ಬಳ್ಳಾರಿಗೆ ಕೊನೆಯಾಗಲಿಲ್ಲ ಅಕ್ರಮ ಗಣಿಗಾರಿಕೆ: ಬೇಲಿಯೇ ಎದ್ದು ಹೊಲ ಮೇಯುತ್ತಿರುವ ಕತೆ ಇದು!
COVER STORY

ಬಳ್ಳಾರಿಗೆ ಕೊನೆಯಾಗಲಿಲ್ಲ ಅಕ್ರಮ ಗಣಿಗಾರಿಕೆ: ಬೇಲಿಯೇ ಎದ್ದು ಹೊಲ ಮೇಯುತ್ತಿರುವ ಕತೆ ಇದು!

ದಿನದಿಂದ ದಿನಕ್ಕೆ ಮನುಷ್ಯನ ಹಣದಾಹದಿಂದ ಪ್ರಕೃತಿ ಹಾಳಾಗುತ್ತಿದೆ. ಅಕ್ರಮ ಗಣಿಗಾರಿಕೆಗಳು ಎಗ್ಗಿಲ್ಲದೇ ನಡೆಯುತ್ತಿವೆ. ಅದಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಿಲ್ಲಾಡಳಿತಗಳು ಸಾಥ್‌ ನೀಡುತ್ತಿವೆ. 

ಮಂಡ್ಯ ಜಿಲ್ಲೆಯ ರಾಗಿ ಮುದ್ದನಹಳ್ಳಿ ಹಳೇ ಮೈಸೂರು ಭಾಗದ ಎಲ್ಲ ಹಳ್ಳಿಗಳಂತೆಯೇ ಇತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿದ ಅಕ್ರಮ ಕಲ್ಲು ಗಣಿಗಾರಿಕೆಯಿಂದಾಗಿ ಗ್ರಾಮಸ್ಥರು ನೆಮ್ಮದಿಯನ್ನೇ ಕಳೆದುಕೊಂಡಿದ್ದಾರೆ. ರಾತ್ರಿಯೆಲ್ಲಾ ಕ್ರಷರ್‌ಗಳ ಸದ್ದು, ಹಗಲೆಲ್ಲಾ ಧೂಳಿನಿಂದ ಮತ್ತು ಸಿಡಿಮದ್ದುಗಳ ಸದ್ದಿನಿಂದ ಬದುಕಲು ಯೋಗ್ಯವಾದ ವಾತಾವರಣವೇ ಹಳ್ಳಿಗರಿಗೆ ಇಲ್ಲದಂತಾಗಿದೆ. ಈ ಬಗ್ಗೆ ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಲೆದು ಬೇಸತ್ತ ಹಳ್ಳಿಗರು ಅಂತಿಮ ಪ್ರಯತ್ನವಾಗಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಮಂಡ್ಯ ಜಿಲ್ಲೆಯ ರಾಗಿ ಮುದ್ದನಹಳ್ಳಿಯಲ್ಲಿ ಒಟ್ಟೂ ನಾಲ್ಕು ಕ್ರಷರ್‌ಗಳು ಕೆಲಸ ಮಾಡುತ್ತಿವೆ. ಸುಮತಿ ಸ್ಟೋನ್‌ ಕ್ರಷರ್ಸ್‌, ಡಿ.ಕೆ. ಅಸೋಸಿಯೇಟ್ಸ್‌ ಸ್ಟೋನ್‌ ಕ್ರಷರ್ಸ್‌, ಮಲ್ಲೇಶ್ವರ ಸ್ಟೋನ್‌ ಕ್ರಷರ್ಸ್‌ ಮತ್ತು ದಶರತ್‌ ಕ್ರಷರ್ಸ್‌ಗಳು ಹಳ್ಳಿಗರ ನಿದ್ದೆಗೆಡಿಸಿವೆ.

ಅಕ್ರಮ ಕಲ್ಲು ಗಣಿಗಾರಿಕೆಯನ್ನು ನಿಲ್ಲಿಸುವಂತೆ ಕೋರಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೋದ ಗ್ರಾಮಸ್ತರೊಬ್ಬರಿಗೆ ಆಶ್ಚರ್ಯ ಎದುರಾಗಿತ್ತು. ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಯೊಬ್ಬರು ಗ್ರಾಮಸ್ತರಿಗೆ, ‘ದುಡ್ಡು ಪಡೆದು ಸುಮ್ಮನಾಗುವಂತೆ’ ಉಪದೇಶ ಮಾಡಿದ್ದರು.

‘ಸಮಾಚಾರ’ದ ಜತೆ ಸಮಸ್ಯೆಯನ್ನು ಹಂಚಿಕೊಂಡ ಗ್ರಾಮಸ್ಥ ತೇಜಸ್‌ ಹೇಳುವ ಪ್ರಕಾರ ಜಿಲ್ಲಾಡಳಿತ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿರುವವರಿಂದ ಹಣ ಪಡೆದು ಅಕ್ರಮದ ಬೆನ್ನಿಗೆ ನಿಂತಿದ್ದಾರೆ.

ಜಿಲ್ಲಾಡಳಿತಕ್ಕೆ ದೂರು ನೀಡಿದರೆ ಅವರು ಏನೂ ಮಾಡಲಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಕಲ್ಲು ಗಣಿಗಾರಿಕೆ ಮಾಡುತ್ತಿರುವವರ ಜತೆ ಸಂಪರ್ಕ ಹೊಂದಿದ್ದಾರೆ. ನನಗೂ ಹಣ ಪಡೆದು ಸುಮ್ಮನಾಗುವಂತೆ ಹೇಳಿದ್ದರು. ರಾತ್ರಿ ಎಲ್ಲಾ ನಿದ್ದೆ ಮಾಡಲು ಆಗುತ್ತಿಲ್ಲ. ಸರಕಾರಿ ಅಧಿಕಾರಿಗಳೇ ಅಕ್ರಮ ಗಣಿಗಾರಿಕೆಗೆ ಬೆಂಬಲ ನೀಡಿದರೆ ಹೇಗೆ?
ತೇಜಸ್, ರಾಗಿ ಮುದ್ದನಹಳ್ಳಿ

ಮಂದುವರೆದ ಅವರು, “ಗ್ರಾಮಸ್ತರಿಗೆ ಸುರಕ್ಷತೆಯೇ ಇಲ್ಲದಂತಾಗಿದೆ. ಕಲ್ಲು ಗಣಿಗಾರಿಕೆಯ ವಿರುದ್ಧ ದನಿಯೆತ್ತಿದವರ ಮೇಲೆ ಬೆದರಿಕೆ ಹಾಕಲಾಗುತ್ತಿದೆ. ನನಗೂ ಹಲವು ಅನಾಮಿಕ ಬೆದರಿಕೆ ಕರೆಗಳು ಬಂದಿದ್ದವು. ಹಣಬಲ ಮತ್ತು ತೋಳ್ಬಲದಿಂದ ಯಾರೂ ಗಟ್ಟಿಯಾಗಿ ಮಾತನಾಡದಂತೆ ಮಾಡಿದ್ದಾರೆ. ಸಿಡಿಮದ್ದುಗಳನ್ನು ಸಿಡಿಸುತ್ತಾರೆ. ಸೇಫ್‌ ಝೋನನ್ನೂ ಮಾಡಿಲ್ಲ. ಹಲವರಿಗೆ ಸಿಡಿಮದ್ದಿನಿಂದ ಸಿಡಿದ ಕಲ್ಲುಗಳಿಂದ ಗಾಯಗಳಾಗಿವೆ,” ಎನ್ನುತ್ತಾರೆ.

2005ರಿಂದ ಶ್ರೀರಂಗಪಟ್ಟಣ ತಾಲೂಕಿನ ಹಲವು ಹಳ್ಳಿಗಳಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಅದು ಅಕ್ರಮ ಎಂದು ಗೊತ್ತಿದ್ದರೂ ಸರಕಾರಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಕೋಟ್ಯಂತರ ರೂಪಾಯಿಯ ಉದ್ಯಮವಾದ್ದರಿಂದ ಜಿಲ್ಲಾಡಳಿತ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಲಂಚ ನೀಡುತ್ತಿದ್ದಾರೆ ಎಂಬ ಆರೋಪ ಹಳ್ಳಿಗರದ್ದು.

ಇದು ಕೇವಲ ಮಂಡ್ಯ ಜಿಲ್ಲೆಯ ಸಮಸ್ಯೆಯಲ್ಲ, ಬದಲಾಗಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಕ್ರಮ ಗಣಿಗಾರಿಕೆ ತಾಂಡವವಾಡುತ್ತಿದೆ. ಈ ಬಗ್ಗೆ ಗೊತ್ತಿದ್ದರೂ ಸರಕಾರ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ. ರಿಪಬ್ಲಿಕ್‌ ಆಫ್‌ ಬಳ್ಳಾರಿಯ ವಿರುದ್ಧ ಸಿಡಿದೆದ್ದು ಬಳ್ಳಾರಿಯವರೆಗೂ ಕಾಲ್ನಡಿಗೆ ಮಾಡಿದ್ದ ಸಿದ್ದರಾಮಯ್ಯ ಈಗ ಮುಖ್ಯಮಂತ್ರಿಯಾಗಿದ್ದಾರೆ. ಹೀಗಿರುವಾಗ ಅಕ್ರಮ ಗಣಿಗಾರಿಕೆಯ ವಿರುದ್ಧ ಒಂದು ಕಾಲದಲ್ಲಿ ಹೋರಾಡಿದ್ದ ಸಿದ್ದರಾಮಯ್ಯ ಅಧಿಕಾರಾವಧಿಯಲ್ಲೇ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಕ್ರಮ ಜರುಗಿಸಿಲ್ಲ.

ಹೈಕೋರ್ಟಿನಲ್ಲಿ ಈ ಸಂಬಂಧ ಅಕ್ರಮ ಗಣಿಗಾರಿಕೆ ನಿಲ್ಲಿಸುವಂತೆ ಕೋರಿ ತೇಜಸ್‌ ಮತ್ತು ವಿಷ್ಣು ಎಂಬುವವರು ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದ ವಿಚಾರಣೆ ಸದ್ಯ ಕೋರ್ಟಿನಲ್ಲಿ ನಡೆಯುತ್ತಿದ್ದು, ವಕೀಲ ಜೆ. ಡಿ. ಕಾಶೀನಾಥ್‌ ವಾದ ಮಂಡಿಸುತ್ತಿದ್ದಾರೆ.

ಈ ಪ್ರಕರಣದ ತೀರ್ಪು ಪ್ರಮುಖ ಪಾತ್ರ ವಹಿಸಲಿದ್ದು, ಅಕ್ರಮ ಗಣಿಗಾರಿಕೆಗೆ ಬ್ರೇಕ್‌ ಬಿದ್ದರೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗಳ ಮೇಲೂ ಕ್ರಮ ಜರುಗಿಸಬಹುದು. ಈ ಪ್ರಕರಣದ ತೀರ್ಪನ್ನು ಮಾದರಿಯಾಗಿ ಬಳಸಿ ಉಳಿದ ಅಕ್ರಮ ಗಣಿಗಾರಿಕೆಗಳಿಗೂ ಅಂತ್ಯ ಹಾಡುವ ಸಾಧ್ಯತೆಯಿದೆ.

ಈ ಹಿಂದೆ ಜಿಲ್ಲಾಡಳಿತ ಕೂಡ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬುದನ್ನು ಒಪ್ಪಿಕೊಂಡಿತ್ತು. ನಂತರ ಮಾಲಿನ್ಯ ನಿಯಂತ್ರಣ ಮಂಡಳಿ, ಗಣಿಗಾರಿಕೆಯನ್ನು ನಿಲ್ಲಿಸುವಂತೆ ಸೂಚಿಸಿತ್ತು. ಅವೆಲ್ಲವೂ ಕೇವಲ ಕಾಗದದಲ್ಲಿ ಮಾತ್ರ ಜೀವಂತವಾಗಿದ್ದು, ತೆರೆ ಮರೆಯಲ್ಲಿ ‘ಕೊಡು-ಕೊಳ್ಳುವ’ ತತ್ವವನ್ನು ಪಾಲಿಸಲಾಗಿದೆ ಎನ್ನಲಾಗಿದೆ. ಜಿಲ್ಲಾಡಳಿತದ ಅಧಿಕಾರಿಗಳಿಗೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಪ್ರತಿ ತಿಂಗಳು ಹಣ ಹೋಗುತ್ತದೆ, ಅದಕ್ಕಾಗಿ ಅವರು ಗೊತ್ತಿದ್ದೂ ಗೊತ್ತಿಲ್ಲದಂತೆ ಸುಮ್ಮನಿದ್ದಾರೆ ಎಂಬ ಆರೋಪವಿದೆ.

ಹಣದಾಹಕ್ಕಾಗಿ ಪ್ರಕೃತಿ ನಾಶ ಮಾಡುತ್ತಿರುವ ಕಲ್ಲು ಕ್ವಾರಿಗಳ ಮೇಲೆ ಹೈಕೋರ್ಟ್‌ ಕ್ರಮ ಕೈಗೊಳ್ಳಲಿದೆಯಾ, ಅಥವಾ ಎಂದಿನಂತೆ ಅಕ್ರಮ ಗಣಿಗಾರಿಕೆ ಮುಂದುವರೆಯಲಿದೆಯಾ ಎಂಬುದನ್ನು ಕಾದು ನೋಡಬೇಕು.

ಒಟ್ಟಿನಲ್ಲಿ ಎಲ್ಲೂ ನ್ಯಾಯ ಸಿಗದೇ ಕೋರ್ಟ್‌ ಮೆಟ್ಟಿಲೇರಿರುವ ಹಳ್ಳಿಗರಿಗೆ ಕೋರ್ಟ್‌ ಆಶಾ ಕಿರಣವಾಗಿದೆ. ಕೋರ್ಟ್‌ ನೀಡುವ ತೀರ್ಪು ಒಂದೆಡೆ ಹಳ್ಳಿಗರ ನೆಮ್ಮದಿಯ ಬದುಕಿಗೆ ದಾರಿಯಾದರೆ, ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ ಮತ್ತು ಮೈನ್ಸ್‌ ಆಂಡ್‌ ಜಿಯಾಲಜಿ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆಯ ಗಂಟೆಯಾಗಲಿದೆ.