samachara
www.samachara.com
ಕೆ. ಚಂದ್ರಶೇಖರ್‌ ರಾವ್‌ ಜತೆಗೆ ಎಚ್‌.ಡಿ.ದೇವೇಗೌಡರನ್ನು ಭೇಟಿಯಾಗಿದ್ದ ಪ್ರಕಾಶ್‌ ರೈ
ಕೆ. ಚಂದ್ರಶೇಖರ್‌ ರಾವ್‌ ಜತೆಗೆ ಎಚ್‌.ಡಿ.ದೇವೇಗೌಡರನ್ನು ಭೇಟಿಯಾಗಿದ್ದ ಪ್ರಕಾಶ್‌ ರೈ
ರಾಜ್ಯ

#justasking: ಪ್ರಕಾಶ್‌ ರೈ ‘ರಾಜಕೀಯ ಭೇಟಿ’ ಎತ್ತಿದ ಕೆಲವು ಪ್ರಶ್ನೆಗಳು!

ಪ್ರಕಾಶ್‌ ರೈ ಟಿಆರ್‌ಎಸ್‌ ಅಧ್ಯಕ್ಷ ಕೆ. ಚಂದ್ರಶೇಖರ್‌ ರಾವ್‌ ಜತೆಗೆ ಜೆಡಿಎಸ್ ಅಧ್ಯಕ್ಷ ಎಚ್‌.ಡಿ.ದೇವೇಗೌಡರನ್ನು ಭೇಟಿ ಮಾಡಿದ್ದು ರೈ ಈ ಪಕ್ಷಗಳ ಪರವಾಗಿದ್ದಾರೆ ಎಂಬ ಸಂದೇಶವನ್ನು ರವಾನಿಸಿದಂತಾಗುವುದಿಲ್ಲವೇ ಎಂಬ ಪ್ರಶ್ನೆ ಈಗ ಮೂಡಿದೆ.

ದಯಾನಂದ

ದಯಾನಂದ

ಕಳೆದ ಶುಕ್ರವಾರ (ಏಪ್ರಿಲ್‌ 13) ನೆರೆಯ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಅವರು ಬೆಂಗಳೂರಿನಲ್ಲಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿ ತೃತೀಯ ರಂಗದ ಬಗ್ಗೆ ಚರ್ಚೆ ನಡೆಸಿದ್ದು ಸುದ್ದಿಯಾಗಿತ್ತು. ಅಂದು ಕೆಸಿಆರ್‌ ಜತೆಗಿದ್ದಿದ್ದು ಬಹುಭಾಷಾ ನಟ ಹಾಗೂ ಜಸ್ಟ್‌ ಆಸ್ಕಿಂಗ್ ಅಭಿಯಾನದ ರೂವಾರಿ ಪ್ರಕಾಶ್‌ ರೈ.

ಕೋಮುವಾದದ ವಿರುದ್ಧ ಹಾಗೂ ಕೋಮು ಧ್ರುವೀಕರಣದ ವಿರುದ್ಧ ಪ್ರಶ್ನೆ ಕೇಳುವ ಅಭಿಯಾನವನ್ನು ಹುಟ್ಟಿ ಹಾಕಿರುವ ಪ್ರಕಾಶ್‌ ರೈ ತಾವು ಯಾವುದೇ ಪಕ್ಷದ ಪರವಲ್ಲ ಎಂದು ಈಗಾಗಲೇ ಘೋಷಿಸಿಕೊಂಡಿದ್ದಾರೆ. ಅಲ್ಲದೆ, “ನಾನು ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ. ಯಾವುದೇ ಸಿದ್ಧಾಂತದವನು ಎಂದು ಗುರುತಿಸಿಕೊಳ್ಳಲು ಇಷ್ಟವಿಲ್ಲ” ಎಂದು ಪ್ರಕಾಶ್‌ ರೈ ಈಗಾಗಲೇ ಹಲವು ಬಾರಿ ಹೇಳಿದ್ದಾರೆ.

ಆದರೆ, ಪ್ರಕಾಶ್‌ ರೈ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕೆ. ಚಂದ್ರಶೇಖರ್‌ ರಾವ್‌ ಅವರ ಜತೆಗೆ ಜಾತ್ಯತೀತ ಜನತಾದಳದ ಅಧ್ಯಕ್ಷ ಎಚ್‌.ಡಿ.ದೇವೇಗೌಡರನ್ನು ಭೇಟಿ ಮಾಡಿದ್ದು ಅವರು ಈ ಪಕ್ಷಗಳ ಪರವಾಗಿದ್ದಾರೆ ಎಂಬ ಸಂದೇಶವನ್ನು ರವಾನಿಸಿದಂತಾಗುವುದಿಲ್ಲವೇ ಎಂಬ ಪ್ರಶ್ನೆಯನ್ನು ಎತ್ತಿದೆ.

ದೇಶದಲ್ಲಿ ಕೋಮುವಾದಿ ಶಕ್ತಿಯನ್ನು ಮಣಿಸಲು ಹಾಗೂ ಬಿಜೆಪಿ ಸರಕಾರದ ವಿರುದ್ಧ ಪ್ರಕಾಶ್‌ ರೈ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಅವರೇ ಹುಟ್ಟು ಹಾಕಿರುವ ಜಸ್ಟ್‌ ಆಸ್ಕಿಂಗ್‌ ಫೌಂಡೇಷನ್‌ ಮೂಲಕ ಪ್ರಶ್ನೆ ಕೇಳುವ ಅಭಿಯಾನವನ್ನು ಆರಂಭಿಸಲಾಗಿದೆ. ಪ್ರಗತಿಪರ ಎನಿಸಿಕೊಂಡಿರುವ ಹಲವರು ಈ ಫೌಂಡೇಷನ್‌ ಜತೆಗಿದ್ದಾರೆ.

#justasking: ಪ್ರಕಾಶ್‌ ರೈ ‘ರಾಜಕೀಯ ಭೇಟಿ’ ಎತ್ತಿದ ಕೆಲವು ಪ್ರಶ್ನೆಗಳು!

ಯಾವ ಪಕ್ಷದ ಜತೆಗೂ ಗುರುತಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದ ಪ್ರಕಾಶ್ ರೈ ಈಗ ಕೆಸಿಆರ್‌ ಜತೆಗೆ ಬಂದಿದ್ದು ಎಷ್ಟು ಸರಿ? ಹಾಗೂ ಕೋಮುವಾದ ಮತ್ತು ಕೋಮು ಧ್ರುವೀಕರಣದ ವಿರುದ್ಧ ನಿಂತಿರುವ ಪ್ರಕಾಶ್‌ ರೈ ಅವರಿಗೆ ಹಿಂದೆ ಇದೇ ಜೆಡಿಎಸ್‌ ರಾಜ್ಯದಲ್ಲಿ ಅಧಿಕಾರಕ್ಕಾಗಿ ಬಿಜೆಪಿ ಜತೆಗೆ ಕೈ ಜೋಡಿಸಿದ್ದು ಗೊತ್ತಿರಲಿಲ್ಲವೇ? ಎಂಬ ಪ್ರಶ್ನೆಗಳು ಈಗ ಮುನ್ನೆಲೆಗೆ ಬಂದಿವೆ.

‘ಕೆಸಿಆರ್‌ ಜತೆಗೆ ಚೆನ್ನಾಗಿದ್ದಾರೆ’

“ಕೇಂದ್ರದಲ್ಲಿರುವ ಮೋದಿ ಸರಕಾರವನ್ನು ಸೋಲಿಸಲು ಬಿಜೆಪಿ ವಿರುದ್ಧವಾದ ಪಕ್ಷಗಳನ್ನೆಲ್ಲಾ ಪ್ರಕಾಶ್‌ ರೈ ಒಂದುಗೂಡಿಸುವ ಪ್ರಯತ್ನದಲ್ಲಿದ್ದಾರೆ. ಕೋಮುವಾದಿ ವಿರೋಧಿ ರಾಜಕಾರಣಕ್ಕೆ ಚಂದ್ರಶೇಖರ್‌ ರಾವ್‌ ಮುಂದಾಳತ್ವ ವಹಿಸಿದ್ದಾರೆ. ಕೆಸಿಆರ್‌ ಜತೆಗೆ ಪ್ರಕಾಶ್‌ ರೈ ಸಂಬಂಧ ಚೆನ್ನಾಗಿದೆ. ಹೀಗಾಗಿ ಕೆಸಿಆರ್‌ ಜತೆಗೆ ಪ್ರಕಾಶ್ ರೈ ದೇವೇಗೌಡರ ಭೇಟಿಗೆ ಬಂದಿದ್ದರು” ಎನ್ನುತ್ತಾರೆ ಪ್ರಕಾಶ್‌ ರೈ ಅವರ ಆಪ್ತರೊಬ್ಬರು.

“ಪ್ರಕಾಶ್‌ ರೈ ಯಾವುದೇ ಪಕ್ಷದ ಪರ ಅಥವಾ ವಿರೋಧವಾಗಿಲ್ಲ. ಕೋಮುವಾದಿ ಹಾಗೂ ಕೋಮು ಧ್ರುವೀಕರಣದ ವಿರುದ್ಧ ಹೋರಾಟದ ಭಾಗವಾಗಿ ಪ್ರಕಾಶ್‌ ರೈ ಕೆಸಿಆರ್‌ ಜತೆಗೆ ದೇವೇಗೌಡರನ್ನು ಭೇಟಿಯಾಗಿದ್ದರು. ತೆಲಂಗಾಣದ ಅಭಿವೃದ್ಧಿಗೆ ಕೆಸಿಆರ್‌ ಹಾಕಿಕೊಂಡಿರುವ ನೀಲನಕ್ಷೆಗಳ ಬಗ್ಗೆ ಪ್ರಕಾಶ್‌ ರೈಗೆ ಮೆಚ್ಚುಗೆ ಇದೆ. ಕೆಸಿಆರ್‌ಗೆ ರೈ ಆಪ್ತರಾಗಿರುವುದರಿಂದ ಅವರ ಜತೆ ಬೆಂಗಳೂರಿಗೆ ಬಂದಿದ್ದರು. ಈ ಭೇಟಿಯಿಂದ ಪ್ರಕಾಶ್‌ ರೈ ಈ ಪಕ್ಷಗಳ ಪರವಾಗಿದ್ದಾರೆ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ” ಎನ್ನುತ್ತಾರೆ ರೈ ಅವರ ಮತ್ತೊಬ್ಬ ಗೆಳೆಯರು.

ನಾನಾ ಪಾಟೇಕರ್‌ ಮಾದರಿ

ಮಹಾರಾಷ್ಟ್ರದಲ್ಲಿ ನಟರಾದ ನಾನಾ ಪಾಟೇಕರ್ ಮತ್ತು ಮಕರಂದ್ ಅನಾಸ್‌ಪುರೆ ನಾಮ್‌ ಫೌಂಡೇಷನ್‌ ಮೂಲಕ ಕೃಷಿ ಹಾಗೂ ಅಂತರ್ಜಲ ವೃದ್ಧಿಗಾಗಿ ದೀರ್ಫಾವಧಿ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ನದಿಗಳ ಪುನಶ್ಚೇತನ ಹಾಗೂ ಅಂತರ್ಜಲ ಮರುಪೂರಣದ ಕಾರ್ಯಗಳನ್ನು ಯಶಸ್ವಿಗೊಳಿಸಿದ್ದಾರೆ. ನಾಮ್‌ ಫೌಂಡೇಷನ್‌ನ ಈ ಕಾರ್ಯ ಮಾದರಿ ಎನಿಸಿದೆ.

ಅತ್ತ ನಾನಾ ಪಾಟೇಕರ್‌ ರಾಜಕೀಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಜನಪರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೆ, ಪ್ರಕಾಶ್‌ ರೈ ಇಂತಹ ಕಾರ್ಯಗಳ ಬದಲು ರಾಜಕೀಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ ಎಂಬ ಮಾತುಗಳು ಈಗ ಕೇಳಿಬರುತ್ತಿವೆ.

ಪ್ರಕಾಶ್ ರಾಜ್‌ ಫೌಂಡೇಷನ್‌ ಮೂಲಕ ಪ್ರಕಾಶ್‌ ರೈ ತೆಲಂಗಾಣದ ಕೊಂಡರೆಡ್ಡಿಪಳ್ಳಿ ಗ್ರಾಮವನ್ನು ಅಭಿವೃದ್ಧಿಗಾಗಿ ದತ್ತು ತೆಗೆದುಕೊಂಡಿದ್ದಾರೆ. ಕರ್ನಾಟಕದ ಬಂಡೀಪುರ ಅರಣ್ಯ ವ್ಯಾಪ್ತಿಯ ಆನೆ ಕಾರಿಡಾರ್‌ನ ಖಾಸಗಿ ಜಮೀನನ್ನು ಖರೀದಿಸಿ ಅದನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಆಶಯವೂ ಇದೆ ಎನ್ನುತ್ತದೆ ಪ್ರಕಾಶ್ ರಾಜ್‌ ಫೌಂಡೇಷನ್‌ನ ವೆಬ್‌ಸೈಟ್‌. ಆದರೆ, ಆ ಕೆಲಸಗಳು ಎಷ್ಟರ ಮಟ್ಟಿಗೆ ಪ್ರಗತಿಯಲ್ಲಿವೆ ಎಂಬ ಬಗ್ಗೆ ವೆಬ್‌ಸೈಟ್‌ನಲ್ಲಿ ಹೆಚ್ಚಿನ ಮಾಹಿತಿ ಇಲ್ಲ.

ಜನಪ್ರಿಯ ನಟರಾಗಿರುವ ಪ್ರಕಾಶ್‌ ರೈ ಪ್ರಶ್ನೆ ಕೇಳುವ ಅಭಿಯಾನದ ಮೂಲಕ ಸುದ್ದಿಯಲ್ಲಿದ್ದಾರೆ. ಸಿನಿಮಾ ಮತ್ತು ರಾಜಕೀಯದ ನಡುವಿನ ನಂಟನ್ನು ಅಧಿಕಾರ ರಾಜಕಾರಣದ ಬದಲು ‘ಪ್ರಶ್ನಿಸುವ ರಾಜಕಾರಣ’ಕ್ಕೆ ಬದಲಿಸುವ ಪ್ರಯತ್ನಕ್ಕೆ ಪ್ರಕಾಶ್‌ ರೈ ಕೈ ಹಾಕಿದ್ದಾರೆ. ಆದರೆ, ಯಾವುದೇ ಪಕ್ಷದೊಂದಿಗೆ ತಮ್ಮ ನಂಟಿಲ್ಲ ಎಂದು ಹೇಳಿಕೊಳ್ಳುತ್ತಿರುವ ಪ್ರಕಾಶ್‌ ರೈ ಅಧಿಕಾರ ರಾಜಕಾರಣದಿಂದ ಶಾಶ್ವತವಾಗಿ ದೂರ ಉಳಿಯುತ್ತಾರೆಯೇ ಎಂಬುದಕ್ಕೂ ಸದ್ಯಕ್ಕೆ ಉತ್ತರವಿಲ್ಲ.