samachara
www.samachara.com
ದೇವಮಾನವನ ಅತ್ಯಾಚಾರಕ್ಕೆ ಜೀವಿತಾವಧಿ ಶಿಕ್ಷೆ: ಕಂಬಿ ಹಿಂದೆ ‘ಅಸ್ಸಾರಾಮ್ ಬಾಪು ಆಧ್ಯಾತ್ಮ’
COVER STORY

ದೇವಮಾನವನ ಅತ್ಯಾಚಾರಕ್ಕೆ ಜೀವಿತಾವಧಿ ಶಿಕ್ಷೆ: ಕಂಬಿ ಹಿಂದೆ ‘ಅಸ್ಸಾರಾಮ್ ಬಾಪು ಆಧ್ಯಾತ್ಮ’

ಧಾರ್ಮಿಕ ಗುರು, ಸ್ವಯಂ ಘೋಷಿತ ದೇವಮಾನವ ಅಸ್ಸಾರಾಮ್‌ ಬಾಪು ಹೆಸರು ಭಾರತದ ಅತ್ಯಾಚಾರಿಗಳ ಸಾಲಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದೆ. ಆತನನ್ನು ತಪ್ಪಿತಸ್ಥ ಎಂದು ನ್ಯಾಯಾಲಯ ಘೋಷಿಸಿದ್ದು, ಜೀವಿತಾವಧಿ ಶಿಕ್ಷೆಯನ್ನು ವಿಧಿಸಿದೆ.

ಭಾರತದ ಪ್ರಖ್ಯಾತ ಧಾರ್ಮಿಕ ಗುರುಗಳಲ್ಲಿ ಒಬ್ಬರಾದ ಅಸಾರಮ್ ಬಾಪುವಿಗೆ ಜೋಧ್‌ಪುರದ ವಿಚಾರಣಾಧೀನ ನ್ಯಾಯಾಲಯ ಜೀವಿತಾವಧಿ ಶಿಕ್ಷೆಯನ್ನು ನೀಡಿದೆ. ಸತತ 4 ವರ್ಷಗಳಿಂದ ಅತ್ಯಾಚಾರದ ಆರೋಫದ ಮೇಲೆ ಜೋಧ್‌ಪುರ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿ ಅಸಾರಮ್ ಬಾಪು ಈಗ ಸಾಯುವವರೆಗೂ ಅದೇ ಜೈಲಿನಲ್ಲಿ ಬದುಕು ನೂಕಬೇಕಿದೆ.

ಸ್ವಘೋಷಿತ ದೇವ ಮಾನವ ಅಸಾರಮ್ ಬಾಪುನನ್ನು ಜೋಧ್‌ಪುರ ವಿಶೇಷ ನ್ಯಾಯಾಲಯ ತಪ್ಪಿತಸ್ಥ ಎಂದು ಕರೆದಿದೆ. ಅಸಾರಮ್ ಬಾಪು ಸೇರಿದಂತೆ 5 ಜನ ಅತ್ಯಾಚಾರ ಆರೋಪಿಗಳ ವಿಚಾರಣೆ ನಡೆಸಿರುವ ನ್ಯಾಯಾಲಯ ಅಸಾರಮ್ ಹಾಗೂ ಇನ್ನಿಬ್ಬರನ್ನು ತಪ್ಪಿತಸ್ಥರು ಎಂದು ಪರಿಗಣಿಸಿದೆ. ಉಳಿದ ಇಬ್ಬರು ಆರೋಪಿಗಳು ಬಿಡುಗಡೆಗೊಂಡಿದ್ದಾರೆ.

ಅಸಾರಮ್ ಬಾಪುವನ್ನು ಇರಿಸಲಾಗಿದ್ದ ಜೋಧ್‌ಪುರ ಕೇಂದ್ರ ಕಾರಾಗೃಹದಿಂದಲೇ ಈ ತೀರ್ಪು ಹೊರಬಂದಿದೆ. ಈ ತೀರ್ಪಿನಿಂದ ಅಸಾರಮ್ ಬಾಪು ಅನುಯಾಯಿಗಳು ಕೆರಳಬಹುದು ಎನ್ನುವ ಭಯ ಕಾಡುತ್ತಿದ್ದು, ಗುರ್ಮಿತ್‌ ರಾಮ್‌ ರಹೀಮ್‌ ಕುರಿತಾದ ತೀರ್ಪು ಹೊರಬಂದಾಗ ನಡೆದಿದ್ದ ಹಿಂಸಾಚಾರ ಈಗಲೂ ಮರುಕಳಿಸಬಹುದು ಎನ್ನಲಾಗಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ರಾಜಸ್ಥಾನ್‌, ಗುಜರಾತ್‌, ಉತ್ತರ ಪ್ರದೇಶ ಹಾಗೂ ಹರಿಯಾಣ ರಾಜ್ಯಗಳಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಸಂತ್ರಸ್ಥೆಯ ಮನೆಗೆ ಪೊಲೀಸ್‌ ಕಾವಲು ನೀಡಲಾಗಿದೆ. ಅಸಾರಮ್ ಬಾಪು ಆಶ್ರಮಗಳಿರುವಲ್ಲಿ, ಆತನ ಅನುಯಾಯಿಗಳಿಗೆ ಕೊಠಡಿಗಳನ್ನು ಬಾಡಿಗಗೆ ನೀಡದಂತೆ ಸ್ಥಳೀಯ ಹೋಟೆಲ್‌ಗಳಿಗೆ ಸೂಚಿಸಲಾಗಿದೆ.

“ ಅಸಾರಮ್‌ನನ್ನು ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು ಹೊರಡಿಸುವ ಮೂಲಕ ನಮಗೆ ನ್ಯಾಯ ಒದಗಿಸಿದೆ. ಈ ಹೋರಾಟದಲ್ಲಿ ನಮಗೆ ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅಸಾರಮ್ ಬಾಪುಗೆ ಕಠಿಣ ಶಿಕ್ಷೆ ದೊರೆಯಲಿದೆ ಎಂಬ ನಂಬಿಕೆಯಿದೆ,” ಎಂದು ಅತ್ಯಾಚಾರಕ್ಕೊಳಪಟ್ಟ ಸಂತ್ರಸ್ಥೆಯ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನ್ಯಾಯಾಲಯ ತೀರ್ಪು ನೀಡಿದ ನಂತರ ಅಸಾರಮ್ ಬಾಪುರ ವಕ್ತಾರ ನೀಲಮ್‌ ದುಬೇ ಎಎನ್‌ಐ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ್ದು, “ ನಮ್ಮ ಕಾನೂನು ತಂಡದ ಜತೆ ಚರ್ಚಿಸಿ ನಮ್ಮ ಮುಂದಿನ ನಡೆಯನ್ನು ನಿರ್ಧರಿಸಲಾಗುವುದು. ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಮಗೆ ನಂಬಿಕೆ ಇದೆ,” ಎಂದಿದ್ದಾರೆ.

2013ರ ಆಗಸ್ಟ್‌ 31ರಿಂದ ಕಾರಾಗೃಹದಲ್ಲಿರುವ ಅಸಾರಮ್ ಬಾಪು ಮೇಲೆ 16 ವರ್ಷದ ಬಾಲಕಿಯೊಬ್ಬಳು ಲೈಂಗಿಕ ದೌರ್ಜನ್ಯದ ಕೇಸು ದಾಖಲಿಸಿದ್ದಳು. ಉತ್ತರ ಪ್ರದೇಶ ಮೂಲದ ಬಾಲಕಿ ಅಸಾರಮ್ ಬಾಪು ಆಶ್ರಮದಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಳು. ಆಕೆಯನ್ನು ಜೋಧ್‌ಪುರ ಸಮೀಪದ ಮನಾಯಿ ಆಶ್ರಮಕ್ಕೆ ಕರೆದುಕೊಂಡು ಹೋಗಿದ್ದ ಅಸಾರಮ್ ಬಾಪು 2013ರ ಆಗಸ್ಟ್‌ 15ರ ರಾತ್ರಿ ಅತ್ಯಾಚಾರ ಎಸಗಿದ್ದ ಎನ್ನಲಾಗಿತ್ತು.

77ರ ಪ್ರಾಯ ಅಸಾರಮ್ ಬಾಪು ಮೇಲೆ ಪೋಕ್ಸೋ ಕಾಯ್ದೆ ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಗಳ ಅಡಿಯಲ್ಲಿ ಕೇಸು ದಾಖಲಿಸಲಾಗಿತ್ತು. ಅಸಾರಮ್ ನೀಡಿದ್ದ 12 ಜಾಮೀನು ಅರ್ಜಿಗಳನ್ನು ನ್ಯಾಯಾಲಯಗಳು ವಜಾಗೊಳಿಸಿದ್ವು. ಅವುಗಳಲ್ಲಿ 6 ಜಾಮೀನು ಮನವಿಗಳನ್ನು ಜೋಧ್‌ಪುರದ ವಿಚಾರಾಣಾಧೀನ ನ್ಯಾಯಾಲಯ ತಿರಸ್ಕರಿಸಿದರೆ 3 ಜಾಮೀನು ಅರ್ಜಿಗಳನ್ನು ರಾಜಸ್ಥಾನ ಹೈಕೋರ್ಟ್‌ ತಿರಸ್ಕರಿಸಿತ್ತು. ಉಳಿದ 3 ಜಾಮೀನು ಮನವಿಗಳು ಸುಪ್ರಿಂ ಕೋರ್ಟ್‌ನಿಂದ ತಿರಸ್ಕರಿಸಲ್ಪಟ್ಟಿದ್ದವು.

ಸತತ 4 ವರ್ಷಗಳ ಕಾಲ ವಿಚಾರಣೆ ನಡೆದಿದ್ದು, ಈ ಮಧ್ಯೆಯೇ ಅಸಾರಮ್ ವಿರುದ್ಧ ಸಾಕ್ಷಿಗಳಾಗಿದ್ದ 9 ಜನರ ಮೇಲೆ ದಾಳಿಗಳು ನಡೆದಿದ್ದವು. 9 ರಲ್ಲಿ 3 ಜನ ಅಸುನೀಗಿದ್ದರು.

ಯಾರೀತ ಅಸಾರಮ್ ಬಾಪು?:

ಅಸುಮಲ್ ಸಿರುಮಲನಿ ಅಲಿಯಾಸ್‌ ಅಸಾರಮ್ ಬಾಪು ಭಾರತದ ಪ್ರಖ್ಯಾತ ಧಾರ್ಮಿಕ ಗುರು. ಲಕ್ಷಾಂತರ ಜನ ಅನುಯಾಯಿಗಳನ್ನು ಹೊಂದಿರುವ ಅಸಾರಮ್ ಬಾಪು ಹುಟ್ಟಿದ್ದು ಇಂದಿನ ಪಾಕಿಸ್ಥಾನದ ಸಿಂಧ್‌ ಪ್ರದೇಶದಲ್ಲಿ. 1947ರಲ್ಲಿ ಭಾರತ ಪಾಕ್ತಿಸ್ಥಾನ ವಿಭಜನೆಯಾದಾಗ ಅಸುಮಲ್‌ ಸಿರುಮಲನಿ 6 ವರ್ಷದ ಬಾಲಕ. ವಿಭಜನೆಯ ಸಂಧರ್ಭದಲ್ಲೇ ಪಾಕಿಸ್ಥಾನವನ್ನು ತೊರೆದ ಅಸುಮಲ್‌ ಸಿರುಮಲನಿ ಕುಟುಂಬ ಅಹಮದಾಬಾದ್‌ಗೆ ಬಂದು ನೆಲೆಸಿತು.

ಅಸುಮಲ್‌ನ ಬುದ್ದಿ ಬಲಿಯುವ ಮೊದಲೇ ಆತನ ತಂದೆ ತೌಮಲ್‌ ಸಿರುಮಲನಿ ಸಾವನ್ನಪ್ಪಿದ್ದರು. ಚಿಕ್ಕ ಬಾಲಕ ಅಸುಮಲ್‌ನ ಪುಟ್ಟ ಹೆಗಲುಗಳ ಮೇಲೆ ಕುಟುಂಬವನ್ನು ನಡೆಸುವ ಜವಾಬ್ದಾರಿ ಬಿದ್ದಿತ್ತು. ಅಹಮದಾಬಾದ್‌ಅನ್ನು ತೊರೆದ ಅಸುಮಲ್‌ ಕುಟುಂಬ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ವಿಜಯಪುರಕ್ಕೆ ವಲಸೆ ಬಂದಿತು. ಮೆಹ್ಸಾನಾ ನಗರದ ನ್ಯಾಯಾಲಯದ ಮುಂದಿದ್ದ ಚಿಕ್ಕ ಟೀ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡ ಅಸುಮಲ್‌ ತನ್ನ ವೃತ್ತಿ ಬದುಕನ್ನು ಆರಂಭಿಸಿದ.

ಅದು 1959ರ ಕಾಲಘಟ್ಟ. ಅಸುಮಲ್‌ನ ಹೆಸರು ಕೊಲೆ ಪ್ರಕರಣವೊಂದರಲ್ಲಿ ಕೇಳಿ ಬಂದಿತ್ತು. ಕುಡಿತದ ಮತ್ತಿನಲ್ಲಿದ್ದ ಅಸುಮಲ್‌ ಕೊಲೆಯಲ್ಲಿ ಭಾಗಿಯಾಗಿದ್ದ ಎನ್ನಲಾಗಿತ್ತು. ಆದರೆ ಸರಿಯಾದ ಸಾಕ್ಷ್ಯಾಧಾರಗಳು ದೊರೆಯದ ಕಾರಣ ಅಸುಮಲ್‌ಗೆ ಜಾಮೀನು ದೊರೆತಿತ್ತು.

ಜಾಮೀನು ದೊರೆತ ನಂತರ ವಿಜಯಪುರದಿಂದ ಹೊರಟ ಅಸುಮಲ್‌ ಅಹಮದಾಬಾದ್‌ನ ಸರ್ದಾರ್‌ನಗರಕ್ಕೆ ಬಂದ. 60ರ ದಶಕದಲ್ಲಿ 4 ಜನ ಸ್ನೇಹಿತರೊಂದಿಗೆ ಮದ್ಯ ಮಾರಾಟವನ್ನು ಆರಂಭಿಸಿದ. ಮದ್ಯ ವ್ಯಾಪಾರ ಅಸುಮಲ್‌ಗೆ ಅಪಾರ ಪ್ರಮಾಣದ ಲಾಭವನ್ನು ತಂದುಕೊಟ್ಟಿತು. ಇದರ ಜತೆಗೆ ಹಾಲಿನ ಡೈರಿಯೊಂದರಲ್ಲೂ ಕೂಡ ಅಸುಮಲ್‌ ಕೆಲಸ ನಿರ್ವಹಿಸುತ್ತಿದ್ದ. ತಿಂಗಳಿಗೆ 300 ರೂ ಸಂಬಳವನ್ನು ಪಡೆಯುತ್ತಿದ್ದ. ಆದರೆ ಕೆಲ ದಿನಗಳಲ್ಲಿಯೇ ಈ ಕೆಲಸಕ್ಕೆ ತಿಲಾಂಜಲಿ ಹಾಡಿದ.

ಈತನ ಆಶ್ರಮ ಪ್ರಕಟಿಸಿರುವ ಅಸಾರಮ್ ಬಾಪು ಜೀವನ ಕತೆ -“ಸಂತ್‌ ಅಸಾರಮ್ ಬಾಪೂಜಿ ಕಿ ಜೀವನ್‌ ಜಾಂಕಿ"- ಪುಸ್ತಕ ಹೇಳುವಂತೆ, ಅಸುಮಲ್‌ ತಂದೆ ಸಾವನ್ನಪ್ಪುವ ಸಮಯದಲ್ಲಿ 3ನೇ ತರಗತಿಯಲ್ಲಿದ್ದ. ತಂದೆ ದೂರಾದ ನಂತರ, 15ನೇ ವಯಸ್ಸಿನಲ್ಲಿ ಮನೆ ಬಿಟ್ಟ ಅಸುಮಲ್‌ ಬಾರುಕ್‌ನಲ್ಲಿ ಆಶ್ರಮವೊಂದನ್ನು ಸೇರಿಕೊಂಡ. ಇದಾದ ಮೇಲೆ ಹಲವಾರು ಆಶ್ರಮಗಳಲ್ಲಿ ಅಸುಮಲ್‌ ತಂಗಿದ್ದ. ಇದಕ್ಕೂ ಮುಂಚೆ ಅಸುಮಲ್‌ನ ಮನವೊಲಿಸಿದ ಆತನ ಕುಟುಂಬದ ಸದಸ್ಯರು ಲಕ್ಷ್ಮಿದೇವಿ ಎನ್ನುವವರ ಜತೆ ಅಸುಮಲ್‌ನ ವಿವಾಹ ಕಾರ್ಯವನ್ನು ನೆರವೇರಿಸಿದ್ದರು. ಕುಟುಂಬದ ಜಂಜಾಟಗಳಲ್ಲಿ ಆಸಕ್ತಿಯಿಲ್ಲದೆ ಮನೆ ತೊರೆದು ಬಂದ ಅಸುಮಲ್‌ನನ್ನು ಲೀಲಾ ಶಾ ಬಾಪು ಎಂಬ ಮಹಿಳಾ ಧಾರ್ಮಿಕ ಗುರುವೊಬ್ಬರು ಶಿಷ್ಯನನ್ನಾಗಿ ಒಪ್ಪಿಕೊಂಡಿದ್ದರು. ಲೀಲಾ ಶಾ ಬಾಪು ಅಸುಮಲ್‌ಗೆ ಅಸಾರಮ್ ಬಾಪು ಎಂಬ ಹೆಸರು ನೀಡಿದ್ದರು.

ಲೀಲಾ ಶಾ ಬಾಪು.
ಲೀಲಾ ಶಾ ಬಾಪು.

1970ರ ದಶಕದಲ್ಲಿ ಅಸಾರಮ್ ಬಾಪು ಒಬ್ಬ ಧಾರ್ಮಿಕ ಬೋಧಕನಾದ. ಬಿಳಿ ದೋತಿ ಮತ್ತು ಕುರ್ತಾವನ್ನು ತೊಟ್ಟ ಉದ್ದನೆಗ ಗಡ್ಡ ಬಿಟ್ಟು ಧಾರ್ಮಿಕ ಪ್ರವಚನ ಆರಂಭಿಸಿದ ಅಸಾರಮ್ ಕೆಲದಿನಗಳು ಕಳೆಯುವುದರೊಳಗೆ ಪ್ರಖ್ಯಾತ ಗುರುವಾಗಿ ಕಾಣಿಸಿಕೊಂಡ. 1972ರಲ್ಲಿ ಗುಜರಾತ್‌ನ ಸಬರಮತಿ ನದಿ ದಂಡೆಯ ಮೊಟೆರಾ ಗ್ರಾಮದಲ್ಲಿ ಜೋಪಡಿಯೊದನ್ನು ಕಟ್ಟಿಕೊಂಡ ಅಸಾರಮ್, ಅದೇ ವರ್ಷ 5-10 ಅನುಯಾಯಿಗಳನ್ನು ಗಳಿಸಿಕೊಂಡು ತನ್ನ ಜೋಪಡಿಯನ್ನು ಆಶ್ರಮವನ್ನಾಗಿ ಪರಿವರ್ತಿಸಿದ.

ನಂತರದ ದಿನಗಳಲ್ಲಿ ಭಾರತದ ನಾನಾ ಭಾಗಗಳಲ್ಲಿ ಅಸಾರಮ್ ಬಾಪು ಆಶ್ರಮಗಳು ತರೆದವು. ಬಾಪು ಖ್ಯಾತಿ ಸುಮುದ್ರಗಳನ್ನು ದಾಟಿ ವಿದೇಶಗಳಲ್ಲೂ ಹಬ್ಬಿತು. ನಾನಾ ದೇಶಗಳು ಆಶ್ರಮಗಳು ಕಾಣಿಸಿಕೊಂಡವು. ಅಸಾರಮ್ ಬಾಪು ಸೂರತ್‌ನಲ್ಲಿ ತನ್ನ ಧಾರ್ಮಿಕ ಪ್ರವಚನವನ್ನು ನೀಡಲು ಆರಂಭಿಸಿದ. ಆ ವೇಳೆ ಆತನ ಅನುಯಾಯಿಗಳ ಸಂಖ್ಯೆ ಹಲವಾರು ಸಾವಿರಗಳನ್ನು ದಾಟಿತ್ತು.

ಅದು 2008ರ ಕಾಲ, ಅಸಾರಮ್ ಬಾಪುವಿನ ಮೊಟೆರಾ ಆಶ್ರಮದ ಬಳಿ ಚಿಕ್ಕ ಮಕ್ಕಳ ಎರಡು ಕಳೇಬರಗಳು ಪತ್ತೆಯಾಗಿದ್ದವು. ವೈದ್ಯಕೀಯ ವರದಿಗಳು ಹೇಳುವಂತೆ ಮಕ್ಕಳ ದೇಹದೊಳಗಿನ ಕೆಲವು ಅಂಗಾಗಗಳು ನಾಪತ್ತೆಯಾಗಿದ್ದವು. ಈ ಅಂಶ ಅಸಾರಮ್ ಬಾಪು ಮೇಲೆ ಸಂಶಯ ವ್ಯಕ್ತವಾಗುವಂತೆ ಮಾಡಿತ್ತು. ಕೆಲ ದಿನಗಳಲ್ಲೇ ಅಸಾರಮ್ ಬಾಪು ಹೆಸರು ಸೂರತ್‌ನ ಭೂ ಕಬಳಿಕೆ ಪ್ರಕರಣದಲ್ಲಿ ಕೇಳಿಬಂದಿತ್ತು. ಈಗಲೂ ಕೂಡ ಈ ಮೊಖದ್ದಮೆ ನಡೆಯುತ್ತಲೇ ಇದೆ.

2013ರಲ್ಲಿ ಉತ್ತರ ಪ್ರದೇಶದ 16 ವರ್ಷದ ಬಾಲಕಿಯೊಬ್ಬಳು ನೀಡಿದ ದೂರನ್ನು ಆಧರಿಸಿ ಜೋಧ್‌ಪುರದ ಪೊಲೀಸರು ಅಸಾರಮ್ ಬಾಪುವನ್ನು ಬಂಧಿಸಿದ್ದರು. ತನ್ನ ಮೇಲೆ ಲೈಂಗಿಕ ದೌರ್ಜನ್ಯವನ್ನು ನಡೆಸಿರುವುದಾಗಿ ಬಾಲಕಿ ದೂರು ನೀಡಿ ಕೆಲವು ತಿಂಗಳುಗಳು ಕಳೆಯುವುದರೊಳಗೆ ಸೂರತ್‌ನ ಇಬ್ಬರು ಸಹೋದರಿಯರು ಅಸಾರಮ್ ಬಾಪು ಮತ್ತವನ ಮಗ ನಾರಾಯನ್‌ ಸಾಯಿ ವಿರುದ್ಧ ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ದಾಖಲಿಸಿದ್ದರು. 1997ರಿಂದ 2006ವರೆಗೆ ಆಶ್ರಮದಲ್ಲೇ ತಂಗಿದ್ದ ನಮ್ಮ ಮೇಲೆ ಅಸಾರಮ್ ಬಾಪು ಮತ್ತವನ ಪುತ್ರ ಹಲವಾರು ಬಾರಿ ಅತ್ಯಾಚಾರ ನಡೆಸಿರುವುದಾಗಿ ಆ ಸಹೋರಿಯರು ತಿಳಿಸಿದ್ದರು.

ಅಸಾರಮ್ ಬಾಪು ಮತ್ತು ಆತನ ಪುತ್ರ ನಾರಾಯಣ್‌ ಸಾಯಿ.
ಅಸಾರಮ್ ಬಾಪು ಮತ್ತು ಆತನ ಪುತ್ರ ನಾರಾಯಣ್‌ ಸಾಯಿ.

ಇಷ್ಟೆಲ್ಲಾ ಪ್ರಕರಣಗಳಿದ್ದರೂ ಕೂಡ ಅಸಾರಮ್ ಬಾಪುಗೆ 2 ಕೊಟಿಗಿಂತಲೂ ಹೆಚ್ಚು ಅನುಯಾಯಿಗಳಿದ್ದಾರೆ. ಸುಮಾರು 10,000 ಕೋಟಿ ರೂಪಾಯಿ ಬೆಲೆಬಾಳುವ ಆಸ್ತಿ ಅಸಾರಮ್ ಬಾಪು ಹೆಸರಿನಲ್ಲಿದೆ ಎನ್ನುವ ಮಾಹಿತಿಗಳಿವೆ. 12 ದೇಶಗಳಲ್ಲಿ 400 ಆಶ್ರಮಗಳನ್ನು ಅಸಾರಮ್ ಬಾಪು ತೆರೆದಿದ್ದಾನೆ. ಭಾರತದಲ್ಲಿ 50ಕ್ಕೂ ಹೆಚ್ಚು ಗುರು ಕುಲಗಳನ್ನು ಅಸಾರಮ್ ಬಾಪು ನಡೆಸುತ್ತಿದ್ದಾನೆ. ದೊಡ್ಡ ಪ್ರಿಂಟಿಂಗ್ ಪ್ರೆಸ್‌ ಕೂಡ ಬಾಪು ಒಡೆತನದಲ್ಲಿದ್ದು, ಆಯುರ್ವೇದ ವಲಯದಲ್ಲೂ ಕೂಡ ಅಸಾರಮ್ ಬಾಪುವಿಗೆ ದೊಡ್ಡ ಹೆಸರಿದೆ.

ಅಸಾರಮ್ ಬಾಪು ಬಿಡುಗಡೆಗೆ ಒತ್ತಾಯಿಸಿ ಆತನ ಅನುಯಾಯಿಗಳು #CleanChitToBapuji ಹ್ಯಾಶ್‌ ಟ್ಯಾಗ್‌ ಟ್ರೆಂಡಿಂಗ್‌ ಶುರು ಮಾಡಿದ್ದರು. ಲಕ್ಷಾಂತರ ಜನ ಅಸಾರಮ್ ಬಿಡುಗಡೆಗಾಗಿ ಪ್ರಾರ್ಥಿಸಿದ್ದರು. ಆದರೆ ಅಸಾರಮ್ ಬಾಪು ಅನುಯಾಯಿಗಳ ಮೊರೆ ದೇವರಿಗೆ ಕೇಳಿಸಿಲ್ಲ. ಅನುಯಾಯಿಗಳ ಕಣ್ಣೀರು ಕೆಲಸ ಮಾಡಿಲ್ಲ. ನ್ಯಾಯಾಲಯ ಸಾಕ್ಷಿಗಳನ್ನು ಬಿಟ್ಟು ಇವ್ಯಾವುದಕ್ಕೂ ಸೊಪ್ಪು ಹಾಕಿಲ್ಲ.

ಅಸಾರಮ್ ಬಾಪುವನ್ನು ತಪ್ಪಿತಸ್ಥ ಎಂದು ಪರಿಗಣಿಸಿರುವ ಜೋಧ್‌ಪುರ ಕೇಂದ್ರ ಕಾರಾಗೃಹದ ವಿಚಾರಣಾಧೀನ ನ್ಯಾಯಾಲಯ ಅಸಾರಮ್ ಬಾಪುವಿಗೆ ಜೀವಿತಾವಧಿ ಶಿಕ್ಷೆ ವಿಧಿಸಿದೆ. ಈ ಮೂಲಕ ಮಹಿಳಾ ದೌರ್ಜನ್ಯವನ್ನು ನಡೆಸಿ, ಜೈಲು ಸೇರಿದ ಭಾರತದ ಧಾರ್ಮಿಕ ಗುರುಗಳ ಪಟ್ಟಿಯಲ್ಲಿ ಅಸಾರಮ್ ಬಾಪು ಹೆಸರನ್ನು ಅಧಿಕೃತವಾಗಿ ಸೇರಿಸಿದೆ.