samachara
www.samachara.com
ಭಾರತದಲ್ಲಿ ‘ಪೋರ್ನ್‌’ಪ್ರಿಯತೆ; ಅತ್ಯಾಚಾರಕ್ಕೆ ಪೋರ್ನೋಗ್ರಫಿಯೇ ಕಾರಣ? 
COVER STORY

ಭಾರತದಲ್ಲಿ ‘ಪೋರ್ನ್‌’ಪ್ರಿಯತೆ; ಅತ್ಯಾಚಾರಕ್ಕೆ ಪೋರ್ನೋಗ್ರಫಿಯೇ ಕಾರಣ? 

ಕಾಮ ಪ್ರವೃತ್ತಿಯ ಅಧ್ಯಯನ ಭಾರತಕ್ಕೆ ಹೊಸದೇನಲ್ಲ. ಎಲ್ಲಾ ಕಾಲಕ್ಕೂ ಅನ್ವಯಿಸಬಹುದಾದ ಕಾಮಸೂತ್ರವನ್ನು 2 ಅಥವಾ 5ನೇ ಶತಮಾನದಲ್ಲೇ ವಾತ್ಯಾಯನ ರಚಿಸಿದ್ದ. ಅದು ಕೂಡ ಪೋರ್ನೋಗ್ರಫಿಯೇ. ಆದರೆ ಪಾಶ್ಚಿಮಾತ್ಯದ ಬದಲಾಗಿ ಭಾರತೀಯ ಮೂಲದ್ದು. 

ಮಧ್ಯ ಪ್ರದೇಶ ಬಿಜೆಪಿ ಸರಕಾರದ ಗೃಹ ಮಂತ್ರಿ ಭೂಪೇಂದ್ರ ಸಿಂಗ್‌ರ ಕಣ್ಣು ಈಗ ಪೋರ್ನ್‌ ಪ್ರಿಯರತ್ತ ತಿರುಗಿದೆ. ಭಾರತದಲ್ಲಿ ಹೆಚ್ಚುತ್ತಿರುವ ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಹಿಂಸೆಯ ಪ್ರಕರಣಗಳಿಗೆ ಪೋರ್ನೋಗ್ರಫಿಯೇ ಕಾರಣ ಎನ್ನುವುದು ಭೂಪೇಂದ್ರ ಸಿಂಗ್‌ರವರ ಉವಾಚ. ಪೋರ್ನ್‌ಸೈಟ್‌ಗಳನ್ನು ನಿಷೇಧ ಮಾಡುವುದರಿಂದ ಅತ್ಯಾಚಾರಗಳನ್ನು ತಡೆಗಟ್ಟಬಹುದು ಎಂಬ ಅಭಿಪ್ರಾಯವನ್ನು ಗೃಹಮಂತ್ರಿಗಳು ವ್ಯಕ್ತ ಪಡಿಸಿದ್ದಾರೆ.

ಮಧ್ಯ ಪ್ರದೇಶದಲ್ಲಿ ಪೋರ್ನ್‌ಸೈಟ್‌ಗಳನ್ನು ನಿಷೇಧಿಸುವುದಾಗಿ ತಿಳಿಸಿರುವ ಗೃಹ ಮಂತ್ರಿ ಭೂಪೇಂದ್ರ ಸಿಂಗ್‌, ಕೇಂದ್ರ ಸರಕಾರಕ್ಕೂ ಕೂಡ ಪೋರ್ನ್‌ಸೈಟ್‌ ನಿಷೇಧಕ್ಕಾಗಿ ಮನವಿ ಮಾಡುವುದಾಗಿ ತಿಳಿಸಿದ್ದಾರೆ. ಈ ಹೇಳಿಕೆಯ ಬೆನ್ನಲ್ಲೇ ಲೇವಡಿಗೆ ಒಳಗಾಗಿರುವ ಭೋಪೇಂದ್ರ ಸಿಂಗ್‌ಗೆ ಮೊದಲು ಸಾಮಾಜಿಕ ವ್ಯವಸ್ಥೆಯನ್ನು ಸರಿಪಡಿಸಿ ಎಂಬ ಪ್ರತ್ಯುತ್ತರಗಳು ದೊರೆಯುತ್ತಿವೆ. ಫೊರ್ನೋಗ್ರಫಿ ಎನ್ನುವುದು ಇಂದು ನಿನ್ನೆಯದೇನಲ್ಲ ಎಂಬ ಮಾತುಗಳೂ ಕೂಡ ಕೇಳಿ ಬಂದಿವೆ.

ಭಾರತದಲ್ಲಿ ಪೋರ್ನ್‌ ಪ್ರೀಯತೆ:

ಕಾಮ ಪ್ರವೃತ್ತಿಯ ಅಧ್ಯಯನ ಭಾರತಕ್ಕೆ ಹೊಸದೇನಲ್ಲ. 2 ಅಥವಾ 5ನೇ ಶತಮಾನದವನು ಎನ್ನಲಾಗಿರುವ ವಾತ್ಸಾಯನ ಆ ಕಾಲಕ್ಕೆ ಕಾಮ ಪ್ರವೃತ್ತಿಯನ್ನು ವಿಸ್ತೃತವಾಗಿ ವಿವರಿಸುವ ‘ಕಾಮಸೂತ್ರ’ ಗ್ರಂಥವನ್ನು ಬರೆದಿದ್ದಾನೆ. ಎಲ್ಲಾ ಕಾಲಕ್ಕೂ ಪ್ರಸ್ತುತವೆನಿಸುವ ಈ ಗ್ರಂಥ ಪುರಾತನ ಭಾರತೀಯ ಪ್ರೌಢ ಶಿಕ್ಷಣದ ಭಾಗವಾಗಿತ್ತು. ದೇವಾಲಯಗಳಲ್ಲಿನ ಶಿಲಾ ಬಾಲಿಕೆಯರು, ಶಿಲ್ಪಗಳು ಜನರಿಗೆ ಲೈಂಗಿಕ ಭೋಧನೆಯನ್ನು ಒದಗಿಸುತ್ತಿದ್ದವು. ಆದರೆ ಸಧ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ‘ಕಾಮ’ ಎನ್ನುವ ವಿಷಯವೇ ಅಸ್ಪ್ರುಷ್ಯತೆಯನ್ನು ಅನುಭವಿಸುತ್ತಿದೆ. ಆದರೆ ‘ಆಶ್ಲೀಲ ಚಿತ್ರ ಮಾಧ್ಯಮ’ ಅಥವಾ ‘ಲಂಪಟ ಸಾಹಿತ್ಯ’ ಎಂದು ಕರೆಸಿಕೊಳ್ಳುವ ಪೋರ್ನೋಗ್ರಫಿ ಜನರನ್ನು ತಲುಪಲು ತನ್ನದೇ ಆದ ಹೊಸ ಮಾರ್ಗಗಳನ್ನೇ ಆರಿಸಿಕೊಂಡಿದೆ.

ಪೋರ್ನೋಗ್ರಫಿ ಎಂದರೆ?:

ಭಾರತದಲ್ಲಿ ‘ಪೋರ್ನ್‌’ಪ್ರಿಯತೆ; ಅತ್ಯಾಚಾರಕ್ಕೆ ಪೋರ್ನೋಗ್ರಫಿಯೇ ಕಾರಣ? 

ಪೋರ್ನೋಗ್ರಫಿ ಎಂದರೆ ಕೇವಲ ಅಂತರ್ಜಾಲದಲ್ಲಿ ದೊರೆಯುವ ಅಶ್ಲೀಲ ವೀಡಿಯೋಗಳಷ್ಟೇ ಅಲ್ಲ. ಅಶ್ಲೀಲ ಫೋಟೊಗಳು, ಕಾಮ ಕುರಿತಾದ ಪತ್ರಿಕೆಗಳು, ಸಾಹಿತ್ಯ, ಧ್ವನಿ ಸುರುಳಿಗಳು, ಲೈಂಗಿಕ ಆಟಿಕೆಗಳು, ವೀಡಿಯೋ ಗೇಮ್‌ಗಳೂ ಕೂಡ ಪೋರ್ನೋಗ್ರಫಿಯ ಭಾಗವಾಗಿವೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವ ಲೈಂಗಿಕ ತೃಪ್ತಿಯ ಪರಿಕರಗಳು ಭಾರತೀಯ ಲೈಂಗಿಕ ಸಂಸ್ಕೃತಿಗೆ ವಿಭಿನ್ನ ಆಯಾಮವನ್ನು ಕಲ್ಪಿಸಿಕೊಟ್ಟಿವೆ. ಜತೆಗೆ ವಿಶ್ವದಾದ್ಯಂತ ದೊಡ್ಡ ಮಾರುಕಟ್ಟೆಯನ್ನೂ ಸೃಷ್ಟಿಸಿಕೊಂಡಿವೆ.

2014ರ ವೇಳೆಗೆ ವಿಶ್ವದಾದ್ಯಂತ ಪೋರ್ನೋಗ್ರಫಿ ಗಳಿಸುವ ವಾರ್ಷಿಕ ಆದಾಯ 57 ಬಿಲಿಯನ್‌ ಡಾಲರ್‌ಗಳನ್ನು ದಾಟುತ್ತದೆ ಎಂದು ಅಧ್ಯಯನಗಳು ತಿಳಿಸುತ್ತವೆ. ಈ ಮೊತ್ತವು ಎಲ್ಲಾ ದೊಡ್ಡ ಹುದ್ದೆಗಳಲ್ಲಿ ದೊರೆಯುವ ಸಂಬಳಕ್ಕಿಂತಲೂ ಹೆಚ್ಚಿನ ಆದಾಯವನ್ನು ತಂದುಕೊಡುವ ಮೂಲವಾಗಿದೆ. ಫುಟ್‌ಬಾಲ್‌, ಬೇಸ್‌ಬಾಲ್‌, ಬ್ಯಾಸ್ಕೆಟ್‌ ಬಾಲ್‌ ಆಟಗಾರರೆಲ್ಲರ ಒಟ್ಟು ಆದಾಯಕ್ಕಿಂತಲೂ ಹೆಚ್ಚಿನ ಆದಾಯವನ್ನು ಪೋರ್ನೋಗ್ರಫಿ ತಂದುಕೊಡುತ್ತಿದೆ.

ಆಧುನಿಕ ಭಾರತದ ಪೋರ್ನೋಗ್ರಫಿ ಇತಿಹಾಸ:

ಭಾರತಕ್ಕೆ ಅಂತರ್ಜಾಲ ಹಾಗೂ ‘ವರ್ಡ್ಲ್‌ ವೈಡ್‌ ವೆಬ್‌’ನ ಪರಿಚಯವಾದ ನಂತರ ಭಾರತೀಯ ಪೋರ್ನೋಗ್ರಫಿ ಹೊಸ ಸ್ವರೂಪವನ್ನು ಪಡೆದುಕೊಂಡಿದೆ. ಅಶ್ಲೀಯ ವೀಡಿಯೋಗಳು ಮುನ್ನೆಲೆಗೆ ಬಂದು, ಡಿಸ್ಕ್‌, ಕ್ಯಾಸೆಟ್‌, ಪುಸ್ತಕಗಳು ತಮ್ಮ ನೆಲೆಯನ್ನು ಕಳೆದುಕೊಂಡಿವೆ. ಅಂತರ್ಜಾಲದಲ್ಲಿ ಪೋರ್ನ್‌ ವೀಡಿಯೋಗಳು ಸುಲಭವಾಗಿ ಕೈಗೆಟುಕುವಂತಿದ್ದು, ಒಂದೇ ಸಮಯಕ್ಕೆ ಲಕ್ಷಾಂತರ ವೀಡಿಯೋಗಳನ್ನು ಭಾರತೀಯ ಗ್ರಾಹಕರ ಮುಂದೆ ಅಂತರ್ಜಾಲ ತೆರೆದಿಟ್ಟಿದೆ.

2004ರ ವೇಳೆಗೆ ಭಾರತದ ಸುಮಾರು 5 ಮಿಲಿಯನ್‌ ಜನ ಪೋರ್ನ್‌ ವಿಡಿಯೋಗಳನ್ನು ವೀಕ್ಷಿಸುತ್ತಿದ್ದರು. 2007ರ ವೇಳೆಗೆ ಈ ಸಂಖ್ಯೆ 40 ಮಿಲಿಯನ್‌ಗಳನ್ನು ತಲುಪಿತ್ತು. ನಂತರದ ದಿನಗಳಲ್ಲಿ ಭಾರತೀಯ ಪೋರ್ನ್‌ ಪ್ರಿಯರ ಸಂಖ್ಯೆ ವರ್ಷಕ್ಕೆ ಶೇ.17ರಷ್ಟು ಏರಿಕೆಯಾಗುತ್ತಾ ಸಾಗಿತ್ತು. ಪೋರ್ನ್‌ ಪ್ರಿಯರಲ್ಲಿ ಯುವಜನರ ಸಂಖ್ಯೆಯೇ ದೊಡ್ಡದಾಗಿತ್ತು. ಇಂದಿಗೂ ಈ ಪರಿಸ್ಥಿತಿಯೇನು ಬದಲಾಗಿಲ್ಲ. ಸ್ಮಾರ್ಟ್‌ ಫೋನ್‌ ಹೊಂದಿರುವವರಲ್ಲಿ ಪೋರ್ನ್‌ ವೀಡಿಯೋ ವೀಕ್ಷಿಸದವರನ್ನು ಹುಡುಕುವುದೇ ತ್ರಾಸದಾಯಕ ಸಂಗತಿಯಾಗಿ ನಿಂತಿದೆ. ಇಂದು ಈ ಪೋರ್ನ್‌ ವೀಡಿಯೋ ವೀಕ್ಷಕರ ಸಂಖ್ಯೆಯ ಜತೆ ಸೆಕ್ಸ್‌ ಚಾಟ್‌ನಲ್ಲಿ ಭಾಗಿಯಾಗುತ್ತಿರುವವರ ಸಂಖ್ಯೆ ಪೈಪೋಟಿ ನಡೆಸುತ್ತಿದೆ.

ಪೋರ್ನೋಗ್ರಫಿ ತಲೆಗೆ ಅತ್ಯಾಚಾರಗಳ ಹೊಣೆ:

ಭಾರತದಲ್ಲಿ ‘ಪೋರ್ನ್‌’ಪ್ರಿಯತೆ; ಅತ್ಯಾಚಾರಕ್ಕೆ ಪೋರ್ನೋಗ್ರಫಿಯೇ ಕಾರಣ? 

ಭಾರತೀಯರು ತಮ್ಮ ಲೈಂಗಿಕ ಮನೋಕಾಮನೆಗಳನ್ನು ತೃಪ್ತಿಪಡಿಸಿಕೊಳ್ಳಲು ಪಾಶ್ಚಿಮಾತ್ಯ ಪೋರ್ನೋಗ್ರಫಿಯನ್ನು ಬಳಸಲು ಆರಂಭಿಸಿದ ನಂತರ ನಡೆಯುತ್ತಿರುವ ಅತ್ಯಾಚಾರಗಳೆಲ್ಲವನ್ನೂ ಈ ಪಾಶ್ಚಿಮಾತ್ಯ ಮೂಲದ ಪೋರ್ನೋಗ್ರಫಿಯ ತಲೆಗೆ ಕಟ್ಟಲಾಗುತ್ತಿದೆ. ಈ ಅಂಶ ಸತ್ಯವೇ ಎನ್ನುವುದರ ಕುರಿತು ಹಲವಾರು ಸಂಶೋಧನೆಗಳೂ ಕೂಡ ನಡೆಯುತ್ತಿವೆ. ಲೈಂಗಿಕ ದೌರ್ಜನ್ಯಗಳು ಹಾಗೂ ಪೋರ್ನ್‌ ಪ್ರಿಯರನ್ನು ಆಧಾರವಾಗಿಟ್ಟುಕೊಂಡು ಅಧ್ಯಯನಗಳು ನಡೆದಿವೆ. ಆದರೆ ಈ ಅಧ್ಯಯನಗಳಿಂದ ದೊರೆತ ವರದಿ ಪೋರ್ನೋಗ್ರಫಿಯನ್ನು ಸಮಾಜ ಸುಧಾರಕನನ್ನಾಗಿ ಮಾಡಿದೆ.

ಸಂಶೋಧನೆಗಳ ಪ್ರಕಾರ ಪೋರ್ನ್‌ ವೀಡಿಯೋಗಳನ್ನು ನೋಡುವವರು ಪೋರ್ನ್‌ ವೀಡಿಯೋ ನೋಡದವರಿಗಿಂತ ಕಡಿಮೆ ಅಪಾಯಕಾರಿ ವ್ಯಕ್ತಿಗಳು. ಪೋರ್ನ್‌ ವೀಡಿಯೋ ನೋಡುವವರು ಸಮಾಜದಲ್ಲಿನ ಅಲಿಖಿತ ಕಟ್ಟಳೆಗಳನ್ನು ಮೀರುವುದು ಕಡಿಮೆ ಹಾಗೂ ಸಮುದಾಯಕ್ಕೂ ಕೂಡ ಇವರಿಂದ ಅಪಾಯಗಳಾಗುವ ಸಾಧ್ಯತೆ ಕಡಿಮೆ ಎಂದು ಅಧ್ಯಯನಗಳು ತಿಳಿಸುತ್ತವೆ. ಇನ್ನೂ ಕೆಲವು ಅಧ್ಯಯನಗಳು ಹೇಳುವಂತೆ ಪೋರ್ನ್‌ ವೀಡಿಯೋ ನೋಡುವವರು ಹಾಗೂ ನೋಡದವರು ಇಬ್ಬರೂ ಕೂಡ ಅಷ್ಟೇ ಪ್ರಮಾಣದ ಅಪಾಯಕಾರಿಗಳು ಎಂದು ಹೇಳುತ್ತವೆ. ಆದರೆ ಈ ಅಧ್ಯಯನಗಳ ಸತ್ಯಾಸತ್ಯತೆಯನ್ನು ಕುರಿತೂ ಸಹ ಕಟು ವಿಮರ್ಶೆಗಳು ನಡೆದಿವೆ.

ಹಲವರನ್ನು ಪ್ರಯೋಗಾಲಯಗಳಿಗೆ ಕರೆತಂದು ಪರೀಕ್ಷೆಗೆ ಒಳಪಡಿಸಲಾಗಿದೆ. ಮಹಿಳೆಯರ ಕುರಿತಾದ ಅವರ ಮನೋಭಾವ, ಹಿಂಸೆ, ಅತ್ಯಾಚಾರ, ಆಕ್ರಮಣಶೀಲತೆ ಹಾಗೂ ಲೈಂಗಿಕತೆ ಕುರಿತಾಗಿ ಪರೀಕ್ಷೆ ನಡೆಸಲಾಗಿದೆ. ಈ ಪ್ರಯೋಗಗಳು ಅಕ್ರಮಣಶೀಲ ಪೋರ್ನ್‌ ವೀಡಿಯೋಗಳು ಮಾತ್ರ ಮಹಿಳೆಯರ ಮೇಲಿನ ಆಕ್ರಮಣಗಳನ್ನು ಹೆಚ್ಚಿಸುತ್ತವೆ ಎಂದಿವೆ. ಈ ಅಕ್ರಮಣಶೀಲತೆಗೆ ವ್ಯಕ್ತಿಗಳ ಮನಸ್ಥಿತಿಯೂ ಕೂಡ ಕಾರಣವಾಗುತ್ತದೆ ಎನ್ನಲಾಗಿದೆ.

ಪ್ರಯೋಗಾಲಯಗಳಲ್ಲಿನ ಪರೀಕ್ಷೆಗಳ ಹೊರತಾಗಿ ಸಾಮಾನ್ಯ ಜನರನ್ನೂ ಕೂಡ ಸಮೀಕ್ಷೆಗೆ ಒಳಪಡಿಸುವ ಕಾರ್ಯಗಳು ನಡೆದಿವೆ. ಸಮೀಕ್ಷೆಗೆ ಒಳಪಟ್ಟವರಲ್ಲಿ ಬಹುಪಾಲು ಜನ ನೇರವಾಗಿ ಅಥವಾ ಪರೋಕ್ಷವಾಗಿ ಪೋರ್ನೋಗ್ರಫಿ ಪ್ರಭಾವಕ್ಕೆ ಒಳಗಾದವರೇ ಅಗಿದ್ದಾರೆ. ಆದರೆ ಎಲ್ಲರ ಮೇಲೆ ಆಗಿರುವ ಪರಿಣಾಮ ಮಾತ್ರ ಒಂದೇ ಆಗಿಲ್ಲ. ಹೆಚ್ಚಿನ ಯುವಜನರು ಹೇಳುವ ಪ್ರಕಾರ ಪೋರ್ನೋಗ್ರಫಿ ಸಕಾರಾತ್ಮಕ ಪರಿಣಾಮ ಬೀರಿದ್ದು, ಲೈಂಗಿಕ ಶಿಕ್ಷಣವನ್ನು ಒದಗಿಸಿವೆ. ಪೋರ್ನೋಗ್ರಫಿ ತಪ್ಪು ಎಂಬ ಅಭಿಪ್ರಾಯವೂ ಕೂಡ ಹೆಚ್ಚು ಜನರಿಂದ ಲಭ್ಯವಾಗಿಲ್ಲ.

ಭಾರತದಲ್ಲಿ ಪೋರ್ನ್‌ ಪ್ರಿಯರು ಮತ್ತು ಅತ್ಯಾಚಾರಗಳು:

ಭಾರತದಲ್ಲಿಯೂ ಕೂಡ ಅಂತರ್ಜಾಲ ಬಳಕೆದಾರರು ಮತ್ತು ಅತ್ಯಾಚಾರ ಪ್ರಕರಣಗಳ ಸಂಖ್ಯೆಗಳನ್ನು ಪರಸ್ಪರ ಹೋಲಿಕೆ ಮಾಡಲಾಗಿದೆ. ಈ ಮೂಲಕ ಅತ್ಯಾಚಾರಗಳ ಸಂಖ್ಯೆ ಹೆಚ್ಚಳವಾಗುವಲ್ಲಿ ಪೋರ್ನೋಗ್ರಫಿಯ ಪ್ರಭಾವವೇನು ಎಂದು ತಿಳಿಯುವ ಪ್ರಯತ್ನವನ್ನು ನಡೆಸಲಾಗಿದೆ. ಅಧ್ಯಯನಗಳಿಂದ ದೊರೆತಿರುವ ಉತ್ತರ ಪೋರ್ನೋಗ್ರಫಿಯನ್ನು ನಿರಾಫರಾದಿಯನ್ನಾಗಿಸಿದೆ.

ಭಾರತದಲ್ಲಿ ‘ಪೋರ್ನ್‌’ಪ್ರಿಯತೆ; ಅತ್ಯಾಚಾರಕ್ಕೆ ಪೋರ್ನೋಗ್ರಫಿಯೇ ಕಾರಣ? 

ಈ ಮೇಲಿನ ಪಟ್ಟಿ ದೇಶದಲ್ಲಿ ನಡೆದ ಅತ್ಯಾಚಾರಗಳ ಸಂಖ್ಯೆಯನ್ನು ಒಳಗೊಂಡಿದೆ. ಭಾರತ ಉದಾರೀಕರಣಕ್ಕೆ ಒಳಪಡುವ ಮುಂಚೆ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಮತ್ತು ಉದಾರೀಕರಣದ ನಂತರ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆಯ ತುಲನಾತ್ಮಕ ಅಧ್ಯಯನವನ್ನು ಈ ಪಟ್ಟಿ ತೋರಿಸುತ್ತದೆ.

1990ರ ದಶಕಕ್ಕಿಂತಲೂ ಹಿಂದೆ ವರದಿಯಾಗುತ್ತಿದ್ದ ಲೈಂಗಿಕ ದೌರ್ಜನ್ಯಗಳ ಸಂಖ್ಯೆ 90ರ ದಶಕದ ನಂತರ ದ್ವಿಗುಣಗೊಂಡಿರುವುದನ್ನು ಇಲ್ಲಿ ಕಾಣಬಹುದು. ವಿಫುಲವಾದ ಅಂತರ್ಜಾಲ ಬಳಕೆ ಪೋರ್ನೋಗ್ರಫಿ ವೀಕ್ಷಕರನ್ನು ಹೆಚ್ಚಾಗಿಸಿರುವುದೇನೋ ನಿಜ. ಆದರೆ ಇದೇ ಅತ್ಯಾಚಾರಗಳ ಸಂಖ್ಯೆ ಹೆಚ್ಚಳವಾಗುಲು ಕಾರಣ ಎನ್ನಲಾಗುವುದಿಲ್ಲ. ಬದಲಾಗುತ್ತಾ ಸಾಗಿದ ಸಾಮಾಜಿಕ ವ್ಯವಸ್ಥೆಯಲ್ಲಿ ಅತ್ಯಾಚಾರಗಳು ಜಾಸ್ತಿ ಆದವು ಎನ್ನುವುದಕ್ಕಿಂತ ಅತ್ಯಾಚಾರದ ಪ್ರಕರಣಗಳು ಹೆಚ್ಚೆಚ್ಚು ಹೊರಬರಲು ಆರಂಭಿಸಿದವು ಎನ್ನುವ ವಾದವನ್ನು ಹಲವರು ಮುಂದಿಡುತ್ತಾರೆ.

ಭಾರತದಲ್ಲಿ ‘ಪೋರ್ನ್‌’ಪ್ರಿಯತೆ; ಅತ್ಯಾಚಾರಕ್ಕೆ ಪೋರ್ನೋಗ್ರಫಿಯೇ ಕಾರಣ? 

ಪೋರ್ನೋಗ್ರಫಿ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಾ ಸಾಗಿದ ನಂತರದ ದಿನಗಳಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳೂ ಕೂಡ ಹೆಚ್ಚಾಗುತ್ತಿವೆ ಎನ್ನುವವರಿಗೆ ಈ ಮೇಲಿನ ಪಟ್ಟಿ ಉತ್ತರ ನೀಡುತ್ತದೆ. 1995ರಿಂದ 2008ರವರೆಗಿನ ವಾರ್ಷಿಕ ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಪ್ರಕರಣಗಳು ಹಾಗೂ ವಾರ್ಷಿಕ ಸರಾಸರಿ ಅಂತರ್ಜಾಲ ಬಳಕೆದಾರರ ಸಂಖ್ಯೆಗಳ ನಡುವಿನ ತುಲನಾತ್ಮಕ ಅಧ್ಯಯನವನ್ನು ಈ ಮೇಲಿನ ಪಟ್ಟಿ ನಡೆಸಿದೆ.

1998ರಲ್ಲಿ ವರದಿಯಾದ ಅತ್ಯಾಚಾರಗಳ ಸಂಖ್ಯೆ 15,151. ಲೈಂಗಿಕ ದೌರ್ಜನ್ಯಗಳ ಸಂಖ್ಯೆ 8,053. ಜತೆಗೆ 1,31,338 ಮಹಿಳಾ ದೌರ್ಜನ್ಯದ ವರದಿಗಳು ದಾಖಲಾಗಿದ್ದವು. ಅಂದಿನ ದಿನಕ್ಕೆ ಅಂತರ್ಜಾಲವನ್ನು ಬಳಸುತ್ತಿದ್ದವರ ಸಂಖ್ಯೆ 1.40 ಲಕ್ಷ ತಲುಪಿತ್ತು. ಈ ಎರಡೂ ಅಂಕಿ ಸಂಖ್ಯೆಗಳನ್ನಿಡಿದು ನೋಡುವುದಾದರೆ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹಾಗೂ ಅಂತರ್ಜಾಲ ಬಳಕೆದಾರರ ಸಂಖ್ಯೆ ಹತ್ತಿರತ್ತಿರ ಇವೆ. ಆ ಕಾಲಕ್ಕೆ ಅಂತರ್ಜಾಲ ಸೌಲಭ್ಯವನ್ನು ಹೊಂದಿದ್ದು ಬಹುಪಾಲು ವಿದ್ಯಾವಂತ ಜನರೇ. ಹಾಗೆ ನೋಡುವುದಾದರೆ ಅತ್ಯಾಚಾರಗಳಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗಿರಬೇಕಿತ್ತು. ಆದರೆ ಸರಕಾರಿ ದಾಖಲೆಗಳ ಪ್ರಕಾರ ಅಪರಾಧಗಳಲ್ಲಿ ಭಾಗಿಯಾಗುವವರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿ ಅನಕ್ಷರಸ್ತರು ಅಥವಾ ಶಾಲಾ ವಿದ್ಯಾಭ್ಯಾಸವನ್ನು ಪೂರೈಸದವರೇ ಹೆಚ್ಚಾಗಿರುತ್ತಾರೆ. ಈ ಅಂಶ ಪೋರ್ನೋಗ್ರಫಿಯನ್ನು ತಪ್ಪಿತಸ್ಥ ಎಂದು ಪುರಸ್ಕರಿಸುವುದಿಲ್ಲ.

2007ರ ಅವಧಿಯಲ್ಲಿ 42 ಲಕ್ಷ ಜನ ಅಂತರ್ಜಾಲವನ್ನು ಬಳಕೆ ಮಾಡುತ್ತಿದ್ದರು. ಆ ವರ್ಷ ದಾಖಲಾಗಿದ್ದ ಮಹಿಳಾ ದೌರ್ಜನ್ಯಗಳ ಪ್ರಕರಣಗಳ ಸಂಖ್ಯೆ 18 ಲಕ್ಷ ದಾಟಿತ್ತು. ಅಂತರ್ಜಾಲ ಬಳಕೆದಾದರು ಮತ್ತು ಮಹಿಳಾ ದೌರ್ಜನ್ಯಗಳ ಸಂಖ್ಯೆಯಲ್ಲಿ ಮೂರು ಪಟ್ಟು ವ್ಯತ್ಯಾಸವಿದೆ. 2007ರ ವೇಳೆಗೂ ಸಹ ಶ್ರೀಮಂತ ಮತ್ತು ವಿದ್ಯಾವಂತ ವರ್ಗದ ಬಳಿಯೇ ಅಂತರ್ಜಾಲ ಸೌಲಭ್ಯವಿತ್ತು. ಅಂತರ್ಜಾಲವನ್ನು ಉಪಯೋಗಿಸುವವರೆಲ್ಲಾ ಪೋರ್ನ್‌ ಪ್ರಿಯರು ಎನ್ನಲಾಗುವುದಿಲ್ಲ. ಈ ಅಂಶಗಳನ್ನೆಲ್ಲಾ ಓರೆಗಿಟ್ಟು ನೋಡುವುದಾದರೆ ಭಾರತೀಯರ ಪೋರ್ನ್‌ಪ್ರೀಯತೆಯೇ ಅತ್ಯಾಚಾರಗಳಿಗೆ ಕಾರಣ ಎನ್ನುವುದನ್ನು ಸಮರ್ಥಿಸಲಾಗುವುದಿಲ್ಲ.

ಇಂದಿನ ದಿನಮಾನಗಳಿಗೆ ಹೋಲಿಸಿದರೆ ಭಾರತದ ದೊಡ್ಡ ಜನಸಂಖ್ಯೆ ಅಂತರ್ಜಾಲ ಸಂಪರ್ಕವನ್ನು ಹೊಂದಿದೆ. ಕೋಟ್ಯಾಂತರ ಜನ ಪ್ರತಿನಿತ್ಯ ಪೋರ್ನ್‌ಸೈಟ್‌ಗಳಿಗೆ ಭೇಟಿ ನೀಡುತ್ತಾರೆ. ಫೊರ್ನೋಗ್ರಫಿ ಕಾಮ ತೃಷೆಯನ್ನು ಉದ್ರೇಕಿಸುತ್ತದೆ, ಆಕ್ರಮಣಶೀಲತೆಯನ್ನು ಪ್ರಚೋಧಿಸುತ್ತದೆ ಎನ್ನುವುದಾದರೆ ಕೋಟ್ಯಾಂತರ ಪೋರ್ನ್‌ ಪ್ರಿಯರು ಅಕ್ರಮಣಾಶೀಲ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕಾಗಿತ್ತು. ಭಾರತದಲ್ಲಿ ಪೋರ್ನ್‌ ವೀಡಿಯೋಗಳನ್ನು ವೀಕ್ಷಿಸುವವರ ಪೈಕಿ ಶೇ.30ರಷ್ಟು ಭಾಗ ಮಹಿಳೆಯರಿದ್ದಾರೆ. ಅವರೂ ಕೂಡ ಪೋರ್ನ್‌ ವಿಡಿಯೋಗಳಿಂದ ಪ್ರಚೋದಿತರಾಗಿ ಪುರುಷರ ಮೇಲೆ ಆಕ್ರಮಣ ನಡೆಸಬೇಕಿತ್ತಲ್ಲವೇ? ಎಂಬ ಪ್ರಶ್ನೆಯೂ ಎದ್ದು ನಿಲ್ಲುತ್ತದೆ.

2015ರಲ್ಲಿ ಭಾರತೀಯರು ಅತಿ ಹೆಚ್ಚು ಹುಡುಕಿರುವ ಪೋರ್ನ್‌ ವೀಡಿಯೋಗಳ ಮಾಹಿತಿ.
2015ರಲ್ಲಿ ಭಾರತೀಯರು ಅತಿ ಹೆಚ್ಚು ಹುಡುಕಿರುವ ಪೋರ್ನ್‌ ವೀಡಿಯೋಗಳ ಮಾಹಿತಿ.

ಮಂತ್ರ ಮಹೋದಯರು ಹೇಳಿರುವಂತೆ ಚಿಕ್ಕ ಮಕ್ಕಳ ಮೇಲೆ ದೌರ್ಜನ್ಯಗಳಾಗುವುದಕ್ಕೆ ಪೋರ್ನ್‌ ವೀಡಿಯೋಗಳೇ ಕಾರಣ ಎನ್ನಲಾಗದು. ಕೆಲವು ಸಂಶೋಧನೆಗಳು ಈ ಅಂಶವನ್ನು ತಿಳಿಸಿವೆಯಾದರೂ ಅವಕ್ಕೆ ನಿರ್ಧಿಷ್ಟ ಉದಾಹರಣೆಗಳಿಲ್ಲ. ಭಾರತೀಯ ಪೋರ್ನ್‌ ಪ್ರಿಯರು ಹೆಚ್ಚಾಗಿ ಭೇಟಿ ನೀಡುವ ಪೋರ್ನ್‌ಸೈಟ್‌ಗಳ ಪೈಕಿ ಮಕ್ಕಳ ಹೆಸರಿಲ್ಲ. ವಯಸ್ಕ ಮಹಿಳೆಯ ಜತೆಗಿನ ಸಂಭೋಗವನ್ನು ವೀಕ್ಷಿಸಿದ ನಂತರ ಆ ಕಾಮತೃಷೆ ಮಕ್ಕಳ ಕಡೆಗೆ ತಿರುಗುತ್ತದೆ ಎನ್ನುವುದಕ್ಕೆ ಸ್ಪಷ್ಟ ನಿದರ್ಶನವಿಲ್ಲ.

ಸಾಮಾಜಿಕ ವ್ಯವಸ್ಥೆಯೊಳಗಿನ ‘ಮಾನ’ ಎಂಬ ಪರಿಕಲ್ಪನೆಯ ಕಾರಣದಿಂದ ಮಹಿಳಾ ದೌರ್ಜನ್ಯ ಪ್ರಕರಣಗಳು ಹೊರಬರುವುದೇ ಕಡಿಮೆ. ಈ ಹಿನ್ನಲೆಯಲ್ಲಿ ಭಾರತದಲ್ಲಿ ಮಹಿಳಾ ದೌರ್ಜನ್ಯಗಳು ಹೆಚ್ಚಾಗುತ್ತಿವೆಯೇ ಅಥವಾ ಹೊರಬರುತ್ತಿರುವ ದೌರ್ಜನ್ಯಗಳ ಸಂಖ್ಯೆ ಹೆಚ್ಚಾಗುತ್ತಿದೆಯೇ ಎಂಬ ಜಿಜ್ಞಾಸೆ ಇಂದಿಗೂ ಜೀವಂತವಾಗಿದೆ. ಅತ್ಯಾಚಾರದಂತ ಮಹಿಳಾ ದೌರ್ಜನ್ಯಗಳು ಇಂದು ನಿನ್ನೆಯವೇನಲ್ಲ. ಅನಾದಿ ಕಾಲದಿಂದಲೂ ಮಹಿಳೆಯರ ಶೋಷಣೆ ಭಾರತೀಯ ಇತಿಹಾಸದ ಅವಿಭಾಜ್ಯ ಅಂಗವಾಗಿಯೇ ನಿಂತಿದೆ.

ಇಂದಿಗೆ ಭಾರತದ ಚಿತ್ರಣ ಬದಲಾಗಿದ್ದು, ಕಾಮತೃಷೆ ಪೂರೈಕೆಗೆ ಪೋರ್ನೋಗ್ರಫಿ ಸಾಧನವಾಗಿ ನಿಂತಿದೆ. ಇಂದು ನಡೆಯುತ್ತಿರುವ ಅತ್ಯಾಚಾರ, ಮಹಿಳಾ ಶೋಷಣೆ, ಲೈಂಗಿಕ ದೌರ್ಜನ್ಯಗಳಲ್ಲಿ ಪೋರ್ನೋಗ್ರಫಿಯ ಪ್ರಭಾವವೂ ಇದೆ. ಹಲವಾರು ಕುಟುಂಬಗಳು ಒಡೆಯಲು ಪೋರ್ನೋಗ್ರಫಿ ಕಾರಣವಾಗಿದೆ. ಆದರೆ ಫ್ರೋನೋಗ್ರಫಿಯಿಂದಲೇ ಭಾರತದಲ್ಲಿ ಮಹಿಳಾ ದೌರ್ಜನ್ಯಗಳು ಹೆಚ್ಚಾಗಿವೆ ಎಂದರೆ ಕೋಟ್ಯಾಂತರ ಭಾರತೀಯ ಪೋರ್ನ್‌ ಪ್ರಿಯರಿಗೆ ಬೇಸರವಾದೀತು.