ಮೀಟ್‌ Mr. ‘ಸ್ವಘೋಷಿತ ಐಜಿಪಿ’ ರಮಾನಂದ ಸಾಗರ್‌; ಇದು ಕಳ್ಳ ಕಸುಬಿಯ ದುನಿಯಾ 
COVER STORY

ಮೀಟ್‌ Mr. ‘ಸ್ವಘೋಷಿತ ಐಜಿಪಿ’ ರಮಾನಂದ ಸಾಗರ್‌; ಇದು ಕಳ್ಳ ಕಸುಬಿಯ ದುನಿಯಾ 

ಸಮಾಜ ಸೇವೆ ಹಾಗೂ ಸಂಘಟನೆಯ ಹೆಸರು ಹೇಳಿಕೊಂಡು ಒಬ್ಬ ವ್ಯಕ್ತಿ ಹೇಗೆಲ್ಲ ಕಾಯ್ದೆ ಕಾನೂನುಗಳನ್ನು ದುರುಪಯೋಗ ಪಡಿಸಿಕೊಂಡು ಬೆಳೆಯಬಹುದು ನಂತರ ಸಮಾಜಕ್ಕೆ ಯಾವ ರೀತಿ ಮಾರಕವಾಗಬಹುದು ಎನ್ನುವುದಕ್ಕೆ ಈ ಸ್ಟೋರಿ ಉತ್ತಮ ಉದಾಹರಣೆ.

ಇತ್ತೀಚೆಗೆ ನಾಯಿಕೊಡೆಗಳಂತೆ ಸಂಘಟನೆಗಳು ಹುಟ್ಟಿಕೊಂಡಿವೆ. ಇವುಗಳಲ್ಲಿ ಜನಪರವಾಗಿ ಕೆಲವೇ ಕೆಲವು ಸಂಘಟನೆಗಳಾದರೆ ಇನ್ನುಳಿದವು ಬರೀ ವಸೂಲಿ ಮಾಡಲೆಂದೇ ಹುಟ್ಟಿಕೊಂಡಿವೆ. ಸಂಘಟನೆಯ ನೆರಳಿನಲ್ಲಿ ಹಣ ಮಾಡುವುದು, ಗೂಂಡಾಗಿರಿ ನಡೆಸುವುದು, ಕಾಯ್ದೆ ಕಾನೂನುಗಳನ್ನು ಗಾಳಿಗೆ ತೂರಿ ಮನಬಂದಂತೆ ಮೆರೆಯುವುದು ಇತ್ತೀಚೆಗೆ ಸಾಮಾನ್ಯವಾಗಿ ಬಿಟ್ಟಿದೆ. ಹೀಗೆ ಸಮಾಜ ಸೇವೆ ಹಾಗೂ ಸಂಘಟನೆಯ ಹೆಸರು ಹೇಳಿಕೊಂಡು ಒಬ್ಬ ವ್ಯಕ್ತಿ ಹೇಗೆಲ್ಲ ಕಾಯ್ದೆ ಕಾನೂನುಗಳನ್ನು ದುರುಪಯೋಗ ಪಡಿಸಿಕೊಂಡು ಬೆಳೆಯಬಹುದು ನಂತರ ಸಮಾಜಕ್ಕೆ ಯಾವ ರೀತಿ ಮಾರಕವಾಗಬಹುದು ಎನ್ನುವುದಕ್ಕೆ ಈ ಸ್ಟೋರಿ ಉತ್ತಮ ಉದಾಹರಣೆ.

ಮಹಿಳಾ ಆಯೋಗದ ದೂರು:

ಆರ್‌ಟಿಐ ಕಾರ್ಯಕರ್ತನ ಸೋಗಿನಲ್ಲಿ ರಮಾನಂದ ಸಾಗರ್‌ ಎನ್ನುವ ವ್ಯಕ್ತಿಯೊಬ್ಬ ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರ ಮೇಲೆ ಗೂಂಡಾಗಿರಿ ನಡೆಸುತ್ತಿರುವ ಬಗ್ಗೆ ‘ವಿಜಯ ಕರ್ನಾಟಕ’ ವಿವರವಾದ ವರದಿ ಪ್ರಕಟಿಸಿತ್ತು.

ಆ ವರದಿ ಗಮನಿಸಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರೆದುರು ಆಸ್ಪತ್ರೆಯ ಸಿಬ್ಬಂದಿಗಳು ತಮ್ಮ ನೋವನ್ನು ಹಂಚಿಕೊಂಡಿದ್ದರು. ಇದನ್ನು ಆಲಿಸಿದ ನಂತರ ಆರೋಪಿಯ ವಿರುದ್ಧ ಕೂಲಂಕುಷ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನಗರ ಪೊಲೀಸ್‌ ಕಮಿಷನರ್‌ ಟಿ. ಸುನೀಲ್‌ ಕುಮಾರ್‌ ಮತ್ತು ಡಿಸಿಪಿ ಬೋರಲಿಂಗಯ್ಯ ಅವರಿಗೆ ಮಹಿಳಾ ಆಯೋಗ ದೂರು ನೀಡಿತ್ತು.

“ಆಯೋಗಕ್ಕೆ ದೂರು ನೀಡಿದ ಕಾರಣಕ್ಕೆ ರಮಾನಂದ್ ಸಾಗರ್‌ ಆಸ್ಪತ್ರೆಯ ವೈದ್ಯರೊಬ್ಬರಿಗೆ ಕರೆ ಮಾಡಿ, ‘ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಈ ಕುರಿತು ವೈದ್ಯರ ಪತ್ನಿ ಸಾಕ್ಷಿ (ಹೆಸರು ಬದಲಿಸಲಾಗಿದೆ) ಎನ್ನುವವರು ಆಯೋಗಕ್ಕೆ ಲಿಖಿತ ದೂರು ನೀಡಿದ್ದಾರೆ,” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ದೂರಿನ ಸಾರಾಂಶ:

‘‘ನಾನು ಜಯನಗರ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವೈದ್ಯರು ಮತ್ತು ಸಿಬ್ಬಂದಿಯು ರಮಾನಂದ ಸಾಗರ್‌ ಎಂಬ ವ್ಯಕ್ತಿಯು ಆರ್‌ಟಿಐ ಕಾರ್ಯಕರ್ತನ ಸೋಗಿನಲ್ಲಿ ವೈದ್ಯರಿಗೆ ನೀಡುತ್ತಿರುವ ಕಿರುಕುಳದ ಬಗ್ಗೆ ನನ್ನ ಬಳಿ ದೂರಿದ್ದಾರೆ. ರಾತ್ರಿ ಹೊತ್ತಿನಲ್ಲಿ ಆಸ್ಪತ್ರೆಗೆ ನುಗ್ಗುವ ಈತ ಮಹಿಳಾ ವೈದ್ಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾನೆ. ಈತನಿಂದ ನಿರಂತರವಾಗಿ ಆಗುತ್ತಿರುವ ತೊಂದರೆಯ ಬಗ್ಗೆ ಇಡೀ ಸಿಬ್ಬಂದಿ ವರ್ಗ ನನ್ನ ಬಳಿ ವಿವರವಾಗಿ ನೋವು ತೋಡಿಕೊಂಡಿದೆ. ವೈದ್ಯರ ಮೇಲೆ ದೌರ್ಜನ್ಯ ನಡೆಸುತ್ತಿರುವುದಲ್ಲದೇ, ಅವರ ಖಾಸಗಿ ವಿಷಯಗಳನ್ನು ಸಂಗ್ರಹಿಸುತ್ತೀನಿ ಎನ್ನುತ್ತಾ ಕಿರುಕುಳ ನೀಡುತ್ತಿದ್ದಾನೆ. ‘ದುಡ್ಡು ಕೊಡುತ್ತೀನಿ, ಬಂದು ನನ್ನ ಜತೆ ಮಲಗಿ’ ಎಂದು ವೈದ್ಯರಿಗೆ ಕರೆಯುವ ಮಟ್ಟಕ್ಕೂ ಈತ ಇಳಿದಿರುವುದು ದೊಡ್ಡ ಅಪಾಯದ ಮುನ್ಸೂಚನೆ. ಆದ್ದರಿಂದ ರಮಾನಂದ್‌ ಸಾಗರ್‌ ಎನ್ನುವ ವ್ಯಕ್ತಿಯ ವಿರುದ್ಧ ಕೂಲಂಕುಷ ತನಿಖೆ ನಡೆಸಿ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು,’’ ಎಂದು ಡಿಸಿಪಿ ಬೋರಲಿಂಗಯ್ಯ ಅವರಿಗೆ ನೀಡಿರುವ ದೂರಿನಲ್ಲಿ ಸೂಚಿಸಲಾಗಿತ್ತು.

ದೂರಿನ ಪ್ರತಿ
ದೂರಿನ ಪ್ರತಿ
ದೂರಿನ ಪ್ರತಿ 
ದೂರಿನ ಪ್ರತಿ 

ಈ ಕುರಿತು ಡಿಸಿಪಿ ಬೋರಲಿಂಗಯ್ಯ ಅವರ ಪ್ರತಿಕ್ರಿಯೆಗೆ ಸಮಾಚಾರ ಕರೆ ಮಾಡಿದಾಗ,“ರಮಾನಂದ ಸಾಗರ್ ಎನ್ನುವ ವ್ಯಕ್ತಿಯು ಹಲ್ಲೆ ಮಾಡಿದ್ದರ ಕುರಿತು ದೂರಿನಲ್ಲಿ ಯಾವುದೇ ಉಲ್ಲೇಖವಿಲ್ಲ ಆದರೆ ಆತ ಫೋನಿನಲ್ಲಿ ಬೆದರಿಕೆ ಹಾಕಿದ್ದಾರೆ ಎನ್ನುವ ದೂರು ಕೊಟ್ಟಿದ್ದಾರೆ. ಇದರ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ತಿಲಕ್ ನಗರದ ಇನ್‌ಸ್ಪೆಕ್ಟರ್‌ ಅವರಿಗೆ ಸೂಚಿಸಿದ್ದೇನೆ,” ಎನ್ನುತ್ತಾರೆ.

ಹೀಗೆ ಡಿಸಿಪಿ ಬೋರಲಿಂಗಯ್ಯ ಸೂಕ್ತ ಕ್ರಮ ಜರುಗಿಸುವ ಬಗ್ಗೆ ಸಂಶಯಗಳು ಮೂಡಿವೆ. ಅಲ್ಲದೇ ದೂರು ನೀಡಿ ಒಂದು ವಾರವೇ ಕಳೆದರೂ ಆರೋಪಿ ಮೇಲೆ ಇನ್ನೂ ಯಾವುದೇ ಕ್ರಮ ಕೈಗೊಳ್ಳದ ಕುರಿತು ಅಸಾಮಾಧಾನಗೊಂಡ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ, ಸೋಮವಾರ ಖುದ್ದಾಗಿ ನಗರ ಪೊಲೀಸ್ ಕಮೀಷನರ್ ಅವರನ್ನು ಭೇಟಿಯಾಗಿ ರಮಾನಂದ ಸಾಗರ್ ಎನ್ನುವ ವ್ಯಕ್ತಿಯ ಗೂಂಡಾಗಿರಿ ಬಗ್ಗೆ ಚರ್ಚಿಸಿ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ‘ಸಮಾಚಾರ’ದ ಜೊತೆಗೆ ಮಾತನಾಡಿದ ನಾಗಲಕ್ಷ್ಮೀಬಾಯಿ, “ವೈದ್ಯಾಧಿಕಾರಿಗಳು ಆತನಿಗೆ (ರಮಾನಂದ ಸಾಗರ್‌ಗೆ) ಹೆದರಿಕೊಂಡು ಆತನ ಮೇಲೆ ದೂರು ನೀಡಲು ಮುಂದೆ ಬರುತ್ತಿರಲಿಲ್ಲ. ಆತನ ಗೂಂಡಾ ವರ್ತನೆ ಸುಮಾರು ವರ್ಷದಿಂದಲೇ ನಡೆಯುತ್ತಿತ್ತು ಎನ್ನುವ ಮಾಹಿತಿ ಈಗ ದೊರೆಯುತ್ತಿದೆ. ಜಯನಗರ ಜನರಲ್ ಆಸ್ಪತ್ರೆಗೆ ಭೇಟಿ ನೀಡಿದಾಗ ಅಲ್ಲಿನ ಭಯದ ವಾತಾವರಣ ನನ್ನ ಗಮನಕ್ಕೆ ಬಂತು. ಮಹಿಳಾ ವೈದ್ಯರ ಜೊತೆಗೆ ಹಾಗೂ ನರ್ಸ್‌ಗಳ ಜೊತೆಗೆ ಆತ ಅವಾಚ್ಯವಾಗಿಯೂ ಮಾತನಾಡಿದ ಕುರಿತು ಅನೇಕ ಮಹಿಳಾ ಸಿಬ್ಬಂಧಿಗಳು ಅಳಲು ತೊಡಿಕೊಂಡಿದ್ದಾರೆ,” ಎನ್ನುತ್ತಾರೆ ಮಹಿಳಾ ಆಯೋಗ ಅಧ್ಯಕ್ಷೆ.

“ರಮಾನಂದ ಸಾಗರ್ ಬಂದ ತಕ್ಷಣ ಆಸ್ಪತ್ರೆಯ ಸಿಬ್ಬಂದಿ ಹೆದರಿ ಬಚ್ಚಿಟ್ಟುಕೊಳ್ಳುವಷ್ಟು ಭಯ ಸೃಷ್ಟಿಸಿದ್ದಾನೆ. ಅಲ್ಲದೇ ಆಸ್ಪತ್ರೆಯ ಕಾವಲು ಸಿಬ್ಬಂದಿಯನ್ನೂ ಆತ ರಕ್ತ ಬರುವ ಹಾಗೆ ಹೊಡೆದಿದ್ದಾನೆ. ಆ ಕುರಿತು ಸಿಸಿ ಕ್ಯಾಮೆರಾದಲ್ಲಿಯೂ ವಿಡಿಯೋ ದಾಖಲಾಗಿದೆ. ಇದರ ಬಗ್ಗೆ ಆಯೋಗಕ್ಕೆ ಏ.16ರಂದು ಮತ್ತೊಂದು ದೂರು ಬಂದಿದೆ. ಈ ಕುರಿತು ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬೇಕಿತ್ತು,” ಎನ್ನುತ್ತಾರವರು.

ಜೀವ ಬೆದರಿಕೆಯ ದೂರು:

“ನನ್ನ ಪತಿ‌, ಜಯನಗರ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಒಂದು ತಿಂಗಳಿನಿಂದ ರಮಾನಂದ್‌ ಸಾಗರ್‌ ಎನ್ನುವ ವ್ಯಕ್ತಿ ಮಾನಸಿಕ ಕಿರುಕುಳ ನೀಡುತ್ತಿದ್ದಾನೆ. ಇದರಿಂದ ನನ್ನ ಪತಿ ಮಾನಸಿಕವಾಗಿ ಜರ್ಜರಿತವಾಗಿದ್ದು ಆತಂಕದ ಪರಿಸ್ಥಿತಿ ಉಂಟಾಗಿದೆ. ಏ.11 ರಂದು ಆಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷರು ಭೇಟಿ ನೀಡಿದ್ದ ಸಂದರ್ಭದಲ್ಲಿ ಉಳಿದ ವೈದ್ಯ ಸಿಬ್ಬಂದಿಯಂತೆ ನನ್ನ ಪತಿ ಕೂಡ ಸಾಗರ್‌ನ ಕಿರುಕುಳದ ಬಗ್ಗೆ ಮಾಹಿತಿ ನೀಡಿದ್ದರು. ಸಂಜೆ 7 ಗಂಟೆಗೆ 9886129269 ನಂಬರಿನಿಂದ ನನ್ನ ಪತಿಗೆ ಕರೆ ಮಾಡಿದ್ದ ಆತ, ‘‘ನಿನ್ನನ್ನು ಸುಮ್ಮನೆ ಬಿಡುವುದಿಲ್ಲ’’ ಎಂದು ಅವಾಚ್ಯ ಮಾತುಗಳಿಂದ ಜೀವ ಬೆದರಿಕೆ ಹಾಕಿದ್ದಾನೆ. ಇದರಿಂದ ನನ್ನ ಪತಿ ಆತಂಕಗೊಂಡಿದ್ದು, ಸಹದ್ಯೋಗಿ ವೈದ್ಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯವನ್ನು ಮಹಿಳಾ ಆಯೋಗದ ಅಧ್ಯಕ್ಷರ ಗಮನಕ್ಕೆ ತಂದಿದ್ದೆ ತಪ್ಪಾಯಿತೇ ಎಂದು ಗಾಬರಿಯಾಗಿದ್ದಾರೆ. ‘ಆತ ನನ್ನನ್ನು ಸುಮ್ಮನೆ ಬಿಡುವುದಿಲ್ಲ. ನಾನೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎನ್ನುತ್ತಿದ್ದಾರೆ. ರಮಾನಂದ ಸಾಗರ್‌ ಎನ್ನುವ ವ್ಯಕ್ತಿಯಿಂದ ನನ್ನ ಪತಿ ಮತ್ತು ಸಂಸಾರ ಉಳಿಸುತ್ತೀರಿ ಎನ್ನುವ ನಂಬಿಕೆಯಿಂದ ದೂರು ನೀಡುತ್ತಿದ್ದೇನೆ. ನನ್ನ ಪತಿ ಮತ್ತು ಕುಟುಂಬದ ಯಾವುದೇ ಸದಸ್ಯರಿಗೆ ತೊಂದರೆ ಆದರೂ ಅದಕ್ಕೆ ರಮಾನಂದ್‌ ಸಾಗರ್‌ ಅವರೇ ನೇರ ಕಾರಣ ಆಗಿರುತ್ತಾರೆ” ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸಾಕ್ಷಿ  ದೂರಿನ ಪ್ರತಿ
ಸಾಕ್ಷಿ ದೂರಿನ ಪ್ರತಿ
ದೂರಿನ ಪ್ರತಿ 
ದೂರಿನ ಪ್ರತಿ 
ಚಿಟಿಕೆ ಹೊಡೆಯುವದರೊಳಗೆ ಆರೋಗ್ಯ ಇಲಾಖೆಯ ಆಯುಕ್ತರನ್ನು ಕರೆಸುವ ತಾಕತ್ತು ನನಗಿದೆ ಎಂದಿದ್ದಾನೆ. ಪೊಲೀಸ್ ಕಮೀಷನರ್ ಕೂಡ ಯಾವ ಲೆಕ್ಕ ಎಂದು ಮಾತನಾಡುತ್ತಾನೆ. ಹೀಗೆ ಯಾರನ್ನೂ ಬಿಡದೇ ಮಹಿಳಾ ಆಯೋಗಕ್ಕೂ ಕೆಟ್ಟದಾಗಿ ಮಾತನಾಡಿದ್ದಾನೆ. ಆತನ ಕುರಿತು ಪೊಲೀಸರು ಆದಷ್ಟು ಬೇಗ ಸೂಕ್ತ ಕ್ರಮ ಜರುಗಿಸುತ್ತಾರೆ ಎನ್ನುವ ನಂಬಿಕೆ ಇದೆ. 
-ನಾಗಲಕ್ಷ್ಮಿ ಭಾಯಿ, ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ

ಅಷ್ಟಕ್ಕೂ ರಮಾನಂದ ಸಾಗರ ಯಾರು?:

ರಮಾನಂದ ಸಾಗರ್ ಎನ್ನುವ ಹೆಸರಿನ ಈ ವ್ಯಕ್ತಿ ಈ ಹಿಂದೆ ಪೊಲೀಸ್ ಅಧಿಕಾರಿ, ಅಲ್ಲದೇ ಸ್ವಯಂ ನಿವೃತ್ತಿ ತೆಗೆದುಕೊಂಡ ನಂತರ ಪತ್ರಕರ್ತರಾಗಿ ಕೆಲಸ ಮಾಡಿರುವುದಾಗಿ ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ರಮಾನಂದ ಸಾಗರ್
ರಮಾನಂದ ಸಾಗರ್

“ಈ ಹಿಂದೆ ಪೋಲೀಸ್ ಇಲಾಖೆಯಲ್ಲಿದ್ದಾಗ ನನ್ನ ಮೇಲಧಿಕಾರಿ ತಪ್ಪು ಮಾಡಿದ್ದನ್ನು ನೋಡಿ ಅವನ ಕಪಾಳಕ್ಕೆ ಹೊಡೆದು ಮೂಗಲ್ಲಿ ಬಾಯಲ್ಲಿ ರಕ್ತ ಬಂದಿತ್ತು. ಆಗ ಇಲಾಖೆ ವಿಚಾರಣೆ ನಡೆಸಿ ನಿನ್ನ ಮೇಲಿನ ಅಧಿಕಾರಿ ತಪ್ಪು ಮಾಡಿರಬಹುದು, ಆದರೆ ಹೊಡೆಯೋ ಹಕ್ಕು ನಿನಗೆ ಯಾರು ಕೊಟ್ರು ಎಂದು ಶರಾ ಬರೆದರು. ಅದಕ್ಕೆ ನಾನು ಮರುಕ್ಷಣವೇ ದೂಸ್ರಾ ಮಾತಾಡದೇ VRS ಕೊಟ್ಟು ಬಂದವನು. ಈಗಲೂ ಈ ಇಲಾಖೆಯಲ್ಲಿ ಇದ್ದಿದ್ರೆ ಹಿರಿಯ ಮೇಲಧಿಕಾರಿಯಾಗಿ ಇರ್ತಿದ್ನೋ ಗೊತ್ತಿಲ್ಲ. ಇದನ್ನು ಬಿಟ್ಟು ಪತ್ರಿಕೆಗಳಲ್ಲಿ ವರದಿಗಾರನಾಗಿ, ಅಂಕಣಕಾರನಾಗಿ ಕೆಲಸ ಮಾಡಿ ಪತ್ರಕರ್ತನಾಗಿ ನಿಮ್ಮ ಮುಂದಿದ್ದೇನೆ,” ಎಂದು ತಮ್ಮದೇ ಲೇಖನದಲ್ಲಿ ಬರೆದುಕೊಂಡಿದ್ದಾರೆ.

2015ರ ಜೂನ್ 25ನೇ ತಾರೀಖಿನಂದು ರಮಾನಂದ ಸಾಗರ್ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡ ಲೇಖನದ ಭಾಗ
2015ರ ಜೂನ್ 25ನೇ ತಾರೀಖಿನಂದು ರಮಾನಂದ ಸಾಗರ್ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡ ಲೇಖನದ ಭಾಗ

ಆದರೆ ಇವರು ನಿಜಕ್ಕೂ ಪೊಲೀಸ್ ಅಧಿಕಾರಿಯೇ ಎನ್ನುವ ಪ್ರಶ್ನೆಯನ್ನಿಟ್ಟುಕೊಂಡು ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಮಾತನಾಡಿಸಿದಾಗ, “ರಮಾನಂದ ಸಾಗರ್ ಎನ್ನುವ ಹೆಸರಿನ ಪೊಲೀಸ್ ಅಧಿಕಾರಿಯು ಇರಲಿಲ್ಲ. ಬಹುಶಃ ಯಾರೋ ಪೊಲೀಸ್ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿರಬಹುದು,”ಎನ್ನುತ್ತಾರವರು.

ಮುಖದಲ್ಲಿ ಗಿರಿಜಾ ಮೀಸೆ ಬಿಟ್ಟುಕೊಂಡು ಗತ್ತಿನಿಂದ ಇರುವುದಕ್ಕೆ ಇವರನ್ನು ಉತ್ತರ ಕರ್ನಾಟಕ ಊರುಗಳಲ್ಲಿ ಇವರ ಭಾರತ್ ಯುವಜನ ಸೇನೆ ಸಂಘಟನೆಯ ಕಾರ್ಯಕರ್ತರು ನಿಜವಾಗಿಯೂ ಪೊಲೀಸ್ ಅಧಿಕಾರಿಯೇ (ಐಜಿಪಿ) ಎಂದು ಇನ್ನೂ ನಂಬಿದ್ದಾರೆ. ಹೀಗೆ ತಾನು ಪೊಲೀಸ್ ಅಧಿಕಾರಿ(ಐಜಿಪಿ) ಎಂದು ಸುಳ್ಳು ಹೇಳಿಕೊಂಡು ಥೇಟ್ ಪೊಲೀಸ್ ತರಹದ ಡ್ರೆಸ್ ಹಾಕಿಕೊಂಡು ಮೆರೆಯುತ್ತಿರುವ ಈತನ ವಿರುದ್ಧ ಕ್ರಮ ಕೈಗೊಳ್ಳದೇ ಇನ್ನೂ ಪೊಲೀಸರು ಯಾಕೆ ಮೀನಾಮೇಷ ಎಣಿಸುತ್ತಿದ್ದಾರೆ ಎನ್ನುವುದು ಸದ್ಯದ ಪ್ರಶ್ನೆ.

ಭಾರತ ಯುವಜನ ಸೇನೆ ಎಂಬ ರಕ್ಷಣಾ ಕವಚ:

ಭಾರತ ಯುವಜನ ಸೇನೆಯ ಪರಿಕಲ್ಪನೆಯು ಸುಮಾರು ಹತ್ತು ವರ್ಷಗಳಷ್ಟು ಹಳೆಯದಾದರೂ, ರಮಾನಂದ ಸಾಗರ್ 2012ರ ಜುಲೈ 28ರಿಂದ ಅದನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇದು ರಾಜ್ಯದ ಹಲವು ಭಾಗಗಳಲ್ಲಿ ಘಟಕಗಳನ್ನು ಹೊಂದಿದೆ.

ಮೀಟ್‌ Mr. ‘ಸ್ವಘೋಷಿತ ಐಜಿಪಿ’ ರಮಾನಂದ ಸಾಗರ್‌; ಇದು ಕಳ್ಳ ಕಸುಬಿಯ ದುನಿಯಾ 

ವಿಶೇಷವಾಗಿ ಉತ್ತರ ಕರ್ನಾಟಕದ ರಾಯಚೂರು, ಗದಗ, ಧಾರವಾಡ ಜಿಲ್ಲೆಗಳ ತನಕ ಈ ಸಂಘಟನೆಯ ನಂಟು ಬೆಳೆದಿದೆ. ಅಲ್ಲದೇ ಭಾರತ ಯುವಜನ ಸೇನೆಯ ಎರಡನೇ ವಾರ್ಷಿಕೋತ್ಸವದ ಅಂಗವಾಗಿ 4 ಉಚಿತ ಅಂಬ್ಯುಲೈನ್ಸ್ ಗಳನ್ನು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ರಮಾನಂದ ಸಾಗರ್ ಲೋಕಾರ್ಪಣೆ ಮಾಡಿದ್ದರು. ಅದು ಆವತ್ತು ಬಹುತೇಕ ಕನ್ನಡ ದಿನಪತ್ರಿಕೆಗಳಲ್ಲಿ ಸ್ಥಾನವನ್ನೂ ಪಡೆದುಕೊಂಡಿತ್ತು. “ಒಂದು ಕಾಲದಲ್ಲಿ ಸಮಾಜ ಸೇವಕ ಎನ್ನುವ ಸೋಗು ಹಾಕಿಕೊಂಡ ವ್ಯಕ್ತಿಯ ಮುಖವಾಡ ಇದೀಗ ಕಳಚಿದೆ. ಈತನಿಗೆ ತಕ್ಕ ಶಿಕ್ಷೆಯಾಗಬೇಕು,” ಎನ್ನುತ್ತಾರೆ ಅವರಿಂದ ಅನ್ಯಾಯಕ್ಕೊಳಗಾದವರೊಬ್ಬರು.

ಮುಫ್ತಿ ಚಿತ್ರದಲ್ಲಿ ಭಾರತ್ ಯುವ ಜನಸೇನೆಯ ಅಂಬ್ಯುಲೈನ್ಸ್
ಮುಫ್ತಿ ಚಿತ್ರದಲ್ಲಿ ಭಾರತ್ ಯುವ ಜನಸೇನೆಯ ಅಂಬ್ಯುಲೈನ್ಸ್

“ಭಾರತ ಯುವಜನ ಸೇನೆ ಎನ್ನುವ ಈ ಸಂಘಟನೆ ಅಡಿಯಲ್ಲಿಯೇ ಅನೇಕ ಸರಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ಮಾಹಿತಿ ಹಕ್ಕು ಕಾರ್ಯಕರ್ತನ ಸೋಗಿನಲ್ಲಿ ವಸೂಲಿ ಮಾಡುವುದೇ ಅವರ ಪ್ರಮುಖ ಉದ್ದೇಶ. ಸಮಾಜ ಸೇವೆ ಎನ್ನುವುದು ನೆಪವಷ್ಟೇ, ಅದರ ಹಿಂದೆ ಬೇರೆಯದೇ ಅಜೆಂಡಾ ಇದೆ,” ಎನ್ನುತ್ತಾರೆ ರಮಾನಂದ ಸಾಗರ್ ವಿರುದ್ಧ ದೂರು ನೀಡಿದವರೊಬ್ಬರು.

ರಮಾನಂದ ಸಾಗರ್ ಪತ್ರಕರ್ತ?:

ರಮಾನಂದ ಸಾಗರ್ ತಾನು ಈ ಹಿಂದೆ ಪತ್ರಕರ್ತನಾಗಿದ್ದೆ ಎಂದು ಹೇಳಿಕೊಂಡು ಓಡಾಡುತ್ತಾರೆ. ಅದಕ್ಕೆ ಸಾಕ್ಷಿಯೆಂಬಂತೆ ತಮ್ಮ ಫೇಸ್‌ಬುಕ್‌ನಲ್ಲಿ ತಾವೇ ನಡೆಸುತ್ತಿದ್ದ ‘ಹೀ ದುನಿಯಾ’ ಎಂಬ ಪತ್ರಿಕೆಯ ಕೆಲವು ಸಂಚಿಕೆಗಳು ದೊರೆಯುತ್ತವೆ. ಅಲ್ಲದೇ ಇದಾದ ನಂತರ 2013 ಫೆಬ್ರುವರಿಯಲ್ಲಿ ‘ಸಾಗರ್ ವಾಣಿ’ ಎಂಬ ವಾರ ಪತ್ರಿಕೆಯನ್ನು ತಮ್ಮ ಹೆಸರಿನಲ್ಲಿಯೇ ಆರಂಭಿಸಿ ಬಿಡುಗಡೆ ಮಾಡಿದ ಚಿತ್ರಗಳು ದೊರೆಯುತ್ತವೆ.

ಹೀ ದುನಿಯಾ ಸಾಪ್ತಾಹಿಕ
ಹೀ ದುನಿಯಾ ಸಾಪ್ತಾಹಿಕ
ಎಡದಿಂದ ನಾಲ್ಕನೇಯವರು ರಮಾನಂದ ಸಾಗರ್ (ಸಾಗರ್ ವಾಣಿ ಪತ್ರಿಕೆ ಬಿಡುಗಡೆ)
ಎಡದಿಂದ ನಾಲ್ಕನೇಯವರು ರಮಾನಂದ ಸಾಗರ್ (ಸಾಗರ್ ವಾಣಿ ಪತ್ರಿಕೆ ಬಿಡುಗಡೆ)

ಆದರೆ ಕನ್ನಡ ಮಾಧ್ಯಮ ಲೋಕದ ಹಿರಿಯ ಪತ್ರಕರ್ತರನ್ನು ಈ ಕುರಿತು ಕೇಳಿದಾಗ, “ರಮಾನಂದ ಸಾಗರ್ ಎನ್ನುವ ಪತ್ರಕರ್ತನ ಹೆಸರನ್ನು ನಾನು ಎಲ್ಲಿಯೂ ಕೇಳಿಲ್ಲ. ಜತೆಗೆ ರಮಾನಂದ ಸಾಗರ್ ಎನ್ನುವ ಪೊಲೀಸ್ ಅಧಿಕಾರಿ ಬೆಂಗಳೂರಿನಲ್ಲಿ ಇದ್ದರು ಎನ್ನುವ ಕುರಿತು ಯಾವುದೇ ಮಾಹಿತಿಯೂ ಇಲ್ಲ. ಬಹುಶಃ ಪತ್ರಕರ್ತ ಅಥವಾ ಪೊಲೀಸ್ ಅಧಿಕಾರಿ ಹೆಸರಿನಲ್ಲಿ ಇವರು ವಸೂಲಿ ಮಾಡುವವರಿರಬಹುದು. ಇಲ್ಲದೇ ಇದ್ದರೆ, ಮುಖ್ಯವಾಹಿನಿಯ ಪತ್ರಕರ್ತನಾಗಿದ್ದರೆ ಇವರ ಹೆಸರು ನನಗೂ ಸೇರಿದಂತೆ ಬಹುತೇಕರಿಗೆ ತಿಳಿದಿರುತ್ತಿತ್ತು,” ಎನ್ನುತ್ತಾರೆ ಎರಡು ದಶಕಗಳಿಂದ ಕನ್ನಡ ಪತ್ರಿಕಾ ರಂಗದಲ್ಲಿರುವ ಹಿರಿಯ ಪತ್ರಕರ್ತರೊಬ್ಬರು.

ಆರು ವರ್ಷಗಳಲ್ಲಿ ಕೋಟಿ ಕೋಟಿ ಆಸ್ತಿ?

“ಕಳೆದ 6 ವರ್ಷಗಳ ಹಿಂದೆ ಅವರಲ್ಲಿ ಯಾವ ಆಸ್ತಿಯೂ ಇರಲಿಲ್ಲ. ಮದುವೆಯಾಗುವಾಗ ಹಾಕಿಕೊಳ್ಳಲು ಹೊಸ ಬಟ್ಟೆ ಇರಲಿಲ್ಲ. ಆದರೀಗ ಅವರಲ್ಲಿ, ಬಿಎಮ್‌ಡಬ್ಲ್ಯೂ, ಡಸ್ಟರ್‌ನಂತಹ ದುಬಾರಿ ಕಾರುಗಳಿವೆ. ಬೆಂಗಳೂರಿನಲ್ಲಿ ಅರಮನೆಯಂತ ಮನೆ ಕಟ್ಟಿದ್ದಾರೆ. ಇಷ್ಟೆಲ್ಲ ಖರೀದಿಸಬೇಕು ಎಂದರೆ ಅವರಲ್ಲಿ ಹಣ ಹೇಗೆ ಬಂತು? ಇದಕ್ಕೆ ಅವರು ಬಳಸಿಕೊಂಡಿದ್ದೇ ಮಾಹಿತಿ ಹಕ್ಕು ಖಾಯ್ದೆ. ಅದರಿಂದ ಅಧಿಕಾರಿಗಳನ್ನು ಬೆದರಿಸಿ, ಹಣ ವಸೂಲಿ ಮಾಡಿ ಕೆಲವೇ ಕೆಲವು ವರ್ಷಗಳಲ್ಲಿ ಕೋಟ್ಯಧೀಶರಾಗಿದ್ದಾರೆ,” ಎನ್ನುತ್ತಾರೆ ಅವರನ್ನು ಹತ್ತಿರದಿಂದ ಕಂಡವರೊಬ್ಬರು.

ರಮಾನಂದ್ ಸಾಗರ್ ಅವರ ವಾಹನಗಳು
ರಮಾನಂದ್ ಸಾಗರ್ ಅವರ ವಾಹನಗಳು

“ನಾನು ಅವರ ಹತ್ತಿರ ಕೆಲ ಸಮಯ ಕೆಲಸ ಮಾಡಿದ್ದೆ. ತುಂಬ ಹತ್ತಿರದಿಂದ ಅವರನ್ನು ನೋಡಿದ್ದೇನೆ. ಅವರ ಎಲ್ಲ ದೌರ್ಬಲ್ಯಗಳೂ ನನಗೆ ತಿಳಿದಿವೆ. ಹೊರಗೆ ಮಾತ್ರ ಭಾರಿ ಶೋಕಿ. ಆದರೆ ಒಳಗೆ ತುಂಬ ಕೆಟ್ಟ ವ್ಯಕ್ತಿತ್ವ. ಅವರು ಆರ್‌ಟಿಐ ದುರುಪಯೋಗ ಪಡಿಸಿಕೊಂಡು ಈಗ ಕೋಟ್ಯಂತರ ಹಣ ಮಾಡಿದ್ದಾರೆ. ಇವರ ಅಸಲಿ ಮುಖ ಮೊದಲೇ ಗೊತ್ತಿದ್ದರೆ ಕೆಲಸಕ್ಕೆ ಹೋಗುತ್ತಿರಲಿಲ್ಲ. ನಂತರ ಗೊತ್ತಾಗಿ ಅವರಿಂದ ದೂರಾದೆ. ಕೊನೆಗೂ ಒಂದು ತಿಂಗಳ ನನ್ನ ಶ್ರಮದ ದುಡಿಮೆಗೆ ಅವರು ಕಲ್ಲು ಹಾಕಿದರು,” ಎನ್ನುತ್ತಾರೆ ರಮಾನಂದ ಸಾಗರ ಅವರ ಜೊತೆಯಲ್ಲಿ ಹತ್ತಿರದಿಂದ ಕೆಲಸ ಮಾಡಿದ ವ್ಯಕ್ತಿಯೊಬ್ಬರು.

ಖಾಕಿ ಸಮವಸ್ತ್ರ ಮತ್ತು ಗೂಟದ ಕಾರು:

ಹಾಗೆ ನೋಡಿದರೆ ಥೇಟ್ ಪೊಲೀಸ್ ಇಲಾಖೆಯ ಸಮವಸ್ತ್ರವನ್ನು ರಮಾನಂದ ಸಾಗರ್ ಧರಸಿಸುತ್ತಾರೆ. “ಕಚೇರಿಯಲ್ಲಿ ಅವರು ಪೊಲೀಸ್ ಶೈಲಿಯಲ್ಲಿ ಇರುವ ಫೋಟೋ ಹಾಕಿಕೊಂಡಿದ್ದಾರೆ. ಇದು ಜನರನ್ನು ಹೆದರಿಸಲು ಅವರು ಹಾಕುವ ವೇಷ,” ಎನ್ನುತ್ತಾರೆ ಅವರ ಆಫೀಸಿಗೆ ಆಗಾಗ ಹೋಗಿ ಬರುವವರೊಬ್ಬರು.

ರಮಾನಂದ ಸಾಗರ್ ಕಚೇರಿಯಲ್ಲಿ
ರಮಾನಂದ ಸಾಗರ್ ಕಚೇರಿಯಲ್ಲಿ

ತಮ್ಮ ಕೆಲವು ವಾಹನಗಳ ನಂಬರ್‌ ಪ್ಲೇಟ್‌ಗಳಲ್ಲಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎಂದು ಪದನಾಮ ಹಾಕಿಸಿಕೊಂಡು 'ಪ್ರತಿಷ್ಠೆ'ಯನ್ನು ತೋರಿಸುವ ಖಯ್ಯಾಲಿ ಇವರಿಗಿದೆ.

‘ನಂಬರ್‌ ಪ್ಲೇಟ್‌ಗಳು ಮತ್ತು ಅದರಲ್ಲಿ ಸಂಖ್ಯೆ, ಅಕ್ಷರಗಳು ಇಂತಿಷ್ಟೇ ಅಳತೆಯಲ್ಲಿರಬೇಕು’ ಎಂಬ ಕೇಂದ್ರ ಮೋಟಾರು ವಾಹನ ನಿಯಮಾವಳಿಗಳನ್ನು ಗಾಳಿಗೆ ತೂರಿ ಮನಸೋ ಇಚ್ಛೆ ನಂಬರ್ ಪ್ಲೇಟ್ ಮಾಡಿಸಿಕೊಂಡಿದ್ದಾರೆ.

ಆದರೆ ಇಂಥವರಿಗೆ ಕಡಿವಾಣ ಹಾಕಬೇಕಾದ ಸಾರಿಗೆ ಇಲಾಖೆ ಮತ್ತು ಪೊಲೀಸ್‌ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

“ರಮಾನಂದ ಸಾಗರ್ ಪೊಲೀಸ್ ರೀತಿಯ ಬಟ್ಟೆ, ಟೋಪಿಯನ್ನು ಹಾಕಿಕೊಳ್ಳುತ್ತಾನೆ. ಗೂಟದ ಕಾರನ್ನೂ ಇಟ್ಟಿದ್ದಾನೆ. ಜತೆಗೆ ತಾನು ಪೊಲೀಸ್ ಅಧಿಕಾರಿ ಎಂದೂ ಕೆಲವು ಕಡೆಗಳಲ್ಲಿ ಹೇಳಿಕೊಂಡು ಓಡಾಡಿದ್ದಾನೆ ಈ ಕುರಿತು ಕುಲಂಕುಷವಾಗಿ ತನಿಖೆ ನಡೆಸಬೇಕೆಂದು ನಾನು ಕಮೀಷನರ್‌ಗೆ ದೂರು ದಾಖಲಿಸಿದ್ದೇನೆ”
-ನಾಗಲಕ್ಷ್ಮೀಬಾಯಿ, ಮಹಿಳಾ ಆಯೋಗದ ಅಧ್ಯಕ್ಷೆ

ಆರ್‌ಟಿಐ ದುರುಪಯೋಗ:

ಸರಕಾರಿ ಕಾರ್ಯಗಳಲ್ಲಿ ಪಾರದರ್ಶಕತೆ ತರುವುದೇ ಮೂಲ ಉದ್ದೇಶವಾದ ಮಾಹಿತಿ ಹಕ್ಕು ಕಾಯಿದೆಯನ್ನು ಕೇಂದ್ರ ಸರಕಾರ 2005ರ ಅಕ್ಟೊಬರ್ 12ರಂದು ಜಾರಿಗೆ ತಂದಿತು. ಆದರೆ ಇದು ಇತ್ತೀಚಿನ ದಿನಗಳಲ್ಲಿ ದುರ್ಬಳಕೆ ಆಗುತ್ತಿದೆ ಎನ್ನುವ ಆರೋಪವನ್ನು ಎದರಿಸುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ರಮಾನಂದ ಸಾಗರ್ ರೀತಿಯ ವಿಷಜಂತುಗಳು ಆರ್‌ಟಿಐ ಅನ್ನು ಇನ್ನಷ್ಟು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

ಮಾಹಿತಿ ಹಕ್ಕು ಕಾರ್ಯಕರ್ತನಾಗಿ ಸುದ್ದಿಗೋಷ್ಟಿ ಮಾಡುತ್ತಿರುವ ರಮಾನಂದ ಸಾಗರ್
ಮಾಹಿತಿ ಹಕ್ಕು ಕಾರ್ಯಕರ್ತನಾಗಿ ಸುದ್ದಿಗೋಷ್ಟಿ ಮಾಡುತ್ತಿರುವ ರಮಾನಂದ ಸಾಗರ್

“ಮಾಹಿತಿ ಹಕ್ಕು ಕಾಯ್ದೆಯು ಸಮಾಜವನ್ನು ಶುದ್ಧ ಮಾಡಲಿಕ್ಕೆ, ಅಧಿಕಾರಿಗಳನ್ನು ಸರಿಯಾಗಿ ಕೆಲಸ ಮಾಡುವಂತೆ ಭ್ರಷ್ಟರಾಗದಂತೆ ಕಾಪಾಡಲು ನಿರ್ಮಾಣವಾದ ಉತ್ತಮ ಕಾಯ್ದೆ. ಆದರೆ ಕೆಲವರು ಆರ್‌ಟಿಐ ಕಾರ್ಯಕರ್ತರ ಸೋಗಿನಲ್ಲಿ ಹಣ ಸುಲಿಯುವ ಕೆಲಸಕ್ಕೆ ಇಳಿಯುತ್ತಿದ್ದಾರೆ. ಈ ಕುರಿತು ದಾಖಲಾದ ಪ್ರಕರಣಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು,” ಎನ್ನುತ್ತಾರೆ ನಾಗಲಕ್ಷ್ಮೀಬಾಯಿ.

ಮೀಟ್‌ Mr. ‘ಸ್ವಘೋಷಿತ ಐಜಿಪಿ’ ರಮಾನಂದ ಸಾಗರ್‌; ಇದು ಕಳ್ಳ ಕಸುಬಿಯ ದುನಿಯಾ 

“ಪ್ರತಿಯೊಂದು ಕ್ಷೇತ್ರದಲ್ಲಿ ಒಳ್ಳೆಯ ಜನರಿದ್ದಾರೆ. ಹಾಗೆಯೇ ಕೆಟ್ಟ ಹಾಗೂ ಸ್ವಾರ್ಥಿ ಜನರಿದ್ದಾರೆ. ನಮ್ಮ ದೇಶದ ಕ್ರಿಮಿನಲ್ ಲಾ ಮತ್ತು ಸಿವಿಲ್ ಲಾ ಪ್ರಕಾರ ಆರ್‌ಟಿಐ ದುರುಪಯೋಗ ಪಡಿಸಿಕೊಳ್ಳುತ್ತಿರುವವರ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕು,” ಎನ್ನುತ್ತಾರೆ ಸಮಾಜ ಪರಿವರ್ತನಾ ಮುಖ್ಯಸ್ಥ ಎಸ್‌.ಆರ್‌.ಹಿರೇಮಠ್.

ಮಹಿಳಾ ವೈದ್ಯರನ್ನು, ಅಧಿಕಾರಿಗಳನ್ನು ಮತ್ತಿತರರನ್ನು ಬೆದರಿಸಿ ಹಣ ಕೀಳುವ ಸ್ವಘೋಷಿತ ಪೊಲೀಸ್‌ ಅಧಿಕಾರಿ ರಮಾನಂದ್‌ ಸಾಗರ್‌ ನಂತವರು ಮಾಹಿತಿ ಹಕ್ಕು ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಪೊಲೀಸ್‌ ಅಧಿಕಾರಿಗಳೂ ಕೂಡ ಬ್ಲಾಕ್‌ಮೇಲ್‌ಗೆ ಒಳಗಾಗಿ ಅಥವಾ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಇಂಥವರ ಜತೆ ಶಾಮೀಲಾಗುತ್ತಿದ್ದಾರೆ. ಇದು ಇಂದಿನ ಆಧುನಿಕ ಬೆಂಗಳೂರು ನಗರಿ ಸಾಗುತ್ತಿರುವ ಪರಿ.