ತಿದ್ದಾರೆ.

ಪುತ್ರ ಮೊಹಮ್ಮದ್‌ ನಲಪಾಡ್‌, ವಿದ್ವತ್‌ ಲೋಗನಾತನ್‌ ಮೇಲೆ ಹಲ್ಲೆ ಮಾಡಿದ ಪ್ರಕರಣದಿಂದ ಪಕ್ಷದೊಳಗೆ ಹ್ಯಾರಿಸ್‌ ವಿರುದ್ಧ ಅಭಿಪ್ರಾಯ ಮೂಡಿತ್ತು. ಮೂಲಗಳ ಪ್ರಕಾರ ಪಕ್ಷದ ಹಿರಿಯ ಮುಖಂಡರಿಗೆ ಹ್ಯಾರಿಸ್‌ಗೆ ಟಿಕೆಟ್‌ ನೀಡಲು ಇಷ್ಟವಿರಲಿಲ್ಲ. ಆದರೆ ಸಿದ್ದರಾಮಯ್ಯ ಕೃಪಾಕಟಾಕ್ಷದಿಂದ ಟಿಕೆಟ್‌ ಲಭಿಸಿದೆ. ಈ ಬಾರಿ ಚುನಾವಣೆಯಲ್ಲಿ ಹೆಲುವು ಹ್ಯಾರಿಸ್‌ಗೆ ಅತ್ಯಗತ್ಯವಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ 2006ರ ಮರು ಚುನಾವಣೆಯಲ್ಲಿ ಸಿದ್ದರಾಮಯ್ಯ ರಾಜಕೀಯ ಭವಿಷ್ಯಕ್ಕೆ ಮರು ಹುಟ್ಟು ಸಿಕ್ಕಿತ್ತು. ಅಂಥದ್ದೇ ಸ್ಥಿತಿಯಲ್ಲಿ ಇಂದು ಹ್ಯಾರಿಸ್‌ ನಿಂತಿದ್ದಾರೆ.

ತಿಗಳರ ಮತವೇ ಅಂತಿಮ:

ಶಾಂತಿನಗರ ಕ್ಷೇತ್ರದಲ್ಲಿ ಮುಸಲ್ಮಾನ ಸಮುದಾಯದ ಮತಗಳಿಗಿಂತ ಹೆಚ್ಚು ತಿಗಳರ ಮತಗಳಿವೆ. ಜತೆಗೆ ಬಿಜೆಪಿಯ ಐದು ಕಾರ್ಪೊರೇಟರ್‌ಗಳು ಶಾಂತಿನಗರ ಕ್ಷೇತ್ರದಲ್ಲಿದ್ದಾರೆ. ಬಿಜೆಪಿ ಕಾರ್ಪೊರೇಟರ್‌ ಗೌತಮ್‌ ಹೊರತುಪಡಿಸಿ ಮಿಕ್ಕವರೆಲ್ಲರೂ ಬಿಜೆಪಿ ಅಭ್ಯರ್ಥಿ ಕೆ. ವಾಸುದೇವ ಮೂರ್ತಿ ಜತೆಗಿದ್ದಾರೆ. ಅದಕ್ಕಾಗಿಯೇ ವಾಸುದೇವ ಮೂರ್ತಿ ಈ ಬಾರಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಶಾಂತಿನಗರ ಕ್ಷೇತ್ರದ ನೀಲಸಂದ್ರ, ಆಡುಗೋಡಿಯ ಕೆಲ ಭಾಗಗಳಲ್ಲಿ ಮುಸಲ್ಮಾನ ಮತಗಳು ಅಧಿಕ ಸಂಖ್ಯೆಯಲ್ಲಿವೆ. ಮುಸ್ಲಿಂ ವೋಟುಗಳು ಹ್ಯಾರಿಸ್‌ಗೆ ಸುಲಭವಾಗಿ ಲಭಿಸಲಿವೆ. ಜತೆಗೆ ಸಿದ್ದರಾಮಯ್ಯ ಕೂಡ ಈ ಭಾಗದಲ್ಲಿ ಜನಪ್ರಿಯರಾಗಿ ಕಾಣುತ್ತಾರೆ. ಕುಡಿಯುವ ನೀರು, ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್‌ ಯೋಜನೆಗಳು ಇದಕ್ಕೆ ಕಾರಣವಿರಬಹುದು. ಈ ಕಾರಣಕ್ಕಾಗಿಯೇ ವಾಸುದೇವ ಮೂರ್ತಿ ಮುಸ್ಲಿಂ ಸಮುದಾಯ ಓಲೈಕೆಗೆ ಕೈ ಹಾಕಿಲ್ಲ. ಹೇಗಿದ್ದರೂ ಅವು ಕಾಂಗ್ರೆಸ್‌ ಮತಗಳು ಎಂಬ ಅರಿವು ಅವರಿಗಿದೆ.

ಕಳೆದ ಚುನಾವಣೆಯಲ್ಲಿ ವಾಸುದೇವ ಮೂರ್ತಿ ಜೆಡಿಎಸ್‌ನಿಂದ ಸ್ಪರ್ದಿಸಿದ್ದರು. ಜಾತ್ಯಾತೀತ ಪಕ್ಷ ಎಂದು ಹೇಳಿಕೊಳ್ಳುವ ಜೆಡಿಎಸ್‌ನಲ್ಲಿ ನಿಂತಾಗಲೇ ಮುಸಲ್ಮಾನ ಮತಗಳು ವಾಸುದೇವ ಮೂರ್ತಿಗೆ ಸಿಕ್ಕಿರಲಿಲ್ಲ. ಆಡುಗೋಡಿ ಸ್ಲಂನಿಂದ ಮನೆ ಕಳೆದುಕೊಂಡು ಎಲೆಕ್ಟ್ರಾನಿಕ್‌ ಸಿಟಿಗೆ ಗುಳೆ ಹೋಗಿದ್ದ ಸಾವಿರಾರು ಮುಸಲ್ಮಾನರು ಚುನಾವಣೆ ಸಮಯದಲ್ಲಿ ಮತ್ತೆ ಹ್ಯಾರಿಸ್‌ ಕೈ ಹಿಡಿದಿದ್ದರು. ಇದರಿಂದ ಸಹಜವಾಗಿ ವಾಸುದೇವ ಮೂರ್ತಿ ಸಿಟ್ಟಾಗಿದ್ದರು. ನಂತರ ಬಿಜೆಪಿ ಸೇರ್ಪಡೆಯಾದ ವಾಸುದೇವ ಮೂರ್ತಿ ಕಳೆದೊಂದು ವರ್ಷದಿಂದಲೇ ಚುನಾವಣೆಯ ಸಿದ್ಧತೆ ನಡೆಸಿದ್ದಾರೆ.

ವಾಸುದೇವ ಮೂರ್ತಿಯವರ ಬಲ ತಿಗಳರ ಮತಗಳ ಮೇಲೆ ನಿಂತಿದೆ. ವಾಸುದೇವ ಮೂರ್ತಿ ಕೂಡ ತಿಗಳ ಸಮುದಾಯದವರಾಗಿದ್ದು, ಕ್ಷೇತ್ರದಲ್ಲಿರುವ ಸುಮಾರು 50% ಮತಗಳ ಮೇಲೆ ದೃಷ್ಟಿ ನೆಟ್ಟಿದ್ದಾರೆ. ಸಂಘ ಪರಿವಾರದ ಹಿನ್ನೆಲೆ ಇಲ್ಲದ ವಾಸುದೇವ ಮೂರ್ತಿಗೆ ಆರ್‌ಎಸ್‌ಎಸ್‌ ಬಲವಿಲ್ಲ. ಆದರೆ ಶಾಂತಿನಗರದಂತ ಕ್ಷೇತ್ರದಲ್ಲಿ ಸಂಘ ಪರಿವಾರದ ಸ್ಟ್ರಾಟಜಿಗಳ ಅಗತ್ಯವೂ ಇಲ್ಲ.

ಶಾಂತಿನಗರ ಕ್ಷೇತ್ರದಲ್ಲಿ ಸುಮಾರು 2,30,000 ಮತಗಳಿವೆ. ಅದರಲ್ಲಿ ತಮಿಳರು (ತಿಗಳರು) ಸುಮಾರು 1,15,000 ಜನರಿದ್ದಾರೆ. ಸುಮಾರು 35,000 ಮುಸಲ್ಮಾನರ ಮತಗಳಿವೆ. ಅದನ್ನು ಹೊರತು ಪಡಿಸಿದರೆ ಕ್ರೈಸ್ತ ಧರ್ಮಕ್ಕೆ ಮತಾಂತರರಾಗಿರುವ ತಮಿಳಿಗರಿದ್ದಾರೆ. ಹಿಂದಿನ ಚುನಾವಣೆಯಲ್ಲಿ ತಿಗಳರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿರಲಿಲ್ಲ, ಅದೇ ವಾಸುದೇವ ಮೂರ್ತಿ ಸೋಲಿಗೆ ಕಾರಣವಾಗಿತ್ತು ಎನ್ನಲಾಗಿದೆ. ಈ ಬಾರಿ ತಿಗಳರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುತ್ತಾರ ಎಂಬುದು ಚುನಾವಣೆಯಲ್ಲಿ ತಿಳಿಯಲಿದೆ.

ಶಾಂತಿನಗರದ ಬೂತ್‌ ಮಟ್ಟದಲ್ಲಿ ಕಾಂಗ್ರೆಸ್‌ ಪರ ಕೆಲಸ ಮಾಡುತ್ತಿರುವ ಕಾರ್ಯಕರ್ತ ಸೈಯದ್‌ ಪಾಶ ಪ್ರಕಾರ ಈ ಬಾರಿಯೂ ಪಕ್ಷದ ಅಭ್ಯರ್ಥಿ ಹ್ಯಾರಿಸ್‌ ಗೆಲುವು ಸಾಧಿಸಲಿದ್ದಾರೆ. “ಕಳೆದ ಚುನಾವಣೆಯಂತೆಯೇ ಈ ಬಾರಿಯೂ ಹ್ಯಾರಿಸ್‌ ಗೆಲ್ಲುತ್ತಾರೆ. ತಿಗಳ ಸಮುದಾಯದ ಮತಗಳು ಹೆಚ್ಚಿವೆ, ಆದರೆ ಅವರೂ ಹ್ಯಾರಿಸ್‌ಗೆ ಮತ ಹಾಕುತ್ತಾರೆ,” ಎಂಬ ಆತ್ಮವಿಶ್ವಾಸ ತೋರಿದರು.

ಆನೆಪಾಳ್ಯದಲ್ಲಿನ ಕಾಂಗ್ರೆಸ್‌ ಸದಸ್ಯರೊಬ್ಬರು ಹೇಳುವ ಪ್ರಕಾರ, ಸ್ಲಂನ ಬಹುತೇಕ ಮತಗಳು ಪ್ರತಿ ಸಲ ಹ್ಯಾರಿಸ್‌ಗೆ ಬೀಳುತ್ತವೆ. ಈ ಬಾರಿಯೂ ಸ್ಲಂ ಮತಗಳ ಕ್ರೋಢೀಕರಣಕ್ಕೆ ವಿಶೇಷ ಒತ್ತು ಕೊಡಲಾಗಿದ್ದು, ಹ್ಯಾರಿಸ್‌ ಖುದ್ದು ಭೇಟಿ ನೀಡಿ ಮತಯಾಚಿಸಿದ್ದಾರೆ.

‘ಸಮಾಚಾರ’ದ ಜತೆ ಮಾತನಾಡಿದ ವಾಸುದೇವ ಮೂರ್ತಿ ಈ ಬಾರಿ ಗೆಲ್ಲುವ ನಿರೀಕ್ಷೆಯಿದೆ ಎಂದಿದ್ದರು. “ಈ ಬಾರಿ ಖಂಡಿತ ಗೆಲ್ಲುತ್ತೇನೆ. ನನ್ನ ಸಮುದಾಯದ ಮತದಾರರು ಹೆಚ್ಚಿದ್ದಾರೆ. ಹ್ಯಾರಿಸ್‌ ಕ್ಷೇತ್ರದ ಜನರಿಗೆ ಕೆಲಸ ಮಾಡಿಸಿಲ್ಲ. ಈಗಾಗಲೇ ನಾನು ಮನೆಮನೆಗೆ ಭೇಟಿ ನೀಡಿ ಮತ ಯಾಚಿಸಿದ್ದೇನೆ. ಉತ್ತಮ ಅಂತರದಿಂದ ಗೆಲ್ಲಲಿದ್ದೇನೆ,” ಎಂಬ ಉತ್ಸಾಹ ವಾಸುದೇವ ಮೂರ್ತಿಯವರದ್ದು.

ಅದೇ ರೀತಿ ಹ್ಯಾರಿಸ್‌ ಕೂಡ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. ಹ್ಯಾರಿಸ್‌ ಪುತ್ರನ ಗಲಾಟೆಯಿಂದ ಕೊಂಚ ಮಟ್ಟಿಗೆ ಮತದಾರರು ದೂರವಾಗುವ ಸಾಧ್ಯತೆಯಿದ್ದರೂ, ಜನ ಅದನ್ನು ಈಗ ಮರೆತಿದ್ದಾರೆ. ಮಾಧ್ಯಮಗಳೂ ನಲಪಾಡ್‌ ಪ್ರಕರಣವನ್ನು ಬಿಟ್ಟು ಮುಂದೆ ಹೋಗಿದೆ. ಟಿಕೆಟ್‌ ಸಿಗುತ್ತಿದ್ದಂತೆಯೇ ಶಾಂತಿನಗರ ಕ್ಷೇತ್ರಾದ್ಯಂತ ಜನ ಜಾತ್ರೆಯೇ ಹರಿದಿತ್ತು. ಹ್ಯಾರಿಸ್‌ ಬಹಿರಂಗ ಪ್ರಚಾರ ಆರಂಭಿಸಿದ್ದರು. ನಿರೀಕ್ಷೆಯಂತೆ ಕ್ಷೇತ್ರದಲ್ಲಿ ತಮ್ಮ ಬಲ ಪ್ರದರ್ಶನ ಮಾಡುತ್ತಿದ್ದಾರೆ.

ಹ್ಯಾರಿಸ್‌ ಎರಡು ಬಾರಿ ಗೆದ್ದರೂ ಸಮರ್ಪಕವಾದ ಕೆಲಸವನ್ನು ಮಾಡಿಲ್ಲ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತವೆ. ಆದರೆ ಹ್ಯಾರಿಸ್‌ ಇತ್ತೀಚೆಗೆ ಆನ್‌ಲೈನ್‌ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದರು. ಮೂಲ ಭೂತ ಸೌಕರ್ಯಗಳ ಅಭಿವೃದ್ಧಿ ಶಾಂತಿನಗರ ಕ್ಷೇತ್ರದಲ್ಲಿ ಕಾಣಿಸುವುದಿಲ್ಲ. ಎಂಜಿ ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ ಸ್ಟ್ರೀಟ್‌ಗಳಂತ ಅಪ್‌ ಸ್ಕೇಲ್‌ ಏರಿಯಾಗಳಲ್ಲಿ ಮಾತ್ರ ರಸ್ತೆಗಳು ಉತ್ತಮ ಸ್ಥಿತಿಯಲ್ಲಿವೆ. ಶೂಲೆ ಸರ್ಕಲ್‌ನಿಂದ ಎಡಭಾಗಕ್ಕೆ ತಿರುಗಿದರೆ ರಸ್ತೆಗಳು ಪಾಟ್‌ಹೋಲ್‌ಗಳಿಂದ ತುಂಬಿವೆ.

ಶಾಂತಿನಗರ ಭಾಗದಲ್ಲಿ ಬಿಜೆಪಿ ಮುಖಂಡ ಶ್ರೀಧರ್‌ ರೆಡ್ಡಿ ಕೂಡ ತಮ್ಮದೇ ಆದ ಛಾಪನ್ನು ಹೊಂದಿದ್ದರು. ಆದರೆ ವಾರದ ಹಿಂದೆ ಅವರು ‘ಕಮಲ’ವನ್ನು ಕೆಳಗಿಟ್ಟು ‘ತೆನೆ ಹೊರಲು’ ಜೆಡಿಎಸ್‌ಗೆ ಹೋಗಿದ್ದಾರೆ. ಶ್ರೀಧರ್‌ ರೆಡ್ಡಿ ಬೆಂಬಲಿಗರು ಬಹಿರಂಗವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ವಾಸುದೇವಮೂರ್ತಿ ವಿರುದ್ಧ ಕೆಲಸ ಮಾಡುವ ಸಾಧ್ಯತೆಯಿದೆ. ಈ ಬೆಳವಣಿಗೆಯಿಂದ ಕಾಂಗ್ರೆಸ್‌ಗೆ ಕೊಂಚ ಮಟ್ಟಿನ ನೆರವು ಸಿಗಬಹುದು.

ಹೊನ್ನಾರ್‌ಪೇಟೆ ವಾರ್ಡ್‌ನ ಬಿಜೆಪಿ ಕಾರ್ಪೊರೇಟರ್‌ ಶಿವಕುಮಾರ್‌, ವಾಸುದೇವಮೂರ್ತಿ ಪರ ಪ್ರಚಾರ ಮಾಡುತ್ತಿದ್ದಾರೆ. ಜೋಗುಪಾಳ್ಯ ವಾರ್ಡ್‌ನ ಕಾರ್ಪೊರೇಟರ್‌ ಗೌತಮ್‌ ಕೂಡ ಈ ಬಾರಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಜೆಡಿಎಸ್‌ನಿಂದ ಪಕ್ಷ ಸೇರಿದ ವಾಸುದೇವ ಮೂರ್ತಿಗೆ ಟಿಕೆಟ್‌ ನೀಡಿರುವ ಬಗ್ಗೆ ಗೌತಮ್‌ರಲ್ಲಿ ಅಸಮಾಧಾನವಿದೆ. ಜತೆಗೆ ಹ್ಯಾರಿಸ್‌ ಜತೆಗೆ ಉತ್ತಮ ಬಾಂಧವ್ಯ ಹೊಂದಿರುವ ಗೌತಮ್‌ ಚುನಾವಣೆಯಲ್ಲಿ ಹ್ಯಾರಿಸ್‌ ಪರವಾಗಿ ನಿಂತಿದ್ದಾರೆ. ಜೋಗುಪಾಳ್ಯದ ಬಹುತೇಕ ಮತಗಳು ಹ್ಯಾರಿಸ್‌ ಪಾಲಾಗುವ ಸಾಧ್ಯತೆಯಿದೆ.

‘ಸಮಾಚಾರ’ದ ಜತೆ ಮಾತನಾಡಿದ ಕಾರ್ಪೊರೇಟರ್‌ ಶಿವಕುಮಾರ್‌, ಕಳೆದ ಚುನಾವಣೆಗಿನ್ನ ಈ ಬಾರಿ ಬಿನ್ನ ಎಂದರು. “ಎರಡು ಬಾರಿ ಹ್ಯಾರಿಸ್‌ ಶಾಸಕರಾಗಿದ್ದಾರೆ. ಆದರೆ ಕೆಲಸಗಳನ್ನು ಮಾಡಿಸಿಲ್ಲ. ಸಾಮಾನ್ಯವಾದ ಆಡಳಿತ ವಿರೋಧಿ ಅಲೆಯಿದೆ. ಜತೆಗೆ ತಿಗಳ ಸಮುದಾಯ ಶಕ್ತಿ ಪ್ರದರ್ಶನಕ್ಕೆ ಸಿದ್ಧವಾಗಿದೆ,” ಎನ್ನುತ್ತಾರೆ ಶಿವಕುಮಾರ್‌.

ELECTION TOUR: ಶಾಂತಿನಗರದಲ್ಲಿ ಹ್ಯಾರಿಸ್ ಪಾಲಿಗೆ ‘ಇಂದಿರಾ ಕ್ಯಾಂಟೀನ್‌’ ಮತಗಳ ಅಕ್ಷಯ ಪಾತ್ರೆ

ಇಂದಿರಾ ಕ್ಯಾಂಟೀನ್‌ ‘ಕೈ’ ಹಿಡಿಯುವ ಸಾಧ್ಯತೆ:

ಕಾಂಗ್ರೆಸ್‌ ಸರಕಾರದ ಬಹಹು ನಿರೀಕ್ಷಿತ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್‌ ಹ್ಯಾರಿಸ್‌ಗೆ ವರದಾನವಾಗುವ ಸಾಧ್ಯತೆ ಕ್ಷೇತ್ರದಲ್ಲಿ ಕಾಣುತ್ತದೆ. ಕ್ಷೇತ್ರದಲ್ಲಿ ಅಧಿಕವಾಗಿರುವ ದಿನಗೂಲಿ ನೌಕರರಿಗೆ ಇಂದಿರಾ ಕ್ಯಾಂಟೀನ್‌ನಿಂದ ಕಡಿಮೆ ದರದಲ್ಲಿ ಊಟ ಸಿಗುತ್ತಿದೆ. ಇದರಿಂದ ದಿನಗೂಲಿ ನೌಕರರು ಮುಂಚಿನಂತೆ ಊಟಕ್ಕಾಗಿ ಹೆಚ್ಚು ಹಣ ವ್ಯಯ ಮಾಡುತ್ತಿಲ್ಲ. ಶಾಂತಿನಗರ ಕ್ಷೇತ್ರದಲ್ಲಿ ಸುಮಾರು ಆರಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳಿವೆ.

ಇಂದಿರಾ ಕ್ಯಾಂಟೀನ್‌ ಜತೆಗೆ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯೂ ಶಾಂತಿನಗರದಲ್ಲಾಗಿದೆ. ಮುಂಚೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಶಾಂತಿನಗರ ಕ್ಷೇತ್ರದ ಜನರನ್ನು ಕಾಡುತ್ತಿತ್ತು. ಈ ಹಿಂದೆ ಕುಡಿಯುವ ನೀರಿಗೆ 30 ರೂಪಾಯಿ ಕೊಡಬೇಕಿತ್ತು. ಈಗ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಿದೆ. ಈ ಅಭಿವೃದ್ಧಿ ಕಾರ್ಯಗಳು ಕೊನೆ ಕ್ಷಣದಲ್ಲಿ ಹ್ಯಾರಿಸ್‌ ಕೈ ಹಿಡಿಯುವ ಸಾಧ್ಯತೆಯಿದೆ. ಆದರೆ ಈ ಹಿಂದಿನ ಚುನಾವಣೆಗಳಲ್ಲಿ ಹ್ಯಾರಿಸ್‌ಗೆ ಸಿಕ್ಕ ಸುಲಭ ಗೆಲುವು ಈ ಬಾರಿ ಸಿಗುವ ಸಾಧ್ಯತೆ ಕಡಿಮೆ.

ಶಾಂತಿನಗರ ವಿಧಾನಸಭೆ ಕ್ಷೇತ್ರ ಬೆಂಗಳೂರಿನ ವಿಶೇಷ ಕ್ಷೇತ್ರಗಳಲ್ಲಿ ಒಂದು. ಕ್ಷೇತ್ರದ ಒಂದು ಭಾಗ ಶ್ರೀಮಂತಿಕೆ ಮತ್ತು ಶ್ರೀಮಂತರಿಂದ ತುಂಬಿದರೆ, ಇನ್ನೊಂದೆಡೆ ಕಡು ಬಡತನ, ಸ್ಲಂ ಜೀವನ. ಈ ಎರಡೂ ವರ್ಗಗಳನ್ನು ಅಂತಿಮವಾಗಿ ಯಾರು ತಲುಪುತ್ತಾರೆ ಅವರು ಶಾಂತಿನಗರದ ಶಾಸಕರಾಗಿ ಹೊರಹೊಮ್ಮುತ್ತಾರೆ.