samachara
www.samachara.com
ರಾಜಕಾರಣಿಗಳು ಹೇಗೆ ಶ್ರೀಮಂತರಾಗುತ್ತಾರೆ?: ಆಸ್ತಿ ಘೋಷಣೆ ಮತ್ತು ತಳಮಟ್ಟದ ಸತ್ಯಗಳು
COVER STORY

ರಾಜಕಾರಣಿಗಳು ಹೇಗೆ ಶ್ರೀಮಂತರಾಗುತ್ತಾರೆ?: ಆಸ್ತಿ ಘೋಷಣೆ ಮತ್ತು ತಳಮಟ್ಟದ ಸತ್ಯಗಳು

ರಾಜಕಾರಣಿಗಳ ಪ್ರಮುಖ ಆದಾಯ ಮೂಲ ಜನರ ಹಣದಿಂದ ಪಡೆಯುವ ಸಂಬಳ ಮತ್ತು ಭತ್ಯೆಗಳು. ಅದಾದರೂ ಎಷ್ಟಿದೆ ಎಂದು ನೋಡಿದರೆ ಅಚ್ಚರಿ ಮೂಡಿಸುತ್ತದೆ.

ವಿಶ್ವನಾಥ್ ಬಿ. ಎಂ

ವಿಶ್ವನಾಥ್ ಬಿ. ಎಂ

ರಾಜಕೀಯ ಕ್ಷೇತ್ರ ಇಷ್ಟು ಬೇಗ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೊಲಸೆದ್ದು ಹೋಗುತ್ತದೆ ಎಂದುಕೊಂಡಿರಲಿಲ್ಲ. ಇಂದಿನ ರಾಜಕಾರಣಿಗಳು ಅಧಿಕಾರ ಇರುವುದು ಜನರ ಸೇವೆಗೆ ಎಂಬುದನ್ನು ಮರೆತು ದಬ್ಬಾಳಿಕೆ, ದೌರ್ಜನ್ಯ, ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅವರ ಮುಂದೆ ದೇಶದ ಬಗ್ಗೆ ದೊಡ್ಡ ಕನಸುಗಳೂ ಇಲ್ಲ, ಪ್ರಾಮಾಣಿಕತೆಯೂ ಇಲ್ಲ. ಭ್ರಷ್ಟಾಚಾರವೇ ರಾಜಕಾರಣ ಎಂಬಂತಾಗಿದೆ.

ಇದು ಮಲೆನಾಡು ಗಾಂಧಿ ಎಂದೇ ಹೆಸರಾದ ಮಾಜಿ ಶಿಕ್ಷಣ ಸಚಿವ ಎಚ್‌.ಜಿ.ಗೋವಿಂದೇಗೌಡ 4 ವರ್ಷಗಳ ಹಿಂದೆ ಹೇಳಿದ್ದ ಮಾತು.

ಕರ್ನಾಟಕ ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿದೆ. ನಾಮ ಪತ್ರ ಸಲ್ಲಿಸುವ ಕೊನೆಯ ದಿನಾಂಕವೂ ಮುಗಿದು ಹೋಗಿದೆ. ನಾಮಪತ್ರದ ಜತೆಗೆ ಅಭ್ಯರ್ಥಿಗಳ ಆಸ್ತಿ ಘೋಷಣೆಯೂ ಆಗಿದೆ. ರಾಜಕಾರಣಿಗಳು ಘೋಷಿಸಿಕೊಂಡ ಆಸ್ತಿಯ ಬಗ್ಗೆ ಕಣ್ಣಾಡಿಸಿದರೆ ಸಹಜ ಪ್ರಶ್ನೆಗಳು ಏಳುತ್ತವೆ.

ರಾಜಕಾರಣಿಗಳಿಗೆ ಇರುವ ಆದಾಯ ಮೂಲವಾದರೂ ಏನು? ಅವರು ಕೋಟಿಗಟ್ಟಲೇ ಹಣವನ್ನು ಹೇಗೆ ಸಂಪಾದನೆ ಮಾಡುತ್ತಾರೆ? ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ ಹಲವು ಅಭ್ಯರ್ಥಿಗಳ ಆಸ್ತಿ ಆದಾಯವನ್ನೂ ಮೀರಿ ಹೆಚ್ಚಳವಾಗಿದೆ, ಇದು ಹೇಗೆ ಸಾಧ್ಯ? ಇಂತಹ ಪ್ರಶ್ನೆಗಳ ಆಳಕ್ಕಿದು ಉತ್ತರ ಹುಡುಕುವ ಪ್ರಯತ್ನವನ್ನು ‘ಸಮಾಚಾರ’ ಮಾಡಿದೆ.

ರಾಜಕಾರಣಿಗಳು ಹೇಗೆ ಶ್ರೀಮಂತರಾಗುತ್ತಾರೆ?: ಆಸ್ತಿ ಘೋಷಣೆ ಮತ್ತು ತಳಮಟ್ಟದ ಸತ್ಯಗಳು

ಶ್ರೀಮಂತ ರಾಜಕಾರಣಿಗಳು:

ಬೀದರ್‌ ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾದ ಅಶೋಕ ಖೇಣಿ 198 ಕೋಟಿ ರೂ. ಆಸ್ತಿಯ ಒಡೆಯರಾಗಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಘೋಷಿಸಿದ್ದ ಆಸ್ತಿಗೆ ಹೋಲಿಕೆ ಮಾಡಿದರೆ ಅವರ ಆಸ್ತಿಯಲ್ಲಿ 42.77 ರೂ. ಕೋಟಿಯಷ್ಟು ಆಸ್ತಿ ಏರಿಕೆಯಾಗಿದೆ.

ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಟಿ.ಬಿ.ನಾಗರಾಜ್ ಬರೋಬ್ಬರಿ 1 ಸಾವಿರ ಕೋಟಿ ಆಸ್ತಿಯ ಒಡೆಯರಾಗಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಬೈರತಿ ಬಸವರಾಜ್ ಅವರ ಚರಾಸ್ತಿ ಮೌಲ್ಯ - ಒಟ್ಟು 33,91,19,772 ರೂಪಾಯಿ. ಸ್ಥಿರಾಸ್ತಿ ಮೌಲ್ಯ - ಒಟ್ಟು 56, 99,82,215 ರೂಪಾಯಿ. ಆನಂದ್ ಸಿಂಗ್ ಬಳಿ ಇರುವ ಒಟ್ಟು ಆಸ್ತಿಯು 71 ಕೋಟಿ. 25.91 ಕೋಟಿ ಚರಾಸ್ತಿ ಇದ್ದರೆ, 45.44 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ.

ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಘೋಷಿತರಾಗಿರುವ ಶಿಕಾರಿಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಚರಾಸ್ತಿ ವಿವರ 4 .85 ಕೋಟಿ ರೂಪಾಯಿ. ಇನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಒಟ್ಟಾರೆ 13 ಕೋಟಿಗಿಂತಲೂ ಅಧಿಕ (13,61,24,398ರೂ) ಮೊತ್ತದ ಆಸ್ತಿ ಹೊಂದುವ ಮೂಲಕ ದೇಶದ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.

ಕೆ.ಪಿ.ಸಿ.ಸಿ ಅಧ್ಯಕ್ಷ ಪರಮೇಶ್ವರ ಅವರ ಕುಟುಂಬದ ಚರ ಮತ್ತು ಸ್ತಿರ ಆಸ್ತಿಯು ಐದು ವರ್ಷಗಳಲ್ಲಿ ದುಪ್ಪಟ್ಟಾಗಿದೆ. 2013ರಲ್ಲಿ 6.61ಕೋಟಿ ಚರ ಆಸ್ತಿ ಘೋಷಣೆ ಮಾಡಿಕೊಂಡಿದ್ದ ಪರಮೇಶ್ವರ ಕುಟುಂಬದ ಆಸ್ತಿಯು 2018ರಲ್ಲಿ 18 ಕೋಟಿಯಾಗಿದೆ ಈ ಮೂಲಕ ಅವರ ಆಸ್ತಿಯು ದುಪ್ಪಟ್ಟಾಗಿದೆ.

ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಆಂಜನೇಯ ಒಟ್ಟು ಆಸ್ತಿ 6.98ಕೋಟಿ. 2013ರಲ್ಲಿ ಅವರು ಘೊಷಿಸಿಕೊಂಡಿದ್ದ ಆಸ್ತಿ 3.39ಕೋಟಿ ರೂ. ಅಂದರೆ ದುಪ್ಪಟ್ಟು ಆಸ್ತಿ ಘೊಷಣೆಯನ್ನು ಅವರು ಮಾಡಿದ್ದಾರೆ. ಇನ್ನು ಕಂದಾಯ ಸಚಿವ ಮತ್ತು ಹಿರಿಯ ರಾಜಕಾರಣಿ ಕಾಗೋಡು ತಮ್ಮಪ್ಪ ಅವರು 3.21ಕೊಟಿ ರೂ ಆಸ್ತಿಯನ್ನು ಹೊಂದಿದ್ದಾರೆ. ಆದರೆ ಕಳೆದ ಬಾರಿಯ ನಾಮಪತ್ರದಲ್ಲಿ 1.34ಕೋಟಿ ರೂ ಆಸ್ತಿಯನ್ನು ಘೊಷಣೆ ಮಾಡಿದ್ದರು.

ಡಿ.ಕೆ.ಶಿವಕುಮಾರ್ ಕುಟುಂಬದ ಘೋಷಿತ ಆಸ್ತಿ ಪಾಸ್ತಿ 2018ರಲ್ಲಿ ಸ್ಥಿರಾಸ್ತಿ ಹಾಗೂ ಚರಾಸ್ತಿ 840. 14 ಕೋಟಿ ಇದ್ದರೆ, 2013ರಲ್ಲಿ ಸ್ಥಿರಾಸ್ತಿ ಹಾಗೂ ಚರಾಸ್ತಿ 251, 50, 96, 329 ಕೋಟಿ ರೂಗಳಷ್ಟಿತ್ತು.

ಹೀಗೆ ಎಷ್ಟೋ ರಾಜಕಾರಣಿಗಳು ಕೇವಲ 5 ವರ್ಷಗಳಲ್ಲಿ ತಮ್ಮ ಆಸ್ತಿಯನ್ನು ದುಪ್ಪಟ್ಟು ಅಥವಾ ಅದಕ್ಕಿಂತ ಹೆಚ್ಚು ಮಾಡಿಕೊಂಡಿರುವುದು ಅವರೇ ಸಲ್ಲಿಸಿರುವ ಅಫಿಡವಿಟ್‌ಗಳು ಮಾಹಿತಿ ನೀಡುತ್ತಿವೆ.

ಹಾಗೆ ನೋಡಿದರೆ, ರಾಜಕಾರಣಿಗಳ ಪ್ರಮುಖ ಆದಾಯ ಮೂಲ ಜನರ ಹಣದಿಂದ ಪಡೆಯುವ ಸಂಬಳ ಮತ್ತು ಭತ್ಯೆಗಳು. ಅದಾದರೂ ಎಷ್ಟಿದೆ ಎಂದು ನೋಡಿದರೆ ಅಚ್ಚರಿ ಮೂಡಿಸುತ್ತದೆ.

ಶಾಸಕರು, ಸಚಿವರು ಸಂಬಳ ಮತ್ತು ಭತ್ಯಗಳು:

ವಿವಿಧ ರಾಜ್ಯಗಳ ಜನಪ್ರತಿನಿಧಿಗಳು ಪಡೆಯುವ ಸಂಬಳದ ಪಟ್ಟಿ
ವಿವಿಧ ರಾಜ್ಯಗಳ ಜನಪ್ರತಿನಿಧಿಗಳು ಪಡೆಯುವ ಸಂಬಳದ ಪಟ್ಟಿ

2015ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರಿಗೆ ಭರ್ಜರಿ ಗಿಫ್ಚ್ ನೀಡಿದ್ದರು. ಕ್ಷೇತ್ರ ಪ್ರಯಾಣ ಭತ್ಯೆ 15 ಸಾವಿರದಿಂದ 40 ಸಾವಿರಕ್ಕೆ ಹಾಗೂ ದೂರವಾಣಿ ಭತ್ಯೆ 15 ಸಾವಿರದಿಂದ 20 ಸಾವಿರಕ್ಕೆ ಏರಿಕೆ ಮಾಡಿದ್ದರು.

ಅದಕ್ಕೂ ಮೊದಲು ಇತರೆ ಭತ್ಯೆಗಳು ಸೇರಿದಂತೆ 75 ಸಾವಿರ ರುಪಾಯಿ ಸಂಬಳ ಪಡೆಯುತ್ತಿದ್ದ ಶಾಸಕರು ಮೂರು ವರ್ಷಗಳಿಂದ 1.25 ಲಕ್ಷ ವೇತನವನ್ನು ಪಡೆಯುತ್ತಿದ್ದಾರೆ. ಶಾಸಕರ ಪ್ರಯಾಣ ಭತ್ಯೆ ಪ್ರತಿ ಕಿ. ಮೀಗೆ 25 ರುಪಾಯಿ, ಪೆಟ್ರೋಲ್ ಮೀತಿಯನ್ನು 750ರಿಂದ 1000 ಲೀಟರ್ ಗೆ ಹೆಚ್ಚಿಸಲಾಗಿದೆ. ಇನ್ನು ಶಾಸಕರು ಭಾಗಿಯಾಗುವ ಪ್ರತಿ ಸಭೆಗೆ 1500 ರುಪಾಯಿ ಭತ್ಯೆ ಪಡೆಯುತ್ತಿದ್ದಾರೆ.

ಸಚಿವರ ಮನೆ ಬಾಡಿಗೆ 40 ಸಾವಿರದಿಂದ 80 ಸಾವಿರಕ್ಕೆ ಹಾಗೂ ಕ್ಯಾಬಿನೆಟ್ ಸಚಿವರ ವೇತನವನ್ನು 25 ಸಾವಿರದಿಂದ 40 ಸಾವಿರಕ್ಕೆ, ರಾಜ್ಯ ಸಚಿವರ ವೇತನ 15 ಸಾವಿರದಿಂದ 35 ಸಾವಿರಕ್ಕೆ ಏರಿಕೆ ಮಾಡಲಾಗಿತ್ತು. ಅಲ್ಲದೆ ಮನೆ ನಿರ್ವಹಣಾ ವೆಚ್ಚವನ್ನು 10 ಸಾವಿರದಿಂದ 20 ಸಾವಿರಕ್ಕೆ ಹೆಚ್ಚಿಸಲಾಗಿತ್ತು.

ಸಂಬಳ ಹಾಗೂ ಭತ್ಯೆ ವಿವರಗಳು ಹೀಗಿರುವಾಗ, ರಾಜಕಾರಣಿಗಳ ಆದಾಯ ಮೂಲ ಇದಲ್ಲ ಎಂಬುದನ್ನು ಸ್ಪಷ್ಟವಾಗಿ ಕಾಣಿಸುತ್ತಿದೆ. ಅಂದರೆ, ನಮ್ಮ ಜನಪ್ರತಿನಿಧಿಗಳು ಜನಸೇವೆಯ ಜತೆಗೆ ಇತರೆ ಹಣ ಗಳಿಕೆ ಮಾರ್ಗಗಳನ್ನು ಕಂಡುಕೊಳ್ಳದೆ ಇಷ್ಟು ಪ್ರಮಾಣ ಆಸ್ತಿ ಗಳಿಕೆ ಸಾಧ್ಯವೆ ಇಲ್ಲ ಎಂಬುದು ಎಂತಹ ದಡ್ಡರಿಗೂ ಅರ್ಥವಾಗುತ್ತದೆ.

ರಾಜಕಾರಣಿಗಳ ಆಸ್ತಿ ದುಪ್ಪಟ್ಟು ಆಗಬಾರದು ಎಂದೇನಿಲ್ಲ .ಆದರೆ ಅದು ನ್ಯಾಯಯುತವಾಗಿ ಕಾನೂನಿನ ಚೌಕಟ್ಟಿನಲ್ಲಿ ಆಗಿರಬೇಕು. ಯಾರು ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ ಎಂದರೆ ಅವರೆಲ್ಲರೂ ಕಾನೂನಿನ ಚೌಕಟ್ಟಿನಲ್ಲಿಯೇ ಸಂಪಾದನೆ ಮಾಡಿಕೊಂಡಿರಬೇಕು ಎಂದು ಭಾವಿಸಿದ್ದೇನೆ. ಒಂದು ವೇಳೆ ಕಾನೂನು ವಿರುದ್ಧವಾಗಿ ಯಾವುದೇ ರಾಜಕಾರಣಿ ಆಸ್ತಿ ಮಾಡಿದ್ದರೆ ಅವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸುವ ಅವಕಾಶ ಇದೆ. ಜನರು ಆ ಅಭ್ಯರ್ಥಿಯನ್ನು ಮತ್ತೊಮ್ಮೆ ಗೆಲ್ಲದಂತೆಯೂ ಮಾಡುವ ಶಕ್ತಿ ಹೊಂದಿದ್ದಾರೆ.
ವಿ. ಎಸ್‌. ಉಗ್ರಪ್ಪ, ಕಾಂಗ್ರೆಸ್‌ ವಕ್ತಾರ

“ಒಂದು ವೇಳೆ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ನೀಡಿ, ಕಡಿಮೆ ಆಸ್ತಿಯನ್ನು ಘೋಷಣೆ ಮಾಡಿಕೊಂಡು ಅದು ಸಾಕ್ಷಿ ಸಮೇತ ಸಾಭೀತಾದರೆ ಅದು ಕಾನೂನಿನ ಪ್ರಕಾರ ಅಪರಾಧ. ಜನತಾ ಪ್ರಾತಿನಿಧ್ಯ ಕಾಯಿದೆ 125(ಅ) ಪ್ರಕಾರ, ಸುಳ್ಳು ಮಾಹಿತಿ ನೀಡಿ ಆಸ್ತಿ ಘೊಷಣೆ ಮಾಡಿಕೊಂಡಿದ್ದರೆ ಅದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಬಹುದು,” ಎನ್ನುತ್ತಾರೆ ವಿ. ಎಸ್. ಉಗ್ರಪ್ಪ.

ರಾಜಕಾರಣಿಗಳು ಹೇಗೆ ಶ್ರೀಮಂತರಾಗುತ್ತಾರೆ?: ಆಸ್ತಿ ಘೋಷಣೆ ಮತ್ತು ತಳಮಟ್ಟದ ಸತ್ಯಗಳು

ಇನ್ನು ರಾಜಕಾರಣಿಗಳ ಆಸ್ತಿ ಘೊಷಣೆಯಾಗುತ್ತದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಗಮನ ಸೆಳೆದ, ಯೋಚಿಸಬೇಕಾದ ಪೋಸ್ಟ್‌ ಇಲ್ಲಿದೆ.

“ರಾಜ್ಯದಲ್ಲಿ ಕಳೆದ 5 ವರ್ಷಗಳಿಂದ 3 ಸಾವಿರಕ್ಕೂ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ನಮ್ಮ ಮಾಜಿ ಮುಖ್ಯಮಂತ್ರಿ, ಮಣ್ಣಿನ ಮಗನ ಮಗ ಮಾನ್ಯ ಎಚ್ ಡಿ ಕುಮಾರಸ್ವಾಮಿಯವರು ಸಮಾಜ ಸೇವೆ ಮತ್ತು ವ್ಯವಸಾಯದಿಂದ 2013 ರಲ್ಲಿ 16 ಕೋಟಿ ರೂಪಾಯಿ ಇದ್ದ ಆಸ್ತಿಯನ್ನು 43 ಕೋಟಿ ರೂಪಾಯಿಗೆ ಹೆಚ್ಚಿಸಿಕೊಂಡಿದ್ದಾರೆ. ಇದರರ್ಥ ಕುಮಾರಸ್ವಾಮಿಯವರು ವ್ಯವಸಾಯದಿಂದ ಕಳೆದ ಐದು ವರ್ಷಗಳಲ್ಲಿ 27 ಕೋಟಿ ರೂಪಾಯಿ ಸಂಪಾದಿಸಿದ್ದಾರೆ. ಇಂತಹ ಒಬ್ಬ ಪ್ರಗತಿಪರ ರೈತರು ಏಕೆ ರೈತರ ಆತ್ಮಹತ್ಯೆ ನಿಲ್ಲಿಸಲು ರಾಜ್ಯದ ರೈತರಿಗೆ ತಮ್ಮ ಇಸ್ರೇಲ್ ಪದ್ಧತಿ ವ್ಯವಸಾಯವನ್ನು ಹೇಳಿಕೊಡಬಾರದು. ಕೋಟ್ಯಾಂತರ ರೂಪಾಯಿ ಲಾಭ ಬರುವ ಯಾವ ಬೆಳೆಯನ್ನು ಕುಮಾರಸ್ವಾಮಿಯವರು ತಮ್ಮ ಜಮೀನಿನಲ್ಲಿ ಬೆಳೆಯುತ್ತಿದ್ದಾರೆ. ಏಕೆ ಇಂತಹ ಬುದ್ಧಿವಂತರು ರಾಜ್ಯದ ಜನರಿಗೆ ತಮ್ಮ ಜ್ಞಾನವನ್ನು ಧಾರೆಯೆರೆಯುತ್ತಿಲ್ಲ. ಜೆಡಿಎಸ್ ಭದ್ರ ಕೋಟೆಯಾದ ಮಂಡ್ಯದಲ್ಲಿ ನೂರಾರು ರೈತರ ಆತ್ಮಹತ್ಯೆ ಆಗಿದ್ದು ಕುಮಾರಸ್ವಾಮಿಯವರ ಗಮನಕ್ಕೆ ಬಂದಿಲ್ಲವೇ. ಒಟ್ಟಿನಲ್ಲಿ ಕುಮಾರಸ್ವಾಮಿಯವರು ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ವೈಜ್ಞಾನಿಕ ವ್ಯವಸಾಯ ಪದ್ಧತಿಯನ್ನು ಅನುಸರಿಸಿ ರಾಜ್ಯದ ರೈತರಿಗೆ ಅದನ್ನು ಕಲಿಸದೆ ಇರುವುದು ಅವರ ಸ್ವಾರ್ಥ ಮನೋಭಾವವನ್ನು ತೋರಿಸುತ್ತದೆ. ಇನ್ನೂ ಕುಮಾರಸ್ವಾಮಿಯವರ ಒಟ್ಟು ಆಸ್ತಿ 167 ಕೋಟಿ ರೂಪಾಯಿ,”

ಹೀಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ರಾಜಕಾರಣಿಯೊಬ್ಬರ ಆಸ್ತಿ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಪಿಇಎಸ್‌ ಕಾಲೇಜಿನ ಉಪನ್ಯಾಸಕ ನಾಗೇಗೌಡ ಕೀಲಾರ ಶಿವಲಿಂಗಯ್ಯ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದು ಕೇವಲ ನಾಗೇಗೌಡ ಕೀಲಾರ ಶಿವಲಿಂಗಯ್ಯ ಅವರ ಪ್ರಶ್ನೆಯಲ್ಲ, ಬದಲಾಗಿ ರಾಜ್ಯದ ಬಹುತೇಕ ಜನರು ಇದೇ ಪ್ರಶ್ನೆಯನ್ನು ಕೇವಲ ಕುಮಾರಸ್ವಾಮಿಗೆ ಅಷ್ಟೇ ಅಲ್ಲ, ಉಳಿದ ರಾಜಕಾರಣಿಗಳ ವಿಷಯದಲ್ಲೂ ಕೇಳುತ್ತಿದ್ದಾರೆ. ತಮ್ಮ ತಮ್ಮ ಮನೆಯಲ್ಲಿ, ಪಂಚಾಯತಿ ಕಟ್ಟೆಯಲ್ಲಿ ಇಂತಹುದೇ ಮಾತಿನ ರೂಪಗಳು ಕಾಣಿಸುತ್ತಿವೆ .

“ಇವತ್ತಿಗೆ ರಾಜಕಾರಣಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಎಲ್ಲರೂ ಹಾತೊರೆಯುತ್ತಿದ್ದಾರೆ. ಜನಸೇವೆಗಾಗಿ ಇದ್ದ ಕ್ಷೇತ್ರ ಇವತ್ತು ಹಣ ಮಾಡುವ ಉದ್ಯಮವಾಗಿ ಬೆಳೆದು ನಿಂತಿದೆ. ಹೀಗಾಗಿ ರಾಜಕಾರಣಿಗಳ ಆಸ್ತಿಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇನ್ನು ಕೆಲವರು ತಮ್ಮಲ್ಲಿ ಕೋಟಿಗಟ್ಟಲೇ ಆಸ್ತಿ ಇದ್ದರೂ, ಅದನ್ನು ಅಧಿಕೃತವಾಗಿ ಬಹಿರಂಗಪಡಿಸದೇ ಗುಪ್ತವಾಗಿಯೂ ಇಟ್ಟಿದ್ದಾರೆ. ಅಲ್ಲದೇ ಜನ ಸೇವೆಗಾಗಿ ಬಳಕೆ ಮಾಡಬೇಕಾದ ಜನಸಾಮಾನ್ಯರ ತೆರಿಗೆ ದುಡ್ಡು ಹೆಚ್ಚಾಗಿ ರಾಜಕಾರಣಿಗಳ ಜೇಬು ತುಂಬಿತ್ತಿದೆ,” ಎನ್ನುತ್ತಾರೆ ಹಿರಿಯ ರಾಜಕೀಯ ವಿಶ್ಲೇಷಕರೊಬ್ಬರು.

“ನಾನು ರಾಜಕಾರಣಿಗಳನ್ನು ತುಂಬ ಹತ್ತಿರದಿಂದ ನೊಡಿದ್ದೇನೆ. ಅವರು ಜನರ ಮುಂದೆ ಸಮಾಜಕ್ಕೆ ಕಳಕಳಿ ಇರುವ ಹಾಗೆ ನಟಿಸುತ್ತಾರೆ. ಆದರೆ ನಿಜಕ್ಕೂ ಅವರಿಗೆ ಬೇಕಿರುವದು ಜನಸೇವೆಯಲ್ಲ. ಅಧಿಕಾರ ಮತ್ತು ಹಣ. ಇವತ್ತಿಗೆ ಅಧಿಕಾರ ಹಿಡಿಯಲು ಎಲ್ಲ ವಾಮಮಾರ್ಗಗಳನ್ನು ತುಳಿಯುತ್ತಿದ್ದಾರೆ. ಜನರ ಮುಂದೆ ಮುಖವಾಡ ಹಾಕಿದ ಅವರ ನಿಜಮುಖವನ್ನು ನೋಡಿದರೆ ಹೇಸಿಗೆ ಬರುತ್ತದೆ. ಹಣ ಮಾಡಲು ಸುಲಭ ಮಾರ್ಗವೇ ರಾಜಕಾರಣ,” ಎನ್ನುತ್ತಾರೆ ರಾಜಕಾರಣಿಗಳನ್ನು ಹತ್ತಿರದಿಂದ ನೋಡಿ ಬೇಸತ್ತ ವ್ಯಕ್ತಿಯೊಬ್ಬರು.

ರಾಜಕಾರಣಿಗಳು ಹೇಗೆ ಶ್ರೀಮಂತರಾಗುತ್ತಾರೆ?: ಆಸ್ತಿ ಘೋಷಣೆ ಮತ್ತು ತಳಮಟ್ಟದ ಸತ್ಯಗಳು

ಇಷ್ಟೆಲ್ಲಾ ಹೇಳಿದರೂ ರಾಜಕಾರಣ ಎಂಬುದು ಹೇಗೆ ಹಣ ಗಳಿಕೆ ಉದ್ಯಮವಾಗಿ ಎಂಬುದಕ್ಕೆ ಉತ್ತರ ಸಿಗುವುದಿಲ್ಲ.

“ಪ್ರತಿಯೊಬ್ಬ ಶಾಸಕರಿಗೆ ತಮ್ಮ ಕ್ಷೇತ್ರದ ಅಭಿವೃದ್ಧಿ ರೂಪದಲ್ಲಿ ಐದು ವರ್ಷಗಳಿಗೆ ಒಟ್ಟು 200 ಕೋಟಿ ರೂಪಾಯಿ ಅನುದಾನ ಸಿಗುತ್ತದೆ. ಇದರಲ್ಲಿ ಯಾವುದೇ ಹೆಚ್ಚಿನ ಬೇಡಿಕೆ ಇಡದಿದ್ದರೆ ಕನಿಷ್ಟ ಶೇ. 20ರಷ್ಟನ್ನು ಗುತ್ತಿಗೆದಾರರು ನೀಡುತ್ತಾರೆ. ಅಂದರೆ 40 ಕೋಟಿ ರೂಪಾಯಿ. ಚುನಾವಣೆಗೆ ಖರ್ಚಾಗುವುದು 20 ಕೋಟಿ, ಐದು ವರ್ಷಕ್ಕೆ ಆದಾಯ 40 ಕೋಟಿ. ಅಂದರೆ ಹಾಕಿದ ಹಣ ಡಬಲ್‌ ಆಗುತ್ತದೆ. ಇದನ್ನು ಬಿಟ್ಟೂ ಇತರೆ ಆದಾಯ ಮೂಲಗಳು, ಉದ್ಯಮಗಳಿಂದ ಬಹುತೇಕ ರಾಜಕಾರಣಿಗಳು ಹಣ ಗಳಿಸುತ್ತಾರೆ,’’ ಎನ್ನುತ್ತವೆ ವಿ‍ಧಾನಸೌಧದ ಉನ್ನತ ಮೂಲಗಳು.

ಇದು ರಾಜಕಾರಣಿಗಳ ಆಸ್ತಿ ಘೋಷಣೆಗೂ, ವಾಸ್ತವದಲ್ಲಿ ಹಣ ಗಳಿಕೆಗೂ ಇರುವ ಸಂಬಂಧ. ತೀರಾ ರಹಸ್ಯವೂ ಅಲ್ಲ. ಇಷ್ಟೆಲ್ಲಾ ಅರ್ಥವಾದರೂ ನಮ್ಮ ಜನ ರಾಜಕಾರಣಿಗಳನ್ನು ನಂಬುತ್ತಾರೆ, ಮತ ಚಲಾವಣೆ ಮಾಡುವ ಮೂಲಕ ಬದಲಾವಣೆಯ ಕನಸು ಕಾಣುತ್ತಾರೆ. ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನೂ ಜೀವಂತವಾಗಿಟ್ಟಿದ್ದಾರೆ, ಅಷ್ಟೆ.