ಹೊಸ ರಾಜಕೀಯ ಲೆಕ್ಕಾಚಾರಕ್ಕೆ ಮುನ್ನುಡಿ ಬರೆದ ಕಾಂಗ್ರೆಸ್‌ ಚುನಾವಣಾ ಅಭ್ಯರ್ಥಿಗಳ ಪಟ್ಟಿ
COVER STORY

ಹೊಸ ರಾಜಕೀಯ ಲೆಕ್ಕಾಚಾರಕ್ಕೆ ಮುನ್ನುಡಿ ಬರೆದ ಕಾಂಗ್ರೆಸ್‌ ಚುನಾವಣಾ ಅಭ್ಯರ್ಥಿಗಳ ಪಟ್ಟಿ

ಕಾಂಗ್ರೆಸ್‌ ಪಕ್ಷ ಭಾನುವಾರ ರಾತ್ರಿ ವಿಧಾನ ಸಭಾ ಚುನಾವಣಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈವರೆಗಿನ ರಾಜಕೀಯ ಲೆಕ್ಕಾಚಾರಗಳಿಗಿಂತ ವಿಭಿನ್ನ ನಿಲುವುಗಳನ್ನು ಕಾಂಗ್ರೆಸ್‌ ತಾಳಿರುವುದು ಪಟ್ಟಿಯಿಂದ ಸಾಭೀತಾಗಿದೆ. 

ಭಾನುವಾರ ಕಾಂಗ್ರೆಸ್‌ ಕೇಂದ್ರ ಮತ್ತು ರಾಜ್ಯ ನಾಯಕರ ಭೇಟಿಯ ನಂತರ ಬಹು ನಿರೀಕ್ಷಿತ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಪಟ್ಟಿ ಬಿಡುಗಡೆಯ ಬೆನ್ನಲ್ಲೇ ಟಿಕೆಟ್‌ ವಂಚಿತರಿಂದ ಪ್ರತಿಭಟನೆಯ ಕೂಗು ಕೇಳಿಬಂದರೆ, ಕೆಲ ಹೊಸ ಮುಖಗಳು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿ ಮತ್ತು ಚಾಮುಂಡೇಶ್ವರಿ ಎರಡೂ ಕ್ಷೇತ್ರದಲ್ಲಿ ನಿಲ್ಲುತ್ತಾರೆ ಎಂಬ ಪ್ರಶ್ನೆಗೂ ಅಂತಿಮ ತೆರೆ ಬಿದ್ದಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವ ಸಾಧ್ಯತೆ ಇದ್ದರೂ ಸಿದ್ದರಾಮಯ್ಯ ಪುತ್ರ ಯತೀಂದ್ರರನ್ನು ರಾಜಕೀಯಕ್ಕೆ ಕರೆದು ತರಲೇ ಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ. ಇದೆಲ್ಲವನ್ನೂ ಮೀರಿ ಕೆಲವೊಂದು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ತೆಗೆದುಕೊಂಡ ನಿರ್ಣಯಗಳು ಬದಲಾದ ಕಾಂಗ್ರೆಸ್‌ ಗೇಮ್‌ ಪ್ಲಾನನ್ನು ವಿವರಿಸುತ್ತಿದೆ.

ಹ್ಯಾರಿಸ್‌ ಕಡೆಯ ಹಂತದ ಹೋರಾಟ:

ಮೊದಲ ಹಂತದ ಅಭ್ಯರ್ಥಿ ಪಟ್ಟಿಯಲ್ಲೇ ಒಟ್ಟೂ 218 ಕ್ಷೇತ್ರಗಳ ಪಟ್ಟಿಯನ್ನು ನೀಡಿದ್ದು, ಕೇವಲ ಆರು ಕ್ಷೇತ್ರಗಳ ಅಭ್ಯರ್ಥಿಗಳನ್ನು ಮಾತ್ರ ಕಾಯ್ದಿರಿಸಲಾಗಿದೆ. ಅಧಿಕೃತವಾಗಿ ಘೋಷಿಸದ ಕ್ಷೇತ್ರಗಳಲ್ಲಿ ಪ್ರಮುಖವಾದ ಕ್ಷೇತ್ರ ಶಾಂತಿನಗರ. ಬೆಂಗಳೂರಿನ 28 ವಿಧಾನಸಭೆ ಕ್ಷೇತ್ರಗಳಲ್ಲಿ 27 ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ ಪುತ್ರ ಮೊಹಮ್ಮದ್‌ ನಲಪಾಡ್‌ ಗೂಂಡಾಗಿರಿಯಿಂದ ವರ್ಚಸ್ಸು ಕಳೆದುಕೊಂಡಿರುವ ಹ್ಯಾರಿಸ್‌ಗೆ ಟಿಕೆಟ್‌ ನೀಡುವ ಬಗ್ಗೆ ಹೈಕಮಾಂಡ್‌ ಇನ್ನೂ ಚಿಂತನೆ ನಡೆಸುತ್ತಿರುವಂತಿದೆ. ಶಾಂತಿನಗರ ಕ್ಷೇತ್ರಕ್ಕೆ ರಿಜ್ವಾನ್‌ ಅರ್ಷದ್‌ ಹೆಸರು ಕೂಡ ಕೇಳಿಬಂದಿದ್ದು, ಹ್ಯಾರಿಸ್‌ ಕೂಡ ಪ್ರಯತ್ನ ಮುಂದುವರೆಸಿದ್ದಾರೆ.

ಅಭ್ಯರ್ಥಿ ಪಟ್ಟಿ ಬಿಡುಗಡೆಯ ಜತೆಗೆ ಕಾಂಗ್ರೆಸ್‌ ಮುಖ್ಯಮಂತ್ರಿ ಅಭ್ಯರ್ಥಿ ವಿಪಕ್ಷಗಳಿಗೆ ಹೆದರಿ ಕ್ಷೇತ್ರ ಬದಲಿಸಿದರು ಎಂಬ ಆರೋಪದಿಂದ ಮುಕ್ತಿ ಪಡೆದಿದೆ. ಮುಖ್ಯಮಂತ್ರಿ ಅಭ್ಯರ್ಥಿಯೇ ಹೆದರಿ ಬೇರೆ ಕ್ಷೇತ್ರದಿಂದ ಸ್ಪರ್ದಿಸಿದರೆ ಪಕ್ಷದ ನೈತಿಕ ಬಲ ಕುಸಿಯುವ ಸಾಧ್ಯತೆಯನ್ನು ಮನಗಂಡು ಈ ತೀರ್ಮಾನಕ್ಕೆ ಬರಲಾಗಿದೆ ಎಂದೂ ಹೇಳಲಾಗುತ್ತಿದೆ. ಇದರಿಂದ ವಿರೋಧ ಪಕ್ಷಗಳು ಈ ಹಿಂದೆ ಮಾಡಿದ್ದ ಆರೋಪಗಳಿಗೆ ಉತ್ತರ ನೀಡಿದಂತಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ದಿಸುತ್ತೇನೆ ಎಂಬ ಮಾತನ್ನು ಸಿದ್ದರಾಮಯ್ಯ ಕೆಲ ದಿನಗಳಿಂದ ಹೇಳುತ್ತಲೇ ಬಂದಿದ್ದರೂ, ಬಾದಾಮಿಯಿಂದ ಸ್ಪರ್ದಿಸುವ ಸಾಧ್ಯತೆ ಬಗ್ಗೆ ಪಕ್ಷದ ಮೂಲಗಳು ತಿಳಿಸಿದ್ದವು. ಈಗ ಆಗಿದ್ದಾಗಲೆ ಎಂದು ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಈ ಬಾರಿಯ ರಾಜಕೀಯ ಭವಿಷ್ಯವನ್ನು ಸಿದ್ದರಾಮಯ್ಯ ಹುಡುಕಲು ಹೊರಟಿದ್ದಾರೆ.

ಚಿಮ್ಮನಕಟ್ಟಿ ಪ್ರತಿಭಟನೆ:

ಬಾದಾಮಿಯಲ್ಲಿ ಒಂದೋ ಸಿದ್ದರಾಮಯ್ಯ ನಿಲ್ಲುತ್ತಾರೆ ಇಲ್ಲವಾದರೆ ಶಾಸಕ ಚಿಮ್ಮನಕಟ್ಟಿಗೆ ಟಿಕೆಟ್‌ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಕಡೆ ಕ್ಷಣದಲ್ಲಿ ಚಿಮ್ಮನಕಟ್ಟಿಗೆ ಟಿಕೆಟ್‌ ನೀಡದೇ, ಡಾ. ದೇವರಾಜ್‌ ಪಾಟೀಲ್‌ಗೆ ಟಿಕೆಟ್‌ ನೀಡಲಾಗಿದೆ. ಚಿಮ್ಮನಕಟ್ಟಿ ಆರೋಗ್ಯ ಹದಗೆಟ್ಟಿರುವ ಕಾರಣವನ್ನು ಕಾಂಗ್ರೆಸ್‌ ಪಕ್ಷ ನೀಡುತ್ತಿದೆ, ಆದರೆ ಚಿಮ್ಮನಕಟ್ಟಿ ಪಕ್ಷದ ವಿರುದ್ಧ ಪ್ರತಿಭಟಿಸಿದ್ದಾರೆ. ಮುಖ್ಯಮಂತ್ರಿಗಳಿಗಾದರೆ ಕ್ಷೇತ್ರ ಬಿಟ್ಟುಕೊಡುತ್ತೇನೆ ಆದರೆ, ಇನ್ಯಾರಿಗೂ ಬಿಟ್ಟು ಕೊಡುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಕಳೆದ 2013ರಲ್ಲೂ ಕೊನೆಯ ಹಂತದಲ್ಲಿ ಚಿಮ್ಮನಕಟ್ಟಿಗೆ ಟಿಕೆಟ್‌ ನೀಡಲಾಗಿತ್ತು. ಬಾದಾಮಿಯಲ್ಲಿ ಕುರುಬ ಸಮುದಾಯದ ಮತದಾರರು ನಿರ್ಣಾಯಕರಾಗಿದ್ದು, ಚಿಮ್ಮನಕಟ್ಟಿ ಗೆದ್ದಿದ್ದರು. ಈ ಬಾರಿ ಅವರಿಗೆ ಟಿಕೆಟ್‌ ನೀಡದೇ ಹೋದಲ್ಲಿ, ಕಾಂಗ್ರೆಸ್‌ ವಿರುದ್ಧ ಬಂಡಾಯ ಏಳುವ ಸಾಧ್ಯತೆಯಿದೆ. ಇದರಿಂದ ಕಾಂಗ್ರೆಸ್‌ ಪಾಲಿಗೆ ಸುಲಭವಾಗಿ ಸಿಗಲಿರುವ ಕ್ಷೇತ್ರವೊಂದನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಲೂ ಬಹುದು.

ಬಿ.ಬಿ. ಚಿಮ್ಮನಕಟ್ಟಿ
ಬಿ.ಬಿ. ಚಿಮ್ಮನಕಟ್ಟಿ

ಒಕ್ಕಲಿಗ ಜಾತಿ ಸಮೀಕರಣ:

ಕರ್ನಾಟಕ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿದ್ದ ಬಾಗೂರು ಮಂಜೇಗೌಡ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಫೋನ್‌ ಸಂಭಾಷಣೆ ಬೆಳಕಿಗೆ ಬಂದಿತ್ತು. ಜೆಡಿಎಸ್‌ನ ಎಚ್‌.ಡಿ. ರೇವಣ್ಣರನ್ನು ಈ ಬಾರಿ ಚುನಾವಣೆಯಲ್ಲಿ ಹೊಳೆನರಸೀಪುರದಲ್ಲಿ ಸೋಲಿಸುವಂತೆ ಸಿದ್ದರಾಮಯ್ಯ, ಮಂಜೇಗೌಡಗೆ ಹೇಳಿದ್ದರು. ಟಿಕೆಟ್‌ ನೀಡುವುದಾಗಿಯೂ ಅಭಯ ನೀಡಿದ್ದರು. ಅದರ ಬೆನ್ನಲ್ಲೇ ನೌಕರರ ಸಂಘಕ್ಕೆ ರಾಜೀನಾಮೆ ನೀಡಿದ್ದ ಮಂಜೇಗೌಡ, ಹೊಳೆನರಸೀಪುರದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದರು. ಬೇರೆಲ್ಲಾ ಕ್ಷೇತ್ರಗಳಿಗಿಂತ ಹೆಚ್ಚಿನ ಅನುದಾನವನ್ನು ರೇವಣ್ಣ ಎಂಬ ಕಾರಣಕ್ಕೆ ಸಿದ್ದರಾಮಯ್ಯ ನೀಡಿದ್ದರು. ಆದರೆ ಚುನಾವಣೆ ಬಂದಾಗ ವೈಯಕ್ತಿಕ ಗೆಳೆತನ, ಪ್ರೀತಿ ಯಾವುದೂ ನಡೆಯುವುದಿಲ್ಲ ಎಂಬುದನ್ನು ಸಿದ್ದರಾಮಯ್ಯ ಅವರ ನಿರ್ಣಯ ನಿರೂಪಿಸುತ್ತದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವಾದ ಅಭಿಪ್ರಾಯ ಒಕ್ಕಲಿಗ ಸಮುದಾಯದಲ್ಲಿ ಕೇಳಿ ಬಂದಿದೆ. ರಾಜ್ಯದಲ್ಲಿ ನಿರ್ಣಾಯಕ ಸ್ಥಾನದಲ್ಲಿರುವ ಪ್ರಬಲ ಸಮುದಾಯಕ್ಕೆ ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಏನೂ ಮಾಡಿಲ್ಲ ಎಂಬ ಆರೋಪವಿದೆ. ಅದಕ್ಕೆ ಕಾರಣ, ಸಿದ್ದರಾಮಯ್ಯ ಕೇವಲ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಪರವಾಗಿ ಅಧಿಕಾರ ಚಲಾಯಿಸಿದ್ದಾರೆ ಎಂಬುದು. ಒಕ್ಕಲಿಗ ಸಂಘಟನೆಗಳು ನೀಡುವ ಮಾಹಿತಿ ಪ್ರಕಾರ, ಸಿದ್ದರಾಮಯ್ಯ ಒಕ್ಕಲಿಗ ಸಮುದಾಯವನ್ನು ಕಡೆಗಣಿಸಿದ್ದಾರೆ. ಆ ಕಾರಣಕ್ಕಾಗಿಯೇ ಒಕ್ಕಲಿಗರು ಈ ಬಾರಿ ಕಾಂಗ್ರೆಸ್‌ಗೆ ಮತ ನೀಡಬಾರದು ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಎಚ್‌.ಡಿ. ರೇವಣ್ಣ ಮತ್ತು ಬಾಗೂರು ಮಂಜೇಗೌಡ
ಎಚ್‌.ಡಿ. ರೇವಣ್ಣ ಮತ್ತು ಬಾಗೂರು ಮಂಜೇಗೌಡ

ಒಕ್ಕಲಿಗರ ವಿರೋಧವನ್ನು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಸೂಕ್ಷ್ಮವಾಗಿ ಗಮನಿಸಿದಂತಿದೆ. ಆ ಕಾರಣಕ್ಕಾಗಿಯೇ ರೇವಣ್ಣ ಎದುರು ಮಂಜೇಗೌಡ ಅವರಿಗೆ ಟಿಕೆಟ್‌ ನೀಡಲಾಗಿದೆ. ಮಂಜೇಗೌಡ ಅವರಿಗೆ ಒಕ್ಕಲಿಗ ಸಮುದಾಯದಲ್ಲಿ ಉತ್ತಮ ಪ್ರಭಾವವಿದೆ. ಜತೆಗೆ ಸರಕಾರಿ ನೌಕರರ ವಲಯದಲ್ಲೂ ಮಂಜೇಗೌಡ ಅವರಿಗೆ ಮತಹಾಕುವ ದೊಡ್ಡ ಸಮೂಹವಿದೆ. ಜೆಡಿಎಸ್‌ ಭದ್ರ ಕೋಟೆಯಾಗಿರುವ ಹೊಳೆನರಸೀಪುರದಲ್ಲಿ ರೇವಣ್ಣರನ್ನು ಸೋಲಿಸಲು ಸಾಧ್ಯವಾಗದಿದ್ದರೂ, ಕಾಂಗ್ರೆಸ್‌ನಲ್ಲಿ ಮಂಜೇಗೌಡರಿಗೆ ಟಿಕೆಟ್‌ ನೀಡಿರುವ ಕಾರಣಕ್ಕಾಗಿ ಬೇರೆ ಕ್ಷೇತ್ರಗಳಲ್ಲಿ ಒಕ್ಕಲಿಗ ಮತದಾರರು ಕಾಂಗ್ರೆಸ್‌ ಮೇಲೆ ಮೃದು ಭಾವ ತೋರುವ ಸಾಧ್ಯತೆಯಿದೆ. ಜತೆಗೆ ರೇವಣ್ಣರನ್ನು ಒಂದೇ ಕ್ಷೇತ್ರದ ಪ್ರಚಾರಕ್ಕೆ ಕಟ್ಟಿ ಹಾಕಿದರೆ, ಹಾಸನದ ಇತರೆ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಜಾಣ್ಮೆಯನ್ನೂ ಸಿದ್ದರಾಮಯ್ಯ ತೋರಿದಂತಿದೆ.

ಅಸ್ಪೃಶ್ಯ ಸಮುದಾಯಕ್ಕೆ ಒತ್ತು:

ಕಾಂಗ್ರೆಸ್‌ ಟಿಕೆಟ್‌ ಪಟ್ಟಿಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಸ್ಪೃಶ್ಯ ಸಮುದಾಯಗಳಿಗೆ ಟಿಕೆಟ್‌ ನೀಡಿದ್ದರೆ, ಅಸ್ಪೃಶ್ಯ ಸಮುದಾಯದ ಅಭ್ಯರ್ಥಿಗಳಿಗೂ ಟಿಕೆಟ್‌ ನೀಡಲಾಗಿದೆ. ಸಿದ್ದರಾಮಯ್ಯ ಈಗಲೂ ಅಲ್ಪಸಂಖ್ಯಾತ - ಹಿಂದುಳಿದ - ದಲಿತ ಸಮುದಾಯದ ಮುಖಂಡ. ಐದು ವರ್ಷದ ಆಡಳಿತದಲ್ಲಿ ಅಸ್ಪೃಶ್ಯ ಸಮುದಾಯದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೂಪಿಸಿದ ಸಿದ್ದರಾಮಯ್ಯ ಸರಕಾರ, ಚುನಾವಣೆಯಲ್ಲೂ ಅದನ್ನೇ ಮುಂದುವರೆಸಲು ತೀರ್ಮಾನಿಸಿದಂತಿದೆ. ಸ್ಪೃಶ್ಯ ಸಮುದಾಯದ ಮತಗಳನ್ನು ಬಿಜೆಪಿ ಮತ್ತು ಜೆಡಿಎಸ್‌ ಪಡೆಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿ ಅನಿಸಿಕೊಂಡಿರುವ ಅಸ್ಪೃಶ್ಯ ಸಮುದಾಯದ ವ್ಯಕ್ತಿಗಳಿಗೆ ಟಿಕೆಟ್‌ ನೀಡಲಾಗಿದೆ. ಈ ಮೂಲಕ ತಾವೊಬ್ಬ ಅಹಿಂದ ನಾಯಕ ಎಂಬುದನ್ನು ಮತ್ತೆ ಸಿದ್ದರಾಮಯ್ಯ ಸಾಭೀತು ಮಾಡಿದ್ದಾರೆ.

ಹಲವು ವರ್ಷಗಳ ಹಿಂದೆ ಸಿದ್ದರಾಮಯ್ಯ ಅಹಿಂದ ಸಭೆಯೊಂದರಲ್ಲಿ ಮಾತನಾಡುತ್ತಿರುವ ಫೈಲ್‌ ಚಿತ್ರ
ಹಲವು ವರ್ಷಗಳ ಹಿಂದೆ ಸಿದ್ದರಾಮಯ್ಯ ಅಹಿಂದ ಸಭೆಯೊಂದರಲ್ಲಿ ಮಾತನಾಡುತ್ತಿರುವ ಫೈಲ್‌ ಚಿತ್ರ

ಒಂದೆಡೆ ಜೆಡಿಎಸ್‌ನ್ನು ಸಂಘ ಪರಿವಾರದ ಜತೆ ಥಳುಕು ಹಾಕುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ಮತ್ತೊಂದೆಡೆ ಬಿಜೆಪಿ ಸಂಘ ಪರಿವಾರದ ಶಿಶು ಎಂಬುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಹೀಗಿರುವಾಗ ಹಿಂದುಳಿದ ವರ್ಗ, ದಲಿತ ಮತ್ತು ಅಲ್ಪಸಂಖ್ಯಾತರ ಪರ ಕಾಂಗ್ರೆಸ್‌ ಎಂಬ ಅಜೆಂಡಾವನ್ನು ಕಾಂಗ್ರೆಸ್‌ ಪ್ಲೇ ಮಾಡುತ್ತಿದೆ. ಅದೇ ಸ್ಟ್ರಾಟಜಿಯ ಮುಂದುವರೆದ ಭಾಗವೇ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಎಂಬ ಮಾತುಗಳೂ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಲಿಂಗಾಯತ ಸ್ವತಂತ್ರ್ಯ ಧರ್ಮ, ಕನ್ನಡ ಬಾವುಟದ ನಿರ್ಧಾರ ಕಾಂಗ್ರೆಸ್‌ ಪರ ಜನಾಭಿಪ್ರಾಯ ಮೂಡಲು ಸ್ವಲ್ಪ ಮಟ್ಟಿಗೆ ಕಾರಣವಾಗಿರಬಹುದು. ಅದರ ಜತೆಗೆ ಕಾಂಗ್ರೆಸ್‌ ಅಹಿಂದ ಪರ ಎಂಬ ನಿಲುವು ಪ್ರದರ್ಶಿಸುವ ಮೂಲಕ ಅಸ್ಪೃಶ್ಯ ಸಮುದಾಯವನ್ನು ತಮ್ಮ ತೆಕ್ಕೆಗೆ ಎಳೆದುಕೊಳ್ಳುವ ಪ್ರಯತ್ನ ಕಾಂಗ್ರೆಸ್‌ ಮಾಡಿದೆ.

ಚುನಾವಣೆ ಲೆಕ್ಕಾಚಾರದ ನಿಟ್ಟಿನಲ್ಲಿ ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿ ಉತ್ತಮವಾಗಿರುವಂತೆ ಭಾಸವಾಗುತ್ತದೆ. ಆದರೆ ಪಟ್ಟಿ ಬಿಡುಗಡೆಯ ನಂತರ ಕೇಳಿ ಬಂದ ಬಿನ್ನಾಭಿಪ್ರಾಯಗಳನ್ನು ಕಾಂಗ್ರೆಸ್‌ ಹೇಗೆ ಸರಿ ಪಡಿಸಿಕೊಳ್ಳುತ್ತದೆ ಎಂಬುದರ ಮೇಲೆ ಚುನಾವಣೆಯ ಫಲಿತಾಂಶ ನಿಂತಿದೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಆರಂಭಿಸಿದ ನಂತರ ಆಗುವ ಬದಲಾವಣೆಗಳು ಕುತೂಹಲಕಾರಿಯಾಗಲಿವೆ.