samachara
www.samachara.com
ಮೋದಿ ‘ನೇರ ಪ್ರಸಾರ’: ಅಭಿವೃದ್ಧಿಯ ಜಪ; ಉಳಿದ ವಿಚಾರಗಳ ಬಗ್ಗೆ ಇಲ್ಲ ಪ್ರಸ್ತಾಪ
COVER STORY

ಮೋದಿ ‘ನೇರ ಪ್ರಸಾರ’: ಅಭಿವೃದ್ಧಿಯ ಜಪ; ಉಳಿದ ವಿಚಾರಗಳ ಬಗ್ಗೆ ಇಲ್ಲ ಪ್ರಸ್ತಾಪ

“ಕರ್ನಾಟಕದ ಎಲ್ಲ ಮತದಾರರಲ್ಲಿ ನಾನು ಕ್ಷಮೆ ಕೇಳ್ತೇನೆ. ಕನ್ನಡದಲ್ಲಿ ಮಾತನಾಡಬೇಕು ಎಂಬ ಆಸೆ ಇದ್ದರೂ ಸಾಧ್ಯವಾಗ್ತಿಲ್ಲ. ಹಾಗಾಗಿ ನನ್ನ ಭಾಷಣವನ್ನ ಹಿಂದಿ ಹಾಗೂ ಇಂಗ್ಲೀಷ್ ನಲ್ಲಿ ಮಾಡುತ್ತೇನೆ,’’ ಮೊದಲೇ ಆಂಟಿಸಪೇಟರಿ ಬೇಲ್ ಹಾಕಿಕೊಂಡರು.

govindaby chaguppe

govindaby chaguppe

ಕರ್ನಾಟಕದ ವಿಧಾನಸಭಾ ಚುನಾವಣೆ ಕಾವು ಬೇಸಿಗೆ ಬಿಸಿಲಿಗಿಂತ ತೀವ್ರವಾಗಿ ಹೆಚ್ಚುತ್ತಿದೆ. ಪ್ರಮುಖ ಮೂರೂ ಪಕ್ಷಗಳ ಸ್ಟಾರ್ ಪ್ರಚಾರಕರು ಕರ್ನಾಟಕದ ಬೀದಿಗಳಿಗೆ ಇಳಿಯುತ್ತಿದ್ದಾರೆ, ಬೆವರು ಹರಿಸುತ್ತಿದ್ದಾರೆ. ಜನರಿಂದ ಬೈಸಿಕೊಳ್ಳುತ್ತಿದ್ದಾರೆ.

ವಿಷಯ ಹೀಗಿರುವಾಗ, ಬಿಜೆಪಿಯ ಪಾಲಿಗೆ ಇವತ್ತಿನ ದೈತ್ಯ ಶಕ್ತಿ ಎಂದು ಹೇಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮಾತ್ರ ಅಧಿಕೃತವಾಗಿ ಕರ್ನಾಟಕದ ಪ್ರಚಾರಕ್ಕೆ ಇನ್ನೂ ಕಾಲಿಟ್ಟಿಲ್ಲ. ಬದಲಿಗೆ ಅವರು 40 ನಿಮಿಷ ಕರ್ನಾಟಕದ ಬಿಜೆಪಿ ಕಾರ್ಯಕರ್ತನ್ನು ಉದ್ದೇಶಿಸಿ ‘ನಮೋ ಆಪ್‌’ನ ನೇರಪ್ರಸಾರದಲ್ಲಿ ಗುರುವಾರ ಮಾತನಾಡಿದ್ದಾರೆ.

ಮೋದಿ ಭಾಷಣದಲ್ಲಿ ಹಿಂದಿನಂತೆ ಧರ್ಮ, ಹಿಂದುತ್ವ ಇತ್ಯಾದಿ ಬಿಜೆಪಿ ಅಜೆಂಡಾಗಳ ಪ್ರಸ್ತಾಪವೇ ಇಲ್ಲದಿರುವುದು ಅವರ ಪ್ರೋತ್ಸಾಹದಾಯಕ ಮಾತಿನ ಹೈಲೈಟ್ಸ್‌. 40 ನಿಮಿಷಗಳ ಭಾಷಣದಲ್ಲಿ ಎದ್ದು ಕಂಡಿದ್ದು ಅಭಿವೃದ್ಧಿ, ಅಭಿವೃದ್ಧಿ ಮತ್ತು ಅಭಿವೃದ್ಧಿಯ ಜಪ.

“ಕಾರ್ಯ ನಿರತರರಾದ್ ಕಾರ್ಯಕರ್ತಾ ಬಂಧು ಗಳಿಗೆ ನಮಸ್ಕಾರ್. ತಾಂತ್ರಿಕ್ ಮಾಧ್ಯಮತ್ ಮುಲ್ಕಾ ತಮ್ಮೊಡನೆ ಚರ್ಚೆ ನಡೆಸುವ ಅವಕಾಸ ನನಗೆ ದೋರೆತಿದೆ” ಎಂದು ಕಷ್ಟಪಟ್ಟು ಕನ್ನಡದಲ್ಲಿ ಮಾತು ಪ್ರಾರಂಭಿಸಿದ ಪ್ರಧಾನಿ, “ಕರ್ನಾಟಕದ ಎಲ್ಲ ಮತದಾರರಲ್ಲಿ ನಾನು ಕ್ಷಮೆ ಕೇಳ್ತೇನೆ. ಕನ್ನಡದಲ್ಲಿ ಮಾತನಾಡಬೇಕು ಎಂಬ ಆಸೆ ಇದ್ದರೂ ಸಾಧ್ಯವಾಗ್ತಿಲ್ಲ. ಹಾಗಾಗಿ ನನ್ನ ಭಾಷಣವನ್ನ ಹಿಂದಿ ಹಾಗೂ ಇಂಗ್ಲೀಷ್ ನಲ್ಲಿ ಮಾಡುತ್ತೇನೆ,’’ ಮೊದಲೇ ಆಂಟಿಸಪೇಟರಿ ಬೇಲ್ ಹಾಕಿಕೊಂಡರು.

“ಕರ್ನಾಟಕದ ವಿಕಾಸಕ್ಕಾಗಿ ಬಿಜೆಪಿ, ಡೆವಲಪ್ ಮೆಂಟ್, ಪಾಸ್ಟ್ ಫೇಸ್ ಡೆವಲಪ್ ಮೆಂಟ್ ಹಾಗೂ ಆಲ್ ರೌಂಡ್ ಡೆವಲಪ್ ಮೆಂಟ್ ಎಂಬ ಮೂರು ಅಜೆಂಡಾಗಳನ್ನು ಒಳಗೊಂಡಿದೆ. ಬಿಜೆಪಿಯದ್ದು ಡೆವಲಪ್ಮೆಂ‌ಟ್ ಡೆವಲಪ್ಮೆಂ‌ಟ್, ಡೆವಲಪ್ಮೆಂ‌ಟ್, ವಿಕಾಸ್, ವಿಕಾಸ್, ವಿಕಾಸ್ ತತ್ವ,’’ ಎನ್ನುವ ಮೂಲ ಮೂಲ ಬಿಜೆಪಿ ಕರ್ನಾಟಕದ ಚುನಾವಣೆ ಪಾಲಿಗೆ ಬದಲಾಗಿದೆ ಎಂಬುದನ್ನು ಸ್ಪಷ್ಟಪಡಿಸಿದರು.

“ಬಿಜೆಪಿ ಅಭಿವೃದ್ಧಿ ರಾಜಕೀಯಕ್ಕೆ ಹೆಚ್ಚು ಒತ್ತು ನೀಡುತ್ತದೆ. ಉಳಿದ ವಿಚಾರದಲ್ಲೂ ನಮಗೆ ಅಭಿವೃದ್ಧಿ ವಿಚಾರವೇ ಮುಖ್ಯ. ನಾವು ಇದೇ ವಿಚಾರವನ್ನಿಟ್ಟುಕೊಂಡು ಸರ್ಕಾರವನ್ನೂ ನಡೆಸ್ತೇವೆ. ಚುನಾವಣೆಯಲ್ಲಿ ಜನರ ನಡುವೆಯೂ ಇದೇ ವಿಚಾರದೊಂದಿಗೆ ಹೋಗ್ತೇವೆ,’’ ಎಂದ ಮೋದಿ, ಅಭಿವೃದ್ಧಿ ವಿಚಾರದಲ್ಲಿ ಉಳಿದ ರಾಜಕೀಯ ಪಕ್ಷಗಳು ಜನರ ಬಳಿ ಮಾತನಾಡಲು ಭಯ ಪಡುತ್ತಿವೆ ಎಂದು ಜರಿದರು.

“ಈ ಚಾಲಾಕಿ ಪಕ್ಷಗಳು ಏನು ಮಾಡ್ತವೆ ಗೊತ್ತಾ ? ಪ್ರತಿ ಬಾರಿಯೂ ಯಾವುದೋ ಒಂದು ಸಮುದಾಯಕ್ಕೆ ಲಾಲಿಪಪ್ ನೀಡಿ ಅವರನ್ನು ಸಂಪೂರ್ಣ ಗೊಂದಲಗೊಳಿಸಿ ಮತ ಪಡೆಯುತ್ತವೆ. ಮುಂದಿನ ಚುನಾವಣೆಯಲ್ಲಿ ಆ ಸಮುದಾಯವನ್ನು ಬಿಟ್ಟು ಮತ್ತೊಂದು ಸಮುದಾಯಕ್ಕೆ ಮತ್ತೆ ಲಾಲಿಪಪ್ ನೀಡಿ ಮತ್ತೆ ಓಟು ಪಡೆಯುತ್ತವೆ. ನೀವು ಹಿಂದಿನ ಐದತ್ತು ಚುನಾವಣೆಗಳನ್ನು ಪರಿಶೀಲಿಸಿದರೆ ಇಂಥಹ ಸುಳ್ಳು ಭರವಸೆಗಳಿಂದ ಮತ ಪಡೆದ ಉದಾಹರಣಗಳೇ ಸಿಗುತ್ತವೆ. ಪ್ರತಿ ಬಾರಿಯೂ ಹೊಸ ಜಾತಿ, ಸಮುದಾಯವವೊಂದಕ್ಕೆ ಲಾಲಿ ಪಪ್ ನೀಡುವುದು, ಜನರನ್ನು ವಂಚಿಸಿ ಮತ ಪಡೆದು ಮರೆತು ಬಿಡುತ್ತವೆ. ಇದು ಆ ಪಕ್ಷಗಳ ವೃತ್ತಿಯಾಗಿಬಿಟ್ಟಿದೆ. ಪ್ರತಿ ವರ್ಷ ಹೊಸ ಹೊಸ ಲಾಲಿಪಪ್ ಗಳನ್ನು ಹಾಕುತ್ತಲೇ ತಮ್ಮ ರಾಜನೀತಿಯನ್ನು ನಡೆಸುತ್ತವೆ ಹೊರತು. ಜವಾಬ್ದಾರಿ ತೋರುವುದಿಲ್ಲ, ಲೆಕ್ಕ ನೀಡಲು ಸಿದ್ದ ಇರುವುದಿಲ್ಲ,” ಎಂದು ಮೋದಿ ಹೇಳಿದರು.

“ಭಾರತೀಯ ರಾಜಕಾರಣದ ಮುಖ್ಯಧಾರೆ ಕಾಂಗ್ರೆಸ್ ಸೃಷ್ಟಿಸಿದ ಅಧರ್ಮ ಹಾಗೂ ಪಾಪದೊಂದಿಗೆ ಬೆರೆತು ಹೋಗಿದೆ ಎಂದರೆ ಯಾರೂ ಒಪ್ಪದಿರಲು ಸಾಧ್ಯವಿಲ್ಲ. ಉಳಿದ ಪಕ್ಷಗಳ ರಾಜಕಾರಣವೂ ಕಾಂಗ್ರೆಸ್‌ನ ಮುಖ್ಯಧಾರೆ ರಾಜಕಾರಣದಿಂದಲೇ ಪ್ರೇರಣೆಗೊಂಡಿವೆ. ಎಲ್ಲಿಯವರೆಗೆ ದೇಶಕ್ಕೆ ಕಾಂಗ್ರೆಸ್ ನ ಮುಖ್ಯಧಾರೆಯ ರಾಜಕಾರಣದಿಂದ ಮುಕ್ತಿ ಸಿಗದೋ ಅಲ್ಲಿಯವರೆಗೆ ರಾಜಕಾರಣವನ್ನು ಶುದ್ಧೀಕರಣಗೊಳಿಸಲು ಸಾಧ್ಯವಿಲ್ಲ,’’ ಎಂದು ಕಾಂಗ್ರೆಸ್ ರಾಜಕೀಯ ಸ್ವರೂಪದ ಬೇರುಗಳನ್ನು ನೆನಪಿಸಿದರು.

ಕಾರ್ಯಕರ್ತರೇ ನಾವು ಅಭಿವೃದ್ಧಿ ರಾಜಕಾರಣ ಮಾಡಲು ಬಯಸುತ್ತೇವೆ. ಸಂಘಟನೆಯ ಶಕ್ತಿ, ಜನರ ವಿಶ್ವಾಸ ಗೆದ್ದು ಚುನಾವಣೆ ಗೆಲ್ಲಲು ರಾಜಕಾರಣ ಮಾಡಲು ಬಯಸುತ್ತೇವೆ. ನಾವು ಜನರನ್ನು ವಂಚಿಸಿ ಮತ ಪಡೆಯಲು ಚುನಾವಣಾ ಮೈದಾನಕ್ಕೆ ಹೋಗಲು ಇಷ್ಟಪಡುವುದಿಲ್ಲ. ನಾವು ಜನತಾ ಜನಾರ್ದನರ ಹೃಯಯ ಮತ್ತು ವಿಶ್ವಾಸ ಗೆದ್ದರೆ ಸಾಕು ಚುನಾವಣೆಯಲ್ಲಿ ನಮ್ಮನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ ಎಂದು ಮೋದಿ ಕಾರ್ಯಕರ್ತರಲ್ಲಿ ವಿಶ್ವಾಸ ತುಂಬುವ ಪ್ರಯತ್ನ ಮಾಡಿದರು.

ತಮ್ಮ ಭಾಷಣದ ಉದ್ದಕ್ಕೂ ಯುಪಿಎ ಸರಕಾರದ ನಾಲ್ಕು ವರ್ಷದ ಸಾಧನೆಗಳನ್ನು ತಮ್ಮ ಸರಕಾರದ ಕಳೆದ ನಾಲ್ಕು ವರ್ಷಗಳ ಸಾಧನೆಗೆ ಹೋಲಿಕೆ ಮಾಡಿದರು.

“ಈಗ ಕರ್ನಾಟಕದಲ್ಲಿ ನೋಡಿ ನ್ಯಾಷನಲ್ ಹೈವೇ ಅಥಾರಿಟಿ ಆಫ ಇಂಡಿಯಾ ಎಷ್ಟು ಕೆಲಸ ಮಾಡಿದೆ ನೋಡಿ. ಯುಪಿಎ ಸರ್ಕಾರದಲ್ಲಿ ಏನಾಗಿತ್ತು , ಈಗ ನಮ್ಮ ಎನ್ ಡಿಎ ಸರ್ಕಾರದಲ್ಲಿ ಎಷ್ಟು ಕೆಲಸ ಆಗಿದೆ. ನೋಡಿ ನಾವು ಮುಂದಿನ ಶತಾಬ್ದಿಯವರೆಗೂ ನೆನಪಿಸಿಕೊಳ್ಳುವಂತ ಕೆಲಸ ಮಾಡಿದ್ದೇವೆ. 14000 ಕೋಟಿ ರೂಪಾಯಿ ವ್ಯಯಿಸಿ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿದ್ದೇವೆ. ಹಿಂದಿನ ಯುಪಿಎ 8700 ಕೋಟಿ ಖರ್ಚು ಮಾಡಿತ್ತು. ನಾವು ಇದೇ ಅವಧಿಯಲ್ಲಿ 27 ಸಾವಿರ ಖರ್ಚು ಮಾಡಿದ್ದೇವೆ. ನೋಡಿ ಎಷ್ಟು ವ್ಯತ್ಯಾಸವಿದೆ,’’ ಎಂದರು. ಈ ಸಮಯದಲ್ಲಿ ಮೋದಿ ಮಾತಿಗೆ ಪೂರಕವಾಗಿ ಗ್ರಾಫಿಕ್ಸ್‌ ಬಳಸಲಾಗುತ್ತಿತ್ತು.

ಮೋದಿ ಭಾಷಣದ ವೇಳೆ ಬಳಸಿದ ಗ್ರಾಫಿಕ್ಸ್‌. 
ಮೋದಿ ಭಾಷಣದ ವೇಳೆ ಬಳಸಿದ ಗ್ರಾಫಿಕ್ಸ್‌. 

“ಇನ್ನು ಉದ್ಯೋಗ ಸೃಷ್ಟಿ ಬೇರೆ ಮಾತು. ಇದು ಕರ್ನಾಟಕದ ಭವಿಷ್ಯಕ್ಕಾಗಿ ನಿರ್ಮಿಸಿದ್ದು. ಕರ್ನಾಟಕ ಮುಂದೆ ಬಂದರೆ ಅದು ವಿಶ್ವದಲ್ಲೇ ಹೆಸರಾಗುತ್ತದೆ. ನಗರಾಭಿವೃದ್ದಿಯಲ್ಲಿ ನೋಡಿ ಕರ್ನಾಟಕ 380 ಕೋಟಿಗಿಂತಲೂ ಕಡಿಮೆ ಖರ್ಚು ಮಾಡಿದೆ. ಇದು ನಾಲ್ಕು ನೂರು ಕೋಟಿಗಿಂತಲೂ ಕಡಿಮೆ. ನಾವು ಇದೇ ಅವಧಿಯಲ್ಲಿ ಇದರ 1600 ಕೋಟಿಯಷ್ಟು ಖರ್ಚು ಮಾಡಿದ್ದೇವೆ. ಬಡವರು ಮತ್ತು ಮಧ್ಯಮವರ್ಗವನ್ನು ಮೇಲೆತ್ತುವ ಮತ್ತು ಯುವಜನರಿಗೆ ಉದ್ಯೋಗ ಸೃಷ್ಟಿ ಮಾಡಿದ್ದೇವೆ,’’ ಎಂದರು ಮೋದಿ.

ಹೀಗೆ ಹೆದ್ದಾರಿ ಅಭಿವೃದ್ಧಿ, ನವೀಕರಿಸಬಹುದಾದ ಇಂದನ ಮೂಲದ ಬಳಕೆ, ಶೌಚಾಲಯ ನಿರ್ಮಾಣ, ಗ್ಯಾಸ್‌ ಸಿಲಿಂಡರ್ ನೀಡುವ ಯೋಜನೆಗಳನ್ನು ಪ್ರಸ್ತಾಪಿಸಿದ ಮೋದಿ, ಎಲ್ಲವನ್ನೂ ಯುಪಿಎ ಸರಕಾರದ ಜತೆ ತಾಳೆ ಮಾಡಿ ಲೆಕ್ಕ ಮಂಡಿಸಿದರು. ಈ ಹಂತದಲ್ಲಿ ಕರ್ನಾಟಕದ ಬುದ್ಧಿಜೀವಿಗಳನ್ನು ನೆನೆಪಿಸಿಕೊಂಡ ಪ್ರಧಾನಿ, “ನಾನು ಕರ್ನಾಟಕದ ಬುದ್ದಿಜೀವಿ ಜನರಲ್ಲಿ ಕೇಳುತ್ತೇನೆ. ಕಾಂಗ್ರೆಸ್ ಮಾಮೂಲಿ ಉದಾಸೀನತೆಯಿಂದ ನಾಲ್ಕು ವರ್ಷದಲ್ಲಿ 31 ಮೆ.ವ್ಯಾಟ್ ನಷ್ಟು ಮಾತ್ರ ಸೊಲಾರ್ ಶಕ್ತಿ ಸೃಷ್ಟಿಸಿತ್ತು. ನಾವು ಇದೇ ಅವಧಿಯಲ್ಲಿ 4 ಸಾವಿರದ 800 ಮೆ.ವಾ.ವಿದ್ಯುತ್ ಸೃಷ್ಟಿಸಿದ್ದೇವೆ. ಇದರ ವ್ಯತ್ಯಾಸ ಎಷ್ಟು ನೋಡಿ. ಅವರಿಗೆ ಕೆಲಸ ಮಾಡಲು ಇಷ್ಟವಿಲ್ಲ, ಕೇವಲ ರಾಜಕೀಯ ಅವರದ್ದು, ಕರ್ನಾಟಕ ಇನ್ನಷ್ಟು ಅಭಿವೃದ್ಧಿ ಆಗಬೇಕು. ಅದಕ್ಕಾಗಿ ನಿಮ್ಮ ಶಕ್ತಿ ಕೇಳುತ್ತಿದ್ದೇನೆ,’’ ಎಂದರು.

ನಾವು ಮಕ್ಕಳಿಗೆ ಶಿಕ್ಷಣ, ಯುವಕರಿಗೆ ಸಂಬಳ, ರೋಗಪೀಡಿತರಿಗೆ ಆರೋಗ್ಯ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದ ಮೋದಿ ಈ ವಿಚಾರದಲ್ಲಿ ಹೆಚ್ಚಿನ ಮಾಹಿತಿ ನೀಡುವ ರಿಸ್ಕ್‌ ತೆಗೆದುಕೊಳ್ಳಲಿಲ್ಲ.

ಅಲ್ಲಿಂದ ನೇರವಾಗಿ ಮುದ್ರಾ ಯೋಜನೆಯನ್ನು ನೆನಪಿಸಿಕೊಂಎ ಅವರು, “ಮುದ್ರಾ ಯೋಜನೆ ಮೂಲಕ ತಮ್ಮ ಕಾಲ ಮೇಲೆ ತಾವೇ ನಿಲ್ಲುವಂತ ಕೆಲಸ ಮಾಡುತ್ತಿದ್ದೇವೆ. 2020ಕ್ಕೆ ದೇಶದ ಗತಿ ಸಂಪೂರ್ಣ ಬದಲಾಗಬೇಕು. ಹಳ್ಳಿಯಾಗಲಿ, ನಗರವಾಗಲಿ ಅಭಿವೃದ್ದಿ ಆಧಾರದಲ್ಲಿ ಚುನಾವಣೆಗೆ ಹೋಗೋಣ. ಅವರು ಸುಳ್ಳು, ಜಾತಿ, ಧರ್ಮದ ಆಧಾರದಲ್ಲಿ ಹೋಗ್ತಾರೆ. ನಾವು ಏಕ್ ಭಾರತ್ ಶ್ರೇಷ್ಠ ಭಾರತ್, ಸಭ್ ಕಾ ಸಾತ್ ಆಧಾರದಲ್ಲಿ ಚುನಾವಣೆಗೆ ಹೋಗೋಣ,’’ ಎಂದರು.

ಈವರೆಗೆ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳು ಸಿಗಬಹುದು ಎಂದು ಹೇಳಿವೆ. ಜತೆಗೆ, ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆಯ ಮುನ್ಸೂಚನೆಯನ್ನೂ ನೀಡಿವೆ. ಈ ಬಗ್ಗೆ ಗಮನ ಸೆಳೆದ ಮೋದಿ, “ಯಾರಿಗೂ ಬಹುಮತ ಬರುವುದಿಲ್ಲ ಎಂದೂ, ಅತಂತ್ರ ವಿಧಾನಸಭೆ ಸೃಷ್ಟಿಯಾಗುತ್ತದೆ, ತ್ರಿಶಂಕು ವಿಧಾನಸಭೆ ಸೃಷ್ಟಿಯಾಗುತ್ತದೆ ಎಂಬ ಮಾತುಗಳೂ ಕೇಳಿ ಬರ್ತಿವೆ. ಇಂಥ ಸುಳ್ಳು ಅಂಕಿ ಅಂಶಗಳ ಹೊರತಾಗಿಯೂ ಕಾಂಗ್ರೆಸ್ ಗೆಲ್ಲುವುದಿಲ್ಲ. 2014ರಲ್ಲಿ ನಮ್ಮ ಸರ್ಕಾರ ಬರುವವರೆಗೂ ಯಾರಿಗೂ ಬಹುಮತವಿರಲಿಲ್ಲ, ಅತಂತ್ರ ಸಂಸತ್ ನಿರ್ಮಾಣವಾಗುತ್ತದೆ ಎಂದು ಹೇಳಲಾಗುತ್ತಿತ್ತು. ಮತದಾರರು ಮತ ಚಲಾಯಿಸದಂತೆ ನಿರಾಶೆಗೊಳಿಸುವ ಕೆಲಸ ಮಾಡಲಾಗುತ್ತಿತ್ತು. ಆದರೆ ಆದರೆ ಏನಾಯಿತು ನೋಡಿ ಭಾರತೀಯ ಜನತಾ ಪಕ್ಷಕ್ಕೆ ಭಾರಿ ಬಹುಮತ ಸಿಕ್ಕಿತು. ಕರ್ನಾಟಕದ ಕಾರ್ಯಕರ್ತರಲ್ಲಿ ನಾನು ಕೇಳುವುದೇನೆಂದರೆ ನೀವು ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸದಿಂದ ಕೆಲಸ ಮಾಡುತ್ತಾ ಹೋಗಿ,’’ ಎಂದರು.

ಕೊನೆಯಲ್ಲಿ ಬಿಜೆಪಿ ಶಾಸಕರಾದ ಸುನೀಲ್ ಕುಮಾರ್, ಶಶಿಕಲಾ ಜೊಲ್ಲೆ ಹಾಗೂ ಸುರೇಶ್ ಕುಮಾರ್ ಮೋದಿ ಅವರಿಗೆ ಪ್ರಶ್ನೆಗಳನ್ನು ಕೇಳುವ ಅವಕಾಶ ನೀಡಲಾಗಿತ್ತು. ಈ ಮೂಲಕ ಮೋದಿ ಕರ್ನಾಟಕದ ರೈತರ ವಿಕಾಸ, ನಗರಾಭಿವೃದ್ಧಿಗಳ ಕುರಿತು ಮಾತನಾಡುವ ಅವಕಾಶವನ್ನೂ ಸೃಷ್ಟಿಸಲಾಯಿತು.

ಒಟ್ಟಿನಲ್ಲಿ ಎಮೋಷನಲಿ ಓವರ್‌ ಲೋಡೆಡ್‌ ಆಗಿದ್ದ ಮೋದಿ ಭಾಷಣ ಅಭಿವೃದ್ಧಿಗೆ ಸೀಮಿತವಾಗಿತ್ತು. ಬುದ್ಧಿಜೀವಿಗಳನ್ನು ನೆನಪಿಸಿಕೊಳ್ಳಲು ವೇದಿಕೆಯಾಯಿತು. ಅಪ್ಪಿತಪ್ಪಿಯೂ ಕರ್ನಾಟಕದಲ್ಲಿ ಬಿಜೆಪಿ ಕಾರ್ಯಕರ್ತರು ಎದುರಿಸುತ್ತಿರುವ ಮಹದಾಯಿ ನೀರು, ಕರ್ನಾಟಕದ ಅಸ್ಮಿತೆ ಮತ್ತು ಪ್ರತ್ಯೇಕ ಧ್ವಜ, ಲಿಂಗಾಯತ ಪ್ರತ್ಯೇಕ ಧರ್ಮ, ಎಸ್.ಸಿ.ಎಸ್.ಟಿ. ನೌಕರರಿಗೆ ಆಗುತ್ತಿರುವ ಹಿಂಬಡ್ತಿ, ದಲಿತರಿಗೆ ರಕ್ಷಣೆ ನೀಡಿದ್ದ ಅಟ್ರಾಸಿಟಿ ಕಾಯ್ದೆ ರದ್ದು ಮಾಡಲು ಹೊರಟಿರುವ ವಿಚಾರ, ಉದ್ಯೋಗ ಸೃಷ್ಟಿ, ಅನಾಣ್ಯೀಕರಣ, ಜಿಎಸ್‌ಟಿ ವಿಚಾರಗಳನ್ನು ಮೋದಿ ಪ್ರಸ್ತಾಪಿಸಲಿಲ್ಲ ಎಂಬುದು ಗಮನಾರ್ಹ.

ಕರ್ನಾಟಕದ ಚುನಾವಣೆ ಅಖಾಡಕ್ಕೆ ಇಳಿಯುವ ಮುನ್ನ ಪ್ರಧಾನಿ ಮೋದಿ ನಡೆಸುತ್ತಿರುವ ತಾಲೀಮಿನಂತೆ ಒಟ್ಟಾರೆ ನೇರ ಪ್ರಸಾರ ಕಂಡು ಬಂತು.