ಅತ್ತ ರೈತ ಮಿತ್ರರೂ ಇಲ್ಲ; ಇತ್ತ ‘ಕೆಬಿಜಿ’ಯೂ ಇಲ್ಲ: ಬೈರಾಪುರದ ಜನರ ಸಂಕಷ್ಟ ಕೇಳಿದವರಿಲ್ಲ!
COVER STORY

ಅತ್ತ ರೈತ ಮಿತ್ರರೂ ಇಲ್ಲ; ಇತ್ತ ‘ಕೆಬಿಜಿ’ಯೂ ಇಲ್ಲ: ಬೈರಾಪುರದ ಜನರ ಸಂಕಷ್ಟ ಕೇಳಿದವರಿಲ್ಲ!

ಇದು ಬೆಂಗಳೂರು ಹೊರವಲಯದ ಗ್ರಾಮವೊಂದರ  ಕತೆ. ಇಲ್ಲಿ ರಾಸಾಯನಿಕ ಫ್ಯಾಕ್ಟರಿಯೊಂದರ ವಿರುದ್ಧ ಹೋರಾಟವೊಂದು ಜಾರಿಯಲ್ಲಿದೆ. ಫಲಿತಾಂಶ ಮಾತ್ರ ಶೂನ್ಯ. ಯಾಕೆಂದು ಹುಡುಕಿಕೊಂಡು ಹೊರಟರೆ ಯಾರ ಅಂಕೆಗೂ ಸಿಗದ ಕೆಎಸ್‌ಪಿಸಿಬಿಯ ಬಾಗಿಲು ಓಪನ್ ಆಗುತ್ತದೆ. 

ಅದು 2017ರ ಅಕ್ಟೋಬರ್‌ 17ನೇ ತಾರೀಖು. ಗಟ್ಟಿಮುಟ್ಟಾಗಿ ಕೆಲಸ ಮಾಡಿಕೊಂಡಿದ್ದು 50 ವರ್ಷದ ವ್ಯಕ್ತಿ ಮುನಿಕೃಷ್ಣಪ್ಪ ಇದ್ದಕ್ಕಿದ್ದಂತೆ ಹಾಸಿಗೆ ಹಿಡಿದಿದ್ದರು. ಉಸಿರಾಟದ ಸಮಸ್ಯೆ ಉಂಟಾಗಿ ತಕ್ಷಣ ಆಸ್ಪತ್ರೆಗೆ ಸೇರಿಸಿದ ಕುಟುಂಬಕ್ಕೆ ಆಘಾತ ಕಾದಿತ್ತು. ಮುನಿಕೃಷ್ಣಪ್ಪ ಗಂಭೀರ ಉಸಿರಾಟ ಸಮಸ್ಯೆಗೆ ತುತ್ತಾಗಿದ್ದರು. ಅಲ್ಲಿಯವರೆಗೂ ಯಾವತ್ತೂ ಉಸಿರಾಟದ ಸಮಸ್ಯೆ ಕಾಡಿರಲೇ ಇಲ್ಲ. ಅದಾಗಿ 8 ದಿನಗಳಲ್ಲಿ ಮುನಿಕೃಷ್ಣಪ್ಪ ಮೃತಪಟ್ಟಿದ್ದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬೈರಾಪುರ ಹಳ್ಳಿಯಲ್ಲಿ ಕಳೆದ 1978ರಿಂದಲೂ ಆಗ್ರೋಸಿಂಥ್‌ ಎಂಬ ಕೆಮಿಕಲ್‌ ಫ್ಯಾಕ್ಟರಿಯೊಂದು ಕಾರ್ಯನಿರ್ವಹಿಸುತ್ತಿದೆ. ಅಲ್ಯುಮಿನಿಯಂ ಫಾಸ್ಫೇಟ್‌ ಎಂಬ ರಾಸಾಯನಿಕ ಮಾತ್ರೆಗಳನ್ನು ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ನಿತ್ಯ ಉತ್ಪಾದಿಸಲಾಗುತ್ತಿದೆ. ಇದು ಪರಿಣಾಮಕಾರಿ ಮಾತ್ರೆಯ ಉತ್ಪಾದಕ ಘಟಕ.

ಸಾಮಾನ್ಯವಾಗಿ ಉತ್ಪಾದನೆ ಜೋರಿರುವ ದಿನಗಳಲ್ಲಿ ಫ್ಯಾಕ್ಟರಿಯ ಸುತ್ತಮುತ್ತ ದೊಡ್ಡಮಟ್ಟದಲ್ಲಿ ಹೊಗೆ ಆರಿಸಿಕೊಂಡಿರುತ್ತದೆ. ಉಸಿರಾಟಕ್ಕೂ ತೊಂದರೆಯಾಗುತ್ತದೆ. ಸುತ್ತಮುತ್ತಲಿನ ದ್ರಾಕ್ಷಿ ತೋಟಗಳ ಬೆಳೆಗಳ ಮೇಲೆ ಅದು ಬೀಳುತ್ತದೆ. ಅದೇ ದ್ರಾಕ್ಷಿ ನಮಗಿಲ್ಲಿ ಮಾರುಕಟ್ಟೆಯಲ್ಲಿ ಖರೀದಿಸುತ್ತೀವಿ.

ಹೀಗಾಗಿಯೇ ಇಂತಹ ಉತ್ಪಾದಕ ಘಟಕಗಳನ್ನು ‘ರೆಡ್‌ ಮೀಡಿಯಮ್‌ ಇಂಡಸ್ಟ್ರಿ’ ಎಂದು ಮಾಲಿನ್ಯ ನಿಯಂತ್ರಣ ಕಾನೂನಿನ ಗುರುತಿಸುತ್ತದೆ. ಕಾನೂನಿನ ಪ್ರಕಾರವೇ ಹಳ್ಳಿಯ ವ್ಯಾಪ್ತಿಯೊಳಗೆ ಫ್ಯಾಕ್ಟರಿಯನ್ನು ನಡೆಸುವಂತಿಲ್ಲ. ಆದು ಇದು ನಾಲ್ಕೈದು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.

ಅತ್ತ ರೈತ ಮಿತ್ರರೂ ಇಲ್ಲ; ಇತ್ತ ‘ಕೆಬಿಜಿ’ಯೂ ಇಲ್ಲ: ಬೈರಾಪುರದ ಜನರ ಸಂಕಷ್ಟ ಕೇಳಿದವರಿಲ್ಲ!

ಅಲ್ಯುಮಿನಿಯಂ ಫಾಸ್ಫೇಟ್‌ ಮತ್ತು ಅದರಿಂದ ಜನರೇಟ್‌ ಆಗುವ ಪಾಸ್ಪೇನ್‌ ಗ್ಯಾಸ್‌ ಅತ್ಯಂತ ಹಾನಿಕಾರಕ ರಾಸಾಯನಿಕ. ಇದರ ಸಂಪರ್ಕದಿಂದ ಮನುಷ್ಯರೂ ಸಾವನ್ನಪ್ಪುವ ಸಾಧ್ಯತೆ ಹೆಚ್ಚು. ಅದು ಹೊರಚೆಲ್ಲುವ ವಿಷಾನಿಲದಿಂದ ಜೀವ ಹೋಗಬಹುದು. ಮತಿ ಭ್ರಮಣೆ ಆಗಬಹುದು ಅಥವಾ ಇನ್ನಿತರ ಮಾರಣಾಂತಿಕ ಖಾಯಿಲೆಗೆ ತುತ್ತಾಗಬಹುದು.

ಇವೆಲ್ಲವೂ ಗೊತ್ತಿದ್ದವರು ಸುಮ್ಮನಿದ್ದಾರೆ. ಹಾಗಂತ ಸ್ಥಳೀಯ ಜನ ಸುಮ್ಮನಿಲ್ಲ. ಅಲ್ಲಿನ ಕೆಲವು ಯುವಕರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡ ವಿಡಿಯೋ ಇಲ್ಲಿದೆ. ಸಾಧ್ಯವಾದರೆ ವಿಡಿಯೋ ಜತೆಗಿರುವ ಅವರ ಸಂಭಾಷಣೆಯನ್ನು ಕೇಳಿಸಿಕೊಳ್ಳಿ. ಸಾಮಾನ್ಯರ ಜನರ ಬದುಕನ್ನು ಹೇಗೆ ಒಂದು ಸಣ್ಣ ಉದ್ಯಮ ನರಕವಾಗಿಸಬಹುದು ಎಂಬುದಕ್ಕೆ ಸಾಕ್ಷಿ ಸಿಗುತ್ತದೆ.

ನಿರಂತರ ಹೋರಾಟ:

2008ರಿಂದಲೂ ಫ್ಯಾಕ್ಟರಿಯ ವಿರುದ್ಧ ಹಳ್ಳಿಗರು ಹೋರಾಟ ನಡೆಸುತ್ತಲೇ ಇದ್ದಾರೆ. ಆದರೆ ಅಧಿಕಾರಿ ವರ್ಗ ಮತ್ತು ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದ ಹೋರಾಟಕ್ಕೆ ಇನ್ನೂ ಜಯ ಸಿಕ್ಕಿಲ್ಲ.

ಈ ಉತ್ಪಾದಕ ಘಟಕವನ್ನು ನಡೆಸುತ್ತಿರುವ ಆಗ್ರೋಸಿಂಥ್‌ ಕಂಪನಿಯೇ ಅಲ್ಯುಮಿನಿಯಂ ಫಾಸ್ಫೇಟ್‌ ಎಷ್ಟು ಹಾನಿಕಾರಕ ಎಂಬ ಬಗ್ಗೆ ಕರಪತ್ರವನ್ನು ಹೊರಡಿಸಿದೆ. ಇದರ ಉತ್ಪಾದನೆ ವೇಳೆ ಹೊರಬರುವ ವಿಷಾನಿಲ ಸೇವಿಸಿದರೆ ಮನುಷ್ಯರು ಸಾಯುತ್ತಾರೆ ಎಂಬುದನ್ನು ಆಗ್ರೋಸಿಂಥ್‌ ಕರಪತ್ರದಲ್ಲಿ ತಿಳಿಸುತ್ತದೆ. ಜತೆಗೆ ಕಾರ್ಖಾನೆಯಿಂದ ಹೊರಬರುವ ಹೊಗೆಯಿಂದ ಮತ್ತು ತ್ಯಾಜ್ಯದಿಂದಲೂ ಸಾವು ಸಂಭವಿಸಬಹುದು ಎನ್ನಲಾಗಿದೆ. ಆದರೆ ಇಷ್ಟರ ನಡುವೆಯೂ ಕಾರ್ಖಾನೆ ಹಳ್ಳಿಯ ವ್ಯಾಪ್ತಿಯಲೇ ಕಾರ್ಯನಿರ್ವಹಿಸುತ್ತಿದೆ.

ಕಡತಗಳ ಕತೆ:

ಕಾರ್ಖಾನೆಯ ನೂರು ಮೀಟರ್‌ ಸಮೀಪದಲ್ಲೇ ಶಾಲೆಯಿದೆ. ಶಾಲೆಯ ಸಮೀಪದಲ್ಲಿ ವಿಷಕಾರಿ ಅನಿಲ ಉತ್ಪಾದನೆ ಮಾಡುವ ಕಾರ್ಖಾನೆ ಇದ್ದರೂ ಅದರ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳುತ್ತಿಲ್ಲ.

2013ರಿಂದ 2016ರವರೆಗೂ ಈ ಕಾರ್ಖಾನೆಗೆ ಪರವಾನಗಿಯೇ ಇರಲಿಲ್ಲ. ಆದಾಗ್ಯೂ ಕಾರ್ಖಾನೆಯನ್ನು ನಡೆಸಲಾಗಿದೆ. 2013ರಲ್ಲಿ ಕಾರ್ಖಾನೆಯ ಪರವಾನಗಿ ನವೀಕರಿಸಬೇಕಾಗಿತ್ತು. ಆದರೆ ಕಾರ್ಖಾನೆ ಅಕ್ರಮವಾಗಿ ನಡೆಯುತ್ತಿದೆ ಎಂಬ ಕಾರಣಕ್ಕೆ ಪರವಾನಗಿ ನೀಡಿರಲಿಲ್ಲ. ಇದನ್ನು ಮಾಲಿನ್ಯ ನಿಯಂತ್ರಣ ಮಂಡಳಿಯೂ ಒಪ್ಪಿಕೊಂಡಿದೆ.

ಅದಾದ ನಂತರ ಕಾರ್ಖಾನೆ ವಿರುದ್ಧ ಜನರ ಆಕ್ರೋಶ ಹೆಚ್ಚಾದ ಹಿನ್ನೆಲೆಯಲ್ಲಿ ಕಾರ್ಖಾನೆ ಕಾರ್ಯ ಸ್ಥಳವನ್ನು ಬದಲಾಯಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಖಾನೆಯ ಸಂಸ್ಥಾಪಕ ವಿ.ಎಮ್‌. ರಾಜನ್‌ ಅವರಿಗೆ ಸೂಚಿಸಿತ್ತು.

ಅದಕ್ಕೆ ಒಪ್ಪಿದ ಆಡಳಿತ ಮಂಡಳಿ 2016ರ ಜನವರಿ 21ರಂದು ಕಾರ್ಖಾನೆಯನ್ನು ಒಂದು ವರ್ಷದೊಳಗೆ ಸ್ಥಳಾಂತರ ಮಾಡುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿತ್ತು. ಕರಾರಿನ ಅನ್ವಯ 2017 ಜನವರಿ 21ರ ಒಳಗೆ ಕಾರ್ಖಾನೆಯನ್ನು ಸ್ಥಳಾಂತರ ಮಾಡಬೇಕಾಗಿತ್ತು. ಆದರೆ ನಿಜವಾಗಿ ಆದದ್ದೇ ಬೇರೆ. ಇಲ್ಲಿನ ವರೆಗೂ ಅದೇ ಸ್ಥಳದಲ್ಲಿ ಕಾರ್ಖಾನೆ ಕಾರ್ಯನಿರ್ವಹಿಸುತ್ತಿದ್ದು ಕೇಳುವವರೇ ಇಲ್ಲದಂತಾಗಿದೆ.

ಕೃಷಿ ಇಲಾಖೆ 2016ರಿಂದ 2021ರ ವರೆಗೂ ಕಾರ್ಖಾನೆಗೆ ಪರವಾನಗಿಯನ್ನು ನೀಡಿದೆ. ಅದಾದ ನಂತರ ಮಾಲಿನ್ಯ ನಿಯಂತ್ರಣ ಮಂಡಳಿಯೂ ಕರಾರಿನ ಬಗ್ಗೆ ಪ್ರಸ್ತಾಪಿಸಿಲ್ಲ. ಪರಿಸರ ನಿರಪೇಕ್ಷಣಾ ಪತ್ರವನ್ನೂ ಸಹ ಕಾರ್ಖಾನೆ ಪಡೆದಿಲ್ಲ. ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಆರ್‌ಟಿಐ ಅಡಿ ಮಾಹಿತಿ ಕೋರಿದರೆ, ಪರಿಸರ ನಿರಪೇಕ್ಷಣಾ ಪತ್ರದ ಅಗತ್ಯವಿಲ್ಲ ಎಂಬ ಪ್ರತಿಕ್ರಿಯೆ ನೀಡಿದೆ. ಅಲ್ಯುಮಿನಿಯಂ ಫಾಸ್ಫೇಟ್‌ನಂತ ವಿಷಾನಿಲ ಉತ್ಪಾದಿಸುವ ಕಾರ್ಖಾನೆಗೆ ನಿರಪೇಕ್ಷಣಾ ಪತ್ರದ ಅಗತ್ಯವಿಲ್ಲ ಎನ್ನುವ ಮೂಲಕ ಮಂಡಳಿ ತನ್ನ ಸೋಗಲಾಡಿತನವನ್ನು ಪ್ರದರ್ಶಿಸಿದೆ.

ಗ್ರಾಮಸ್ಥರ ಹೇಳಿಕೆ:

ಬೈರಾಪುರ ಹಳ್ಳಿಯ ಗ್ರಾಮಸ್ಥ ಚೇತನ್‌ ಗೌಡ ಹೇಳುವ ಪ್ರಕಾರ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕೃಷಿ ಇಲಾಖೆ ರೈತರ ಮನವಿಗೆ ಸ್ಪಂದಿಸುತ್ತಿಲ್ಲ.

ಹಲವು ವರ್ಷಗಳಿಂದ ನಾವು ಹೋರಾಟ ಮಾಡುತ್ತಿದ್ದೇವೆ. ಲೆಕ್ಕದ ಪ್ರಕಾರ 2017ರಲ್ಲೇ ಕಾರ್ಖಾನೆ ಸ್ಥಳಾಂತರವಾಗಬೇಕಿತ್ತು. ಆದರೆ ಆಗಿಲ್ಲ. ಗ್ರಾಮ ಪಂಚಾಯ್ತಿ ಒಪ್ಪಿಗೆ ಪಡೆಯದೇ ಕಾರ್ಖಾನೆ ನಡೆಸುವಂತಿಲ್ಲ. ಆದರೆ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕೃಷಿ ಇಲಾಖೆ ಗ್ರಾಮ ಪಂಚಾಯ್ತಿಯ ಒಪ್ಪಿಗೆ ಬೇಕಿಲ್ಲ ಎನ್ನುತ್ತಿವೆ. ಕೆಲ ತಿಂಗಳುಗಳ ಹಿಂದೆ ಕಾರ್ಖಾನೆಗೆ ಅಂಡಿಕೊಂಡಿದ್ದ ಮನೆಯೊಂದರಲ್ಲಿ ಮುನಿಕೃಷ್ಣಪ್ಪ ಎಂಬುವವರು ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾಗಿ ಹೇಳಲಾಗಿದೆ. ಅಲ್ಯುಮಿನಿಯಮ್‌ ಪಾಸ್ಪೇಡ್‌ನಿಂದಲೇ ಸಾವನ್ನಪ್ಪಿರುವ ಸಾಧ್ಯತೆಯಿದೆ
ಚೇತನ್‌ ಗೌಡ, ಬೈರಾಪುರದ ಗ್ರಾಮಸ್ಥ, ಹೋರಾಟಗಾರ. 
ಅತ್ತ ರೈತ ಮಿತ್ರರೂ ಇಲ್ಲ; ಇತ್ತ ‘ಕೆಬಿಜಿ’ಯೂ ಇಲ್ಲ: ಬೈರಾಪುರದ ಜನರ ಸಂಕಷ್ಟ ಕೇಳಿದವರಿಲ್ಲ!

ಒಟ್ಟಿನಲ್ಲಿ ಸರಕಾರ ಮತ್ತು ಅಧಿಕಾರಿ ವರ್ಗದ ಸೋಗಲಾಡಿತನಕ್ಕೆ ಒಂದಿಡೀ ಹಳ್ಳಿ ಜೀವ ಕೈಯಲ್ಲಿ ಹಿಡಿದು ಬದುಕುತ್ತಿದೆ. ದಿನವೊಂದಕ್ಕೆ ಕಡಿಮೆ ಎಂದರೂ 3 ಟನ್‌ನಷ್ಟು ಮಾತ್ರೆಗಳನ್ನು ಉತ್ಪಾದಿಸಿ ಲಕ್ಷಾಂತರ ರೂಪಾಯಿಯನ್ನು ಸಂಪಾದಿಸಲಾಗುತ್ತಿದೆ. ಜತೆಗೆ ಸಂಸ್ಥೆಯ ಮುದ್ರೆಯನ್ನೂ ಲಗತ್ತಿಸದೇ ಮಾರುಲಾಗುತ್ತಿದೆ. ಮುಂದೇನಾದರೂ ಕಾರ್ಖಾನೆಯಿಂದ ಉತ್ಪಾದನೆಯಾದ ಈ ರಾಸಾಯನಿಕದಿಂದ ಹಾನಿಯಾದರೆ ತಪ್ಪಿಸಿಕೊಳ್ಳುವ ಯತ್ನವಿದು ಎಂದೂ ಹೇಳಲಾಗುತ್ತಿದೆ. ಪ್ರತಿ ನಿತ್ಯ ಕಡಿಮೆ ಎಂದರೂ 8ರಿಂದ 10 ಲಕ್ಷ ರೂ. ಲಾಭ ಕಾರ್ಖಾನೆಗೆ ಸಿಗುತ್ತಿದೆ ಎಂಬ ಮಾಹಿತಿಯನ್ನು ಕಾರ್ಖಾನೆ ವಿರುದ್ಧ ಹೋರಾಟಕ್ಕೆ ಇಳಿದವರು ಹೇಳುತ್ತಾರೆ. ಇದನ್ನು ‘ಸಮಾಚಾರ’ ಸ್ವತಂತ್ರವಾಗಿ ತನಿಖೆ ಮಾಡಿಲ್ಲ.

ದ್ರಾಕ್ಷಿ ಹುಳಿ ಅಲ್ಲ ವಿಷ:

ಬೈರಾಪುರದಲ್ಲಿ ದ್ರಾಕ್ಷಿ ಹಣ್ಣನ್ನು ಬೆಳೆಯುತ್ತಾರೆ. ಆಗ್ರೋಸಿಂಥ್‌ ಕಾರ್ಖಾನೆಯಿಂದ ಹೊರಸೂಸುವ ಪಾಸ್ಪೇನ್‌ ಗ್ಯಾಸ್‌ ವಿಷ ಗಾಳಿ ಹಳ್ಳಿಯಲ್ಲಿ ಬೆಳೆಯುವ ದ್ರಾಕ್ಷಿ ತೋಟಗಳ ಮೇಲೆ ಪ್ರಭಾವ ಬೀರುತ್ತದೆ. ಕೇವಲ ಹಳ್ಳಿಗರಿಗಷ್ಟೇ ಅಲ್ಲದೆ, ಈ ದ್ರಾಕ್ಷಿ ಹಣ್ಣನ್ನು ಸೇವಿಸುವ ಮಂದಿಗೂ ರಾಸಾಯನಿಕದ ದುಷ್ಪರಿಣಾಮ ಉಂಟಾಗುವ ಸಾಧ್ಯತೆಯಿದೆ.

ಸದ್ಯ ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯಲಿದ್ದು, ಹಳ್ಳಿಗರ ಮನವಿಗೆ ಯಾವ ರೀತಿಯ ಸ್ಪಂದನೆ ವ್ಯಕ್ತವಾಗಲಿದೆ ಎಂಬುದನ್ನು ಕಾದು ನೋಡಬೇಕು. ಇದೇ ತಿಂಗಳ 27ರಂದು ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ.

ಅಂದಹಾಗೆ, ಎಲೆಕ್ಷನ್ ಬಿಸಿ ಇಲ್ಲಿಯೂ ಕಾಣಿಸುತ್ತಿದೆ. ಕೃಷಿ ಭಾಗ್ಯ, ರೈತ ಮಿತ್ರ ಮತ್ತಿತರ ಯೋಜನೆಗಳನ್ನು ಮುಂದಿಟ್ಟುಕೊಂಡು ಜನರ ಮುಂದೆ ಮತ ಕೇಳಲು ಹೊರಟ ಕಾಂಗ್ರೆಸ್ ಪಕ್ಷದ ಆಳ್ವೆಯಲ್ಲಿ ಈ ಊರಿಗೆ ನ್ಯಾಯ ಸಿಗಲಿಲ್ಲ. ಅಕ್ರಮ ಕಾರ್ಖಾನೆಯ ಬಗ್ಗೆ ಇಡೀ ಹಳ್ಳಿ ದೂರನ್ನು ನೀಡಿದ್ದರೂ ಕೃಷ್ಣ ಭೈರೇಗೌಡ ನೇತೃತ್ವದ ಕೃಷಿ ಇಲಾಖೆ ಮಾತ್ರ ಜಾಣ ಕುರುಡನ್ನು ಪ್ರದರ್ಶಿಸಿಕೊಂಡು ಬಂದಿದೆ. ಈ ಬಗ್ಗೆ ಗ್ರಾಮಸ್ಥರಲ್ಲಿ ಸಿಟ್ಟು, ಆಕ್ರೋಶ ಇದೆ. ಇನ್ನು ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಕೇಳುವಂತೆಯೇ ಇಲ್ಲ. ಆ ಇಲಾಖೆಯನ್ನು ನಿಯಂತ್ರಣ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂಬುವಂತಾಗಿದೆ. ಕನಿಷ್ಟ ಪಾರದರ್ಶಕತೆಯನ್ನೂ ಉಳಿಸಿಕೊಳ್ಳದ ಮಂಡಳಿ ಎನ್ನಿಸಿಕೊಂಡಿದೆ.

ಹೀಗಾಗಿ ಗ್ರಾಮಸ್ಥರೀಗ ನ್ಯಾಯಾಲಯದ ಎದುರಿಗೆ ನಿಂತಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನ್ಯಾಯ ದೇವತೆ ತಮ್ಮ ಅವಹಾಲಿಗೆ ಕಿವಿಗೊಡಲಿದ್ದಾಳಾ ಎಂದು ಕಾಯುತ್ತಿದ್ದಾರೆ.