ಚಿತ್ರಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್‌
COVER STORY

ಅವರು ಕೊಟ್ಟ ಮಾತು ಮರೆತರು: ಅಕ್ರಮ ಗಣಿ ಧಣಿಗಳಿಗೆ ರತ್ನಗಂಬಳಿ ಹಾಸಿದರು!

ಗಣಿಧಣಿಗಳ ಅಟ್ಟಹಾಸದ ಎರಡನೇ ಇನ್ನಿಂಗ್ಸ್ ಶುರುವಾಗಿದೆ. ಅರ್ಥಾತ್ ಬಿಜೆಪಿ ತನ್ನ ಹಳೆಯ ರಾಜಕೀಯದಾಟವನ್ನು ಮತ್ತೆ ಆರಂಭಿಸಿದೆ. 

ಮಂಟೇಸ್ವಾಮಿ ಜನಪದ ಕಾವ್ಯದಲ್ಲಿ ಒಂದು ಪ್ರಸಂಗ ಬರುತ್ತದೆ. ಧರೆಗೆ ದೊಡ್ಡವರಾದ ಮಂಟೇಸ್ವಾಮಿಗಳು ನೆಲ, ಜಲಗಳನ್ನು ಆಕ್ರಮಿಸಿಕೊಂಡು ಜನರನ್ನು ಹಿಂಸಿಸುತ್ತಾ ಮೆರೆಯುತ್ತಿದ್ದ ಪಾಂಚಾಳ ದೊರೆಗಳನ್ನು ಸೋಲಿಸಿ ಅವರು ಬಚ್ಚಿಟ್ಟುಕೊಂಡಿರುವ ಕಬ್ಬಿಣ ಮತ್ತಿತರ ಸಂಪತ್ತನ್ನು ತರಲು ತಮ್ಮ ಶಿಸುಮಗ ಕೆಂಪಣ್ಣನನ್ನು ಕಳಿಸುತ್ತಾರೆ. ಆದರೆ ತನ್ನನ್ನು ನಿಂಧಿಸಿ ಅಹಂಕಾರ ಮೆರೆದ ಈ ಎಲ್ಲರನ್ನೂ ಸದೆ ಬಡಿದ ಕೆಂಪಣ್ಣ ಅವರು ಬಚ್ಚಿಟ್ಟುಕೊಂಡಿದ್ದ ಕಬ್ಬಿಣವನ್ನು ಜನರಿಗೆ ಹಂಚುತ್ತಾನೆ.

ಇದನ್ನು ಏಕೆ ಈಗ ನೆನಪಿಸಿಕೊಳ್ಳಬೇಕಾಯಿತು ಎಂದರೆ ಬಳ್ಳಾರಿಯಲ್ಲಿ ರೆಡ್ಡಿ ಸಹೋದರರು ನಡೆಸಿರುವ ಅಕ್ರಮ ಗಣಿಗಾರಿಕೆಯೂ ಥೇಟ್ ಮಂಟೇಸ್ವಾಮಿ ಕಾವ್ಯದಲ್ಲಿ ಬರುವಂಥ ಸನ್ನಿವೇಶವನ್ನೇ ಹೋಲುತ್ತದೆ. ಆದರೆ ಇಲ್ಲಿ ಮಂಟೇಸ್ವಾಮಿ ಕಾವ್ಯದಲ್ಲಿ ಅಟ್ಟಹಾಸ ಮೆರೆದ ಪಾಂಚಾಳ ದೊರೆಗಳ ಅಟ್ಟಹಾಸವನ್ನು ಮಟ್ಟ ಹಾಕಲಾಗುತ್ತದೆ, ಅವರು ಸೋತು ಕೆಂಪಣ್ಣನಿಗೆ ಶರಣಾಗಿ ತಮ್ಮದೆಲ್ಲವನ್ನೂ ಅವನಿಗೆ ಅರ್ಪಿಸಿಕೊಳ್ಳುತ್ತಾರೆ.

ಆದರೆ ಪ್ರಜಾಪ್ರಭುತ್ವ, ಕಾನೂನು, ಸಂವಿಧಾನ ಇತ್ಯಾದಿಯಾಗಿ ನಾವು ಈಗ ಏನೇನು ಹೇಳುತ್ತಿದ್ದೇವೋ ಅವುಗಳಿದ್ದೂ ಈ ಅಕ್ರಮ ಗಣಿಗಾರಿಕೆ ಆರೋಪಿಗಳಿಗೆ ಶಿಕ್ಷೆ ಆಗಲೇ ಇಲ್ಲ. ದೇಶದ ಉಚ್ಚ ನ್ಯಾಯಾಲಯ ಸುಪ್ರೀಂಕೋರ್ಟ್, ಸಿಇಸಿ, ಸಿಬಿಐ, ಎಸ್ಐಟಿ ಇತ್ಯಾದಿಗಳಲ್ಲಿ ತನಿಖೆ ನಡೆದರೂ ಜನಾರ್ದನ ರೆಡ್ಡಿ ಮೂರು ವರ್ಷ ವಿಚಾರಣೆಗಾಗಿ ಜೈಲಿನಲ್ಲಿದ್ದರೂ, ಡಜನ್ ಗಟ್ಟಲೆ ಮಂತ್ರಿಗಳು, ಶಾಸಕರು, ಅಧಿಕಾರಿಗಳು ಆರೋಪಿಗಳಾಗಿದ್ದರೂ ಯಾರಿಗೂ ಶಿಕ್ಷೆಯಾಗಿಲ್ಲ. ತನಿಖೆ ತಾರ್ಕಿಕ ಅಂತ್ಯ ಕಂಡಿಲ್ಲ.

ಬದಲಾಗಿ ಗಣಿಧಣಿಗಳ ಅಟ್ಟಹಾಸದ ಎರಡನೇ ಇನ್ನಿಂಗ್ಸ್ ಶುರುವಾಗಿದೆ. ಅರ್ಥಾತ್ ಬಿಜೆಪಿ ತನ್ನ ಹಳೆಯ ರಾಜಕೀಯದಾಟವನ್ನು ಮತ್ತೆ ಆರಂಭಿಸಿದೆ. ಗಣಿ ರಾಜಕಾರಣಿಗಳ ಆಸೆಗಳಿಗೆ ಜೈ ಅಂದಿದೆ. ಜನಾರ್ದನ ರೆಡ್ಡಿ ನೇತೃತ್ವದಲ್ಲಿ ಶ್ರೀರಾಮುಲು, ಸೋಮಶೇಖರ ರೆಡ್ಡಿ, ಸುರೇಶ್ ಬಾಬು ಸೇರಿದಂತೆ ಬಹುತೇಕರಿಗೆ ರಾಜಕೀಯ ವೇದಿಕೆ ಕಲ್ಪಿಸಿದೆ.

ಜನಾರ್ಧನ ರೆಡ್ಡಿ ಮತ್ತು ಬಿ.ಎಸ್‌.ಯಡಿಯೂಪ್ಪ, ಚಿತ್ರಕೃಪೆ: ನ್ಯೂಸ್ 18
ಜನಾರ್ಧನ ರೆಡ್ಡಿ ಮತ್ತು ಬಿ.ಎಸ್‌.ಯಡಿಯೂಪ್ಪ, ಚಿತ್ರಕೃಪೆ: ನ್ಯೂಸ್ 18

ಆದರೆ ಇನ್ನೂ ಆಘಾತದ ವಿಷಯವೆಂದರೆ ಬಿಜೆಪಿ, ಜೆಡಿಎಸ್ ಗಳನ್ನೂ ಮೀರಿಸುವಂತೆ ಕಾಂಗ್ರೆಸ್ ಕೂಡ ಗಣಿ ಧಣಿಗಳಗೆ ಅವಕಾಶ ನೀಡಿರುವುದು. ಅಕ್ರಮ ಗಣಿಗಾರಿಕೆ ವಿರೋಧಿಸಿ ಬಳ್ಳಾರಿಗೆ ಪಾದ ಯಾತ್ರೆ ಮಾಡಿ ಐದು ವರ್ಷ ಅಧಿಕಾರ ಅನುಭವಿಸಿದ ಕಾಂಗ್ರೆಸ್, ಗಣಿ ಆರೋಪಿಗಳಿಗೆ ಭಾರಿ ಪ್ರಮಾಣದಲ್ಲಿ ಮಣೆ ಹಾಕಿ ರಾಜಕೀಯದಲ್ಲೂ ಅಕ್ರಮ ಸಕ್ರಮ ಇದೆ ಎಂಬ ಸಂದೇಶವನ್ನು ನೀಡಿದಂತಿದೆ.

2004ರಿಂದ 2010ರ ವರೆಗೆ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರುಗಳಲ್ಲಿ ನಡೆದ ಅಕ್ರಮ ಗಣಿಗಾರಿಕೆಯಿಂದ ನಡೆದ ವ್ಯವಹಾರವೇ ಬರೋಬ್ಬರಿ 1 ಲಕ್ಷ ಕೋಟಿಗೂ ಮೀರಿದ್ದು. ಸಾಗಿಸಿದ್ದು ಲಕ್ಷ ಲಕ್ಷ ಟನ್ ಗೂ ಹೆಚ್ಚು ಅಕ್ರಮ ಅದಿರು, ಕೇಂದ್ರ ಮೀಸಲು ಅರಣ್ಯವೂ ಸೇರಿದಂತೆ ಸುಮಾರು ನಾಲ್ಕು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆದಿತ್ತು.

ಸರ್ಕಾರಕ್ಕೇ ಸುಮಾರು 16 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನೀಡಿದ ಸುಮಾರು 25 ಸಾವಿರ ಪುಟಗಳ ವರದಿಯಲ್ಲಿ ಹೇಳಿದ್ದರು. ಇದನ್ನೇ ಮುಖ್ಯ ಗುರಾಣಿ ಮಾಡಿಕೊಂಡ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ, ಅಕ್ರಮ ಗಣಿಗಾರಿಕೆ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿತ್ತು.

ಅವರು ಕೊಟ್ಟ ಮಾತು ಮರೆತರು: ಅಕ್ರಮ ಗಣಿ ಧಣಿಗಳಿಗೆ ರತ್ನಗಂಬಳಿ ಹಾಸಿದರು!

ಅಕ್ರಮ ಗಣಿಗಾರಿಕೆಯಲ್ಲಿ ದೊಡ್ಡ ಮೊತ್ತದ ಲಾಭಗಳಿಸಿದ್ದು ಜನಾರ್ಧನ ರೆಡ್ಡಿ. ಓಬಳಾಪುರಂ ಮೈನಿಂಗ್ ಕಂಪನಿ ಇತ್ಯಾದಿಗಳ ಮೂಲಕ ಭಾರಿ ಪ್ರಮಾಣದಲ್ಲಿ ಅರಣ್ಯ ಕಾಯ್ದೆಗಳು ಹಾಗೂ ಗಣಿ ಮತ್ತು ಭೂ ವಿಜ್ಞಾನ ಶರತ್ತುಗಳೆಲ್ಲವೂ ಗಾಳಿಗೆ ತೂರಿ ಮನಸೋ ಇಚ್ಛೆ ಗಣಿಗಾರಿಕೆ ನಡೆಸಲಾಗಿತ್ತು. ಸಿಬಿಐ ರೆಡ್ಡಿಯನ್ನು ಮೂರೂವರೆ ವರ್ಷ ಹೈದರಾಬಾದ್ ನ ಚಂಚಲಗೂಡ್ ಜೈಲಿನಲ್ಲಿಟ್ಟು ವಿಚಾರಣೆ ನಡೆಸಿತ್ತು. ಆ ನಂತರ ಅವರು ಬೇಲ್ ಗಾಗಿ ನ್ಯಾಯಮೂರ್ತಿಗೆ ಲಂಚ ನೀಡಲು ಹೋಗಿ ತಗುಲಿಕೊಂಡಿದ್ದು, ಆ ನ್ಯಾಯಾಧೀಶರೂ ಜೈಲು ಪಾಲಾಗಿದ್ದನ್ನೂ ದೇಶದ ಜನರು ಕಂಡು ಹೌಹಾರಿದ್ದರು.

ಕಾಲ ಸರಿದಿದೆ. ಅವರು ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿ ರಾಜ್ಯಕ್ಕೆ ಮರಳಿದರು. ರೆಡ್ಡಿ ಬಂಧನದಿಂದ ತೆರೆಮರೆಗೆ ಸರಿದ್ದ ಗಣಿಗಾರಿಕೆ ರಾಜಕೀಯ ಮತ್ತೆ ಈಗ ಚಿಗುರಿಕೊಂಡಿದೆ. ರೆಡ್ಡಿ ಮತ್ತೆ ತಮ್ಮ ಬಳ್ಳಾರಿ ರಿಪಬ್ಲಿಕ್ ನಿರ್ಮಾಣ ಮಾಡಿ ಮತ್ತೆ ರಾಜಕೀಯ ಅಧಿಕಾರ ಗಳಿಸುವ ತಮ್ಮ ಗುಪ್ತ ಆಸೆಗಳಿಗೆ ಗೊಬ್ಬರ ನೀರು ಎರೆದಿದ್ದಾರೆ.

ಜನಾರ್ದನರೆಡ್ಡಿಗೆ ಟಿಕೆಟ್ ನೀಡದಿರುವುದನ್ನು ಬಿಟ್ಟರೆ ಪಕ್ಷ ಬಿಡದ ಎಲ್ಲ ಆರೋಪಿಗಳಿಗೂ ಬಿಜೆಪಿ ಟಿಕೆಟ್ ನೀಡಿದೆ. ರೆಡ್ಡಿಯ ಎಲ್ಲ ಅಕ್ರಮಗಳಿಗೆ ನೆರಳಾಗಿದ್ದ ಶ್ರೀರಾಮುಲುಗೆ ಬಾದಾಮಿಯಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ, ರೆಡ್ಡಿ ಬಿಡುಗಡೆಗಾಗಿ ನ್ಯಾಯಾಧೀಶರಿಗೆ ಲಂಚ ನೀಡಲು ಹಣ ತಲುಪಿಸುವ ಕೆಲಸ ಮಾಡಿದ ಆರೋಪ ಎದುರಿಸುತ್ತಿರುವ ಸುರೇಶ್ ಬಾಬುಗೆ ಕಂಪ್ಲಿಯಿಂದಲೇ ಮತ್ತೆ ಟಿಕೆಟ್ ನೀಡಿದೆ. ಇನ್ನು ರೆಡ್ಡಿಯ ಎಲ್ಲ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಗಾಲಿ ಸೋಮಶೇಖರ್ ರೆಡ್ಡಿಗೂ ಬಿಜೆಪಿ ಟಿಕೆಟ್ ಕರುಣಿಸಿದೆ.

ಅಕ್ರಮ ಗಣಿಗಾರಿಕೆಗೆ ಪರವಾನಗಿ ನೀಡಿ ಎಲ್ಲ ಅಕ್ರಮಗಳಿಗೂ ಕಾರಣವಾಗಿದ್ದ ಜೆಡಿಎಸ್ ಅಕ್ರಮ ಗಣಿಗಾರಿಕೆ ಆರೋಪಿ ಇಕ್ಬಾಲ್ ಅಹಮದ್‌ಗೆ ಬಳ್ಳಾರಿ ನಗರದಿಂದ ಟಿಕೆಟ್ ನೀಡಿ ತಾನೇನೂ ಕಡಿಮೆ ಇಲ್ಲ ಎಂದು ಪ್ರದರ್ಶಿಸಿಕೊಂಡಿದೆ.

ಇವು ಬಿಜೆಪಿ , ಜೆಡಿಎಸ್ ಸ್ಥಿತಿಯಾದರೆ ಅಕ್ರಮ ಗಣಿಗಾರಿಕೆ ವಿರುದ್ದ ತೊಡೆ ತಟ್ಟಿ ಹೋರಾಟ ಮಾಡಿದ್ದ ಕಾಂಗ್ರೆಸ್ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ತನ್ನ ಇಲ್ಲದ ನೈತಿಕ ಮುಖವಾಡವನ್ನು ಕಿತ್ತೆಸೆದಿದೆ. ಚುನಾವಣಾ ರಾಜಕೀಯದಲ್ಲಿ ಎಲ್ಲವೂ ಮಾಫಿ ಎಂಬ ರೀತಿಯಲ್ಲಿ ಅಖಾಡಕ್ಕೆ ಇಳಿದಿದೆ. ಗಣಿ ಹಣದಿಂದ ರಾಜಕೀಯ ಮಾಡಲು ಹೊರಟಿರುವ ಉಳಿದೆರಡು ಪಕ್ಷಗಳಿಗಿಂತ ಕಾಂಗ್ರೆಸ್ ಅದರ ಹೆಚ್ಚು ಲಾಭವನ್ನು ತಾನೇ ಗಳಿಸಿಬೇಕು ಎಂದು ಹೊಡಿ-ಬಡಿ ಆಟಕ್ಕೆ ಇಳಿದಿದೆ.

ಅಕ್ರಮ ಗಣಿಗಾರಿಕೆಯ ಫಲಾನುಭವಿಗಳಾದ ಆನಂದ್ ಸಿಂಗ್, ನಾಗೇಂದ್ರ ಸತೀಶ್ ಸೈಲ್ ಮೇಲೆ ಬೇಲಿಕೇರಿ ಬಂದರಿನಿಂದ 7 ಲಕ್ಷಟನ್ ಅಕ್ರಮ ಅದಿರು ಸಾಗಿಸಿದ್ದ ಆರೋಪವಿದೆ. ಆದರೆ ಕಾಂಗ್ರೆಸ್ ಬಳ್ಳಾರಿ ಗ್ರಾಮೀಣ ಮತ್ತು ವಿಜಯನಗರದಲ್ಲಿ ನಾಗೇಂದ್ರ, ಆನಂದ್ ಸಿಂಗ್ ಗೆ ಟಿಕೆಟ್ ನೀಡಿ ತನ್ನ ಮಾತಿಗೆ ತಾನೇ ಉಲ್ಟಾ ಹೊಡೆದಿದೆ.

ಆನಂದ್ ಸಿಂಗ್
ಆನಂದ್ ಸಿಂಗ್

ಇನ್ನು ಮಾಮೂಲಿ ಎಂಬಂತೆ ಸಂತೋಷ್ ಲಾಡ್, ಅನಿಲ್ ಲಾಡ್, ಮಲ್ಲಿಕಾರ್ಜುನ ಶಿಪ್ಪಿಂಗ್ ಲಿಮಿಟೆಡ್ ಮೂಲಕ ಭಾರಿ ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ಸತೀಶ್ ಸೈಲ್, ಯಲ್ಲಾಪುರದಿಂದ ಹೆಬ್ಬಾರ್ ಶಿವರಾಮ್ ಗೂ ಈಗಾಗಲೇ ಟಿಕೆಟ್ ಘೋಷಣೆಯಾಗಿದೆ.

ಎಂ.ಬಿ. ಸಿಂಗ್ ನೇತೃತ್ವದ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಶಿಫಾರಿಸಿನ ಮೇರೆಗೆ ಕರ್ನಾಟಕದಲ್ಲಿ 8 ವರ್ಷಗಳಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆಗೆ ಸುಪ್ರೀಂಕೋರ್ಟ್ 2010ರಲ್ಲಿ ನಿಷೇಧ ಹೇರಿತ್ತು. ಇದಾದ ನಂತರ ಕೋರ್ಟ್ ನಾಶವಾಗಿರುವ ಅರಣ್ಯವೃದ್ದಿಗೆ ಹಲವು ಮಾರ್ಗಸೂಚಿಗಳನ್ನು ನೀಡಿದೆ. ಇದಕ್ಕಾಗಿ ಗಣಿ ಕಂಪನಿಗಳಿಂದ ಸುಮಾರು 13 ಸಾವಿರ ಕೋಟಿ ದಂಡ ವಸೂಲಿ ಮಾಡಲಾಗಿದೆ.

ದುರಂತವೆಂದರೆ ಇದಕ್ಕೆ ಸೆಡ್ಡು ಹೊಡೆವಂತೆ ಇನ್ನೊಂದೆಡೆ ಅಕ್ರಮ ಗಣಿಗಾರಿಕೆ ಆರೋಪಿಗಳಿಗೆ ಶಿಕ್ಷೆಯೂ ಆಗಲಿಲ್ಲ, ಬದಲಾಗಿ ಅವರಿಗೆ ಇನ್ನೂ ರಾಜಕೀಯ ಅಧಿಕಾರ ಪಡೆಯುವ ಅವಕಾಶವನ್ನು ಎಲ್ಲ ಪಕ್ಷಗಳೂ ಕಲ್ಪಿಸಿವೆ.

ನಾಶವಾದ ಕಾಡನ್ನೂ ಅಭಿವೃದ್ಧಿ ಪಡಿಸಲಾಗಿಲ್ಲ, ತನಿಖೆಯೂ ಪೂರ್ಣವಾಗಿಲ್ಲ. ಕರ್ನಾಟಕದ ಚರಿತ್ರೆಯಲ್ಲಿ ಪ್ರಕೃತಿಯ ಮೇಲೆ ಇಂಥ ಘೋರ ದಾಳಿ ಮಾಡಿದ ಆರೋಪಿಗಳಿಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರೂ ಪಕ್ಷಗಳು ಬಾಗಿನಿ ನೀಡಿ ಟಿಕೆಟ್ ನೀಡುವ ಮೂಲಕ ತಾವೇನು ಎಂಬುದನ್ನು ತೋರಿಸಿಕೊಂಡಿವೆ. ಜನರಿಗೂ ಮರೆವು ಕಡಿಮೆ ಎಂಬುದನ್ನು ಇವು ಸರಿಯಾಗಿಯೇ ಅರ್ಥಮಾಡಿಕೊಂಡಂತಿದೆ.

ಅಕ್ರಮ ಗಣಿಗಾರಿಕೆ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಿ ಹೋರಾಟ ಮಾಡಿದ್ದ ಸಮಾಜಿಕ ಹೋರಾಟಗಾರ, ಸಮಾಜ ಪರಿವರ್ತನಾ ಸಂಸ್ಥೆಯ ಮುಖ್ಯಸ್ಥ ಎಸ್.ಆರ್. ಹಿರೇಮಠ್, “ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಸರ್ಕಾರ ಬಳ್ಳಾರಿಗೆ ಪಾದಯಾತ್ರೆ ಮಾಡಿದ ವೇಳೆ ನೀಡಿದ ಮಾತಿನಂತೆ ನಡೆದುಕೊಂಡಿಲ್ಲ. ಯಡಿಯೂರಪ್ಪಗೆ ನಾಚಿಕೆ ಮಾನ ಮರ್ಯಾದೆ ಇದ್ದರೆ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ವರದಿಯನ್ನು ಜಾರಿ ಮಾಡಬೇಕಿತ್ತು, ಆದರೆ ಅದನ್ನು ನಾಮಕಾವಸ್ತೆ ಮಾಡಿದರು. ಅರಣ್ಯ ಕಾಯ್ದೆ ಉಲ್ಲಂಘಿಸಿದ ಸಿ ಕೆಟಗರಿಯ 51 ಕಂಪನಿಗಳ ಮೇಲೆ ಕ್ರಿಮಿನಲ್ ಪ್ರಕರಣ ಹೂಡಿ ದಂಡ ವಸೂಲಿಯನ್ನೂ ಮಾಡಲಿಲ್ಲ. ಅಲ್ಲದೆ ತನಿಖೆಯ ನೇತೃತ್ವ ವಹಿಸಿದ್ದ ಸಂಪುಟ ಉಪ ಸಮಿತಿಯ ಸದಸ್ಯ ಎಚ್. ಕೆ. ಪಾಟಿಲ್ ಅವರೇ ಒಂದು ಲಕ್ಷ ಕೋಟಿ ರೂ. ಸರ್ಕಾರಕ್ಕೆ ಬರಬೇಕಾಗಿದೆ ಎಂದು ಹೇಳಿದ್ದರು. ಅದೂ ಆಗಲಿಲ್ಲ,’’ ಎಂದು ಸದ್ಯದ ಸ್ಥಿತಿಯನ್ನು ವಿವರಿಸುತ್ತಾರೆ.

ಎಸ್‌.ಆರ್‌.ಹಿರೇಮಠ
ಎಸ್‌.ಆರ್‌.ಹಿರೇಮಠ

ಕಳೆದ ಚುನಾವಣೆಯಲ್ಲಿ ಪ್ರಮುಖ ಅಜೆಂಡಾವೇ ಆಗಿ ಹೋಗಿದ್ದ ಬಳ್ಳಾರಿ ಅಕ್ರಮ ಗಣಿಗಾರಿಕೆ ಮತ್ತು ಅದಿರು ಸಾಗಣೆ ಪ್ರಕರಣ ಈ ಬಾರಿಯ ಚುನಾವಣೆ ಹೊತ್ತಿಗೆ ‘ಜಾಣ ಮರೆವಿನ’ ಹೊದ್ದಿಕೆ ಹೊದ್ದುಕೊಂಡಿದೆ. ರಾಜಕೀಯ ಪಕ್ಷಗಳು ಕೊಟ್ಟ ಮಾತನ್ನು ಮರೆತಿವೆ. ಜನ ಅವುಗಳ ಎಸಗಿರುವ ದ್ರೋಹವನ್ನು ಮರೆತರೆ ಕಷ್ಟ.