ಲಂಡನ್‌ನಲ್ಲೂ ಕರ್ನಾಟಕ ನೆನೆದ  ಮೋದಿಗೆ ಬ್ರಿಟನ್‌ ಭಾರತೀಯರಿಂದ ‘ಟೆರರಿಸ್ಟ್‌’ ಪಟ್ಟ 
COVER STORY

ಲಂಡನ್‌ನಲ್ಲೂ ಕರ್ನಾಟಕ ನೆನೆದ ಮೋದಿಗೆ ಬ್ರಿಟನ್‌ ಭಾರತೀಯರಿಂದ ‘ಟೆರರಿಸ್ಟ್‌’ ಪಟ್ಟ 

ಬ್ರಿಟನ್‌ನಲ್ಲಿದ್ದರೂ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆಯನ್ನು ಮರೆತಿಲ್ಲ. ಬಸವೇಶ್ವರರ ಪುತ್ಥಳಿಗೆ ಹೂಮಾಲೆ ಅರ್ಪಿಸಿ, ಹಾಡಿ ಹೊಗಳಿದ್ದಾರೆ. ಜತೆಗೆ ಬ್ರಿಟನ್‌ನಲ್ಲಿ ನೆಲೆಸಿರುವ ಭಾರತೀಯರಿಂದ ‘ಮರ್ಡರರ್‌’ ಎಂದು ಕರೆಸಿಕೊಂಡಿದ್ದಾರೆ.

ಲಂಡನ್‌ನಲ್ಲಿದ್ದರೂ ಕೂಡ ಭಾರತದ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಕರ್ನಾಟಕ ವಿಧಾನ ಸಭಾ ಚುನಾವಣೆಯನ್ನು ಮರೆತಿಲ್ಲ. ಲಂಡನ್‌ನಿಂದಲೇ ಕರ್ನಾಟಕದ ಲಿಂಗಾಯತರ ಮನ ಹಾಗೂ ಮತಗಳನ್ನು ಗೆಲ್ಲುವ ಪ್ರಯತ್ನವನ್ನು ಮೋದಿ ಮಾಡಿದ್ದಾರೆ. ಬಸವ ಜಯಂತಿ ಅಂಗವಾಗಿ ಲಂಡನ್‌ನಲ್ಲಿನ ಆಲ್ಬರ್ಟ್‌ ಎಂಬ್ಯಾಕ್‌ಮೆಂಟ್‌ ಉದ್ಯಾನವನದಲ್ಲಿರುವ ಬಸವೇಶ್ವರರ ಪುತ್ಥಳಿಗೆ ಮೋದಿ ಮಾಲಾರ್ಪಣೆ ಮಾಡಿದ್ದಾರೆ. ಬಸವಣ್ಣನವರನ್ನು ಹಾಡಿ ಹೊಗಳಿದ್ದಾರೆ.

ಲಂಡನ್‌ ಉದ್ಯಾನವನದಲ್ಲಿರುವ ಈ ಬಸವೇಶ್ವರರ ಪುತ್ಥಳಿಯನ್ನು 2015ರಲ್ಲಿ ಪ್ರಧಾನಿ ನರೇಂದ್ರ ಮೋದಿಯೇ ಉದ್ಘಾಟಿಸಿದ್ದರು. ಲಂಡನ್‌ ಮೂಲದ ಸ್ವಯಂ ಸೇವಾ ಸಂಸ್ಥೆ ಬಸವೇಶ್ವರ ಫೌಂಡೇಶನ್‌ ಬಸವೇಶ್ವರರ ಪುತ್ಥಳಿಯನ್ನು ಸ್ಥಾಪಿಸಿತ್ತು. ಈ ವರ್ಷವೂ ಕೂಡ ಇದೇ ಸಂಸ್ಥೆ ಬಸವೇಶ್ವರ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಚುನಾವಣೆ ಸನ್ನಿಹಿತವಾಗಿರುವ ಸಂದರ್ಭದಲ್ಲೇ ಬಂದಿರುವ ಬಸವ ಜಯಂತಿ ರಾಜಕೀಯ ಪಕ್ಷಗಳ ಚುನಾವಣೆ ತಂತ್ರಗಳಲ್ಲಿ ಒಂದಾಗಿ ಬಳಕೆಯಾಗಿದೆ. ಲಿಂಗಾಯತ ಧರ್ಮ ಸಂಸ್ಥಾಪಕ ಬಸವೇಶ್ವರ ಹುಟ್ಟುಹಬ್ಬ ಮತಗಳಿಕೆಯ ಮೂಲವಾಗಿ ಕಾಣಿಸಿಕೊಂಡಿದೆ.

ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಕರ್ನಾಟಕದಲ್ಲಿ ಬಸವಣ್ಣನವರನ್ನು ಸ್ಮರಿಸಿದರೆ, ಪ್ರಧಾನಿ ನರೇಂದ್ರ ಮೋದಿ ಲಂಡನ್‌ನಿಂದಲೇ ಲಿಂಗಾಯತರ ಮತಗಳಿಕೆಗೆ ಮುಂದಾಗಿದ್ದಾರೆ. ಲಿಂಗಾಯತರ ಧರ್ಮಗುರು ಎಂದೇ ಭಾವಿಸಿರುವ ಬಸವೇಶ್ವರರನ್ನು ಮೋದಿ ವಿಶ್ವದ ಜನರನ್ನು ಪ್ರೇರೇಪಿಸಿದ ವ್ಯಕ್ತಿ ಎಂದು ಕರೆದಿದ್ದಾರೆ.

“ಭಗವಾನ್ ಬಸವೇಶ್ವರರಿಗೆ ಅವರ ಜಯಂತಿಯಂದು ನಾನು ತಲೆ ಬಾಗುತ್ತೇನೆ. ನಮ್ಮ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಅವರು ಕೇಂದ್ರಸ್ಥಾನ ಅಲಂಕರಿಸುತ್ತಾರೆ. ಸಾಮಾಜಿಕ ಸೌಹಾರ್ದತೆ, ಸಹೋದರತ್ವ, ಏಕತೆ ಮತ್ತು ಸಹಾನುಭೂತಿಗೆ ಅವರು ನೀಡಿದ ಪ್ರಾಮುಖ್ಯತೆ, ನಮಗೆ ಸದಾ ಪ್ರೇರಣೆ,” ಎಂದು ಪ್ರಧಾನಿ ಮೋದಿ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಸಂದೇಶವನ್ನು ಕನ್ನಡದಲ್ಲೂ ಬರೆದುಕೊಂಡಿದ್ದು, ಚುನಾವಣೆಯ ಹೊಸ್ತಿಲಲ್ಲಿ ಕನ್ನಡಿಗರನ್ನು ಒಲಿಸುವ ಪ್ರಯತ್ನವೂ ನಡೆದಿದೆ.

ಮತ್ತೊಂದು ಟ್ವಿಟ್‌ನಲ್ಲಿ ಮೋದಿ "ನನ್ನ ಯು. ಕೆ. ಪ್ರವಾಸದಲ್ಲಿ ಭಗವಾನ್ ಬಸವೇಶ್ವರ ಅವರಿಗೆ ನಮನ ಸಲ್ಲಿಸುತ್ತಿರುವುದು ನನಗೆ ಸಿಕ್ಕ ಗೌರವ ಎಂದೇ ಭಾವಿಸುತ್ತೇನೆ. ಭಗವಾನ್ ಬಸವೇಶ್ವರ ಅವರ ಆದರ್ಶಗಳು ವಿಶ್ವದಾದ್ಯಂತ ಮನುಕುಲಕ್ಕೆ ಪ್ರೇರೇಪಣೆಯಾಗಿವೆ,” ಎಂದಿದ್ದಾರೆ. ಜತೆಗೆ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡುತ್ತಿರುವ ಫೋಟೊಗಳನ್ನು ಹಾಕಿದ್ದಾರೆ. ಈ ಸಂದೇಶವೂ ಕೂಡ ಕನ್ನಡದಲ್ಲಿದೆ.

ಕರ್ನಾಟಕ ಚುನಾವಣೆಯಲ್ಲಿ ಲಿಂಗಾಯತರ ಮತಗಳ ಪ್ರಾಮುಖ್ಯತೆಯನ್ನು ಮನಗಂಡಿರುವ ಮೋದಿ, ಹಿಂದಿನಿಂದಲೂ ಬಿಜೆಪಿ ಪರವಾಗಿದ್ದ ಲಿಂಗಾಯತರನ್ನು ಬಿಜೆಪಿ ಜತೆಗೆ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. 2019ರ ಲೋಕಸಭಾ ಚುನಾವಣೆಯ ಮೇಲೂ ಕರ್ನಾಟಕದ ಚುನಾವಣೆ ದೊಡ್ಡ ಪರಿಣಾಮ ಬೀರಬಹುದಾದ ಕಾರಣದಿಂದಾಗಿ ಶತಾಯಗತಾಯ ಕರ್ನಾಟಕವನ್ನು ಕೇಸರಿ ಪಾಳಯಕ್ಕೆ ಸೇರಿಸಿಕೊಳ್ಳಲೇ ಬೇಕಾದ ಅನಿವಾರ್ಯ ಪ್ರಧಾನಿ ಮೋದಿ ಮುಂದಿದೆ.

ಜತೆಗೆ ಜಿಜೆಪಿಯ ಮಿಶನ್‌ ‘ಕಾಂಗ್ರೆಸ್‌ ಮುಕ್ತ ಭಾರತದ ನಿರ್ಮಾಣ’ ಸಾಧ್ಯವಾಗಲು ಕರ್ನಾಟಕದಲ್ಲಿ ಬಿಜೆಪಿ ಗೆಲ್ಲುವುದು ಅತ್ಯಗತ್ಯ. ಕಾಂಗ್ರೆಸ್‌ ಪಕ್ಷ ಆಡಳಿತದಲ್ಲಿರುವ ಕೆಲವೇ ರಾಜ್ಯಗಳಲ್ಲಿ ದೊಡ್ಡದು ಎನ್ನಿಸಿಕೊಂಡಿರುವ ಕರ್ನಾಟಕವನ್ನು ತಮ್ಮದಾಗಿಸಿಕೊಳ್ಳಲು ಮತದಾರರನ್ನು ಓಲೈಸುತ್ತಿರುವ ಮೋದಿ, ಅಮಿತ್‌ ಶಾ ಜೋಡಿ ಈಗ ಬಸವಣ್ಣನವರನ್ನು ದಾಳವನ್ನಾಗಿಸಿಕೊಂಡಿದೆ.

#GoBackModi :

ಒಂದೆಡೆ ಚುನಾವಣೆ ಎದುರಿಸಿ ಕರ್ನಾಟಕದ ಸಿಎಂ ಪಟ್ಟವನ್ನು ಗಟ್ಟಿಗೊಳಿಸಿಕೊಳ್ಳಲು ಬಿಜೆಪಿ ಶ್ರಮಿಸುತ್ತಿದ್ದರೆ, ರಾಷ್ಟ್ರದೆಲ್ಲಡೆ ಬಿಜೆಪಿ ವಿರೋಧಿ ಅಲೆ ಬೆಳೆಯುತ್ತಾ ಸಾಗಿದೆ. ಈ ಅಲೆ ಸಪ್ತ ಸಾಗರಗಳನ್ನು ದಾಟಿ ದೂರದ ಲಂಡನ್‌ನಲ್ಲೂ ಪ್ರತಿಧ್ವನಿಸಿದೆ. ಲಂಡನ್‌ನಲ್ಲಿ ವಾಸಿಸುತ್ತಿರುವ ನೂರಾರು ಭಾರತೀಯರು ಲಂಡನ್‌ಗೆ ಮೋದಿ ಆಗಮನವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ‘ಗೋ ಬ್ಯಾಕ್‌ ಮೋದಿ’ ಎಂದು ಘೋಷಣೆಗಳನ್ನು ಕೂಗಿದ್ದಾರೆ.

ಲಂಡನ್‌ನ ಪ್ರಧಾನ ಮಂತ್ರಿ ತೆರೆಸಾ ಮೇ ಹಾಗೂ ನರೇಂದ್ರ ಮೋದಿಯವರ ಭೇಟಿಗೆ ನಿಗಧಿಯಾಗಿದ್ದ ಡೌನಿಂಗ್‌ ಸ್ಟ್ರೀಟ್‌ನಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು ಮೋದಿಗೆ ‘ಮೋದಿ ಗೋ ಬ್ಯಾಕ್‌’ ಮತ್ತು ನಾವು ಮೋದಿಯ ಧ್ವೇಶ ಮತ್ತು ದುರಾಸೆಯ ಅಜೆಂಡಾದ ವಿರುದ್ಧ ನಿಲ್ಲುತ್ತೇವೆ,” ಎಂಬ ಘೋಷಣೆಗಳನ್ನು ಒಳಗೊಂಡಿದ್ದ ಭಿತ್ತಿಪತ್ರಗಳನ್ನು ಪ್ರದರ್ಶಿಸಿದ್ದಾರೆ.

ಲಂಡನ್‌ನಲ್ಲೂ ಕರ್ನಾಟಕ ನೆನೆದ  ಮೋದಿಗೆ ಬ್ರಿಟನ್‌ ಭಾರತೀಯರಿಂದ ‘ಟೆರರಿಸ್ಟ್‌’ ಪಟ್ಟ 

ಬ್ರಿಟನ್‌ನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ವಕೀಲ ನವೀಂದ್ರ ಸಿಂಗ್‌, “ಭಾರತದ ಸರಕಾರ ಭಾರತೀಯರಿಗೆ ಏನನ್ನೂ ಮಾಡುತ್ತಿಲ್ಲ. ಆಡಳಿತಕ್ಕೇರಿ 4 ವರ್ಷಗಳು ಕಳೆದರೂ ಕೂಡ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಬಲ್ಲ ನೀತಿಗಳು ಜಾರಿಗೆ ಬಂದಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನಾಕಾರರು ಮೋದಿಯನ್ನು ಹಿಂದೂ ರಾಷ್ಟ್ರೀಯತಾವಾದಿ ಎಂದು ದೂರಿದ್ದಾರೆ. ಭಾರತದಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಚಿಕ್ಕ ಮಕ್ಕಳ ಮೇಲಿನ ಅತ್ಯಾಚಾರವನ್ನು ವಿರೋಧಿಸಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ್ದಾರೆ. ಕಾಶ್ಮೀರದ ಕತುವಾ ಮತ್ತು ಉತ್ತರ ಪ್ರದೇಶದ ಉನ್ನಾವೋಗಳಲ್ಲಿ ನಡೆದ ಅತ್ಯಾಚಾರ ಪ್ರಕರಣಗಳನ್ನು ಗಟ್ಟಿಯಾಗಿ ಪ್ರಶ್ನಿಸಿದ್ದಾರೆ. ಅತ್ಯಾಚಾರ ಪ್ರಕರಣಗಳಲ್ಲಿ ಪೊಲೀಸರು ಮತ್ತು ರಾಜಕಾರಣಿಗಳು ಭಾಗಿಯಾಗಿರುವುದನ್ನು ಲಂಡನ್‌ ಭಾರತೀಯರು ಖಂಡಿಸಿದ್ದಾರೆ. ಕರ್ನಾಟಕದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯನ್ನೂ ಕೂಡ ಬ್ರಿಟನ್‌ ಭಾರತೀಯರು ನೆನಪಿಸಿಕೊಂಡಿದ್ದಾರೆ.

ಅತ್ಯಾಚಾರಗಳಷ್ಟೇ ಅಲ್ಲದೇ ಭಾರತದಲ್ಲಿ ದಲಿತ ಮತ್ತು ಅಲ್ಪಸಂಖ್ಯಾಂತರ ಮೇಲಿನ ದೌರ್ಜನ್ಯಗಳ ಕುರಿತು ಪ್ರತಿಭಟನಾಕಾರರು ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಪ್ರಶ್ನಿಸಿದ್ದಾರೆ. ಸರಕಾರ ಮತ್ತು ಸಂಘ ಪರಿವಾರಗಳನ್ನು ಪ್ರಶ್ನಿಸುವವರಿಗೆ ‘ರಾಷ್ಟ್ರ ವಿರೋಧಿ’ ಪಟ್ಟ ಕಟ್ಟುತ್ತಿರುವ ಬಿಜೆಪಿ ನಡೆಯನ್ನು ವಿರೋಧಿಸಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಜತೆಗೆ ಖಲಿಸ್ತಾನ ಮತ್ತು ಕಾಶ್ಮೀರದ ಸ್ವಾತಂತ್ರವನ್ನು ಪ್ರತಿಪಾದಿಸುವ ಪ್ರತಿಭಟನೆಗಳೂ ಕೂಡ ಪ್ರಧಾನಿ ಮೋದಿಯನ್ನು ಎದುರುಗೊಂಡಿವೆ. ಭಾರತದ ಧ್ವಜವನ್ನು ಹರಿದು ಹಾಕಿ ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.

2002ರಲ್ಲಿ ನರೇಂದ್ರ ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಗೋಧ್ರಾ ನರಮೇಧ ನಡೆದಿತ್ತು. ಈ ನರಮೇಧದಲ್ಲಿ ಮೋದಿಯವರ ಪಾತ್ರವೂ ಇದೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಬ್ರಿಟನ್‌ ಮೋದಿ ತನ್ನ ನೆಲಕ್ಕೆ ಕಾಲಿಡುವುದನ್ನು ನಿಷೇಧಿಸಿತ್ತು. 2012ರ ನಂತರ ಮೋದಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವೊಂದರ ಪ್ರಮುಖ ನಾಯಕರಾಗಿ ರೂಪುಗೊಳ್ಳತೊಡಗಿದ ನಂತರ ತನ್ನ ನಿಷೇಧವನ್ನು ಹಿಂತೆಗೆದುಕೊಂಡಿತ್ತು. ಮೋದಿ ಪ್ರಧಾನ ಮಂತ್ರಿಯಾದ ನಂತರ 2ನೇ ಬಾರಿಗೆ ಲಂಡನ್‌ ನೆಲದ ಮೇಲೆ ಕಾಲಿಟ್ಟಿದ್ದಾರೆ.

ಪ್ರಧಾನಿ ಮೋದಿಯವರ 2ನೇ ಬಾರಿಯ ಬ್ರಿಟನ್‌ ಪ್ರವಾಸ ಬಿಜೆಪಿಯ ಎದೆಯಲ್ಲಿ ಅಳುಕು ಮೂಡಿಸಿದೆ. ಭಾರತೀಯ ಜನತಾ ಪಕ್ಷದ ಮಾನವನ್ನು ಬ್ರಿಟನ್‌ ಭಾರತೀಯರು ಹರಾಜು ಹಾಕಿದ್ದಾರೆ. ಪ್ರತಿಭಟನಾಕಾರರ ಘೋಷಣೆಗಳ ಮುಂದೆ ಮೋದಿಗೆ ದೊರೆತ ಸ್ವಾಗತ ಸದ್ದು ಕೇಳಿಸದಾಗಿದೆ. ಮೋದಿಯನ್ನು ‘ಮರ್ಡರರ್‌’ ಎಂದಿರುವ ಬ್ರಿಟನ್‌ ಭಾರತೀಯರ ಆಕ್ರೋಶ ವಿಶ್ವದೆಲ್ಲಡೆ ಸುದ್ದಿಯಾಗಿದೆ.